ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಲಹೆ 1 ಒಳ್ಳೇ ಆಹಾರ ಸೇವಿಸಿ

ಸಲಹೆ 1 ಒಳ್ಳೇ ಆಹಾರ ಸೇವಿಸಿ

ಸಲಹೆ 1 ಒಳ್ಳೇ ಆಹಾರ ಸೇವಿಸಿ

“ಆಹಾರ ಸೇವಿಸಿ. ಮಿತಿಮೀರಿ ತಿನ್ನಬೇಡಿ. ಸಸ್ಯಾಹಾರ ಹೆಚ್ಚು ಸೇವಿಸಿ.” ಇದು ಲೇಖಕ ಮೈಕಲ್‌ ಪೋಲನ್‌ರವರು ಪಥ್ಯದ ಬಗ್ಗೆ ನೀಡುವ ಸರಳ, ಪ್ರಾಯೋಗಿಕ, ಸಂಕ್ಷಿಪ್ತ ಸಲಹೆ. ಇವರ ಮಾತಿನ ಅರ್ಥವೇನು?

ತಾಜಾ ಆಹಾರ ಸೇವಿಸಿ. ಕೃತಕವಾಗಿ ಸಂಸ್ಕರಿಸಿದ ಆಹಾರದ ಬದಲು “ಅಪ್ಪಟ” ಆಹಾರ ಅಂದರೆ ಸಾವಿರಾರು ವರ್ಷಗಳಿಂದಲೂ ಜನರು ಆಸ್ವಾದಿಸುತ್ತಿರುವ ತಾಜಾ ಆಹಾರವನ್ನೇ ಸೇವಿಸಿ. ಪ್ಯಾಕ್‌ ಆಗಿರುವ ಸಿದ್ಧಾಹಾರ ಮತ್ತು ಫಾಸ್ಟ್‌ ಫುಡ್‌ಗಳಲ್ಲಿ ಹೆಚ್ಚಿನ ಪ್ರಮಾಣದ ಸಕ್ಕರೆ, ಉಪ್ಪು, ಕೊಬ್ಬಿನಾಂಶಗಳಿವೆ. ಇವುಗಳಿಂದ ಹೃದ್ರೋಗ, ಲಕ್ವ, ಕ್ಯಾನ್ಸರ್‌, ಇತರ ಗಂಭೀರ ರೋಗಗಳು ಬರುವ ಅಪಾಯವಿದೆ. ಆಹಾರವನ್ನು ಎಣ್ಣೆಯಲ್ಲಿ ಕರಿಯುವ ಬದಲು ಹಬೆಯಲ್ಲೊ ಬೆಂಕಿಯ ಶಾಖದಲ್ಲೊ ನೇರವಾಗಿ ಬೆಂಕಿಯ ಮೇಲೊ ಬೇಯಿಸಿರಿ. ಅಡುಗೆಯಲ್ಲಿ ಉಪ್ಪಿನ ಉಪಯೋಗ ಕಡಿಮೆಮಾಡಲು ಸಂಬಾರ ಪದಾರ್ಥಗಳು, ಪುದೀನ, ಕೊತ್ತಂಬರಿ ಸೊಪ್ಪು ಇತ್ಯಾದಿಗಳನ್ನು ಹೆಚ್ಚು ಬಳಸಿರಿ. ಮಾಂಸವನ್ನು ಸರಿಯಾಗಿ ಬೇಯಿಸಿರಿ. ಹಳಸಿದ ಆಹಾರ ಎಂದೂ ಸೇವಿಸಬೇಡಿ.

ಮಿತಿಮೀರಿ ತಿನ್ನಬೇಡಿ. ಅತಿತೂಕ ಹಾಗೂ ಬೊಜ್ಜು ಮೈಯುಳ್ಳವರ ಸಂಖ್ಯೆ ಜಗತ್ತಿನೆಲ್ಲೆಡೆ ದಿನೇ ದಿನೇ ಏರುತ್ತಿದ್ದು, ಹೆಚ್ಚಾಗಿ ಇದಕ್ಕೆ ಮಿತಿಮೀರಿದ ಆಹಾರ ಸೇವನೆಯೇ ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿಸುತ್ತದೆ. ಒಂದು ಅಧ್ಯಯನಕ್ಕನುಸಾರ ಆಫ್ರಿಕದ ಹಲವೆಡೆ “ನ್ಯೂನ ಪೋಷಣೆಯ ಮಕ್ಕಳಿಗಿಂತಲೂ ಅತಿತೂಕವಿರುವ ಮಕ್ಕಳೇ ಜಾಸ್ತಿ ಇದ್ದಾರೆ.” ಬೊಜ್ಜು ಮೈಯ ಮಕ್ಕಳಿಗೆ ಈಗಲೂ ಮುಂದೆಯೂ ಮಧುಮೇಹ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ತಪ್ಪಿದ್ದಲ್ಲ. ಹೆತ್ತವರೇ, ನೀವು ಸ್ವತಃ ಮಿತವಾಗಿ ಆಹಾರ ಸೇವಿಸಿ ಮಕ್ಕಳಿಗೆ ಉತ್ತಮ ಮಾದರಿ ಇಡಿ.

ಸಸ್ಯಾಹಾರ ಹೆಚ್ಚು ಸೇವಿಸಿ. ಸಂತುಲಿತ ಆಹಾರದಲ್ಲಿ ಪಿಷ್ಟಾಂಶ ಮತ್ತು ಮಾಂಸಕ್ಕಿಂತ ಬಗೆಬಗೆಯ ಹಣ್ಣುಹಂಪಲು, ತರಕಾರಿಗಳು, ಧಾನ್ಯಗಳು ಕೂಡಿರುತ್ತವೆ. ವಾರವಿಡೀ ಮಾಂಸ ತಿನ್ನುವುದಕ್ಕಿಂತ ಒಂದೆರಡು ಸಲ ಮೀನು ಸೇವಿಸಿ. ಪಾಸ್ತಾ, ಬಿಳಿ ಬ್ರೆಡ್‌, ಬೆಳ್ತಿಗೆ ಅಕ್ಕಿಯಂಥ ಸಂಸ್ಕರಿಸಿದ ಆಹಾರಗಳಲ್ಲಿ ಹೆಚ್ಚಿನ ಪೋಷಕಾಂಶಗಳು ನಷ್ಟವಾಗಿರುವುದರಿಂದ ಅವುಗಳ ಸೇವನೆ ಕಡಿಮೆಮಾಡಿ. ಹಾನಿಕರವಾಗಿರಬಲ್ಲ ಜನಪ್ರಿಯ ಪಥ್ಯಗಳನ್ನು ವರ್ಜಿಸಿರಿ. ಹೆತ್ತವರೇ, ನಿಮ್ಮ ಮಕ್ಕಳಲ್ಲಿ ಆರೋಗ್ಯಕರ ಆಹಾರಕ್ಕಾಗಿ ರುಚಿಯನ್ನು ಬೆಳೆಸುವ ಮೂಲಕ ಅವರ ಆರೋಗ್ಯ ಕಾಪಾಡಿ. ಉದಾಹರಣೆಗೆ, ಕುರುಕಲು ತಿಂಡಿ, ಚಾಕಲೇಟ್‌ಗಳನ್ನು ಕೊಡದೆ ಕಡಲೆ, ಬಾದಾಮಿ ಮುಂತಾದ ಬೀಜಗಳನ್ನೂ ಚೆನ್ನಾಗಿ ತೊಳೆದ ತಾಜಾ ಹಣ್ಣು-ತರಕಾರಿಗಳನ್ನೂ ಕೊಡಿ.

ಪಾನೀಯಗಳನ್ನು ತುಂಬ ಸೇವಿಸಿ. ವಯಸ್ಕರು ಮತ್ತು ಮಕ್ಕಳು ತುಂಬ ನೀರನ್ನೂ ಸಕ್ಕರೆ ಬೆರೆಸದ ಇತರ ಪಾನೀಯಗಳನ್ನು ಪ್ರತಿದಿನ ಸೇವಿಸುವುದು ಅಗತ್ಯ. ಬೇಸಿಗೆಯಲ್ಲಿ, ದೈಹಿಕವಾಗಿ ಶ್ರಮದ ಕೆಲಸಮಾಡುವಾಗ, ವ್ಯಾಯಾಮ ಮಾಡುವಾಗಲಂತೂ ಇನ್ನೂ ಹೆಚ್ಚು ಸೇವಿಸಿ. ಈ ಪಾನೀಯಗಳು ಜೀರ್ಣಕ್ರಿಯೆಗೆ, ದೇಹದಲ್ಲಿರುವ ವಿಷಕಾರಕಗಳ ವಿಸರ್ಜನೆಗೆ, ಕಾಂತಿಯುತ ತ್ವಚೆಗೆ ಮತ್ತು ತೂಕ ಇಳಿಸಲು ಸಹಾಯಕ. ಅಷ್ಟೇ ಅಲ್ಲ ಮೈಮನಸ್ಸು ಪ್ರಫುಲ್ಲವಾಗಿರುತ್ತದೆ. ಸಕ್ಕರೆ ಬೆರೆಸಿದ ಪಾನೀಯಗಳನ್ನೂ ಮದ್ಯವನ್ನೂ ಅತಿಯಾಗಿ ಸೇವಿಸಬೇಡಿ. ದಿನವೂ ಒಂದು ಸಾಫ್ಟ್‌ ಡ್ರಿಂಕ್‌ ಕುಡಿದರೆ ಒಂದು ವರ್ಷದೊಳಗೆ ನಿಮ್ಮ ತೂಕ ಸುಮಾರು 7 ಕೆ.ಜಿ. ಹೆಚ್ಚಾಗಬಲ್ಲದು.

ಕೆಲವು ದೇಶಗಳಲ್ಲಿ ಶುದ್ಧ ನೀರು ಬಹಳ ದುಬಾರಿ ಮಾತ್ರವಲ್ಲ ಅದನ್ನು ಪಡೆಯಲು ತುಂಬ ಶ್ರಮಪಡಬೇಕು. ಆದರೂ ಶುದ್ಧ ನೀರಿನ ಸೇವನೆ ಅತ್ಯಾವಶ್ಯಕ. ನೀರು ಕಲುಷಿತವಾಗಿದ್ದರೆ ಚೆನ್ನಾಗಿ ಕುದಿಸಬೇಕು ಇಲ್ಲವೆ ರಾಸಾಯನಿಕ ವಸ್ತುಗಳನ್ನು ಬಳಸಿ ಶುದ್ಧೀಕರಿಸಬೇಕು. ಯುದ್ಧಗಳು ಅಥವಾ ಭೂಕಂಪಗಳಿಂದಾಗಿ ಸಾಯುವ ಜನರಿಗಿಂತ ಕಲುಷಿತ ನೀರಿನ ಸೇವನೆಯಿಂದ ಸಾಯುವವರೇ ಹೆಚ್ಚು ಮತ್ತು ದಿನವೊಂದಕ್ಕೆ 4,000 ಮಕ್ಕಳು ಬಲಿಯಾಗುತ್ತಿದ್ದಾರೆ ಎನ್ನಲಾಗುತ್ತದೆ. ಶಿಶುಗಳಿಗೆ ಮೊದಲ 6 ತಿಂಗಳು ಎದೆಹಾಲನ್ನು ಮಾತ್ರವೇ ಕೊಟ್ಟು, ಕಡಿಮೆಪಕ್ಷ 2 ವರ್ಷವಾಗುವ ತನಕ ಎದೆಹಾಲು ಮತ್ತು ಬೇರೆ ಆಹಾರ ಉಣಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸ್ಸು ಮಾಡುತ್ತದೆ. (g11-E 03)