ಮಾಹಿತಿ ಇರುವಲ್ಲಿ ಹೋಗಲು

ದೇವರು ವಿಶ್ವವನ್ನ ಸೃಷ್ಟಿ ಮಾಡೋಕೆ ಶುರುಮಾಡಿದ್ದು ಯಾವಾಗ?

ದೇವರು ವಿಶ್ವವನ್ನ ಸೃಷ್ಟಿ ಮಾಡೋಕೆ ಶುರುಮಾಡಿದ್ದು ಯಾವಾಗ?

ಬೈಬಲ್‌ ಕೊಡೋ ಉತ್ತರ

 ದೇವರು ವಿಶ್ವವನ್ನ ಸೃಷ್ಟಿ ಮಾಡೋಕೆ ಶುರುಮಾಡಿದ್ದು ಯಾವಾಗ ಮತ್ತು ಎಷ್ಟು ಸಮಯ ಹಿಡೀತು ಅಂತ ಬೈಬಲಲ್ಲಿ ಇಲ್ಲ. “ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು” ಅಂತಷ್ಟೇ ಹೇಳುತ್ತೆ. (ಆದಿಕಾಂಡ 1:1) “ಆದಿಯಲ್ಲಿ” ಅನ್ನೋದು ನಿರ್ದಿಷ್ಟವಾಗಿ ಯಾವಾಗ ಶುರುವಾಯ್ತು ಅಂತ ಬೈಬಲ್‌ ಹೇಳಲ್ಲ. ಆದಿಕಾಂಡದಲ್ಲಿರೋ ಸೃಷ್ಟಿಯ ಕ್ರಮವನ್ನ ನೋಡಿದ್ರೆ “ಆದಿ” ಅನ್ನೋದು ಸೃಷ್ಟಿಯ ಆರು “ದಿನಗಳ” ಮುಂಚೆ ಶುರುವಾಯ್ತು ಅಂತ ಗೊತ್ತಾಗುತ್ತೆ.

 ಸೃಷ್ಟಿ ನಡೆದ ಆರು ದಿನಗಳು ನಿಜವಾಗ್ಲೂ ಅದು 24 ಗಂಟೆಗಳಿರೋ ದಿನನಾ?

 ಅಲ್ಲ. ಬೈಬಲಲ್ಲಿ “ದಿನ” ಅನ್ನೋ ಪದ ಸಂದರ್ಭಕ್ಕೆ ತಕ್ಕಂತೆ ಅದ್ರ ಸಮಯಾವಧಿ ಹೆಚ್ಚುಕಡಿಮೆ ಆಗುತ್ತೆ. ಉದಾಹರಣೆಗೆ, ಒಂದು ಕಡೆ ಸೃಷ್ಟಿಯ ಇಡೀ ಸಮಯಾವಧಿಯನ್ನ ಒಂದು ದಿನ ಅಂತ ಹೇಳುತ್ತೆ.—ಆದಿಕಾಂಡ 2:4, ನೂತನ ಲೋಕ ಭಾಷಾಂತರ.

 ಸೃಷ್ಟಿ ನಡೆದ ಆರು ದಿನಗಳಲ್ಲಿ ಏನೆಲ್ಲಾ ನಡೀತು?

 ಭೂಮಿ ‘ಕ್ರಮವಿಲ್ಲದೆ ಬರಿದಾಗಿತ್ತು.’ ದೇವರು ಅದನ್ನ ಜೀವಿಗಳಿಗೆ ಬದುಕೋಕೆ ಆಗೋ ತರ ಬದಲಾಯಿಸಿದನು. (ಆದಿಕಾಂಡ 1:2) ಆಮೇಲೆ ಅದ್ರಲ್ಲಿ ಜೀವಿಗಳನ್ನ ಸೃಷ್ಟಿಸಿದನು. ಸೃಷ್ಟಿಯ ಆರು ದಿನಗಳಲ್ಲಿ ಏನೆಲ್ಲ ಆಯ್ತು?

  •  1 ನೇ ದಿನ: ಭೂಮಿ ಮೇಲೆ ಬೆಳಕು ಚೆಲ್ಲಿ ಹಗಲು-ರಾತ್ರಿ ಆಗೋ ತರ ದೇವರು ಮಾಡಿದನು.—ಆದಿಕಾಂಡ 1:3-5.

  •  2 ನೇ ದಿನ: ದೇವರು ಭೂಮಿ ಮೇಲೆ ವಿಸ್ತಾರವಾದ ಸ್ಥಳವನ್ನ ಮಾಡಿದನು ಅಂದ್ರೆ ನೀರನ್ನ ಭೂಮಿಯ ಮೇಲ್ಭಾಗದಲ್ಲಿ ಮತ್ತು ಭೂಮಿಯಲ್ಲಿ ಇರಿಸಿ ಮಧ್ಯ ವಿಸ್ತಾರ ಸ್ಥಳ ಇಟ್ಟನು.—ಆದಿಕಾಂಡ 1:6-8.

  •  3 ನೇ ದಿನ: ದೇವರು ಭೂಮಿ ಮೇಲೆ ಒಣ ನೆಲ ಕಾಣೋ ತರ ಮಾಡಿದನು. ಎಲ್ಲಾ ರೀತಿಯ ಗಿಡ-ಮರಗಳನ್ನ ಮಾಡಿದನು.—ಆದಿಕಾಂಡ 1:9-13.

  •  4 ನೇ ದಿನ: ಭೂಮಿಯಿಂದ ನೋಡಿದ್ರೆ ಸೂರ್ಯ, ಚಂದ್ರ, ನಕ್ಷತ್ರಗಳು ಕಾಣೋ ತರ ದೇವರು ಮಾಡಿದನು.—ಆದಿಕಾಂಡ 1:14-19.

  •  5 ನೇ ದಿನ: ನೀರಲ್ಲಿ ಬದುಕೋ ಜೀವಿಗಳನ್ನ, ಹಾರಾಡೋ ಜೀವಿಗಳನ್ನ ದೇವರು ಸೃಷ್ಟಿ ಮಾಡಿದನು.—ಆದಿಕಾಂಡ 1:20-23.

  •  6 ನೇ ದಿನ: ದೇವರು ಭೂಮಿ ಮೇಲೆ ಪ್ರಾಣಿಗಳನ್ನ, ಮನುಷ್ಯರನ್ನ ಸೃಷ್ಟಿ ಮಾಡಿದನು.—ಆದಿಕಾಂಡ 1:24-31.

 ದೇವರು ಆರನೇ ದಿನದ ಕೊನೇಲಿ ಕೆಲಸ ಅಂದ್ರೆ ಸೃಷ್ಟಿ ಮಾಡಿ ಮುಗಿಸಿ ವಿಶ್ರಾಂತಿ ತಗೊಂಡನು.—ಆದಿಕಾಂಡ 2:1, 2.

 ಆದಿಕಾಂಡ ಪುಸ್ತಕದಲ್ಲಿ ಇರೋ ಘಟನೆಗಳನ್ನ ವಿಜ್ಞಾನ ಒಪ್ಪುತ್ತಾ?

 ವಿಜ್ಞಾನ ಒಂದೊಂದು ವಿಷ್ಯವನ್ನ ಹೇಗೆ ವಿವರಿಸುತ್ತೋ ಆ ರೀತಿ ಬೈಬಲ್‌ ವಿಶ್ವ ಹೇಗೆ ಸೃಷ್ಟಿ ಆಯ್ತು ಅಂತ ಹೇಳಲ್ಲ. ಆದ್ರೆ ಅದು ಬೈಬಲ್‌ ಕಾಲದಲ್ಲಿ ಇದ್ದ ಜನ್ರಿಗೆ ಕೂಡ ಸುಲಭವಾಗಿ ಅರ್ಥ ಆಗುವಂಥ ರೀತಿಯಲ್ಲಿ ಹೇಳಿದೆ. ಬೈಬಲಲ್ಲಿ ಸೃಷ್ಟಿ ಬಗ್ಗೆ ಹೇಳಿರೋ ವಿಷ್ಯಗಳು ವಿಜ್ಞಾನಕ್ಕೆ ವಿರುದ್ಧವಾಗಿಲ್ಲ. “ಚಿಕ್ಕಪುಟ್ಟ ವಿಷ್ಯಗಳಲ್ಲಿ ತುಂಬ ವ್ಯತ್ಯಾಸ ಇದ್ರೂ ಮುಖ್ಯ ವಿಷ್ಯಗಳ ಬಗ್ಗೆ ಆದಿಕಾಂಡ ಮತ್ತು ವಿಜ್ಞಾನ ಹೇಳೋದು ಒಂದೇ ತರ ಇದೆ. ಮನುಷ್ಯನ ತನಕ ನಡೆದ ಎಲ್ಲ ಘಟನೆಗಳು ಶುರುವಾಗಿದ್ದು ತಟ್ಟನೆ ಚಿಟಿಕೆ ಹೊಡೆಯುವಷ್ಟರಲ್ಲೇ” ಅಂತ ಖಗೋಳ ಭೌತಶಾಸ್ತ್ರಜ್ಞ ರಾಬರ್ಟ್‌ ಜಸ್ಟ್ರೋ ಹೇಳ್ತಾರೆ.

 ಸೂರ್ಯ, ಚಂದ್ರ, ನಕ್ಷತ್ರಗಳು ಯಾವಾಗ ಸೃಷ್ಟಿ ಆಯ್ತು?

 ಸೂರ್ಯ, ಚಂದ್ರ, ನಕ್ಷತ್ರಗಳು ‘ಆದಿಯಲ್ಲೇ’ ಸೃಷ್ಟಿಯಾಗಿ ‘ಆಕಾಶದಲ್ಲಿತ್ತು.’ (ಆದಿಕಾಂಡ 1:1) ಭೂಮಿಯಿಂದ ಆಕಾಶ ಕಾಣಿಸದಷ್ಟು ವಾತಾವರಣ ದಟ್ಟವಾಗಿತ್ತು. ಹಾಗಾಗಿ ಬೆಳಕು ಭೂಮಿಯನ್ನ ಮುಟ್ಟುತ್ತಾ ಇರಲಿಲ್ಲ. (ಆದಿಕಾಂಡ 1:2) ಒಂದನೇ ದಿನದಲ್ಲಿ ಬೆಳಕು ಭೂಮಿ ಮೇಲೆ ಬೀಳ್ತಾ ಇದ್ರೂ ಅದು ಎಲ್ಲಿಂದ ಬರ್ತಾ ಇದೆ ಅಂತ ಗೊತ್ತಾಗ್ತಾ ಇರಲಿಲ್ಲ. 4 ನೇ ದಿನದಲ್ಲಿ ವಾತಾವರಣ ಸರಿ ಆಗಿರಬೇಕು. ಹೀಗೆ ಭೂಮಿಯಿಂದ ನೋಡೋ ಒಬ್ಬ ವ್ಯಕ್ತಿಗೆ ಬೈಬಲ್‌ ಹೇಳೋ ಪ್ರಕಾರ ಸೂರ್ಯ, ಚಂದ್ರ, ನಕ್ಷತ್ರಗಳ ಬೆಳಕು ‘ಭೂಮಿ ಮೇಲೆ ಬೀಳೋದು’ ಸ್ಪಷ್ಟವಾಗಿ ಕಾಣಿಸ್ತಿತ್ತು.—ಆದಿಕಾಂಡ 1:17.

 ಬೈಬಲ್‌ ಪ್ರಕಾರ ಭೂಮಿಯ ವಯಸ್ಸೆಷ್ಟು?

 ಬೈಬಲ್‌ ಭೂಮಿಗೆಷ್ಟು ವರ್ಷ ಆಯ್ತು ಅಂತ ಹೇಳಲ್ಲ. ಭೂಮಿ ಸೇರಿಸಿ ಇಡೀ ವಿಶ್ವಕ್ಕೆ ಒಂದು ಆರಂಭ ಇದೆ ಅಂತ ಆದಿಕಾಂಡ 1:1 ಹೇಳುತ್ತೆ ಅಷ್ಟೆ. ವೈಜ್ಞಾನಿಕ ತತ್ವಗಳನ್ನ, ಭೂಮಿಗೆ ಇಷ್ಟು ವಯಸ್ಸಾಯ್ತು ಅಂತ ವಿಜ್ಞಾನಿಗಳು ಹೇಳೋದನ್ನ ಬೈಬಲ್‌ ತಪ್ಪು ಅಂತ ಹೇಳಲ್ಲ.