ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೆಲಸ ಮಾಡುವ ಸ್ಥಳದಲ್ಲಿ ಜನರಿಗೆ ಸಾಕ್ಷಿ ನೀಡುವುದು

ಕೆಲಸ ಮಾಡುವ ಸ್ಥಳದಲ್ಲಿ ಜನರಿಗೆ ಸಾಕ್ಷಿ ನೀಡುವುದು

ರಾಜ್ಯ ಘೋಷಕರು ವರದಿ ಮಾಡುತ್ತಾರೆ

ಕೆಲಸ ಮಾಡುವ ಸ್ಥಳದಲ್ಲಿ ಜನರಿಗೆ ಸಾಕ್ಷಿ ನೀಡುವುದು

ಅಪೊಸ್ತಲರಾಗಿದ್ದ ಮತ್ತಾಯ, ಪೇತ್ರ, ಅಂದ್ರೆಯ, ಯಾಕೋಬ, ಮತ್ತು ಯೋಹಾನರಲ್ಲಿ ಯಾವುದು ಸಾಮಾನ್ಯವಾದ ಸಂಗತಿಯಾಗಿತ್ತು? ಇವರೆಲ್ಲರೂ ತಮ್ಮ ಕೆಲಸದ ಸ್ಥಳದಲ್ಲಿದ್ದಾಗಲೇ ಯೇಸು ಇವರಿಗೆ ತನ್ನ ಹಿಂದೆ ಬರುವಂತೆ ಕರೆಕೊಟ್ಟನು. ಪೇತ್ರ, ಅಂದ್ರೆಯ, ಯಾಕೋಬ, ಮತ್ತು ಯೋಹಾನರನ್ನು ಯೇಸು “ನನ್ನ ಹಿಂದೆ ಬನ್ನಿರಿ” ಎಂದು ಆಮಂತ್ರಿಸಿದಾಗ, ಅವರು ಮೀನು ಹಿಡಿಯುವ ಕೆಲಸದಲ್ಲಿ ಕಾರ್ಯಮಗ್ನರಾಗಿದ್ದರು. ಯೇಸುವಿನ ಶಿಷ್ಯನಾಗುವಂತೆ ಮತ್ತಾಯನು ಆಮಂತ್ರಿಸಲ್ಪಟ್ಟಾಗ ಅವನು ಸುಂಕ ವಸೂಲಿಯ ಕೆಲಸದಲ್ಲಿ ನಿರತನಾಗಿದ್ದನು.​—⁠ಮತ್ತಾಯ 4:​18-21; 9:⁠9.

ಕೆಲಸ ಮಾಡುವ ಸ್ಥಳದಲ್ಲಿ ಜನರಿಗೆ ಸಾಕ್ಷಿಯನ್ನು ನೀಡುವುದು ಪ್ರತಿಫಲದಾಯಕವಾಗಿರಬಲ್ಲದು. ಇದನ್ನು ಮನಗಂಡಿರುವ ಜಪಾನಿನ ಯೆಹೋವನ ಸಾಕ್ಷಿಗಳು, ಶುಶ್ರೂಷೆಯ ಈ ಕ್ಷೇತ್ರದಲ್ಲಿ ಒಳಗೂಡಲು ಇತ್ತೀಚಿಗೆ ವ್ಯವಸ್ಥಿತ ಪ್ರಯತ್ನವನ್ನು ಮಾಡಿದರು. ಫಲಿತಾಂಶಗಳೇನು? ಕೆಲವೇ ತಿಂಗಳುಗಳಲ್ಲಿ ಸಾವಿರಾರು ಪುನರ್ಭೇಟಿಗಳು ಮಾಡಲ್ಪಟ್ಟವು, ಮತ್ತು 250 ಬೈಬಲ್‌ ಅಧ್ಯಯನಗಳು ಆರಂಭಿಸಲ್ಪಟ್ಟವು. ಈ ಮುಂದಿನ ಅನುಭವಗಳನ್ನು ಪರಿಗಣಿಸಿರಿ.

ಟೋಕಿಯೊದ ಪೂರ್ಣ ಸಮಯದ ಶುಶ್ರೂಷಕನೊಬ್ಬನು ಒಂದು ರೆಸ್ಟರಾಂಟ್‌ನ ಮ್ಯಾನೇಜರನೊಬ್ಬನನ್ನು ಭೇಟಿಮಾಡಿದನು. ಈ ಮ್ಯಾನೇಜರನು ಸುಮಾರು 30 ವರ್ಷಗಳ ಹಿಂದೆ ಶಾಲಾ ಹುಡುಗನಾಗಿದ್ದಾಗ ಒಬ್ಬ ಸಾಕ್ಷಿಯೊಂದಿಗೆ ಮಾತಾಡಿದ್ದನು. ಈ ಮ್ಯಾನೇಜರನು ವಿದ್ಯಾರ್ಥಿಯಾಗಿದ್ದಾಗ ತನಗೆ ತಿಳಿಸಲ್ಪಟ್ಟಿದ್ದ ಸಂಗತಿಯನ್ನು ಅರ್ಥಮಾಡಿಕೊಳ್ಳಲು ಅಸಮರ್ಥನಾಗಿದ್ದನಾದರೂ, ಅವನಿಗೆ ಬೈಬಲಿನಲ್ಲಿ ಆಸಕ್ತಿಯುಂಟಾಯಿತು. ಈಗ ಪುನಃ ಅವನ ಆಸಕ್ತಿಯು ಕೆರಳಿಸಲ್ಪಟ್ಟದ್ದರಿಂದ, ನಿತ್ಯಜೀವಕ್ಕೆ ನಡೆಸುವ ಜ್ಞಾನ * ಪುಸ್ತಕವನ್ನು ಉಪಯೋಗಿಸಿ ಬೈಬಲ್‌ ಅಧ್ಯಯನವನ್ನು ಮಾಡಲು ಅವನು ಆ ಕೂಡಲೆ ಒಪ್ಪಿಕೊಂಡನು. ಅಷ್ಟುಮಾತ್ರವಲ್ಲ, ಪ್ರತಿ ದಿನ ರಾತ್ರಿ ಮಲಗುವ ಮೊದಲು ಬೈಬಲನ್ನು ಓದುವ ವೈಯಕ್ತಿಕ ಕಾರ್ಯಕ್ರಮವನ್ನು ಸಹ ಆರಂಭಿಸಿದನು.

ಒಬ್ಬ ಸ್ಪೆಷಲ್‌ ಪಯನೀಯರಳು ಒಂದು ಆಫೀಸಿಗೆ ಭೇಟಿ ನೀಡಿದಳು. ಅಲ್ಲಿನ ಮ್ಯಾನೇಜರನು ಲಭ್ಯವಿರಲಿಲ್ಲವಾದರೂ, ಮ್ಯಾನೇಜರನಿಗೆ ಮಾಡಲ್ಪಟ್ಟ ಫೋನ್‌ ಕರೆಗೆ ಉತ್ತರಿಸಿದ ಯುವತಿಯೊಬ್ಬಳು ಕೇಳಿದ್ದು: “ನೀವು ನನ್ನ ಜೊತೆ ಮಾತಾಡಲು ಇಷ್ಟಪಡುತ್ತೀರೋ?” ಟೆಲಿಫೋನಿನಲ್ಲಿ ಸಂಕ್ಷಿಪ್ತವಾದ ಸಂಭಾಷಣೆಯನ್ನು ನಡೆಸಿದ ಬಳಿಕ ಆ ಯುವತಿಯು ಹೊರಗೆ ಬಂದು, ಬೈಬಲನ್ನು ಓದುವುದರಲ್ಲಿ ತನಗೆ ಆಸಕ್ತಿಯಿದೆ ಎಂದು ಹೇಳಿದಳು. ಆ ಸ್ಪೆಷಲ್‌ ಪಯನೀಯರಳು ಒಂದು ಬೈಬಲಿನೊಂದಿಗೆ ಅವಳ ಬಳಿ ಪುನಃ ಹೋಗಲು ಏರ್ಪಾಡನ್ನು ಮಾಡಿದಳು ಮತ್ತು ಅವಳೊಂದಿಗೆ ಬೈಬಲ್‌ ಅಧ್ಯಯನವನ್ನು ಆರಂಭಿಸಿದಳು; ಈ ಯುವತಿಯು ಬೆಳಗ್ಗೆ ಕೆಲಸಕ್ಕೆ ಹೋಗುವ ಮೊದಲು, ಹತ್ತಿರದ ಪಾರ್ಕಿನಲ್ಲಿ ಕುಳಿತು ಅವಳೊಂದಿಗೆ ಬೈಬಲ್‌ ಅಧ್ಯಯನವನ್ನು ಮಾಡಲಾಗುತ್ತದೆ.

ಇನ್ನೊಂದು ಆಫೀಸಿನಲ್ಲಿ, ಒಬ್ಬ ಸಹೋದ್ಯೋಗಿಯು ಸಾಕ್ಷಿಗಳಿಂದ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಸ್ವೀಕರಿಸಿ, ಅವರು ಅಲ್ಲಿಂದ ಹೋದ ಬಳಿಕ ಈ ಪತ್ರಿಕೆಗಳನ್ನು ಎಸೆದುಬಿಡುವುದನ್ನು ಒಬ್ಬ ಪುರುಷನು ನೋಡಿದನು. ಈ ಪುರುಷನು ತನ್ನ ಮನೆಗೆ ಬಂದಾಗ, ಸಾಕ್ಷಿಯಾಗಿದ್ದ ತನ್ನ ಹೆಂಡತಿಗೆ ಈ ಘಟನೆಯ ಕುರಿತು ತಿಳಿಸಿದನು ಮತ್ತು ಒಂದುವೇಳೆ ತನಗೆ ಪತ್ರಿಕೆಗಳು ಕೊಡಲ್ಪಡುತ್ತಿದ್ದಲ್ಲಿ ತಾನು ಅವರಿಗೆ ಸ್ವಲ್ಪವಾದರೂ ಕಿವಿಗೊಡುತ್ತಿದ್ದೆ ಎಂದು ಹೇಳಿದನು. ಈ ಹೇಳಿಕೆಗಳನ್ನು ಕೇಳಿಸಿಕೊಂಡ ಅವನ ಮಗಳು, ಆ ವ್ಯಾಪಾರಿ ಕ್ಷೇತ್ರದಲ್ಲಿ ಸಾರುವ ಕೆಲಸವನ್ನು ಮಾಡುವಂಥ ಒಬ್ಬ ಸಾಕ್ಷಿಗೆ ಈ ಸಂಗತಿಯನ್ನು ತಿಳಿಸಿದಳು. ಒಡನೆಯೇ ಈ ಸಾಕ್ಷಿಯು ಆಫೀಸಿನಲ್ಲಿ ಆ ಪುರುಷನನ್ನು ಭೇಟಿಯಾದನು ಮತ್ತು ಅವನೊಂದಿಗೆ ಒಂದು ಬೈಬಲ್‌ ಅಧ್ಯಯನವನ್ನು ಆರಂಭಿಸಿದನು. ಸ್ವಲ್ಪದರಲ್ಲೇ ಆ ಪುರುಷನು ಕ್ರಮವಾಗಿ ಭಾನುವಾರದ ಕೂಟಗಳಿಗೆ ಹಾಜರಾಗತೊಡಗಿದನು.

ಕೆಲಸ ಮಾಡುವ ಸ್ಥಳದಲ್ಲಿ ಜನರಿಗೆ ಸಾಕ್ಷಿ ನೀಡುವುದು ಇನ್ನಿತರ ಪ್ರಯೋಜನಗಳನ್ನು ತಂದಿದೆ. ಜಪಾನಿನ ಅನೇಕ ಪ್ರಚಾರಕರು, ಶಾಪಿಂಗ್‌ ಕ್ಷೇತ್ರಗಳಲ್ಲಿ, ಕಾರ್ಖಾನೆಗಳಲ್ಲಿ, ಮತ್ತು ಆಫೀಸುಗಳಲ್ಲಿ ಪುನರ್ಭೇಟಿಗಳನ್ನು ಮಾಡುವುದರಲ್ಲಿ ಚತುರರಾಗಿದ್ದಾರೆ. ಅಷ್ಟುಮಾತ್ರವಲ್ಲದೆ, ಈ ಸಾಕ್ಷಿಕಾರ್ಯದ ಮೂಲಕ, ಅನೇಕ ಅಕ್ರಿಯ ಪ್ರಚಾರಕರನ್ನು ಸಂಪರ್ಕಿಸಲಾಗಿದೆ ಮತ್ತು ಅವರೊಂದಿಗೆ ಅಧ್ಯಯನಗಳನ್ನು ಆರಂಭಿಸಲಾಗಿದೆ. ಫಲಿತಾಂಶಗಳು ವರ್ಣನಾತೀತವಾಗಿವೆ. ಮಧ್ಯ ಟೋಕಿಯೊದಲ್ಲಿನ ಒಂದು ಸಭೆಯು ಇತ್ತೀಚಿಗೆ 108 ಮನೆ ಬೈಬಲ್‌ ಅಧ್ಯಯನಗಳನ್ನು ವರದಿಸಿತು; ಇದು ಒಂದು ವರ್ಷಕ್ಕೆ ಮುಂಚೆ ವರದಿಸಲ್ಪಟ್ಟ ಸಂಖ್ಯೆಗಿಂತ ಇಮ್ಮಡಿಯಷ್ಟಾಗಿದೆ.

[ಪಾದಟಿಪ್ಪಣಿ]

^ ಪ್ಯಾರ. 5 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.