ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಸ್ಯಗಳಲ್ಲಿನ ಕುತೂಹಲ ಕೆರಳಿಸುವ ವಿನ್ಯಾಸಗಳು

ಸಸ್ಯಗಳಲ್ಲಿನ ಕುತೂಹಲ ಕೆರಳಿಸುವ ವಿನ್ಯಾಸಗಳು

ಸಸ್ಯಗಳಲ್ಲಿನ ಕುತೂಹಲ ಕೆರಳಿಸುವ ವಿನ್ಯಾಸಗಳು

ಅನೇಕ ಸಸ್ಯಗಳು ಸುರುಳಿ ರಚನಾಕ್ರಮದಲ್ಲಿ ಬೆಳೆಯುವುದನ್ನು ನೀವೆಂದಾದರೂ ಗಮನಿಸಿದ್ದೀರೊ? ಉದಾಹರಣೆಗೆ ಅನಾನಸನ್ನು ತೆಗೆದುಕೊಳ್ಳಿ. ಅದರ ಸಿಪ್ಪೆಯ ಮೇಲಿರುವ ವಜ್ರಾಕಾರದ ಗುರುತುಗಳು ಒಂದು ದಿಕ್ಕಿನಲ್ಲಿ 8, ವಿರುದ್ಧ ದಿಕ್ಕಿನಲ್ಲಿ 5 ಇಲ್ಲವೆ 13ರಂತೆ ಸುರುಳಿ ರಚನೆಯಲ್ಲಿ ಸುತ್ತು ಹೋಗುತ್ತಿರಬಹುದು. (ಚಿತ್ರ 1ನ್ನು ನೋಡಿ.) ನೀವು ಸೂರ್ಯಕಾಂತಿ ಹೂವಿನ ಮಧ್ಯದಲ್ಲಿರುವ ಬೀಜಗಳನ್ನು ನೋಡುವಲ್ಲಿ, ಅವುಗಳಲ್ಲಿ 55 ಇಲ್ಲವೆ 89 ಅಥವಾ ಅದಕ್ಕಿಂತಲೂ ಹೆಚ್ಚು ಸುರುಳಿ ರಚನೆಗಳು ಒಂದರ ಮೇಲೊಂದು ದಾಟುವುದನ್ನು ನೋಡಬಹುದು. ಅಷ್ಟೇಕೆ, ಹೂಕೋಸಿನಲ್ಲೂ ನೀವು ಸುರುಳಿ ರಚನೆಯನ್ನು ನೋಡಬಹುದು. ಇವುಗಳನ್ನು ಗಮನಿಸುವುದು ನಿಮಗೆ ಒಮ್ಮೆ ರೂಢಿಯಾಗಿಬಿಟ್ಟರೆ, ಹಣ್ಣುತರಕಾರಿಗಳ ಅಂಗಡಿಗೆ ಹೋಗುವುದು ನಿಮಗೆ ತುಂಬ ಆಸಕ್ತಿಕರವಾಗಿರಬಹುದು. ಆದರೆ ಸಸ್ಯಗಳು ಈ ರೀತಿಯಲ್ಲಿ ಬೆಳೆಯುವುದೇಕೆ? ಸುರುಳಿಗಳ ಸಂಖ್ಯೆಗೆ ಯಾವುದೇ ಮಹತ್ವವಿದೆಯೊ?

ಸಸ್ಯಗಳು ಹೇಗೆ ಬೆಳೆಯುತ್ತವೆ?

ಹೆಚ್ಚಿನ ಸಸ್ಯಗಳ ದಂಟುಗಳು, ಎಲೆಗಳು ಮತ್ತು ಹೂವುಗಳಂಥ ಹೊಸ ಸಸ್ಯಾಂಗಗಳು, ಕಾಂಡದ ತುದಿಯಲ್ಲಿರುವ ಸಸ್ಯೋತಕ (ಮೆರಿಸ್ಟೆಮ್‌) ಎಂಬ ಬೆಳವಣಿಗೆಯ ಒಂದು ಚಿಕ್ಕ ಕೇಂದ್ರಬಿಂದುವಿನಿಂದ ಉತ್ಪತ್ತಿಯಾಗುತ್ತವೆ. ಮೂಲಾಂಗ (ಪ್ರೈಮಾರ್ಡಿಅಮ್‌) ಎಂದು ಕರೆಯಲ್ಪಡುವ ಪ್ರತಿಯೊಂದು ಹೊಸ ಸಸ್ಯಾಂಗವು, ಹಿಂದಿನ ಬೆಳವಣಿಗೆಯೊಂದಿಗೆ ಒಂದು ಕೋನವನ್ನು ರಚಿಸುತ್ತಾ ಸಸ್ಯದ ಮಧ್ಯದಿಂದ ಒಂದು ಹೊಸ ದಿಕ್ಕಿನಲ್ಲಿ ಬೆಳೆಯುತ್ತದೆ. * (ಚಿತ್ರ 2ನ್ನು ನೋಡಿ.) ಹೆಚ್ಚಿನ ಸಸ್ಯಗಳಲ್ಲಿ ಹೊಸ ಭಾಗಗಳು ಒಂದು ಅಪೂರ್ವವಾದ ಕೋನದಲ್ಲಿ ಬೆಳೆಯುತ್ತವೆ ಮತ್ತು ಇದರಿಂದಾಗಿಯೇ ಸುರುಳಿ ರಚನೆಯು ಉಂಟಾಗುತ್ತದೆ. ಆ ಅಪೂರ್ವ ಕೋನ ಯಾವುದು?

ಈ ಸಮಸ್ಯೆಯನ್ನು ಪರಿಗಣಿಸಿರಿ: ನೀವೊಂದು ಸಸ್ಯವನ್ನು, ಅದರ ಬೆಳವಣಿಗೆಯ ಬಿಂದುವಿನ ಸುತ್ತಲೂ ಹೊಸ ಭಾಗಗಳನ್ನು ಒತ್ತಾಗಿ ಏರ್ಪಡಿಸುತ್ತಾ, ಯಾವುದೇ ಸ್ಥಳವು ವ್ಯರ್ಥವಾಗದ ಹಾಗೆ ಬೆಳೆಸಲು ಪ್ರಯತ್ನಿಸುತ್ತಿದ್ದೀರೆಂದು ಊಹಿಸಿಕೊಳ್ಳಿ. ಪ್ರತಿಯೊಂದು ಹೊಸ ಸಸ್ಯಾಂಗವನ್ನು ಅದರ ಹಿಂದಿನ ಸಸ್ಯಾಂಗದಿಂದ, ಒಂದು ಆವರ್ತನದ 2/5 ಡಿಗ್ರಿ ಕೋನದಲ್ಲಿ (144 ಡಿಗ್ರಿ) ಬೆಳೆಸುತ್ತೀರೆಂದು ಇಟ್ಟುಕೊಳ್ಳಿ. ಆದರೆ ಆಗ ಪ್ರತಿ ಐದನೆಯ ಸಸ್ಯಾಂಗವು, ಅದೇ ಜಾಗದಲ್ಲಿ ಮತ್ತು ಒಂದೇ ದಿಕ್ಕಿನಲ್ಲಿ ಬೆಳೆಯುವ ಸಮಸ್ಯೆಯನ್ನು ನೀವು ಎದುರಿಸುವಿರಿ. ಅವು ಪಂಕ್ತಿಗಳನ್ನು ರಚಿಸಿ, ಆ ಪಂಕ್ತಿಗಳ ನಡುವೆ ಇರುವ ಸ್ಥಳ ವ್ಯರ್ಥವಾಗುವುದು. (ಚಿತ್ರ 3ನ್ನು ನೋಡಿ.) ಒಂದು ಆವರ್ತನದ ಯಾವುದೇ ಭಿನ್ನಾಂಕವು, ಜಾಗವನ್ನು ಪೂರ್ಣವಾಗಿ ಉಪಯೋಗಿಸದೆ ಪಂಕ್ತಿಗಳಾಗಿ ಪರಿಣಮಿಸುತ್ತದೆಂಬುದು ಸತ್ಯ. ಆದರೆ ಸರಿಸುಮಾರು 137.5 ಡಿಗ್ರಿಯ “ಸುವರ್ಣ ಕೋನ”ವೆಂದು ಕರೆಯಲಾಗುವ ಕೋನದಲ್ಲಿ ಮಾತ್ರ, ಹೊಸ ಸಸ್ಯಾಂಗಗಳು ಉತ್ತಮವಾಗಿ ಒತ್ತಾದ ರೀತಿಯಲ್ಲಿ ಬೆಳೆಯುತ್ತವೆ. (ಚಿತ್ರ 5ನ್ನು ನೋಡಿ.) ಈ ಕೋನದ ವಿಶೇಷತೆಯೇನು?

ಈ ಸುವರ್ಣ ಕೋನವು ಆದರ್ಶವಾದದ್ದು ಏಕೆಂದರೆ ಅದನ್ನು ಒಂದು ಆವರ್ತನದ ಸರಳ ಭಿನ್ನಾಂಕವಾಗಿ ವ್ಯಕ್ತಪಡಿಸಲಾಗುವುದಿಲ್ಲ. 5/8 ಭಿನ್ನಾಂಕವು ಅದಕ್ಕೆ ಹತ್ತಿರವಿದೆ, 8/13 ಇನ್ನೂ ಹತ್ತಿರ ಹಾಗೂ 13/21 ಮತ್ತಷ್ಟು ಹತ್ತಿರವಿದೆ. ಆದರೆ ಯಾವುದೇ ಒಂದು ಭಿನ್ನಾಂಕವು ಒಂದು ಆವರ್ತನದಲ್ಲಿನ ಸುವರ್ಣ ಅನುಪಾತವನ್ನು ನಿಖರವಾಗಿ ಕೊಡುವುದಿಲ್ಲ. ಹೀಗಿರುವುದರಿಂದ ಈ ಸುವರ್ಣ ಕೋನದಲ್ಲಿ ಒಂದು ಸಸ್ಯೋತಕದಿಂದ ಒಂದು ಹೊಸ ಸಸ್ಯಾಂಗವು ಹಿಂದಿನ ಬೆಳವಣಿಗೆಗೆ ಅನುಪಾತದಲ್ಲಿ ಬೆಳೆಯಲಾರಂಭಿಸುವಾಗ, ಯಾವುದೇ ಎರಡು ಬೆಳವಣಿಗೆಗಳು ಸರಿಯಾಗಿ ಒಂದೇ ದಿಕ್ಕಿನಲ್ಲಿ ಎಂದಿಗೂ ಬೆಳೆಯವು. (ಚಿತ್ರ 4ನ್ನು ನೋಡಿ.) ಇದರ ಫಲಿತಾಂಶವಾಗಿ, ಈ ಮೂಲಾಂಗಗಳು ಒಂದು ಕೇಂದ್ರದಿಂದ ಹೊರಟು ಕಿರಣಗಳಂತೆ ಹರಡುವುದರ ಬದಲಿಗೆ ಸುರುಳಿಯಾಗಿ ಬೆಳೆಯುತ್ತವೆ.

ಗಮನಾರ್ಹ ಸಂಗತಿಯೇನೆಂದರೆ, ಒಂದು ಕೇಂದ್ರಬಿಂದುವಿನಿಂದ ಸಸ್ಯಾಂಗಗಳು ಬೆಳೆಯುವುದನ್ನು ಕಂಪ್ಯೂಟರ್‌ನಲ್ಲಿ ಅನುಕರಣೆಮಾಡುವಾಗ, ಹೊಸ ಬೆಳವಣಿಗಗಳ ಮಧ್ಯೆ ಕೋನವು ಅತ್ಯುಚ್ಚ ಮಟ್ಟದಲ್ಲಿ ನಿಖರವಾಗಿರುವಲ್ಲಿ ಮಾತ್ರ ಗುರುತಿಸಬಹುದಾದಂಥ ಸುರುಳಿ ರಚನೆ ಉಂಟಾಗುತ್ತದೆ. ಸುವರ್ಣ ಕೋನದಿಂದ 1/10 ಡಿಗ್ರಿಯಷ್ಟು ವ್ಯತ್ಯಾಸವಾದರೂ ಆ ಸುರುಳಿ ರಚನೆ ಬರಲು ಸಾಧ್ಯವಿಲ್ಲ.​—⁠ಚಿತ್ರ 5ನ್ನು ನೋಡಿ.

ಒಂದು ಹೂವಿನಲ್ಲಿ ಎಷ್ಟು ದಳಗಳಿರಬೇಕು?

ಸುವರ್ಣ ಕೋನದ ಮೇಲಾಧರಿತವಾದ ಬೆಳವಣಿಗೆಯಿಂದಾಗಿ ಉಂಟಾಗುವ ಸುರುಳಿಗಳ ಸಂಖ್ಯೆಯು ಸಾಮಾನ್ಯವಾಗಿ, ಪ್ರಸಿದ್ಧವಾದ ಫೀಬನಾಚೀ ಸಂಖ್ಯಾ ಶ್ರೇಣಿಯಲ್ಲಿನ ಒಂದು ಸಂಖ್ಯೆಯಾಗಿರುತ್ತದೆ. ಈ ಶ್ರೇಣಿಯನ್ನು, 13ನೇ ಶತಮಾನದ ಲೇಒನಾರ್ಡೋ ಫೀಬನಾಚೀ ಎಂಬ ಇಟ್ಯಾಲಿಯನ್‌ ಗಣಿತಜ್ಞನು ಪ್ರಥಮವಾಗಿ ವರ್ಣಿಸಿದನು. ಈ ಸಂಖ್ಯಾ ಶ್ರೇಣಿಯಲ್ಲಿ, 1ರ ನಂತರ ಬರುವ ಪ್ರತಿಯೊಂದು ಸಂಖ್ಯೆಯು, ಅದರ ಹಿಂದಿನ ಎರಡು ಸಂಖ್ಯೆಗಳ ಮೊತ್ತವಾಗಿರುತ್ತದೆ​—⁠1, 1, 2, 3, 5, 8, 13, 21, 34, 55 ಇತ್ಯಾದಿ.

ಸುರುಳಿಯಾಗಿ ಬೆಳೆಯುವ ನಮೂನೆಯುಳ್ಳ ಅನೇಕ ಸಸ್ಯಗಳ ಹೂವುಗಳಿಗೆ, ಫೀಬನಾಚೀ ಸಂಖ್ಯೆಯಲ್ಲಿನ ದಳಗಳಿರುತ್ತವೆ. ಕೆಲವು ಅವಲೋಕನಗಾರರಿಗನುಸಾರ ಕಾಗೆಹೆಜ್ಜೆ (ಬಟರ್‌ಕಪ್ಸ್‌) ಹೂವುಗಳಿಗೆ 5 ದಳಗಳು, ನೆತ್ತರು ಗಿಡದ ಹೂವಿಗೆ 8 ದಳಗಳು, ವಿಷ ದತ್ತೂರಿ ಗಿಡದ ಹೂವಿಗೆ  13, ಸೀಮೆ ಸೇವಂತಿಗೆ (ಆ್ಯಸ್ಟರ್‌) 21, ಗೂಳಿಗಣ್ಣು ಡೆಯ್ಸಿಗೆ 34 ಮತ್ತು ಮೈಕಲ್‌ಮಾಸ್‌ ಡೇಸೀಗಳಿಗೆ 55ರಿಂದ 89 ದಳಗಳಿರುವುದು ಸಾಧಾರಣ. (ಚಿತ್ರ 6ನ್ನು ನೋಡಿ.) ಅನೇಕವೇಳೆ ಹಣ್ಣುಹಂಪಲುಗಳಿಗೆ, ಫೀಬನಾಚೀ ಸಂಖ್ಯೆಗಳಿಗೆ ಸರಿಹೋಲುವ ವೈಶಿಷ್ಟ್ಯಗಳಿರುತ್ತವೆ. ಉದಾಹರಣೆಗೆ, ಬಾಳೆಹಣ್ಣನ್ನು ಅಡ್ಡವಾಗಿ ಕತ್ತರಿಸಿದಾಗ ಅದರಲ್ಲಿ ಐದು ಭಾಗಗಳ ಒಂದು ವಿನ್ಯಾಸವಿರುತ್ತದೆ.

‘ಒಂದೊಂದು ವಸ್ತುವನ್ನು ಅಂದವಾಗಿ ನಿರ್ಮಿಸಿದ್ದಾನೆ’

ಈ ಸುವರ್ಣ ಅನುಪಾತವನ್ನು ಕಲಾವಿದರು ಎಷ್ಟೋ ಸಮಯದಿಂದ ನಯನಮನೋಹರವೆಂದು ಎಣಿಸಿದ್ದಾರೆ. ಸಸ್ಯಗಳಲ್ಲಿ ಈ ಕುತೂಹಲಕಾರಿ ಕೋನದಲ್ಲಿಯೇ ಹೊಸ ಸಸ್ಯಾಂಗಗಳು ಬೆಳೆಯುವಂತೆ ಮಾಡುವಂಥದ್ದು ಯಾವುದು? ಇದು, ಬುದ್ಧಿವಂತಿಕೆಯಿಂದ ಮಾಡಲ್ಪಟ್ಟಿರುವ ವಿನ್ಯಾಸಕ್ಕೆ ಜೀವರಾಶಿಗಳಲ್ಲಿ ಇನ್ನೊಂದು ಉದಾಹರಣೆಯಾಗಿದೆ ಎಂದು ಅನೇಕರು ತೀರ್ಮಾನಿಸುತ್ತಾರೆ.

ಜೀವರಾಶಿಗಳಲ್ಲಿನ ವಿನ್ಯಾಸ ಮತ್ತು ಅವುಗಳಲ್ಲಿ ಸಂತೋಷಪಡುವಂತೆ ನಮಗಿರುವ ಸಾಮರ್ಥ್ಯದ ಬಗ್ಗೆ ಯೋಚಿಸುವಾಗ, ಇದೆಲ್ಲವೂ ನಾವು ಜೀವನದಲ್ಲಿ ಆನಂದಿಸಬೇಕೆಂದು ಬಯಸುವ ಒಬ್ಬ ಸೃಷ್ಟಿಕರ್ತನ ಕೈಕೃತಿಯಾಗಿದೆ ಎಂಬುದನ್ನು ಅನೇಕರು ಗ್ರಹಿಸುತ್ತಾರೆ. ನಮ್ಮ ಆ ಸೃಷ್ಟಿಕರ್ತನ ಬಗ್ಗೆ ಬೈಬಲ್‌ ಹೇಳುವುದು: “[ಆತನು] ಒಂದೊಂದು ವಸ್ತುವನ್ನು . . . ಅಂದವಾಗಿ ನಿರ್ಮಿಸಿದ್ದಾನೆ.”​—⁠ಪ್ರಸಂಗಿ 3:⁠11. (9/06)

[ಪಾದಟಿಪ್ಪಣಿ]

^ ಪ್ಯಾರ. 4 ಕುತೂಹಲದ ಸಂಗತಿಯೇನೆಂದರೆ, ಸೂರ್ಯಕಾಂತಿ ಹೂವು ಅಸಾಮಾನ್ಯವಾಗಿದೆ. ಬೀಜಗಳಾಗಿ ಬದಲಾಗುವ ಅದರ ಕಿರಿಹೂವುಗಳು, ಗೊಂಡೆಯ ಮಧ್ಯದಿಂದಲ್ಲ ಬದಲಾಗಿ ಹೊರ ಅಂಚಿನಿಂದ ಸುರುಳಿಗಳನ್ನು ಉಂಟುಮಾಡಲಾರಂಭಿಸುತ್ತವೆ.

[ಪುಟ 24ರಲ್ಲಿರುವ ರೇಖಾಕೃತಿಗಳು]

[ಪುಟ 24, 25ರಲ್ಲಿರುವ ರೇಖಾಕೃತಿಗಳು]

Figure 1

(ಪ್ರಕಾಶನ ನೋಡಿ)

Figure 2

(ಪ್ರಕಾಶನ ನೋಡಿ)

Figure 3

(ಪ್ರಕಾಶನ ನೋಡಿ)

Figure 4

(ಪ್ರಕಾಶನ ನೋಡಿ)

Figure 5

(ಪ್ರಕಾಶನ ನೋಡಿ)

Figure 6

(ಪ್ರಕಾಶನ ನೋಡಿ)

[ಪುಟ 24ರಲ್ಲಿರುವ ಚಿತ್ರ]

ಸಸ್ಯೋತಕದ ನಿಕಟ ನೋಟ

[ಕೃಪೆ]

R. Rutishauser, University of Zurich, Switzerland

[ಪುಟ 25ರಲ್ಲಿರುವ ಚಿತ್ರ ಕೃಪೆ]

ಬಿಳಿಹೂವು: Thomas G. Barnes @ USDA-NRCS PLANTS Database