ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವ ಅಮೂಲ್ಯವೊ ನಿಷ್ಪ್ರಯೋಜಕವೊ?

ಜೀವ ಅಮೂಲ್ಯವೊ ನಿಷ್ಪ್ರಯೋಜಕವೊ?

ಜೀವ ಅಮೂಲ್ಯವೊ ನಿಷ್ಪ್ರಯೋಜಕವೊ?

“ಮನುಷ್ಯನು ದೇವಸ್ವರೂಪದಲ್ಲಿ ಉಂಟುಮಾಡಲ್ಪಟ್ಟಿರುವ ಕಾರಣ, ಮನುಷ್ಯಹತ್ಯವು ಲೋಕದಲ್ಲಿಯೇ ಅತಿ ಅಮೂಲ್ಯವೂ ಅತಿ ಪವಿತ್ರವೂ ಆದ ವಸ್ತುವಿನ ನಾಶನವಾಗಿದೆ.”​—⁠ನೈತಿಕ ವಿಷಯದ ಕುರಿತು ಸಾಮಾನ್ಯ ಮನುಷ್ಯನ ಕೈಪಿಡಿ (ಇಂಗ್ಲಿಷ್‌), ವಿಲ್ಯಮ್‌ ಬಾರ್ಕ್‌ಲೇ.

‘ಲೋಕದಲ್ಲಿಯೇ ಅತಿ ಅಮೂಲ್ಯವಾದ ವಸ್ತು.’ ಜೀವದ ಕುರಿತು ನಿಮಗೂ ಇದೇ ನೋಟವಿದೆಯೊ? ಜನರು ವರ್ತಿಸುವ ರೀತಿಯನ್ನು ನೋಡಿದರೆ, ಹೆಚ್ಚಿನ ಜನರು ಆ ಬರಹಗಾರನ ಮಾತುಗಳೊಂದಿಗೆ ಸಹಮತದಲ್ಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ತಮ್ಮ ಜೊತೆ ಮಾನವರ ಒಳಿತಿನ ಕುರಿತು ಸ್ವಲ್ಪವೂ ಚಿಂತಿಸದೆ ಕೇವಲ ಸ್ವಾರ್ಥಪರ ಗುರಿಗಳನ್ನು ಬೆನ್ನಟ್ಟುವ ಹಿಂಸಾತ್ಮಕ ಜನರಿಂದ ಲಕ್ಷಾಂತರ ಜನರ ಜೀವಗಳು ನಿರ್ದಯವಾಗಿ ಹತಿಸಲ್ಪಡುತ್ತಿವೆ.​—⁠ಪ್ರಸಂಗಿ 8:⁠9.

ನಿಷ್ಪ್ರಯೋಜಕ ಮತ್ತು ತ್ಯಾಜ್ಯಾರ್ಹ

ಒಂದನೇ ಲೋಕ ಯುದ್ಧವು ಇದಕ್ಕೆ ಸೂಕ್ತವಾದ ಉದಾಹರಣೆಯಾಗಿದೆ. ಆ ಕದನದ ಸಮಯದಲ್ಲಿ ಆಗಿಂದಾಗ್ಗೆ, “ಮನುಷ್ಯರನ್ನು ಯಾವುದೇ ಉದ್ದೇಶವಿಲ್ಲದೆ ಬಲಿಕೊಡಲಾಯಿತು” ಎಂದು ಇತಿಹಾಸಗಾರರಾದ ಏ. ಜೆ. ಪಿ. ಟೇಲರ್‌ ತಿಳಿಸುತ್ತಾರೆ. ಮಿಲಿಟರಿ ಮುಖಂಡರು ಪ್ರತಿಷ್ಠೆ ಮತ್ತು ಘನತೆಯನ್ನು ಬೆನ್ನಟ್ಟುತ್ತಾ, ಸೈನಿಕರು ನಿಷ್ಪ್ರಯೋಜಕರೂ ಸಂಪೂರ್ಣವಾಗಿ ಅಪ್ರಾಮುಖ್ಯರೂ ಆಗಿದ್ದಾರೋ ಎಂಬಂತೆ ಅವರನ್ನು ಉಪಯೋಗಿಸಿದರು. ಫ್ರಾನ್ಸ್‌ನ ವರ್ಡನ್‌ ಹೋರಾಟ ಒಂದರಲ್ಲಿಯೇ, ಐದು ಲಕ್ಷಕ್ಕಿಂತಲೂ ಹೆಚ್ಚಿನ ಜನರಿಗೆ ಪ್ರಾಣಹಾನಿಯಾಯಿತು. “ಅಲ್ಲಿ ಗೆಲ್ಲಲು ಅಥವಾ ನಷ್ಟಹೊಂದಲು [ನಿರ್ದಿಷ್ಟ ಮೊತ್ತದ] ಯಾವುದೇ ಬಹುಮಾನವು ಇರಲಿಲ್ಲ. ಕೇವಲ ಮನುಷ್ಯರನ್ನು ಕೊಲ್ಲಲಾಯಿತು ಮತ್ತು ಘನತೆಯನ್ನು ಗೆಲ್ಲಲಾಯಿತು.”​—⁠ಮೊದಲನೇ ಲೋಕ ಯುದ್ಧ (ಇಂಗ್ಲಿಷ್‌).

ಜೀವದ ಮೌಲ್ಯಕ್ಕೆ ಈ ರೀತಿಯ ತಿರಸ್ಕಾರವು ಈಗಲೂ ವ್ಯಾಪಕವಾಗಿದೆ. ಇತ್ತೀಚಿನ ಸಮಯಗಳಲ್ಲಿ, “ಜನಸಂಖ್ಯಾ ವೃದ್ಧಿಯ ಕಾರಣ ಲೋಕವು ಕೆಲಸಕ್ಕಾಗಿ ಕಾಯುತ್ತಿರುವ ಲಕ್ಷಾಂತರ ಬಡಜನರಿಂದ ತುಂಬಿಕೊಂಡಿದೆ,” ಎಂಬುದಾಗಿ ವಿದ್ವಾಂಸರಾದ ಕೆವಿನ್‌ ಬೇಲ್ಸ್‌ ತಿಳಿಸುತ್ತಾರೆ. ಅವರು ಕೇವಲ ಜೀವದಿಂದುಳಿಯಲು ದೌರ್ಜನ್ಯಭರಿತ ವಾಣಿಜ್ಯ ವ್ಯವಸ್ಥೆಯ ಕೈಯಲ್ಲಿ ಜೀವನಪರ್ಯಂತ ಹೆಣಗಾಡಬೇಕಾಗುತ್ತದೆ. ಈ ರೀತಿಯ ವಾಣಿಜ್ಯ ವ್ಯವಸ್ಥೆಯಲ್ಲಿ “ಜೀವಕ್ಕೆ ಯಾವುದೇ ಮೌಲ್ಯವಿಲ್ಲ.” ಇಂಥ ಬಡಜನರನ್ನು ದುರುಪಯೋಗಿಸುವವರು, ಅವರನ್ನು ಆಳುಗಳಂತೆ ಉಪಚರಿಸುತ್ತಾರೆ​—⁠“ಹಣಗಳಿಸುವ ಸಲುವಾಗಿ ಅವರನ್ನು ಉಪಯೋಗಿಸಿ ಅನಂತರ ಸಂಪೂರ್ಣವಾಗಿ ತ್ಯಾಜ್ಯಾರ್ಹ ವಸ್ತುವಿನಂತೆ” ಉಪಚರಿಸುತ್ತಾರೆ.​—⁠ತ್ಯಾಜ್ಯಾರ್ಹ ಜನರು (ಇಂಗ್ಲಿಷ್‌).

“ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥ”

ಲಕ್ಷಾಂತರ ಜನರು ಸಂಪೂರ್ಣವಾಗಿ ನಿಷ್ಪ್ರಯೋಜನದ ಮತ್ತು ಹತಾಶೆಯ ಭಾವನೆಯನ್ನು ಅಂದರೆ ತಾವು ಜೀವಿಸಿದರೂ ಸತ್ತರೂ ಯಾರಿಗೂ ಚಿಂತೆ ಇಲ್ಲ ಎಂಬ ಭಾವನೆಯನ್ನು ಹೊಂದಿದ್ದಾರೆ ಎಂಬುದಕ್ಕೆ ಅನೇಕ ಇತರ ಕಾರಣಗಳೂ ಇವೆ. ಯುದ್ಧ ಮತ್ತು ಅನ್ಯಾಯವಲ್ಲದೆ, ಅನಾವೃಷ್ಟಿ, ಕ್ಷಾಮ, ರೋಗ, ವಿಯೋಗದ ದುಃಖ ಮತ್ತು ಇತರ ಅಸಂಖ್ಯಾತ ವಿಷಯಗಳು ಮಾನವಕುಲವನ್ನು ಬಾಧಿಸುತ್ತಿವೆ. ಇದು, ಜೀವಕ್ಕೆ ನಿಜವಾಗಿಯೂ ಬೆಲೆಯಿದೆಯೋ ಎಂದು ಜನರು ಯೋಚಿಸುವಂತೆ ಮಾಡುತ್ತಿದೆ.​—⁠ಪ್ರಸಂಗಿ 1:​8, 14.

ಎಲ್ಲರೂ ದುಃಖ ಮತ್ತು ಸಂಕಟಮಯ ಜೀವನವನ್ನು ಎದುರಿಸುವುದಿಲ್ಲ ಎಂಬುದು ನಿಜ. ಆದರೆ ಅಂಥ ಸಂಕಟವನ್ನು ಅನುಭವಿಸದ ಜನರು ಸಹ ಅನೇಕವೇಳೆ ಪುರಾತನ ಇಸ್ರಾಯೇಲಿನ ರಾಜ ಸೊಲೊಮೋನನ ಮಾತುಗಳನ್ನು ಪ್ರತಿಧ್ವನಿಸಿದ್ದಾರೆ. ಅವನು ಕೇಳಿದ್ದು: “ಲೋಕದಲ್ಲಿ ಮನುಷ್ಯನು ಹೃದಯಪೂರ್ವಕವಾಗಿ ಪಡುವ ಪ್ರಯಾಸದಿಂದ ಅವನಿಗೆ ಲಾಭವೇನು?” ಇದರ ಕುರಿತು ಆಲೋಚಿಸುತ್ತಾ ಹೆಚ್ಚಿನವರು ಗ್ರಹಿಸುವುದೇನೆಂದರೆ, ತಾವು ಮಾಡಿದ ಹೆಚ್ಚಿನ ವಿಷಯಗಳ ಫಲಿತಾಂಶವು “ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥ.”​—⁠ಪ್ರಸಂಗಿ 2:​22, 26.

ಅನೇಕರು ತಮ್ಮ ಜೀವಮಾನದ ಕಡೆಗೆ ಹಿನ್ನೋಟ ಬೀರುವಾಗ, “ಜೀವನ ಎಂದರೆ ಇಷ್ಟೆಯೋ?” ಎಂದು ಕೇಳುತ್ತಾರೆ. ಪೂರ್ವಜನಾದ ಅಬ್ರಹಾಮನು ‘ಸಂತೃಪ್ತಿಯ’ ಭಾವನೆಯಿಂದ ತನ್ನ ಜೀವನವನ್ನು ಮುಗಿಸಿದನು. ಅಂಥ ಭಾವನೆಯಿಂದ ತಮ್ಮ ಜೀವನವನ್ನು ಮುಗಿಸುವವರು ಎಷ್ಟು ಮಂದಿ ಇದ್ದಾರೆ? (ಆದಿಕಾಂಡ 25:​8, NW ಪಾದಟಿಪ್ಪಣಿ) ಹೆಚ್ಚಿನವರಿಗೆ ವ್ಯರ್ಥತೆಯ ಭಾವನೆಯಿದೆ. ಹಾಗಿದ್ದರೂ, ಜೀವನವು ವ್ಯರ್ಥವಾಗಿರುವ ಅಗತ್ಯವಿಲ್ಲ. ದೇವರು ಪ್ರತಿಯೊಬ್ಬ ಮಾನವನ ಜೀವವನ್ನು ಅಮೂಲ್ಯವಾಗಿ ಪರಿಗಣಿಸುತ್ತಾನೆ ಮತ್ತು ಪ್ರತಿಯೊಬ್ಬರೂ ನಿಜವಾಗಿಯೂ ಸಂಪೂರ್ಣವಾಗಿ ಸಂತೃಪ್ತಿಕರ ಜೀವನವನ್ನು ನಡೆಸಬೇಕೆಂಬುದು ಆತನ ಇಚ್ಛೆಯಾಗಿದೆ. ಅದು ಹೇಗೆ ಸಾಧ್ಯವಾಗುತ್ತದೆ? ಮುಂದಿನ ಲೇಖನವು ಈ ಕುರಿತು ಏನು ಹೇಳುತ್ತದೆ ಎಂಬುದನ್ನು ಪರಿಗಣಿಸಿರಿ.