ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಂದರ್ಶನ | ಫಾನ್‌ ಯೂ

ಒಬ್ಬ ಸಾಫ್ಟ್‌ವೇರ್‌ವಿನ್ಯಾಸಕ ತನ್ನ ನಂಬಿಕೆಯ ಬಗ್ಗೆ ಮಾತಾಡುತ್ತಾರೆ

ಒಬ್ಬ ಸಾಫ್ಟ್‌ವೇರ್‌ವಿನ್ಯಾಸಕ ತನ್ನ ನಂಬಿಕೆಯ ಬಗ್ಗೆ ಮಾತಾಡುತ್ತಾರೆ

ಡಾ. ಫಾನ್‌ ಯೂರವರು ಬೀಜಿಂಗ್‍ನಲ್ಲಿರುವ ಚೈನಾ ಇನ್ಸ್‌ಟಿಟ್ಯೂಟ್‌ ಆಫ್‌ ಆಟೋಮಿಕ್‌ ಎನರ್ಜಿ ಎಂಬಲ್ಲಿ ಗಣಿತಶಾಸ್ತ್ರ ಸಂಶೋಧಕರಾಗಿ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ಆಗ ಅವರು ದೇವರನ್ನು ನಂಬುತ್ತಿರಲಿಲ್ಲ, ವಿಕಾಸವಾದವನ್ನು ನಂಬುತ್ತಿದ್ದರು. ಆದರೆ ಈಗ ಅವರು ಜೀವವು ದೇವರಿಂದ ವಿನ್ಯಾಸಿಸಲಾಗಿದೆ ಅಥವಾ ಸೃಷ್ಟಿಸಲಾಗಿದೆ ಎಂದು ನಂಬುತ್ತಾರೆ. ಅವರ ನಂಬಿಕೆಯ ಬಗ್ಗೆ ಎಚ್ಚರ! ಪತ್ರಿಕೆ ಕೇಳಿದಾಗ ಅವರು ಹೇಳಿದ್ದು . . .

ನಿಮ್ಮ ಬಗ್ಗೆ ಸ್ವಲ್ಪ ಹೇಳ್ತೀರಾ?

ನಾನು ಹುಟ್ಟಿದ್ದು 1959ರಲ್ಲಿ ಚೀನಾದ ಜ್ಯಾನ್ಶಿ ರಾಜ್ಯದ ಫೂಜೋ ಎಂಬ ಪಟ್ಟಣದಲ್ಲಿ. ನನಗೆ ಎಂಟು ವರ್ಷವಾದಾಗ ನಮ್ಮ ದೇಶ ಸಾಂಸ್ಕೃತಿಕ ಕ್ರಾಂತಿಯ ಪರಿಣಾಮಗಳನ್ನು ಎದುರಿಸುತ್ತಿತ್ತು. ನನ್ನ ತಂದೆ ಸಿವಿಲ್‌ ಎಂಜಿನಿಯರ್‌ ಆಗಿದ್ದರು. ಅವರಿಗೆ ಬಹುದೂರದ ಕಾಡು ಪ್ರದೇಶದಲ್ಲಿ ರೈಲು ಮಾರ್ಗವನ್ನು ನಿರ್ಮಿಸುವಂತೆ ಹೇಳಲಾಯಿತು. ಹಾಗಾಗಿ, ಅನೇಕ ವರ್ಷಗಳವರೆಗೆ ಅವರು ನಮ್ಮನ್ನು ವರ್ಷಕ್ಕೊಮ್ಮೆ ಮಾತ್ರ ಭೇಟಿಯಾಗುತ್ತಿದ್ದರು. ಆಗ ನಾನು ನನ್ನ ಅಮ್ಮನ ಜೊತೆಯಲ್ಲಿ ವಾಸವಾಗಿದ್ದೆ. ನಮ್ಮ ಅಮ್ಮ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಅವರು ಕೆಲಸ ಮಾಡುತ್ತಿದ್ದ ಶಾಲೆಯಲ್ಲೇ ನಾವು ವಾಸವಾಗಿದ್ದೆವು. 1970ರಲ್ಲಿ ಲಿನ್‌ಚ್ವಾನ್‌ ರಾಜ್ಯದ ಯೂಫಾನ್‌ ಎಂಬ ಹಳ್ಳಿಗೆ ಸ್ಥಳಾಂತರಿಸಬೇಕಾಯಿತು. ಅದು ತುಂಬ ಬಡ ಹಳ್ಳಿಯಾಗಿದ್ದು, ಅಲ್ಲಿ ಆಹಾರದ ಅಭಾವ ಇತ್ತು.

ನಿಮ್ಮ ಹೆತ್ತವರ ನಂಬಿಕೆ ಏನಾಗಿತ್ತು?

ನಮ್ಮ ತಂದೆಗೆ ಧರ್ಮದಲ್ಲಾಗಲಿ, ರಾಜಕೀಯದಲ್ಲಾಗಲಿ ಆಸಕ್ತಿ ಇರಲಿಲ್ಲ. ನಮ್ಮ ಅಮ್ಮ ಬೌದ್ಧ ಧರ್ಮವನ್ನು ಅನುಸರಿಸುತ್ತಿದ್ದರು. ಶಾಲೆಯಲ್ಲಿ ನನಗೆ, ಜೀವ ತನ್ನಿಂದ ತಾನೇ ಬಂತು ಎಂದು ಕಲಿಸಲಾಯಿತು. ನನ್ನ ಶಿಕ್ಷಕರು ಹೇಳಿದ್ದನ್ನು ನಾನು ನಂಬಿದ್ದೆ.

ನಿಮಗೆ ಗಣಿತಶಾಸ್ತ್ರದಲ್ಲಿ ಹೇಗೆ ಆಸಕ್ತಿ ಹುಟ್ಟಿತು?

ಗಣಿತಶಾಸ್ತ್ರದಲ್ಲಿ ತರ್ಕಗಳ ಆಧಾರವಾಗಿ ಸತ್ಯವನ್ನು ಕಂಡುಹಿಡಿಯಲಾಗುತ್ತದೆ. ಹಾಗಾಗಿ ನನಗದು ಇಷ್ಟವಾಯಿತು. 1976ರಲ್ಲಿ ಆ ಕ್ರಾಂತಿಯ ನಾಯಕನಾದ ಮಾವೊ ಟ್ಸೆ-ತುಂಗ್‌ ಸತ್ತ ಸ್ವಲ್ಪದರಲ್ಲೇ ನಾನು ವಿಶ್ವವಿದ್ಯಾನಿಲಯಕ್ಕೆ ಹೋದೆ. ನಾನು ಗಣಿತಶಾಸ್ತ್ರವನ್ನು ಮುಖ್ಯ ವಿಷಯವಾಗಿ ಆರಿಸಿಕೊಂಡೆ. ಈ ಉನ್ನತ ಪದವಿ ಪಡೆದ ನಂತರ ನಾನು ನ್ಯೂಕ್ಲಿಯರ್‌ ಶಕ್ತಿ ಉತ್ಪಾದಕಗಳ ವಿನ್ಯಾಸಕ್ಕಾಗಿ ಗಣಿತಶಾಸ್ತ್ರ ಸಂಶೋಧನೆ ಮಾಡುವ ಕೆಲಸ ಮಾಡಿದೆ.

ಬೈಬಲ್‌ ಬಗ್ಗೆ ನಿಮಗೆ ಯಾವ ಅಭಿಪ್ರಾಯ ಇತ್ತು?

1987ರಲ್ಲಿ ನಾನು ಟೆಕ್ಸಾಸ್‍ನ ಎ ಆ್ಯಂಡ್‌ ಎಮ್‌ ವಿಶ್ವವಿದ್ಯಾನಿಲಯದಲ್ಲಿ ಡಾಕ್ಟರೇಟ್‌ ವಿದ್ಯಾಭ್ಯಾಸ ಮಾಡಲು ಅಮೆರಿಕಾಕ್ಕೆ ಬಂದೆ. ಅಮೆರಿಕದಲ್ಲಿ ಅನೇಕರು ದೇವರನ್ನು ನಂಬುತ್ತಾರೆ ಮತ್ತು ಬೈಬಲ್‌ ಓದುತ್ತಾರೆಂದು ನನಗೆ ಗೊತ್ತಿತ್ತು. ಬೈಬಲಿನಲ್ಲಿ ಜೀವನಕ್ಕೆ ಪ್ರಯೋಜನವಾಗುವ ವಿವೇಕಯುತ ವಿಷಯಗಳಿವೆ ಎಂದು ನಾನು ಕೇಳಿಸಿಕೊಂಡಿದ್ದೆ. ಆದ್ದರಿಂದ ಅದನ್ನು ಓದ ಬೇಕೆಂದು ಅಂದುಕೊಂಡೆ.

ಬೈಬಲಿನ ಬೋಧನೆಗಳು ಜೀವನಕ್ಕೆ ತುಂಬ ಪ್ರಯೋಜನಕರ ಎಂದು ನನಗನಿಸಿತು. ಆದರೆ ಬೈಬಲಿನ ಕೆಲವು ಭಾಗಗಳನ್ನು ಅರ್ಥಮಾಡಿಕೊಳ್ಳಲು ನನಗೆ ತುಂಬ ಕಷ್ಟವಾಯಿತು. ಹಾಗಾಗಿ, ನಾನದನ್ನು ಓದುವುದನ್ನೇ ನಿಲ್ಲಿಸಿಬಿಟ್ಟೆ.

ಬೈಬಲ್‌ ಬಗ್ಗೆ ಪುನಃ ಆಸಕ್ತಿ ಬರಲು ಕಾರಣವೇನು?

ಸೃಷ್ಟಿಕರ್ತ ಇದ್ದಾನೆ ಅನ್ನೋದು ನನಗೆ ಹೊಸ ವಿಷಯವಾಗಿತ್ತು. ಹಾಗಾಗಿ, ಇದು ನಿಜನಾ ಎಂದು ಸಂಶೋಧನೆ ಮಾಡಲು ನಿರ್ಧಾರ ಮಾಡಿದೆ

1990ರಲ್ಲಿ ಯೆಹೋವನ ಸಾಕ್ಷಿಗಳಲ್ಲೊಬ್ಬರು ನನ್ನ ಮನೆಗೆ ಬಂದರು. ಮನಷ್ಯರೆಲ್ಲರಿಗೆ ಇರುವ ಉತ್ತಮ ಭವಿಷ್ಯದ ಬಗ್ಗೆ ಬೈಬಲ್‌ ಏನು ಹೇಳುತ್ತದೆ ಎಂದು ಅವರು ತೋರಿಸಿದರು. ದಂಪತಿಯೊಬ್ಬರು ನಮ್ಮ ಮನೆಗೆ ಬಂದು ನಾನು ಬೈಬಲನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುವಂತೆ ಅವರು ಏರ್ಪಾಡು ಮಾಡಿದರು. ನನ್ನ ಹೆಂಡತಿ ಲೀಪಿನ್‌ ಸಹ ಬೈಬಲ್‌ ಕಲಿಯಲು ಆರಂಭಿಸಿದಳು. ಚೀನಾದಲ್ಲಿದ್ದಾಗ ಹೈಸ್ಕೂಲ್‍ನಲ್ಲಿ ಭೌತಶಾಸ್ತ್ರ ಕಲಿಸುತ್ತಿದ್ದ ಅವಳು ಮುಂಚೆ ದೇವರನ್ನು ನಂಬುತ್ತಿರಲಿಲ್ಲ. ಜೀವದ ಆರಂಭ ಹೇಗಾಯಿತು ಅನ್ನುವುದರ ಬಗ್ಗೆ ಬೈಬಲ್‌ ಏನು ಹೇಳುತ್ತದೆ ಎಂದು ನಾವು ಕಲಿತೆವು. ಸೃಷ್ಟಿಕರ್ತ ಇದ್ದಾನೆ ಅನ್ನೋದು ನನಗೆ ಹೊಸ ವಿಷಯವಾಗಿತ್ತು. ಹಾಗಾಗಿ, ಇದು ನಿಜನಾ ಎಂದು ಸಂಶೋಧನೆ ಮಾಡಲು ನಿರ್ಧಾರ ಮಾಡಿದೆ.

ನೀವು ಹೇಗೆ ಸಂಶೋಧನೆ ಮಾಡಿದಿರಿ?

ಗಣಿತಶಾಸ್ತ್ರಜ್ಞನಾಗಿ ನನಗೆ ಯಾವುದೇ ಒಂದು ವಿಷಯ ಸಂಭವಿಸುವ ಸಾಧ್ಯತೆ ಎಷ್ಟಿದೆ ಎಂದು ಲೆಕ್ಕಹಾಕಿ ನೋಡುವ ತರಬೇತಿ ಕೊಡಲಾಗಿತ್ತು. ಜೀವ ತನ್ನಿಂದ ತಾನೇ ಬರಬೇಕೆಂದರೆ ಮೊದಲೇ ಪ್ರೊಟೀನ್‌ಗಳು ಇರಬೇಕು ಎಂದು ಕಲಿತಿದ್ದೆ. ಆದ್ದರಿಂದ ಪ್ರೊಟೀನ್‌ಗಳು ಯಾರ ಕೈವಾಡ ಇಲ್ಲದೆ ತನ್ನಿಂದ ತಾನೇ ಬರಲು ಸಾಧ್ಯ ಇದೆಯಾ ಎಂದು ನೋಡಲು ನಾನು ಪ್ರಯತ್ನಿಸಿದೆ. ಪ್ರೊಟೀನ್‌ಗಳು ಹೆಚ್ಚು ಕ್ಲಿಷ್ಟಕರವಾದ ಅಣುಗಳಾಗಿವೆ. ಜೀವಕೋಶಗಳಲ್ಲಿ ಬೇರೆ ಬೇರೆ ವಿಧದ ಸಾವಿರಾರು ಪ್ರೊಟೀನ್‌ಗಳಿದ್ದು ಅವು ವ್ಯವಸ್ಥಿತ ರೀತಿಯಲ್ಲಿ ಕೆಲಸಮಾಡುತ್ತವೆ. ಹಾಗಾಗಿ, ಪ್ರೊಟೀನ್‌ಗಳು ತನ್ನಿಂದ ತಾನೇ ಬರಲು ಸಾಧ್ಯವೇ ಇಲ್ಲ ಎಂದು ಅನೇಕರಂತೆ ನನಗೂ ಗೊತ್ತಾಯಿತು. ತುಂಬ ಜಟಿಲವಾದ ಮತ್ತು ಜೀವ ವ್ಯವಸ್ಥೆಯ ಅತಿ ಮುಖ್ಯ ಭಾಗವಾದ ಈ ಅಣು ತನ್ನಿಂದ ತಾನೇ ಹೇಗೆ ಬಂತು ಎನ್ನುವುದಕ್ಕೆ ವಿಕಾಸವಾದದಲ್ಲೂ ನನಗೆ ತೃಪ್ತಿಕರ ಉತ್ತರ ಸಿಗಲಿಲ್ಲ. ಆದ್ದರಿಂದ, ಸೃಷ್ಟಿಕರ್ತ ಇದ್ದಾನೆ ಎಂಬ ಸತ್ಯಾಂಶ ನನಗೆ ಗೊತ್ತಾಯಿತು.

ಬೈಬಲ್‌ ದೇವರೇ ಬರೆಸಿದ್ದು ಎಂದು ಏಕೆ ಅನಿಸಿತು?

ಯೆಹೋವನ ಸಾಕ್ಷಿಗಳ ಸಹಾಯ ಪಡೆದು ನಾನು ಬೈಬಲನ್ನು ಕಲಿಯುತ್ತಾ ಹೋದಂತೆ ಅನೇಕ ವಿಷಯಗಳು ಅವು ಸಂಭವಿಸುವುದಕ್ಕೂ ಮುಂಚೆಯೇ ಬೈಬಲಿನಲ್ಲಿ ಬರೆಯಲಾದದ್ದನ್ನು ನೋಡಿದೆ. ಮಾತ್ರವಲ್ಲ, ಅಲ್ಲಿ ಬರೆದ ಹಾಗೆಯೇ ಸಂಭವಿಸಿತ್ತು. ಬೈಬಲ್‍ನಲ್ಲಿರುವ ತತ್ವಗಳ ಪ್ರಕಾರ ಜೀವಿಸುವಾಗ ನನಗೆ ತುಂಬ ಪ್ರಯೋಜನವಾಯಿತು. ಸಾವಿರಾರು ವರ್ಷಗಳ ಹಿಂದೆ ಇದ್ದ ಬೈಬಲ್‌ ಬರಹಗಾರರು ಇಂದಿನ ನಮ್ಮ ಜೀವನಕ್ಕೆ ಪ್ರಯೋಜನವಾಗುವ ವಿವೇಕಯುತ ವಿಷಯಗಳನ್ನು ಹೇಗೆ ಬರೆದರು? ಎಂದು ನನಗೆ ಆಶ್ಚರ್ಯವಾಯಿತು. ಕ್ರಮೇಣ, ಬೈಬಲ್‌ ದೇವರೇ ಬರೆಸಿದ್ದು ಎಂದು ನನಗೆ ಅರ್ಥ ಆಯಿತು.

ಸೃಷ್ಟಿಕರ್ತನು ಇದ್ದಾನೆ ಎಂದು ಈಗಲೂ ಯಾವ ವಿಷಯಗಳು ನಿಮಗೆ ಸ್ಪಷ್ಟಪಡಿಸುತ್ತಿವೆ?

ಪರಿಸರದಲ್ಲಿರುವ ಅನೇಕ ವಿಷಯಗಳನ್ನು ಗಮನಿಸುವಾಗ ಸೃಷ್ಟಿಕರ್ತನು ಇದ್ದಾನೆ ಎಂದು ನಂಬಲೇಬೇಕಾಗುತ್ತದೆ. ಈಗ ನಾನು ಕಂಪ್ಯೂಟರ್‌ಗಳಿಗಾಗಿ ಸಾಫ್ಟ್‌ವೇರನ್ನು ತಯಾರಿಸುತ್ತಿದ್ದೇನೆ. ನಮ್ಮ ಮೆದುಳು ಕಂಪ್ಯೂಟರ್‌ ಪ್ರೋಗ್ರಾಂಗಳಿಗಿಂತ ಉತ್ತಮ ರೀತಿಯಲ್ಲಿ ಕೆಲಸ ಮಾಡುವುದನ್ನು ನೋಡುವಾಗ ಆಶ್ಚರ್ಯ ಆಗುತ್ತದೆ. ಉದಾಹರಣೆಗೆ, ಸ್ವರ ಅಥವಾ ಮಾತನ್ನು ಗುರುತಿಸುವ ನಮ್ಮ ಮೆದುಳಿನ ಸಾಮರ್ಥ್ಯ ವಿಶೇಷವಾದದ್ದು. ನಾವು ಸುಲಭವಾಗಿ ವಾಕ್ಯಗಳನ್ನು, ನಗು, ಕೆಮ್ಮು, ತೊದಲು ಮಾತು, ಬೇರೆ ಬೇರೆ ಉಚ್ಚಾರಣೆಗಳು, ಪ್ರತಿಧ್ವನಿ, ಟೆಲಿಫೋನ್‍ನಲ್ಲಿ ಕೇಳುವ ಸ್ವರ ಹೀಗೆ ಎಲ್ಲಾ ಸ್ವರವನ್ನು ಗುರುತಿಸಿ ಅರ್ಥಮಾಡಿಕೊಳ್ಳುತ್ತೇವೆ. ಇದೆಲ್ಲಾ ನಮ್ಮ ದಿನನಿತ್ಯದ ಸಾಮಾನ್ಯ ವಿಷಯ ಅಂತ ನೀವು ಹೇಳಬಹುದು. ಆದರೆ ಸಾಫ್ಟ್‌ವೇರ್‌ ತಯಾರಿಸುವವರಿಗೆ ಇದು ಸಾಮಾನ್ಯ ವಿಷಯ ಅಲ್ಲ. ಸ್ವರವನ್ನು ಗುರುತಿಸಲು ತಯಾರಿಸಲಾದ ಅತ್ಯುತ್ತಮ ಸಾಫ್ಟ್‌ವೇರ್‌ ಸಹ ಮನುಷ್ಯನ ಮೆದುಳಿನ ಮುಂದೆ ಏನೂ ಅಲ್ಲ.

ಮೆದುಳು ನಮ್ಮ ಭಾವನೆಗಳನ್ನು, ಬೇರೆ ಬೇರೆ ಉಚ್ಛಾರಣೆಗಳನ್ನು ಗುರುತಿಸುತ್ತದೆ. ಮಾತ್ರವಲ್ಲ, ಸ್ವರವನ್ನು ಕೇಳಿ ಅದನ್ನು ಹೇಳಿದ ವ್ಯಕ್ತಿ ಯಾರೆಂದೂ ಗುರುತಿಸುತ್ತದೆ. ಇದನ್ನು ಇಷ್ಟು ನಿಷ್ಕೃಷ್ಟವಾಗಿ ಯಾವ ಅತ್ಯಾಧುನಿಕ ಕಂಪ್ಯೂಟರ್‌ ಸಹ ಮಾಡುವುದಿಲ್ಲ. ಆದ್ದರಿಂದ ಸ್ವರವನ್ನು ಗುರುತಿಸುವ ಮೆದುಳಿಗಿರುವ ಸಾಮರ್ಥ್ಯವನ್ನು ಕಂಪ್ಯೂಟರ್‌ನಲ್ಲೂ ಹೇಗೆ ಅಳವಡಿಸುವುದು ಎಂದು ಸಾಫ್ಟ್‌ವೇರ್‌ ಇಂಜಿನಿಯರ್‌ಗಳು ಸಂಶೋಧನೆ ಮಾಡುತ್ತಿದ್ದಾರೆ. ಈ ಕೆಲಸ ಮಾಡುವ ಮೂಲಕ ಅವರು ದೇವರ ಕೈಕೆಲಸವನ್ನು ಅಧ್ಯಯನ ಮಾಡುತ್ತಿದ್ದಾರೆ ಎಂದು ನನಗೆ ಗೊತ್ತಿದೆ. ▪