ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅವರು ಬ್ರಸಿಲ್‌ನಲ್ಲಿ ರಾಜ್ಯ ಸಂದೇಶವನ್ನು “ಕೇಳಿಸಿಕೊಳ್ಳುತ್ತಿದ್ದಾರೆ”

ಅವರು ಬ್ರಸಿಲ್‌ನಲ್ಲಿ ರಾಜ್ಯ ಸಂದೇಶವನ್ನು “ಕೇಳಿಸಿಕೊಳ್ಳುತ್ತಿದ್ದಾರೆ”

ರಾಜ್ಯ ಘೋಷಕರು ವರದಿ ಮಾಡುತ್ತಾರೆ

ಅವರು ಬ್ರಸಿಲ್‌ನಲ್ಲಿ ರಾಜ್ಯ ಸಂದೇಶವನ್ನು “ಕೇಳಿಸಿಕೊಳ್ಳುತ್ತಿದ್ದಾರೆ”

ಬ್ರಸಿಲ್‌ನಲ್ಲಿರುವ ಅನೇಕ ಯೆಹೋವನ ಸಾಕ್ಷಿಗಳು ಕಿವುಡ ಸಮಾಜದಲ್ಲಿಯೂ ರಾಜ್ಯದ ಸುವಾರ್ತೆಯನ್ನು ಘೋಷಿಸುವ ಪಂಥಾಹ್ವಾನವನ್ನು ಸ್ವೀಕರಿಸಿದ್ದಾರೆ. ಅವರ ಪ್ರಯತ್ನಗಳು ಅತ್ಯುತ್ತಮ ಫಲಿತಾಂಶಗಳನ್ನು ತರುತ್ತಿವೆ ಎಂಬುದನ್ನು ಮುಂದಿನ ಅನುಭವಗಳು ತೋರಿಸುತ್ತವೆ.

ಸಾಉ ಪೌಲೊವಿನಲ್ಲಿರುವ ಎವ * ಎಂಬ ಕಿವುಡ ಸ್ತ್ರೀ ತನ್ನ ಮೂರು ಮಂದಿ ಮಕ್ಕಳೊಂದಿಗೆ ಕಿವಿಕೇಳಿಸದಂಥ ಒಬ್ಬ ಪುರುಷನೊಂದಿಗೆ ಜೀವಿಸಲು ಬಂದಾಗ ಸನ್ನೆ ಭಾಷೆಯನ್ನು ಕಲಿಯಲು ಪ್ರಾರಂಭಿಸಿದಳು. ಒಂದು ವ್ಯಾಪಾರ ಕೇಂದ್ರದಲ್ಲಿ ಎವಳೂ ಅವಳ ಪ್ರಿಯತಮನೂ ಕಿವುಡ ಸಾಕ್ಷಿಗಳ ಗುಂಪೊಂದನ್ನು ಭೇಟಿಯಾದರು, ಮತ್ತು ರಾಜ್ಯ ಸಭಾಗೃಹದಲ್ಲಿ ಒಂದು ಕೂಟಕ್ಕೆ ಹಾಜರಾಗುವಂತೆ ಆಮಂತ್ರಿಸಲ್ಪಟ್ಟರು. ಅವರು ಅದೊಂದು ಸಾಮಾಜಿಕ ಕೂಟವೆಂದು ನೆನಸಿ ಆ ಆಮಂತ್ರಣವನ್ನು ಸ್ವೀಕರಿಸಿದರು.

ಎವಳಿಗೆ ಸನ್ನೆ ಭಾಷೆಯ ಕುರಿತು ಸೀಮಿತ ಜ್ಞಾನವಿದ್ದದರಿಂದ, ಕೂಟದಲ್ಲಿ ಏನು ಹೇಳಲ್ಪಡುತ್ತಿತ್ತೋ ಅದರಲ್ಲಿ ಸ್ವಲ್ಪ ಭಾಗ ಮಾತ್ರ ಅವಳು ಅರ್ಥಮಾಡಿಕೊಂಡಳು. ಕೂಟದ ನಂತರ ಲಘು ಉಪಾಹಾರಕ್ಕಾಗಿ ಒಬ್ಬ ಸಾಕ್ಷಿ ದಂಪತಿಯು ಅವಳನ್ನು ತಮ್ಮ ಮನೆಗೆ ಕರೆದರು. ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ! ಎಂಬ ಬ್ರೋಷರಿನಲ್ಲಿರುವ ಚಿತ್ರಗಳನ್ನು ಉಪಯೋಗಿಸುತ್ತಾ, ಭವಿಷ್ಯತ್ತಿನಲ್ಲಿ ಭೂಮಿಯ ಮೇಲೆ ಪರದೈಸವು ಸ್ಥಾಪಿಸಲ್ಪಡುವುದು ಎಂಬ ದೇವರ ವಾಗ್ದಾನದ ಕುರಿತು ಅವರು ವಿವರಿಸಿದರು. ತಾನು ಕಲಿತ ವಿಷಯವು ಎವಳಿಗೆ ಇಷ್ಟವಾಯಿತು ಮತ್ತು ಅವಳು ಕೂಟಗಳಿಗೆ ಕ್ರಮವಾಗಿ ಹಾಜರಾಗಲು ಆರಂಭಿಸಿದಳು.

ನಂತರ ಶೀಘ್ರದಲ್ಲೇ, ಬೈಬಲ್‌ ಮೂಲತತ್ತ್ವಗಳಿಗನುಸಾರ ಜೀವಿಸಲಿಕ್ಕಾಗಿ ಎವ ತನ್ನ ಪ್ರಿಯತಮನನ್ನು ಬಿಟ್ಟುಬಿಟ್ಟಳು. ತನ್ನ ಕುಟುಂಬದಿಂದ ಬಲವಾದ ವಿರೋಧವನ್ನು ಎದುರಿಸಿದರೂ, ಅವಳು ಆತ್ಮಿಕ ಪ್ರಗತಿಯನ್ನು ಮಾಡುತ್ತಾ ಹೋದಳು ಮತ್ತು 1995ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡಳು. ಆರು ತಿಂಗಳುಗಳ ನಂತರ ಎವ ಒಬ್ಬ ಪಯನೀಯರಳಾಗಿ ಅಥವಾ ಪೂರ್ಣ ಸಮಯದ ರಾಜ್ಯ ಘೋಷಕಳಾಗಿ ಸೇವೆ ಸಲ್ಲಿಸಲು ಆರಂಭಿಸಿದಳು. ಇದುವರೆಗೂ ಅವಳು ನಾಲ್ಕು ಮಂದಿ ಕಿವುಡರು ಸಮರ್ಪಣೆ ಮತ್ತು ದೀಕ್ಷಾಸ್ನಾನದ ಹಂತವನ್ನು ತಲಪುವಂತೆ ಅವರಿಗೆ ಸಹಾಯಮಾಡಿದ್ದಾಳೆ.

ಕಾರ್‌ಲೊಸ್‌ ಹುಟ್ಟಿನಿಂದಲೇ ಕಿವುಡನಾಗಿದ್ದನು. ಬಾಲ್ಯದಿಂದಲೇ ಅವನು ಅಮಲೌಷಧ, ಅನೈತಿಕತೆ, ಮತ್ತು ಕಳ್ಳತನ ಮಾಡುವುದರಲ್ಲಿ ಒಳಗೂಡಿದ್ದನು. ಇವನು ಎದುರಾಳಿ ಗ್ಯಾಂಗ್‌ ಸದಸ್ಯರಿಂದ ಬೆದರಿಸಲ್ಪಟ್ಟದ್ದರಿಂದ ಸಾಉ ಪೌಲೊವಿಗೆ ಓಡಿಹೋಗಿ, ಅಲ್ಲಿ ಸ್ವಾಉ ಎಂಬ ವ್ಯಕ್ತಿಯೊಂದಿಗೆ ಸ್ವಲ್ಪ ಕಾಲ ಜೀವಿಸಿದನು. ಕಾರ್‌ಲೊಸ್‌ನಂತೆಯೇ ಸ್ವಾಉ ಕೂಡ ಕಿವುಡನಾಗಿದ್ದನು ಮತ್ತು ಅನೈತಿಕ ಜೀವನವನ್ನು ನಡೆಸುತ್ತಿದ್ದನು.

ಕೆಲವು ವರ್ಷಗಳ ನಂತರ, ಕಾರ್‌ಲೊಸ್‌ ರಾಜ್ಯ ಸಂದೇಶವನ್ನು ಕಲಿತುಕೊಂಡನು. ಇದು ಅವನು ತನ್ನ ಜೀವನವನ್ನು ಸರಿಪಡಿಸುವಂತೆ ಮತ್ತು ತನ್ನ ವಿವಾಹವನ್ನು ಕಾನೂನುಬದ್ಧಗೊಳಿಸುವಂತೆ ಪ್ರಚೋದಿಸಿತು. ಶಾಸ್ತ್ರೀಯ ಆವಶ್ಯಕತೆಗಳನ್ನು ಪೂರೈಸಿದ ಬಳಿಕ ಕಾರ್‌ಲೊಸ್‌ ಯೆಹೋವನಿಗೆ ತನ್ನನ್ನು ಸಮರ್ಪಿಸಿಕೊಂಡದ್ದರ ಸಂಕೇತವಾಗಿ ದೀಕ್ಷಾಸ್ನಾನವನ್ನು ಪಡೆದನು. ಈ ಮಧ್ಯೆ, ಕಾರ್‌ಲೊಸ್‌ಗೆ ಗೊತ್ತಿಲ್ಲದೆ ಸ್ವಾಉವಿಗೂ ಸುವಾರ್ತೆಯ ಪರಿಚಯವಾಗಿತ್ತು ಮತ್ತು ಇವನು ಕೂಡ ತನ್ನ ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡಿದನು. ಧಾರ್ಮಿಕ ಮೂರ್ತಿಗಳ ಉಪಯೋಗವನ್ನು ಯೆಹೋವನು ಒಪ್ಪುವುದಿಲ್ಲ ಎಂಬುದನ್ನು ಕಲಿತುಕೊಂಡ ಸ್ವಾಉ ತಾನು ಸಂಗ್ರಹಿಸಿಟ್ಟಿದ್ದ “ಸಂತರ” ಮೂರ್ತಿಗಳನ್ನು ಎಸೆದುಬಿಟ್ಟನು. ತನ್ನ ಹಿಂದಿನ ಜೀವನ ರೀತಿಯನ್ನು ತೊರೆದುಬಿಟ್ಟ ನಂತರ ಸ್ವಾಉ ಕೂಡ ದೀಕ್ಷಾಸ್ನಾನವನ್ನು ಪಡೆದುಕೊಂಡನು.

ಕಾರ್‌ಲೊಸ್‌ ಮತ್ತು ಸ್ವಾಉ ಒಂದು ಸಭಾಗೃಹದಲ್ಲಿ ಭೇಟಿಯಾಗಿ, ಇಬ್ಬರೂ ಮಾಡಿದ್ದ ಬದಲಾವಣೆಗಳನ್ನು ನೋಡಿ ಎಷ್ಟು ಸಂತೋಷಪಟ್ಟರು! ಇವರಿಬ್ಬರೂ ಈಗ ಜವಾಬ್ದಾರಿಯುತ ಕುಟುಂಬ ತಲೆಗಳಾಗಿದ್ದಾರೆ ಮತ್ತು ಹುರುಪಿನ ರಾಜ್ಯ ಘೋಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಬ್ರಸಿಲ್‌ನಲ್ಲಿ, ಸದ್ಯಕ್ಕೆ ಸನ್ನೆ ಭಾಷೆಯ 30 ಸಭೆಗಳು ಮತ್ತು 154 ಗುಂಪುಗಳಿವೆ. ಇವುಗಳಲ್ಲಿ ಸುಮಾರು 1,500 ಕಿವುಡರನ್ನು ಒಳಗೊಂಡ 2,500ಕ್ಕಿಂತ ಹೆಚ್ಚಿನ ಪ್ರಚಾರಕರಿದ್ದಾರೆ. 2001ರಲ್ಲಿ ಬ್ರಸಿಲ್‌ನಲ್ಲಿ ಕಿವುಡರಿಗಾಗಿ ಏರ್ಪಡಿಸಲ್ಪಟ್ಟಿದ್ದ “ದೇವರ ವಾಕ್ಯದ ಬೋಧಕರು” ಜಿಲ್ಲಾ ಅಧಿವೇಶನಗಳಲ್ಲಿ, 3,000ಕ್ಕಿಂತ ಹೆಚ್ಚು ಮಂದಿ ಹಾಜರಿದ್ದರು ಮತ್ತು 36 ಮಂದಿ ದೀಕ್ಷಾಸ್ನಾನ ಪಡೆದುಕೊಂಡರು. ಯೆಹೋವನ ಆಶೀರ್ವಾದದಿಂದ ಇನ್ನೂ ಹೆಚ್ಚು ಕಿವುಡರು ರಾಜ್ಯ ಸಂದೇಶವನ್ನು ಸ್ವೀಕರಿಸುವರು ಎಂಬುದು ನಮ್ಮ ನಿರೀಕ್ಷೆಯಾಗಿದೆ.

[ಪಾದಟಿಪ್ಪಣಿ]

^ ಪ್ಯಾರ. 4 ಹೆಸರುಗಳು ಬದಲಾಯಿಸಲ್ಪಟ್ಟಿವೆ.