ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಟಿವಿ ಸಮಾಚಾರ—ಅದರಲ್ಲಿ ನಿಜವಾದ ಸಮಾಚಾರ ಎಷ್ಟಿದೆ?

ಟಿವಿ ಸಮಾಚಾರ—ಅದರಲ್ಲಿ ನಿಜವಾದ ಸಮಾಚಾರ ಎಷ್ಟಿದೆ?

ಟಿವಿ ಸಮಾಚಾರ—ಅದರಲ್ಲಿ ನಿಜವಾದ ಸಮಾಚಾರ ಎಷ್ಟಿದೆ?

ಅಮೆರಿಕದ 52 ಮಹಾನಗರಗಳಲ್ಲಿ ಸಮಾಚಾರವನ್ನು ಪ್ರಸಾರ ಮಾಡುವ 102 ಸ್ಥಳಿಕ ದೂರದರ್ಶನ ಕೇಂದ್ರಗಳಿವೆ. ಅವುಗಳು ಪ್ರಸಾರ ಮಾಡುವ ಸಮಾಚಾರದಲ್ಲಿ ಅಡಕವಾಗಿರುವ ಮಾಹಿತಿ ಮತ್ತು ಪ್ರಸ್ತುತಪಡಿಸಲಾಗುವ ವಿಷಯಗಳನ್ನು ಒಂದು ಪ್ರಸಾರ ಮಾಧ್ಯಮದ ಕಾರ್ಯಕ್ರಮಗಳ ಮೇಲೆ ನಿಗಾ ಇಡುವ ತಂಡದವರು ವಿಶ್ಲೇಷಿಸಿದ ನಂತರ ಕಂಡುಕೊಂಡದ್ದೇನೆಂದರೆ, ಕಾರ್ಯಕ್ರಮದಲ್ಲಿ ಕೇವಲ 41.3 ಪ್ರತಿಶತದಷ್ಟು ಮಾಹಿತಿ ಮಾತ್ರ ನಿಜವಾಗಿಯೂ ಅಗತ್ಯವಾಗಿರುವ ಸಮಾಚಾರವಾಗಿತ್ತು. ಹಾಗಾದರೆ ಉಳಿದ ಸಮಾಚಾರವು ಯಾವ ರೀತಿಯದ್ದಾಗಿತ್ತು?

ಸ್ಥಳಿಕ ಟಿವಿ ಸಮಾಚಾರ ಪ್ರಸಾರವಾಗುವ ವೇಳೆಯಲ್ಲಿ, ಸರಾಸರಿ 30.4 ಪ್ರತಿಶತದಷ್ಟು ಸಮಯವು ಜಾಹೀರಾತುಗಳಿಂದ ತುಂಬಿರುತ್ತದೆ. ನಿಜ ಹೇಳಬೇಕೆಂದರೆ, ಸಮೀಕ್ಷೆ ಮಾಡಿದ ಕೆಲವೊಂದು ಕೇಂದ್ರಗಳು ಸಮಾಚಾರಕ್ಕಿಂತ ಜಾಹೀರಾತುಗಳಿಗೆ ಹೆಚ್ಚು ಸಮಯವನ್ನು ಬದಿಗಿರಿಸಿದ್ದವು. ಅಷ್ಟೇ ಅಲ್ಲದೆ, ಹೆಚ್ಚಿನವೇಳೆ ಪ್ರಸಾರವಾಗುವ ಸಮಾಚಾರದಲ್ಲಿ ಅನಗತ್ಯವಾದ ವಿಷಯಗಳೇ ಹೆಚ್ಚು ತುಂಬಿರುತ್ತವೆ ಎಂದು ಅಧ್ಯಯನದಿಂದ ಕಂಡುಕೊಂಡ ವಿಷಯಗಳನ್ನು ಸಂಕ್ಷಿಪ್ತಗೊಳಿಸುತ್ತಾ ವರದಿಯು ತಿಳಿಸುತ್ತದೆ. * “ಅನಗತ್ಯ ವಿಷಯ” ಎಂಬ ತಲೆಬರಹವನ್ನು ಹೊಂದಿದ್ದ ವರದಿಯ ಕೆಳಗೆ ಅವುಗಳನ್ನು ವರ್ಗಗಳಾಗಿ ವಿಂಗಡಿಸಲಾಗಿತ್ತು. ಅವು ಯಾವುವೆಂದರೆ, “ಸಚೇತಕರ ಮತ್ತು ಮಾರಾಟ ಪ್ರಚಾರಕರ ನಡುವೆ ಗೊಡ್ಡುಹರಟೆ, ಪ್ರಸಾರವಾಗಲಿರುವ ಕಾರ್ಯಕ್ರಮಗಳ ಮುನ್ನೋಟ, ‘ಭಾವಪ್ರಚೋದಕ’ ಅಥವಾ ಗೊಡ್ಡು ಸಮಾಚಾರ ಮತ್ತು ಪ್ರಸಿದ್ಧ ವ್ಯಕ್ತಿಗಳ ಕುರಿತ ಕಾರ್ಯಕ್ರಮಗಳು ಆಗಿವೆ. ಇವುಗಳ ಪ್ರಸಾರಮಾಡುವುದಕ್ಕಾಗಿಯೇ ಹೆಚ್ಚಿನ ಸಮಯವನ್ನು ನೀಡಲಾಗುತ್ತದೆ.” ಕೆಲವು ಅನಗತ್ಯ ಪ್ರಸಾರ ಕಾರ್ಯಕ್ರಮಗಳ ಒಂದು ಸ್ಯಾಂಪಲ್‌ ಹೀಗಿದೆ: “ಕಳಪೆ ಗಾಯಕರ ಮಧ್ಯೆ ಸ್ಪರ್ಧೆ,” “ವರದಿಗಾರನು ‘ಮೈ ಜುಮ್‌ ಎನ್ನುವ, ಅಮೋಘವಾದ, ದಿಗ್ಭ್ರಮೆಗೊಳಿಸುವಂಥ’ ರೋಲರ್‌ ಕೋಸ್ಟರ್‌ನಲ್ಲಿ ಸವಾರಿ ಹೋಗುತ್ತಾನೆ” ಮತ್ತು “ಸೂಪರ್‌ ಮಾರ್ಕೆಟ್‌ನಲ್ಲಿ ಅನೇಕರು ಸ್ಯಾಂಡ್‌ವಿಚ್‌ ಸ್ಪ್ರೆಡ್‌ ಅನ್ನು ಕೊಳ್ಳುತ್ತಾರೆ.”

ಯಾವ ರೀತಿಯ ಸುದ್ದಿಯು ನಿಜವಾದ ಸಮಾಚಾರವಾಗಿದೆ? ಟಿವಿ ಸಮಾಚಾರದಲ್ಲಿ 26.9 ಪ್ರತಿಶತದಷ್ಟು ಸಮಯ ಪಾತಕ ಘಟನೆಗಳನ್ನು ತಿಳಿಸುವ ಕಥೆಗಳು ಹೆಚ್ಚೆಚ್ಚು ತುಂಬಿರುತ್ತವೆ. ಸುದ್ದಿಯಲ್ಲಿ “‘ಹೆಚ್ಚು ರಕ್ತಸುರಿಯುತ್ತಿರುವ ಕಥೆಗಳಿರುವುದಾದರೆ, ಅದು ಮುಖ್ಯ ಸಮಾಚಾರವಾಗಿರುತ್ತದೆ. ಸ್ಥಳಿಕ ಟಿವಿ ಸಮಾಚಾರದಲ್ಲಿ ಅಂಥ ಸುದ್ದಿಗಳಿಗೆ ಹೆಚ್ಚು ಆದ್ಯತೆಯನ್ನು ನೀಡಲಾಗುತ್ತದೆ . . . ಪಾತಕ ಘಟನೆಗಳ ಪ್ರಮಾಣವು ಕಳೆದ ಕೆಲವು ವರ್ಷಗಳಲ್ಲಿ ಅಮೆರಿಕದಾದ್ಯಂತ ಕಡಿಮೆಯಾಗಿರಬಹುದಾದರೂ ಸ್ಥಳಿಕ ಟಿವಿ ಸಮಾಚಾರಗಳಲ್ಲಂತೂ ಖಂಡಿತವಾಗಿಯೂ ಕಡಿಮೆಯಾಗಿರುವುದಿಲ್ಲ.” ಹೀಗೇಕೆ? ಅಧ್ಯಯನ ಮಾಡುತ್ತಿರುವ ಸಂಪಾದಕರಿಗನುಸಾರ, “ಪಾತಕ ಕೃತ್ಯಗಳು ಇದ್ದಕ್ಕಿದ್ದಂತೆ ನಡೆಯುವುದರಿಂದ, ಅವು ಜನರ ಗಮನವನ್ನು ಕೂಡಲೇ ಸೆಳೆಯುತ್ತವೆ.”

ಪಾತಕ ಸುದ್ದಿಗಳ ನಂತರ ಬರುವ ಮುಂದಿನ ಸಮಾಚಾರವು (12.2 ಪ್ರತಿಶತ) ಬೆಂಕಿ ದುರಂತಗಳು, ಕಾರ್‌ ಅಪಘಾತಗಳು, ನೆರೆಗಳು ಮತ್ತು ವಿಸ್ಫೋಟಗಳ ಕುರಿತು ತಿಳಿಸುತ್ತದೆ. ಇದನ್ನು ಹಿಂಬಾಲಿಸುತ್ತಾ ಕ್ರೀಡೆಗಳ ಸಮಾಚಾರ (11.4 ಪ್ರತಿಶತ), ಆರೋಗ್ಯ ಕಾರ್ಯಕ್ರಮಗಳು (10.1 ಪ್ರತಿಶತ), ಸರ್ಕಾರದ ಕುರಿತಾದ ಸುದ್ದಿಗಳು (8.7 ಪ್ರತಿಶತ), ಆರ್ಥಿಕ ವಿಷಯಗಳು (8.5 ಪ್ರತಿಶತ) ಪ್ರಸಾರವಾಗುತ್ತವೆ. ಶಿಕ್ಷಣ, ಪರಿಸರ, ಕಲೆ ಮತ್ತು ವಿಜ್ಞಾನದಂತಹ ವಿಷಯಗಳು (1.3ರಿಂದ 3.6 ಪ್ರತಿಶತ) ಬಹಳ ಕಡಿಮೆ ಗಮನವನ್ನು ಸೆಳೆಯುತ್ತವೆ. ಆದರೆ ಇನ್ನೊಂದು ಕಡೆ, ಹವಾಮಾನ ವರದಿಗಳು ಪ್ರಸಾರವಾಗುವ ಎಲ್ಲಾ ಸಮಾಚಾರದ ಸರಾಸರಿ 10 ಪ್ರತಿಶತ ಸಮಯವನ್ನು ಆವರಿಸುತ್ತವೆ. ಏಕೆಂದರೆ “ಪ್ರತಿಯೊಬ್ಬರು ಹವಾಮಾನದ ಕುರಿತು ಮಾತಾಡಲು ತುಂಬ ಇಷ್ಟಪಡುತ್ತಾರೆ. ಮತ್ತು ಈ ವಿಷಯದಲ್ಲಿ ಟಿವಿ ಸಮಾಚಾರವು ಹೊರತೇನಲ್ಲ” ಎಂದು ಸಂಶೋಧಕರು ಹೇಳಿಕೆ ನೀಡುತ್ತಾರೆ. ಅವರು ಕೂಡಿಸಿ ಹೇಳುವುದು: “ಹವಾಮಾನ ಉತ್ತಮವಾಗಿರಲಿ ಅಥವಾ ಕೆಟ್ಟದ್ದಾಗಿರಲಿ, ಉಷ್ಣತೆಯಿರಲಿ ಅಥವಾ ತಂಪಾಗಿರಲಿ, ಆರ್ದ್ರ ಇಲ್ಲವೇ ಶುಷ್ಕವಾಗಿರಲಿ, ಹೀಗೆ ಹವಾಮಾನ ಹೇಗೆಯೇ ಇರಲಿ ಅದನ್ನು ಹೊರತಂದು ಟಿವಿ ಸಮಾಚಾರವು ವ್ಯಾಪಕವಾಗಿ ಪ್ರಸಾರಮಾಡುತ್ತದೆ.”

ಒಂದು ವಿಷಯವಂತೂ ನಿಜ, ಅದೇನೆಂದರೆ ಪತ್ರಕರ್ತರು ಮತ್ತು ವೀಕ್ಷಕರ ಹೆಚ್ಚುತ್ತಿರುವ ಸಂಖ್ಯೆಯು, ಸಮಾಚಾರ ಪ್ರಚಾರದಲ್ಲಿ ಬದಲಾವಣೆಯ ಅಗತ್ಯವಿರುವುದನ್ನು ಗ್ರಹಿಸುತ್ತಿದ್ದಾರೆಂದು ವರದಿಯು ತಿಳಿಸುತ್ತದೆ. ಹಾಗಿದ್ದರೂ, ಅಂಥ ಬದಲಾವಣೆಯು ಅಷ್ಟು ಸುಲಭವಾಗಿ ಬರಲಾರದು ಎಂದು ಅಧ್ಯಯನವು ಒಪ್ಪಿಕೊಳ್ಳುತ್ತದೆ. ಏಕೆಂದರೆ ಅವರು ಬದಲಾವಣೆಯನ್ನು ಮಾಡಿದರೆ, “ಮಾರುಕಟ್ಟೆಯ ಶಕ್ತಿಗಳು ಮತ್ತು ದುರಾಶೆಯು ಉತ್ತಮ ಗುಣಮಟ್ಟದ ಪತ್ರಿಕೋದ್ಯಮಕ್ಕೆ ಬೆದರಿಕೆಯನ್ನೊಡ್ಡಬಹುದು.”

[ಪಾದಟಿಪ್ಪಣಿ]

^ ಸಾರ್ವಜನಿಕರ ಹಿತಾಸಕ್ತಿಯಲ್ಲಿಲ್ಲದ ಅಮೆರಿಕಾದ ಸ್ಥಳಿಕ ಟಿವಿ ಸಮಾಚಾರ ಎಂಬ ವರದಿಯು, ಸಮಾಚಾರದಲ್ಲಿ ಏನಿದೆ ಎಂಬುದನ್ನು ಪರೀಕ್ಷಿಸುವ ನಾಲ್ಕನೇ ವಾರ್ಷಿಕ ರಾಷ್ಟ್ರೀಯ ಸಮೀಕ್ಷೆಯಾಗಿದೆ. ಈ ವರದಿಯನ್ನು ರಾಕಿ ಮೌಂಟನ್‌ ಪ್ರಸಾರ ಮಾಧ್ಯಮದ ಕಾರ್ಯಕ್ರಮಗಳ ಮೇಲೆ ನಿಗಾ ಇಡುವ ತಂಡದ ಡಾಕ್ಟರ್‌ ಪಾವ್ಲ್‌ ಕ್ಲೈಟ್‌ ಮತ್ತು ಡಾಕ್ಟರ್‌ ರಾಬರ್ಟ್‌ ಎ. ಬಾರ್ಡ್‌ವೆಲ್‌ ಹಾಗೂ ಜೆಸನ್‌ ಸೆಲ್ಸ್‌ಮ್ಯಾನ್‌ ಇವರೆಲ್ಲರೂ ಸೇರಿ ಸಂಕಲನ ಮಾಡಿದ್ದಾರೆ.