ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಟೂಕನ್‌ನ ಉದ್ದನೆಯ ಕೊಕ್ಕು

ಟೂಕನ್‌ನ ಉದ್ದನೆಯ ಕೊಕ್ಕು

ರಚಿಸಲ್ಪಟ್ಟಿತ್ತೋ?

ಟೂಕನ್‌ನ ಉದ್ದನೆಯ ಕೊಕ್ಕು

◼ ಮಧ್ಯ ಮತ್ತು ದಕ್ಷಿಣ ಅಮೆರಿಕ ಖಂಡದ ಟೂಕನ್‌ ಪಕ್ಷಿ ಹಾರಾಟದಲ್ಲಿ ವೇಗಿಯಲ್ಲ, ಹೆಚ್ಚಾಗಿ ಕುಪ್ಪಳಿಸುತ್ತಲೇ ಅತ್ತಿತ್ತ ಚಲಿಸುತ್ತದೆ. ಈ ಪಕ್ಷಿ ಜಾತಿಗಳ ಕೂಗು ಕಪ್ಪೆಯ ಕೂಗನ್ನು ಹೋಲುತ್ತದಾದರೂ ಸದ್ದು ಅದಕ್ಕಿಂತ ಗಟ್ಟಿ. ಕಾಡಿನಲ್ಲಿ ಒಂದು ಕಿಲೋಮೀಟರ್‌ ದೂರದಿಂದಲೂ ನಮಗೆ ಅದರ ಧ್ವನಿ ಕೇಳಿಸಬಲ್ಲದು. ಆದರೂ ಟೂಕನ್‌ ಪಕ್ಷಿಯ ಕುರಿತು ವಿಜ್ಞಾನಿಗಳನ್ನು ಪ್ರಾಯಶಃ ಅತಿ ಅಚ್ಚರಿಗೊಳಿಸುವುದು ಅದರ ಉದ್ದನೆಯ ಭಾರಿ ಕೊಕ್ಕೇ.

ಪರಿಗಣಿಸಿ: ಕೆಲವು ಟೂಕನ್‌ಗಳ ಕೊಕ್ಕು ಅವುಗಳ ದೇಹದ ಮೂರನೆ ಒಂದು ಭಾಗದಷ್ಟು ಉದ್ದವಿದೆ. ಅದು ಭಾರವುಳ್ಳದ್ದಾಗಿ ಕಾಣುತ್ತದೆ ಆದರೆ ತುಂಬ ಹಗುರ. “ಉಗುರುಗಳು ಮತ್ತು ಕೂದಲುಗಳಲ್ಲಿರುವ ಶೃಂಗದ್ರವ್ಯವಾದ ಕೆರಟಿನ್‌ನಿಂದಲೇ ಕೊಕ್ಕಿನ ಹೊರಮೈಯೂ ಮಾಡಲ್ಪಟ್ಟಿದೆ. ಅದು ನಿಜವಾಗಿ ಷಡ್ಭುಜಾಕಾರದ ಅನೇಕ ಅತಿ ಸೂಕ್ಷ್ಮ ತೆಳು ಪದರಗಳಿಂದ ಕೂಡಿದ್ದು ಛಾವಣಿಯ ಮೇಲಿನ ಹೆಂಚಿನ ಹೊದಿಕೆಯಂತೆ ಒಂದರ ಮೇಲೊಂದು ಚಾಚಿರುತ್ತದೆ” ಎಂದು ಭೌತವಿಜ್ಞಾನಿ ಮಾರ್ಕ್‌ ಆಂಡ್ರೇ ಮೈಅರ್ಸ್‌ ವಿವರಿಸುತ್ತಾರೆ.

ಟೂಕನ್‌ ಪಕ್ಷಿಯ ಕೊಕ್ಕು ಎಷ್ಟು ಗಡುಸಾಗಿದೆ ಎಂದರೆ ಅದನ್ನು ಗಟ್ಟಿಯಾದ ಸ್ಪಂಜಿಗೆ ಹೋಲಿಸಬಹುದು. ಅದರ ಕೆಲವು ಭಾಗಗಳು ಟೊಳ್ಳಾಗಿವೆ, ಇತರ ಭಾಗಗಳು ದಿಂಡುಗಳಿಂದ ಮತ್ತು ಸೂಕ್ಷ್ಮ ಪೊರೆಗಳಿಂದ ಕೂಡಿವೆ. ಇದರಿಂದಾಗಿ ಅದರ ಕೊಕ್ಕು ಅತಿ ಹಗುರವೂ ಅತಿ ಗಟ್ಟಿಮುಟ್ಟಾಗಿಯೂ ಇರುತ್ತದೆ. “ಟೂಕನ್‌ ಪಕ್ಷಿಯ ಕೊಕ್ಕಿನ ರಚನೆಯನ್ನು ನೋಡುವಾಗ ಅದು ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ನ ಪಾಂಡಿತ್ಯ ಪಡೆದಿದೆಯೋ ಎಂಬಂತೆ ಕಾಣುತ್ತದೆ” ಎನ್ನುತ್ತಾರೆ ಮೈಅರ್ಸ್‌.

ಟೂಕನ್‌ನ ಕೊಕ್ಕಿನ ರಚನೆ ಭಾರಿ ಹೊಡೆತಗಳನ್ನು ತಡೆದುಕೊಳ್ಳಲು ಅದಕ್ಕೆ ನೆರವಾಗುತ್ತದೆ. ವಿಮಾನ ಮತ್ತು ಮೋಟಾರು ಕಾರುಗಳ ತಯಾರಿಕೆಗಳಲ್ಲಿ ಇಂಜಿನಿಯರರಿಗೆ ಟೂಕನ್‌ನ ಕೊಕ್ಕು ಒಂದು ಮಾದರಿಯಾಗಿರಬಲ್ಲದೆಂದು ವಿಜ್ಞಾನಿಗಳು ನಂಬುತ್ತಾರೆ. ಮೈಅರ್ಸ್‌ ಹೇಳುವುದು: “ಈ ಟೂಕನ್‌ ಪಕ್ಷಿಯ ಕೊಕ್ಕುಗಳನ್ನು ನಕಲುಮಾಡಿ ತಯಾರಿಸಿದ ಪ್ಯಾನಲ್‌ಗಳು ಮೋಟಾರು ಅಪಘಾತಗಳಲ್ಲಿ ಚಾಲಕರಿಗೆ ಹೆಚ್ಚಿನ ಸುರಕ್ಷೆಯನ್ನು ಕೊಡಸಾಧ್ಯವಿದೆ.”

ನಿಮ್ಮ ಅಭಿಪ್ರಾಯ? ಟೂಕನ್‌ನ ಈ ಗಟ್ಟಿಯಾದ ಆದರೂ ಹಗುರ ಕೊಕ್ಕು ಆಕಸ್ಮಿಕವಾಗಿ ಬಂತೋ? ಅಥವಾ ಸೃಷ್ಟಿಕರ್ತನಿಂದ ರಚಿಸಲ್ಪಟ್ಟಿತ್ತೋ? (g 1/09)

[ಪುಟ 32ರಲ್ಲಿರುವ ರೇಖಾಕೃತಿ/ಚಿತ್ರ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಟೊಳ್ಳಾದ ಭಾಗ

ಸ್ಪಂಜಿನಂಥ ಭಾಗ