ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಮುಖಪುಟ ಲೇಖನ | ಬೈಬಲ್‌ ನಿಜಕ್ಕೂ ದೇವರ ಪುಸ್ತಕನಾ?

ಬೈಬಲನ್ನು ನಂಬಲು ಕಾರಣಗಳು

ಬೈಬಲನ್ನು ನಂಬಲು ಕಾರಣಗಳು

ವೈಜ್ಞಾನಿಕ ನಿಷ್ಕೃಷ್ಟತೆ

ಬೈಬಲ್‌ ವಿಜ್ಞಾನದ ಪುಸ್ತಕವಲ್ಲದಿದ್ದರೂ ಪರಿಸರದ ಬಗ್ಗೆ ಅದು ಹೇಳುವ ಮಾಹಿತಿ ವೈಜ್ಞಾನಿಕವಾಗಿ ನಿಷ್ಕೃಷ್ಟವಾಗಿದೆ. ಇಂತಹ ಎರಡು ಉದಾಹರಣೆಗಳನ್ನು ನೋಡೋಣ. 1. ವಾಯುಮಂಡಲ ಅಧ್ಯಯನ 2. ವಂಶವಾಹಿ ಅಧ್ಯಯನ

ವಾಯುಮಂಡಲ ಅಧ್ಯಯನ—ಮಳೆ ಉಂಟಾಗುವ ವಿಧ

ವಾಯುಮಂಡಲ ಅಧ್ಯಯನ

ದೇವರು ‘ನೀರಿನ ಹನಿಗಳನ್ನು ಎಳೆದುಕೊಳ್ಳುವನು, ಅವು ತಿಳಿಮಳೆಯಾಗಿ ಮಂಜಿನಿಂದ ಉದುರುವವು. ಮೋಡಗಳು ಅದನ್ನು ಸುರಿಸಿ ಬಹುಜನರ ಮೇಲೆ ಚಿಮಕಿಸುವವು’ ಎನ್ನುತ್ತದೆ ಬೈಬಲ್‌.—ಯೋಬ 36:27, 28.

ಬೈಬಲಿನ ಈ ವಚನದಲ್ಲಿ ಜಲಚಕ್ರದಲ್ಲಿರುವ ಮೂರು ಮುಖ್ಯ ಹೆಜ್ಜೆಗಳನ್ನು ತಿಳಿಸಲಾಗಿದೆ. ಅವು (1) ಆವಿಯಾಗುವಿಕೆ, (2) ಘನೀಕರಣ, (3) ಮಳೆ ಅಥವಾ ಹಿಮ. ಮೊದಲು, ಸೂರ್ಯನ ಶಾಖದ ಮೂಲನಾಗಿರುವ ದೇವರು ಆ ಶಾಖದಿಂದ “ನೀರಿನ ಹನಿಗಳನ್ನು ಎಳೆದುಕೊಳ್ಳುವನು.” ಇದನ್ನು ಆವಿಯಾಗುವಿಕೆ ಎನ್ನುತ್ತಾರೆ. ನಂತರ ಆ ಆವಿ ಘನೀಕರಣಗೊಂಡು ಮೋಡವಾಗುತ್ತದೆ. ಆಮೇಲೆ ಆ ಮೋಡ ಕರಗಿ ಮಳೆ ಅಥವಾ ಹಿಮವಾಗಿ ಬೀಳುತ್ತದೆ. ಈ ಮಳೆ ಹೇಗೆ ಉಂಟಾಗುತ್ತದೆ ಎಂಬ ಸಂಪೂರ್ಣ ಮಾಹಿತಿ ತಜ್ಞರಿಗೆ ಇನ್ನೂ ತಿಳಿದಿಲ್ಲ. ಅದಕ್ಕೆ ಬೈಬಲ್‌, ‘ಮೋಡಗಳ ಹಬ್ಬುಗೆಯನ್ನೂ . . . ಯಾವನೂ ಅರ್ಥಮಾಡಿಕೊಳ್ಳಲಾರನು’ ಎನ್ನುತ್ತದೆ. (ಯೋಬ 36:29) ಆದರೆ, ಸೃಷ್ಟಿಕರ್ತನಿಗೆ ಜಲಚಕ್ರದ ಬಗ್ಗೆ ಎಲ್ಲವೂ ತಿಳಿದಿದೆ. ಆದ್ದರಿಂದಲೇ ಬೈಬಲ್‌ ಬರಹಗಾರರು ಅದರ ಬಗ್ಗೆ ನಿಷ್ಕೃಷ್ಟವಾಗಿ ಬರೆಯಲು ಸಾಧ್ಯವಾಗಿದೆ. ಅಷ್ಟೇ ಅಲ್ಲದೆ, ಈ ಪ್ರಕ್ರಿಯೆಯ ಬಗ್ಗೆ ಮನುಷ್ಯರು ತಿಳಿದುಕೊಳ್ಳುವುದಕ್ಕಿಂತ ನೂರಾರು ವರ್ಷಗಳ ಮುಂಚೆಯೇ ದೇವರು ಬೈಬಲಿನಲ್ಲಿ ತಿಳಿಸಿದ್ದಾನೆ.

ವಂಶವಾಹಿ ಅಧ್ಯಯನ—ಮಾನವ ಭ್ರೂಣದ ಬೆಳವಣಿಗೆ

ವಂಶವಾಹಿ ಅಧ್ಯಯನ

‘ನಾನು ಇನ್ನೂ ಕೇವಲ ಭ್ರೂಣವಾಗಿರುವಾಗಲೇ ನಿನ್ನ ಕಣ್ಣುಗಳು ನನ್ನನ್ನು ನೋಡಿದವು; ಅದರ ಎಲ್ಲಾ ಭಾಗಗಳು ನಿನ್ನ ಪುಸ್ತಕದಲ್ಲಿ ಬರೆಯಲ್ಪಟ್ಟಿದ್ದವು’ ಎಂದು ರಾಜ ದಾವೀದನು ದೇವರಿಗೆ ಹೇಳಿದನು. (ಕೀರ್ತನೆ 139:16) ಭ್ರೂಣವು ಹೇಗೆ ಬೆಳೆಯಬೇಕೆಂದು ಮೊದಲೇ ಒಂದು “ಪುಸ್ತಕದಲ್ಲಿ” ಬರೆಯಲಾಗಿರುತ್ತದೆ ಮತ್ತು ಅದರ ಪ್ರಕಾರ ಭ್ರೂಣ ಬೆಳೆಯುತ್ತದೆ ಎಂದು ದಾವೀದನು ಕಾವ್ಯಾತ್ಮಕವಾಗಿ ಬರೆದನು. ನಿಮಗೆ ಗೊತ್ತಾ? ಅವನಿದನ್ನು 3,000 ವರ್ಷಗಳ ಹಿಂದೆ ಬರೆದನು!

ಆಸ್ಟ್ರೀಯಾದ ಸಸ್ಯ ಶಾಸ್ತ್ರಜ್ಞರಾದ ಗ್ರೆಗರ್‌ ಮೆಂಡಲ್‌ 1800ರಲ್ಲಿ ವಂಶವಾಹಿಗಳ ಮೂಲಭೂತ ತತ್ವಗಳನ್ನು ಕಂಡುಹಿಡಿದರು. ಅಲ್ಲಿಯವರೆಗೆ ಇದರ ಬಗ್ಗೆ ಜನರಿಗೆ ತಿಳಿದಿರಲಿಲ್ಲ. ನಂತರ 2003ರ ಏಪ್ರಿಲ್‌ ತಿಂಗಳಿನಲ್ಲಿ ಸಂಶೋಧಕರು ಮಾನವ ಜೀನೋಮ್‌ (ಜೀನು ಸಮುದಾಯ) ರಚನೆಯನ್ನು ಕಂಡುಹಿಡಿದರು. ಇದರಲ್ಲಿ ಮಾನವ ದೇಹ ಪೂರ್ಣವಾಗಿ ಬೆಳೆಯಲು ಬೇಕಾದ ಎಲ್ಲ ಮಾಹಿತಿ ಇರುತ್ತದೆ. ಈ ವಂಶವಾಹಿ ರಾಸಾಯನಿಕ ಕೋಡ್‌ ಅನ್ನು ವಿಜ್ಞಾನಿಗಳು ಅಕ್ಷರಗಳಿಂದ ರಚಿತವಾದ ಪದಗಳಿಂದ ತುಂಬಿದ ಶಬ್ದಕೋಶಕ್ಕೆ ಹೋಲಿಸುತ್ತಾರೆ. ಈ ಪದಗಳು ವಂಶವಾಹಿ ನಿರ್ದೇಶನಗಳನ್ನು ಹೊಂದಿರುತ್ತವೆ. ಈ ನಿರ್ದೇಶನಗಳ ಆಧಾರದ ಮೇಲೆ ಭ್ರೂಣದ ಮೆದುಳು, ಹೃದಯ, ಶ್ವಾಸಕೋಶ ಮತ್ತು ಕಾಲುಗಳಂತಹ ಅಂಗಗಳು ಸೂಕ್ತವಾದ ರೀತಿಯಲ್ಲಿ ಮತ್ತು ಸರಿಯಾದ ಸಮಯಕ್ಕೆ ಬೆಳೆಯುತ್ತವೆ. ಆದ್ದರಿಂದಲೇ, ಜೀನೋಮನ್ನು ವಿಜ್ಞಾನಿಗಳು “ಜೀವದ ಪುಸ್ತಕ” ಎಂದು ಕರೆಯುತ್ತಾರೆ. ಬೈಬಲಿನ ಬರಹಗಾರ ದಾವೀದ ಇದರ ಬಗ್ಗೆ ಇಷ್ಟು ನಿಷ್ಕೃಷ್ಟವಾಗಿ ಹೇಗೆ ಬರೆದ? ‘ಯೆಹೋವ ದೇವರ ಆತ್ಮವು ನನ್ನಲ್ಲಿ ಬಂತು; ಆತನ ವಾಕ್ಯವು ನನ್ನ ಬಾಯಲ್ಲಿತ್ತು’ ಎಂದು ಅವನೇ ಹೇಳಿದನು. *2 ಸಮುವೇಲ 23:2.

 ಭವಿಷ್ಯದ ನಿಷ್ಕೃಷ್ಟ ಮಾಹಿತಿ

ರಾಜರು ಮತ್ತು ರಾಜ್ಯಗಳು ಎಲ್ಲಿ, ಹೇಗೆ, ಯಾವಾಗ ತಲೆ ಎತ್ತುತ್ತವೆ ಮತ್ತು ಯಾವಾಗ ಪತನವಾಗುತ್ತವೆ ಎಂದು ಹೇಳುವುದು ಅಸಾಧ್ಯ. ಆದರೆ ಬೈಬಲ್‌, ಇತಿಹಾಸದಲ್ಲಿ ಮೆರೆದ ದೊಡ್ಡ ದೊಡ್ಡ ಪಟ್ಟಣಗಳು ಮತ್ತು ಸಾಮ್ರಾಜ್ಯಗಳ ಪತನದ ಬಗ್ಗೆ ಸವಿವರವಾಗಿ ಭವಿಷ್ಯ ನುಡಿದಿತ್ತು. ಅಂತಹ ಎರಡು ಉದಾಹರಣೆಗಳನ್ನು ನೋಡಿ.

ಬಾಬೆಲ್‌ ಸಾಮ್ರಾಜ್ಯದ ಪತನ

ನೂರಾರು ವರ್ಷಗಳವರೆಗೆ ಪಶ್ಚಿಮ ಏಷ್ಯಾದಲ್ಲಿ ತನ್ನ ಪರಾಕ್ರಮವನ್ನು ತೋರಿದ ಸಾಮ್ರಾಜ್ಯ ಪುರಾತನ ಬಾಬೆಲ್‌. ಆ ಕಾಲದಲ್ಲಿ ಅದು ಪ್ರಪಂಚದಲ್ಲೇ ಅತೀ ದೊಡ್ಡ ನಗರವಾಗಿತ್ತು. ಆದರೆ, 200 ವರ್ಷಗಳ ಮುಂಚೆಯೇ ಯೆಶಾಯ ಎಂಬ ಬೈಬಲಿನ ಬರಹಗಾರ, ಕೋರೆಷ ಎಂಬ ರಾಜ ಈ ಸಾಮ್ರಾಜ್ಯವನ್ನು ನಿರ್ನಾಮ ಮಾಡುವನು, ನಂತರ ಅದರಲ್ಲಿ ಜನ ವಾಸಿಸುವುದೇ ಇಲ್ಲ ಎಂದು ಮುಂತಿಳಿಸಿದನು. (ಯೆಶಾಯ 13:17-20; 44:27, 28; 45:1, 2) ಆದರೆ ಇದೆಲ್ಲಾ ನಿಜವಾಗಿ ನಡೀತಾ?

ಇತಿಹಾಸ

ಕ್ರಿ.ಪೂ. 539, ಅಕ್ಟೋಬರ್‌ ತಿಂಗಳ ಒಂದು ರಾತ್ರಿ ರಾಜ ಕೋರೆಷ ಬಾಬೆಲನ್ನು ಆಕ್ರಮಣ ಮಾಡಿದನು. ಇಷ್ಟು ದಿನ ಬಾಬೆಲ್‌ ಸಾಮ್ರಾಜ್ಯ ಹಚ್ಚ ಹಸಿರಾಗಿರಲು ಕಾರಣವಾಗಿದ್ದ ನೀರಿನ ಕಾಲುವೆಗಳು ಸಮಯಾನಂತರ ಬತ್ತಿ ಹೋದವು. ಕ್ರಿ.ಶ. 200ರಷ್ಟಕ್ಕೆ ಆ ಪ್ರದೇಶ ಹಾಳು ದಿಬ್ಬವಾಗಿ ಹೋಗಿತ್ತು. ಇವತ್ತಿಗೂ ಈ ಬಾಬೆಲ್‌ ಪ್ರದೇಶ ಹಾಳು ದಿಬ್ಬವಾಗಿಯೇ ಉಳಿದಿದೆ. ಬೈಬಲ್‌ ಮೊದಲೇ ಹೇಳಿದಂತೆ ಬಾಬೆಲ್‌ ಸಾಮ್ರಾಜ್ಯ ‘ನಿರ್ಜನವಾಗಿ ತೀರಾ ಹಾಳಾಗಿ ಹೋಯಿತು.’—ಯೆರೆಮಿಾಯ 50:13.

ಆ ಬೈಬಲ್‌ ಬರಹಗಾರನಾದ ಯೆಶಾಯ ಇಷ್ಟು ನಿಷ್ಕೃಷ್ಟವಾಗಿ ಭವಿಷ್ಯವನ್ನು ಹೇಗೆ ಹೇಳಿದನು? ಇದು ‘ಆಮೋಚನ ಮಗನಾದ ಯೆಶಾಯನಿಗೆ ಬಾಬೆಲಿನ ವಿಷಯವಾಗಿ ತಿಳಿದು ಬಂದ ದೇವರ ವಾಕ್ಯ’ ಎಂದು ಬೈಬಲ್‌ ಹೇಳುತ್ತದೆ.—ಯೆಶಾಯ 13:1.

ನಿನೆವೆ ‘ಮರುಭೂಮಿಯಂತೆ ಒಣಗಿ ಹೋಗುವುದು’

ವೈಭವಯುತ ಅಶ್ಶೂರ ಸಾಮ್ರಾಜ್ಯದ ರಾಜಧಾನಿಯಾದ ನಿನೆವೆಯು, ವಾಸ್ತುಶಿಲ್ಪಕ್ಕೆ ಹೆಸರುವಾಸಿ ಆಗಿತ್ತು. ಅಗಲವಾದ ರಸ್ತೆಗಳು, ಉದ್ಯಾನವನಗಳು, ದೇವಾಲಯಗಳು ಮತ್ತು ಬೃಹದಾಕಾರದ ಅರಮನೆಗಳಿಂದ ಆ ರಾಜಧಾನಿ ವಿಜೃಂಭಿಸುತ್ತಿತ್ತು. ಆದರೆ, ಇಂಥ ಅಮೋಘ ಪಟ್ಟಣವಾದ ‘ನಿನೆವೆ ಹಾಳಾಗಿ ಮರುಭೂಮಿಯಂತೆ ಒಣಗಿ ಹೋಗುವುದು’ ಎಂದು ದೇವರ ಸೇವಕ ಚೆಫನ್ಯ ಮುಂತಿಳಿಸಿದ್ದನು. —ಚೆಫನ್ಯ 2:13-15.

ಕ್ರಿ.ಪೂ. 7ನೇ ಶತಮಾನದಲ್ಲಿ ಬಾಬೆಲ್‌ ಮತ್ತು ಮೇದ್ಯಯರು ಜೊತೆಗೂಡಿ ಆಕ್ರಮಣ ಮಾಡಿದಾಗ ನಿನೆವೆ ಸಂಪೂರ್ಣವಾಗಿ ನಿರ್ನಾಮವಾಯಿತು. ಹೀಗೆ ಸೋತು ಸುಣ್ಣವಾದ ಈ ಪಟ್ಟಣ ಸುಮಾರು 2,500 ವರ್ಷಗಳವರೆಗೆ ಹೇಳ ಹೆಸರಿಲ್ಲದಂತೆ ಆಯಿತು. ಆದ್ದರಿಂದ, ನಿನೆವೆ ಅನ್ನುವ ಪಟ್ಟಣ ನಿಜವಾಗಿಯೂ ಇತ್ತಾ ಎಂದು ಜನರು ಸಂಶಯ ಪಡುತ್ತಿದ್ದರು! ಇತ್ತೀಚೆಗೆ ಅಂದರೆ, 19ನೇ ಶತಮಾನದ ಮಧ್ಯಭಾಗದಲ್ಲಿ ಕೆಲವು ಪ್ರಾಕ್ತನಶಾಸ್ತ್ರಜ್ಞರು ಹಾಳಾದ ನಿನೆವೆಯನ್ನು ಕಂಡುಹಿಡಿದರು. ಈ ಪಟ್ಟಣ ಎಷ್ಟು ನಿರ್ನಾಮವಾಗಿದೆ ಅಂದರೆ ‘ಮತ್ತೆ ಈ ನಿನೆವೆ ಪಟ್ಟಣವನ್ನು ಗುರುತಿಸಲು ಆಗದೇ ಹೋಗಬಹುದು’ ಎಂದು ಗ್ಲೋಬಲ್‌ ಹೆರಿಟೇಜ್‌ ಫಂಡ್‌ ಎಂಬ ಸಂಸ್ಥೆ ಎಚ್ಚರಿಸಿದೆ.

ಚೆಫನ್ಯನಿಗೆ ಈ ಮಾಹಿತಿ ಮೊದಲೇ ಹೇಗೆ ತಿಳಿಯಿತು? ಇದು ‘ಯೆಹೋವ ದೇವರು ದಯಪಾಲಿಸಿದ ವಾಕ್ಯ’ ಎಂದು ಅವನೇ ಹೇಳಿದನು.—ಚೆಫನ್ಯ 1:1.

 ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ

ಜೀವನದ ಪ್ರಾಮುಖ್ಯ ಪ್ರಶ್ನೆಗಳಿಗೆ ಬೈಬಲ್‌ ಸರಿಯಾದ ಉತ್ತರ ಕೊಡುತ್ತದೆ. ಮುಂದಿನ ಉದಾಹರಣೆಗಳನ್ನು ಪರಿಗಣಿಸಿ.

ಲೋಕದಲ್ಲಿ ಯಾಕೆ ಇಷ್ಟು ಕಷ್ಟ, ಅನ್ಯಾಯ ಇದೆ?

ಕಷ್ಟ ಮತ್ತು ಅನ್ಯಾಯದ ಬಗ್ಗೆ ಬೈಬಲ್‌ ಬಹಳಷ್ಟು ಮಾಹಿತಿ ಕೊಡುತ್ತದೆ. ಬೈಬಲ್‌ ತಿಳಿಸುವ ಉತ್ತರ ಹೀಗಿದೆ:

  1. ‘ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರ ನಡಿಸಿ ಅವನಿಗೆ ಹಾನಿಯನ್ನು ಮಾಡಿದ್ದಾನೆ.’ಪ್ರಸಂಗಿ 8:9.

    ಯೋಗ್ಯರಲ್ಲದ ಮತ್ತು ಮೋಸ ಮಾಡುವ ಜನ ಅಧಿಕಾರ ನಡೆಸುವುದರಿಂದ ಹೇಳಲಾಗದಷ್ಟು ಕಷ್ಟಗಳು ಬಂದಿವೆ.

  2. “ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ.”ಪ್ರಸಂಗಿ 9:11.

    ಗಂಭೀರ ಕಾಯಿಲೆಗಳು, ಅಪಘಾತಗಳು ಮತ್ತು ವಿಪತ್ತುಗಳಂಥ ಅನಿರೀಕ್ಷಿತ ಘಟನೆಗಳು ಯಾವಾಗಾದರೂ, ಎಲ್ಲಿಯಾದರೂ, ಯಾರಿಗಾದರೂ ಸಂಭವಿಸಬಹುದು.

  3. ಒಬ್ಬ ಮನುಷ್ಯನಿಂದ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಪ್ರವೇಶಿಸಿದಂತೆಯೇ, ಎಲ್ಲರೂ ಪಾಪಮಾಡಿದ್ದರಿಂದ ಮರಣವು ಎಲ್ಲರಲ್ಲಿಯೂ ವ್ಯಾಪಿಸಿತು.”ರೋಮನ್ನರಿಗೆ 5:12.

    ಮೊದಲ ಮಾನವರಾದ ಆದಾಮ ಮತ್ತು ಹವ್ವರನ್ನು ಸೃಷ್ಟಿ ಮಾಡಿದಾಗ ಅಪರಿಪೂರ್ಣತೆ ಮತ್ತು ಸಾವು ಇರಲಿಲ್ಲ. ದೇವರ ಮಾತನ್ನು ಗೊತ್ತಿದ್ದೂ ಗೊತ್ತಿದ್ದೂ ಮೀರಿದ್ದರಿಂದ, ಪಾಪ “ಲೋಕದೊಳಗೆ ಪ್ರವೇಶಿಸಿತು.”

ಬೈಬಲ್‌, ಮನುಷ್ಯರಿಗೆ ಯಾಕೆ ಕಷ್ಟ ಇದೆ ಅಂತ ಮಾತ್ರ ಹೇಳುವುದಿಲ್ಲ. ದೇವರು ಅದನ್ನು ಹೇಗೆ ತೆಗೆದು ಹಾಕುತ್ತಾನೆ ಅಂತನೂ ಹೇಳುತ್ತೆ. ಅದಕ್ಕೆ ಬೈಬಲಿನಲ್ಲಿ, ‘ದೇವರು ಜನರ ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ’ ಎಂಬ ಆಶ್ವಾಸನೆಯನ್ನು ಕೊಡಲಾಗಿದೆ. —ಪ್ರಕಟನೆ 21:3, 4.

ಸತ್ತಾಗ ಏನಾಗುತ್ತದೆ?

ಸಾವು ಅನ್ನೋದು ಪ್ರಜ್ಞೆಯಿಲ್ಲದ, ಸಂಪೂರ್ಣ ನಿಷ್ಕ್ರಿಯ ಸ್ಥಿತಿ ಎಂದು ಬೈಬಲ್‌ ವಿವರಿಸುತ್ತದೆ. “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ” ಎಂದು ಪ್ರಸಂಗಿ 9:5 ಹೇಳುತ್ತದೆ. ಸತ್ತಾಗ ನಮ್ಮ ‘ಸಂಕಲ್ಪಗಳೆಲ್ಲಾ ಹಾಳಾಗುತ್ತವೆ.’ (ಕೀರ್ತನೆ 146:4) ಅಂದರೆ ಮೆದುಳು, ಜ್ಞಾನೇಂದ್ರಿಗಳು, ಹೀಗೆ ಎಲ್ಲ ಅಂಗಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಆದ್ದರಿಂದಲೇ ಸತ್ತವರು ನಡೆಯಲು, ಯೋಚಿಸಲು, ಮಾತಾಡಲು ಹೀಗೆ ಏನು ಮಾಡಲೂ ಸಾಧ್ಯವಿಲ್ಲ.

ಆದರೆ ಬೈಬಲ್‌ ಕೇವಲ ಸತ್ತ ಸ್ಥಿತಿಯನ್ನು ಹೇಳಿ ಸುಮ್ಮನಾಗುವುದಿಲ್ಲ. ದೇವರು ಸತ್ತವರನ್ನು ಮತ್ತೆ ಜೀವಂತವಾಗಿ ಎಬ್ಬಿಸುತ್ತಾನೆ ಎಂದು ಹೇಳುತ್ತದೆ. ಇದನ್ನೇ ಪುನರುತ್ಥಾನ ಎಂದು ಕರೆಯಲಾಗಿದೆ.—ಹೋಶೇಯ 13:14; ಯೋಹಾನ 11:11-14.

ಜೀವನದ ಉದ್ದೇಶವೇನು?

ಬೈಬಲಿನ ಪ್ರಕಾರ ಯೆಹೋವ ದೇವರು ಮೊದಲ ಗಂಡು-ಹೆಣ್ಣನ್ನು ಸೃಷ್ಟಿಸಿದನು. (ಆದಿಕಾಂಡ 1:27) ಅದಕ್ಕೇ, ಮೊದಲ ಮಾನವ ಆದಾಮನನ್ನು ‘ದೇವರ ಮಗ’ ಎಂದು ಕರೆಯಲಾಗಿದೆ. (ಲೂಕ 3:38) ಮನುಷ್ಯರನ್ನು ದೇವರು ಒಂದು ಉದ್ದೇಶದಿಂದ ಸೃಷ್ಟಿಸಿದ್ದಾನೆ.  ಅದೇನೆಂದರೆ, ಅವರು ತನ್ನೊಂದಿಗೆ ಆಪ್ತ ಸ್ನೇಹ ಬೆಳೆಸಿಕೊಳ್ಳಬೇಕು, ಮಕ್ಕಳನ್ನು ಪಡೆದು ಸಂತೋಷವಾಗಿ ಭೂಮಿಯ ಮೇಲೆ ಸದಾಕಾಲ ಇರಬೇಕು ಎಂದಾಗಿದೆ. ಅದಕ್ಕಾಗಿಯೇ ದೇವರು ಎಲ್ಲ ಮನುಷ್ಯರಿಗೆ ಆಧ್ಯಾತ್ಮಿಕ ಬಯಕೆಯನ್ನು ಇಟ್ಟಿದ್ದಾನೆ. ಈ ಬಯಕೆ ದೇವರ ಬಗ್ಗೆ ತಿಳಿಯಬೇಕೆಂಬ ಆಸೆಯಾಗಿದೆ. ಆದ್ದರಿಂದಲೇ ಬೈಬಲ್‌, “ತಮ್ಮ ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರು ಸಂತೋಷಿತರು” ಎಂದು ಹೇಳುತ್ತದೆ.—ಮತ್ತಾಯ 5:3.

ಅಷ್ಟೇ ಅಲ್ಲದೆ, “ದೇವರ ವಾಕ್ಯವನ್ನು ಕೇಳಿಸಿಕೊಳ್ಳುತ್ತಿದ್ದು ಅದರಂತೆ ನಡೆಯುತ್ತಿರುವವರೇ ಸಂತೋಷಿತರು” ಎಂದು ಬೈಬಲ್‌ ಹೇಳುತ್ತದೆ. (ಲೂಕ 11:28) ಬೈಬಲ್‌ ನಮಗೆ ದೇವರ ಬಗ್ಗೆ ಕಲಿಸುತ್ತದೆ ಮಾತ್ರವಲ್ಲ, ಈಗಲೂ ನಾವು ಸಂತೋಷದ ಜೀವನ ಸಾಗಿಸಲು ಸಹಾಯ ಮಾಡುತ್ತದೆ. ಜೊತೆಗೆ, ಮುಂದೆ ಶಾಶ್ವತವಾಗಿ ಜೀವಿಸುವ ನಿರೀಕ್ಷೆ ಕೊಡುತ್ತದೆ.

ಬೈಬಲ್‌—ದೇವರು ನಮಗೆ ಬರೆದ ಪತ್ರ

ಆಧಾರಗಳನ್ನು ಪರೀಕ್ಷಿಸಿದ ನಂತರ, ಬೈಬಲ್‌ ಕೇವಲ ಹಳೇ ಕಾಲದ ಪುಸ್ತಕವಲ್ಲ, ಅದು ಒಂದು ವಿಶೇಷ ಪುಸ್ತಕ ಎಂದು ಲಕ್ಷಾಂತರ ಜನರು ತಿಳಿದುಕೊಂಡಿದ್ದಾರೆ. ಬೈಬಲ್‌ ದೇವರಿಂದ ಪ್ರೇರಿತವಾಗಿದೆ, ಇದರ ಮೂಲಕ ನಿಮ್ಮ ಜೊತೆ ಮತ್ತು ಇಡೀ ಮಾನವಕುಲದ ಜೊತೆ ದೇವರು ಮಾತಾಡುತ್ತಾನೆ ಎಂದು ಅವರಿಗೆ ಮನದಟ್ಟಾಗಿದೆ. ದೇವರ ಬಗ್ಗೆ ತಿಳಿದುಕೊಳ್ಳಲು ಮತ್ತು ಸ್ನೇಹಿತರಾಗಲು ಆತನು ಇದರಲ್ಲಿ ಕರೆ ನೀಡಿದ್ದಾನೆ. “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು” ಎಂದು ಬೈಬಲ್‌ ಮಾತು ಕೊಡುತ್ತದೆ.—ಯಾಕೋಬ 4:8.

ಬೈಬಲ್‌ ಬಗ್ಗೆ ತಿಳಿದುಕೊಳ್ಳುವಾಗ ರೋಮಾಂಚಕ ನಿರೀಕ್ಷೆ ನಿಮಗೆ ಸಿಗುತ್ತದೆ. ಯಾವುದೇ ಒಂದು ಪುಸ್ತಕ ಓದಿದಾಗ ಅದರಲ್ಲಿ ಅದರ ಲೇಖಕನ ಬಗ್ಗೆ ಸ್ವಲ್ಪ ಮಾಹಿತಿ ಗೊತ್ತಾಗುತ್ತದೆ. ಅದೇರೀತಿ, ಬೈಬಲನ್ನು ಓದುವಾಗ ಅದರ ಗ್ರಂಥಕರ್ತನಾದ ದೇವರ ಭಾವನೆಗಳ ಮತ್ತು ಆತನ ಯೋಚನೆಗಳ ಬಗ್ಗೆ ತಿಳಿಯುತ್ತದೆ. ಇದರಿಂದ ನಿಮಗೇನು ಪ್ರಯೋಜನ? ನಿಮ್ಮ ಸೃಷ್ಟಿಕರ್ತನ ಮನದಾಳದ ಮಾತುಗಳು ಮತ್ತು ಭಾವನೆಗಳ ಬಗ್ಗೆ ನೀವು ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲ,

ಇದರ ಬಗ್ಗೆ ಹೆಚ್ಚನ್ನು ಕಲಿಯಲು ನಿಮಗೆ ಇಷ್ಟವಿದೆಯಾ? ಹಾಗಾದರೆ, ಯೆಹೋವನ ಸಾಕ್ಷಿಗಳು ನಿಮಗೆ ಸಹಾಯ ಮಾಡಲು ಇಷ್ಟಪಡುತ್ತಾರೆ. ನೀವು ಉಚಿತವಾಗಿ ಬೈಬಲ್‌ ಬಗ್ಗೆ ಕಲಿಯಲು ಏರ್ಪಾಡನ್ನು ಮಾಡುತ್ತಾರೆ. ಇದು ಬೈಬಲಿನ ಗ್ರಂಥಕರ್ತನಾದ ಯೆಹೋವ ದೇವರಿಗೆ ಹೆಚ್ಚು ಹತ್ತಿರವಾಗಲು ನಿಮಗೆ ಸಹಾಯ ಮಾಡುತ್ತದೆ. ▪

ಈ ಲೇಖನದಲ್ಲಿ ಬೈಬಲ್‌ ದೇವರಿಂದ ಪ್ರೇರಿತವಾದ ಪುಸ್ತಕ ಎಂದು ಹೇಳಲು ಕೆಲವು ಆಧಾರಗಳನ್ನು ಚರ್ಚಿಸಲಾಯಿತು. ಇದರ ಕುರಿತು ಹೆಚ್ಚಿನ ಮಾಹಿತಿಗಾಗಿ ಯೆಹೋವನ ಸಾಕ್ಷಿಗಳು ಪ್ರಕಾಶಿಸಿರುವ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಪುಸ್ತಕದ 2ನೇ ಅಧ್ಯಾಯ ನೋಡಿ. ಇದು www.jw.org/knನಲ್ಲಿ ಲಭ್ಯ ಅಥವಾ ಈ ಕೋಡನ್ನು ಸ್ಕ್ಯಾನ್‌ ಮಾಡಿ

ಬೈಬಲನ್ನು ಯಾರು ಬರೆಸಿದರು? ಎಂಬ ವಿಡಿಯೋ ಸಹ ನೋಡಿ. ಇದು www.jw.org/knನಲ್ಲಿ ಲಭ್ಯ

ಪ್ರಕಾಶನಗಳು > ವಿಡಿಯೊಗಳು ನೋಡಿ

^ ಪ್ಯಾರ. 10 ಯೆಹೋವ ಎನ್ನುವುದು ದೇವರ ವೈಯಕ್ತಿಕ ಹೆಸರು ಎಂದು ಬೈಬಲಿನಲ್ಲಿ ತಿಳಿಸಲಾಗಿದೆ.—ಕೀರ್ತನೆ 83:18.