ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮಾನವಹಕ್ಕುಗಳ ಯೂರೋಪಿಯನ್‌ ಕೋರ್ಟಿನಲ್ಲಿ ವಿಜಯ

ಮಾನವಹಕ್ಕುಗಳ ಯೂರೋಪಿಯನ್‌ ಕೋರ್ಟಿನಲ್ಲಿ ವಿಜಯ

ಮಾನವಹಕ್ಕುಗಳ ಯೂರೋಪಿಯನ್‌ ಕೋರ್ಟಿನಲ್ಲಿ ವಿಜಯ

ಜನವರಿ 11, 2007ರಲ್ಲಿ ಫ್ರಾನ್ಸ್‌ನ ಸ್ಟ್ರಾಸ್ಬರ್ಗ್‌ನಲ್ಲಿರುವ ಮಾನವ ಹಕ್ಕುಗಳ ಯುರೋಪಿಯನ್‌ ಕೋರ್ಟು ಯೆಹೋವನ ಸಾಕ್ಷಿಗಳ ಪರವಾಗಿ ಒಂದು ಸರ್ವಾನುಮತದ ತೀರ್ಪನ್ನಿತ್ತಿತು. ಇದು ರಷ್ಯಾ ದೇಶದ ಯೆಹೋವನ ಸಾಕ್ಷಿಗಳು ರಷ್ಯನ್‌ ಫೆಡರೇಷನ್‌ ವಿರುದ್ಧವಾಗಿ ನಡೆಸಿದ ಮೊಕದ್ದಮೆಯ ಫಲಿತಾಂಶ. ಆ ತೀರ್ಪು ಯೆಹೋವನ ಸಾಕ್ಷಿಗಳ ಧಾರ್ಮಿಕ ಸ್ವಾತಂತ್ರ್ಯವನ್ನು ಮತ್ತು ಒಂದು ನಿಷ್ಪಕ್ಷಪಾತದ ವಿಚಾರಣೆಗಾಗಿ ಅವರಿಗಿರುವ ಹಕ್ಕನ್ನು ಎತ್ತಿಹಿಡಿಯಿತು. ಈ ಮೊಕದ್ದಮೆಗೆ ನಡಿಸಿದ ಸಂಗತಿಯು ಯಾವುದೆಂದು ನಾವೀಗ ಪರಿಗಣಿಸೋಣ.

ರಷ್ಯಾ ದೇಶದ ಚೆಲ್ಯಾಬಿಂಟ್‌ಸ್ಕ್‌ ನಗರದಲ್ಲಿನ ಯೆಹೋವನ ಸಾಕ್ಷಿಗಳ ಒಂದು ಸಭೆಯಲ್ಲಿ ಹೆಚ್ಚಿನವರು ಕಿವುಡ ವ್ಯಕ್ತಿಗಳಾಗಿದ್ದರು. ಅವರ ಕೂಟದ ಸ್ಥಳವು ಒಂದು ವೃತ್ತಿಪರ ತರಬೇತು ಕಾಲೇಜಿನಿಂದ ಬಾಡಿಗೆಗೆ ಪಡೆದುಕೊಂಡ ಸೌಕರ್ಯವಾಗಿತ್ತು. ಇಸವಿ 2000ದ ಏಪ್ರಿಲ್‌ 16ನೆಯ ಭಾನುವಾರ ಅವರು ನಡಿಸುತ್ತಿದ್ದ ಕೂಟವು, ಪ್ರಾದೇಶಿಕ ಮಾನವಹಕ್ಕು ನಿಯೋಗದ ಅಧ್ಯಕ್ಷೆ ಅಥವಾ ಕಮಿಷನರ್‌ ಮತ್ತು ಇಬ್ಬರು ಪೋಲೀಸ್‌ ಮೇಲಧಿಕಾರಿಗಳು ಹಾಗೂ ಸಾದಾವಸ್ತ್ರದಲ್ಲಿದ್ದ ಒಬ್ಬ ಪೋಲೀಸನಿಂದ ಭಂಗಗೊಳಿಸಲ್ಪಟ್ಟಿತು. ವಿಶೇಷವಾಗಿ ಆ ಕಮಿಷನರು ತೋರಿಸಿದ ಪಕ್ಷಪಾತದ ಕಾರಣದಿಂದಾಗಿ, ಕೂಟಗಳನ್ನು ಕಾನೂನುಬಾಹಿರವಾಗಿ ನಡೆಸುತ್ತಿದ್ದಾರೆ ಎಂಬ ಉದ್ದೇಶಪೂರ್ವಕ ಸುಳ್ಳು ಆರೋಪಗಳನ್ನು ಕಲ್ಪಿಸಿ ಆ ಕೂಟವನ್ನು ಸ್ತಗಿತಗೊಳಿಸಲಾಯಿತು. ಇಸವಿ 2000ದ ಮೇ 1ರಂದು ಅವರ ಸಭಾಂಗಣದ ಗೇಣಿಚೀಟಿಯು ಸಹ ರದ್ದುಮಾಡಲ್ಪಟ್ಟಿತು.

ಈ ಕುರಿತು ಯೆಹೋವನ ಸಾಕ್ಷಿಗಳು ಚೆಲ್ಯಾಬಿಂಟ್‌ಸ್ಕ್‌ ಫಿರ್ಯಾಧಿ ಅಧಿಕಾರಿಯ ಮುಂದೆ ದೂರುಕೊಟ್ಟರು. ಆದರೆ ಏನೂ ಪ್ರಯೋಜನವಾಗಲಿಲ್ಲ. ರಷ್ಯನ್‌ ಸಂವಿಧಾನವು ಮತ್ತು ಮಾನವ ಹಕ್ಕುಗಳ ಸಂರಕ್ಷಣೆಗಾಗಿರುವ ವಿದ್ಯುಕ್ತಸಭೆ ಹಾಗೂ ಮೂಲಭೂತ ಸ್ವಾತಂತ್ರ್ಯಗಳು, ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಾಹಚರ್ಯದ ಸ್ವಾತಂತ್ರ್ಯಗಳಿಗೆ ಗ್ಯಾರಂಟಿಯನ್ನು ಕೊಡುತ್ತವೆ. ಆದುದರಿಂದ ಜಿಲ್ಲಾ ಕೋರ್ಟಿನಲ್ಲಿ ಒಂದು ಸಿವಿಲ್‌ ದಾವೆಯನ್ನು ಹೂಡಲಾಯಿತು, ಅದನ್ನು ಹಿಂಬಾಲಿಸಿ ಪ್ರಾದೇಶಿಕ ನ್ಯಾಯಸ್ಥಾನಕ್ಕೂ ಮೇಲ್‌ ಮನವಿಯನ್ನು ಮಾಡಲಾಯಿತು. ಈ ಮೊದಲು ಇಸವಿ 1999ರ ಜುಲೈ 30ರಂದು ಉಚ್ಚನ್ಯಾಯಾಲಯವು ಇನ್ನೊಂದು ದಾವೆಯ ಕುರಿತು ಹೀಗೆಂದು ನ್ಯಾಯವಿಧಿಸಿತ್ತು: “ಮನಸ್ಸಾಕ್ಷಿಯ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸಾಹಚರ್ಯವು ‘ಪ್ರತಿಬಂಧವಿಲ್ಲದೆ’ ನಡೆಯಬೇಕೆಂಬುದು ರಷ್ಯನ್‌ ಶಾಸನಕ್ಕೆ ಅನುಗುಣವಾದ ಸಂಗತಿಯಾಗಿದೆ. ಅಂದರೆ ಧಾರ್ಮಿಕ ಸಂಸ್ಕಾರಗಳನ್ನು [ಆ ಉದ್ದೇಶಕ್ಕಾಗಿ] ಒದಗಿಸಲ್ಪಟ್ಟಿರುವ ಸ್ಥಳಗಳಲ್ಲಿ ನಡಿಸಲಿಕ್ಕಾಗಿ ಐಹಿಕ ಅಧಿಕಾರಿಗಳಿಂದ ಅಪ್ಪಣೆಯನ್ನು ಕೇಳುವ ಇಲ್ಲವೆ ಪೂರ್ವಾನುಮತಿಯನ್ನು ಪಡೆದುಕೊಳ್ಳುವ ಆವಶ್ಯಕತೆ ಇರುವುದಿಲ್ಲ.” (ಬ್ರ್ಯಾಕಿಟ್‌ ಅವರದ್ದು.) ಹಿಂದಿನ ತೀರ್ಪು ಹೀಗಿದ್ದರೂ ಜಿಲ್ಲಾ ಮತ್ತು ಪ್ರಾದೇಶಿಕ ಕೋರ್ಟ್‌ಗಳಲ್ಲಿ ಹೂಡಲ್ಪಟ್ಟ ಆ ದಾವೆಗಳು ತಳ್ಳಿಹಾಕಲ್ಪಟ್ಟವು.

ಇಸವಿ 2001ರ ಡಿಸೆಂಬರ್‌ 17ರಂದು ಆ ಮೊಕದ್ದಮೆಯನ್ನು ಮಾನವ ಹಕ್ಕುಗಳ ಯುರೋಪಿಯನ್‌ ಕೋರ್ಟಿನ ಮುಂದೆ ತರಲಾಯಿತು. ಇಸವಿ 2004ರ ಸೆಪ್ಟೆಂಬರ್‌ 9ರಂದು ಮೊಕದ್ದಮೆಯ ವಿಚಾರಣೆ ನಡೆಯಿತು. ಕೋರ್ಟಿನಿಂದ ವಿಧಿಸಲ್ಪಟ್ಟ ಕೊನೆಯ ತೀರ್ಮಾನದ ಆಯ್ದ ಭಾಗಗಳು ಈ ಕೆಳಗಿನಂತಿವೆ:

“ನ್ಯಾಯಾಲಯವು ಕಂಡುಕೊಂಡದ್ದೇನಂದರೆ, ಇಲ್ಲಿ ಮನವಿದಾರರ ಧಾರ್ಮಿಕ ಸ್ವಾತಂತ್ರ್ಯದಲ್ಲಿ ಅಧಿಕಾರಿಗಳು ತಲೆಹಾಕಿರುವದನ್ನೇ. ಅಂದರೆ ಇಸವಿ 2000ದ ಏಪ್ರಿಲ್‌ 16ರಂದು ಮನವಿದಾರರು ನಡಿಸುತ್ತಿದ್ದ ಧಾರ್ಮಿಕ ಕೂಟವನ್ನು ಅದು ಮುಗಿಯುವ ಸಮಯಕ್ಕೆ ಮುಂಚೆಯೇ ಸ್ಥಗಿತಗೊಳಿಸುವಂತೆ ಮಾಡಲು ಆ ರಾಜ್ಯದ ಅಧಿಕಾರಿಗಳು ಕಾರಣರಾದರು.”

“ಒಂದು ಧಾರ್ಮಿಕ ಕೂಟವನ್ನು ಆ ಉದ್ದೇಶಕ್ಕಾಗಿ ಕಾನೂನುರೀತ್ಯ ಬಾಡಿಗೆಗೆ ಹಿಡಿಯಲ್ಪಟ್ಟ ಸ್ಥಳದಲ್ಲಿ ನಡಿಸುವುದನ್ನು ಭಂಗಪಡಿಸುವುದಕ್ಕೆ ಯಾವ ಶಾಸನಬದ್ಧ ಆಧಾರವೂ ಇಲ್ಲಿ ಇಲ್ಲದಿರುವುದು ಸ್ಪಷ್ಟಗೋಚರ.”

[ನ್ಯಾಯಾಲಯವು ಗಮನಿಸಿದ್ದು,] ರಷ್ಯನ್‌ ಉಚ್ಚ ನ್ಯಾಯಾಲಯವು ನ್ಯಾಯಾಂಗ ನಿಯಮಕ್ಕೆ ಹೊಂದಿಕೆಯಲ್ಲಿ ಈ ಹೇಳಿಕೆಯನ್ನಿತ್ತಿದೆ ಏನೆಂದರೆ ಧಾರ್ಮಿಕ ಕೂಟಗಳನ್ನು ನಡಿಸುವ ಕುರಿತು ಅಧಿಕಾರಿಗಳಿಗೆ ತಿಳಿಸಬೇಕೆಂದಿಲ್ಲ ಅಥವಾ ಅವರಿಂದ ಪೂರ್ವ ಪರವಾನಗಿ ಪಡೆಯಬೇಕು ಎಂಬ ಆವಶ್ಯಕತೆಯೂ ಇಲ್ಲ.”

“ಆದುದರಿಂದ ಮನವಿದಾರರ ಧಾರ್ಮಿಕ ಕೂಟವನ್ನು ಇಸವಿ 2000ದ ಏಪ್ರಿಲ್‌ 16ರಂದು ಕಮೀಷನರ್‌ ಮತ್ತು ಅವಳ ಸಹಾಯಕರು ಭಂಗಗೊಳಿಸಿದ ವಿಷಯವು ವಿಧ್ಯುಕ್ತಸಭೆಯ 9ನೆಯ ಕಲಮಿನ [ಧಾರ್ಮಿಕ ಸ್ವಾತಂತ್ರ್ಯ] ಉಲ್ಲಂಘನೆಯಾಗಿರುತ್ತದೆ.”

“ನ್ಯಾಯಾಲಯವು ಮತ್ತೂ ಕಂಡುಕೊಂಡದ್ದೇನಂದರೆ ಜಿಲ್ಲಾ ಮತ್ತು ಪ್ರಾದೇಶಿಕ ನ್ಯಾಯಾಲಯಗಳು ತಮ್ಮ ಕರ್ತವ್ಯವನ್ನು ಮಾಡಲು . . . ಹಾಗೂ ಆಯಾ ಗುಂಪುಗಳನ್ನು ನ್ಯಾಯೋಚಿತವಾಗಿಯೂ ನಿಷ್ಪಕ್ಷಪಾತದಿಂದಲೂ ವಿಚಾರಿಸುವುದರಲ್ಲಿ ತಪ್ಪಿಹೋಗಿವೆ. ಇಲ್ಲಿ . . . ವಿಧ್ಯುಕ್ತಸಭೆಯ 6ನೆಯ ಕಲಮಿನ [ನ್ಯಾಯಸಮ್ಮತ ವಿಚಾರಣೆ] ಉಲ್ಲಂಘನೆಯೂ ಆಗಿರುತ್ತದೆ.”

ಮಾನವ ಹಕ್ಕುಗಳ ಯುರೋಪಿಯನ್‌ ಕೋರ್ಟಿನಲ್ಲಿ ತಮಗೆ ವಿಜಯವನ್ನು ದಯೆಪಾಲಿಸಿದಕ್ಕಾಗಿ ಯೆಹೋವನ ಸಾಕ್ಷಿಗಳು ದೇವರಿಗೆ ಕೃತಜ್ಞರಾಗಿರುತ್ತಾರೆ. (ಕೀರ್ತನೆ 98:1) ಕೋರ್ಟು ನೀಡಿದ ನ್ಯಾಯವಿಧಾಯಕ ತೀರ್ಪು ಎಷ್ಟು ವ್ಯಾಪಕವಾದ ಪರಿಣಾಮವನ್ನು ಬೀರಲಿದೆ? ಧರ್ಮ ಮತ್ತು ಸಾರ್ವಜನಿಕ ನೀತಿ ಎಂಬ ಸಂಸ್ಥೆಯ ಅಧ್ಯಕ್ಷರಾದ ಜೋಸೆಫ್‌ ಕೆ. ಗ್ರಿಬಾಸ್ಕಿ ಹೇಳುವುದು: “ಮಾನವ ಹಕ್ಕುಗಳ ಯುರೋಪಿಯನ್‌ ಕೋರ್ಟಿಗೆ ಒಳಪಟ್ಟಿರುವ ಎಲ್ಲಾ ರಾಜ್ಯಗಳಲ್ಲಿ ಈ ನಿರ್ಣಯವು ಧಾರ್ಮಿಕ ಹಕ್ಕುಗಳ ಮೇಲೆ ಪ್ರಬಲ ಪರಿಣಾಮ ಬೀರುವುದರಿಂದ, ಇದು ಯೂರೋಪಿನಾದ್ಯಂತ ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಗಮನಾರ್ಹ ಪ್ರಭಾವಬೀರುವ ಇನ್ನೊಂದು ಮಹತ್ವದ ನಿರ್ಣಯವಾಗಿದೆ.” (w07 6/1)