ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದಾನಿಯೇಲ ಪುಸ್ತಕ ಮತ್ತು ನೀವು

ದಾನಿಯೇಲ ಪುಸ್ತಕ ಮತ್ತು ನೀವು

ಅಧ್ಯಾಯ ಒಂದು

ದಾನಿಯೇಲ ಪುಸ್ತಕ ಮತ್ತು ನೀವು

1, 2. (ಎ) ಬೈಬಲಿನ ದಾನಿಯೇಲ ಪುಸ್ತಕದಲ್ಲಿ ತಿಳಿಸಲ್ಪಟ್ಟಿರುವ ಕೆಲವೊಂದು ಅಸಾಮಾನ್ಯ ಸನ್ನಿವೇಶಗಳು ಯಾವುವು? (ಬಿ) ನಮ್ಮ ಆಧುನಿಕ ಸಮಯಗಳಲ್ಲಿ, ದಾನಿಯೇಲ ಪುಸ್ತಕದ ಕುರಿತು ಯಾವ ಪ್ರಶ್ನೆಗಳು ಏಳುತ್ತವೆ?

ಒಬ್ಬ ಪರಾಕ್ರಮಿ ರಾಜನು ತನ್ನ ಆಸ್ಥಾನದ ಪಂಡಿತರನ್ನು ವಧಿಸುವ ಬೆದರಿಕೆಯನ್ನೊಡ್ಡುತ್ತಾನೆ. ಕಾರಣವೇನೆಂದರೆ, ಅವರೆಲ್ಲರೂ ಅವನಿಗೆ ಬಿದ್ದ ನಿಗೂಢ ಕನಸಿನ ಅರ್ಥವನ್ನು ತಿಳಿಸಲು ಅಸಮರ್ಥರಾಗಿದ್ದಾರೆ. ಅತಿ ಎತ್ತರವಾಗಿದ್ದ ಒಂದು ಪ್ರತಿಮೆಗೆ ಅಡ್ಡಬಿದ್ದು, ಅದನ್ನು ಆರಾಧಿಸಲು ನಿರಾಕರಿಸಿದ ಮೂವರು ಯುವಕರನ್ನು, ನಿತ್ಯಕ್ಕಿಂತ ಏಳರಷ್ಟು ಹೆಚ್ಚಾಗಿ ಉರಿಸಲ್ಪಟ್ಟ ಆವಿಗೆಯೊಳಗೆ ಹಾಕಲಾಗುತ್ತದೆ. ಆದರೆ ಅವರು ಪಾರಾಗಿ ಉಳಿಯುತ್ತಾರೆ. ಒಂದು ಔತಣದ ಸಮಯದಲ್ಲಿ, ಅರಮನೆಯ ಗೋಡೆಯ ಮೇಲೆ ರಹಸ್ಯಮಯವಾದ ಬರಹವನ್ನು ಬರೆಯುತ್ತಿದ್ದ ಒಂದು ಹಸ್ತವನ್ನು ಸಾವಿರಾರು ಜನರು ನೋಡುತ್ತಾರೆ. ದುಷ್ಟ ಒಳಸಂಚುಗಾರರು ಒಬ್ಬ ವೃದ್ಧನನ್ನು ಸಿಂಹಗಳ ಗವಿಯೊಳಗೆ ಹಾಕಿಸುತ್ತಾರಾದರೂ, ತದನಂತರ ಅವನು ಯಾವುದೇ ಹಾನಿಯಿಲ್ಲದೆ ಅಲ್ಲಿಂದ ಹೊರಬರುತ್ತಾನೆ. ದೇವರ ಒಬ್ಬ ಪ್ರವಾದಿಯು, ಒಂದು ದರ್ಶನದಲ್ಲಿ ನಾಲ್ಕು ಮೃಗಗಳನ್ನು ನೋಡುತ್ತಾನೆ, ಮತ್ತು ಅವುಗಳಿಗಿರುವ ಪ್ರವಾದನಾತ್ಮಕ ಸೂಚಿತಾರ್ಥಗಳು, ಭವಿಷ್ಯತ್ತಿನ ಸಾವಿರಾರು ವರ್ಷಗಳ ವರೆಗೂ ವ್ಯಾಪಿಸುತ್ತವೆ.

2 ಬೈಬಲಿನ ದಾನಿಯೇಲ ಪುಸ್ತಕದಲ್ಲಿ ಕಂಡುಬರುವ ವೃತ್ತಾಂತಗಳಲ್ಲಿ ಇವು ಕೇವಲ ಕೆಲವಾಗಿವೆ. ಇವು ಗಂಭೀರವಾದ ಪರಿಗಣನೆಗೆ ಅರ್ಹವಾಗಿವೆಯೊ? ಈ ಪುರಾತನ ಪುಸ್ತಕವು ನಮ್ಮ ದಿನಕ್ಕೆ ಹೇಗೆ ಅನ್ವಯಿಸುತ್ತದೆ? ಸುಮಾರು 2,600 ವರ್ಷಗಳಿಗೆ ಮುಂಚೆ ನಡೆದ ಘಟನೆಗಳ ಬಗ್ಗೆ ನಾವೇಕೆ ಚಿಂತಿಸಬೇಕು?

ದಾನಿಯೇಲ​—⁠ಆಧುನಿಕ ಸಮಯಗಳಿಗಾಗಿ ಒಂದು ಪುರಾತನ ಪುಸ್ತಕ

3, 4. ಅನೇಕ ಜನರು ಮಾನವಕುಲದ ಭವಿಷ್ಯತ್ತಿನ ಕುರಿತು ಚಿಂತಿತರಾಗಿರುವುದು ಏಕೆ ನ್ಯಾಯಸಮ್ಮತವಾಗಿದೆ?

3 ದಾನಿಯೇಲ ಪುಸ್ತಕದ ಅಧಿಕಾಂಶ ಭಾಗವು, ಇಂದು ಅತ್ಯಧಿಕ ಆಸಕ್ತಿಯನ್ನು ಕೆರಳಿಸುವ ವಿಷಯವಾದ ಲೋಕ ಪ್ರಭುತ್ವದ ಕಡೆಗೆ ಗಮನವನ್ನು ಸೆಳೆಯುತ್ತದೆ. ನಾವು ಸಂಕಷ್ಟಕರ ಸಮಯಗಳಲ್ಲಿ ಜೀವಿಸುತ್ತಿದ್ದೇವೆ ಎಂಬುದನ್ನು ​ಸಾಮಾನ್ಯವಾಗಿ ಪ್ರತಿಯೊಬ್ಬರೂ ಒಪ್ಪಿಕೊಳ್ಳುತ್ತಾರೆ. ವೈಜ್ಞಾನಿಕ ಹಾಗೂ ತಾಂತ್ರಿಕ ಕ್ಷೇತ್ರಗಳಲ್ಲಿ ಗಮನಾರ್ಹವಾದ ಸಾಧನೆಗಳು ಮಾಡಲ್ಪಟ್ಟಿವೆಯಾದರೂ, ಮಾನವ ಸಮಾಜವು ಗಲಿ​ಬಿಲಿಗೊಳಿಸುವ ಸಮಸ್ಯೆಗಳ ಕಂಗೆಡಿಸುವ ಸನ್ನಿವೇಶದಲ್ಲಿ ಸಿಕ್ಕಿಕೊಂಡು ಮುಳುಗುತ್ತಿದೆ ಎಂಬ ನಿರುತ್ಸಾಹಕರ ಸುದ್ದಿಗಳೇ ವಾರ್ತಾವರದಿಗಳಲ್ಲಿ ದಿನನಿತ್ಯವೂ ತುಂಬಿರುತ್ತವೆ.

4 ಈ ವಿಷಯವನ್ನು ಪರಿಗಣಿಸಿರಿ: ಮಾನವನು ಚಂದ್ರನ ಮೇಲೆ ನಡೆದಾಡಿದ್ದಾನಾದರೂ, ಅನೇಕ ಸ್ಥಳಗಳಲ್ಲಿ ಅವನು ತನ್ನ ಸ್ವಂತ ಭೂಗ್ರಹದ ಬೀದಿಗಳಲ್ಲಿ ನಿರ್ಭಯವಾಗಿ ನಡೆದಾಡಲಾರನು. ಅವನು ಒಂದು ಮನೆಯನ್ನು ಎಲ್ಲ ರೀತಿಯ ಆಧುನಿಕ ಸೌಕರ್ಯಗಳಿಂದ ಸಜ್ಜುಗೊಳಿಸಲು ಸಮರ್ಥನಾದರೂ, ಕುಟುಂಬಗಳಲ್ಲಿ ಉಂಟಾಗುತ್ತಿರುವ ಒಡಕುಗಳನ್ನು ತಡೆಯಲು ಅಸಮರ್ಥನು. ಅವನು ಸಮಾಚಾರ ಯುಗವನ್ನು ಆರಂಭಿಸಶಕ್ತನಾಗಿದ್ದರೂ, ಒಟ್ಟಾಗಿ ಶಾಂತಿಯಿಂದ ಜೀವಿಸುವಂತೆ ಜನರಿಗೆ ಕಲಿಸಲು ಅಶಕ್ತನು. ಇತಿಹಾಸದ ಪ್ರೊಫೆಸರರಾದ ಹ್ಯೂ ಥಾಮಸ್‌ ಒಮ್ಮೆ ಬರೆದುದು: “ಜ್ಞಾನ ಹಾಗೂ ​ಶಿಕ್ಷಣವು ಹೆಚ್ಚು ವ್ಯಾಪಕವಾಗಿದೆಯಾದರೂ, ಇದು ಮಾನವಕುಲಕ್ಕೆ ಆತ್ಮನಿಯಂತ್ರಣವನ್ನೂ ಕಲಿಸಿಕೊಟ್ಟಿಲ್ಲ, ಜೊತೆಮಾನವರೊಂದಿಗೆ ಹೊಂದಿಕೊಂಡು ಹೋಗುವ ಕಲೆಯನ್ನೂ ಕಲಿಸಿಕೊಟ್ಟಿಲ್ಲ.”

5. ಮಾನವನ ಆಳ್ವಿಕೆಯ ಬಹುತೇಕ ಫಲಿತಾಂಶವು ಏನಾಗಿದೆ?

5 ಸಮಾಜದಲ್ಲಿ ಸ್ವಲ್ಪಮಟ್ಟಿಗೆ ಸುವ್ಯವಸ್ಥೆಯನ್ನು ಸ್ಥಾಪಿಸಲು ಪ್ರಯತ್ನಿಸುತ್ತಾ, ಮಾನವರು ತಮ್ಮ ಮಧ್ಯೆ ಬೇರೆ ಬೇರೆ ಪ್ರಕಾರದ ಸರಕಾರಗಳನ್ನು ರಚಿಸಿದ್ದಾರೆ. ಆದರೆ ಈ ಎಲ್ಲ ಸರಕಾರಗಳು, ‘ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರ ನಡಿಸಿ ಹಾನಿಯನ್ನುಂಟುಮಾಡಿದ್ದಾನೆ’ ಎಂಬ ರಾಜ ಸೊಲೊಮೋನನ ಮಾತುಗಳನ್ನು ಸತ್ಯವೆಂದು ರುಜುಪಡಿಸಿವೆ. (ಪ್ರಸಂಗಿ 4:1; 8:⁠9) ಕೆಲವು ಪ್ರಭುಗಳಿಗೆ ಉದಾತ್ತ ಆದರ್ಶಗಳಿದ್ದವು ಎಂಬುದು ನಿಶ್ಚಯ. ಏನೇ ಆದರೂ, ಯಾವ ರಾಜನೂ ಅಧ್ಯಕ್ಷನೂ ನಿರಂಕುಶ ಪ್ರಭುವೂ ಅಸ್ವಸ್ಥತೆ ಹಾಗೂ ಮರಣವನ್ನು ತೆಗೆದುಹಾಕಲಾರನು. ಯಾವ ಮಾನವನೂ ದೇವರು ಉದ್ದೇಶಿಸಿದ್ದಂತಹ ರೀತಿಯಲ್ಲಿ ನಮ್ಮ ಭೂಮಿಯನ್ನು ಪ್ರಮೋದವನವನ್ನಾಗಿ ಮಾಡಲಾರನು.

6. ತನ್ನ ಚಿತ್ತವನ್ನು ನೆರವೇರಿಸಲಿಕ್ಕಾಗಿ ಯೆಹೋವನಿಗೆ ಮಾನವ ಆಳ್ವಿಕೆಯ ಸಹಕಾರದ ಅಗತ್ಯವಿಲ್ಲ ಏಕೆ?

6 ಆದರೆ, ನಮ್ಮ ಸೃಷ್ಟಿಕರ್ತನು ಭೂಮಿಯನ್ನು ಪ್ರಮೋದವನವನ್ನಾಗಿ ಮಾಡಲು ಇಷ್ಟಪಡುವುದಲ್ಲದೆ ಅದನ್ನು ಮಾಡಲು ಶಕ್ತನೂ ಆಗಿದ್ದಾನೆ. ತನ್ನ ಉದ್ದೇಶವನ್ನು ಪೂರೈಸಲು ಆತನಿಗೆ ಮಾನವ ಸರಕಾರಗಳ ಅನುಮತಿಯನ್ನು ಪಡೆದುಕೊಳ್ಳುವ ಅಗತ್ಯವಿಲ್ಲ. ಏಕೆಂದರೆ “ಆತನ ಗಣನೆಯಲ್ಲಿ ಜನಾಂಗಗಳು ಕಪಿಲೆಯಿಂದುದುರುವ ತುಂತುರಿನಂತೆಯೂ ತ್ರಾಸಿನ ತಟ್ಟೆಯ ದೂಳಿನ ಹಾಗೂ ಇರುತ್ತವೆ.” (ಯೆಶಾಯ 40:15) ಯೆಹೋವನು ವಿಶ್ವದ ಪರಮಾಧಿಕಾರಿಯಾಗಿದ್ದಾನೆ. ಹೀಗಿರುವಾಗ, ಮಾನವ ಸರಕಾರಗಳಿಗಿಂತ ಎಷ್ಟೋ ಮಿಗಿಲಾದ ಅಧಿಕಾರ ಆತನಿಗಿದೆ. ಮಾನವಕುಲಕ್ಕೆ ನಿತ್ಯ ಆಶೀರ್ವಾದ​ಗಳು ಸಿಗುವಂತೆ, ಮಾನವ ಆಳ್ವಿಕೆಗೆ ಬದಲಾಗಿ ದೇವರ ರಾಜ್ಯವೇ ಆಳಲಿದೆ. ಪ್ರಾಯಶಃ ದಾನಿಯೇಲ ಪುಸ್ತಕವನ್ನು ಬಿಟ್ಟು, ಬೈಬಲಿನ ಇನ್ನಾವ ಪುಸ್ತಕದಲ್ಲಿಯೂ ಇದು ಇಷ್ಟೊಂದು ಸ್ಪಷ್ಟವಾಗಿ ತಿಳಿಸಲ್ಪಟ್ಟಿಲ್ಲ.

ದಾನಿಯೇಲ​—⁠ದೇವರಿಗೆ ಅತಿ ಪ್ರಿಯನು

7. ದಾನಿಯೇಲನು ಯಾರು, ಮತ್ತು ಯೆಹೋವನ ದೃಷ್ಟಿಯಲ್ಲಿ ಅವನ ಸ್ಥಾನವೇನಾಗಿತ್ತು?

7 ಯೆಹೋವ ದೇವರಿಗೆ ದಾನಿಯೇಲನ ಮೇಲೆ ತುಂಬ ಪ್ರೀತಿಯಿತ್ತು. ಅನೇಕ ವರ್ಷಗಳ ವರೆಗೆ ಅವನು ಪ್ರವಾದಿಯಾಗಿ ಸೇವೆಮಾಡಿದನು. ಆದುದರಿಂದಲೇ, ದಾನಿಯೇಲನು “ಅತಿಪ್ರಿಯ”ನೆಂದು ದೇವದೂತನು ಹೇಳಿದನು. (ದಾನಿಯೇಲ 9:23) “ಅತಿಪ್ರಿಯ” ಎಂದು ಭಾಷಾಂತರಿಸಲ್ಪಟ್ಟಿರುವ ಮೂಲ ಹೀಬ್ರು ಶಬ್ದದ ಅರ್ಥವು, “ಅತಿ ಪ್ರೀತಿಪಾತ್ರನು,” “ಅತಿ ಗೌರವಾರ್ಹನು,” ಹಾಗೂ “ಅಚ್ಚುಮೆಚ್ಚಿನವನು” ಎಂದಾಗಿರಸಾಧ್ಯವಿದೆ. ದೇವರ ದೃಷ್ಟಿಯಲ್ಲಿ ದಾನಿಯೇಲನು ವಿಶೇಷವಾಗಿ ಅಮೂಲ್ಯನಾಗಿದ್ದನು.

8. ದಾನಿಯೇಲನು ಬಾಬೆಲಿಗೆ ಬರುವಂತಾದದ್ದು ಹೇಗೆ?

8 ಪ್ರೀತಿಪಾತ್ರನಾದ ಈ ಪ್ರವಾದಿಯ ಅಪೂರ್ವ ಸನ್ನಿವೇಶಗಳನ್ನು ನಾವು ಸಂಕ್ಷಿಪ್ತವಾಗಿ ಪರಿಗಣಿಸೋಣ. ಸಾ.ಶ.ಪೂ. 618ರಲ್ಲಿ, ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಯೆರೂಸಲೇಮಿಗೆ ಮುತ್ತಿಗೆ ಹಾಕಿದನು. (ದಾನಿಯೇಲ 1:⁠1) ಸ್ವಲ್ಪ ಸಮಯಾನಂತರ, ಸುಶಿಕ್ಷಿತರಾದ ಕೆಲವು ಯೆಹೂದಿ ಯುವಕರನ್ನು ಒತ್ತಾಯಪೂರ್ವಕವಾಗಿ ಬಾಬೆಲಿಗೆ ದೇಶಭ್ರಷ್ಟರಾಗಿ ಕರೆದೊಯ್ಯಲಾಯಿತು. ಅವರಲ್ಲಿ ದಾನಿಯೇಲನೂ ಒಬ್ಬನಾಗಿದ್ದನು. ಆ ಸಮಯದಲ್ಲಿ ಅವನು ಹದಿವಯಸ್ಕನಾಗಿದ್ದಿರಬಹುದು.

9. ದಾನಿಯೇಲನಿಗೆ ಹಾಗೂ ಅವನ ಇಬ್ರಿಯ ಸಂಗಡಿಗರಿಗೆ ಯಾವ ತರಬೇತಿಯು ನೀಡಲ್ಪಟ್ಟಿತು?

9 “ಕಸ್ದೀಯ ಪಂಡಿತರ ಭಾಷೆಯನ್ನೂ ಶಾಸ್ತ್ರಗಳನ್ನೂ ಕಲಿ”ಯಲು ಮೂರು ವರ್ಷಗಳ ತರಬೇತಿಗಾಗಿ ಆಯ್ಕೆಯಾದ ಇಬ್ರಿಯರಲ್ಲಿ, ದಾನಿಯೇಲನೂ ಅವನ ಸಂಗಡಿಗರಾದ ಹನನ್ಯ, ಮಿಶಾಯೇಲ, ಹಾಗೂ ಅಜರ್ಯರೂ ಇದ್ದರು. (ದಾನಿಯೇಲ 1:​3, 4) ಕೇವಲ ಭಾಷಾ ಪಾಂಡಿತ್ಯಕ್ಕಿಂತಲೂ ಹೆಚ್ಚಿನದ್ದು ಇದರಲ್ಲಿ ಒಳಗೂಡಿತ್ತು ಎಂದು ಕೆಲವು ಪಂಡಿತರು ಹೇಳುತ್ತಾರೆ. ಉದಾಹರಣೆಗಾಗಿ, ಪ್ರೊಫೆಸರ್‌ ಸಿ. ಎಫ್‌. ಕೈಲ್‌ ಹೇಳುವುದು: “ದಾನಿಯೇಲನೂ ಅವನ ಸಂಗಡಿಗರೂ, ಬಾಬೆಲಿನ ಶಾಲೆಗಳಲ್ಲಿ ಕಲಿಸಲ್ಪಡುತ್ತಿದ್ದ ಕಸ್ದೀಯ ಯಾಜಕರ ಹಾಗೂ ಪಂಡಿತರ ಜ್ಞಾನವನ್ನು ಕಲಿತು ಪಾರಂಗತರಾಗಬೇಕಿತ್ತು.” ಹೀಗೆ, ದಾನಿಯೇಲನಿಗೆ ಹಾಗೂ ಅವನ ಸಂಗಡಿಗರಿಗೆ, ಸರಕಾರಿ ಹುದ್ದೆಯಲ್ಲಿ ಸೇವೆಮಾಡ​ಸಾಧ್ಯವಾಗುವಂತೆ ವಿಶೇಷ ತರಬೇತಿಯನ್ನು ನೀಡಲಾಯಿತು.

10, 11. ದಾನಿಯೇಲನೂ ಅವನ ಸಂಗಡಿಗರೂ ಯಾವ ಸವಾಲನ್ನು ಎದುರಿಸಿದರು, ಮತ್ತು ಯೆಹೋವನು ಅವರಿಗೆ ಹೇಗೆ ಸಹಾಯ ಮಾಡಿದನು?

10 ದಾನಿಯೇಲನಿಗೂ ಅವನ ಸಂಗಡಿಗರಿಗೂ ಈ ಸನ್ನಿವೇಶವು ಎಂತಹ ದೊಡ್ಡ ಬದಲಾವಣೆಯಾಗಿತ್ತು! ಯೆಹೂದದಲ್ಲಿ, ಅವರು ಯೆಹೋವನ ಆರಾಧಕರ ನಡುವೆ ವಾಸಿಸುತ್ತಿದ್ದರು. ಈಗಲಾದರೋ ಅವರ ಸುತ್ತಲೂ ಪೌರಾಣಿಕ ದೇವದೇವತೆಗಳನ್ನು ಆರಾಧಿಸುವಂತಹ ಜನರಿದ್ದರು. ಆದರೂ, ಯುವ ದಾನಿಯೇಲ, ಹನನ್ಯ, ಮಿಶಾಯೇಲ, ಮತ್ತು ಅಜರ್ಯರು ಎದೆಗುಂದಲಿಲ್ಲ. ನಂಬಿಕೆಗೆ ಸವಾಲನ್ನೊಡ್ಡುವ ಈ ಸನ್ನಿವೇಶದ ಎದುರಿನಲ್ಲಿಯೂ, ಸತ್ಯಾರಾಧನೆಗೆ ದೃಢವಾಗಿ ಅಂಟಿಕೊಳ್ಳುವ ನಿರ್ಧಾರವನ್ನು ಅವರು ಮಾಡಿದರು.

11 ಹಾಗೆ ಮಾಡುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಏಕೆಂದರೆ, ಅರಸನಾದ ನೆಬೂಕದ್ನೆಚ್ಚರನು ಬಾಬೆಲಿನ ಪ್ರಮುಖ ದೇವನಾದ ಮಾರ್ದೂಕನ ಪರಮಭಕ್ತನಾಗಿದ್ದನು. ಕೆಲವೊಮ್ಮೆ ಅವನ ಬೇಡಿಕೆಗಳು ಹೇಗಿರುತ್ತಿದ್ದವೆಂದರೆ, ಯೆಹೋವನ ಆರಾಧಕ​ನೊಬ್ಬನು ಅವುಗಳನ್ನು ಖಂಡಿತವಾಗಿಯೂ ಅಂಗೀಕರಿಸಸಾಧ್ಯವಿರಲಿಲ್ಲ. (ಉದಾಹರಣೆಗಾಗಿ, ದಾನಿಯೇಲ 3:​1-7ನ್ನು ನೋಡಿರಿ.) ಆದರೂ, ದಾನಿಯೇಲನಿಗೆ ಹಾಗೂ ಅವನ ಸಂಗಡಿಗರಿಗೆ ಯೆಹೋವನು ಖಂಡಿತವಾಗಿಯೂ ಮಾರ್ಗದರ್ಶನವನ್ನು ಒದಗಿಸುತ್ತಾ ಇದ್ದನು. ಅವರ ಮೂರು ವರ್ಷಗಳ ತರಬೇತಿಯ ಸಮಯದಲ್ಲಿ, “ಸಕಲಶಾಸ್ತ್ರಗಳಲ್ಲಿಯೂ ವಿದ್ಯೆಗಳಲ್ಲಿಯೂ ಜ್ಞಾನವಿವೇಕಗಳನ್ನು ದಯಪಾಲಿ”ಸುವ ಮೂಲಕ ದೇವರು ಅವರನ್ನು ಆಶೀರ್ವದಿಸಿದನು. ಅಷ್ಟುಮಾತ್ರವಲ್ಲ, ದಾನಿಯೇಲನಿಗೆ ದಿವ್ಯದರ್ಶನ​ಗಳು ಹಾಗೂ ಕನಸುಗಳ ಅರ್ಥವನ್ನು ಗ್ರಹಿಸುವ ಸಾಮರ್ಥ್ಯವೂ ಕೊಡಲ್ಪಟ್ಟಿತ್ತು. ಸಮಯಾನಂತರ ಅರಸನು ಈ ನಾಲ್ಕು ಮಂದಿ ಯುವಕರನ್ನು ಪರೀಕ್ಷಿಸಿದಾಗ, ಅವರು “ಅವನ ಪೂರ್ಣ ರಾಜ್ಯದಲ್ಲಿನ ಎಲ್ಲಾ ಜೋಯಿಸರಿಗಿಂತಲೂ ಮಂತ್ರವಾದಿಗಳಿಗಿಂತಲೂ ಹತ್ತರಷ್ಟು ನಿಪುಣರಾಗಿ ಕಂಡುಬಂದರು.”​—⁠ದಾನಿಯೇಲ 1:​17, 20.

ದೇವರ ಸಂದೇಶಗಳನ್ನು ಪ್ರಕಟಿಸುವುದು

12. ದಾನಿಯೇಲನಿಗೆ ಯಾವ ವಿಶೇಷ ನೇಮಕವು ಕೊಡಲ್ಪಟ್ಟಿತ್ತು?

12 ದಾನಿಯೇಲನು ಬಾಬೆಲಿನಲ್ಲಿ ಕಳೆದ ಅನೇಕ ವರ್ಷಗಳಲ್ಲಿ, ನೆಬೂಕದ್ನೆಚ್ಚರ ಹಾಗೂ ಬೇಲ್ಶಚ್ಚರರಂತಹ ಅರಸರಿಗೆ ಅವನು ದೇವರ ಸಂದೇಶವಾಹಕನೋಪಾದಿ ಕಾರ್ಯನಡಿಸಿದನು. ದಾನಿಯೇಲನ ನೇಮಕವು ಅತಿ ಪ್ರಾಮುಖ್ಯವಾದದ್ದಾಗಿತ್ತು. ಯೆರೂಸಲೇಮನ್ನು ನಾಶಮಾಡುವಂತೆ ಯೆಹೋವನೇ ನೆಬೂಕದ್ನೆಚ್ಚರನಿಗೆ ಅನುಮತಿ ನೀಡಿದ್ದನು ಹಾಗೂ ಅವನನ್ನು ತನ್ನ ಸಾಧನದೋಪಾದಿ ಉಪಯೋಗಿಸಿದ್ದನು. ಸಕಾಲದಲ್ಲಿ ಬಾಬೆಲ್‌ ಸಹ ನಾಶವಾಗಲಿಕ್ಕಿತ್ತು. ಖಂಡಿತವಾಗಿಯೂ, ದಾನಿಯೇಲ ಪುಸ್ತಕವು ಯೆಹೋವ ದೇವರನ್ನು, ಸರ್ವೋನ್ನತನೋಪಾದಿ ಹಾಗೂ “ಮನುಷ್ಯರ ರಾಜ್ಯದಲ್ಲಿ”ನ ಪ್ರಭುವಿನೋಪಾದಿ ಮಹಿಮೆಗೇರಿಸುತ್ತದೆ.​—⁠ದಾನಿಯೇಲ 4:⁠17.

13, 14. ಬಾಬೆಲಿನ ಪತನದ ಬಳಿಕ ದಾನಿಯೇಲನಿಗೆ ಏನು ಸಂಭವಿಸಿತು?

13 ಸುಮಾರು ಏಳು ದಶಕಗಳ ವರೆಗೆ, ಅಂದರೆ ಬಾಬೆಲ್‌ ಪತನವಾಗುವ ತನಕ ದಾನಿಯೇಲನು ರಾಜನ ಆಸ್ಥಾನದಲ್ಲೇ ಸೇವೆಸಲ್ಲಿಸುವುದನ್ನು ಮುಂದುವರಿಸಿದನು. ಸಾ.ಶ.ಪೂ. 537ರಲ್ಲಿ ಅನೇಕ ಯೆಹೂದ್ಯರು ತಮ್ಮ ಸ್ವದೇಶಕ್ಕೆ ಹಿಂದಿರುಗುವುದನ್ನು ನೋಡುವ ತನಕ ಅವನು ಬದುಕಿದ್ದನಾದರೂ, ಅವನು ಅವರ ಜೊತೆಯಲ್ಲಿ ಹೋದುದರ ಕುರಿತು ಬೈಬಲು ಏನನ್ನೂ ತಿಳಿಸುವುದಿಲ್ಲ. ಪಾರಸಿಯ ಚಕ್ರಾಧಿಪತ್ಯದ ಸ್ಥಾಪಕನಾಗಿದ್ದ ರಾಜ ಕೋರೆಷನ ಆಳ್ವಿಕೆಯ ಮೂರನೆಯ ವರ್ಷದ ತನಕ ಅವನು ತುಂಬ ಕ್ರಿಯಾಶೀಲನಾಗಿದ್ದನು. ಆ ಸಮಯದಲ್ಲಿ ದಾನಿಯೇಲನು ಸುಮಾರು 100 ವರ್ಷ ಪ್ರಾಯದವನಾಗಿದ್ದಿರಬೇಕು!

14 ಬಾಬೆಲಿನ ಪತನದ ಬಳಿಕ, ತನ್ನ ಜೀವಿತದ ಅತ್ಯಂತ ಅರ್ಥಗರ್ಭಿತ ಘಟನೆಗಳನ್ನು ದಾನಿಯೇಲನು ಲಿಖಿತ ರೂಪದಲ್ಲಿ ನಮೂದಿಸಿದನು. ಅವನ ದಾಖಲೆಯು ಈಗ ಪವಿತ್ರ ಬೈಬಲಿನ ಒಂದು ಪ್ರಮುಖ ಭಾಗವಾಗಿದ್ದು, ದಾನಿಯೇಲನ ಪುಸ್ತಕವೆಂದು ಪ್ರಸಿದ್ಧವಾಗಿದೆ. ಆದರೆ ಈ ಪುರಾತನ ಪುಸ್ತಕಕ್ಕೆ ನಾವು ಏಕೆ ಗಮನಕೊಡಬೇಕು?

ಎಳೆ ಎರಡಾದರೂ, ಸಂದೇಶ ಒಂದೇ

15. (ಎ) ಬೈಬಲಿನ ದಾನಿಯೇಲ ಪುಸ್ತಕದಲ್ಲಿ ಯಾವ ಎರಡು ಎಳೆಗಳಿವೆ? (ಬಿ) ದಾನಿಯೇಲ ಪುಸ್ತಕದ ಕಥಾ ರೂಪದಿಂದ ನಾವು ಯಾವ ಪ್ರಯೋಜನವನ್ನು ಪಡೆದುಕೊಳ್ಳುತ್ತೇವೆ?

15 ಅಪೂರ್ವವಾದ ಈ ದಾನಿಯೇಲ ಪುಸ್ತಕದಲ್ಲಿ ಎರಡು ಭಿನ್ನ ಎಳೆಗಳಿವೆ​—⁠ಒಂದು ಕಥಾ ರೂಪ, ಇನ್ನೊಂದು ಪ್ರವಾದನಾ ರೂಪ. ದಾನಿಯೇಲ ಪುಸ್ತಕದ ಈ ಎರಡೂ ಅಂಶಗಳು ನಮ್ಮ ನಂಬಿಕೆಯನ್ನು ಬಲಗೊಳಿಸುತ್ತವೆ. ಹೇಗೆ? ಕಥಾ ರೂಪದಲ್ಲಿರುವ ಭಾಗಗಳು, ಬೈಬಲಿನ ಅನೇಕ ಸ್ವಾರಸ್ಯಕರವಾದ ಕಥಾ ರೂಪಗಳಲ್ಲಿ ಕೆಲವಾಗಿವೆ. ಯಾರು ಯೆಹೋವ ದೇವರ ಕಡೆಗೆ ಯಥಾರ್ಥತೆಯನ್ನು ಕಾಪಾಡಿಕೊಳ್ಳುತ್ತಾರೋ ಅವರನ್ನು ಆತನು ಆಶೀರ್ವದಿಸುತ್ತಾನೆ ಹಾಗೂ ಪರಾಮರಿಸುತ್ತಾನೆ ಎಂಬುದನ್ನು ಅವು ತೋರಿಸುತ್ತವೆ. ಜೀವಕ್ಕೆ ಬೆದರಿಕೆಯನ್ನೊಡ್ಡುವ ಪರೀಕ್ಷೆಗಳ ಎದುರಿನಲ್ಲಿಯೂ, ದಾನಿಯೇಲನು ಹಾಗೂ ಅವನ ಸಂಗಡಿಗರು ಸ್ಥಿರಚಿತ್ತರಾಗಿ ಉಳಿದರು. ಇಂದು, ಯೆಹೋವನಿಗೆ ನಿಷ್ಠಾವಂತರಾಗಿ ಉಳಿಯಲು ಬಯಸುವವರೆಲ್ಲರೂ, ಅವರ ಮಾದರಿಯನ್ನು ಗಮನ​ವಿಟ್ಟು ಅವಲೋಕಿಸುವ ಮೂಲಕ ಹೆಚ್ಚು ಬಲಗೊಳಿಸಲ್ಪಡುವರು.

16. ದಾನಿಯೇಲನ ಪ್ರವಾದನಾ ಭಾಗಗಳಿಂದ ನಾವು ಯಾವ ಪಾಠವನ್ನು ಕಲಿಯುತ್ತೇವೆ?

16 ದಾನಿಯೇಲ ಪುಸ್ತಕದ ಪ್ರವಾದನಾ ಭಾಗಗಳು, ಇತಿಹಾಸವು ಯಾವ ದಿಕ್ಕಿನಲ್ಲಿ ಸಾಗುವುದು ಎಂಬುದರ ಕುರಿತು ಯೆಹೋವನಿಗೆ ಸಹಸ್ರಾರು ವರ್ಷಗಳ ಹಿಂದೆಯೇ ಎಲ್ಲವೂ ತಿಳಿದಿತ್ತೆಂಬುದನ್ನು ತೋರಿಸುವ ಮೂಲಕ ನಂಬಿಕೆಯನ್ನು ಬಲಪಡಿಸುತ್ತವೆ. ಉದಾಹರಣೆಗಾಗಿ, ಪುರಾತನ ಬಾಬೆಲಿನ ಸಮಯದಂದಿನಿಂದ “ಅಂತ್ಯಕಾಲದ” ವರೆಗಿನ ಎಲ್ಲ ಲೋಕ ಶಕ್ತಿಗಳ ಏಳುಬೀಳುಗಳ ಕುರಿತಾದ ವಿವರಗಳನ್ನು ದಾನಿಯೇಲನು ಒದಗಿಸುತ್ತಾನೆ. (ದಾನಿಯೇಲ 12:⁠4) ದೇವರ ನೇಮಿತ ರಾಜನ ಹಾಗೂ ಜೊತೆಯಲ್ಲಿರುವ “ಪವಿತ್ರ ಜನರ” ವಶದಲ್ಲಿರುವ ದೇವರ ರಾಜ್ಯದ ಕಡೆಗೆ ದಾನಿಯೇಲನು ನಮ್ಮ ಗಮನವನ್ನು ಸೆಳೆಯುತ್ತಾನೆ; ಇದು ಸದಾಕಾಲಕ್ಕೂ ಇರುವ ​ಸರಕಾರವೆಂದು ​ಸೂಚಿಸುತ್ತಾನೆ. ಈ ಸರಕಾರವು ನಮ್ಮ ಭೂಮಿಯ ಕಡೆಗಿರುವ ಯೆಹೋವನ ಉದ್ದೇಶವನ್ನು ಸಂಪೂರ್ಣವಾಗಿ ನೆರವೇರಿಸುವುದು ಹಾಗೂ ದೇವರನ್ನು ಸೇವಿಸಲು ಬಯಸುವವರೆಲ್ಲರಿಗೆ ಆಶೀರ್ವಾದವಾಗಿ ಪರಿಣಮಿಸುವುದು.​—⁠ದಾನಿಯೇಲ 2:44; ​7:​13, 14, 22.

17, 18. (ಎ) ದಾನಿಯೇಲ ಪುಸ್ತಕವನ್ನು ಸವಿವರವಾಗಿ ಪರೀಕ್ಷಿಸುವ ಮೂಲಕ ನಮ್ಮ ನಂಬಿಕೆ​ಯು ಹೇಗೆ ಬಲಗೊಳ್ಳುವುದು? (ಬಿ) ನಾವು ಬೈಬಲಿನ ಈ ಪ್ರವಾದನಾ ಪುಸ್ತಕದ ಅಭ್ಯಾಸವನ್ನು ಆರಂಭಿಸುವುದಕ್ಕೆ ಮೊದಲು, ಯಾವ ವಿಚಾರದ ಮೇಲೆ ಮನಸ್ಸನ್ನು ಕೇಂದ್ರೀಕರಿಸ​ಬೇಕಾಗಿದೆ?

17 ಯೆಹೋವನು ಭವಿಷ್ಯತ್ತಿನ ಘಟನೆಗಳ ಕುರಿತಾದ ಜ್ಞಾನವನ್ನು ತನ್ನಲ್ಲೇ ಇಟ್ಟುಕೊಳ್ಳದೆ ಇರುವುದಕ್ಕಾಗಿ ನಾವು ಆತನಿಗೆ ಕೃತಜ್ಞರಾಗಿದ್ದೇವೆ. ಆತನು “ರಹಸ್ಯಗಳನ್ನು ವ್ಯಕ್ತಗೊಳಿಸುವವ”ನಾಗಿದ್ದಾನೆ. (ದಾನಿಯೇಲ 2:28) ದಾನಿಯೇಲ ಪುಸ್ತಕದಲ್ಲಿ ದಾಖಲಿಸಲ್ಪಟ್ಟಿರುವ ಪ್ರವಾದನೆಗಳ ನೆರವೇರಿಕೆಯನ್ನು ನಾವು ಪರಿಗಣಿಸುವಾಗ, ದೇವರ ವಾಗ್ದಾನಗಳಲ್ಲಿನ ನಮ್ಮ ನಂಬಿಕೆಯು ಇನ್ನೂ ಹೆಚ್ಚು ಬಲಗೊಳ್ಳುವುದು. ದೇವರು ತನ್ನ ನೇಮಿತ ಸಮಯದಲ್ಲಿ ಮತ್ತು ಚಾಚೂ ತಪ್ಪದ ರೀತಿಯಲ್ಲಿ ತನ್ನ ಉದ್ದೇಶವನ್ನು ಪೂರೈಸುವನು ಎಂಬ ದೃಢವಿಶ್ವಾಸ ನಮಗಿರುವುದು.

18 ಬೈಬಲಿನ ದಾನಿಯೇಲ ಪುಸ್ತಕವನ್ನು ಅರ್ಥಮಾಡಿಕೊಳ್ಳುವ ಇಚ್ಛೆಯಿಂದ ಅದನ್ನು ಅಭ್ಯಾಸಿಸುವವರೆಲ್ಲರ ನಂಬಿಕೆಯು ಇನ್ನೂ ಹೆಚ್ಚು ಬಲಗೊಳ್ಳುವುದು. ಆದರೂ, ಈ ಪುಸ್ತಕವನ್ನು ಸವಿವರವಾಗಿ ಪರೀಕ್ಷಿಸಲು ಪ್ರಾರಂಭಿಸುವುದಕ್ಕೆ ಮೊದಲು, ಈ ಪುಸ್ತಕವು ನಿಜವಾಗಿಯೂ ವಿಶ್ವಾಸಾರ್ಹವಾಗಿದೆಯೋ ಇಲ್ಲವೋ ಎಂಬ ಪುರಾವೆಯನ್ನು ಪರಿಗಣಿಸುವ ಅಗತ್ಯವಿದೆ. ವಾಸ್ತವದಲ್ಲಿ ಈ ಎಲ್ಲ ಪ್ರವಾದನೆಗಳು, ಅವುಗಳ ನೆರವೇರಿಕೆಯ ಬಳಿಕ ಬರೆಯಲ್ಪಟ್ಟವು ಎಂದು ಕೆಲವು ವಿಮರ್ಶಕರು ದಾನಿಯೇಲ ಪುಸ್ತಕದ ಮೇಲೆ ದೋಷಾರೋಪ ಹೊರಿಸಿದ್ದಾರೆ. ಇಂತಹ ಸಂದೇಹವಾದಿಗಳ ಪ್ರತಿಪಾದನೆಗಳು ನ್ಯಾಯಸಮ್ಮತವಾಗಿವೆಯೊ? ಮುಂದಿನ ಅಧ್ಯಾಯವು ಈ ವಿಷಯವನ್ನು ವಿವರಿಸುವುದು.

ನೀವೇನನ್ನು ಗ್ರಹಿಸಿದಿರಿ?

• ದಾನಿಯೇಲ ಪುಸ್ತಕವು ಆಧುನಿಕ ಸಮಯಗಳಿಗಾಗಿರುವ ಒಂದು ಪುಸ್ತಕವಾಗಿದೆ ಏಕೆ?

• ದಾನಿಯೇಲನು ಹಾಗೂ ಅವನ ಸಂಗಡಿಗರು, ಬಾಬೆಲಿನ ​ಸರಕಾರಿ ಹುದ್ದೆಗಳಿಗೆ ಹೇಗೆ ನೇಮಿತರಾದರು?

• ಬಾಬೆಲಿನಲ್ಲಿ ದಾನಿಯೇಲನಿಗೆ ಕೊಡಲ್ಪಟ್ಟ ವಿಶೇಷ ನೇಮಕವು ಯಾವುದಾಗಿತ್ತು?

• ನಾವು ದಾನಿಯೇಲನ ಪ್ರವಾದನೆಗೆ ಏಕೆ ಗಮನಕೊಡಬೇಕು?

[ಅಧ್ಯಯನ ಪ್ರಶ್ನೆಗಳು]

[ಪುಟ 5 ರಲ್ಲಿ ಇಡೀ ಪುಟದ ಚಿತ್ರ]

[ಪುಟ 22 ರಲ್ಲಿ ಇಡೀ ಪುಟದ ಚಿತ್ರ]