ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ನಮ್ಮ ಸಂಗ್ರಹಾಲಯ

ನಂಬಿಕೆಕಟ್ಟುವ ಮಹಾಕೃತಿಗೆ ನೂರರ ಸಂಭ್ರಮ!

ನಂಬಿಕೆಕಟ್ಟುವ ಮಹಾಕೃತಿಗೆ ನೂರರ ಸಂಭ್ರಮ!

“ಸಹೋದರ ರಸಲ್‌ರನ್ನು ನೇರವಾಗಿ ನೋಡುವುದಕ್ಕಿಂತ ಡ್ರಾಮದಲ್ಲೇ ಅವರು ಹೆಚ್ಚು ನೈಜವಾಗಿ ಕಂಡರು!”—“ಫೋಟೋ-ಡ್ರಾಮ” ಪ್ರೇಕ್ಷಕ, 1914ರಲ್ಲಿ.

ಈ ವರ್ಷಕ್ಕೆ “ಫೋಟೋ-ಡ್ರಾಮ ಆಫ್‌ ಕ್ರಿಯೇಷನ್‌” ಪ್ರಪ್ರಥಮ ಬಾರಿ ತೆರೆಕಂಡು 100 ವರ್ಷಗಳ ಜಯಭೇರಿ ಬಾರಿಸುತ್ತದೆ. ಇದು ದೃಶ್ಯ ಪ್ರದರ್ಶನದ ಒಂದು ಮಹಾಕೃತಿ. ಇದನ್ನು ರಚಿಸಿದ್ದರ ಉದ್ದೇಶ ಬೈಬಲ್‌ ದೇವರ ವಾಕ್ಯ ಎಂಬುದರಲ್ಲಿ ನಂಬಿಕೆಯನ್ನು ಕಟ್ಟುವುದೇ. ವಿಕಾಸವಾದ, ಅಜ್ಞೇಯತಾವಾದದಲ್ಲಿನ ನಂಬಿಕೆ ಮತ್ತು ಬೈಬಲಿನ ಮೂಲರಚನೆಯ ವಿಮರ್ಶೆಯು ಬಹು ಜನರ ನಂಬಿಕೆಯನ್ನು ಶಿಥಿಲಗೊಳಿಸಿದ್ದ ಆ ಕಾಲದಲ್ಲಿ ಯೆಹೋವನೇ ಸೃಷ್ಟಿಕರ್ತ ಎಂಬುದನ್ನು “ಫೋಟೋ-ಡ್ರಾಮ” ಸಮರ್ಥಿಸಿ ಸಾರಿಹೇಳಿತು.

ಬೈಬಲ್‌ ವಿದ್ಯಾರ್ಥಿಗಳ ಮುಂದಾಳತ್ವ ವಹಿಸಿದ್ದ ಚಾರ್ಲ್ಸ್ ಟಿ. ರಸಲ್‌ರವರು ಬೈಬಲ್‌ ಸತ್ಯವನ್ನು ಎಲ್ಲೆಡೆ ತ್ವರಿತವಾಗಿ ಹಬ್ಬಿಸಲು ಅತ್ಯಂತ ಪರಿಣಾಮಕಾರಿ ವಿಧವನ್ನು ಸದಾ ಹುಡುಕುತ್ತಿದ್ದರು. ಈಗಾಗಲೇ ಬೈಬಲ್‌ ವಿದ್ಯಾರ್ಥಿಗಳು 30ಕ್ಕಿಂತ ಹೆಚ್ಚು ವರ್ಷಗಳಿಂದ ಮುದ್ರಿತ ಪ್ರಕಾಶನಗಳನ್ನು ಬಳಸಿ ಬೈಬಲ್‌ ಸತ್ಯವನ್ನು ಪಸರಿಸುತ್ತಿದ್ದರು. ಆದರೆ ಈಗ ಒಂದು ವಿನೂತನ ವಿಧಾನದೆಡೆಗೆ ಅವರ ಗಮನ ಹರಿಯಿತು. ಅದುವೇ ಚಲನಚಿತ್ರಗಳು.

ಚಲನಚಿತ್ರಗಳ ಮೂಲಕ ಸುವಾರ್ತೆಯ ಪ್ರಸಾರ

1890ರ ದಶಕವು ಸಾರ್ವಜನಿಕರಿಗೆ ‘ಮೂಕ ಚಲನಚಿತ್ರ’ವನ್ನು ಪರಿಚಯಿಸಿತು. 1903ರಲ್ಲಿ ನ್ಯೂ ಯಾರ್ಕ್‌ ಸಿಟಿಯ ಚರ್ಚ್‌ವೊಂದರಲ್ಲಿ ಒಂದು ಧಾರ್ಮಿಕ ಚಲನಚಿತ್ರವನ್ನು ತೋರಿಸಲಾಯಿತು. ಹೀಗೆ 1912ರಷ್ಟಕ್ಕೆ ಚಲನಚಿತ್ರೋದ್ಯಮವು ಇನ್ನೂ ಅಂಬೆಗಾಲಿಡುತ್ತಿತ್ತು. ರಸಲ್‌ರವರು “ಫೋಟೋ-ಡ್ರಾಮ”ಕ್ಕಾಗಿ ಕೆಚ್ಚಿನಿಂದ ತಯಾರಿ ಶುರುಮಾಡಿದ್ದು ಆಗಲೇ. ಬೈಬಲ್‌ ಸತ್ಯವನ್ನು ಪ್ರಚುರಪಡಿಸುವುದರಲ್ಲಿ ಕೇವಲ ಮುದ್ರಿತ ಪ್ರಕಾಶನವೊಂದರಿಂದ ಮಾಡಸಾಧ್ಯವಿಲ್ಲದ್ದನ್ನು ಈ ಸಂವಹನ ಮಾಧ್ಯಮದ ಮೂಲಕ ಮಾಡಸಾಧ್ಯವೆಂದು ಅವರು ಮನಗಂಡರು.

“ಫೋಟೋ-ಡ್ರಾಮ” ಎಂಟು ತಾಸುಗಳ ಪ್ರದರ್ಶನ. ಅದನ್ನು ಸಾಮಾನ್ಯವಾಗಿ ನಾಲ್ಕು ಭಾಗಗಳಾಗಿ ತೋರಿಸಲಾಗುತ್ತಿತ್ತು. ಚುಟುಕಾದ 96 ಬೈಬಲ್‌ ಭಾಷಣಗಳ ಧ್ವನಿಸುರುಳಿ ಅದರಲ್ಲಿತ್ತು. ಧ್ವನಿ ನೀಡಿದವರು ಆ ಸಮಯದಲ್ಲಿ ಹೆಚ್ಚಿನವರು ಗುರುತಿಸಸಾಧ್ಯವಿದ್ದ ಸುಪ್ರಸಿದ್ಧ ಭಾಷಣಕರ್ತರೊಬ್ಬರು. ಅನೇಕ ದೃಶ್ಯಗಳಿಗೆ ಸುಶ್ರಾವ್ಯ ಶಾಸ್ತ್ರೀಯ ಸಂಗೀತವನ್ನು ಸಂಯೋಜಿಸಲಾಗಿತ್ತು. ಫೋನೋಗ್ರಾಫ್‌ಗಳಲ್ಲಿ ಧ್ವನಿಯನ್ನೂ ಸಂಗೀತವನ್ನೂ ನುಡಿಸಿ ಅದನ್ನು ವರ್ಣರಂಜಿತ ಸ್ಲೈಡ್‌ಗಳೊಂದಿಗೂ ಪ್ರಖ್ಯಾತ ಬೈಬಲ್‌ ಕಥೆಗಳ ಅಭಿನಯದ ಚಿತ್ರೀಕರಣದೊಂದಿಗೂ ಸರಿಹೊಂದಿಸುವುದರಲ್ಲಿ ನುರಿತ ನಿರ್ವಾಹಕರು ಶ್ರಮಿಸಿದರು.

“ತಾರೆಗಳ ಸೃಷ್ಟಿಯಿಂದ ಹಿಡಿದು ಕ್ರಿಸ್ತನ ಸಹಸ್ರ ವರ್ಷಗಳ ಆಳ್ವಿಕೆಯ ಮಹಿಮಾನ್ವಿತ ಸಮಾಪ್ತಿಯ ವರೆಗಿನ ಎಲ್ಲ ಚಿತ್ರಗಳು ಅದರಲ್ಲಿದ್ದವು.”—ಎಫ್‌. ಸ್ಟುಆರ್ಟ್ ಬಾರ್ನ್ಸ್, 14 ವಯಸ್ಸು, 1914ರಲ್ಲಿ.

ಚಲನಚಿತ್ರದ ಹೆಚ್ಚಿನ ದೃಶ್ಯಗಳು ಮತ್ತು ಅನೇಕ ಗಾಜಿನ ಸ್ಲೈಡ್‌ಗಳನ್ನು ಹೊರಗಿನ ಸ್ಟುಡಿಯೋಗಳಿಂದ ಕೊಂಡುಕೊಳ್ಳಲಾಯಿತು. ಫಿಲಡೆಲ್ಫಿಯ, ನ್ಯೂ ಯಾರ್ಕ್‌, ಪ್ಯಾರಿಸ್‌ ಮತ್ತು ಲಂಡನ್‍ನ ವೃತ್ತಿಪರ ಕಲಾಕಾರರು ಒಂದೊಂದು ಗಾಜಿನ ಸ್ಲೈಡ್‌ಗಳ ಮೇಲೂ ಕೈಯಿಂದ ಚಿತ್ರಗಳನ್ನು ಬಿಡಿಸಿದರು ಮತ್ತು ಚಿತ್ರೀಕರಣಕ್ಕೆ ಬೇಕಾದ ಚಿತ್ರಗಳನ್ನು ಬಿಡಿಸಿದರು. ಬೆತೆಲಿನ ಕಲಾವಿಭಾಗದಲ್ಲಿನ ಸಹೋದರರು ಸಹ ಅನೇಕ ಚಿತ್ರಗಳನ್ನು ಬಿಡಿಸಿದರು. ಒಡೆದು ಹೋದ ಸ್ಲೈಡ್‌ಗಳಿಗೆ ಬದಲಿ ಸ್ಲೈಡ್‌ಗಳನ್ನು ತಯಾರಿಸಿದರು.  ಖರೀದಿಸಿದ ಫಿಲ್ಮ್ಗಳಲ್ಲದೆ ಕೆಲವು ದೃಶ್ಯಗಳನ್ನು ಬೆತೆಲ್‌ ಕುಟುಂಬದ ಸದಸ್ಯರಿಂದ ಅಭಿನಯಿಸಿ ಚಿತ್ರೀಕರಣ ಮಾಡಲಾಯಿತು. ಉದಾಹರಣೆಗೆ ಅಬ್ರಹಾಮ, ಇಸಾಕರ ಪಾತ್ರವನ್ನು ಮತ್ತು ಮಗನನ್ನು ಯಜ್ಞವಾಗಿ ಅರ್ಪಿಸುವುದರಿಂದ ಅಬ್ರಹಾಮನನ್ನು ತಡೆದ ದೇವದೂತನ ಪಾತ್ರವನ್ನು ನ್ಯೂ ಯಾರ್ಕ್‍ನ ಯಾಂಕರ್ಸ್‌ ನಗರದಲ್ಲಿ ಚಿತ್ರೀಕರಿಸಲಾಯಿತು.—ಆದಿ. 22:9-12.

2 ಮೈಲಿ (3.2 ಕಿ.ಮೀ.) ಉದ್ದದ ಫಿಲ್ಮ್, 26 ಫೋನೋಗ್ರಾಫ್‌ ರೆಕಾರ್ಡ್‌ಗಳು ಮತ್ತು ಸುಮಾರು 500 ಗಾಜಿನ ಸ್ಲೈಡ್‌ಗಳಲ್ಲಿ ಯಾವ್ಯಾವದನ್ನು ಯಾವ್ಯಾವಾಗ ತೋರಿಸಬೇಕು, ಕೇಳಿಸಬೇಕು ಎಂದು ನುರಿತ ನಿರ್ವಾಹಕರು ಸಂಘಟಿಸಿದರು

ಸಹೋದರ ರಸಲ್‌ರವರ ಒಡನಾಡಿಯೊಬ್ಬರು ಮಾಧ್ಯಮದವರಿಗೆ “ಫೋಟೋ-ಡ್ರಾಮ” ಬಗ್ಗೆ, ‘ಇದು ಸಾವಿರಾರು ಜನರಿಗೆ ಬೈಬಲಿನಲ್ಲಿ ಆಸಕ್ತಿ ಹುಟ್ಟಿಸಲಿದೆ. ಧಾರ್ಮಿಕ ಪ್ರಗತಿಗಾಗಿ ಈ ವರೆಗೆ ಮಾಡಲಾಗಿರುವ ಎಲ್ಲದಕ್ಕಿಂತ ಹೆಚ್ಚನ್ನು ಇದು ಸಾಧಿಸಲಿದೆ’ ಎಂದರು. ಆದರೆ ಆಧ್ಯಾತ್ಮಿಕವಾಗಿ ಹಸಿದಿರುವ ಜನಸ್ತೋಮವನ್ನು ತೃಪ್ತಿಪಡಿಸಲು ಮಾಡಲಾದ ಈ ನವೀನ ವಿಧಾನವನ್ನು ಪಾದ್ರಿಗಳು ಮೆಚ್ಚಿದರೊ? ಇಲ್ಲ. ಕ್ರೈಸ್ತ ಪ್ರಪಂಚದ ಪಾದ್ರಿಗಳೆಲ್ಲರು ಬಹಿರಂಗವಾಗಿ “ಫೋಟೋ-ಡ್ರಾಮ”ವನ್ನು ತೀವ್ರವಾಗಿ ಖಂಡಿಸಿದರು. ಕೆಲವು ಪಾದ್ರಿಗಳಂತೂ ಸಾರ್ವಜನಿಕರು ಅದನ್ನು ನೋಡದಂತೆ ಮಾಡಲಿಕ್ಕಾಗಿ ನಿರ್ಲಜ್ಜೆಯಿಂದ ಕುಯುಕ್ತಿಗಳನ್ನು ಕಲ್ಪಿಸಿದರು. ಒಂದು ಸ್ಥಳದಲ್ಲಿ ಪಾದ್ರಿ ಕಡೆಯವರು ವಿದ್ಯುಚ್ಛಕ್ತಿಯನ್ನು ಕಡಿತಗೊಳಿಸಿದರು.

ಸ್ಥಳೀಯ ಸಭೆಗಳಲ್ಲಿನ ಮಹಿಳಾ ಅಟೆಂಡೆಂಟರು “ಫೋಟೋ-ಡ್ರಾಮ”ದ ಕಥಾಸಾರಾಂಶ ಮತ್ತು ಚಿತ್ರಗಳಿದ್ದ ಕಿರುಪುಸ್ತಿಕೆಯ ಲಕ್ಷಾಂತರ ಪ್ರತಿಗಳನ್ನು ಉಚಿತವಾಗಿ ಹಂಚಿದರು

ಬಾಲಕ ಯೇಸುವಿನ ಚಿತ್ರವಿದ್ದ “ಪ್ಯಾಕ್ಸ್‌” ಪಿನ್‌ಗಳನ್ನು ಸಹ ಪ್ರೇಕ್ಷಕರಿಗೆ ನೀಡಲಾಯಿತು. ಅದು ಧರಿಸಿದವರಿಗೆ “ಶಾಂತಿಯ ಪುತ್ರ”ರಾಗಿರುವಂತೆ ನೆನಪು ಹುಟ್ಟಿಸಿತು

ಹಾಗಿದ್ದರೂ “ಫೋಟೋ-ಡ್ರಾಮ” ಪ್ರದರ್ಶಿಸುತ್ತಿದ್ದ ಚಿತ್ರಮಂದಿರಗಳು ಜನರಿಂದ ಕಿಕ್ಕಿರಿದಿದ್ದವು. ಅಮೆರಿಕದಲ್ಲಿ ಪ್ರತಿ ದಿನ 80 ನಗರಗಳಲ್ಲಿ “ಫೋಟೋ-ಡ್ರಾಮ”ವನ್ನು ಉಚಿತವಾಗಿ ಪ್ರದರ್ಶಿಸಲಾಯಿತು. ಬಹುಮಂದಿ ಪ್ರೇಕ್ಷಕರು ಧ್ವನಿಯೊಂದಿಗೆ ಕೂಡಿದ ಚಲನಚಿತ್ರಗಳನ್ನು ಮೊತ್ತಮೊದಲ ಬಾರಿ ನೋಡಿ ಚಕಿತರಾದರು. ಅನೇಕ ಛಾಯಾಚಿತ್ರಗಳನ್ನು ವೇಗವಾಗಿ ಒಂದರ ನಂತರ ಒಂದರಂತೆ ತೋರಿಸುವ ಮೂಲಕ ಮೊಟ್ಟೆಯೊಡೆದು ಮರಿಹಕ್ಕಿ ಹೊರಬರುವುದನ್ನು, ಹೂ ಮೆಲ್ಲಮೆಲ್ಲನೆ ಅರಳುವುದನ್ನು ತೋರಿಸಲಾಯಿತು. ಆ ಡ್ರಾಮಾದಲ್ಲಿದ್ದ ವೈಜ್ಞಾನಿಕ ಮಾಹಿತಿಯು ಯೆಹೋವನ ಅಗಾಧ ವಿವೇಕವನ್ನು ಎತ್ತಿತೋರಿಸಿತು. ಆರಂಭದಲ್ಲಿ ತಿಳಿಸಲಾದಂತೆ ಪ್ರೇಕ್ಷಕರೊಬ್ಬರು “ಸಹೋದರ ರಸಲ್‌ರನ್ನು ನೇರವಾಗಿ ನೋಡುವುದಕ್ಕಿಂತ ಡ್ರಾಮದಲ್ಲೇ ಅವರು ಹೆಚ್ಚು ನೈಜವಾಗಿ ಕಂಡರು!” ಎಂದು ಹೇಳಿದರು.

ಬೈಬಲ್‌ ಶಿಕ್ಷಣ ಕಾರ್ಯದಲ್ಲೊಂದು ಮೈಲಿಗಲ್ಲು

1914ರ ಜನವರಿ 11ರಂದು “ಫೋಟೋ-ಡ್ರಾಮ” ಮೊದಲ ಬಾರಿ ಪ್ರದರ್ಶನಗೊಂಡದ್ದು ನ್ಯೂ ಯಾರ್ಕ್‌ ನಗರದ ಈ ಸೊಗಸಾದ ಚಿತ್ರಮಂದಿರದಲ್ಲಿ. ಇದು ಆ ಸಮಯದಷ್ಟಕ್ಕೆ ಅಂತಾರಾಷ್ಟ್ರೀಯ ಬೈಬಲ್‌ ವಿದ್ಯಾರ್ಥಿಗಳ ಅಸೋಸಿಯೇಷನ್‌ಗೆ ಸೇರಿದ್ದಾಗಿದ್ದು ಅವರದನ್ನು ಬಳಸುತ್ತಿದ್ದರು

ಸಾಹಿತಿ ಮತ್ತು ಚಲನಚಿತ್ರ ಇತಿಹಾಸಕಾರರಾದ ಟಿಮ್‌ ಡರ್ಕ್ಸ್‌ ಅವರು “ಫೋಟೋ ಡ್ರಾಮ” ಬಗ್ಗೆ ವರ್ಣನೆ ನೀಡಿದ್ದು ಹೀಗೆ: “ಬೆಳ್ಳಿತೆರೆಯ ಮೇಲೆ ಚಲನಚಿತ್ರವನ್ನೂ ಪ್ರೊಜೆಕ್ಟರ್‌ ಮೂಲಕ ವರ್ಣರಂಜಿತ ಸ್ಲೈಡ್‌ಗಳನ್ನೂ ತೋರಿಸುತ್ತ ಅದಕ್ಕೆ ಹೊಂದಿಕೆಯಲ್ಲಿ (ರೆಕಾರ್ಡ್‌ ಮಾಡಲಾದ) ಧ್ವನಿಮುದ್ರಣವನ್ನು ಕೇಳಿಸಿದ್ದು ಅದೇ ಮೊತ್ತಮೊದಲ ಬಾರಿ.” ಹೌದು, ಅದಕ್ಕೆ ಮುಂಚೆ ಜನರು ನೋಡಿದ್ದ ಚಲನಚಿತ್ರಗಳಲ್ಲಿ ಆ ಮೂರು ತಾಂತ್ರಿಕತೆಗಳಲ್ಲಿ ಒಂದೆರಡನ್ನು ಬಳಸಲಾಗಿತ್ತಾದರೂ ಮೂರನ್ನೂ ಒಟ್ಟೊಟ್ಟಿಗೆ ಬಳಸಲಾದದ್ದು ‘ಫೋಟೋ-ಡ್ರಾಮದಲ್ಲೇ.’ ಅದರಲ್ಲೂ ಬೈಬಲಿನ ವಿಷಯಾಧರಿಸಿದ ಚಲನಚಿತ್ರದಲ್ಲಿ ಇದೇ ಮೊದಲು. ಅಷ್ಟಲ್ಲದೆ ಇನ್ಯಾವ ಚಿತ್ರಕ್ಕೂ ಇಷ್ಟೊಂದು ಪ್ರೇಕ್ಷಕರು ಇರಲಿಲ್ಲ. ಫೋಟೋ-ಡ್ರಾಮ ತೆರೆಕಂಡ ಮೊದಲನೇ ವರ್ಷದಲ್ಲೇ ಉತ್ತರ ಅಮೆರಿಕ, ಯೂರೋಪ್‌, ನ್ಯೂಜಿಲೆಂಡ್‍ನಲ್ಲಿ ಅದನ್ನು ವೀಕ್ಷಿಸಿದವರ ಸಂಖ್ಯೆ ಒಟ್ಟು 90 ಲಕ್ಷ!

“ಫೋಟೋ-ಡ್ರಾಮ”ದ ಪ್ರಥಮ ಪ್ರದರ್ಶನ 1914ರ ಜನವರಿ 11ರಂದು ನ್ಯೂ ಯಾರ್ಕ್‌ ನಗರದಲ್ಲಿ ನಡೆಯಿತು. ಏಳು ತಿಂಗಳ ನಂತರ ದೊಡ್ಡ ವಿಪತ್ತು ಅಂದರೆ ಒಂದನೇ ಮಹಾಯುದ್ಧ ಆರಂಭವಾಯಿತು. ಹಾಗಿದ್ದರೂ ಪ್ರಪಂಚದೆಲ್ಲೆಡೆ ಜನರು “ಫೋಟೋ-ಡ್ರಾಮ” ನೋಡಲಿಕ್ಕಾಗಿ ನೆರೆದುಬರುತ್ತಿದ್ದರು ಮತ್ತು ದೇವರ ರಾಜ್ಯದಡಿ ಸಿಗಲಿರುವ ಆಶೀರ್ವಾದಗಳ ಮನಮೋಹಕ ದೃಶ್ಯಗಳಿಂದ ಸಾಂತ್ವನ ಪಡೆದುಕೊಳ್ಳುತ್ತಿದ್ದರು. 1914ನೇ ವರ್ಷದಲ್ಲಿ “ಫೋಟೋ-ಡ್ರಾಮ” ನಿಜಕ್ಕೂ ಒಂದು ಅದ್ವಿತೀಯ ಪ್ರದರ್ಶನ!

ನಿರ್ವಾಹಕರ ತಂಡಗಳು ಉತ್ತರ ಅಮೆರಿಕದೆಲ್ಲೆಡೆ “ಫೋಟೋ-ಡ್ರಾಮ”ದ ಪ್ರದರ್ಶನಕ್ಕಾಗಿ ಒಟ್ಟು 20 ಬೇರೆ ಬೇರೆ ಸೆಟ್‌ಗಳನ್ನು ಬಳಸಿದರು