ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಸಮಸ್ಯೆಗಳಿಗೆ ದೇವರು ಕಾರಣನೊ?

ನಮ್ಮ ಸಮಸ್ಯೆಗಳಿಗೆ ದೇವರು ಕಾರಣನೊ?

ನಮ್ಮ ಸಮಸ್ಯೆಗಳಿಗೆ ದೇವರು ಕಾರಣನೊ?

ಮರ್ಯನಳ ಪ್ರಾಪ್ತವಯಸ್ಸಿನ ಮಗಳಿಗೆ ಗಂಭೀರವಾದ ಮಿದುಳಿನ ಹಾನಿಯಾದಾಗ, ನಮ್ಮಲ್ಲಿ ಹೆಚ್ಚಿನವರು ಏನನ್ನು ಮಾಡುತ್ತೇವೊ ಅದನ್ನೇ ಅವಳೂ ಮಾಡಿದಳು. * ಹೌದು, ಸಹಾಯಕ್ಕಾಗಿ ಅವಳು ದೇವರನ್ನು ಬೇಡಿದಳು. “ಈ ರೀತಿಯ ನಿಸ್ಸಹಾಯಕತೆ ಮತ್ತು ಒಂಟಿತನದ ಭಾವನೆಯು ನನ್ನನ್ನು ಹಿಂದೆಂದೂ ಕಾಡಿಸಿರಲಿಲ್ಲ” ಎನ್ನುತ್ತಾಳೆ ಮರ್ಯನ್‌. ಆ ಬಳಿಕ ಅವಳ ಮಗಳ ಸ್ಥಿತಿಯು ಇನ್ನಷ್ಟು ಹದಗೆಟ್ಟಿತು, ಮತ್ತು ಆಗ ಮರ್ಯನಳ ಮನಸ್ಸಿನಲ್ಲಿ ದೇವರ ಬಗ್ಗೆ ಸಂಶಯಗಳು ಹುಟ್ಟಿಕೊಂಡವು. “ಹೀಗೇಕೆ ಆಗುತ್ತಿದೆ?” ಎಂದವಳು ಪ್ರಶ್ನಿಸಿದಳು. ಪ್ರೀತಿಸುವವನೂ ಹಿತಚಿಂತಕನೂ ಆದ ದೇವರೊಬ್ಬನು ಈ ಕಷ್ಟಕಾಲದಲ್ಲಿ ಹೇಗೆ ತನ್ನ ಕೈಬಿಡಬಲ್ಲನು ಎಂಬುದನ್ನು ಅರ್ಥಮಾಡಿಕೊಳ್ಳಲು ಅವಳಿಗೆ ಸಾಧ್ಯವಾಗಲಿಲ್ಲ.

ಮರ್ಯನಳ ಅನುಭವವು ಅಸಾಮಾನ್ಯವಾದದ್ದೇನೂ ಅಲ್ಲ. ಲೋಕದಲ್ಲೆಲ್ಲೂ ಅಸಂಖ್ಯಾತ ಜನರಿಗೆ, ಕಷ್ಟದ ಸಮಯದಲ್ಲಿ ದೇವರು ತಮ್ಮ ಕೈಬಿಟ್ಟಿದ್ದನೆಂಬ ಭಾವನೆಯಿದೆ. “‘ದೇವರು ಹೀಗಾಗುವಂತೆ ಬಿಟ್ಟದ್ದೇಕೆ?’ ಎಂಬಂಥ ಪ್ರಶ್ನೆಗಳೊಂದಿಗೆ ನಾನು ಈಗಲೂ ಹೆಣಗಾಡುತ್ತೇನೆ. . . . ನಾನು ದೇವರಲ್ಲಿ ಸಂಪೂರ್ಣವಾಗಿ ನಂಬಿಕೆಯನ್ನು ಕಳೆದುಕೊಂಡಿಲ್ಲ, ಆದರೆ ಅದು ಖಂಡಿತವಾಗಿಯೂ ಮೊದಲಿದ್ದಷ್ಟು ಬಲವಾಗಿಲ್ಲ” ಎಂದು ಲೀಸಾ ಎಂಬವಳು ತನ್ನ ಮೊಮ್ಮಗನ ಕೊಲೆಯಾದ ನಂತರ ಹೇಳಿದಳು. ಅದೇ ರೀತಿಯಲ್ಲಿ ತನ್ನ ಪುಟ್ಟ ಕಂದನಿಗೆ ಸಂಭವಿಸಿದ ಅರ್ಥಹೀನ ದುರಂತದ ಬಳಿಕ ಒಬ್ಬ ಸ್ತ್ರೀ ಹೇಳಿದ್ದು: “ಹೀಗಾದಾಗ ದೇವರು ನನ್ನನ್ನು ಸ್ವಲ್ಪವೂ ಸಂತೈಸಲಿಲ್ಲ. ಆತನಿಗೆ ನನ್ನ ಬಗ್ಗೆ ಹಿತಚಿಂತನೆ ಇದೆ ಎಂಬ ಯಾವ ಸೂಚನೆಯನ್ನಾಗಲಿ ಅನುಕಂಪವನ್ನಾಗಲಿ ಆತನು ನನಗೆ ತೋರಿಸಲಿಲ್ಲ.” ಅವಳು ಮತ್ತೂ ಕೂಡಿಸಿದ್ದು: “ನಾನು ದೇವರನ್ನು ಎಂದೂ ಕ್ಷಮಿಸಲಾರೆ.”

ಇನ್ನಿತರರು ತಮ್ಮ ಸುತ್ತಲಿನ ಲೋಕವನ್ನು ನೋಡಿ ದೇವರ ಬಗ್ಗೆ ಕೋಪದ ಭಾವನೆಗಳನ್ನು ಬೆಳೆಸುತ್ತಾರೆ. ಬಡತನ ಮತ್ತು ಹಸಿವೆಯಿಂದ ಕಂಗೆಟ್ಟಿರುವ ದೇಶಗಳನ್ನು, ಯಾವುದೇ ನಿರೀಕ್ಷೆಯಿಲ್ಲದ ಯುದ್ಧ ನಿರಾಶ್ರಿತರನ್ನು, ಏಡ್ಸ್‌ನಿಂದಾಗಿ ತಬ್ಬಲಿಗಳಾಗಿರುವ ಅಸಂಖ್ಯಾತ ಮಕ್ಕಳನ್ನು, ಮತ್ತು ಇನ್ನಿತರ ರೋಗಗಳಿಂದ ಬಾಧಿತರಾಗಿರುವ ಕೋಟಿಗಟ್ಟಲೆ ಜನರನ್ನು ಅವರು ನೋಡುತ್ತಾರೆ. ಈ ದುರಂತಗಳು ಮತ್ತು ಇದಕ್ಕೆ ಹೋಲುವಂಥ ಇತರ ದುರಂತಗಳು ಸಂಭವಿಸುವಾಗ ದೇವರು ಯಾಕೆ ಯಾವುದೇ ಕ್ರಮಕೈಗೊಳ್ಳುವುದಿಲ್ಲವೆಂದು ಅನೇಕರು ಆತನನ್ನು ದೂಷಿಸುತ್ತಾರೆ.

ಆದರೆ ಸತ್ಯ ಸಂಗತಿಯೇನೆಂದರೆ, ಮಾನವಕುಲವನ್ನು ಪೀಡಿಸುತ್ತಿರುವ ಸಮಸ್ಯೆಗಳಿಗೆ ದೇವರು ಕಾರಣನಲ್ಲ. ವಾಸ್ತವದಲ್ಲಿ, ಮಾನವ ಕುಟುಂಬದ ಮೇಲೆ ಬರಮಾಡಲ್ಪಟ್ಟಿರುವ ಎಲ್ಲಾ ಹಾನಿಯನ್ನು ದೇವರು ಸರಿಪಡಿಸುವನು ಎಂದು ನಂಬಲು ನ್ಯಾಯವಾದ ಕಾರಣಗಳಿವೆ. ದೇವರು ನಿಜವಾಗಿಯೂ ನಮ್ಮ ಹಿತಚಿಂತಕನಾಗಿದ್ದಾನೆ ಎಂಬುದನ್ನು ತಿಳಿದುಕೊಳ್ಳಲು ಮುಂದಿನ ಲೇಖನವನ್ನು ಓದುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ.

[ಪಾದಟಿಪ್ಪಣಿ]

^ ಹೆಸರುಗಳು ಬದಲಾಯಿಸಲ್ಪಟ್ಟಿವೆ.