ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರಾಜ್ಯ ಸಭಾಗೃಹಗಳು ಎಲ್ಲರಿಗಾಗಿಯೂ ತೆರೆದಿವೆ

ರಾಜ್ಯ ಸಭಾಗೃಹಗಳು ಎಲ್ಲರಿಗಾಗಿಯೂ ತೆರೆದಿವೆ

ರಾಜ್ಯ ಘೋಷಕರು ವರದಿ ಮಾಡುತ್ತಾರೆ

ರಾಜ್ಯ ಸಭಾಗೃಹಗಳು ಎಲ್ಲರಿಗಾಗಿಯೂ ತೆರೆದಿವೆ

ಸಾರ್ವಜನಿಕ ಶುಶ್ರೂಷೆಗಾಗಿ ತನ್ನ ಶಿಷ್ಯರನ್ನು ತರಬೇತುಗೊಳಿಸುತ್ತಿದ್ದಾಗ ಯೇಸು ಕ್ರಿಸ್ತನು ಅವರಿಗೆ, “ಮಾಳಿಗೆಗಳ ಮೇಲೆ ನಿಂತು ಸಾರಿರಿ” ಎಂದು ಹೇಳಿ ಪ್ರೋತ್ಸಾಹಿಸಿದನು. (ಮತ್ತಾಯ 10:27) ಹೌದು, ಅವರು ತಮ್ಮ ಕ್ರೈಸ್ತ ಶುಶ್ರೂಷೆಯನ್ನು ಬಹಿರಂಗವಾಗಿ, ಸಾರ್ವಜನಿಕರಿಗೆ ತೋರುವಂಥ ರೀತಿಯಲ್ಲಿ ಮಾಡಬೇಕಾಗಿತ್ತು. ಈ ಸಲಹೆಯ ಮೂಲತತ್ತ್ವಕ್ಕೆ ಅನುಸಾರವಾಗಿ, ಯೆಹೋವನ ಸಾಕ್ಷಿಗಳ ಕಾರ್ಯಗಳೂ ಬಹಿರಂಗವಾಗಿಯೇ ಮಾಡಲ್ಪಡುತ್ತವೆ. ಈ ರೀತಿಯ ಮುಕ್ತಕಾರ್ಯವು ಸಾಕ್ಷಿಗಳು ವಿರೋಧವನ್ನು ಜಯಿಸಿ, ಜನರ ಪ್ರಸನ್ನಕರವಾದ ಗಮನವನ್ನು ಸೆಳೆಯುವಂತೆ ಮಾಡಿದೆ.

ಯೆಹೋವನ ಸಾಕ್ಷಿಗಳ ಸಭಾ ಕೂಟಗಳು ಸಾರ್ವಜನಿಕರಿಗೆ ತೆರೆದಿವೆಯಾದರೂ, ಪೂರ್ವಾಗ್ರಹದ ಕಾರಣ ಕೆಲವು ಜನರು ಅವರ ರಾಜ್ಯ ಸಭಾಗೃಹಗಳಿಗೆ ಕಾಲಿಡಲು ಹಿಂಜರಿಯುತ್ತಾರೆ. ಫಿನ್ಲೆಂಡ್‌ನಲ್ಲಿ ಇದು ಸತ್ಯವಾಗಿದೆ. ಇತರರು ಹೊಸ ಸ್ಥಳಗಳಿಗೆ ಹೋಗುವ ವಿಷಯದಲ್ಲಿ ಗಾಬರಿಪಡುತ್ತಾರೆ. ಒಂದು ಹೊಸ ರಾಜ್ಯ ಸಭಾಗೃಹವು ನಿರ್ಮಾಣವಾದಾಗ ಅಥವಾ ಈಗಾಗಲೇ ಅಸ್ತಿತ್ವದಲ್ಲಿದ್ದ ಸಭಾಗೃಹವನ್ನು ನವೀಕರಿಸಿದಾಗ, ಸಾಮಾನ್ಯವಾಗಿ ಒಂದು ಮುಕ್ತಗೃಹ ಆದರಾತಿಥ್ಯವನ್ನು ಏರ್ಪಡಿಸಲಾಗುತ್ತದೆ. ಆಗ ನೆರೆಯವರು ರಾಜ್ಯ ಸಭಾಗೃಹಕ್ಕೆ ಭೇಟಿಕೊಡುವಂತೆ ಮತ್ತು ಅವರು ಯೆಹೋವನ ಸಾಕ್ಷಿಗಳ ಚಟುವಟಿಕೆಗಳ ಕುರಿತು ಪರಿಚಯಮಾಡಿಕೊಳ್ಳುವಂತೆ ಒಂದು ವಿಶೇಷ ಪ್ರಯತ್ನವನ್ನು ಮಾಡಲಾಗುತ್ತದೆ.

ಒಂದು ಪ್ರದೇಶದಲ್ಲಿ, ಸಾಕ್ಷಿಗಳು ತಮ್ಮ ಹೊಸ ರಾಜ್ಯ ಸಭಾಗೃಹದ ಮುಕ್ತಗೃಹ ಆದರಾತಿಥ್ಯವನ್ನು ನಡೆಸುವ ದಿನವೇ ಪತ್ರಿಕಾ ವಿತರಣೆಯ ಕಾರ್ಯಕ್ರಮವನ್ನು ಏರ್ಪಡಿಸಿದರು. ಇಬ್ಬರು ಸಾಕ್ಷಿಗಳು ಒಬ್ಬ ವೃದ್ಧ ವ್ಯಕ್ತಿಯನ್ನು ಭೇಟಿಮಾಡಿದಾಗ, ತಾನು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಯನ್ನು ಓದಿ ಸಂತೋಷಿಸುತ್ತೇನೆಂದು ಅವರು ಹೇಳಿದರು. ಆಗ ಸಾಕ್ಷಿಗಳು ಮುಕ್ತಗೃಹ ಕಾರ್ಯಕ್ರಮದ ಬಗ್ಗೆ ಅವರಿಗೆ ಹೇಳಿ, ರಾಜ್ಯ ಸಭಾಗೃಹಕ್ಕೆ ಅವರನ್ನು ಕರೆದುಕೊಂಡುಹೋಗಲು ತಾವು ಸಿದ್ಧರಿದ್ದೇವೆಂದು ಹೇಳಿದರು. ತಾನು ಬರಲು ಸಂತೋಷಿಸುತ್ತೇನೆ ಎಂದು ಆ ವ್ಯಕ್ತಿ ಹೇಳಿದರು. ಆಗ, ಆ ಸಂಭಾಷಣೆಯನ್ನು ಕೇಳಿಸಿಕೊಳ್ಳುತ್ತಿದ್ದ ಅವರ ಹೆಂಡತಿ, “ನಾನೂ ನಿಮ್ಮ ಸಂಗಡ ಬರುತ್ತೇನೆ!” ಎಂದು ಕೂಗಿ ಹೇಳಿದರು.

ರಾಜ್ಯ ಸಭಾಗೃಹವನ್ನು ಪ್ರವೇಶಿಸಿದೊಡನೆ ಆ ವ್ಯಕ್ತಿಯು ಆಚೀಚೆ ನೋಡಿ, “ಇದು ಕಪ್ಪು ಬಣ್ಣ ಅಲ್ಲವೇ ಅಲ್ಲ. ಇದು ಸುಂದರವೂ ನಸುಬಣ್ಣದ್ದೂ ಆಗಿದೆ. ರಾಜ್ಯ ಸಭಾಗೃಹವು ಕಪ್ಪು ಬಣ್ಣದ್ದಾಗಿರುವುದೆಂದು ನನಗೆ ಹೇಳಲಾಗಿತ್ತು!” ಎಂದು ಹೇಳಿದರು. ಆ ದಂಪತಿಯು ಸ್ವಲ್ಪ ಸಮಯ ಅಲ್ಲಿದ್ದು, ಪ್ರದರ್ಶಿಸಲ್ಪಟ್ಟಿದ್ದ ಸಾಹಿತ್ಯಗಳಲ್ಲಿ ಕೆಲವನ್ನು ಕೇಳಿ ಪಡೆದುಕೊಂಡರು.

ಒಂದು ಸಭೆಯು ಅದರ ರಾಜ್ಯ ಸಭಾಗೃಹದ ಪ್ರತಿಷ್ಠಾಪನೆಯ ಸಂದರ್ಭದಲ್ಲಿನ ಮುಕ್ತಗೃಹ ಆದರಾತಿಥ್ಯದ ಕುರಿತು ಸ್ಥಳಿಕ ವಾರ್ತಾಪತ್ರಿಕೆಯಲ್ಲಿ ಪ್ರಕಟಿಸಲು ಬಯಸಿತು. ಆ ಸಂದರ್ಭದ ಕುರಿತಾಗಿ ತಿಳಿದೊಡನೆ ಆ ಪತ್ರಿಕೆಯ ಮುಖ್ಯ ಸಂಪಾದಕರು, ಆ ವಿಷಯದ ಕುರಿತು ಒಂದು ಲೇಖನವು ಬರೆಯಲ್ಪಡುವಂತೆ ಸೂಚಿಸಿದರು. ಅದಕ್ಕೆ ಸಹೋದರರು ಸಮ್ಮತಿಸಿದರು, ಮತ್ತು ಸ್ವಲ್ಪ ಸಮಯದಲ್ಲೇ ಆ ಸಂದರ್ಭದ ಕುರಿತು ಮತ್ತು ಯೆಹೋವನ ಸಾಕ್ಷಿಗಳ ಸ್ಥಳಿಕ ಸಭೆಯ ಚಟುವಟಿಕೆಗಳ ಕುರಿತಾದ ವಿವರಗಳನ್ನು ಒಳಗೊಂಡಿದ್ದ, ಅರ್ಧ ಪುಟದಷ್ಟು ಉದ್ದದ ಒಂದು ಲೇಖನವು ಆ ವಾರ್ತಾಪತ್ರಿಕೆಯಲ್ಲಿ ಪ್ರಕಟಿಸಲ್ಪಟ್ಟಿತು.

ಆ ಲೇಖನವು ಪ್ರಕಟವಾದ ಮೇಲೆ, ಒಬ್ಬ ವೃದ್ಧ ಸಾಕ್ಷಿಯನ್ನು ಭೇಟಿಯಾದ ಆಕೆಯ ನೆರೆಯಾಕೆಯು ಹೇಳಿದ್ದು: “ಯೆಹೋವನ ಸಾಕ್ಷಿಗಳ ಬಗ್ಗೆ ಇಂದು ವಾರ್ತಾಪತ್ರಿಕೆಯಲ್ಲಿ ಒಂದು ಬಹು ಉತ್ತಮವಾದ ಲೇಖನವು ಬಂದಿದೆ!” ಆಗ ಆ ಸಹೋದರಿಯು ಆಕೆಗೆ ಸಾಕ್ಷಿ ನೀಡಿ, ತರುವಾಯ ಆಕೆಯೊಂದಿಗೆ ಇಪ್ಪತ್ತನೆಯ ಶತಮಾನದಲ್ಲಿ ಯೆಹೋವನ ಸಾಕ್ಷಿಗಳು ಎಂಬ ಬ್ರೋಷರನ್ನು ನೀಡಲು ಶಕ್ತರಾದರು.

ಮುಕ್ತಗೃಹಗಳ ಮತ್ತು ಹೊಸ ರಾಜ್ಯ ಸಭಾಗೃಹಗಳ ಪ್ರತಿಷ್ಠಾಪನೆಯ ಸಂಬಂಧದಲ್ಲಿನ ಅಂಥ ಏರ್ಪಾಡುಗಳು, ಯೆಹೋವನ ಸಾಕ್ಷಿಗಳ ಬಗ್ಗೆ ಇರುವ ಕೆಲವು ತಪ್ಪು ಕಲ್ಪನೆಗಳನ್ನು ನಿವಾರಿಸಿದ್ದು ಮಾತ್ರವಲ್ಲದೆ, ಪ್ರಚಾರಕರು ಇನ್ನೂ ಹೆಚ್ಚು ಜನರನ್ನು ಕೂಟಗಳಿಗೆ ಆಮಂತ್ರಿಸುವಂತೆ ಉತ್ತೇಜಿಸಿ ಅವರನ್ನು ಹುರಿದುಂಬಿಸಿವೆ. ಹೌದು, ಫಿನ್ಲೆಂಡನ್ನೂ ಸೇರಿಸಿ ಅನೇಕ ದೇಶಗಳಲ್ಲಿ, ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹಗಳು ಎಲ್ಲರಿಗಾಗಿಯೂ ತೆರೆದಿವೆಯೆಂದು ಜನರು ತಿಳಿದುಕೊಳ್ಳುವಂತಾಗಿದೆ.