ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂದು ವಿಶೇಷವಾದ ಪರಂಪರೆಯಿಂದ ಆಶೀರ್ವದಿಸಲ್ಪಟ್ಟದ್ದು

ಒಂದು ವಿಶೇಷವಾದ ಪರಂಪರೆಯಿಂದ ಆಶೀರ್ವದಿಸಲ್ಪಟ್ಟದ್ದು

ಜೀವನ ಕಥೆ

ಒಂದು ವಿಶೇಷವಾದ ಪರಂಪರೆಯಿಂದ ಆಶೀರ್ವದಿಸಲ್ಪಟ್ಟದ್ದು

ಕ್ಯಾರಲ್‌ ಆ್ಯಲನ್‌ ಅವರು ಹೇಳಿರುವಂತೆ

ಸುಂದರವಾದ ಹೊಸ ಪುಸ್ತಕವೊಂದನ್ನು ಎದೆಗವಚಿಕೊಂಡು ನಾನು ಒಂಟಿಯಾಗಿ ನಿಂತಿದ್ದೆ. ಭಯವು ನನ್ನನ್ನು ಆವರಿಸಿತ್ತು ಮತ್ತು ಕಣ್ಣೀರು ಧಾರಾಕಾರವಾಗಿ ನನ್ನ ಕೆನ್ನೆಯ ಮೇಲೆ ಹರಿಯುತ್ತಿತ್ತು. ಆಗ ನಾನು ಕೇವಲ ಏಳು ವರ್ಷದ ಪುಟ್ಟ ಹುಡುಗಿಯಾಗಿದ್ದೆಯಷ್ಟೇ. ಮತ್ತು ಗುರುತಿಲ್ಲದ ನಗರದಲ್ಲಿ ತಪ್ಪಿಸಿಕೊಂಡುಬಿಟ್ಟಿದ್ದೆ. ನನ್ನ ಸುತ್ತಲು ಹತ್ತಾರು ಸಾವಿರ ಜನರು ನೆರೆದಿದ್ದರು!

ಇತ್ತೀಚೆಗೆ, ಸುಮಾರು ಅರುವತ್ತು ವರ್ಷಗಳ ಹಿಂದೆ ನಡೆದ, ಆ ನನ್ನ ಬಾಲ್ಯದ ಸ್ಪಷ್ಟವಾದ ನೆನಪುಗಳು ಮತ್ತೆ ನನ್ನ ಮನಃಪಟಲದ ಮೇಲೆ ಪ್ರವಾಹದಂತೆ ನುಗ್ಗುತ್ತಾ ಬಂದವು. ಅದು ಹೇಗೆಂದರೆ, ನಾನು ನನ್ನ ಗಂಡನಾದ ಪಾಲ್‌ನೊಂದಿಗೆ ನ್ಯೂ ಯಾರ್ಕ್‌ ನಗರದ ಪ್ಯಾಟರ್‌ಸನ್‌ನಲ್ಲಿರುವ, ಸುಂದರವಾದ ವಾಚ್‌ಟವರ್‌ ಎಡ್ಯುಕೇಷನಲ್‌ ಸೆಂಟರ್‌ ಅನ್ನು ಸಂದರ್ಶಿಸುವುದಕ್ಕಾಗಿ ಹೋಗಿದ್ದಾಗ ಆ ನೆನಪುಗಳು ಒಮ್ಮೆಲೇ ಬರಲಾರಂಭಿಸಿದವು. ಅಲ್ಲಿ, ಯೆಹೋವನ ಸಾಕ್ಷಿಗಳ ಸಂಚರಣ ಮೇಲ್ವಿಚಾರಕರಿಗಾಗಿದ್ದ ಶಾಲೆಯ ದ್ವಿತೀಯ ತರಗತಿಗೆ ಹಾಜರಾಗುವುದಕ್ಕಾಗಿ ನನ್ನ ಗಂಡನನ್ನು ಆಮಂತ್ರಿಸಲಾಗಿತ್ತು.

ಸೂರ್ಯನ ಬೆಳಕಿನಿಂದ ಪ್ರಕಾಶಮಾನವಾಗಿದ್ದ ಮೊಗಸಾಲೆಯಲ್ಲಿ ಕುಳಿತಿದ್ದಾಗ, ಅಲ್ಲಿ ಗೋಡೆಯ ಮೇಲೆ “ಅಧಿವೇಶನಗಳು” ಎಂದು ಬರೆದಿದ್ದ ದೊಡ್ಡ ಪ್ರದರ್ಶನದ ಬೋರ್ಡ್‌ ಅನ್ನು ಗಮನಿಸಿದೆ. ಆ ಮೊಗಸಾಲೆಯ ಮಧ್ಯದಲ್ಲಿ ಹಳೆಯದಾದ ಕಪ್ಪು ಮತ್ತು ಬಿಳುಪಿನ ಒಂದು ಫೋಟೋವನ್ನು ನೋಡಿದೆ. ಅದರಲ್ಲಿ ನನ್ನ ಬಾಲ್ಯದ ಪುಸ್ತಕದ ಪ್ರತಿಗಳನ್ನು ಹಿಡಿದುಕೊಂಡು ಉತ್ಸಾಹದಿಂದ ಕೈಯನ್ನು ಆಡಿಸುತ್ತಿದ್ದ ಮಕ್ಕಳಿದ್ದರು. ಕೂಡಲೇ ಆ ಫೋಟೋವನ್ನು ಮತ್ತು ಅದರ ಮೇಲಿದ್ದ ಶಿರೋನಾಮವನ್ನು ಓದಿದೆ: “1941​—⁠ಮಿಸ್ಸೌರಿಯ ಸೆಂಟ್‌ ಲೂಯಿನಲ್ಲಿ ಬೆಳಗ್ಗಿನ ಕಾರ್ಯಕ್ರಮವು ಪ್ರಾರಂಭವಾದಾಗ, 5ರಿಂದ 18 ವರ್ಷ ವಯಸ್ಸಿನ 15,000 ಮಕ್ಕಳು ವೇದಿಕೆಯ ಮುಂದಿರುವ ಮುಖ್ಯ ಅಖಾಡದಲ್ಲಿ ನೆರೆದಿದ್ದರು. . . . ಸಹೋದರ ರದರ್‌ಫರ್ಡ್‌ ಅವರು ಮಕ್ಕಳು (ಇಂಗ್ಲಿಷ್‌) ಎಂಬ ಹೊಸ ಪುಸ್ತಕದ ಬಿಡುಗಡೆಯ ಕುರಿತು ಘೋಷಿಸಿದರು.”

ಪ್ರತಿಯೊಂದು ಮಗುವಿಗೂ ಒಂದು ವೈಯಕ್ತಿಕ ಪ್ರತಿಯನ್ನು ಕೊಡಲಾಯಿತು. ನಂತರ, ನನ್ನೊಬ್ಬಳನ್ನು ಬಿಟ್ಟು ಉಳಿದ ಮಕ್ಕಳೆಲ್ಲಾ ತಮ್ಮ ತಮ್ಮ ಹೆತ್ತವರು ಕುಳಿತಿದ್ದೆಡೆಗೆ ಹಿಂದಿರುಗಿದರು. ಆದರೆ ನಾನು ಮಾತ್ರ ತಪ್ಪಿಸಿಕೊಂಡುಬಿಟ್ಟಿದ್ದೆ! ಸ್ನೇಹಪರರಾಗಿದ್ದ ಒಬ್ಬ ವ್ಯಕ್ತಿಯು, ನನ್ನನ್ನು ಎತ್ತರವಾಗಿದ್ದ ಕಾಣಿಕೆಯ ಪೆಟ್ಟಿಗೆಯ ಮೇಲೆ ಎತ್ತಿ ನಿಲ್ಲಿಸಿ ನನಗೆ ಗೊತ್ತಿರುವ ಯಾರಾದರೂ ಕಾಣಿಸುತ್ತಿದ್ದಾರೆಯೇ ಎಂದು ನೋಡಲು ಹೇಳಿದರು. ತವಕದಿಂದ ನಾನು ಮೆಟ್ಟಿಲ ಕೆಳಗಿನ ವರೆಗೂ ನೆರೆದಿದ್ದ ಜನಸಮೂಹವನ್ನು ಎಲ್ಲಾ ಕಡೆಗಳಿಂದ ನೋಡಿದೆ. ಇದ್ದಕ್ಕಿದ್ದಂತೆ, ನನಗೆ ಗುರುತಿರುವ ಒಂದು ಮುಖವು ಕಾಣಿಸಿತು! “ಅಂಕಲ್‌ ಬಾಬ್‌! ಅಂಕಲ್‌ ಬಾಬ್‌!” ಎಂದು ಕೂಗಿದೆ. ಕೊನೆಗೂ ನಾನು ನನ್ನ ಹೆತ್ತವರಿಗೆ ಸಿಕ್ಕಿದೆ! ಹೇಗೆಂದರೆ, ಬಾಬ್‌ ರೆಯ್‌ನರ್‌ ಅವರು ನನಗಾಗಿ ತವಕದಿಂದ ಕಾಯುತ್ತಿದ್ದ ನನ್ನ ಹೆತ್ತವರ ಬಳಿಗೆ ನನ್ನನ್ನು ಎತ್ತಿಕೊಂಡು ಹೋದರು.

ನನ್ನ ಜೀವನವನ್ನು ರೂಪಿಸಿದ ಆರಂಭದ ಘಟನೆಗಳು

ಆ ಬೋರ್ಡ್‌ ಅನ್ನು ನೋಡುತ್ತಿದ್ದಂತೆ ನೆನಪಿನ ಹೊನಲು ಪ್ರವಾಹದಂತೆ ನುಗ್ಗಿಬಂತು. ಅದು ನನ್ನ ಜೀವನವನ್ನೇ ರೂಪಿಸಿದ ಘಟನೆಗಳ ಕುರಿತಾಗಿತ್ತು ಮತ್ತು ನಾವು ಈ ಸುಂದರವಾದ ಪ್ಯಾಟರ್‌ಸನ್‌ಗೆ ಬರುವಂತೆ ನಡೆಸಿದ್ದವು. ನನ್ನ ಆಲೋಚನೆಗಳು, ಸುಮಾರು ನೂರು ವರ್ಷಗಳಿಗಿಂತಲೂ ಹೆಚ್ಚು ಹಿಂದೆ ನಡೆದ ಘಟನೆಗಳ ಕಡೆಗೆ, ಅದರಲ್ಲೂ ವಿಶೇಷವಾಗಿ ನನ್ನ ಅಜ್ಜಅಜ್ಜಿಯರು ಮತ್ತು ನನ್ನ ಹೆತ್ತವರಿಂದ ಕೇಳಿಸಿಕೊಂಡ ವಿಷಯಗಳ ಕಡೆಗೆ ತೆರಳಿದವು.

ಡಿಸೆಂಬರ್‌ 1894ರಲ್ಲಿ, ಈಗ ಯೆಹೋವನ ಸಾಕ್ಷಿಗಳೆಂದು ಪ್ರಸಿದ್ಧರಾಗಿರುವ ಬೈಬಲ್‌ ವಿದ್ಯಾರ್ಥಿಗಳಲ್ಲಿ ಒಬ್ಬ ಪೂರ್ಣಸಮಯದ ಸೇವಕರು ನನ್ನ ಅಜ್ಜನಾದ ಕ್ಲೇಟನ್‌ ಜೇ. ವುಡ್‌ವರ್ತ್‌ ಅವರನ್ನು ಅಮೆರಿಕದ ಪೆನ್ಸಿಲ್ವೇನಿಯಾದ ಸ್ಕ್ಯಾರನ್‌ಟನ್‌ನಲ್ಲಿದ್ದ ಅವರ ಮನೆಯಲ್ಲಿ ಭೇಟಿಮಾಡಿದರು. ಕ್ಲೇಟನ್‌ ಅವರು ಆಗ ತಾನೇ ಹೊಸದಾಗಿ ಮದುವೆಯಾಗಿದ್ದರು. ಅವರು ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯ ಅಧ್ಯಕ್ಷರಾಗಿದ್ದ ಚಾರ್ಲ್ಸ್‌ ಟೇಸ್‌ ರಸಲ್‌ ಅವರಿಗೆ ಪತ್ರವನ್ನು ಬರೆದರು. ಅದು 1895, ಜೂನ್‌ 15ರ ವಾಚ್‌ಟವರ್‌ ಪತ್ರಿಕೆಯಲ್ಲಿ ಪ್ರಕಾಶಿಸಲ್ಪಟ್ಟಿತ್ತು. ಅದರಲ್ಲಿ ಅವರು ವಿವರಿಸಿದ್ದು:

“ನಾವು ಯುವ ಪತಿಪತ್ನಿಯರು. ಸುಮಾರು ಹತ್ತು ವರ್ಷಗಳ ವರೆಗೆ ನಾಮಮಾತ್ರದ ಚರ್ಚಿನ ಸದಸ್ಯರಾಗಿದ್ದೆವು; ಆದರೆ ಈಗ, ಮಹೋನ್ನತನ ಅರ್ಪಿತ ಮಕ್ಕಳು ಅದರ ಕತ್ತಲೆಯಿಂದ ಹೊಸದಿನದ ಬೆಳಕಿನೆಡೆಗೆ ಹೊರಬರುವುದಕ್ಕಾಗಿರುವ ಸಮಯವು ಸನಿಹವಾಗುತ್ತಿದೆ ಎಂದು ನಾವು ನಂಬುತ್ತೇವೆ. . . . ನಾನು ಮತ್ತು ನನ್ನ ಹೆಂಡತಿ ಒಬ್ಬರನ್ನೊಬ್ಬರು ಭೇಟಿಯಾಗುವುದಕ್ಕೆ ಬಹಳ ಹಿಂದೆಯೇ, ಪ್ರಾಯಶಃ ಕರ್ತನ ಚಿತ್ತವಿದ್ದರೆ ಹೊರದೇಶದಲ್ಲಿ ಮಿಷನೆರಿಗಳಾಗಿ ಹೋಗಿ ಕರ್ತನನ್ನು ಸೇವಿಸಬಹುದಲ್ಲಾ ಎಂಬುದು ನಮ್ಮ ಮನಃಪೂರ್ವಕವಾದ ಇಚ್ಛೆಯಾಗಿತ್ತು.”

ಕಾಲಾನಂತರ, 1903ರಲ್ಲಿ ನನ್ನ ತಾಯಿಯ ಅಜ್ಜ ಅಜ್ಜಿಯರಾದ ಸೆಬಾಸ್ಟಿಯನ್‌ ಮತ್ತು ಕ್ಯಾಥರಿನ್‌ ಕ್ರೆಸ್‌ಗಿ ಅವರು ವಾಚ್‌ ಟವರ್‌ ಪ್ರತಿನಿಧಿಗಳು ತಂದಿದ್ದ ಸಂದೇಶವನ್ನು ಸಂತೋಷದಿಂದ ಕೇಳಿಸಿಕೊಂಡಿದ್ದರು. ಆ ಸಮಯದಲ್ಲಿ ಅವರು ಪೆನ್ಸಿಲ್ವೇನಿಯಾದ ಸುಂದರವಾದ ಪೊಕೊನೋ ಬೆಟ್ಟಗಳ ಬಳಿ ಇದ್ದ ತೋಟದ ಮನೆಯಲ್ಲಿ ವಾಸಿಸುತ್ತಿದ್ದರು. ಅವರ ಹೆಣ್ಣು ಮಕ್ಕಳಾದ ಮೇರಿ ಮತ್ತು ಕೋರ ಸಹ ತಮ್ಮ ಗಂಡಂದಿರಾದ ಎಡ್ಮಂಡ್‌ ಹಾವೆಲ್‌ ಮತ್ತು ವಾಷಿಂಗ್‌ಟನ್‌ ಅವರೊಂದಿಗೆ ಅಲ್ಲೇ ವಾಸಿಸುತ್ತಿದ್ದರು. ವಾಚ್‌ ಟವರ್‌ ಪ್ರತಿನಿಧಿಗಳಾದ ಕಾರ್ಲ್‌ ಹ್ಯಾಮರ್‌ಲೆ ಮತ್ತು ರೇ ರ್ಯಾಟ್‌ಕ್ಲಿಫ್‌ ಅವರು ಒಂದು ವಾರ ಅಲ್ಲೇ ತಂಗಿ, ಅವರಿಗೆ ಅನೇಕ ವಿಷಯಗಳನ್ನು ಕಲಿಸಿದರು. ಆ ಕುಟುಂಬದ ಆರು ಸದಸ್ಯರು ಕಿವಿಗೊಟ್ಟು ಆಲಿಸಿದರು, ಅಭ್ಯಾಸಮಾಡಿದರು, ಮತ್ತು ಸ್ವಲ್ಪ ಸಮಯದರೊಳಗೆ ಅವರೆಲ್ಲರೂ ಹುರುಪಿನ ಬೈಬಲ್‌ ವಿದ್ಯಾರ್ಥಿಗಳಾದರು.

ಆದರೆ ಅದೇ ವರ್ಷದಲ್ಲಿ, ಅಂದರೆ 1903ರಲ್ಲಿ ಕೋರ ಮತ್ತು ವಾಷಿಂಗ್‌ಟನ್‌ ಹಾವೆಲ್‌ ಅವರಿಗೆ ಕ್ಯಾಥರಿನ್‌ ಎಂಬ ಮಗಳೊಬ್ಬಳು ಹುಟ್ಟಿದಳು. ಅವರು ಹೇಗೆ ನನ್ನ ತಂದೆಯಾದ ಕ್ಲೇಟನ್‌ ಜೆ. ವುಡ್‌ವರ್ತ್‌ ಜೂನಿಯರ್‌ ಅವರನ್ನು ಮದುವೆಯಾದರು ಎಂಬುದು ತುಂಬ ಸ್ವಾರಸ್ಯಕರವೂ ಹಾಗೂ ಅರ್ಥಭರಿತವೂ ಆದ ಕಥೆಯೆಂದು ನಾನು ನೆನಸುತ್ತೇನೆ. ಏಕೆಂದರೆ, ಅದು ನನ್ನ ಅಜ್ಜನಾದ ಕ್ಲೇಟನ್‌ ಜೆ. ವುಡ್‌ವರ್ತ್‌ ಸೀನಿಯರ್‌ ಅವರ ಹೆತ್ತವರ ಕಾಳಜಿ ಮತ್ತು ಪ್ರೀತಿಪರ ಒಳನೋಟವನ್ನು ಪ್ರಕಟಪಡಿಸುತ್ತದೆ.

ನನ್ನ ತಂದೆಯು ಪ್ರೀತಿಪರ ಸಹಾಯವನ್ನು ಪಡೆದುಕೊಳ್ಳುತ್ತಾರೆ

ನನ್ನ ತಂದೆಯಾದ ಕ್ಲೇಟನ್‌ ಜೂನಿಯರ್‌ ಅವರು 1906ರಲ್ಲಿ ಸ್ಕ್ಯಾರನ್‌ಟನ್‌ನಲ್ಲಿ ಹುಟ್ಟಿದರು. ಅದು ಹಾವೆಲ್‌ ತೋಟದ ಮನೆಯಿಂದ ಹೆಚ್ಚುಕಡಿಮೆ 80 ಕಿಲೊಮೀಟರುಗಳಷ್ಟು ದೂರದಲ್ಲಿತ್ತು. ಆ ಸಮಯದಲ್ಲಿ ಅಜ್ಜ ವುಡ್‌ವರ್ತ್‌ ಅವರು ಹಾವೆಲ್‌ ಅವರ ದೊಡ್ಡ ಪರಿವಾರದವರಿಗೆ ಚಿರಪರಿಚಿತರಾಗಿದ್ದರು. ಆಗಾಗ್ಗೆ ಅವರ ಪರಂಪರಾಗತವಾದ ಅತಿಥಿಸತ್ಕಾರವನ್ನು ಆನಂದಿಸುತ್ತಿದ್ದರು. ಆ ಕ್ಷೇತ್ರದಲ್ಲಿದ್ದ ಬೈಬಲ್‌ ವಿದ್ಯಾರ್ಥಿಗಳಿಗೆ ಅವರು ತುಂಬ ಸಹಾಯಕರಾಗಿದ್ದರು. ಸ್ವಲ್ಪ ಸಮಯದರೊಳಗಾಗಿ, ಹಾವೆಲ್‌ ಕುಟುಂಬದ ಮೂರು ಗಂಡುಮಕ್ಕಳ ಮದುವೆಯನ್ನು ನಡೆಸುವಂತೆ ಅಜ್ಜನನ್ನು ಕರೆಯಲಾಯಿತು. ಆಗ ತನ್ನ ಮಗನ ಹಿತವನ್ನು ಮನದಲ್ಲಿಟ್ಟುಕೊಂಡು, ಅಜ್ಜ ಪ್ರತಿಯೊಂದು ಮದುವೆಗೂ ನನ್ನ ತಂದೆಯವರನ್ನು ಕರೆದುಕೊಂಡು ಹೋಗುತ್ತಿದ್ದರು.

ಆ ಸಮಯದಲ್ಲಿ ತಂದೆಯು ಬೈಬಲ್‌ ವಿದ್ಯಾರ್ಥಿಗಳ ಶೂಶ್ರೂಷೆಯಲ್ಲಿ ಹೆಚ್ಚು ಕ್ರಿಯಾಶೀಲರಾಗಿ ಭಾಗವಹಿಸುತ್ತಿರಲಿಲ್ಲ. ಆದರೆ, ಸೇವೆಯಲ್ಲಿ ಭೇಟಿಯಾದ ಜನರನ್ನು ಪುನಃ ಸಂದರ್ಶಿಸುವುದಕ್ಕಾಗಿ ಅಜ್ಜನನ್ನು ತಂದೆಯವರು ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದರು ಎಂಬುದೇನೋ ನಿಜ. ಆದರೆ, ಅಜ್ಜ ಎಷ್ಟೇ ಪ್ರೋತ್ಸಾಹನೆಯನ್ನು ಕೊಟ್ಟಿದ್ದರೂ ತಂದೆಯವರು ಸ್ವತಃ ಸೇವೆಯಲ್ಲಿ ಕ್ರಿಯಾಶೀಲ ಪಾತ್ರವನ್ನು ತೆಗೆದುಕೊಳ್ಳಲಿಲ್ಲ. ಏಕೆಂದರೆ ಆ ಸಮಯದಲ್ಲಿ, ನನ್ನ ತಂದೆಯವರಿಗೆ ಇದ್ದ ಸಂಗೀತದ ಹುಚ್ಚು ಎಲ್ಲವನ್ನೂ ಕಡೆಗಣಿಸಿತು. ಅವರು ತಮ್ಮ ವೃತ್ತಿಯಲ್ಲಿ ಹೆಚ್ಚು ಪ್ರಗತಿಯನ್ನು ಮಾಡುವುದರಲ್ಲೇ ತೊಡಗಿದ್ದರು.

ಕೋರ ಮತ್ತು ವಾಷಿಂಗ್‌ಟನ್‌ ಹಾವೆಲ್‌ ಅವರ ಮಗಳಾದ ಕ್ಯಾಥರಿನ್‌ ಕೂಡ ಸಂಗೀತದಲ್ಲಿ ಸಾಧನೆಯನ್ನು ಮಾಡಿದ್ದರು. ಹಾಗಾಗಿ, ಅವರು ಪಿಯಾನೋವನ್ನು ನುಡಿಸುತ್ತಿದ್ದರು ಮತ್ತು ಇತರರಿಗೆ ಕಲಿಸುತ್ತಿದ್ದರು. ಆ ವೃತ್ತಿಯು ಯಶಸ್ವಿಯ ಮೆಟ್ಟಿಲನ್ನು ಏರಲು ಅವರಿಗೆ ಸಹಾಯಮಾಡುತ್ತಿದ್ದಾಗ, ಅವುಗಳನ್ನೆಲ್ಲಾ ಬದಿಗಿಟ್ಟು ಪೂರ್ಣಸಮಯದ ಸೇವೆಯಲ್ಲಿ ಪಾಲ್ಗೊಳ್ಳಲು ಪ್ರಾರಂಭಿಸಿದರು. ಏನಿಲ್ಲವೆಂದರೂ ನನ್ನ ದೃಷ್ಟಿಕೋನದಲ್ಲಿಯಾದರೂ, ಅಜ್ಜನು ತನ್ನ ಮಗನಿಗೆ ಇದಕ್ಕಿಂತ ಒಳ್ಳೇ ಜೋಡಿಯ ಕುರಿತು ಯೋಚಿಸಲು ಸಾಧ್ಯವಿರಲಿಲ್ಲ! ತಂದೆಯವರು ದೀಕ್ಷಾಸ್ನಾನವನ್ನು ಪಡೆದುಕೊಂಡರು. ಆರು ತಿಂಗಳುಗಳ ನಂತರ, ಅಂದರೆ 1931 ಜೂನ್‌ ತಿಂಗಳಿನಲ್ಲಿ ಅವರು ಅಮ್ಮನನ್ನು ಮದುವೆಯಾದರು.

ತನ್ನ ಮಗನ ಸಂಗೀತ ಸಾಮರ್ಥ್ಯದ ಕುರಿತು ಅಜ್ಜನು ಯಾವಾಗಲೂ ಹೆಮ್ಮೆಪಡುತ್ತಿದ್ದರು. 1946ರಲ್ಲಿ ಓಹಾಯೋದ ಕ್ಲೀವ್‌ಲ್ಯಾಂಡ್‌ನಲ್ಲಿ ನಡೆದ ದೊಡ್ಡ ಅಂತಾರಾಷ್ಟ್ರೀಯ ಅಧಿವೇಶನದ ಮುಖ್ಯ ಆರ್ಕೆಸ್ಟ್ರಾವನ್ನು ತರಬೇತುಗೊಳಿಸುವಂತೆ ತಂದೆಯವರನ್ನು ಕೇಳಿಕೊಂಡಾಗ ಅಜ್ಜ ತುಂಬ ಸಂತೋಷಪಟ್ಟರು. ಮುಂದಿನ ವರ್ಷಗಳಲ್ಲಿ, ಯೆಹೋವನ ಸಾಕ್ಷಿಗಳ ಇನ್ನಿತರ ಹಲವಾರು ಅಧಿವೇಶನಗಳಿಗೆ ತಂದೆಯವರು ಆರ್ಕೆಸ್ಟ್ರಾವನ್ನು ನಿರ್ವಹಿಸಿದರು.

ಅಜ್ಜನ ವಿಚಾರಣೆ ಮತ್ತು ಸೆರೆವಾಸ

ಪ್ಯಾಟರ್‌ಸನ್‌ ಮೊಗಸಾಲೆಯಲ್ಲಿ ಪ್ರದರ್ಶನಕ್ಕಿಟ್ಟಿದ್ದ ಮತ್ತೊಂದು ಪುಟದಲ್ಲಿ ಕಾಣಿಸಿದ ಚಿತ್ರವನ್ನು ನಾನು ಮತ್ತು ಪಾಲ್‌ ನೋಡಿದೆವು. ಕೂಡಲೇ ಆ ಚಿತ್ರವನ್ನು ಗುರುತಿಸಿದೆ. ಹೇಗೆಂದರೆ, ಅಜ್ಜ ಅದರ ಒಂದು ಪ್ರತಿಯನ್ನು ಸುಮಾರು 50 ವರ್ಷಗಳ ಹಿಂದೆ ನನಗೆ ಕಳುಹಿಸಿಕೊಟ್ಟಿದ್ದರು. ಬಲಭಾಗದ ಕೊನೆಯಲ್ಲಿ ನಿಂತಿದ್ದವರು ಅವರೇ ಆಗಿದ್ದರು.

ಮೊದಲನೇ ಮಹಾಯುದ್ಧದ ಸಮಯದಲ್ಲಿ ಎಲ್ಲೆಲ್ಲೂ ದೇಶಪ್ರೇಮದ ಉನ್ಮಾದವು ಹರಡಿತ್ತು. ಆಗ, ವಾಚ್‌ ಟವರ್‌ ಸೊಸೈಟಿಯ ಅಧ್ಯಕ್ಷರಾಗಿದ್ದ ಜೋಸೆಫ್‌ ರದರ್‌ಫರ್ಡ್‌ (ಮಧ್ಯದಲ್ಲಿ ಕುಳಿತಿರುವವರು) ಅವರೊಂದಿಗೆ ಎಂಟು ಮಂದಿ ಬೈಬಲ್‌ ವಿದ್ಯಾರ್ಥಿಗಳನ್ನು ಸುಳ್ಳಾರೋಪದ ಮೇಲೆ ಕೈದುಮಾಡಲಾಗಿತ್ತು. ಮತ್ತು ಜಾಮೀನನ್ನು ಕೊಡದೆ ಅವರನ್ನು ಸೆರೆಯಲ್ಲಿ ಇಡಲಾಗಿತ್ತು. ಅವರ ವಿರುದ್ಧ ಮಾಡಲ್ಪಟ್ಟ ಆರೋಪಗಳೆಲ್ಲವೂ, ಸ್ಟಡೀಸ್‌ ಇನ್‌ ದ ಸ್ಕ್ರಿಪ್ಚರ್ಸ್‌ನ ಏಳನೇ ಸಂಪುಟವಾಗಿದ್ದ ದ ಫಿನಿಷ್ಡ್‌ ಮಿಸ್ಟ್ರಿ ಎಂಬ ಶೀರ್ಷಿಕೆಯ ಕೆಳಗೆ ನೀಡಲ್ಪಟ್ಟಿದ್ದ ಹೇಳಿಕೆಗಳ ಮೇಲೆ ಆಧಾರಿತವಾಗಿದ್ದವು. ಅದರಲ್ಲಿದ್ದ ಹೇಳಿಕೆಗಳು, ಮೊದಲನೇ ಮಹಾಯುದ್ಧದಲ್ಲಿ ಅಮೆರಿಕದ ಭಾಗವಹಿಸುವಿಕೆಯನ್ನು ನಿರುತ್ತೇಜಿಸುತ್ತವೆ ಎಂಬುದಾಗಿ ತಪ್ಪಾಗಿ ಅರ್ಥಮಾಡಿಕೊಳ್ಳಲಾಗಿತ್ತು.

ಅನೇಕ ವರ್ಷಗಳ ವರೆಗೆ, ಚಾರ್ಲ್ಸ್‌ ಟೇಸ್‌ ರಸಲ್‌ ಅವರು ದ ಸ್ಟಡೀಸ್‌ ಇನ್‌ ದ ಸ್ಕ್ರಿಪ್ಚರ್ಸ್‌ ಪುಸ್ತಕದ ಮೊದಲ ಆರು ಸಂಪುಟಗಳನ್ನು ಬರೆದಿದ್ದರು. ಆದರೆ, ಏಳನೇ ಸಂಪುಟವನ್ನು ಬರೆಯುವುದಕ್ಕೆ ಮುಂಚೆಯೇ ಅವರು ತೀರಿಕೊಂಡಿದ್ದರು. ಹಾಗಾಗಿ, ಅವರು ಬರೆದಿದ್ದ ಟಿಪ್ಪಣಿಗಳನ್ನು ಅಜ್ಜನಿಗೆ ಮತ್ತು ಇನ್ನೊಬ್ಬ ಬೈಬಲ್‌ ವಿದ್ಯಾರ್ಥಿಗೆ ಕೊಡಲಾಯಿತು. ಹೀಗೆ, ಅವರು ಏಳನೇ ಸಂಪುಟವನ್ನು ಬರೆದರು. ಈ ಸಂಪುಟವನ್ನು 1917ರಲ್ಲಿ ಅಂದರೆ, ಯುದ್ಧವು ಮುಗಿಯುವುದಕ್ಕೆ ಮುಂಚೆ ಬಿಡುಗಡೆಮಾಡಲಾಗಿತ್ತು. ವಿಚಾರಣೆಯಲ್ಲಿ, ಅಜ್ಜ ಮತ್ತು ಅವರೊಂದಿಗಿದ್ದ ಹೆಚ್ಚಿನವರನ್ನು ನಾಲ್ಕು ಬೇರೆ ಬೇರೆ ಕಾರಣಗಳಿಗಾಗಿ, ಪ್ರತಿಯೊಂದಕ್ಕೂ 20 ವರ್ಷಗಳ ಕಾಲಾವಧಿಯ ಶಿಕ್ಷೆಯನ್ನು ವಿಧಿಸಲಾಯಿತು.

ಪ್ಯಾಟರ್‌ಸನ್‌ ಮೊಗಸಾಲೆಯಲ್ಲಿರುವ ಚಿತ್ರದ ಶಿರೋನಾಮವು ವಿವರಿಸುವುದು: “ಯುದ್ಧವು ಮುಗಿದ ಮೇಲೆ ಅಂದರೆ, ರದರ್‌ಫರ್ಡ್‌ ಸಂಗಡಿಗರಿಗೆ ಶಿಕ್ಷೆಯಾಗಿ ಒಂಬತ್ತು ತಿಂಗಳುಗಳು ಕಳೆದ ನಂತರ, 1919 ಮಾರ್ಚ್‌ 21ರಂದು ಅಪೀಲ್ಸ್‌ ಕೋರ್ಟ್‌ ಎಂಟು ಮಂದಿಗೂ ಜಾಮೀನನ್ನು ನೀಡುವಂತೆ ಆದೇಶನೀಡಿತು. ಹಾಗಾಗಿ, ಪ್ರತಿಯೊಬ್ಬರಿಗೆ 10,000 ಡಾಲರುಗಳ ಜಾಮೀನಿನ ಮೇಲೆ ಮಾರ್ಚ್‌ 26ರಂದು ಅವರನ್ನು ಬ್ರೂಕ್ಲಿನ್‌ನಲ್ಲಿ ಬಿಡುಗಡೆಮಾಡಲಾಯಿತು. 1920, ಮೇ 5ರಂದು ಜೆ. ಎಫ್‌. ರದರ್‌ಫರ್ಡ್‌ ಮತ್ತು ಇನ್ನಿತರರು ನಿರಪರಾಧಿಗಳೆಂದು ನಿರ್ಣಯಿಸಲ್ಪಟ್ಟರು.”

ಆದರೆ, ಅವರಿಗೆ ಶಿಕ್ಷೆಯನ್ನು ವಿಧಿಸಿದ ಮೇಲೆ, ಜಾರ್ಜಿಯಾದ ಅಟ್ಲಾಂಟದಲ್ಲಿರುವ ಫೆಡರಲ್‌ ಕಾರಾಗೃಹಕ್ಕೆ ಕಳುಹಿಸುವುದಕ್ಕೆ ಮುಂಚೆ, ಆ ಎಂಟು ಮಂದಿಯು ಮೊದಲ ಕೆಲವು ದಿನಗಳನ್ನು ನ್ಯೂ ಯಾರ್ಕಿನ ಬ್ರೂಕ್ಲಿನ್‌ನಲ್ಲಿರುವ ರೆಮಂಡ್‌ ರಸ್ತೆಯಲ್ಲಿರುವ ಜೈಲಿನಲ್ಲಿ ಕಳೆದರು. ಆ ಜೈಲಿನಿಂದ ಅಜ್ಜ, ತಮ್ಮನ್ನು ಕೂಡಿಹಾಕಿದ್ದ ಆರು ಅಡಿ ಅಗಲ ಎಂಟು ಅಡಿ ಉದ್ದದ ಕೋಣೆಯ ಕುರಿತು ಪತ್ರದಲ್ಲಿ ವರ್ಣಿಸಿದ್ದರು: “ವರ್ಣಿಸಲಸಾಧ್ಯವಾದಷ್ಟು ಹೊಲಸು ಮತ್ತು ಅವ್ಯವಸ್ಥೆಯ ಮಧ್ಯದಲ್ಲೇ ವಾರ್ತಾಪತ್ರಿಕೆಗಳ ರಾಶಿ ಒಂದು ಕಡೆಯಲ್ಲಿ ಬಿದ್ದಿತ್ತು. ಅವುಗಳನ್ನು ನೋಡಿ ಇವು ಕೇವಲ ವಾರ್ತಾಪತ್ರಿಕೆಗಳು ತಾನೇ ಎಂದು ನಿರ್ಲಕ್ಷ್ಯಭಾವದಿಂದ ನೋಡಿದರೆ, ಅದನ್ನೇ ಟಾಯ್‌ಲೆಟ್‌ ಪೇಪರಾಗಿ ಉಪಯೋಗಿಸಬೇಕು ಎಂಬುದು ಸ್ವಲ್ಪ ಸಮಯದಲ್ಲಿ ಗೊತ್ತಾಗುವುದು. ಒಂದು ಸೋಪು ಮತ್ತು ಒರಸುವ ಬಟ್ಟೆಯಲ್ಲೇ ಒಬ್ಬನ ಶುಚಿತ್ವ ಮತ್ತು ಸ್ವಗೌರವವು ಅಡಗಿತ್ತು.”

ಆದರೂ, ಅಜ್ಜ ಆ ಜೈಲನ್ನು “ಹೋಟೆಲ್‌ ಡೀ ರೇಮಾಂಡೀ” ಎಂದು ಹೇಳುವ ಮೂಲಕ ತಮ್ಮ ಹಾಸ್ಯ ಪ್ರಜ್ಞೆಯನ್ನು ಕಾಪಾಡಿಕೊಂಡಿದ್ದರು. ಮತ್ತು ಅವರು “ನನ್ನ ಕಾರಾಗೃಹವಾಸವು ಮುಗಿದ ಕ್ಷಣ ನಾನು ಇಲ್ಲಿಂದ ಹೊರಬರುವೆ” ಎಂದು ಬರೆದಿದ್ದರು. ಹೊರಾಂಗಣದಲ್ಲಿ ವಾಕಿಂಗ್‌ ಮಾಡುತ್ತಿದ್ದ ಅನುಭವದ ಕುರಿತು ಸಹ ಅವರು ತಮ್ಮ ಪತ್ರದಲ್ಲಿ ಬರೆದಿದ್ದರು. ಒಮ್ಮೆ ತಮ್ಮ ತಲೆಯನ್ನು ಬಾಚಿಕೊಳ್ಳುವುದಕ್ಕಾಗಿ ಒಂದು ಕ್ಷಣ ನಿಂತಾಗ, ಜೇಬುಕಳ್ಳನೊಬ್ಬನು ಅವರ ಜೇಬಿನಟ್ಟುಕೊಳ್ಳುವ ವಾಚ್‌ ಅನ್ನು ಕಿತ್ತುಕೊಂಡನು. ಆದರೆ “ಚೈನು ಕಿತ್ತುಹೋಯಿತು ಮತ್ತು ವಾಚನ್ನು ಉಳಿಸಿಕೊಂಡೆ” ಎಂದು ಅವರು ಬರೆದಿದ್ದರು. ನಾನು 1958ರಲ್ಲಿ ಬ್ರೂಕ್ಲಿನ್‌ನಲ್ಲಿರುವ ಬೆತೆಲ್‌ ಅನ್ನು ಸಂದರ್ಶಿಸುವುದಕ್ಕೆ ಹೋಗಿದ್ದಾಗ, ವಾಚ್‌ ಟವರ್‌ ಸೊಸೈಟಿಯ ಸೆಕ್ರೆಟರಿ ಟ್ರೆಷರರ್‌ ಆಗಿದ್ದ ಗ್ರಾಂಟ್‌ ಸ್ಯೂಟರ್‌ ಅವರು, ನನ್ನನ್ನು ತಮ್ಮ ಆಫೀಸಿಗೆ ಕರೆದು ಆ ವಾಚ್‌ ಅನ್ನು ನನಗೆ ಕೊಟ್ಟರು. ನಾನು ಅದನ್ನು ಈಗಲೂ ಇಟ್ಟುಕೊಂಡಿದ್ದೇನೆ.

ತಂದೆಯ ಮೇಲಾದ ಪರಿಣಾಮ

1918ರಲ್ಲಿ ಅನ್ಯಾಯವಾಗಿ ಅಜ್ಜನನ್ನು ಕೈದುಮಾಡಿದಾಗ, ನನ್ನ ತಂದೆಯವರು ಕೇವಲ 12 ವರ್ಷದವರಾಗಿದ್ದರು. ಅಜ್ಜಿಯು ತಮ್ಮ ಮನೆಗೆ ಬೀಗಹಾಕಿ ನನ್ನ ತಂದೆಯವರನ್ನು ಕರೆದುಕೊಂಡು, ತಮ್ಮ ತಾಯಿ ಮತ್ತು ಮೂವರು ಸಹೋದರಿಯರೊಂದಿಗೆ ವಾಸಿಸಲು ಹೋದರು. ಮದುವೆಯಾಗುವುದಕ್ಕೆ ಮುಂಚೆ ಅಜ್ಜಿಯ ಮನೆತನದ ಹೆಸರು ಆರ್ಥರ್‌ ಆಗಿತ್ತು. ಅಮೆರಿಕದ 21ನೇ ಅಧ್ಯಕ್ಷರಾಗಿದ್ದ ಚೆಸ್ಟರ್‌ ಆ್ಯಲನ್‌ ಆರ್ಥರ್‌ ತಮ್ಮ ಸಂಬಂಧಿಕರಲ್ಲಿ ಒಬ್ಬರು ಎಂದು ಹೆಮ್ಮೆಯಿಂದ ಆ ಕುಟುಂಬವು ಹೇಳಿಕೊಳ್ಳುತ್ತಿತ್ತು.

ಅಮೆರಿಕದ ವಿರುದ್ಧ ಮಾಡಲ್ಪಟ್ಟ ಪಾತಕಗಳ ಆರೋಪದಿಂದಾಗಿ ಅಜ್ಜನಿಗೆ ದೀರ್ಘಕಾಲದ ಶಿಕ್ಷೆಯನ್ನು ಕೊಟ್ಟ ನಂತರ, ಅಜ್ಜನು ಕುಟುಂಬದ ಹೆಸರಿಗೆ ಮಸಿ ಬಳಿದಿದ್ದಾರೆ ಎಂದು ಆರ್ಥರ್‌ ಪರಿವಾರದವರು ಭಾವಿಸಿದರು. ಅದು ನನ್ನ ತಂದೆಯವರ ಮನಸ್ಸಿಗೆ ಬಹಳ ನೋವನ್ನುಂಟುಮಾಡಿದ ಸಮಯವಾಗಿತ್ತು. ಬಹುಶಃ, ಆ ಸಮಯದಲ್ಲಿ ಅವರನ್ನು ಉಪಚರಿಸಲಾದ ರೀತಿಯೇ, ಆರಂಭದಲ್ಲಿ ತಂದೆಯವರು ಸಾರ್ವಜನಿಕವಾಗಿ ಸಾರುವ ಕೆಲಸದಲ್ಲಿ ಹಿಂದೆ ಸರಿಯುವಂತೆ ಮಾಡಿದ್ದಿರಬೇಕು.

ಅಜ್ಜ ಜೈಲಿನಿಂದ ಬಿಡುಗಡೆಯಾದಾಗ, ಅವರು ತಮ್ಮ ಕುಟುಂಬವನ್ನು ಸ್ಕ್ಯಾರನ್‌ಟನ್‌ನಲ್ಲಿರುವ ಕ್ವಿನ್ಸಿ ರಸ್ತೆಯಲ್ಲಿದ್ದ ಗಾರೆ ಅಥವಾ ಸಿಮೆಂಟಿನಿಂದ ಕಟ್ಟಿದ್ದ ದೊಡ್ಡ ಮನೆಗೆ ತಮ್ಮ ಕುಟುಂಬವನ್ನು ವರ್ಗಾಯಿಸಿದರು. ಚಿಕ್ಕ ಹುಡುಗಿಯಾಗಿದ್ದ ನನಗೆ ಅಜ್ಜಿಯ ಮನೆ ಮತ್ತು ಸುಂದರವಾದ ಪಿಂಗಾಣಿ ಪಾತ್ರೆಗಳು ಚೆನ್ನಾಗಿ ನೆನಪಿನಲ್ಲಿದೆ. ನಾವು ಆ ಪಾತ್ರೆಗಳನ್ನು ಪವಿತ್ರ ಪಾತ್ರೆಗಳು ಎಂದು ಕರೆಯುತ್ತಿದ್ದೆವು. ಏಕೆಂದರೆ, ಅವುಗಳನ್ನು ಅಜ್ಜಿಯೇ ತೊಳೆಯುತ್ತಿದ್ದರು. ಬೇರೆ ಯಾರೂ ಅದನ್ನು ಮುಟ್ಟಬಾರದಾಗಿತ್ತು. 1943ರಲ್ಲಿ ಅಜ್ಜಿಯು ತೀರಿಕೊಂಡ ಮೇಲೆ, ಆ ಸುಂದರವಾದ ಪಾತ್ರೆಗಳನ್ನು ಅನೇಕವೇಳೆ ಅತಿಥಿಸತ್ಕಾರಕ್ಕಾಗಿ ಅಮ್ಮ ಉಪಯೋಗಿಸುತ್ತಿದ್ದರು.

ರಾಜ್ಯಸೇವೆಯಲ್ಲಿ ಹೆಚ್ಚು ಕಾರ್ಯಮಗ್ನರಾದದ್ದು

ಮತ್ತೊಂದು ದಿನ ಪ್ಯಾಟರ್‌ಸನ್‌ನ ಕ್ಯಾಂಪಸ್‌ನಲ್ಲಿ, 1919ರಲ್ಲಿ ಓಹಾಯೋದ ಸೀಡರ್‌ಪಾಯಿಂಟ್‌ನಲ್ಲಿ ನಡೆದ ಅಧಿವೇಶನದಲ್ಲಿ ಸಹೋದರ ರದರ್‌ಫರ್ಡ್‌ ಅವರು ಭಾಷಣನೀಡುತ್ತಿರುವ ಚಿತ್ರಪಟವನ್ನು ನೋಡಿದೆ. ಆ ಅಧಿವೇಶನದಲ್ಲಿ ದೇವರ ರಾಜ್ಯದ ಕುರಿತಾಗಿ ಪ್ರಕಟಪಡಿಸುವ ಕೆಲಸದಲ್ಲಿ ಹೆಚ್ಚು ಹುರುಪುಳ್ಳವರಾಗಿ ಭಾಗವಹಿಸುವಂತೆ ಎಲ್ಲರನ್ನು ಅವರು ಪ್ರೋತ್ಸಾಹಿಸಿದರು. ಅದಕ್ಕಾಗಿ ಅಧಿವೇಶನದಲ್ಲಿ ಬಿಡುಗಡೆಮಾಡಲ್ಪಟ್ಟ ದ ಗೋಲ್ಡನ್‌ ಏಜ್‌ ಎಂಬ ಪತ್ರಿಕೆಯನ್ನು ಉಪಯೋಗಿಸುವಂತೆ ಹೇಳಿದರು. ಅದರ ಸಂಪಾದಕರಾಗಿ ಅಜ್ಜನನ್ನು ನೇಮಿಸಲಾಗಿತ್ತು. ತಮ್ಮ ಮರಣದ ವರೆಗೂ ಅಂದರೆ, 1940ಗಳ ಸ್ವಲ್ಪ ಸಮಯದ ಮುಂಚಿನ ವರೆಗೂ ಅವರು ಆ ಪತ್ರಿಕೆಯಲ್ಲಿ ತಮ್ಮ ಲೇಖನಗಳನ್ನು ಬರೆಯುತ್ತಿದ್ದರು. 1937ರಲ್ಲಿ ಆ ಪತ್ರಿಕೆಯ ಹೆಸರನ್ನು ಕಾನ್‌ಸೊಲೇಷನ್‌ ಎಂಬುದಾಗಿಯೂ, ಮತ್ತು 1946ರಲ್ಲಿ ಅವೇಕ್‌! ಎಂಬುದಾಗಿಯೂ ಬದಲಾಯಿಸಲಾಯಿತು.

ಅಜ್ಜ, ತಮ್ಮ ಸ್ಕ್ಯಾರನ್‌ಟನ್‌ ಮನೆಯಲ್ಲಿ ಹಾಗೂ 240 ಕಿಲೊಮೀಟರುಗಳಷ್ಟು ದೂರದಲ್ಲಿದ್ದ ವಾಚ್‌ ಟವರ್‌ ಸೊಸೈಟಿಯ ಮುಖ್ಯಕಾರ್ಯಾಲಯದಲ್ಲಿ ಎರಡು ವಾರಗಳಷ್ಟು ಸಮಯವನ್ನು ವ್ಯಯಿಸುವ ಮೂಲಕ ಲೇಖನಗಳನ್ನು ಬರೆಯುತ್ತಿದ್ದರು. ಅನೇಕ ಸಮಯಗಳಲ್ಲಿ ಬೆಳಗ್ಗಿನ ಜಾವ 5 ಘಂಟೆಗೆಲ್ಲ ಅಜ್ಜನ ಟೈಪ್‌ರೈಟರ್‌ ಶಬ್ದ ಮಾಡುತ್ತಿದ್ದದ್ದು ತನಗೆ ನೆನಪಿರುವುದಾಗಿ ತಂದೆಯರು ಹೇಳುತ್ತಾರೆ. ಹಾಗಿದ್ದರೂ, ಸಾರ್ವಜನಿಕವಾಗಿ ಸಾರುವ ಕೆಲಸದಲ್ಲಿ ಭಾಗವಹಿಸುವ ಜವಾಬ್ದಾರಿಯನ್ನು ಕೂಡ ಅಜ್ಜ ತುಂಬ ಗಂಭೀರವಾಗಿ ತೆಗೆದುಕೊಂಡಿದ್ದರು. ನಿಜ ಹೇಳಬೇಕೆಂದರೆ, ಬೈಬಲ್‌ ಪ್ರಕಾಶನಗಳನ್ನು ಇಟ್ಟುಕೊಳ್ಳುವುದಕ್ಕಾಗಿ ಅಜ್ಜ ದೊಡ್ಡದಾದ ಒಳಕಿಸೆಗಳಿದ್ದ ಗಂಡಸರ ನಡುವಂಗಿಯನ್ನು ತಯಾರಿಸಿದ್ದರು. ನನ್ನ 94 ವರ್ಷದ ಆ್ಯಂಟಿ ನವೋಮಿ ಹಾವೆಲ್‌ ಅಂಥ ಒಂದು ನಡುವಂಗಿಯನ್ನು ಈಗಲೂ ಇಟ್ಟುಕೊಂಡಿದ್ದಾರೆ. ಅಜ್ಜ, ಹೆಂಗಸರಿಗಾಗಿ ಕೂಡ ಒಂದು ಪುಸ್ತಕದ ಬ್ಯಾಗನ್ನು ತಯಾರಿಸಿದ್ದರು.

ಒಮ್ಮೆ ಕ್ಷೇತ್ರಸೇವೆಯಲ್ಲಿ ಅಜ್ಜ ಒಂದು ಉತ್ಸಾಹಭರಿತ ಬೈಬಲ್‌ ಚರ್ಚೆಯನ್ನು ಮಾಡಿ ಮುಗಿಸಿದ ನಂತರ, ಅವರ ಜೊತೆಯಲ್ಲಿ ಕ್ಷೇತ್ರಸೇವೆಯನ್ನು ಮಾಡುತ್ತಿದ್ದ ಸಹೋದರ, “ಸಿ. ಜೆ., ನೀನು ಒಂದು ತಪ್ಪು ಮಾಡಿಬಿಟ್ಟೆ” ಎಂದು ಹೇಳಿದರು.

“ಏನದು?” ಎಂದು ಅಜ್ಜ ಕೇಳಿದರು. ನಂತರ ಅವರು ತಮ್ಮ ನಡುವಂಗಿಯನ್ನು ಪರೀಕ್ಷಿಸಿದರು. ಎರಡೂ ಜೇಬುಗಳು ಖಾಲಿಯಾಗಿದ್ದವು.

“ನೀನು ದ ಗೋಲ್ಡನ್‌ ಏಜ್‌ ಪತ್ರಿಕೆಗೆ ಚಂದಾವನ್ನು ಮಾಡುವಂತೆ ಅವನಿಗೆ ಕೇಳಲು ಮರೆತುಬಿಟ್ಟೆ” ಎಂದು ಅವರು ಹೇಳಿದರು. ಸಂಪಾದಕನೇ ತನ್ನ ಪತ್ರಿಕೆಯನ್ನು ನೀಡಲು ಮರೆತುಬಿಟ್ಟದ್ದಕ್ಕಾಗಿ ಇಬ್ಬರು ತುಂಬ ನಕ್ಕಿದ್ದರು.

ದೊಡ್ಡವಳಾಗಿ ಬೆಳೆಯುತ್ತಿದ್ದ ಸಮಯದ ನೆನಪುಗಳು

ಅಜ್ಜನ ತೊಡೆಯ ಮೇಲೆ ಕುಳಿತುಕೊಳ್ಳುತ್ತಿದ್ದಾಗ, ಅವರು ನನ್ನ ಪುಟ್ಟ ಕೈಗಳನ್ನು ತಮ್ಮ ಕೈಗಳೊಳಗೆ ಹಿಡಿದುಕೊಂಡು, ನನಗೆ “ಬೆರಳಿನ ಕಥೆಯನ್ನು” ಹೇಳುತ್ತಿದ್ದದ್ದು ಈಗಲೂ ನೆನಪಿದೆ. ಅದನ್ನು “ಟಾಮಿ ಥಂಬ್‌” ಎಂಬ ಕಥೆಯಿಂದ ಆರಂಭಿಸಿ “ಪೀಟರ್ಸ್‌ ಪಾಯಿಂಟರ್‌” ವರೆಗೂ ಹೇಳುತ್ತಿದ್ದದ್ದು ನನಗೆ ನೆನಪಿದೆ. ಅವರು ಪ್ರತಿಯೊಂದು ಬೆರಳಿನ ವಿಶೇಷತೆಯನ್ನು ಹೇಳಿದರು. ನಂತರ, ಎಲ್ಲಾ ಬೆರಳುಗಳನ್ನು ಒಟ್ಟಿಗೆ ಸೇರಿಸಿ “ಪ್ರತಿಯೊಂದು ಬೆರಳು ಇನ್ನೊಂದಕ್ಕೆ ಸಹಾಯಮಾಡುವ ಮೂಲಕ, ಒಟ್ಟಿಗೆ ಕೆಲಸಮಾಡುತ್ತವೆ” ಎಂಬ ನೀತಿಪಾಠವನ್ನು ಕಲಿಸಿದರು.

ಮದುವೆಯಾದ ಮೇಲೆ, ನನ್ನ ಹೆತ್ತವರು ಓಹಾಯೋದಲ್ಲಿರುವ ಕ್ಲೀವ್‌ಲ್ಯಾಂಡಿಗೆ ಸ್ಥಳಾಂತರಿಸಿದರು. ಅಲ್ಲಿ, ಎಡ್‌ ಮತ್ತು ಮೇರಿ ಹೂಪರ್‌ ಅವರ ಆಪ್ತ ಸ್ನೇಹಿತರಾದರು. ಅವರ ಕುಟುಂಬವು ಶತಮಾನದ ಆರಂಭದಿಂದಲೂ ಬೈಬಲ್‌ ವಿದ್ಯಾರ್ಥಿಗಳಾಗಿದ್ದರು. ನನ್ನ ಹೆತ್ತವರು ಮತ್ತು ನಾನು ಕರೆಯುತ್ತಿದ್ದ ಅಂಕಲ್‌ ಎಡ್‌ ಮತ್ತು ಆ್ಯಂಟಿ ಮೇರಿ ತುಂಬ ಆಪ್ತ ಸ್ನೇಹಿತರಾಗಿದ್ದರು. ಹೂಪರ್‌ ದಂಪತಿಗಳು ತಮ್ಮ ಒಂದೇ ಒಂದು ಹೆಣ್ಣು ಮಗುವನ್ನು ಕಳೆದುಕೊಂಡಿದ್ದರು. ಹಾಗಾಗಿ, 1934ರಲ್ಲಿ ನಾನು ಹುಟ್ಟಿದಾಗ ನಾನು ಅವರ ಮುದ್ದಿನ “ಮಗಳಾದೆ.” ಆತ್ಮಿಕವಾಗಿ ಸಮೃದ್ಧವಾಗಿದ್ದ ಅಂಥ ಒಂದು ಪರಿಸರದಲ್ಲಿ ಬೆಳೆದುಬಂದಿದ್ದ ನಾನು, ನನ್ನ ಎಂಟನೇ ವರ್ಷದ ಹುಟ್ಟುಹಬ್ಬಕ್ಕೆ ಮುಂಚೆಯೇ ದೀಕ್ಷಾಸ್ನಾನವನ್ನು ತೆಗೆದುಕೊಳ್ಳುವ ಮೂಲಕ ದೇವರಿಗೆ ನನ್ನ ಸಮರ್ಪಣೆಯನ್ನು ಮಾಡಿದ್ದೆ.

ನಾನು ಚಿಕ್ಕವಳಾಗಿದ್ದಾಗ ಪ್ರತಿದಿನ ಬೈಬಲನ್ನು ಓದುವುದು ನನ್ನ ವಾಡಿಕೆಯಾಗಿತ್ತು. ಯೆಶಾಯ 11:​6-9ರಲ್ಲಿರುವ ದೇವರ ಹೊಸ ಲೋಕದಲ್ಲಿನ ಜೀವನದ ಕುರಿತ ವರ್ಣನೆಯು ನನ್ನ ನೆಚ್ಚಿನ ವಚನಗಳಾಗಿದ್ದವು. ನಾನು ಬೈಬಲನ್ನು ಪೂರ್ತಿಯಾಗಿ ಓದಬೇಕೆಂದು 1944ರಲ್ಲಿ ಮೊದಲ ಬಾರಿಗೆ ಪ್ರಯತ್ನವನ್ನು ಮಾಡಿದೆ. ಇದು, ನ್ಯೂ ಯಾರ್ಕ್‌ನ ಬಫೆಲೋದಲ್ಲಿ ನಡೆದ ಅಧಿವೇಶನದಲ್ಲಿ ಅಮೆರಿಕನ್‌ ಸ್ಟ್ಯಾಂಡರ್ಡ್‌ ವರ್ಷನ್‌ ವಿಶೇಷ ಮುದ್ರಣವು ಬಿಡುಗಡೆಯಾದ ನಂತರ ಆಗಿತ್ತು. ಈ ಭಾಷಾಂತರದ ಬೈಬಲನ್ನು ಓದಲು ನಾನೆಷ್ಟು ರೋಮಾಂಚಿತಳಾಗಿದ್ದೆ! ಏಕೆಂದರೆ, ಆ ಬೈಬಲಿನ “ಹಳೆಯ ಒಡಂಬಡಿಕೆಯಲ್ಲಿ” ಸುಮಾರು 7,000 ಬಾರಿ ಯೆಹೋವ ಎಂಬ ದೇವರ ಹೆಸರನ್ನು ಅದರ ಸ್ಥಳದಲ್ಲಿ ಪುನಃ ಹಾಕಲಾಗಿತ್ತು!

ವಾರಾಂತ್ಯಗಳು ತುಂಬ ಸಂತೋಷಕರ ಸಮಯಗಳಾಗಿದ್ದವು. ಏಕೆಂದರೆ, ನನ್ನ ಹೆತ್ತವರು ಮತ್ತು ಹೂಪರ್‌ ದಂಪತಿಗಳು ಹಳ್ಳಿಗಳಲ್ಲಿ ಸಾಕ್ಷಿನೀಡುವುದಕ್ಕಾಗಿ ನನ್ನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುತ್ತಿದ್ದರು. ಆಗ, ನಾವು ನಮ್ಮ ಊಟವನ್ನು ಕಟ್ಟಿಕೊಂಡು ಹೊಳೆಗಳ ಹತ್ತಿರ ಪಿಕ್‌ನಿಕ್‌ ಹೋಗುತ್ತಿದ್ದೆವು. ನಂತರ, ಯಾರಾದರೊಬ್ಬರ ತೋಟದ ಮನೆಗೆ ಹೋಗಿ ಅಲ್ಲಿ ಬಹಿರಂಗವಾದ ಬೈಬಲಾಧಾರಿತ ಭಾಷಣವನ್ನು ಕೊಡುತ್ತಿದ್ದೆವು. ಅದಕ್ಕಾಗಿ ಎಲ್ಲ ನೆರೆಹೊರೆಯವರನ್ನು ಕರೆಯುತ್ತಿದ್ದೆವು. ಜೀವನವು ತುಂಬ ಸರಳವಾಗಿತ್ತು. ಕುಟುಂಬವಾಗಿ ನಾವು ಸಂತೋಷವನ್ನು ಅನುಭವಿಸುತ್ತಿದ್ದೆವು. ಆರಂಭಕಾಲದ ಈ ನಮ್ಮ ಕುಟುಂಬದ ಸ್ನೇಹಿತರಲ್ಲಿ ಅನೇಕರು ಕಾಲಾನಂತರ ಸಂಚರಣ ಮೇಲ್ವಿಚಾರಕರಾದರು. ಅವರಲ್ಲಿ ಎಡ್‌ ಹೂಪರ್‌, ಬಾಬ್‌ ರೆಯ್ನರ್‌ ಮತ್ತು ಅವರ ಇಬ್ಬರು ಗಂಡು ಮಕ್ಕಳು ಕೂಡ ಇದ್ದರು. ರಿಚರ್ಡ್‌ ರೆಯ್ನರ್‌ ತಮ್ಮ ಹೆಂಡತಿ ಲಿಂಡಳೊಂದಿಗೆ ಈಗಲೂ ಸಂಚರಣ ಮೇಲ್ವಿಚಾರಕರಾಗಿ ಕೆಲಸವನ್ನು ಮಾಡುತ್ತಿದ್ದಾರೆ.

ಬೇಸಿಗೆಕಾಲವು ವಿಶೇಷವಾಗಿ ಹೆಚ್ಚು ಸಂತೋಷಕರ ಸಮಯವಾಗಿರುತ್ತಿತ್ತು. ನಾನು ನನ್ನ ಸೋದರಮಾವನ ಮಕ್ಕಳೊಂದಿಗೆ ಹಾವೆಲ್‌ ಪರಿವಾರದ ತೋಟದ ಮನೆಯಲ್ಲಿ ತಂಗಿರುತ್ತಿದ್ದೆ. 1949ರಲ್ಲಿ ನನ್ನ ದೊಡ್ಡಮ್ಮನ ಮಗಳಾದ ಗ್ರೇಸ್‌, ಮ್ಯಾಲ್‌ಕೋಮ್‌ ಆ್ಯಲನ್‌ ಅವರನ್ನು ಮದುವೆಯಾದಳು. ಕೆಲವು ವರ್ಷಗಳ ನಂತರ ಅವರ ತಮ್ಮನನ್ನು ನಾನು ಮದುವೆಯಾಗುವೆ ಎಂದು ನಾನು ನೆನಸಿಯೇ ಇರಲಿಲ್ಲ. ನನ್ನ ಸೋದರಮಾವನ ಮಗಳಾದ ಮಾರಿಯೋನ್‌ ಉರುಗ್ವೆಯಲ್ಲಿ ಮಿಷನೆರಿಯಾಗಿದ್ದಳು. ಅವಳು ಹಾವರ್ಡ್‌ ಹಿಲ್‌ಬಾರ್ನ್‌ ಅವರನ್ನು 1966ರಲ್ಲಿ ಮದುವೆಯಾದಳು. ಸೋದರಮಾವನ ಈ ಇಬ್ಬರು ಮಕ್ಕಳು ತಮ್ಮ ಗಂಡಂದಿರೊಂದಿಗೆ ಅನೇಕ ವರ್ಷಗಳ ವರೆಗೆ ಬ್ರೂಕ್ಲಿನ್‌ ಮುಖ್ಯಕಾರ್ಯಾಲಯದಲ್ಲಿ ಸೇವೆಯನ್ನು ಸಲ್ಲಿಸಿದ್ದರು.

ಅಜ್ಜ ಮತ್ತು ನನ್ನ ಪದವಿಪ್ರಾಪ್ತಿ

ನಾನು ಪ್ರೌಢಶಾಲೆಯಲ್ಲಿದ್ದ ಸಮಯದಲ್ಲಿ, ಅಜ್ಜ ನನಗೆ ಯಾವಾಗಲೂ ಪತ್ರ ಬರೆಯುತ್ತಿದ್ದರು. ಅವರು ಪತ್ರಗಳೊಂದಿಗೆ ಹಳೆಯದಾದ ಅನೇಕ ಕುಟುಂಬ ಫೋಟೋಗಳನ್ನು ಇಟ್ಟು ಕಳುಹಿಸುತ್ತಿದ್ದರು. ಅವುಗಳ ಹಿಂದೆ ಕುಟುಂಬ ಚರಿತ್ರೆಯನ್ನು ಹಂಚಿಕೊಳ್ಳುತ್ತಾ, ಟೈಪ್‌ ಮಾಡಿದ ಸವಿವರವಾದ ನೋಟ್ಸ್‌ಗಳಿರುತ್ತಿದ್ದವು. ಹೀಗೆಯೇ ಅಜ್ಜ ಮತ್ತು ಅವರೊಂದಿಗೆ ಅನ್ಯಾಯವಾಗಿ ಜೈಲಿಗೆ ಕಳುಹಿಸಲ್ಪಟ್ಟ ಇನ್ನಿತರರ ಫೋಟೋಗಳನ್ನು ನಾನು ಪಡೆದುಕೊಂಡೆ.

1951ರ ಕೊನೆಯಲ್ಲಿ ಕ್ಯಾನ್ಸರ್‌ ರೋಗದಿಂದಾಗಿ ಅಜ್ಜ ತಮ್ಮ ಧ್ವನಿಪೆಟ್ಟಿಗೆಯನ್ನು ಕಳೆದುಕೊಂಡರು. ಆದರೂ, ಅವರ ಚುರುಕಾದ ಬುದ್ಧಿ ಚಾತುರ್ಯ ಮಾತ್ರ ಹಾಗೆಯೇ ಉಳಿದಿತ್ತು. ಅವರು ಹೇಳಲು ಬಯಸುತ್ತಿದ್ದ ಪದಗಳನ್ನು ತಮ್ಮೊಂದಿಗೆ ಇಟ್ಟುಕೊಂಡಿದ್ದ ಒಂದು ಸಣ್ಣ ನೋಟ್‌ಪ್ಯಾಡ್‌ನಲ್ಲಿ ಬರೆಯುತ್ತಿದ್ದರು. ನನ್ನ ಪ್ರೌಢಶಾಲೆಯ ಮಧ್ಯಮ ಪರೀಕ್ಷೆಯು 1952ರ ಜನವರಿಯಲ್ಲಿತ್ತು. ಡಿಸೆಂಬರ್‌ ತಿಂಗಳ ಆರಂಭದಲ್ಲಿ, ಪದವಿ ಪ್ರದಾನ ಸಮಾರಂಭದಲ್ಲಿ ನಾನು ನೀಡಲಿರುವ ಭಾಷಣದ ಒಂದು ಪ್ರತಿಯನ್ನು ಅಜ್ಜನಿಗೆ ಕಳುಹಿಸಿದೆ. ಅವರು ಕೆಲವೊಂದು ಸಂಪಾದಕೀಯ ತಿದ್ದುಪಡಿಗಳನ್ನು ಮಾಡಿ ಕೊನೆಯ ಪುಟದಲ್ಲಿ ಎರಡು ಪದಗಳನ್ನು ಬರೆದಿದ್ದರು. ಅದು, “ಅಜ್ಜನಿಗೆ ಸಂತೋಷವಾಗಿದೆ” ಎಂದಾಗಿತ್ತು. ಅವು ನನ್ನ ಹೃದಯವನ್ನು ಸ್ಪರ್ಶಿಸಿದವು. ಅವರು ತಮ್ಮ ಭೂಜೀವನವನ್ನು 81ನೇ ವರ್ಷದಲ್ಲಿ ಅಂದರೆ, 1951, ಡಿಸೆಂಬರ್‌ 18ರಂದು ಮುಗಿಸಿದರು. * ನನ್ನ ಪದವಿ ಪ್ರದಾನ ಸಮಾರಂಭದ ಭಾಷಣದ ಕೊನೆಯ ಪುಟದಲ್ಲಿ ಮಸುಕಾಗಿಹೋಗಿರುವ ಅಜ್ಜನ ಎರಡು ಪದಗಳಿರುವ ಪ್ರತಿಯನ್ನು ನಾನು ಈಗಲೂ ಹಾಗೆಯೇ ಇಟ್ಟುಕೊಂಡಿದ್ದೇನೆ.

ನಾನು ಶಾಲೆಯನ್ನು ಮುಗಿಸಿದ ಕೂಡಲೆ ಯಾವುದನ್ನು ಯೆಹೋವನ ಸಾಕ್ಷಿಗಳು ಪೂರ್ಣ ಸಮಯದ ಸಾರುವ ಕೆಲಸ ಎಂದು ಹೇಳುತ್ತಾರೋ ಆ ಪಯನೀಯರ್‌ ಸೇವೆಯನ್ನು ಮಾಡಲು ಪ್ರಾರಂಭಿಸಿದೆ. 1958ರಲ್ಲಿ, ನ್ಯೂ ಯಾರ್ಕ್‌ ನಗರದ ಯಾಂಕೀ ಕ್ರೀಡಾಂಗಣ ಮತ್ತು ಪೋಲೋ ಗ್ರೌಂಡ್ಸ್‌ನಲ್ಲಿ 123 ದೇಶಗಳಿಂದ ಬಂದಿದ್ದ, 2,53,922 ಮಂದಿಯ ಉಚ್ಚಾಂಕದಿಂದ ನೆರೆದಿದ್ದ ಅಧಿವೇಶನಕ್ಕೆ ನಾನು ಹಾಜರಾದೆ. ಅಲ್ಲಿ ಒಂದು ದಿನ ನಾನು “ವುಡ್‌ವರ್ತ್‌ ಮಿಲ್ಸ್‌” ಎಂಬ ಗುರುತಿನ ಬ್ಯಾಡ್ಜ್‌ ಅನ್ನು ಧರಿಸಿಕೊಂಡಿದ್ದ ಆಫ್ರಿಕ ದೇಶದ ಒಬ್ಬ ಪ್ರತಿನಿಧಿಯನ್ನು ಭೇಟಿಯಾದೆ. ಸುಮಾರು 30 ವರ್ಷಗಳ ಹಿಂದೆ, ಅಜ್ಜನ ಹೆಸರನ್ನು ಅವರಿಗೆ ಇಡಲಾಗಿತ್ತು!

ನನ್ನ ಪರಂಪರೆಗಾಗಿ ಸಂತೋಷಿಸುತ್ತೇನೆ

ನಾನು 14 ವರ್ಷದವಳಾಗಿದ್ದಾಗ ನನ್ನ ತಾಯಿಯು ಪಯನೀಯರ್‌ ಸೇವೆಯನ್ನು ಮತ್ತೆ ಪ್ರಾರಂಭಿಸಿದರು. 40 ವರ್ಷಗಳ ನಂತರ ಅಂದರೆ, 1988ರಲ್ಲಿ ಅವರು ಪಯನೀಯರರಾಗಿಯೇ ತೀರಿಕೊಂಡರು! ತಂದೆ ಸಾಧ್ಯವಾಗುವಾಗಲೆಲ್ಲಾ ಪಯನೀಯರ್‌ ಸೇವೆ ಮಾಡುತ್ತಿದ್ದರು. ತಾಯಿಯ ಮರಣಕ್ಕೆ ಒಂಬತ್ತು ತಿಂಗಳುಗಳ ಮುಂಚೆ ತಂದೆಯವರು ಮೃತರಾದರು. ನಾವು ಅಭ್ಯಾಸ ಮಾಡಿದ ಕೆಲವರು ಜೀವನಪರ್ಯಂತದ ಸ್ನೇಹಿತರಾದರು. ಅವರಲ್ಲಿ ಕೆಲವರ ಮಕ್ಕಳು ಬ್ರೂಕ್ಲಿನ್‌ ಮುಖ್ಯಕಾರ್ಯಾಲಯದಲ್ಲಿ ಸೇವೆಮಾಡುವುದಕ್ಕಾಗಿ ಹೋದರು. ಇನ್ನಿತರರು ಪಯನೀಯರ್‌ ಸೇವೆಯನ್ನು ಮಾಡುತ್ತಿದ್ದಾರೆ.

1959 ನನಗೆ ತುಂಬ ವಿಶೇಷವಾದ ವರ್ಷವಾಗಿತ್ತು. ಏಕೆಂದರೆ, ಆಗಲೇ ನಾನು ಪಾಲ್‌ ಆ್ಯಲನ್‌ ಅವರೊಂದಿಗೆ ಪರಿಚಿತಳಾದೆ. 1946ರಲ್ಲಿ ಗಿಲ್ಯಡ್‌ ಶಾಲೆಯ ಏಳನೇ ತರಗತಿಯಿಂದ ಪದವಿಯನ್ನು ಪಡೆದುಕೊಂಡ ಬಳಿಕ, ಅವರನ್ನು ಸಂಚರಣ ಮೇಲ್ವಿಚಾರಕರಾಗಿ ನೇಮಿಸಲಾಗಿತ್ತು. ಆ ಶಾಲೆಯು ಯೆಹೋವನ ಸಾಕ್ಷಿಗಳ ಮಿಷನೆರಿಗಳನ್ನು ತರಬೇತುಗೊಳಿಸುತ್ತದೆ. ನಾವು ಭೇಟಿಯಾದ ಸಮಯದಲ್ಲಿ, ಪಾಲ್‌ ಅವರ ಮುಂದಿನ ನೇಮಕವು ನಾನು ಪಯನೀಯರ್‌ ಸೇವೆ ಮಾಡುತ್ತಿದ್ದ ಓಹಾಯೋದಲ್ಲೇ ಇರುವುದು ಎಂಬುದು ನಮ್ಮಿಬ್ಬರಿಗೂ ಗೊತ್ತಿರಲಿಲ್ಲ. ಅವರನ್ನು ತಂದೆಯವರು ತುಂಬ ಇಷ್ಟಪಡುತ್ತಿದ್ದರು ಹಾಗೆಯೇ ತಾಯಿಯೂ ಕೂಡ; ನಾವು 1963ರಲ್ಲಿ ಹಾವೆಲ್‌ ತೋಟದ ಮನೆಯಲ್ಲಿ ನಮ್ಮ ಕುಟುಂಬದವರೆಲ್ಲರೊಂದಿಗೆ ಎಡ್‌ ಹೂಪರ್‌ ಅವರ ಮೇಲ್ವಿಚಾರಣೆಯಲ್ಲಿ ಮದುವೆಯಾದೆವು. ಅದು ನನ್ನ ಕನಸು ನನಸಾದಂತಿತ್ತು.

ಪಾಲ್‌ ಅವರ ಬಳಿ ಸ್ವಂತ ಕಾರ್‌ ಇರಲಿಲ್ಲ. ನಾವು ಮುಂದಿನ ನೇಮಕಕ್ಕಾಗಿ ಕ್ಲೀವ್‌ಲ್ಯಾಂಡಿಗೆ ಹೊರಟಾಗ, ನನ್ನ 1961 ವೊಲ್ಕ್ಸ್‌ವ್ಯಾಗನ್‌ ಬಗ್‌ ಎಂಬ ಸಣ್ಣ ಕಾರಿನಲ್ಲಿ ನಮ್ಮ ಎಲ್ಲಾ ವಸ್ತುಗಳನ್ನು ಇಡಲು ಸ್ಥಳವು ಸಾಕಾಗಿತ್ತು. ಅನೇಕವೇಳೆ, ಸೋಮವಾರದಂದು ನಾವು ಬೇರೆ ಸಭೆಗೆ ಹೋಗುವುದಕ್ಕಾಗಿ ಸಾಮಾನುಗಳನ್ನು ಗಾಡಿಯಲ್ಲಿ ಹೇಗೆ ಇಡುತ್ತಿದ್ದೇವೆಂಬುದನ್ನು ನೋಡಲು ಸ್ನೇಹಿತರು ಬರುತ್ತಿದ್ದರು. ಸೂಟ್‌ಕೇಸ್‌, ಬ್ರೀಫ್‌ಕೇಸ್‌, ಫೈಲ್‌ ಬಾಕ್ಸ್‌, ಟೈಪ್‌ರೈಟರ್‌ ಎಲ್ಲವೂ ಸಣ್ಣ ಕಾರಿನಲ್ಲಿ ಹೇಗೆ ಸೇರಿಕೊಳ್ಳುತ್ತಿದ್ದವು ಎಂಬುದನ್ನು ನೋಡುವುದು ಸರ್ಕಸ್‌ ಪ್ರದರ್ಶನದಂತೆ ಇರುತ್ತಿತ್ತು.

ನಾನು ಮತ್ತು ಪಾಲ್‌ ಸದ್ಯದ ಜೀವನದ ಕಷ್ಟನಷ್ಟಗಳನ್ನು ಆನಂದಿಸುತ್ತಾ ಎಣಿಸಲಾರದಷ್ಟು ಮೈಲುಗಳ ಪ್ರಯಾಣವನ್ನು ಮಾಡಿದ್ದೇವೆ. ಮಾಡಲ್ಪಟ್ಟಿರುವ ಪ್ರತಿಯೊಂದು ಕೆಲಸವನ್ನು ಯೆಹೋವನು ಮಾತ್ರ ನೀಡಸಾಧ್ಯವಿರುವ ಬಲದ ಸಹಾಯದಿಂದಲೇ ಮಾಡಿದ್ದೇವೆ. ಯೆಹೋವನಿಗಾಗಿ ಮತ್ತು ಪರಸ್ಪರರಿಗಾಗಿ ಹಾಗೂ ಹಳೆಯ ಮತ್ತು ಹೊಸ ಸ್ನೇಹಿತರಿಗಾಗಿ ಪ್ರೀತಿಯಿಂದ ತುಂಬಿದ್ದ ವರ್ಷಗಳೆಲ್ಲವೂ ನಿಜವಾಗಿಯೂ ಆನಂದದಾಯಕವಾಗಿದ್ದವು. ಪ್ಯಾಟರ್‌ಸನ್‌ನಲ್ಲಿ ಪಾಲರಿಗೆ ಸಿಕ್ಕಿದ ಎರಡು ತಿಂಗಳುಗಳ ತರಬೇತಿಯು, ಈ ವರೆಗಿನ ನಮ್ಮ ಜೀವನದ ಅತ್ಯಂತ ಸ್ವಾರಸ್ಯಕರ ಅಂಶವಾಗಿದೆ. ಭೂಮಿಯಲ್ಲಿರುವ ಯೆಹೋವನ ಸಂಸ್ಥೆಯನ್ನು ನಿಕಟವಾಗಿ ಗಮನಿಸುವ ಮೂಲಕ, ನನ್ನ ಅತ್ಯಮೂಲ್ಯವಾದ ಆತ್ಮಿಕ ಪರಂಪರೆಯಲ್ಲಿರುವ ದೃಢನಂಬಿಕೆಗೆ ಇನ್ನೂ ಹೆಚ್ಚು ಪುನರಾಶ್ವಾಸನೆಯನ್ನು ಕೊಟ್ಟಿದೆ. ಇದು ನಿಜವಾಗಿಯೂ ದೇವರ ಸಂಸ್ಥೆಯೇ ಎಂಬುದರಲ್ಲಿ ನನಗೆ ಕಿಂಚಿತ್ತೂ ಸಂದೇಹವೇ ಇಲ್ಲ. ಅದರಲ್ಲಿ ಒಂದು ಅತಿ ಚಿಕ್ಕ ಭಾಗವಾಗಿರುವುದು ಕೂಡ ಎಂಥ ಆನಂದವಾಗಿದೆ!

[ಪಾದಟಿಪ್ಪಣಿ]

^ ಪ್ಯಾರ. 44 1952, ಫೆಬ್ರವರಿ 15ರ ದ ವಾಚ್‌ಟವರ್‌ನ 128ನೇ ಪುಟವನ್ನು ನೋಡಿ.

[ಪುಟ 25ರಲ್ಲಿರುವ ಚಿತ್ರ]

1941ರಲ್ಲಿ ಸೆಂಟ್‌ ಲೂಯಿನಲ್ಲಿ ನಡೆದ ಅಧಿವೇಶನದಲ್ಲಿ “ಮಕ್ಕಳು” ಎಂಬ ಪುಸ್ತಕದ ವೈಯಕ್ತಿಕ ಪ್ರತಿಯನ್ನು ನಾನು ಪಡೆದುಕೊಳ್ಳುವುದಕ್ಕೆ ಸ್ವಲ್ಪ ಮುಂಚೆ ಎಡ್‌ ಹೂಪರ್‌ ಅವರೊಂದಿಗೆ

[ಪುಟ 26ರಲ್ಲಿರುವ ಚಿತ್ರ]

1948ರಲ್ಲಿ ಅಜ್ಜ

[ಪುಟ 26ರಲ್ಲಿರುವ ಚಿತ್ರ]

ಹಾವೆಲ್‌ ತೋಟದ ಮನೆಯಲ್ಲಿ (ವೃತ್ತದಲ್ಲಿ) ನನ್ನ ಹೆತ್ತವರು ಮದುವೆಯಾದಾಗ

[ಪುಟ 27ರಲ್ಲಿರುವ ಚಿತ್ರ]

1918ರಲ್ಲಿ ಅನ್ಯಾಯವಾಗಿ ಸೆರೆಗೆ ಹಾಕಲ್ಪಟ್ಟ ಎಂಟು ಮಂದಿ ಬೈಬಲ್‌ ವಿದ್ಯಾರ್ಥಿಗಳು (ಅಜ್ಜ ಬಲಗಡೆಯ ಕೊನೆಯಲ್ಲಿ ನಿಂತಿದ್ದಾರೆ)

[ಪುಟ 29ರಲ್ಲಿರುವ ಚಿತ್ರ]

ನಮ್ಮ ವೊಲ್ಕ್ಸ್‌ವ್ಯಾಗನ್‌ ಗಾಡಿಯು ನಮ್ಮ ಎಲ್ಲಾ ಸಾಮಾನುಗಳನ್ನು ತುಂಬಿಸಲು ಸರಿಯಾಗಿತ್ತು

[ಪುಟ 29ರಲ್ಲಿರುವ ಚಿತ್ರ]

ನನ್ನ ಗಂಡ ಪಾಲ್‌ನೊಂದಿಗೆ