ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜಗತ್ತಿನಲ್ಲೇ ಅತ್ಯಂತ ವ್ಯಾಪಕವಾಗಿ ವಿತರಿಸಲ್ಪಟ್ಟಿರುವ ಗ್ರಂಥ

ಜಗತ್ತಿನಲ್ಲೇ ಅತ್ಯಂತ ವ್ಯಾಪಕವಾಗಿ ವಿತರಿಸಲ್ಪಟ್ಟಿರುವ ಗ್ರಂಥ

ಜಗತ್ತಿನಲ್ಲೇ ಅತ್ಯಂತ ವ್ಯಾಪಕವಾಗಿ ವಿತರಿಸಲ್ಪಟ್ಟಿರುವ ಗ್ರಂಥ

“ಬೈಬಲು ಇತಿಹಾಸದಲ್ಲಿಯೇ ಅತ್ಯಂತ ವ್ಯಾಪಕವಾಗಿ ಓದಲ್ಪಟ್ಟಿರುವ ಗ್ರಂಥವಾಗಿದೆ. . . . ಬೇರೆ ಯಾವುದೇ ಗ್ರಂಥಕ್ಕಿಂತಲೂ ಬೈಬಲಿನ ಪ್ರತಿಗಳು ಹೆಚ್ಚು ವಿತರಿಸಲ್ಪಟ್ಟಿವೆ. ಬೇರೆ ಯಾವ ಗ್ರಂಥಕ್ಕಿಂತಲೂ ಹೆಚ್ಚು ಭಾಷೆಗಳಲ್ಲೂ ಬೈಬಲು ಭಾಷಾಂತರಿಸಲ್ಪಟ್ಟಿದೆ.”“ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲೊಪೀಡಿಯ.”1

ಕೆಲವು ವಿಧಗಳಲ್ಲಿ, ಹೆಚ್ಚಿನ ಗ್ರಂಥಗಳು ಜನರಂತಿವೆ. ಅವು ಅಸ್ತಿತ್ವಕ್ಕೆ ಬಂದು ಜನಪ್ರಿಯತೆಯಲ್ಲಿ ಬೆಳೆಯಬಹುದು, ಮತ್ತು—ಅಲ್ಪಸಂಖ್ಯೆಯ ಶ್ರೇಷ್ಠ ಸಾಹಿತ್ಯಗಳನ್ನು ಬಿಟ್ಟರೆ—ಹಳತಾಗಿ ಗತಿಸಿಹೋಗುತ್ತವೆ. ಗ್ರಂಥಾಲಯಗಳು ಲುಪ್ತವಾಗಿ ಹೋಗಿರುವ, ಓದಲ್ಪಡದಿರುವ ಮತ್ತು ಕಾರ್ಯತಃ ಸತ್ತಿರುವ ಅಸಂಖ್ಯಾತ ಪುಸ್ತಕಗಳಿಗೆ ಸಮಾಧಿಸ್ಥಳಗಳಾಗಿವೆ.

ಆದರೆ ಬೈಬಲು, ಶ್ರೇಷ್ಠ ಕೃತಿಗಳ ಮಧ್ಯೆಯೂ ಅಸಾಧಾರಣವಾಗಿದೆ. ಅದರ ಲಿಖಿತಾರಂಭಗಳು 3,500 ವರ್ಷಗಳಷ್ಟು ಹಿಂದೆ ಹೋಗುವುದಾದರೂ, ಅದು ಇನ್ನೂ ಜೀವಂತವಾಗಿದೆ. ಅದು ಭೂಮಿಯ ಮೇಲೆ ಅತ್ಯಂತ ವ್ಯಾಪಕವಾಗಿ ಪ್ರಸಾರವಾಗಿರುವ ಗ್ರಂಥವಾಗಿದೆ. * ಪ್ರತಿ ವರ್ಷ, ಇಡೀ ಬೈಬಲಿನ ಅಥವಾ ಅದರ ಭಾಗಗಳ ಸುಮಾರು ಆರು ಕೋಟಿ ಪ್ರತಿಗಳು ವಿತರಿಸಲ್ಪಡುತ್ತವೆ. ಚಲಿಸುವ ಅಚ್ಚುಮೊಳೆಗಳಿಂದ ಮುದ್ರಿಸಲ್ಪಟ್ಟ ಪ್ರಥಮ ಮುದ್ರಣವು ಸುಮಾರು 1455ರಲ್ಲಿ ಜರ್ಮನ್‌ ಅನ್ವೇಷಕರಾದ ಯೋಹಾನಸ್‌ ಗೂಟನ್‌ಬರ್ಗ್‌ ಅವರ ಮುದ್ರಣಾಲಯದಿಂದ ಹೊರಬಂತು. ಅಂದಿನಿಂದ ನಾನೂರು ಕೋಟಿ ಬೈಬಲುಗಳು (ಪೂರ್ತಿ ಅಥವಾ ಆಂಶಿಕವಾಗಿ) ಮುದ್ರಿಸಲ್ಪಟ್ಟಿವೆ ಎಂದು ಅಂದಾಜುಮಾಡಲ್ಪಟ್ಟಿದೆ. ಇನ್ನಾವ—ಧಾರ್ಮಿಕ ಅಥವಾ ಇತರ—ಪುಸ್ತಕವೂ ಈ ಸಂಖ್ಯೆಯನ್ನು ಸಮೀಪಿಸುವುದೂ ಇಲ್ಲ.

ಬೈಬಲು, ಇತಿಹಾಸದಲ್ಲೇ ಅತ್ಯಂತ ವ್ಯಾಪಕವಾಗಿ ಭಾಷಾಂತರಿಸಲ್ಪಟ್ಟಿರುವ ಗ್ರಂಥವೂ ಆಗಿದೆ. ಪೂರ್ತಿ ಬೈಬಲು ಅಥವಾ ಅದರ ಭಾಗಗಳು 2,100ಕ್ಕಿಂತಲೂ ಹೆಚ್ಚು ಭಾಷೆಗಳು ಅಥವಾ ಉಪಭಾಷೆಗಳಲ್ಲಿ ಭಾಷಾಂತರಿಸಲ್ಪಟ್ಟಿವೆ. * ಮಾನವ ಕುಟುಂಬದ 90 ಪ್ರತಿಶತಕ್ಕಿಂತಲೂ ಹೆಚ್ಚು ಜನರಿಗೆ, ತಮ್ಮ ಸ್ವಂತ ಭಾಷೆಗಳಲ್ಲಿ ಬೈಬಲಿನ ಒಂದು ಭಾಗವನ್ನಾದರೂ ಓದುವ ಅವಕಾಶವಿದೆ.2 ಹೀಗೆ ಈ ಗ್ರಂಥವು ರಾಷ್ಟ್ರೀಯ ಮೇರೆಗಳನ್ನು ದಾಟಿ, ಜಾತೀಯ ಮತ್ತು ಕುಲಸಂಬಂಧವಾದ ಅಡ್ಡಗಟ್ಟುಗಳನ್ನು ಮೀರಿದೆ.

ಸ್ವತಃ ಸಂಖ್ಯಾಸಂಗ್ರಹಣಗಳೇ ಬೈಬಲನ್ನು ಪರೀಕ್ಷಿಸಲು ನಿಮ್ಮನ್ನು ನಿರ್ಬಂಧಪಡಿಸುವ ಕಾರಣವನ್ನು ಕೊಡದಿರಬಹುದು. ಹಾಗಿದ್ದರೂ, ಪ್ರಸಾರ ಮತ್ತು ಭಾಷಾಂತರದ ಅಂಕಿ ಸಂಖ್ಯೆಗಳು ಪರಿಣಾಮಕಾರಕವಾಗಿದ್ದು, ಬೈಬಲಿನ ಸಾರ್ವತ್ರಿಕ ಆಕರ್ಷಣೆಗೆ ಸಾಕ್ಷಿನೀಡುತ್ತವೆ. ಮಾನವ ಇತಿಹಾಸದಲ್ಲೆಲ್ಲ ಅತ್ಯಂತ ಜನಪ್ರಿಯವೂ ಅತ್ಯಂತ ವ್ಯಾಪಕವಾಗಿ ಭಾಷಾಂತರಿಸಲ್ಪಟ್ಟದ್ದೂ ಆಗಿರುವ ಗ್ರಂಥವು ನಿಮ್ಮ ಪರಿಗಣನೆಗೆ ಅರ್ಹವಾದದ್ದಾಗಿದೆ ನಿಶ್ಚಯ.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 4 ಬೈಬಲಲ್ಲದೆ ಅತಿ ವ್ಯಾಪಕವಾಗಿ ವಿತರಿಸಲ್ಪಟ್ಟಿರುವ ಇನ್ನೊಂದು ಪುಸ್ತಕವು, ಕೆಂಪು ಆವರಣದ ಪುಸ್ತಿಕೆಯಾದ ಮಾವುಟ್ಸಟುಂಗ್‌ ಅವರ ಕೃತಿಗಳಿಂದ ತೆಗೆದ ಉಲ್ಲೇಖಗಳು (ಇಂಗ್ಲಿಷ್‌) ಎಂದು ಎಣಿಸಲಾಗುತ್ತದೆ. ಇದರ 80 ಕೋಟಿ ಪ್ರತಿಗಳು ಮಾರಲ್ಪಟ್ಟಿವೆ ಅಥವಾ ವಿತರಿಸಲ್ಪಟ್ಟಿವೆ ಎಂದು ಅಂದಾಜುಮಾಡಲ್ಪಟ್ಟಿದೆ.

^ ಪ್ಯಾರ. 5 ಭಾಷಾ ಸಂಖ್ಯೆಗಳ ಕುರಿತ ಸಂಖ್ಯಾಸಂಗ್ರಹಣಗಳು ಯುನೈಟೆಡ್‌ ಬೈಬಲ್‌ ಸೊಸೈಟೀಸ್‌ ಪ್ರಕಾಶಿತ ಅಂಕಿ ಸಂಖ್ಯೆಗಳ ಮೇಲೆ ಆಧಾರಿಸಿವೆ.

[ಪುಟ 7 ರಲ್ಲಿರುವ ಚಿತ್ರ]

ಲ್ಯಾಟಿನ್‌ ಭಾಷೆಯಲ್ಲಿ ಗೂಟನ್‌ಬರ್ಗ್‌ ಬೈಬಲ್‌, ಚಲಿಸುವ ಅಚ್ಚುಮೊಳೆಗಳಲ್ಲಿ ಮುದ್ರಿಸಲ್ಪಟ್ಟ ಪ್ರಥಮ ಸಂಪೂರ್ಣ ಗ್ರಂಥ