ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾರತದಲ್ಲಿ ಚೀನಾದ ಮೀನಿನ ಬಲೆಗಳು

ಭಾರತದಲ್ಲಿ ಚೀನಾದ ಮೀನಿನ ಬಲೆಗಳು

ಭಾರತದಲ್ಲಿ ಚೀನಾದ ಮೀನಿನ ಬಲೆಗಳು

ಭಾರತದಲ್ಲಿನ ಎಚ್ಚರ! ಸುದ್ದಿಗಾರರಿಂದ

ಭಾರತದ ಪಶ್ಚಿಮ ತೀರದಲ್ಲಿ, ಭಾರತ ಉಪಖಂಡದ ದಕ್ಷಿಣ ತುದಿಯಿಂದ 250 ಕಿಲೊಮೀಟರ್‌ ದೂರದಲ್ಲಿ ಕೊಚ್ಚಿ ಎಂಬ ನಗರವು ಇದೆ. ಈ ಮುಂಚೆ ಅದಕ್ಕೆ ಕೊಚಿನ್‌ ಎಂಬ ಹೆಸರಿತ್ತು. ಅಲ್ಲಿರುವ ಕಡಲಚಾಚಿನ ಎರಡು ಪಾರ್ಶ್ವಗಳ ಉದ್ದಕ್ಕೂ, ಅಸಾಧಾರಣವಾದ ಚೀನೀ ಮಾದರಿಯ ಮೀನಿನ ಬಲೆಗಳು ದಡದಲ್ಲಿವೆ. ಈ ಕ್ಯಾಂಟಿಲಿವರ್‌ ಬಲೆಗಳು ಇಲ್ಲಿಗೆ ಹೇಗೆ ಬಂದವು?

ಈ ಪ್ರಾಂತದಲ್ಲಿ ಚೀನೀ ಜನರು ಸಾ.ಶ. ಎಂಟನೆಯ ಶತಮಾನದಿಂದಲೂ ವಾಸಿಸುತ್ತಿದ್ದರು. ಇದಲ್ಲದೆ 1400 ಇಸವಿಗೂ ಮುಂಚೆ, ಕುಬ್ಲೈ ಖಾನ್‌ನ ಆಸ್ಥಾನದ ಚೀನೀ ವ್ಯಾಪಾರಿಗಳು ಈ ರೀತಿಯ ಬಲೆಗಳನ್ನು ಮೊದಲ ಬಾರಿಗೆ ಕೊಚಿನ್‌ಗೆ ತಂದರು ಎಂದು ಹೇಳಲಾಗುತ್ತದೆ. ಈ ಬಲೆಗಳನ್ನು ಉಪಯೋಗಿಸಿ ಕೊಚಿನ್‌ನ ಸುತ್ತಲೂ ಇರುವ ನೀರಿನಲ್ಲಿ ದಡದ ಹತ್ತಿರವೇ ಇರುವ ಮೀನುಗಳನ್ನು ಹಿಡಿಯಸಾಧ್ಯವಿದೆ. ಹೀಗೆ ಈ ಉದ್ದವಾದ, ಮಾನವಬಲದಿಂದ ನಿಯಂತ್ರಿಸಲ್ಪಡುವ ಮೀನು ಹಿಡಿಯುವ ಯಂತ್ರಗಳು, ಒಂದು ಶತಮಾನಕ್ಕಿಂತಲೂ ಹೆಚ್ಚಿನ ಸಮಯದ ವರೆಗೆ ಅಂದರೆ ಅರಬ್ಬಿಗಳು ಚೀನೀಯರನ್ನು ಓಡಿಸುವ ವರೆಗೆ ತುಂಬ ಸಹಾಯಕರವಾಗಿದ್ದವು.

ಚೀನೀಯರು ಹೋದ ಬಳಿಕ ಆ ಮೀನಿನ ಬಲೆಗಳನ್ನು ತೆಗೆದುಹಾಕಲಾಯಿತು. ಆದರೆ 16ನೆಯ ಶತಮಾನದ ಆರಂಭದಲ್ಲಿ, ಪೋರ್ಚುಗೀಸರು ಅರಬ್ಬಿಗಳನ್ನು ಓಡಿಸಿದರು. ಈ ಪೋರ್ಚುಗೀಸರೇ ಆ ಬಲೆಗಳನ್ನು ಪುನಃ ಕೊಚಿನ್‌ಗೆ ಪರಿಚಯಿಸಿದರು ಎಂಬುದಂತೂ ಸ್ಪಷ್ಟ. ಅವರು ಈ ಬಲೆಗಳನ್ನು ಆ ಸಮಯದಲ್ಲಿ ಪೋರ್ಚುಗೀಸರ ದ್ವೀಪ ವಸಾಹತುವಾಗಿದ್ದ, ಚೀನಾದ ಆಗ್ನೇಯ ಭಾಗದಲ್ಲಿರುವ ಮಕಾಓದಿಂದ ತೆಗೆದುಕೊಂಡು ಬಂದರು.

ಈ ವಿಧಾನವು ಶತಮಾನಗಳಷ್ಟು ಹಳೆಯದಾಗಿರುವುದಾದರೂ, ಚೀನಾದ ಮೀನಿನ ಬಲೆಗಳು ಈಗಲೂ ತುಂಬ ಉಪಯೋಗಕ್ಕೆ ಬರುತ್ತವೆ. ಅಷ್ಟುಮಾತ್ರವಲ್ಲ, ಅವುಗಳ ಮೂಲ ವಿನ್ಯಾಸ ಅಥವಾ ಉಪಯೋಗಿಸುವ ರೀತಿಯಲ್ಲಿ ಇಷ್ಟರ ತನಕ ಯಾವುದೇ ಬದಲಾವಣೆಯಾಗಿಲ್ಲ. ಮತ್ತು ಇವು ಅನೇಕ ಬೆಸ್ತರಿಗೆ ಜೀವನೋಪಾಯವನ್ನೂ ಅನೇಕ ಜನರಿಗೆ ಆಹಾರವನ್ನೂ ಒದಗಿಸುವುದನ್ನು ಮುಂದುವರಿಸಿವೆ. ವಾಸ್ತವದಲ್ಲಿ, ಒಂದು ಬಲೆಯಲ್ಲಿ ಹಿಡಿಯಲ್ಪಡುವ ಮೀನಿನ ರಾಶಿಯು ಎಷ್ಟಿರುತ್ತದೆಂದರೆ, ಇಡೀ ಹಳ್ಳಿಗೇ ಅದನ್ನು ಹಂಚಬಹುದು. ಈ ಬಲೆಗಳು ತುಂಬ ಉಪಯುಕ್ತವಾಗಿವೆ ಮಾತ್ರವಲ್ಲ, ಇವು ನೋಡಲೂ ತುಂಬ ಸುಂದರವಾಗಿವೆ. ವಿಶೇಷವಾಗಿ ಬೆಳಗ್ಗಿನ ಹೊಂಬಣ್ಣದ ಆಕಾಶ ಅಥವಾ ಸಂಜೆಯ ಆಕಾಶಕ್ಕೆ ಎದುರಾಗಿ ಇವುಗಳನ್ನು ನೋಡಿದಾಗ ಇವುಗಳ ಛಾಯಾರೂಪವು ಇನ್ನೂ ಸುಂದರವಾಗಿ ಕಾಣುತ್ತದೆ.

ಇವುಗಳು ಹೇಗೆ ಕೆಲಸಮಾಡುತ್ತವೆ?

ಈ ದೊಡ್ಡ ಗಾತ್ರದ ಚೀನೀ ಬಲೆಗಳಿಗೆ ಮರದ ಚೌಕಟ್ಟು ಇರುತ್ತದೆ. ಈ ಚೌಕಟ್ಟಿನ ಮುಂಭಾಗದಲ್ಲಿ ತಿರುಗುಗೂಟಗಳಿರುತ್ತವೆ. ಈ ತಿರುಗುಗೂಟಗಳಲ್ಲಿರುವ ಕಂಬಗಳ ಒಂದು ಪಕ್ಕದಲ್ಲಿ ಬಲೆ ಮತ್ತು ಇನ್ನೊಂದು ಪಕ್ಕದಲ್ಲಿ ಪ್ರತಿಭಾರವಿರುತ್ತದೆ. ಇದರಿಂದಾಗಿ ಬಲೆಯ ಭಾರ ಹಾಗೂ ಹಿಡಿಯಲ್ಪಟ್ಟ ಮೀನಿನ ಭಾರವು ಸಮತೂಕಗೊಳಿಸಲ್ಪಡುತ್ತದೆ. ಈ ಬಲೆಯನ್ನು ಉಪಯೋಗಿಸದೆ ಇದ್ದಾಗ, ಇದನ್ನು ಹಾಗೂ ಇದಕ್ಕೆ ಆಧಾರವಾಗಿರುವ ಆಧಾರಕಟ್ಟನ್ನು ನೀರಿನಿಂದ ಸ್ವಲ್ಪ ಮೇಲೆ ತೂಗುಹಾಕಲಾಗುತ್ತದೆ. ಮೀನುಹಿಡಿಯುವ ಕೆಲಸವು ನಸುಕಿನಲ್ಲಿಯೇ ಆರಂಭವಾಗುತ್ತದೆ ಮತ್ತು ನಾಲ್ಕು ಅಥವಾ ಐದು ಗಂಟೆಗಳ ತನಕ ನಡೆಯುತ್ತದೆ. ಬಲೆಗಳನ್ನು ನಿಧಾನವಾಗಿ ನೀರಿನೊಳಗೆ ಇಳಿಸಲಾಗುತ್ತದೆ. ಬಲೆಗಳನ್ನು ಕೆಳಕ್ಕೆ ಇಳಿಸಲು, ಈ ಸಮತೂಕ ವ್ಯವಸ್ಥೆಯ ವಿರುದ್ಧ ದಿಕ್ಕಿನಲ್ಲಿ ಸಿಕ್ಕಿಸಲ್ಪಟ್ಟಿರುವ ಭಾರಗಳನ್ನು ಬೆಸ್ತರು ಸರಿಹೊಂದಿಸುತ್ತಾರೆ ಅಥವಾ ಬೆಸ್ತರ ತಂಡದ ಮುಖ್ಯಸ್ಥನು ಬಲೆಯ ಮಧ್ಯದ ಕಂಬದ ಮೇಲೆ ನಡೆಯುತ್ತಾನೆ. 5ರಿಂದ 20 ನಿಮಿಷಗಳ ವರೆಗೆ ಬಲೆಯನ್ನು ನೀರಿನಲ್ಲಿ ಬಿಡಲಾಗುತ್ತದೆ. ಆಮೇಲೆ ದಡಕ್ಕೆ ಸಮೀಪದಲ್ಲೇ ಈಜಾಡುತ್ತಿರುವ ಮೀನುಗಳನ್ನು ಗೋರುತ್ತಾ, ಬಲೆಯನ್ನು ನಿಧಾನವಾಗಿ ಮೇಲೆತ್ತಲಾಗುತ್ತದೆ. ಅನೇಕ ವರ್ಷಗಳ ಅನುಭವದಿಂದಾಗಿ, ಯಾವ ಕ್ಷಣದಲ್ಲಿ ಬಲೆಯನ್ನು ಮೇಲೆಳೆಯಬೇಕೆಂಬುದು ಬೆಸ್ತರ ತಂಡದ ಮುಖ್ಯಸ್ಥನಿಗೆ ಗೊತ್ತಿರುತ್ತದೆ.

ಮುಖ್ಯಸ್ಥನ ಸಂಜ್ಞೆಯ ಮೇರೆಗೆ ಐದು ಅಥವಾ ಆರು ಮಂದಿ ಪುರುಷರಿಂದ ಕೂಡಿದ ತಂಡದ ಇತರ ಸದಸ್ಯರು, ಯಾವ ಹಗ್ಗಗಳಿಗೆ ಪ್ರತಿಭಾರದ ಕಲ್ಲುಗುಂಡುಗಳನ್ನು ಕಟ್ಟಲಾಗಿದೆಯೋ ಆ ಹಗ್ಗಗಳನ್ನು ಕೆಳಗೆ ಎಳೆಯುವ ಮೂಲಕ ಆ ಬಲೆಯನ್ನು ಮೇಲಕ್ಕೆಳೆಯುತ್ತಾರೆ. ಬಲೆಯು ಮೇಲೇರಿದಂತೆ ಮೊದಲು ಅದರ ತುದಿಗಳು ಮೇಲೆ ಬರುತ್ತವೆ. ಆಗ ಆ ಬಲೆಯು ಬಟ್ಟಲಿನ ಆಕಾರದಲ್ಲಿದ್ದು ಅದರೊಳಗೆ ಮೀನುಗಳಿರುತ್ತವೆ. ಬೆಸ್ತರಿಗೆ ಎಷ್ಟು ರೋಮಾಂಚನವಾಗುತ್ತದೆ! ತುಂಬ ಹೆಚ್ಚು ಮೀನುಗಳನ್ನು ಹಿಡಿದ ಬಳಿಕ, ತಮ್ಮ ಸಂತೋಷವನ್ನು ವ್ಯಕ್ತಪಡಿಸಲಿಕ್ಕಾಗಿ ಅವರು ಪರಸ್ಪರ ಬೆನ್ನುತಟ್ಟಿಕೊಳ್ಳುತ್ತಾರೆ. ತದನಂತರ ಆ ಮೀನುಗಳನ್ನು ವ್ಯಾಪಾರಿಗಳಿಗೆ, ಗೃಹಿಣಿಯರಿಗೆ ಮತ್ತು ಅಪರೂಪಕ್ಕೆ ಬರುವ ಪ್ರವಾಸಿಗರಿಗೆ ಹರಾಜುಹಾಕಲಾಗುತ್ತದೆ.

ಚೀನೀಯರು, ಅರಬ್ಬಿಗಳು, ಮತ್ತು ಪೋರ್ಚುಗೀಸರು ಇಲ್ಲಿಗೆ ಬಂದುಹೋಗಿದ್ದಾರೆ. ಆದರೆ ಚೀನಾದ ಮೀನಿನ ಬಲೆಗಳು ಮಾತ್ರ 600 ವರ್ಷಗಳ ಮುಂಚೆ ಅವು ಕೊಚ್ಚಿಯ ಜಲಮಾರ್ಗಗಳ ಉದ್ದಕ್ಕೂ ಹೇಗೆ ಕೆಳಕ್ಕೂ ಮೇಲಕ್ಕೂ ತೂಗಾಡುತ್ತಿದ್ದವೋ ಅದೇ ರೀತಿಯಲ್ಲಿ ಈಗಲೂ ತಮ್ಮ ಕೆಲಸವನ್ನು ಮುಂದುವರಿಸುತ್ತಿವೆ.

[ಪುಟ 31ರಲ್ಲಿರುವ ಭೂಪಟ]

ಕೊಚ್ಚಿ

[ಕೃಪೆ]

Mountain High Maps® Copyright © 1997 Digital Wisdom, Inc.