ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದೇವರ ಹೆಸರಿಗೆ ಹತ್ತಿದ ಕಳಂಕವು ಹೋಗಲಾಡಿಸಲ್ಪಟ್ಟದ್ದು

ದೇವರ ಹೆಸರಿಗೆ ಹತ್ತಿದ ಕಳಂಕವು ಹೋಗಲಾಡಿಸಲ್ಪಟ್ಟದ್ದು

ರಾಜ್ಯ ಘೋಷಕರು ವರದಿ ಮಾಡುತ್ತಾರೆ

ದೇವರ ಹೆಸರಿಗೆ ಹತ್ತಿದ ಕಳಂಕವು ಹೋಗಲಾಡಿಸಲ್ಪಟ್ಟದ್ದು

ದೇವರ ವಾಕ್ಯವಾದ ಬೈಬಲ್‌ ಹೇಳುವುದು: “ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ; ಆಗ ಅವರು ಯಾವ ವಿಷಯದಲ್ಲಿ ನಿಮ್ಮನ್ನು ಅಕ್ರಮಗಾರರೆಂದು ನಿಂದಿಸುತ್ತಾರೋ ಆ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆ ಕಂಡು ವಿಚಾರಣೆಯ ದಿನದಲ್ಲಿ ದೇವರನ್ನು ಕೊಂಡಾಡುವರು.” (1 ಪೇತ್ರ 2:12) ಆದುದರಿಂದ, ಯೆಹೋವನ ಹೆಸರಿಗೆ ಕಳಂಕವನ್ನು ತರದೇ ಇರಲಿಕ್ಕಾಗಿ ನಿಜ ಕ್ರೈಸ್ತರು ಅತ್ಯುತ್ತಮ ನಡತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಾರೆ.

ಸಾಂಬಿಯದಿಂದ ಬಹು ದೂರದಲ್ಲಿರುವ ಸೆನಾನ್‌ಗಾ ಎಂಬ ಕ್ಷೇತ್ರದಲ್ಲಿ, ಒಬ್ಬ ಶಾಲಾ ಶಿಕ್ಷಕನ ಮನೆಯಿಂದ ಒಂದು ರೇಡಿಯೋ ಕಳವಾಯಿತು. ಯೆಹೋವನ ಸಾಕ್ಷಿಗಳು ಆ ಕ್ಷೇತ್ರದಲ್ಲಿ ಸಾರುತ್ತಾ ಇದ್ದುದರಿಂದ, ಈ ವ್ಯಕ್ತಿಯು ಅವರ ಮೇಲೆ ಕಳ್ಳತನದ ಆರೋಪ ಹೊರಿಸಿದನು. ಅವನು ಇದರ ಬಗ್ಗೆ ಪೊಲೀಸರಿಗೆ ದೂರಿತ್ತನು ಮತ್ತು ತನ್ನ ರೇಡಿಯೋವನ್ನು ಸಾಕ್ಷಿಗಳೇ ಕದ್ದಿದ್ದಾರೆ ಎಂದು ವಾದಿಸಿದನು. ಸಾಕ್ಷಿಗಳು ತನ್ನ ಮನೆಗೂ ಬಂದಿದ್ದರು ಎಂಬುದಕ್ಕೆ ಪುರಾವೆಯೋಪಾದಿ, ನೆಲದ ಮೇಲೆ ತನಗೆ ಸಿಕ್ಕಿದಂತಹ ಒಂದು ಟ್ರ್ಯಾಕ್ಟನ್ನು ತೋರಿಸಿದನು. ಆದರೂ, ಪೊಲೀಸರು ಅವನ ಮಾತನ್ನು ನಂಬಲು ಸಿದ್ಧರಿರಲಿಲ್ಲ, ಮನೆಗೆ ಹೋಗಿ ಪುನಃ ಸರಿಯಾಗಿ ಹುಡುಕು ಎಂದು ಅವನಿಗೆ ಹೇಳಿದರು.

ಅದೇ ಸಮಯದಲ್ಲಿ, ಹಿರಿಯರ ಮಂಡಲಿಯು ಒಂದು ಏರ್ಪಾಡನ್ನು ಮಾಡಿತು. ಅದೇನೆಂದರೆ, ಆ ದಿನ ಈ ಶಿಕ್ಷಕನ ನೆರೆಹೊರೆಯಲ್ಲಿ ಸಾರುವ ಕೆಲಸವನ್ನು ಮಾಡಿದ್ದ ಸಾಕ್ಷಿಗಳು ಪುನಃ ಅವನ ಮನೆಗೆ ಹೋಗಿ, ಈ ವಿಷಯದ ಕುರಿತು ಮಾತಾಡುವುದೇ ಆಗಿತ್ತು. ಕೆಲವು ಸಹೋದರರು ಅವನ ಬಳಿಗೆ ಹೋಗಿ ಅವನೊಂದಿಗೆ ಮಾತಾಡಿ, ತಾವು ಯೆಹೋವನ ಹೆಸರಿಗೆ ಹತ್ತಿರುವ ಕಳಂಕವನ್ನು ಹೋಗಲಾಡಿಸಲು ಬಯಸುತ್ತೇವೆ ಎಂದು ವಿವರಿಸಿದರು. ಅವರು ಚರ್ಚಿಸುತ್ತಿದ್ದಾಗ, ನಿಮ್ಮ ಮನೆಯಲ್ಲಿ ನಾವು ಒಬ್ಬ ಯೌವನಸ್ಥನನ್ನು ಭೇಟಿಯಾದೆವು ಮತ್ತು ಅವನಿಗೆ ಒಂದು ಟ್ರ್ಯಾಕ್ಟನ್ನು ಕೊಟ್ಟೆವು ಎಂದು ಸಾಕ್ಷಿಗಳು ಶಿಕ್ಷಕನಿಗೆ ಹೇಳಿದರು. ಸಾಕ್ಷಿಗಳ ವರ್ಣನೆಯಿಂದ, ಆ ವ್ಯಕ್ತಿ ಯಾರಾಗಿರಬಹುದು ಎಂಬುದು ಶಿಕ್ಷಕನಿಗೆ ಗೊತ್ತಾಯಿತು. ಅವರಿಬ್ಬರೂ ಒಂದೇ ಚರ್ಚಿಗೆ ಸೇರಿದವರಾಗಿದ್ದರು. ಶಿಕ್ಷಕನು ಆ ಯೌವನಸ್ಥನ ಬಳಿ ಹೋಗಿ ಕೇಳಿದನು, ಆದರೆ ಅವನು ಅಲ್ಲಗಳೆದುಬಿಟ್ಟನು. ತದನಂತರ ಶಿಕ್ಷಕನು ಈ ವಿಷಯವನ್ನು ಯೌವನಸ್ಥನ ಹೆತ್ತವರ ಬಳಿ ಚರ್ಚಿಸಿದನು ಮತ್ತು ತನ್ನ ಮನೆಗೆ ಹಿಂದಿರುಗಿದನು. ಒಂದು ತಾಸಿನೊಳಗೆ, ಆ ಯೌವನಸ್ಥನ ತಾಯಿಯು ಕದಿಯಲ್ಪಟ್ಟಿದ್ದ ರೇಡಿಯೋವನ್ನು ಹಿಂದಿರುಗಿಸಿದಳು.

ತೀವ್ರ ಪಶ್ಚಾತ್ತಾಪದಿಂದ ಆ ಶಿಕ್ಷಕನು ಹಿರಿಯರ ಮಂಡಲಿಯ ಬಳಿಗೆ ಬಂದು, ಸುಳ್ಳು ಆಪಾದನೆಗಳನ್ನು ಮಾಡಿದ್ದಕ್ಕಾಗಿ ಕ್ಷಮೆಯಾಚಿದನು. ಹಿರಿಯರು ಅವನ ತಪ್ಪೊಪ್ಪಿಗೆಯನ್ನು ಅಂಗೀಕರಿಸಿದರು, ಆದರೆ ಈ ವಿಷಯವನ್ನು ಎಲ್ಲರಿಗೂ ತಿಳಿಸುವುದು ಒಳ್ಳೇದು, ಏಕೆಂದರೆ ಸಾಕ್ಷಿಗಳು ನಿರ್ದೋಷಿಗಳಾಗಿದ್ದಾರೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತಾಗಲಿ ಎಂದು ಅವರು ಕೇಳಿಕೊಂಡರು. ಶಾಲೆಯಲ್ಲಿ ಇದರ ಬಗ್ಗೆ ಪ್ರಕಟನೆಯನ್ನು ಮಾಡಲಾಯಿತು. ಹೀಗೆ ಯೆಹೋವನ ಹೆಸರಿಗೆ ಹತ್ತಿದ ಕಳಂಕವು ಹೋಗಲಾಡಿಸಲ್ಪಟ್ಟಿತು. ಯೆಹೋವನ ಸಾಕ್ಷಿಗಳು ಈ ಕ್ಷೇತ್ರದಲ್ಲಿ ಸ್ವತಂತ್ರವಾಗಿ ಸುವಾರ್ತೆಯನ್ನು ಸಾರಲು ಸಾಧ್ಯವಾಗಿದೆ.

[ಪುಟ 19ರಲ್ಲಿರುವ ಭೂಪಟಗಳು/ಚಿತ್ರ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಆಫ್ರಿಕ

ಸಾಂಬಿಯ

[ಕೃಪೆ]

Mountain High Maps® Copyright © 1997 Digital Wisdom, Inc.