ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಈ ಗ್ರಂಥವು ಹೇಗೆ ಪಾರಾಗಿ ಉಳಿಯಿತು?

ಈ ಗ್ರಂಥವು ಹೇಗೆ ಪಾರಾಗಿ ಉಳಿಯಿತು?

ಈ ಗ್ರಂಥವು ಹೇಗೆ ಪಾರಾಗಿ ಉಳಿಯಿತು?

ಪುರಾತನ ಬರವಣಿಗೆಗಳಿಗೆ ಬೆಂಕಿ, ತೇವಾಂಶ, ಬೂಷ್ಟುಗಳೆಂಬ ಸ್ವಾಭಾವಿಕ ವೈರಿಗಳಿದ್ದವು. ಅಂತಹ ಅಪಾಯಗಳಿಂದ ಬೈಬಲ್‌ ರಕ್ಷಿತವಾಗಿರಲಿಲ್ಲ. ಆದರೆ ಸಮಯದ ಹಾವಳಿಯಿಂದ ಪಾರಾಗಿ ಉಳಿದು, ಅದು ಜಗತ್ತಿನ ಅತ್ಯಂತ ಸುಗಮ್ಯವಾದ ಗ್ರಂಥವಾಗಿ ಪರಿಣಮಿಸಿದ ದಾಖಲೆಯು, ಪುರಾತನ ಬರವಣಿಗೆಗಳ ಮಧ್ಯೆ ಗಮನ ಸೆಳೆಯುವಂತಹದ್ದಾಗಿದೆ. ಆ ಇತಿಹಾಸವು ಬಾಹ್ಯ ಆಸಕ್ತಿಗಿಂತ ಹೆಚ್ಚಿನದ್ದಕ್ಕೆ ಅರ್ಹವಾಗಿದೆ.

ಬೈಬಲಿನ ಲೇಖಕರು ತಮ್ಮ ಮಾತುಗಳನ್ನು ಶಿಲೆಗಳ ಮೇಲೆ ಕೆತ್ತಲಿಲ್ಲ; ಇಲ್ಲವೇ ಅವುಗಳನ್ನು ಬಾಳಿಕೆ ಬರುವ ಜೇಡಿಮಣ್ಣಿನ ಫಲಕಗಳ ಮೇಲೆಯೂ ಕೆತ್ತಲಿಲ್ಲ. ಅವರು ತಮ್ಮ ಮಾತುಗಳನ್ನು ನಶ್ವರ ವಸ್ತುಗಳ ಮೇಲೆ—ಪಪೈರಸ್‌ (ಅದೇ ಹೆಸರಿನ ಈಜಿಪ್ಟಿನ ಸಸ್ಯದಿಂದ ಮಾಡಿದ್ದು) ಮತ್ತು ಚರ್ಮಕಾಗದ (ಪ್ರಾಣಿಗಳ ಚರ್ಮದಿಂದ ಮಾಡಿದ್ದು)ದ ಮೇಲೆ ಬರೆದಿಟ್ಟರು.

ಆ ಆರಂಭದ ಬರವಣಿಗೆಗಳಿಗೇನಾಯಿತು? ಅವುಗಳಲ್ಲಿ ಹೆಚ್ಚಿನವು, ಪ್ರಾಯಶಃ ಬಹಳ ಹಿಂದೆಯೇ ಪುರಾತನ ಇಸ್ರಾಯೇಲಿನಲ್ಲಿ ಶಿಥಿಲಗೊಂಡು ನಾಶವಾದವು. ವಿದ್ವಾಂಸ ಆಸ್ಕಾರ್‌ ಪಾರೆಟ್‌ ವಿವರಿಸುವುದು: “ಬರವಣಿಗೆಯ ಈ ಎರಡು ಸಾಧನಗಳು [ಪಪೈರಸ್‌ ಹಾಗೂ ಚರ್ಮ], ತೇವ, ಬೂಷ್ಟು ಮತ್ತು ವಿವಿಧ ಕೀಟಗಳಿಂದ ಸಮಾನವಾಗಿ ಅಪಾಯಕ್ಕೊಳಗಾಗುತ್ತವೆ. ಕಾಗದ ಮತ್ತು ಗಡುಸಾದ ಚರ್ಮ ಸಹ ತೆರೆದ ಸ್ಥಳದಲ್ಲಿ ಅಥವಾ ತೇವವಿರುವ ಕೋಣೆಯಲ್ಲಿ ಎಷ್ಟು ಸುಲಭವಾಗಿ ಕೆಡುತ್ತದೆಂಬುದು ದೈನಂದಿನ ಅನುಭವದಿಂದ ನಮಗೆ ತಿಳಿದಿದೆ.”1

ಮೂಲಪ್ರತಿಗಳು ಈಗ ಇಲ್ಲದಿರುವುದಾದರೆ, ಬೈಬಲ್‌ ಲೇಖಕರ ಮಾತುಗಳು ನಮ್ಮ ದಿನಗಳ ವರೆಗೆ ಉಳಿದಿರುವುದು ಹೇಗೆ?

ಬಹು ಜಾಗೃತ ನಕಲುಗಾರರಿಂದ ಜೋಪಾನ ಮಾಡಲ್ಪಟ್ಟದ್ದು

ಮೂಲಪ್ರತಿಗಳು ಬರೆಯಲ್ಪಟ್ಟಾದ ಸ್ವಲ್ಪದರಲ್ಲಿಯೇ, ಕೈಬರಹದ ಪ್ರತಿಗಳ ಉತ್ಪನ್ನ ಆರಂಭಗೊಂಡಿತು. ಪುರಾತನ ಇಸ್ರಾಯೇಲಿನಲ್ಲಿ ಶಾಸ್ತ್ರಗಳ ನಕಲುಮಾಡುವಿಕೆಯು ಕಾರ್ಯತಃ ಒಂದು ವೃತ್ತಿಯಾಗಿ ಪರಿಣಮಿಸಿತು. (ಎಜ್ರ 7:6; ಕೀರ್ತನೆ 45:1) ಆದರೆ ಈ ಪ್ರತಿಗಳು ಸಹ ನಶ್ವರ ಪದಾರ್ಥಗಳ ಮೇಲೆ ಬರೆಯಲ್ಪಟ್ಟವು. ಕೊನೆಗೆ ಇವನ್ನು ಬೇರೆ ಕೈಬರಹದ ಪ್ರತಿಗಳಿಂದ ಸ್ಥಾನಭರ್ತಿಮಾಡಬೇಕಾಯಿತು. ಮೂಲಪ್ರತಿಗಳು ಇಲ್ಲದೆ ಹೋದಾಗ, ಈ ಪ್ರತಿಗಳು ಭಾವೀ ಹಸ್ತಪ್ರತಿಗಳಿಗೆ ಆಧಾರವಾಗಿ ಪರಿಣಮಿಸಿದವು. ಪ್ರತಿಗಳನ್ನು ನಕಲು ಮಾಡುವುದು ಅನೇಕ ಶತಮಾನಗಳ ತನಕ ಮುಂದುವರಿದ ಕಾರ್ಯವಿಧಾನವಾಗಿತ್ತು. ಶತಮಾನಗಳು ಗತಿಸಿದಂತೆ, ನಕಲುಗಾರರ ತಪ್ಪುಗಳು ಬೈಬಲಿನ ಗ್ರಂಥಪಾಠವನ್ನು ಸಂಪೂರ್ಣವಾಗಿ ಬದಲಾಯಿಸಿದವೊ? ಸಾಕ್ಷ್ಯವು ಇಲ್ಲವೆನ್ನುತ್ತದೆ.

ಆ ವೃತ್ತಿಪರ ನಕಲುಗಾರರು ತೀರ ನಿವೇದಿತರಾಗಿದ್ದರು. ಅವರು ನಕಲು ಮಾಡಿದ ಮಾತುಗಳ ಕಡೆಗೆ ಅವರಿಗೆ ಗಾಢವಾದ ಪೂಜ್ಯಭಾವವಿತ್ತು. ಅವರು ಅತಿ ಜಾಗೃತರೂ ಆಗಿದ್ದರು. “ನಕಲುಗಾರ” ಎಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರು ಪದವು ಸಾಫರ್‌. ಇದಕ್ಕೆ ಎಣಿಕೆ ಮಾಡುವ ಮತ್ತು ದಾಖಲೆಮಾಡುವ ಅರ್ಥವಿದೆ. ಈ ನಕಲುಗಾರರ ನಿಷ್ಕೃಷ್ಟತೆಯನ್ನು ದೃಷ್ಟಾಂತಿಸಲು, ಮ್ಯಾಸರೀಟರನ್ನು ತೆಗೆದುಕೊಳ್ಳಿರಿ. * ಅವರ ಕುರಿತಾಗಿ ಟಾಮಸ್‌ ಹಾರ್ಟ್‌ವೆಲ್‌ ಹಾರ್ನ್‌ ವಿವರಿಸುವುದು: “ಅವರು . . . ಪೆಂಟಟ್ಯೂಕ್‌ನ [ಬೈಬಲಿನ ಮೊದಲನೆಯ ಐದು ಪುಸ್ತಕಗಳು] ಪ್ರತಿಯೊಂದು ಪುಸ್ತಕದ ಮಧ್ಯ ವಾಕ್ಯಾಂಶದ ಮಧ್ಯ ಅಕ್ಷರವು ಯಾವುದೆಂದು ಮತ್ತು [ಹೀಬ್ರು] ಅಕ್ಷರಮಾಲೆಯ ಪ್ರತಿ ಅಕ್ಷರವು ಹೀಬ್ರು ಶಾಸ್ತ್ರಗಳಲ್ಲೆಲ್ಲ ಎಷ್ಟು ಬಾರಿ ಬರುತ್ತದೆಂಬುದನ್ನು ಗೊತ್ತುಮಾಡಿದರು.”3

ಹೀಗೆ, ಕುಶಲ ನಕಲುಗಾರರು ಹಲವಾರು ಅಡ್ಡಪರೀಕ್ಷೆಯ ವಿಧಾನಗಳನ್ನು ಉಪಯೋಗಿಸಿದರು. ಬೈಬಲ್‌ ಗ್ರಂಥಪಾಠದಿಂದ ಒಂದೇ ಒಂದು ಅಕ್ಷರವೂ ಬಿಟ್ಟುಬಿಡಲ್ಪಡದಂತೆ, ಅವರು ನಕಲುಮಾಡಿದ ಪದಗಳನ್ನು ಮಾತ್ರವಲ್ಲ ಅಕ್ಷರಗಳನ್ನೂ ಲೆಕ್ಕಿಸುವಷ್ಟು ಜಾಗ್ರತೆವಹಿಸಿದರು. ಇದರಲ್ಲಿ ಸೇರಿರುವ ಶ್ರಮಭರಿತ ಕಾಳಜಿಯನ್ನು ಪರಿಗಣಿಸಿರಿ: ಅವರು ಹೀಬ್ರು ಶಾಸ್ತ್ರಗಳಲ್ಲಿರುವ 8,15,140 ಅಕ್ಷರಗಳನ್ನು ಒಂದೊಂದಾಗಿ ಗಮನಿಸುತ್ತಿದ್ದರಂತೆ!4 ಇಂತಹ ಶ್ರದ್ಧಾಪೂರ್ವಕ ಪ್ರಯತ್ನವು ನಿಷ್ಕೃಷ್ಟತೆಯ ಉನ್ನತ ಮಟ್ಟವನ್ನು ಖಚಿತಪಡಿಸಿತು.

ಆದರೂ, ನಕಲುಗಾರರು ತಪ್ಪುಮಾಡುವ ಅವಕಾಶವಿಲ್ಲದವರಾಗಿರಲಿಲ್ಲ. ಶತಮಾನಗಳಲ್ಲಿ ಪುನರ್‌ಪ್ರತಿ ಮಾಡಿದುದರ ಎದುರಿನಲ್ಲಿಯೂ, ಬೈಬಲ್‌ ಗ್ರಂಥಪಾಠವು ಭರವಸಾರ್ಹ ರೂಪದಲ್ಲಿ ಪಾರಾಗಿ ಉಳಿದಿದೆ ಎಂಬುದಕ್ಕೆ ಯಾವ ಸಾಕ್ಷ್ಯವಾದರೂ ಇದೆಯೊ?

ಭರವಸೆಗೆ ಬಲವಾದ ಆಧಾರ

ನಮ್ಮ ದಿನಗಳ ವರೆಗೂ ಬೈಬಲು ನಿಷ್ಕೃಷ್ಟವಾಗಿ ರವಾನಿಸಲ್ಪಟ್ಟಿದೆ ಎಂದು ನಂಬಲು ಸಕಾರಣವಿದೆ. ಈ ಸಾಕ್ಷ್ಯದಲ್ಲಿ ಈಗ ಇರುವ ಹಸ್ತಪ್ರತಿಗಳು—ಇಡೀ ಹೀಬ್ರು ಶಾಸ್ತ್ರದ ಅಥವಾ ಹೀಬ್ರು ಶಾಸ್ತ್ರದ ಭಾಗಗಳ ಸುಮಾರು 6,000 ಹಸ್ತಪ್ರತಿಗಳು ಹಾಗೂ ಗ್ರೀಕ್‌ನಲ್ಲಿ ಕ್ರೈಸ್ತ ಶಾಸ್ತ್ರಗಳ ಸುಮಾರು 5,000 ಹಸ್ತಪ್ರತಿಗಳೆಂದೂ ಅಂದಾಜು ಮಾಡಲ್ಪಟ್ಟಿದೆ—ಸೇರಿವೆ. ಇವುಗಳಲ್ಲಿ ಒಂದು, ಶಾಸ್ತ್ರಗಳ ನಕಲನ್ನು ಎಷ್ಟು ನಿಷ್ಕೃಷ್ಟತೆಯಿಂದ ಮಾಡಲಾಗುತ್ತಿತ್ತೆಂಬುದನ್ನು ಆದರ್ಶರೂಪವಾಗಿ ತೋರಿಸುವ, 1947ರಲ್ಲಿ ಕಂಡುಹಿಡಿಯಲ್ಪಟ್ಟ ಒಂದು ಹೀಬ್ರು ಶಾಸ್ತ್ರ ಹಸ್ತಪ್ರತಿಯಿದೆ. ಅಂದಿನಿಂದ ಅದನ್ನು “ಆಧುನಿಕ ದಿನಗಳ ಅತ್ಯಂತ ಮಹಾ ಹಸ್ತಪ್ರತಿ ಕಂಡುಹಿಡಿತ”ವೆಂದು ಕರೆಯಲಾಗಿದೆ.5

ಆ ವರ್ಷದಾರಂಭದಲ್ಲಿ, ಒಬ್ಬ ಯುವ ಬೆಡವನ್‌ ಕುರುಬನು ತನ್ನ ಮಂದೆಯನ್ನು ಮೇಯಿಸುತ್ತಿದ್ದಾಗ ಮೃತ ಸಮುದ್ರದ ಬಳಿ ಒಂದು ಗುಹೆಯನ್ನು ಕಂಡುಹಿಡಿದನು. ಅದರೊಳಗೆ ಅವನು ಹಲವಾರು ಮಣ್ಣಿನ ಜಾಡಿಗಳನ್ನು ಕಂಡುಕೊಂಡನು, ಅವುಗಳಲ್ಲಿ ಹೆಚ್ಚಿನವು ಖಾಲಿಯಾಗಿದ್ದವು. ಆದರೂ, ಭದ್ರವಾಗಿ ಮುಚ್ಚಿದ್ದ ಜಾಡಿಯೊಂದರಲ್ಲಿ, ನಾರುಬಟ್ಟೆಯಲ್ಲಿ ಜಾಗ್ರತೆಯಿಂದ ಸುತ್ತಿದ್ದ ಮತ್ತು ಬೈಬಲಿನ ಇಡೀ ಯೆಶಾಯ ಪುಸ್ತಕವಿದ್ದ ಒಂದು ಚರ್ಮದ ಸುರುಳಿಯು ಅವನಿಗೆ ಸಿಕ್ಕಿತು. ಸುರಕ್ಷಿತವಾಗಿತ್ತಾದರೂ ಉಪಯೋಗದಿಂದ ಸವೆದಿದ್ದ ಈ ಸುರುಳಿಯು, ದುರಸ್ತು ಮಾಡಲ್ಪಟ್ಟಿದ್ದ ಸೂಚನೆಗಳನ್ನು ತೋರಿಸಿತು. ತಾನು ಆಗ ಕೈಯಲ್ಲಿ ಹಿಡಿದಿದ್ದ ಆ ಪುರಾತನ ಸುರುಳಿಯು ಕ್ರಮೇಣ ಜಗದ್ವ್ಯಾಪಕ ಗಮನವನ್ನು ಸೆಳೆಯಲಿತ್ತೆಂಬುದರ ಕುರಿತು ಆ ಯುವ ಕುರುಬನಿಗೇನೂ ತಿಳಿದಿರಲಿಲ್ಲ.

ಈ ನಿರ್ದಿಷ್ಟ ಹಸ್ತಪ್ರತಿಯ ವಿಷಯದಲ್ಲಿ ಅಷ್ಟು ಗಮನಾರ್ಹವಾದದ್ದೇನಾಗಿತ್ತು? 1947ರಲ್ಲಿ ದೊರೆಯುತ್ತಿದ್ದ ಅತಿ ಹಳೆಯ ಹೀಬ್ರು ಹಸ್ತಪ್ರತಿಗಳು ಸುಮಾರು ಸಾ.ಶ. ಹತ್ತನೆಯ ಶತಮಾನಾವಧಿಯದ್ದಾಗಿದ್ದವು. ಆದರೆ ಈ ಸುರುಳಿ ಸಾ.ಶ.ಪೂ. ಎರಡನೆಯ ಶತಮಾನದ್ದು *—ಒಂದು ಸಾವಿರಕ್ಕೂ ಹೆಚ್ಚು ವರ್ಷಗಳಷ್ಟು ಹಿಂದಿನದ್ದಾಗಿತ್ತು. * ಎಷ್ಟೋ ಸಮಯದ ಬಳಿಕ ತಯಾರಿಸಿದ ಹಸ್ತಪ್ರತಿಗಳಿಗೆ ಈ ಸುರುಳಿಯು ಹೇಗೆ ಹೋಲುತ್ತಿತ್ತೆಂಬುದನ್ನು ಕಂಡುಹಿಡಿಯಲು ವಿದ್ವಾಂಸರು ತೀರ ಆಸಕ್ತರಾಗಿದ್ದರು.

ಒಂದು ಅಧ್ಯಯನದಲ್ಲಿ, ವಿದ್ವಾಂಸರು ಮೃತ ಸಮುದ್ರ ಸುರುಳಿಯಲ್ಲಿರುವ ಯೆಶಾಯ 53ನೆಯ ಅಧ್ಯಾಯವನ್ನು ಒಂದು ಸಾವಿರ ವರ್ಷಗಳ ಬಳಿಕ ತಯಾರಿಸಿದ ಮ್ಯಾಸರೆಟಿಕ್‌ ಗ್ರಂಥಪಾಠದೊಂದಿಗೆ ಹೋಲಿಸಿದರು. ಈ ಅಧ್ಯಯನದ ಫಲಿತಾಂಶಗಳನ್ನು ಬೈಬಲಿಗೆ ಸಾಮಾನ್ಯವಾದೊಂದು ಪ್ರಸ್ತಾವನೆ (ಇಂಗ್ಲಿಷ್‌) ಎಂಬ ಪುಸ್ತಕವು, ಆ ಅಧ್ಯಯನದ ಫಲಿತಾಂಶಗಳನ್ನು ಹೀಗೆ ವಿವರಿಸುತ್ತದೆ: “ಯೆಶಾಯ 53ರಲ್ಲಿರುವ 166 ಪದಗಳಲ್ಲಿ, ಸಂದೇಹಾಸ್ಪದವಾಗಿರುವ ಅಕ್ಷರಗಳು ಕೇವಲ ಹದಿನೇಳು. ಇವುಗಳಲ್ಲಿ ಹತ್ತು ಅಕ್ಷರಗಳು, ಕೇವಲ ಕಾಗುಣಿತದ ವಿಷಯವಾಗಿದ್ದು, ಅವು ಅರ್ಥದ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ. ಇನ್ನು ನಾಲ್ಕು ಅಕ್ಷರಗಳು ಅವ್ಯಯಗಳಂತಹ ಸಾಹಿತ್ಯಾತ್ಮಕ ಶೈಲಿಯಲ್ಲಿ ಅಲ್ಪ ಬದಲಾವಣೆಗಳಾಗಿವೆ. ಉಳಿದ ಮೂರು ಅಕ್ಷರಗಳು 11ನೆಯ ವಚನದಲ್ಲಿ ಕೂಡಿಸಿರುವ ‘ಬೆಳಕು’ ಎಂಬ ಪದದಲ್ಲಿ ಘಟಿತವಾಗಿದ್ದು, ಅರ್ಥವನ್ನು ಮಹತ್ತಾಗಿ ಪ್ರಭಾವಿಸುವುದಿಲ್ಲ. . . . ಹೀಗೆ, 166 ಪದಗಳಿರುವ ಒಂದು ಅಧ್ಯಾಯದಲ್ಲಿ, ಒಂದು ಸಾವಿರ ವರುಷಗಳ ರವಾನೆಯ ಬಳಿಕ (ಮೂರು ಅಕ್ಷರಗಳ) ಒಂದು ಪದವು ಮಾತ್ರ ಸಂದೇಹಾಸ್ಪದವಾಗಿದೆ. ಮತ್ತು ಈ ಪದವು ಆ ಭಾಗದ ಅರ್ಥವನ್ನು ಗಮನಾರ್ಹವಾಗಿ ಬದಲಾಯಿಸುವುದಿಲ್ಲ.”7

ಈ ಸುರುಳಿಗಳ ಒಳವಿಷಯವನ್ನು ವಿಶ್ಲೇಷಿಸಿ, ಇವುಗಳೊಂದಿಗೆ ಅನೇಕ ವರ್ಷಕಾಲ ಕೆಲಸ ಮಾಡಿದ ಪ್ರೊಫೆಸರ್‌ ಮಿಲರ್‌ ಬರೋಸ್‌, ಅದೇ ರೀತಿಯ ತೀರ್ಮಾನಕ್ಕೆ ಬಂದರು: “ಯೆಶಾಯ ಸುರುಳಿ ಮತ್ತು ಮ್ಯಾಸರೆಟಿಕ್‌ ಗ್ರಂಥಪಾಠಗಳ ಮಧ್ಯೆ ಇರುವ . . . ವ್ಯತ್ಯಾಸಗಳಲ್ಲಿ ಅನೇಕ ವ್ಯತ್ಯಾಸಗಳನ್ನು, ನಕಲುಮಾಡುವಾಗ ಮಾಡಿದ ತಪ್ಪುಗಳೆಂದು ವಿವರಣೆ ನೀಡಬಹುದು. ಇವನ್ನು ಬಿಟ್ಟರೆ, ಮಧ್ಯಯುಗಗಳ ಹಸ್ತಪ್ರತಿಗಳಲ್ಲಿ ಕಂಡುಬರುವ ಗ್ರಂಥಪಾಠದೊಂದಿಗೆ ಸಂಪೂರ್ಣವಾಗಿ ಗಮನಾರ್ಹವಾದ ಸಹಮತವಿದೆ. ಅಷ್ಟು ಹಳೆಯದಾಗಿರುವ ಹಸ್ತಪ್ರತಿಯಲ್ಲಿ ಅಂತಹ ಒಪ್ಪಿಗೆಯು, ಸಾಂಪ್ರದಾಯಿಕ ಗ್ರಂಥಪಾಠದ ಸಾಮಾನ್ಯ ನಿಷ್ಕೃಷ್ಟತೆಯ ಕುರಿತು ಪುನರಾಶ್ವಾಸನೀಯ ಸಾಕ್ಷ್ಯವನ್ನು ಕೊಡುತ್ತದೆ.”8

ಕ್ರೈಸ್ತ ಗ್ರೀಕ್‌ ಶಾಸ್ತ್ರಗಳ ನಕಲು ಪ್ರತಿಗಳನ್ನು ಮಾಡುವುದರ ಕುರಿತೂ “ಪುನರಾಶ್ವಾಸನೀಯ ಸಾಕ್ಷ್ಯ”ವನ್ನು ಕೊಡಸಾಧ್ಯವಿದೆ. ಉದಾಹರಣೆಗೆ, ಸಾ.ಶ. ನಾಲ್ಕನೆಯ ಶತಮಾನದ್ದೆಂದು ಹೇಳಲಾದ ಕೋಡೆಕ್ಸ್‌ ಸೈನಾಯ್ಟಿಕಸ್‌ ಎಂಬ ಚರ್ಮ ಹಸ್ತಪ್ರತಿಯ 19ನೆಯ ಶತಮಾನದ ಕಂಡುಹಿಡಿತವು, ಶತಮಾನಗಳ ಬಳಿಕ ತಯಾರಿಸಲ್ಪಟ್ಟ ಕ್ರೈಸ್ತ ಗ್ರೀಕ್‌ ಶಾಸ್ತ್ರಗಳ ಹಸ್ತಪ್ರತಿಗಳ ನಿಷ್ಕೃಷ್ಟತೆಯನ್ನು ದೃಢೀಕರಿಸಲು ಸಹಾಯ ಮಾಡಿತು. ಈಜಿಪ್ಟಿನ ಫೇಯೂಮ್‌ ಪ್ರದೇಶದಲ್ಲಿ ಕಂಡುಹಿಡಿಯಲ್ಪಟ್ಟ ಯೋಹಾನನ ಸುವಾರ್ತೆಯ ಪಪೈರಸ್‌ ಅವಶಿಷ್ಟ ಭಾಗದ ಕಾಲನಿರ್ದೇಶವನ್ನು, ಸಾ.ಶ. ಎರಡನೆಯ ಶತಮಾನದ ಪ್ರಥಮ ಭಾಗಕ್ಕೆ, ಅಂದರೆ ಮೂಲಪ್ರತಿಯು ಬರೆಯಲ್ಪಟ್ಟು 50 ವರ್ಷಗಳಿಗೂ ಕಡಮೆ ವರ್ಷಗಳಷ್ಟಕ್ಕೆ ಮಾಡಲಾಗುತ್ತದೆ. ಅದು ಶತಮಾನಗಳ ವರೆಗೆ ಒಣ ಮರಳಿನಲ್ಲಿಡಲ್ಪಟ್ಟಿದ್ದು ರಕ್ಷಿಸಲ್ಪಟ್ಟಿತ್ತು. ಅದರ ಗ್ರಂಥಪಾಠವು ಬಹು ಸಮಯದ ಬಳಿಕ ಕಂಡುಹಿಡಿಯಲ್ಪಟ್ಟ ಹಸ್ತಪ್ರತಿಗಳೊಂದಿಗೆ ಒಮ್ಮತದಲ್ಲಿದೆ.9

ಹೀಗೆ ನಕಲುಗಾರರು ವಾಸ್ತವವಾಗಿ, ಅತಿ ನಿಷ್ಕೃಷ್ಟರಾಗಿದ್ದರೆಂಬುದನ್ನು ಸಾಕ್ಷ್ಯವು ದೃಢೀಕರಿಸುತ್ತದೆ. ಆದರೂ, ಅವರು ತಪ್ಪುಗಳನ್ನು ಮಾಡಿದ್ದು ನಿಶ್ಚಯ. ಯೆಶಾಯನ ಮೃತ ಸಮುದ್ರ ಸುರುಳಿಯನ್ನು ಸೇರಿಸಿ ಯಾವುದೇ ಒಂದು ಹಸ್ತಪ್ರತಿಯೂ ದೋಷರಹಿತವಾಗಿಲ್ಲ. ಹಾಗಿದ್ದರೂ, ವಿದ್ವಾಂಸರು ಮೂಲಪ್ರತಿಯಿಂದಾದ ಅಂತಹ ವ್ಯತ್ಯಾಸಗಳನ್ನು ಕಂಡುಹಿಡಿದು ಸರಿಪಡಿಸಶಕ್ತರಾಗಿದ್ದಾರೆ.

ನಕಲುಗಾರರ ತಪ್ಪುಗಳನ್ನು ಸರಿಪಡಿಸುವುದು

ಒಂದು ದೀರ್ಘ ದಾಖಲೆಯ ಕೈಬರಹದ ಪ್ರತಿಯನ್ನು ಮಾಡಲು ನೂರು ವ್ಯಕ್ತಿಗಳನ್ನು ಕೇಳಿಕೊಳ್ಳಲಾಗಿದೆಯೆಂದು ನೆನಸೋಣ. ನಕಲುಗಾರರಲ್ಲಿ ಕಡಮೆಪಕ್ಷ ಕೆಲವರಾದರೂ ತಪ್ಪುಮಾಡುವರೆಂಬುದು ನಿಸ್ಸಂದೇಹ. ಆದರೂ, ಅವರೆಲ್ಲರೂ ಒಂದೇ ರೀತಿಯ ತಪ್ಪುಗಳನ್ನು ಮಾಡಲಾರರು. ಆ 100 ಪ್ರತಿಗಳೆಲ್ಲವನ್ನು ನೀವು ತೆಗೆದುಕೊಂಡುಹೋಗಿ, ಅವುಗಳನ್ನು ಜಾಗರೂಕತೆಯಿಂದ ಹೋಲಿಸುವುದಾದರೆ ನೀವು ದೋಷಗಳನ್ನು ಬೇರ್ಪಡಿಸಿ, ಮೂಲ ದಾಖಲೆಯ ನಿಖರವಾದ ಮೂಲಪಾಠವನ್ನು—ನೀವು ಅದನ್ನು ನೋಡಿಯೇ ಇಲ್ಲವಾದರೂ—ನಿರ್ಧರಿಸಶಕ್ತರಾಗುವಿರಿ.

ತದ್ರೀತಿಯಲ್ಲಿ, ಬೈಬಲ್‌ ನಕಲುಗಾರರೆಲ್ಲರೂ ಒಂದೇ ರೀತಿಯ ತಪ್ಪುಗಳನ್ನು ಮಾಡಲಿಲ್ಲ. ತುಲನಾತ್ಮಕ ವಿಶ್ಲೇಷಣೆಗಾಗಿ ಈಗ ಅಕ್ಷರಶಃ ಸಾವಿರಾರು ಬೈಬಲ್‌ ಹಸ್ತಪ್ರತಿಗಳು ದೊರೆಯುವುದರಿಂದ, ಮೂಲಪಾಠದ ವಿದ್ವಾಂಸರು ದೋಷಗಳನ್ನು ಬೇರ್ಪಡಿಸಿ, ಮೂಲಗ್ರಂಥಪಾಠವನ್ನು ನಿರ್ಧರಿಸಿ, ಅಗತ್ಯವಿರುವ ತಿದ್ದುವಿಕೆಗಳನ್ನು ದಾಖಲಿಸಲು ಶಕ್ತರಾಗಿದ್ದಾರೆ. ಇಂತಹ ಜಾಗರೂಕತೆಯ ಅಧ್ಯಯನದ ಫಲವಾಗಿ, ಮೂಲಪಾಠದ ವಿದ್ವಾಂಸರು ಮೂಲಭಾಷೆಗಳಲ್ಲಿ ಆದರ್ಶ ಮೂಲಗ್ರಂಥಪಾಠಗಳನ್ನು ತಯಾರಿಸಿದ್ದಾರೆ. ಹೀಬ್ರು ಮತ್ತು ಗ್ರೀಕ್‌ ಗ್ರಂಥಪಾಠಗಳ ಈ ಪರಿಷ್ಕೃತ ಸಂಪುಟಗಳು, ಮೂಲಪದಗಳೆಂದು ಅತಿ ಸಾಮಾನ್ಯವಾಗಿ ಒಪ್ಪಲ್ಪಟ್ಟಿರುವ ಪದಗಳನ್ನು ಆಯ್ದುಕೊಂಡು, ಅನೇಕ ವೇಳೆ ಪಾದಟಿಪ್ಪಣಿಗಳಲ್ಲಿ, ಕೆಲವು ಹಸ್ತಪ್ರತಿಗಳಲ್ಲಿರಬಹುದಾದ ಭಿನ್ನತೆ ಅಥವಾ ಬದಲಿ ವಾಚನಗಳ ಪಟ್ಟಿಮಾಡುತ್ತವೆ. ಬೈಬಲಿನ ಭಾಷಾಂತರಕಾರರು ಬೈಬಲನ್ನು ಆಧುನಿಕ ಭಾಷೆಗಳಿಗೆ ತರ್ಜುಮೆ ಮಾಡಲು ಉಪಯೋಗಿಸುವುದು ಈ ಮೂಲಪಾಠಗಳ ವಿದ್ವಾಂಸರು ತಯಾರಿಸಿದ ಪರಿಷ್ಕೃತ ಆವೃತ್ತಿಗಳನ್ನೇ.

ಹೀಗೆ, ಬೈಬಲಿನ ಆಧುನಿಕ ಭಾಷಾಂತರವೊಂದನ್ನು ನೀವು ಓದುವಾಗ, ಅದು ಯಾವುದರ ಮೇಲೆ ಆಧಾರಿತವಾಗಿದೆಯೋ ಆ ಹೀಬ್ರು ಮತ್ತು ಗ್ರೀಕ್‌ ಗ್ರಂಥಪಾಠಗಳು, ಬೈಬಲಿನ ಮೂಲ ಲೇಖಕರ ಮಾತುಗಳನ್ನೇ ಗಮನಾರ್ಹವಾದ ಸತ್ಯನಿಷ್ಠೆಯಿಂದ ಪ್ರತಿನಿಧಿಸುತ್ತವೆಂದು ಭರವಸೆಯಿಡಲು ಸಾಕಷ್ಟು ಕಾರಣವಿದೆ. * ಬೈಬಲು ಕೈಯಿಂದ ಪುನರ್ನಕಲು ಮಾಡಲ್ಪಟ್ಟು, ಸಾವಿರಾರು ವರ್ಷಗಳ ವರೆಗೆ ಹೇಗೆ ಉಳಿಯಿತು ಎಂಬುದರ ದಾಖಲೆಯು ನಿಜವಾಗಿಯೂ ಆಶ್ಚರ್ಯಕರ. ಬ್ರಿಟಿಷ್‌ ಮ್ಯೂಸಿಯಮ್‌ನ ದೀರ್ಘಕಾಲದ ನಿರ್ವಾಹಕರಾದ ಸರ್‌ ಫ್ರೆಡ್ರಿಕ್‌ ಕೆನ್ಯನ್‌, ಈ ಕಾರಣದಿಂದ ಹೀಗೆ ಹೇಳಶಕ್ತರಾದರು: “ಸಾರಾಂಶದಲ್ಲಿ, ಬೈಬಲಿನ ಗ್ರಂಥಪಾಠವು ನಿಶ್ಚಯವೆಂದು ತೀರ ಬಲವಾಗಿ ಸಮರ್ಥಿಸಬೇಕೆಂದಿರುವುದಿಲ್ಲ. . . . ಜಗತ್ತಿನ ಇನ್ನಾವುದೇ ಪುರಾತನ ಗ್ರಂಥದ ಕುರಿತು ಹೀಗೆ ಹೇಳಸಾಧ್ಯವಿಲ್ಲ.”10

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 8 ಮ್ಯಾಸರೀಟರು (“ಸಂಪ್ರದಾಯ ನಿಪುಣರು” ಎಂದರ್ಥ) ಸಾ.ಶ. ಆರನೆಯ ಮತ್ತು ಹತ್ತನೆಯ ಶತಮಾನಗಳ ಮಧ್ಯೆ ಜೀವಿಸಿದ ಹೀಬ್ರು ಶಾಸ್ತ್ರಗಳ ನಕಲುಗಾರರಾಗಿದ್ದರು. ಅವರು ತಯಾರಿಸಿದ ಹಸ್ತಪ್ರತಿಗಳನ್ನು ಮ್ಯಾಸರೆಟಿಕ್‌ ಗ್ರಂಥಪಾಠಗಳು ಎಂದು ಕರೆಯಲಾಗುತ್ತದೆ.2

^ ಪ್ಯಾರ. 14 ಸಾ.ಶ.ಪೂ. ಎಂದರೆ “ಸಾಮಾನ್ಯ ಶಕಕ್ಕೆ ಪೂರ್ವ.” ಸಾ.ಶ.ವು “ಸಾಮಾನ್ಯ ಶಕ”ವನ್ನು ಸೂಚಿಸುತ್ತದೆ. ಅನೇಕ ವೇಳೆ ಇದನ್ನು “ಪ್ರಭುವಿನ ವರ್ಷದಲ್ಲಿ” ಎಂಬ ಅರ್ಥಕೊಡುವ ಕ್ರಿ.ಶ. (ಎ.ಡಿ., ಆ್ಯನೊ ಡಾಮಿನೈ) ಎಂದೂ ಕರೆಯಲಾಗುತ್ತದೆ.

^ ಪ್ಯಾರ. 14 ಇಮ್ಯಾನ್ಯುವೆಲ್‌ ಟಾವ್‌ ಅವರ ಹೀಬ್ರು ಬೈಬಲಿನ ಗ್ರಂಥಪಾಠೀಯ ಟೀಕೆ (ಇಂಗ್ಲಿಷ್‌) ಹೇಳುವುದು: “ಕಾರ್ಬನ್‌ 14 ಪರೀಕ್ಷೆಯ ಸಹಾಯದಿಂದ, 1QIsaa [ಡೆಡ್‌ ಸೀ ಐಸಾಯ ಸ್ಕ್ರೋಲ್‌] ಈಗ ಸಾಶಪೂ 202 ಮತ್ತು 107ರ ಮಧ್ಯಾವಧಿಯದ್ದೆಂದು ಹೇಳಲಾಗುತ್ತದೆ. (ಪ್ರಾಚೀನ ಲಿಪಿಶಾಸ್ತ್ರೀಯ ತಾರೀಖು: ಸಾಶಪೂ 125-100) . . . ಇತ್ತೀಚಿನ ವರುಷಗಳಲ್ಲಿ ಉತ್ತಮಗೊಳಿಸಲ್ಪಟ್ಟಿರುವ, ಮತ್ತು ಕಾಗದಪತ್ರಗಳ ಆಕಾರ ಮತ್ತು ನಿಲುವುಗಳನ್ನು ಕಾಲನಿರ್ದೇಶ ಮಾಡಿದ ನಾಣ್ಯಗಳು ಮತ್ತು ಕೆತ್ತಿದ ಅಭಿಲೇಖಗಳಂತಹ ಬಾಹ್ಯ ಮೂಲಗಳೊಂದಿಗೆ ಹೋಲಿಸಿದ ಆಧಾರದ ಮೇರೆಗೆ ನಿರಪೇಕ್ಷ ಕಾಲನಿರ್ದೇಶವನ್ನು ಅನುಮತಿಸುವ, ಮೇಲೆ ಹೇಳಲ್ಪಟ್ಟಿರುವ ಪ್ರಾಚೀನ ಲಿಪಿಶಾಸ್ತ್ರೀಯ ವಿಧಾನವು, ಸಾಪೇಕ್ಷವಾಗಿ ಭರವಸಾರ್ಹ ವಿಧಾನವಾಗಿದೆಯೆಂದು ತನ್ನನ್ನು ಸ್ಥಾಪಿಸಿಕೊಂಡಿದೆ.”6

^ ಪ್ಯಾರ. 22 ನಿಶ್ಚಯವಾಗಿಯೂ, ಒಬ್ಬೊಬ್ಬ ಭಾಷಾಂತರಕಾರರೂ, ಮೂಲ ಹೀಬ್ರು ಮತ್ತು ಗ್ರೀಕ್‌ ಗ್ರಂಥಪಾಠಗಳಿಗೆ ಅಂಟಿಕೊಳ್ಳುವುದರಲ್ಲಿ ಕಟ್ಟುನಿಟ್ಟಾಗಿರುವವರಾಗಿರಬಹುದು ಅಥವಾ ಕಟ್ಟುನಿಟ್ಟಾಗಿಲ್ಲದವರಾಗಿರಬಹುದು.

[ಪುಟ 9 ರಲ್ಲಿರುವ ಚಿತ್ರ]

ಬೈಬಲು ಕುಶಲ ನಕಲುಗಾರರಿಂದ ಸುರಕ್ಷಿತವಾಗಿಡಲ್ಪಟ್ಟಿತು

[ಪುಟ 0 ರಲ್ಲಿರುವ ಚಿತ್ರ]

ಯೆಶಾಯನ ಮೃತ ಸಮುದ್ರ ಸುರುಳಿಯು, (ಯಥಾಪ್ರತಿ ತೋರಿಸಲಾಗಿದೆ) ಸಾವಿರ ವರ್ಷಗಳ ಬಳಿಕ ತಯಾರಿಸಲ್ಪಟ್ಟ ಮ್ಯಾಸರೆಟಿಕ್‌ ಗ್ರಂಥಪಾಠವನ್ನು ಕಾರ್ಯತಃ ಹೋಲುತ್ತದೆ