ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾತನೆಯಿಂದ ಅನೆಸ್ತೀಸಿಯಕ್ಕೆ

ಯಾತನೆಯಿಂದ ಅನೆಸ್ತೀಸಿಯಕ್ಕೆ

ಯಾತನೆಯಿಂದ ಅನೆಸ್ತೀಸಿಯಕ್ಕೆ

ಇಸವಿ 1840ಕ್ಕೆ ಮುಂಚೆ, ರೋಗಿಗಳು ಆಪರೇಷನ್‌ ರೂಮ್‌ಗೆ ಹೋಗುವಾಗ ಕೇವಲ ಆತಂಕದಿಂದ ಹೋಗುತ್ತಿರಲಿಲ್ಲ; ಅಪಾರ ಭಯದಿಂದ ಹೋಗುತ್ತಿದ್ದರು. ಅವರು ಏಕೆ ಅಷ್ಟು ಭಯಗೊಳ್ಳುತ್ತಿದ್ದರು? ಏಕೆಂದರೆ ಆ ಸಮಯದಲ್ಲಿ ಅನೆಸ್ತೀಸಿಯವು ಬಳಕೆಯಲ್ಲಿರಲಿಲ್ಲ. “ನಾವು ನೋವನ್ನು ಜಯಿಸಿದ್ದೇವೆ” (ಇಂಗ್ಲಿಷ್‌) ಎಂಬ ತನ್ನ ಪುಸ್ತಕದಲ್ಲಿ ಡೆನಿಸ್‌ ಫ್ರಾಡಿನ್‌ ಹೇಳುವುದು: “ಆ ಕಾಲದಲ್ಲಿ ಶಸ್ತ್ರಚಿಕಿತ್ಸಕರು ಆಪರೇಷನ್‌ ರೂಮ್‌ಗೆ ಬರುವಾಗ ಎರಡೂ ಕೈಗಳಲ್ಲಿ ವಿಸ್ಕಿ ಬಾಟಲ್‌ಗಳನ್ನು ಹಿಡಿದುಕೊಂಡು ಬರುತ್ತಿದ್ದರು. ಒಂದು ರೋಗಿಗಾಗಿ ಮತ್ತು ಇನ್ನೊಂದು ಸ್ವತಃ ವೈದ್ಯರಿಗಾಗಿ. ಏಕೆಂದರೆ ವೈದ್ಯರು ತಮ್ಮ ರೋಗಿಯ ಕಿರಿಚಾಟಗಳನ್ನು ಸಹಿಸಿಕೊಳ್ಳಲಿಕ್ಕಾಗಿ ವಿಸ್ಕಿಯನ್ನು ಕುಡಿಯುತ್ತಿದ್ದರು.”

ರೋಗಿಗೆ ಮದ್ಯಸಾರವನ್ನು ಕುಡಿಸುವುದು ಅಥವಾ “ಅಮಲೇರಿಸುವುದು”

ವೈದ್ಯರು, ದಂತವೈದ್ಯರು ಮತ್ತು ರೋಗಿಗಳು ಸಹ, ಶಸ್ತ್ರಚಿಕಿತ್ಸೆಯ ನೋವನ್ನು ಕಡಿಮೆಮಾಡಲಿಕ್ಕಾಗಿ ಸಾಧ್ಯವಿರುವಂತಹ ಎಲ್ಲ ವಿಧಗಳನ್ನು ಪ್ರಯೋಗಿಸಿ ನೋಡಿದರು. ಚೀನೀ ವೈದ್ಯರು ಹಾಗೂ ಭಾರತೀಯ ವೈದ್ಯರು ಮತ್ತೇರಿಸುವಂಥ ಗಾಂಜಾ ಹಾಗೂ ಬಂಗಿಯನ್ನು ಉಪಯೋಗಿಸಿದರು. ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಅಫೀಮು ಹಾಗೂ ಮದ್ಯಸಾರವನ್ನು ಸಹ ವ್ಯಾಪಕವಾಗಿ ಉಪಯೋಗಿಸಲಾಯಿತು. ಡಯೋಸ್ಕೋರಿಡೀಸ್‌ ಎಂಬ ಪುರಾತನ ಗ್ರೀಕ್‌ ವೈದ್ಯನು, “ಅನೆಸ್ತೀಸಿಯ” ಎಂಬ ಶಬ್ದವನ್ನು ಉಪಯೋಗಿಸಿದ ಪ್ರಥಮ ವ್ಯಕ್ತಿಯಾಗಿ ಪ್ರಸಿದ್ಧನಾದನು. ಮ್ಯಾಂಡ್ರೇಕ್‌ ಸಸ್ಯ ಹಾಗೂ ದ್ರಾಕ್ಷಾರಸದಿಂದ ತಯಾರಿಸಲ್ಪಡುವ ಒಂದು ಮಿಶ್ರಣವು ಅನೆಸ್ತೀಸಿಯದಂತೆ ಕೆಲಸಮಾಡುತ್ತದೆ ಎಂದು ಅವನು ಹೇಳಿದನು. ಸಮಯಾನಂತರ ಕೆಲವು ವೈದ್ಯರು ವಶೀಕರಣ (ಹಿಪ್ನಟಿಸಮ್‌)ವನ್ನೂ ಉಪಯೋಗಿಸಿ ನೋಡಿದರು.

ಆದರೂ, ಈ ಎಲ್ಲ ವಿಧಾನಗಳು ಅಷ್ಟೇನೂ ಸಂತೃಪ್ತಿಕರವಾಗಿರಲಿಲ್ಲ. ಆದುದರಿಂದ, ಶಸ್ತ್ರಚಿಕಿತ್ಸಕರು ಮತ್ತು ದಂತವೈದ್ಯರು ತಮ್ಮಿಂದ ಸಾಧ್ಯವಿರುವಷ್ಟು ಬೇಗನೆ ಶಸ್ತ್ರಚಿಕಿತ್ಸೆಯನ್ನು ಮಾಡಿಮುಗಿಸಲು ಪ್ರಯತ್ನಿಸುತ್ತಿದ್ದರು; ವಾಸ್ತವದಲ್ಲಿ, ಅವರ ವೇಗಕ್ಕನುಸಾರ ಅವರ ಯೋಗ್ಯತೆಯನ್ನು ಅಳೆಯಲಾಗುತ್ತಿತ್ತು. ಅವರು ಎಷ್ಟೇ ವೇಗವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡಿದರೂ, ರೋಗಿಯು ಮಾತ್ರ ತುಂಬ ನೋವಿನಿಂದ ನರಳಬೇಕಾಗುತ್ತಿತ್ತು. ಇದರ ಫಲಿತಾಂಶವಾಗಿ, ಜನರು ಎಲ್ಲ ರೀತಿಯ ಅಸ್ವಸ್ಥತೆಗಳನ್ನು, ಅಂದರೆ ಟ್ಯೂಮರ್‌ ಗೆಡ್ಡೆಯಿಂದ ಹಿಡಿದು ಬಾಯಿತುಂಬ ಕೊಳೆತುನಾರುತ್ತಿರುವ ಹಲ್ಲುಗಳ ವರೆಗಿನ ನೋವುಗಳನ್ನೆಲ್ಲ ಸಹಿಸಿಕೊಳ್ಳಲು ಸಿದ್ಧರಿದ್ದರು. ಆದರೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವಾಗ ಅಥವಾ ಹಲ್ಲನ್ನು ಕೀಳಿಸಿಕೊಳ್ಳುವಾಗ ಉಂಟಾಗುವ ನೋವನ್ನು ಅನುಭವಿಸಲು ಅವರು ಸಿದ್ಧರಿರಲಿಲ್ಲ.

ಸ್ವೀಟ್‌ ವಿಟ್ರಿಯಲ್‌ ಹಾಗೂ ಲಾಫಿಂಗ್‌ ಗ್ಯಾಸ್‌

ಇಸವಿ 1275ರಲ್ಲಿ, ರೇಮಂಡ್‌ ಲೂಲಸ್‌ ಎಂಬ ಸ್ಪ್ಯಾನಿಷ್‌ ವೈದ್ಯನು ರಾಸಾಯನಿಕ ವಸ್ತುಗಳೊಂದಿಗೆ ಪ್ರಯೋಗ ನಡೆಸುತ್ತಿದ್ದಾಗ, ಬಾಷ್ಪಗುಣವುಳ್ಳ, ಸುಲಭವಾಗಿ ಹೊತ್ತಿಕೊಳ್ಳುವಂತಹ ಒಂದು ದ್ರವವನ್ನು ತಯಾರಿಸಿದನು. ಅವನು ಇದಕ್ಕೆ ಸ್ವೀಟ್‌ ವಿಟ್ರಿಯಲ್‌ ಎಂದು ಹೆಸರಿಟ್ಟನು. 16ನೆಯ ಶತಮಾನದಲ್ಲಿ, ಸ್ವಿಟ್ಸರ್ಲೆಂಡ್‌ನ ಪ್ಯಾರಸೆಲ್ಸಸ್‌ ಎಂಬ ಹೆಸರಿನ ವೈದ್ಯನು, ಕೋಳಿಮರಿಗಳು ಸ್ವೀಟ್‌ ವಿಟ್ರಿಯಲ್‌ ಅನ್ನು ಸೇದಿಕೊಳ್ಳುವಂತೆ ಮಾಡಿದನು. ಅದನ್ನು ಸೇದಿದ ಬಳಿಕ ಕೋಳಿಮರಿಗಳು ಗಾಢವಾಗಿ ನಿದ್ರಿಸಿದ್ದನ್ನು ಹಾಗೂ ಅವುಗಳಿಗೆ ನೋವೇ ಆಗದಿರುವುದನ್ನು ಪ್ಯಾರಸೆಲ್ಸಸ್‌ ಗಮನಿಸಿದನು. ತನಗೆ ಮುಂಚೆ ವೈದ್ಯನಾಗಿದ್ದ ಲೂಲಸ್‌ನಂತೆಯೇ ಇವನು ಸಹ ಈ ಪದಾರ್ಥವನ್ನು ಮಾನವರ ಮೇಲೆ ಪ್ರಯೋಗಿಸಲಿಲ್ಲ. 1730ರಲ್ಲಿ, ಫ್ರೋಬೇನಿಯಸ್‌ ಎಂಬ ಜರ್ಮನ್‌ ರಸಾಯನಶಾಸ್ತ್ರಜ್ಞನು ಈ ದ್ರವ ಪದಾರ್ಥಕ್ಕೆ ಈಥರ್‌ ಎಂಬ ಈಗಿನ ಹೆಸರನ್ನು ಕೊಟ್ಟನು. ಗ್ರೀಕ್‌ ಭಾಷೆಯಲ್ಲಿ ಇದರ ಅರ್ಥ “ಸ್ವರ್ಗೀಯ” ಎಂದಾಗಿದೆ. ಆದರೆ, ಈಥರ್‌ನ ಅನೆಸ್ತೆಟಿಕ್‌ ಶಕ್ತಿಯನ್ನು ಪೂರ್ಣ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಇನ್ನೂ 112 ವರ್ಷಗಳು ಹಿಡಿದವು.

ಈ ಮಧ್ಯೆ, 1772ರಲ್ಲಿ ಜೋಸೆಫ್‌ ಪ್ರೀಸ್ಟ್‌ಲಿ ಎಂಬ ಇಂಗ್ಲಿಷ್‌ ವಿಜ್ಞಾನಿಯು ನೈಟ್ರಸ್‌ ಆಕ್ಸೈಡ್‌ ಅನಿಲವನ್ನು ಕಂಡುಹಿಡಿದನು. ಇದು ತುಂಬ ಮಾರಕ ಅನಿಲವಾಗಿದೆ, ತುಂಬ ಕಡಿಮೆ ಪ್ರಮಾಣದಲ್ಲಿ ಇದನ್ನು ಉಪಯೋಗಿಸುವುದು ಸಹ ತೀರ ಅಪಾಯಕರ ಎಂದು ಜನರು ನೆನಸಿದರು. ಆದರೆ, 1799ರಲ್ಲಿ, ಹಂಫ್ರಿ ಡೇವಿ ಎಂಬ ಬ್ರಿಟಿಷ್‌ ರಸಾಯನಶಾಸ್ತ್ರಜ್ಞ ಮತ್ತು ಸಂಶೋಧಕನು ಆ ಅನಿಲವನ್ನು ತನ್ನ ಮೇಲೇ ಪ್ರಯೋಗಿಸಿ ನೋಡಲು ನಿರ್ಧರಿಸಿದನು. ಅವನ ಆಶ್ಚರ್ಯಕ್ಕೆ, ಆ ನೈಟ್ರಸ್‌ ಆಕ್ಸೈಡ್‌ ಅವನಿಗೆ ತುಂಬ ನಗುವನ್ನು ಬರಿಸಿತು. ಆದುದರಿಂದ ಅವನು ಅದಕ್ಕೆ ಲಾಫಿಂಗ್‌ ಗ್ಯಾಸ್‌ (ನಗಿಸುವ ಅನಿಲ) ಎಂಬ ಅಡ್ಡಹೆಸರನ್ನು ಇಟ್ಟನು. ಮತ್ತು ಆ ನೈಟ್ರಸ್‌ ಆಕ್ಸೈಡ್‌ನ ಅನೆಸ್ತೆಟಿಕ್‌ ಗುಣಗಳ ಬಗ್ಗೆ ಸಹ ಡೇವಿ ದಾಖಲೆಯನ್ನು ಬರೆದಿಟ್ಟನು. ಆದರೆ, ಆ ಸಮಯದಲ್ಲಿ ಯಾರೂ ಈ ವಿಷಯದ ಬಗ್ಗೆ ಹೆಚ್ಚು ಸಂಶೋಧನೆ ಮಾಡಲಿಲ್ಲ.

ಈಥರ್‌ ಮತ್ತು ಲಾಫಿಂಗ್‌ ಗ್ಯಾಸ್‌ ಪಾರ್ಟಿಗಳು

ಲಾಫಿಂಗ್‌ ಗ್ಯಾಸ್‌ನ ಪ್ರಭಾವದ ಕೆಳಗೆ ಡೇವಿಯು ಮಾಡಿದ ಕಪಿಚೇಷ್ಟೆಗಳು ತುಂಬ ಪ್ರಸಿದ್ಧವಾದವು. ಅವನು ಅದರ ಚಟಕ್ಕೂ ಒಳಗಾದನು. ಇದಾದ ನಂತರ, ಮನೋರಂಜನೆಗಾಗಿ ಲಾಫಿಂಗ್‌ ಗ್ಯಾಸನ್ನು ಸೇವಿಸುವುದು ತುಂಬ ಜನಪ್ರಿಯವಾಯಿತು. ಬೇರೆ ಬೇರೆ ಸ್ಥಳಗಳಿಗೆ ಹೋಗಿ ವಿನೋದ ಪ್ರದರ್ಶನ ಮಾಡುವವರು ಸಹ, ಇದನ್ನು ತಮ್ಮ ಕಾರ್ಯಕ್ರಮದ ಒಂದು ಭಾಗವನ್ನಾಗಿ ಮಾಡಿಕೊಂಡರು. ಪ್ರದರ್ಶನ ನೀಡುತ್ತಿರುವಾಗ, ಸಭಿಕರಲ್ಲಿ ಕೆಲವರು ವೇದಿಕೆಯ ಮೇಲೆ ಬಂದು ನೈಟ್ರಸ್‌ ಆಕ್ಸೈಡನ್ನು ಸೇದುವಂತೆ ಪ್ರದರ್ಶಕರು ಕರೆಯುತ್ತಿದ್ದರು. ಈ ಅನಿಲವನ್ನು ಸೇದಿದ ಬಳಿಕ ಜನರ ಹಿಂಜರಿಕೆ ಹಾಗೂ ಸಂಕೋಚವು ತಾನಾಗಿಯೇ ಮಾಯವಾಗುತ್ತಿತ್ತು. ತದನಂತರ ಅವರು ಮಾಡುತ್ತಿದ್ದ ಕಪಿಚೇಷ್ಟೆಗಳನ್ನು ನೋಡಿ ಸಭಿಕರು ಹೊಟ್ಟೆಹುಣ್ಣಾಗುವಂತೆ ನಗುತ್ತಿದ್ದರು.

ಸುಮಾರು ಇದೇ ಸಮಯದಲ್ಲಿ, ಈಥರ್‌ ಅನ್ನೂ ಮನೋರಂಜನೆಗಾಗಿ ಉಪಯೋಗಿಸುವ ರೂಢಿಯು ಜನಪ್ರಿಯವಾಯಿತು. ಒಂದು ದಿನ, ಕ್ರಾಫರ್ಡ್‌ ಡಬ್ಲ್ಯೂ ಲಾಂಗ್‌ ಎಂಬ ಹೆಸರಿನ ಒಬ್ಬ ಅಮೆರಿಕನ್‌ ವೈದ್ಯನು, ಈಥರ್‌ನ ಪ್ರಭಾವದ ಕೆಳಗೆ ತೂರಾಡಿಕೊಂಡು ನಡೆಯುತ್ತಿದ್ದ ತನ್ನ ಸ್ನೇಹಿತರಿಗೆ ಗಾಯಗಳಾದರೂ, ನೋವಾಗದಿರುವುದನ್ನು ಗಮನಿಸಿದನು. ಆ ಕೂಡಲೆ ಅವನಿಗೆ ಶಸ್ತ್ರಚಿಕಿತ್ಸೆಯಲ್ಲಿ ಅದನ್ನು ಉಪಯೋಗಿಸಿದರೆ ಹೇಗೆ ಎಂಬ ಆಲೋಚನೆ ಮನಸ್ಸಿಗೆ ಬಂತು. ಈ ಸನ್ನಿವೇಶಕ್ಕೆ ತಕ್ಕಂತೆ, “ಈಥರ್‌ ಪಾರ್ಟಿ”ಯಲ್ಲಿ ಜೇಮ್ಸ್‌ ವೆನಬಲ್‌ ಎಂಬ ಹೆಸರಿನ ಒಬ್ಬ ವಿದ್ಯಾರ್ಥಿಯೂ ಭಾಗವಹಿಸಿದ್ದನು. ಅವನಿಗೆ ಎರಡು ಟ್ಯೂಮರ್‌ಗಳಿದ್ದು, ಅವುಗಳನ್ನು ತೆಗೆಸಲು ಬಯಸುತ್ತಿದ್ದನು. ಆದರೆ ಶಸ್ತ್ರಚಿಕಿತ್ಸೆಯ ನೋವಿನ ಭಯದಿಂದ, ವೆನಬಲ್‌ ಯಾವಾಗಲೂ ಆಪರೇಷನ್‌ ಅನ್ನು ಮುಂದೂಡುತ್ತಾ ಇದ್ದನು. ಆದುದರಿಂದ, ಈಥರ್‌ನ ಪ್ರಭಾವದ ಕೆಳಗೆ ಆಪರೇಷನ್‌ ಮಾಡಿಸಿಕೊಂಡರೆ ಒಳ್ಳೇದು ಎಂದು ಲಾಂಗ್‌ ಅವನಿಗೆ ಸಲಹೆ ನೀಡಿದನು. ವೆನಬಲ್‌ ಇದಕ್ಕೆ ಒಪ್ಪಿಕೊಂಡನು, ಮತ್ತು 1842ರ ಮಾರ್ಚ್‌ 30ರಂದು ಅವನು ಯಾವುದೇ ನೋವಿನ ಅನಿಸಿಕೆಯಿಲ್ಲದೆ ಆಪರೇಷನ್‌ ಮಾಡಿಸಿಕೊಂಡನು. ಆದರೂ, 1849ರ ತನಕ ಲಾಂಗ್‌ ತನ್ನ ಕಂಡುಹಿಡಿತದ ಬಗ್ಗೆ ಯಾರಿಗೂ ತಿಳಿಸಲಿಲ್ಲ.

ದಂತವೈದ್ಯರು ಸಹ ಅನೆಸ್ತೀಸಿಯವನ್ನು ಕಂಡುಹಿಡಿದರು

1844ರ ಡಿಸೆಂಬರ್‌ ತಿಂಗಳಿನಲ್ಲಿ, ಅಮೆರಿಕದ ಹೊರೇಸ್‌ ವೆಲ್ಸ್‌ ಎಂಬ ಹೆಸರಿನ ಒಬ್ಬ ದಂತವೈದ್ಯನು, ಒಂದು ಪ್ರದರ್ಶನವನ್ನು ನೋಡಲು ಹೋದನು. ಅಲ್ಲಿ ಗಾರ್ಡ್‌ನರ್‌ ಕೋಲ್ಟನ್‌ ಎಂಬ ವ್ಯಕ್ತಿಯು ನೈಟ್ರಸ್‌ ಆಕ್ಸೈಡ್‌ನ ತಮಾಷೆಯನ್ನು ತೋರಿಸುತ್ತಿದ್ದನು. ಆ ಅನಿಲವನ್ನು ಸೇದಿ ನೋಡಲು ವೆಲ್ಸ್‌ ಮುಂದೆಬಂದನು. ಅವನು ಅದನ್ನು ಸೇದಿದರೂ ಪೂರ್ಣವಾಗಿ ಪ್ರಜ್ಞಾಹೀನನಾಗಲಿಲ್ಲ. ಆದುದರಿಂದ, ಇದೇ ಅನಿಲವನ್ನು ಸೇದಿದ ಇನ್ನೊಬ್ಬ ವ್ಯಕ್ತಿಯ ಕಾಲುಗಳು ಗಟ್ಟಿಯಾದ ಒಂದು ಬೆಂಚ್‌ಗೆ ಬಡಿದು, ಕಾಲಿಗೆ ಗಾಯವಾಗಿ, ಅದರಿಂದ ತುಂಬ ರಕ್ತವು ಸುರಿಯುತ್ತಿದ್ದರೂ, ಆ ವ್ಯಕ್ತಿಗೆ ನೋವಿನ ಅನಿಸಿಕೆಯಾಗದಿರುವುದನ್ನು ವೆಲ್ಸ್‌ ಗಮನಿಸಿದನು. ತನ್ನ ದಂತ ಶಸ್ತ್ರಚಿಕಿತ್ಸೆಯಲ್ಲಿ ಈ ನೈಟ್ರಸ್‌ ಆಕ್ಸೈಡನ್ನು ಖಂಡಿತವಾಗಿಯೂ ಉಪಯೋಗಿಸಿ ನೋಡಬೇಕು ಎಂದು ವೆಲ್ಸ್‌ ಆ ರಾತ್ರಿಯೇ ನಿರ್ಧರಿಸಿದನು. ಆದರೆ ಮೊದಲು ತನ್ನ ಮೇಲೆಯೇ ಅದನ್ನು ಪ್ರಯೋಗಿಸಿ ನೋಡಿದನು. ತನಗೆ ಬೇಕಾಗಿದ್ದ ನೈಟ್ರಸ್‌ ಆಕ್ಸೈಡನ್ನು ಕೋಲ್ಟನ್‌ ಒದಗಿಸುವಂತೆ ಏರ್ಪಾಡುಮಾಡಿದನು. ಮತ್ತು ಜಾನ್‌ ರಿಗ್ಸ್‌ ಎಂಬ ಜೊತೆ ದಂತವೈದ್ಯನು, ತನ್ನ ಜ್ಞಾನದಂತ (ವಿಸ್‌ಡಮ್‌ ಟೂತ್‌)ವನ್ನು ಕೀಳುವಂತೆ ಏರ್ಪಡಿಸಿದನು. ಈ ಕೆಲಸವು ಯಶಸ್ವಿಯಾಯಿತು.

ಈ ಪ್ರಯೋಗವನ್ನು ಬೇರೆ ದಂತವೈದ್ಯರ ಮುಂದೆ ಮಾಡಿ ತೋರಿಸುವ ಮೂಲಕ ತನ್ನ ಕಂಡುಹಿಡಿತವನ್ನು ಸಾರ್ವಜನಿಕವಾಗಿ ತೋರಿಸಲು ವೆಲ್ಸ್‌ ನಿರ್ಧರಿಸಿದನು. ಆದರೆ, ಇದನ್ನು ಮಾಡಿತೋರಿಸುತ್ತಿದ್ದಾಗ ಅವನು ತುಂಬ ಧೃತಿಗೆಟ್ಟನು ಮತ್ತು ರೋಗಿಗೆ ಬೇಕಿದ್ದಷ್ಟು ನೈಟ್ರಸ್‌ ಆಕ್ಸೈಡನ್ನು ಕೊಡಲು ತಪ್ಪಿಹೋದನು. ಆದುದರಿಂದ, ಹಲ್ಲನ್ನು ಹೊರಕ್ಕೆ ಎಳೆದಾಗ ಆ ರೋಗಿಯು ಗಟ್ಟಿಯಾಗಿ ಕಿರುಚಾಡಿದನು. ಆಗ ವೆಲ್ಸ್‌ನ ಪ್ರದರ್ಶನವನ್ನು ನೋಡುತ್ತಿದ್ದವರು ಅವನನ್ನು ಗೇಲಿಮಾಡಿದರು. ಆದರೆ ಗೇಲಿಮಾಡುವುದಕ್ಕೆ ಮುಂಚೆ ಆ ದಂತವೈದ್ಯರು ರೋಗಿಯನ್ನೇ ನೇರವಾಗಿ ಪ್ರಶ್ನಿಸಿದ್ದಿರಬೇಕಿತ್ತು. ಏಕೆಂದರೆ, ತಾನು ಗಟ್ಟಿಯಾಗಿ ಕಿರಿಚಿದ್ದು ನಿಜ, ಆದರೆ ತನಗೆ ಸ್ವಲ್ಪವೂ ನೋವಾಗಲಿಲ್ಲ ಎಂದು ಆ ರೋಗಿಯು ನಂತರ ವೆಲ್ಸ್‌ನ ಬಳಿ ಕ್ಷಮೆಯಾಚಿದನು.

1846ರ ಸೆಪ್ಟೆಂಬರ್‌ 30ರಂದು, ಅಮೆರಿಕದ ವಿಲಿಯಮ್‌ ಮಾರ್ಟನ್‌ ಎಂಬ ವೆಲ್ಸ್‌ನ ಜೊತೆ ದಂತವೈದ್ಯನು, ಒಬ್ಬ ರೋಗಿಗೆ ಈಥರನ್ನು ಕೊಟ್ಟು ಯಾವುದೇ ನೋವಿಲ್ಲದಂತಹ ರೀತಿಯಲ್ಲಿ ಹಲ್ಲನ್ನು ಕಿತ್ತನು. 1842ರಲ್ಲಿ ಲಾಂಗ್‌ನಿಂದ ಉಪಯೋಗಿಸಲ್ಪಟ್ಟ ರಾಸಾಯನಿಕ ಸಂಯುಕ್ತವನ್ನೇ ಇವನು ಉಪಯೋಗಿಸಿದ್ದನು. ಚಾರ್ಲ್ಸ್‌ ಥಾಮಸ್‌ ಜ್ಯಾಕ್ಸನ್‌ ಎಂಬ ಅತ್ಯುತ್ತಮ ರಸಾಯನಶಾಸ್ತ್ರಜ್ಞನ ಸಹಾಯದಿಂದ ಮಾರ್ಟನ್‌ ತನ್ನ ಈಥರ್‌ ಅನ್ನು ತಯಾರಿಸಿದನು. ಲಾಂಗ್‌ನಿಗೆ ವ್ಯತಿರಿಕ್ತವಾಗಿ, ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುತ್ತಿದ್ದಂತಹ ಒಬ್ಬ ರೋಗಿಯ ಮೇಲೆ ಈಥರ್‌ನ ಅನೆಸ್ತಿಟಿಕ್‌ ಗುಣಲಕ್ಷಣಗಳನ್ನು ಸಾರ್ವಜನಿಕವಾಗಿ ತೋರಿಸುವ ಏರ್ಪಾಡನ್ನು ಮಾರ್ಟನ್‌ ಮಾಡಿದನು. 1846ರ ಅಕ್ಟೋಬರ್‌ 16ರಂದು, ಮ್ಯಾಸಚ್ಯೂಸೆಟ್ಸ್‌ನ ಬೋಸ್ಟನ್‌ನಲ್ಲಿ ಮಾರ್ಟನ್‌ ಒಬ್ಬ ರೋಗಿಗೆ ಅನೆಸ್ತೀಸಿಯವನ್ನು ಕೊಟ್ಟನು. ತದನಂತರ, ಡಾ. ವಾರನ್‌ ಎಂಬ ಶಸ್ತ್ರಚಿಕಿತ್ಸಕನು ಆಪರೇಷನ್‌ ಮಾಡಿ, ರೋಗಿಯ ದವಡೆಯ ಕೆಳಗೆ ಬೆಳೆದಿದ್ದ ಮಾಂಸವನ್ನು ತೆಗೆದುಹಾಕಿದನು. ಈ ಆಪರೇಷನ್‌ ತುಂಬ ಗಮನಾರ್ಹ ರೀತಿಯಲ್ಲಿ ಯಶಸ್ವಿಯಾಗಿತ್ತು. ಅಮೆರಿಕ ಹಾಗೂ ಯೂರೋಪಿನಾದ್ಯಂತ ಈ ಸುದ್ದಿಯು ಕಾಡ್ಗಿಚ್ಚಿನಂತೆ ಹಬ್ಬಿತು.

ಇನ್ನೂ ಹೆಚ್ಚಿನ ಕಂಡುಹಿಡಿತಗಳು

ಈ ರೋಮಾಂಚಕ ಕಂಡುಹಿಡಿತಗಳ ಫಲಿತಾಂಶವಾಗಿ, ಬೇರೆ ಬೇರೆ ಅನಿಲ ಪದಾರ್ಥಗಳೊಂದಿಗೆ ಇನ್ನೂ ಹೆಚ್ಚಿನ ಪ್ರಯೋಗಗಳು ನಡೆಸಲ್ಪಟ್ಟವು. 1831ರಲ್ಲಿ ಕ್ಲೋರೋಫಾರ್ಮನ್ನು ಕಂಡುಹಿಡಿಯಲಾಯಿತು ಮತ್ತು 1847ರಲ್ಲಿ ಇದನ್ನು ಉಪಯೋಗಿಸಿ ಯಶಸ್ಸನ್ನು ಪಡೆಯಲಾಯಿತು. ಕೆಲವು ಸ್ಥಳಗಳಲ್ಲಿ ಅತಿ ಬೇಗನೆ ಇದು ಹೆಚ್ಚು ಜನಪ್ರಿಯವಾದ ಅನೆಸ್ತಿಟಿಕ್‌ ವಸ್ತುವಾಗಿ ಪರಿಣಮಿಸಿತು. ತದನಂತರ ಸ್ತ್ರೀಯರ ಹೆರಿಗೆಯ ಸಮಯದಲ್ಲಿ ಅವರಿಗೆ ಕ್ಲೋರೋಫಾರ್ಮನ್ನು ಕೊಡಲಾಯಿತು; 1853ರ ಏಪ್ರಿಲ್‌ ತಿಂಗಳಿನಲ್ಲಿ, ಇಂಗ್ಲೆಂಡ್‌ನ ವಿಕ್ಟೋರಿಯ ರಾಣಿಗೂ ಇದನ್ನು ಕೊಡಲಾಯಿತು.

ಕೆಲವು ಕಾರಣಗಳಿಂದ ಅನೆಸ್ತೀಸಿಯದ ಇತಿಹಾಸವು ಕಲೆಗೊಂಡಿತು ಎಂಬುದು ದುಃಖಕರ ಸಂಗತಿಯಾಗಿದೆ. ಲಾಂಗ್‌, ವೆಲ್ಸ್‌, ಮಾರ್ಟನ್‌ ಅಥವಾ ಮಾರ್ಟನ್‌ಗೆ ಸಹಾಯಮಾಡಿದ ರಸಾಯನಶಾಸ್ತ್ರಜ್ಞನಾದ ಜ್ಯಾಕ್ಸನ್‌ರಲ್ಲಿ ಯಾರಿಗೆ ಅನೆಸ್ತೀಸಿಯವನ್ನು (ಅನೆಸ್ತೀಸಿಯದಲ್ಲಿ ಒಳಗೂಡಿರುವ ಮೂಲಧಾತುಗಳಿಗಾಗಿ ಅಲ್ಲ) ಕಂಡುಹಿಡಿದ ಕೀರ್ತಿ ಸಲ್ಲಬೇಕು ಎಂಬ ವಿಷಯದಲ್ಲಿ ತೀವ್ರವಾದ ವಾಗ್ವಾದವು ನಡೆಯಿತು. ಈ ವಿಷಯದಲ್ಲಿ ಇಷ್ಟರ ತನಕ ಜನರು ಯಾವ ಒಮ್ಮತಕ್ಕೂ ಬಂದಿಲ್ಲ. ಆದರೆ, ಅನೆಸ್ತೀಸಿಯವನ್ನು ಕಂಡುಹಿಡಿದದ್ದರಲ್ಲಿ ಈ ನಾಲ್ಕೂ ಜನರು ಒಳಗೂಡಿದ್ದಾರೆ ಎಂಬುದನ್ನು ಮಾತ್ರ ಅನೇಕರು ಒಪ್ಪಿಕೊಳ್ಳುತ್ತಾರೆ.

ಈ ಮಧ್ಯೆ, ಲೋಕಲ್‌ ಅನೆಸ್ತೀಸಿಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಗಳು ಮಾಡಲ್ಪಟ್ಟವು. ಕೆಲವೊಮ್ಮೆ ಇದನ್ನು ರೀಜನಲ್‌ (ಸ್ಥಾನಿಕ) ಅನೆಸ್ತೀಸಿಯ ಎಂದು ಸಹ ಕರೆಯಲಾಗುತ್ತದೆ. ಲೋಕಲ್‌ ಅನೆಸ್ತೀಸಿಯದಲ್ಲಿ, ರೋಗಿಗಳ ದೇಹದ ಯಾವುದಾದರೂ ಒಂದು ಭಾಗಕ್ಕೆ ಮಾತ್ರ ಸ್ಪರ್ಶಜ್ಞಾನವಿಲ್ಲದಂತೆ ಮಾಡಲಾಗುತ್ತದೆ; ಅಂದರೆ ಆ ವ್ಯಕ್ತಿಗೆ ಆ ಭಾಗದಲ್ಲಿ ನೋವಿನ ಅನಿಸಿಕೆಯಾಗುವುದಿಲ್ಲ. ಇಂದು, ಹಲ್ಲುಗಳು ಹಾಗೂ ವಸಡುಗಳನ್ನು ಸರಿಪಡಿಸುವಾಗ ದಂತವೈದ್ಯರು ಲೋಕಲ್‌ ಅನೆಸ್ತಿಟಿಕ್‌ ಪದಾರ್ಥಗಳನ್ನು ಹೆಚ್ಚಾಗಿ ಉಪಯೋಗಿಸುತ್ತಾರೆ. ಮತ್ತು ಇತರ ವೈದ್ಯರು ಚಿಕ್ಕಪುಟ್ಟ ಆಪರೇಷನ್‌ಗಳಿಗಾಗಿ ಮತ್ತು ಗಾಯಗಳಿಗೆ ಹೊಲಿಗೆಹಾಕುವಾಗ ಲೋಕಲ್‌ ಅನೆಸ್ತೀಸಿಯವನ್ನು ಉಪಯೋಗಿಸುತ್ತಾರೆ. ಹೆಚ್ಚಾಗಿ ಹೆರಿಗೆಯಾಗುವಂತಹ ಸ್ತ್ರೀಯರಿಗೆ ಲೋಕಲ್‌ ಅನೆಸ್ತೀಸಿಯವನ್ನು ಕೊಡುತ್ತಾರೆ.

ಸಮಯವು ಗತಿಸಿದಂತೆ, ಅನೆಸ್ತೀಸಿಯಾಲಜಿಯು ವೈದ್ಯಕೀಯ ಕ್ಷೇತ್ರದ ಒಂದು ವಿಶೇಷ ಭಾಗವಾಗಿ ಪರಿಣಮಿಸಿದೆ. ಆಧುನಿಕ ದಿನದ ಅನೆಸ್ತೀಸಿಯಾಲಜಿಸ್ಟ್‌ಗಳು, ಶಸ್ತ್ರಚಿಕಿತ್ಸೆಗಾಗಿ ರೋಗಿಗಳನ್ನು ಸಜ್ಜುಗೊಳಿಸುವ ಕೆಲಸದಲ್ಲಿ ಭಾಗವಹಿಸುತ್ತಾರೆ. ತುಂಬ ಜಟಿಲವಾದ ಸಾಧನ ಹಾಗೂ ಆಮ್ಲಜನಕದೊಂದಿಗೆ ಬೇರೆ ಬೇರೆ ರಾಸಾಯನಿಕ ವಸ್ತುಗಳನ್ನು ಸೇರಿಸಿ ತಯಾರಿಸಿರುವ ಅನೆಸ್ತಿಟಿಕ್‌ ಮಿಶ್ರಣವನ್ನು ಉಪಯೋಗಿಸಿ ರೋಗಿಗಳಿಗೆ ಅನೆಸ್ತೀಸಿಯ ಕೊಡುತ್ತಾರೆ. ಅಷ್ಟುಮಾತ್ರವಲ್ಲ, ತಮ್ಮ ವೈದ್ಯರು ಅನೆಸ್ತಿಟಿಕ್‌ ಅನಿಲಗಳನ್ನು ಉಪಯೋಗಿಸಿದ್ದಾರೆ ಎಂಬುದು ಅನೇಕ ರೋಗಿಗಳಿಗೆ ಗೊತ್ತೇ ಇರುವುದಿಲ್ಲ. ಏಕೆಂದರೆ, ಕೆಲವೊಮ್ಮೆ ಮೊದಲು ನರಗಳ ಮೂಲಕ ಅನೆಸ್ತೀಸಿಯವನ್ನು ಕೊಟ್ಟ ಬಳಿಕವೇ ವೈದ್ಯರು ಈ ಅನಿಲಗಳನ್ನು ಉಪಯೋಗಿಸುತ್ತಾರೆ. ಶಸ್ತ್ರಚಿಕಿತ್ಸೆಯ ಬಳಿಕ ಉಂಟಾಗುವ ನೋವಿಗೆ ಉಪಶಮನ ನೀಡುವುದರಲ್ಲಿಯೂ ಅನೆಸ್ತೀಸಿಯಾಲಜಿಸ್ಟ್‌ಗಳು ಒಳಗೂಡಿದ್ದಾರೆ.

ಆದುದರಿಂದ, ಮುಂದೆ ಎಂದಾದರೂ ನೀವು ಶಸ್ತ್ರಚಿಕಿತ್ಸೆಯನ್ನು ಮಾಡಿಕೊಳ್ಳಬೇಕಾಗಿರುವಲ್ಲಿ, ಹೆಚ್ಚು ಕಳವಳಗೊಳ್ಳದಿರಲು ಪ್ರಯತ್ನಿಸಿರಿ. ಅಂತಹ ಸಂದರ್ಭದಲ್ಲಿ ಹೀಗೆ ಕಲ್ಪನೆಮಾಡಿಕೊಳ್ಳಿ. ಸುಮಾರು ಇನ್ನೂರು ವರ್ಷಗಳ ಹಿಂದೆ ನೀವು ಆಪರೇಷನ್‌ ಮಾಡಿಸಿಕೊಳ್ಳಲಿಕ್ಕಾಗಿ ಒಂದು ಮಂಚದ ಮೇಲೆ ಮಲಗಿದ್ದೀರಿ. ಆಪರೇಷನ್‌ ರೂಮ್‌ನ ಬಾಗಿಲು ತೆರೆದುಕೊಳ್ಳುತ್ತದೆ. ಶಸ್ತ್ರಚಿಕಿತ್ಸಕರು ಎರಡು ವಿಸ್ಕಿ ಬಾಟಲ್‌ಗಳನ್ನು ಹಿಡಿದುಕೊಂಡು ಒಳಗೆ ಬರುತ್ತಾರೆ. ಆಧುನಿಕ ದಿನದ ಅನೆಸ್ತೀಸಿಯಾಲಜಿಸ್ಟರ ಜಟಿಲ ಸಾಧನಗಳನ್ನು ಈ ಕಲ್ಪನೆಯೊಂದಿಗೆ ಹೋಲಿಸಿ ನೋಡುವಾಗ, ಈ ಸಾಧನದಿಂದ ಹೆಚ್ಚು ಭಯವಾಗುವುದಿಲ್ಲ, ಅಲ್ಲವೇ?

(g00 11/22)

[ಪುಟ 20ರಲ್ಲಿರುವ ಚೌಕ]

ಆಕ್ಯುಪಂಕ್ಚರ್‌ ಪೂರ್ವ ದೇಶದಲ್ಲಿ ನೋವಿನಿಂದ ಉಪಶಮನ ಪಡೆಯುವ ಕಾರ್ಯವಿಧಾನ

ನೋವಿನಿಂದ ಉಪಶಮನ ನೀಡುತ್ತದೆಂದು ಹೇಳಲಾಗುವ ಪುರಾತನ ಚೀನೀ ಚಿಕಿತ್ಸೆಯೇ ಆಕ್ಯುಪಂಕ್ಚರ್‌ ಆಗಿದೆ. ಆಕ್ಯುಪಂಕ್ಚರ್‌ ಚಿಕಿತ್ಸಕರು, ದೇಹದ ನಿರ್ದಿಷ್ಟ ಭಾಗಗಳಿಗೆ ಲೋಹದ ಸಣ್ಣ ಸೂಜಿಗಳನ್ನು ಚುಚ್ಚುತ್ತಾರೆ; ಕೆಲವೊಮ್ಮೆ ಚಿಕಿತ್ಸೆ ನೀಡಲ್ಪಡುವಂತಹ ಭಾಗದಿಂದ ಸ್ವಲ್ಪ ದೂರದಲ್ಲಿ ಹೀಗೆ ಮಾಡಲಾಗುತ್ತದೆ. ಸಣ್ಣ ಸೂಜಿಗಳನ್ನು ದೇಹಕ್ಕೆ ಚುಚ್ಚಿದ ಬಳಿಕ, ಆ ಸೂಜಿಗಳನ್ನು ತಿರುಗಿಸಲಾಗುತ್ತದೆ ಅಥವಾ ಕಡಿಮೆ ವೋಲ್ಟೇಜ್‌ ಇರುವ ವಿದ್ಯುತ್ತನ್ನು ಅವುಗಳ ಮೂಲಕ ಹರಿಸಲಾಗುತ್ತದೆ. ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುವುದೇನೆಂದರೆ, ಚೀನಾದಲ್ಲಿ ಆಕ್ಯುಪಂಕ್ಚರ್‌ ಅನ್ನು “ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಒಂದು ಅನೆಸ್ತಿಟಿಕ್‌ ಆಗಿ ಉಪಯೋಗಿಸಲಾಗುತ್ತದೆ. ಚೀನೀ ರೋಗಿಗಳಿಗೆ ಆಕ್ಯುಪಂಕ್ಚರ್‌ನ ಮೂಲಕ ಲೋಕಲ್‌ ಅನೆಸ್ತೀಸಿಯ ನೀಡಿ, ಅವರು ಪೂರ್ಣವಾಗಿ ಪ್ರಜ್ಞೆಯುಳ್ಳವರಾಗಿರುವಾಗಲೇ ತುಂಬ ಜಟಿಲವಾದ (ಮತ್ತು ಸಾಮಾನ್ಯವಾಗಿ ತುಂಬ ವೇದನಾಭರಿತವಾದ) ಶಸ್ತ್ರಚಿಕಿತ್ಸೆಗಳನ್ನು ನಡೆಸಿರುವುದನ್ನು ಪಶ್ಚಿಮ ದೇಶದ ಸಂದರ್ಶಕರು ಕಣ್ಣಾರೆ ಕಂಡಿದ್ದಾರೆ.”

ತುಂಬ ಕೌಶಲವಿರುವ ಹಾಗೂ ವೈದ್ಯಕೀಯವಾಗಿ ತರಬೇತಿಪಡೆದಿರುವ ಚಿಕಿತ್ಸಕರು ಮಾತ್ರ ಆಕ್ಯುಪಂಕ್ಚರ್‌ ಚಿಕಿತ್ಸೆಯನ್ನು ನೀಡಬೇಕು. ಎನ್‌ಸೈಕ್ಲೊಪೀಡಿಯ ಅಮೆರಿಕಾನಕ್ಕನುಸಾರ, “ಆಕ್ಯುಪಂಕ್ಚರ್‌ ಸೂಜಿಗಳು ಹೃದಯ ಅಥವಾ ಶ್ವಾಸಕೋಶದಂತಹ ಭಾಗಗಳಿಗೆ ಆಕಸ್ಮಿಕವಾಗಿ ಚುಚ್ಚಲ್ಪಟ್ಟಾಗ, ಗಂಭೀರವಾದ ಅಪಘಾತಗಳು ಸಂಭವಿಸಿವೆ. ಮತ್ತು ಕ್ರಿಮಿಶುದ್ಧಿಮಾಡಲ್ಪಟ್ಟಿರದಂತಹ ಸೂಜಿಗಳನ್ನು ಉಪಯೋಗಿಸಿದಾಗ, ಹೆಪಟೈಟಿಸ್‌, ಸೋಂಕು ಮತ್ತು ಇನ್ನಿತರ ಆರೋಗ್ಯ ಸಮಸ್ಯೆಗಳು ಸಹ ಉಂಟಾಗಿವೆ.” ಶಸ್ತ್ರಚಿಕಿತ್ಸೆಗಳು ಸ್ವತಃ ಅಪಾಯಕರವಾಗಿರುವಂತೆಯೇ ಅನೆಸ್ತೀಸಿಯವನ್ನು ಯಾವುದೇ ರೂಪದಲ್ಲಿ ಉಪಯೋಗಿಸಿದರೂ ಸಹ ಅಪಾಯಗಳಿವೆ.

[ಪುಟ 21ರಲ್ಲಿರುವ ಚಿತ್ರಗಳು]

ಅನೆಸ್ತೀಸಿಯಾಲಜಿಯು ವೈದ್ಯಕೀಯ ಕ್ಷೇತ್ರದ ಒಂದು ವಿಶೇಷ ಭಾಗವಾಗಿ ಪರಿಣಮಿಸಿದೆ

[ಕೃಪೆ]

Courtesy of Departments of Anesthesia and Bloodless Medicine and Surgery, Bridgeport Hospital - CT

[ಪುಟ 19ರಲ್ಲಿರುವ ಚಿತ್ರ ಕೃಪೆ]

2 ಮತ್ತು 19ನೆಯ ಪುಟಗಳು: Reproduced from Medicine and the Artist (Ars Medica) by permission of the Philadelphia Museum of Art/Carl Zigrosser/ Dover Publications, Inc.