ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭೂಕಂಪದ ಸವಿಸ್ತಾರ ವಿಶ್ಲೇಷಣೆ

ಭೂಕಂಪದ ಸವಿಸ್ತಾರ ವಿಶ್ಲೇಷಣೆ

ಭೂಕಂಪದ ಸವಿಸ್ತಾರ ವಿಶ್ಲೇಷಣೆ

“ಸ್ಥಿರವಾಗಿರುವ ಭೂಮಿಯ ಮೇಲೆ ಜೀವಿಸುವುದಕ್ಕೆ ನಾವೆಷ್ಟು ಒಗ್ಗಿಹೋಗಿದ್ದೇವೆಂದರೆ, ಅದೇ ಅಲುಗಾಡಲಾರಂಭಿಸುವಾಗ ಮನಸ್ಸಿನ ಸ್ವಾಸ್ಥ್ಯ ತಪ್ಪಿಹೋಗುತ್ತದೆ.”—⁠“ಬಿರುಸಾದ ಭೂಮಿ.”

“ಭೂಕಂಪಗಳು ನಿಸರ್ಗದಲ್ಲಿರುವ ಅತ್ಯಂತ ವಿನಾಶಕಾರಿ ಮತ್ತು ಪ್ರಬಲ ಶಕ್ತಿಗಳಲ್ಲೊಂದಾಗಿವೆ,” ಎಂದು ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲೊಪೀಡಿಯ ಹೇಳುತ್ತದೆ. ಈ ಹೇಳಿಕೆಯು ಅತಿಶಯೋಕ್ತಿಯೇನಲ್ಲ, ಯಾಕೆಂದರೆ ಒಂದು ತೀವ್ರವಾದ ಭೂಕಂಪದಿಂದ ಹೊರಬರುವ ಶಕ್ತಿಯು, ಮೊತ್ತಮೊದಲ ಪರಮಾಣು ಬಾಂಬ್‌ನಿಂದ ಹೊರಬರುವ ಶಕ್ತಿಗಿಂತಲೂ 10,000 ಪಟ್ಟು ಹೆಚ್ಚಾಗಿರಬಹುದು! ಈ ಭೀತಿಯನ್ನು ಹೆಚ್ಚಿಸುವ ಇನ್ನೊಂದು ವಾಸ್ತವಾಂಶವೇನೆಂದರೆ, ಭೂಕಂಪಗಳು ಯಾವುದೇ ಹವಾಮಾನದಲ್ಲಿ, ಯಾವುದೇ ಋತುವಿನಲ್ಲಿ ಮತ್ತು ಯಾವುದೇ ಸಮಯದಲ್ಲಿ ಸಂಭವಿಸಬಲ್ಲವು. ಮತ್ತು ವಿಜ್ಞಾನಿಗಳಿಗೆ ಶಕ್ತಿಶಾಲಿಯಾದ ಭೂಕಂಪಗಳು ಎಲ್ಲಿ ಆಗಬಹುದೆಂಬುದರ ಬಗ್ಗೆ ಸ್ವಲ್ಪ ಸುಳಿವು ಸಿಗಬಹುದಾದರೂ, ಅವು ಯಾವಾಗ ಆಗುವವೆಂಬುದನ್ನು ಅವರು ಖಚಿತವಾಗಿ ತಿಳಿಸಲಾರರು.

ಭೂಮಿಯಡಿಯಲ್ಲಿರುವ ಬಂಡೆಯ ಸಮೂಹಗಳು ತಮ್ಮ ಸ್ಥಾನವನ್ನು ಬದಲಾಯಿಸುವಾಗ ಭೂಕಂಪಗಳು ಸಂಭವಿಸುತ್ತವೆ. ಈ ರೀತಿಯ ಚಟುವಟಿಕೆಯು ನಿರಂತರವಾಗಿ ನಡೆಯುತ್ತಾ ಇರುತ್ತದೆ. ಅನೇಕವೇಳೆ, ಇದರಿಂದುಂಟಾಗುವ ಸೀಸ್ಮಿಕ್‌ ಅಲೆಗಳು ಭೂಮಿಯ ಮೇಲ್ಮೈಯಲ್ಲಿ ಗೊತ್ತಾಗುವಷ್ಟು ಪ್ರಬಲವಾಗಿರುವುದಿಲ್ಲ, ಆದರೆ ಅವುಗಳನ್ನು ಒಂದು ಸೀಸ್ಮೊಗ್ರಾಫ್‌ನಿಂದ * ಪತ್ತೆಹಚ್ಚಿ, ದಾಖಲಿಸಿಡಬಹುದು. ಬೇರೆ ಸಮಯಗಳಲ್ಲಿ, ಸಾಕಷ್ಟು ಬಂಡೆಸಿಡಿತಗಳು ಹಾಗೂ ಕದಲುವಿಕೆಯು ಉಂಟಾಗುವುದರಿಂದ, ಭೂಮಿಯ ಮೇಲ್ಮೈ ಬಿರುಸಾಗಿ ಕಂಪಿಸುತ್ತದೆ.

ಆದರೆ ಭೂಗರ್ಭದಲ್ಲಿ ಸತತವಾದ ಚಲನೆಯಿರುವುದೇಕೆ? “ಭೂವಿಜ್ಞಾನದ ಕುರಿತಾದ ಅಭಿಪ್ರಾಯವನ್ನೇ ಸಂಪೂರ್ಣವಾಗಿ ಬದಲಾಯಿಸಿಬಿಟ್ಟಿರುವ ಒಂದು ವಿಚಾರದಿಂದ, ಅಂದರೆ ಬೃಹತ್‌ ಶಿಲಾಫಲಕಗಳ ಚಲನವಲನಗಳ ಅಧ್ಯಯನದಿಂದ (ಪ್ಲೇಟ್‌ ಟ್ಯೂಟಾನಿಕ್ಸ್‌) ಒಂದು ವಿವರಣೆ ಸಿಗುತ್ತದೆ” ಎಂದು ಅಮೆರಿಕದ ರಾಷ್ಟ್ರೀಯ ಭೂಕಂಪ ಮಾಹಿತಿ ಕೇಂದ್ರ (ಎನ್‌.ಇ.ಐ.ಸಿ) ಹೇಳುತ್ತದೆ. “ಪ್ರಧಾನವಾದ ಏಳು ಹೊರಚಿಪ್ಪು ಫಲಕಗಳಿವೆಯೆಂದು ನಮಗೀಗ ಗೊತ್ತಿದೆ, ಅವು ಅನೇಕಾನೇಕ ಚಿಕ್ಕ ಫಲಕಗಳಾಗಿ ವಿಭಾಜಿಸಲ್ಪಟ್ಟಿವೆ ಮತ್ತು ಇವೆಲ್ಲವೂ ಪರಸ್ಪರ ಸಂಬಂಧದಲ್ಲಿ ಪ್ರತಿ ವರ್ಷ 10ರಿಂದ 130 ಮಿಲಿಮೀಟರ್‌ [ಒಂದು ಇಂಚಿನ 3/8ನೆಯ ಭಾಗದಿಂದ ಹಿಡಿದು 5 ಇಂಚುಗಳ] ವೇಗಪ್ರಮಾಣದಲ್ಲಿ ನಿರಂತರವಾಗಿ ಚಲಿಸುತ್ತಿರುತ್ತವೆ,” ಎಂದು ಎನ್‌.ಇ.ಐ.ಸಿ ಹೇಳುತ್ತದೆ. ಅದು ಇನ್ನೂ ಕೂಡಿಸುತ್ತಾ ಹೇಳುವುದೇನೆಂದರೆ, ಹೆಚ್ಚಿನ ಭೂಕಂಪಗಳು ಶಿಲಾಫಲಕಗಳ ಸೀಮೆಗಳಲ್ಲಿರುವ ಕಿರಿದಾದ ಪ್ರದೇಶಗಳಲ್ಲಿ ಆಗುತ್ತವೆ. ಹೆಚ್ಚಿನ ಭೂಕಂಪಗಳಲ್ಲಿ 90 ಪ್ರತಿಶತ ಅಲ್ಲಿಯೇ ಸಂಭವಿಸುವ ಸಾಧ್ಯತೆಯಿದೆ.

ಪರಿಮಾಣ ಮತ್ತು ತೀವ್ರತೆ

ಒಂದು ಭೂಕಂಪದ ತೀಕ್ಷ್ಣತೆಯು, ಅದರ ಪರಿಮಾಣ ಇಲ್ಲವೇ ಅದರ ತೀವ್ರತೆಯಿಂದ ಅಳೆಯಲ್ಪಡಬಹುದು. 1930ರ ದಶಕದಲ್ಲಿ ಚಾರ್ಲ್ಸ್‌ ರಿಕ್ಟರ್‌ ಎಂಬವನು, ಭೂಕಂಪಗಳ ಪರಿಮಾಣವನ್ನು ಅಳೆಯಲಿಕ್ಕಾಗಿ ಒಂದು ಮಾಪಕವನ್ನು ವಿಕಸಿಸಿದನು. ಸೀಸ್ಮೊಗ್ರಾಫ್‌ ಸ್ಟೇಷನ್‌ಗಳ ಸಂಖ್ಯೆ ಹೆಚ್ಚಾಗುತ್ತಾ ಹೋದಂತೆ, ರಿಕ್ಟರರ ಉಪಾಯದ ಮೇಲೆ ಆಧಾರಿಸಲ್ಪಟ್ಟ ಹೊಸ ಮಾಪಕಗಳು ವಿಕಸಿಸಲ್ಪಟ್ಟವು. ಉದಾಹರಣೆಗಾಗಿ, ಯಾವುದನ್ನು ಕ್ಷಣ ಪರಿಮಾಣ ಮಾಪಕ (ಮೋಮೆಂಟ್‌ ಮ್ಯಾಗ್ನಿಟ್ಯೂಡ್‌ ಸ್ಕೇಲ್‌) ಎಂದು ಕರೆಯಲಾಗುತ್ತದೊ ಅದು, ಭೂಕಂಪದ ಉಗಮಕೇಂದ್ರದಿಂದ ಬಿಡುಗಡೆಯಾಗಿರುವ ಶಕ್ತಿಯನ್ನು ಅಳೆಯುತ್ತದೆ.

ಆದರೆ ಈ ಮಾಪಕಗಳು, ಒಂದು ಭೂಕಂಪವು ಎಸಗಿರುವ ಹಾನಿಯ ಪ್ರಮಾಣವನ್ನು ಯಾವಾಗಲೂ ಪ್ರಕಟಿಸುವುದಿಲ್ಲವೆಂಬುದು ನಿಜ. ಉದಾಹರಣೆಗಾಗಿ, ಜೂನ್‌ 1994ರಲ್ಲಿ ಉತ್ತರ ಬೊಲಿವಿಯದಲ್ಲಿ ನಡೆದ ಭೂಕಂಪವನ್ನು ಪರಿಗಣಿಸಿರಿ. ಅದರ ಪರಿಮಾಣ 8.2 ಆಗಿತ್ತು, ಮತ್ತು ಅದು ಕೇವಲ ಐದು ಜನರನ್ನು ಕೊಂದಿತೆಂದು ವರದಿಸಲಾಗಿದೆ. ಆದರೆ ಚೀನಾದ ಟಾಂಗ್ಶಾನ್‌ನಲ್ಲಿ 1976ರಲ್ಲಿ ನಡೆದ ಭೂಕಂಪವು ಅದಕ್ಕಿಂತಲೂ ಕಡಿಮೆ ಪರಿಮಾಣದ್ದು, ಅಂದರೆ ಅದರ ಪರಿಮಾಣ ಕೇವಲ 8.0 ಆಗಿದ್ದರೂ, ಅದು ಲಕ್ಷಾಂತರ ಮಂದಿಯ ಜೀವಗಳನ್ನು ಬಲಿತೆಗೆದುಕೊಂಡಿತು!

ಪರಿಮಾಣಕ್ಕೆ ವ್ಯತಿರಿಕ್ತವಾಗಿ ತೀವ್ರತೆಯ ದಾಖಲಾತಿಯು, ಜನರು, ಕಟ್ಟಡಗಳು ಮತ್ತು ಪರಿಸರದ ಮೇಲೆ ಒಂದು ಭೂಕಂಪವು ಬೀರಿರುವ ಪರಿಣಾಮಗಳನ್ನು ತೋರಿಸುತ್ತದೆ. ಭೂಕಂಪವು ಮನುಷ್ಯರ ಮೇಲೆ ಬೀರಿರುವ ಪರಿಣಾಮಗಳ ಆಧಾರದ ಮೇಲೆ ಇದು ಭೂಕಂಪದ ತೀಕ್ಷ್ಣತೆಯನ್ನು ಹೆಚ್ಚು ವಿವರವಾಗಿ ಅಳೆಯುತ್ತದೆ. ವಾಸ್ತವದಲ್ಲಿ, ಭೂಕಂಪಗಳೇ ಜನರಿಗೆ ಸಾಮಾನ್ಯವಾಗಿ ಹಾನಿಮಾಡುವುದಿಲ್ಲ. ಅದರ ಬದಲು, ಕುಸಿಯುತ್ತಿರುವ ಗೋಡೆಗಳು, ಒಡೆದುಹೋಗಿರುವ ಗ್ಯಾಸ್‌ ಪೈಪ್‌ಗಳು ಇಲ್ಲವೇ ವಿದ್ಯುತ್‌ ವೈಯರ್‌ಗಳು, ಮೇಲೆ ಬೀಳುತ್ತಿರುವ ವಸ್ತುಗಳು ಮುಂತಾದವುಗಳೇ ಹೆಚ್ಚಿನ ಗಾಯಗಳು ಮತ್ತು ಸಾವುಗಳನ್ನು ಉಂಟುಮಾಡುತ್ತವೆ.

ಸೀಸ್ಮೊಲಾಜಿಸ್ಟ್‌ಗಳ ಒಂದು ಗುರಿಯು, ಭೂಕಂಪ ಸಂಬಂಧಿತ ಚಟುವಟಿಕೆಯ ಬಗ್ಗೆ ಸಾಧ್ಯವಿರುವಷ್ಟು ಬೇಗನೆ ಎಚ್ಚರಿಕೆಗಳನ್ನು ಕೊಡಲು ಶಕ್ತರಾಗಿರುವುದೇ ಆಗಿದೆ. ಆ್ಯಡ್ವಾನ್‌ಸ್ಡ್‌ ಸೀಸ್ಮಿಕ್‌ ರಿಸರ್ಚ್‌ ಆ್ಯಂಡ್‌ ಮಾನಿಟರಿಂಗ್‌ ಸಿಸ್ಟಮ್‌ ಎಂಬ ಒಂದು ಡಿಜಿಟಲ್‌ ಕಾರ್ಯಕ್ರಮವನ್ನು ವಿಕಸಿಸಲಾಗುತ್ತಿದೆ. ಒಂದು ಸಿ.ಎನ್‌.ಎನ್‌ ವರದಿಗನುಸಾರ, ಹೆಚ್ಚು ವೇಗವಾಗಿ ಮಾಹಿತಿಯನ್ನು ಲಭ್ಯಗೊಳಿಸಬಹುದಾದ ಮತ್ತು ಹೆಚ್ಚು ಸಾಮರ್ಥ್ಯವುಳ್ಳ ಸಾಫ್ಟ್‌ವೇರ್‌ ತಂತ್ರವಿಧಾನಗಳಿರುವ ಈ ಸಿಸ್ಟಮ್‌, ಅಧಿಕಾರಿಗಳು “ಬಹುಮಟ್ಟಿಗೆ ತತ್‌ಕ್ಷಣವೇ ಒಂದು ಭೂಕಂಪದಿಂದಾಗಿ ಯಾವ ಕ್ಷೇತ್ರಗಳಲ್ಲಿ ಅತಿ ಭಯಂಕರವಾದ ಅಲುಗಾಡುವಿಕೆಯು ಸಂಭವಿಸಿದೆ ಎಂಬುದನ್ನು ತೋರಿಸಲು ಶಕ್ತರಾಗುವಂತೆ” ಮಾಡುವುದು. ಇದರಿಂದಾಗಿ, ಅಧಿಕಾರಿಗಳು ಭೂಕಂಪಗ್ರಸ್ತ ಕ್ಷೇತ್ರಗಳಿಗೆ ನೆರವನ್ನು ಒದಗಿಸಲು ಹೆಚ್ಚು ಸುಲಭವಾಗುವುದು.

ಒಂದು ಭೂಕಂಪಕ್ಕಾಗಿ ಸಿದ್ಧರಾಗಿರುವುದು, ಗಾಯಗಳನ್ನು ಹಾಗೂ ಸೊತ್ತುಗಳ ಹಾನಿಯನ್ನು ಕಡಿಮೆಗೊಳಿಸಬಲ್ಲದು ಮತ್ತು ಹೆಚ್ಚು ಪ್ರಾಮುಖ್ಯವಾಗಿ ಜೀವಗಳನ್ನು ಉಳಿಸಬಲ್ಲದು. ಹಾಗಿದ್ದರೂ, ಭೂಕಂಪಗಳು ಆಗುತ್ತಾ ಇರುತ್ತವೆ. ಆದುದರಿಂದ, ಈಗ ಏಳುವ ಪ್ರಶ್ನೆಯೇನೆಂದರೆ, ಭೂಕಂಪದ ಪರಿಣಾಮಗಳನ್ನು ನಿಭಾಯಿಸಲು ಜನರಿಗೆ ಹೇಗೆ ಸಹಾಯಮಾಡಲಾಗಿದೆ? (g02 3/22)

[ಪಾದಟಿಪ್ಪಣಿ]

^ ಸೀಸ್ಮೊಗ್ರಾಫ್‌ ಎಂಬುದು ಒಂದು ಭೂಕಂಪದ ಸಮಯದಲ್ಲಿ ನೆಲದ ಚಲನೆಯನ್ನು ಅಳೆದು ದಾಖಲಿಸುವ ಸಲಕರಣೆಯಾಗಿದೆ. ಮೊದಲನೆಯ ಸೀಸ್ಮೊಗ್ರಾಫನ್ನು 1890ರಲ್ಲಿ ತಯಾರಿಸಲಾಗಿತ್ತು. ಇಂದು ಲೋಕವ್ಯಾಪಕವಾಗಿ 4,000ಕ್ಕಿಂತಲೂ ಹೆಚ್ಚು ಸೀಸ್ಮೊಗ್ರಾಫ್‌ ಸ್ಟೇಷನ್‌ಗಳು ಕೆಲಸಮಾಡುತ್ತಿವೆ.

[chart on page 5]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಎಷ್ಟು ಭೂಕಂಪಗಳು?

ವಿವರಕ ಪರಿಮಾಣ ವಾರ್ಷಿಕ ಸರಾಸರಿ

ಭಾರಿ 8 ಮತ್ತು ಉಚ್ಚಮಟ್ಟದ್ದು 1

ದೊಡ್ಡದು 7-7.9 18

ಬಲವಾದದ್ದು 6-6.9 120

ಮಧ್ಯಮ ಮಟ್ಟದ್ದು 5-5.9 800

ಲಘು 4-4.9 6,200*

ಚಿಕ್ಕದ್ದು 3-3.9 49,000*

ತೀರ ಚಿಕ್ಕದ್ದು <3.0 ಪರಿಮಾಣ 2-3:

ಪ್ರತಿ ದಿನ ಸುಮಾರು 1,000

ಪರಿಮಾಣ 1-2:

ಪ್ರತಿ ದಿನ ಸುಮಾರು 8,000

* ಅಂದಾಜಿಗನುಸಾರ.

[ಕೃಪೆ]

ಮೂಲ: National Earthquake Information Center By permission of USGS/National Earthquake Information Center, USA

[picture credit Line on page 5]

4 ಮತ್ತು 5ನೆಯ ಪುಟಗಳಲ್ಲಿರುವ ಸೀಸ್ಮೊಗ್ರಾಮ್‌: Figure courtesy of the Berkeley Seismological Laboratory