ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಸಂಗ್ರಹಾಲಯ

“ಬ್ರಿಟನಿನ ರಾಜ್ಯ ಪ್ರಚಾರಕರೇ, ಎದ್ದೇಳಿ!!”

“ಬ್ರಿಟನಿನ ರಾಜ್ಯ ಪ್ರಚಾರಕರೇ, ಎದ್ದೇಳಿ!!”

ಈ ತುರ್ತಿನ ಕರೆಯನ್ನು ಬ್ರಿಟನಿನ ಪ್ರಚಾರಕರಿಗೆ ಇನ್‌ಫಾರ್ಮೆಂಟ್‌ನಲ್ಲಿ * ಕೊಡಲಾಯಿತು. (ಡಿಸೆಂಬರ್‌ 1937⁠ರ ಸಂಚಿಕೆ, ಲಂಡನ್‌ ಆವೃತ್ತಿ) ಆ ಲೇಖನದ ಉಪಶೀರ್ಷಿಕೆಯಲ್ಲಿ ಈ ಗಂಭೀರವಾದ ಸಂದೇಶವೂ ಇತ್ತು: “ಕಳೆದ ಹತ್ತು ವರ್ಷಗಳಲ್ಲಿ ಎದ್ದುಕಾಣುವ ಯಾವ ಪ್ರಗತಿಯೂ ಆಗಿಲ್ಲ.” ಆ ಸಂಚಿಕೆಯ ಮೊದಲ ಪುಟದಲ್ಲಿ ಕೊಡಲಾಗಿದ್ದ ಹತ್ತು ವರ್ಷಗಳ ವರದಿ (1928-1937) ಈ ಗಂಭೀರವಾದ ಸ್ಥಿತಿಗೆ ಹಿಡಿದ ಕನ್ನಡಿಯಂತಿತ್ತು.

ತುಂಬ ಮಂದಿ ಪಯನೀಯರರು ಬೇಡ!?

ಬ್ರಿಟನಿನಲ್ಲಿ ಸೇವೆ ಆಮೆ ವೇಗದಲ್ಲಿ ಸಾಗಲು ಕಾರಣವೇನು? ಸಭೆಗಳು ಹಳೇ ವಿಧಾನಗಳಿಗೇ ಒಗ್ಗಿಹೋಗಿದ್ದವು. ಶಾಖಾ ಕಚೇರಿ ಸಹ ತಮ್ಮ ಇಡೀ ಕ್ಷೇತ್ರದಲ್ಲಿ 200 ಮಂದಿ ಪಯನೀಯರರು ಇದ್ದರೆ ಸಾಕು ಎಂದು ತೀರ್ಮಾನಿಸಿತ್ತು. ಇವರನ್ನು ಸಭೆಗಳಿಗೆ ನೇಮಿಸದೆ, ದೂರದೂರದ ಕ್ಷೇತ್ರಗಳಿಗೆ ನೇಮಿಸುತ್ತಿದ್ದರು. ಪಯನೀಯರ್‌ ಸೇವೆ ಆರಂಭಿಸಲು ಆಸೆಪಟ್ಟರಿಗೆ ‘ಇಲ್ಲಿ ಪಯನೀಯರರ ಅಗತ್ಯ ಇಲ್ಲ, ನೀವು ಯೂರೋಪಿನಲ್ಲಿರುವ ಬೇರೆ ದೇಶಗಳಿಗೆ ಹೋಗಿ ಸೇವೆ ಮಾಡಿ’ ಎಂದಿತು ಶಾಖಾ ಕಚೇರಿ. ಹೊಸ ಪಯನೀಯರರು ಈ ಮಾತಿಗೆ ಬೆಲೆಕೊಟ್ಟು ಫ್ರಾನ್ಸ್‌ ಮತ್ತಿತರ ದೇಶಗಳಿಗೆ ಹೋಗಿ ಸೇವೆ ಮಾಡಿದರು. ಅಲ್ಲಿನ ಭಾಷೆ ಗೊತ್ತಿಲ್ಲದಿದ್ದರೂ ಹುರುಪಿನಿಂದ ಸಾರಿದರು. ಇವರನ್ನು ಮೆಚ್ಚಲೇಬೇಕು.

“ಹೆಚ್ಚಿನ ಚಟುವಟಿಕೆಗೆ ಸಜ್ಜಾಗೋಣ”

ಮೇಲೆ ತಿಳಿಸಲಾದ ಲೇಖನದಲ್ಲಿ ಸಭೆಗಳ ಮುಂದೆ ಒಂದು ದೊಡ್ಡ ಗುರಿಯನ್ನು ಸಹ ಇಡಲಾಯಿತು. ಮುಂದಿನ ವರ್ಷ, ಅಂದರೆ 1938⁠ರಲ್ಲಿ 10 ಲಕ್ಷ ತಾಸು ಸೇವೆ ಮಾಡೋಣ ಎಂಬ ಗುರಿಯನ್ನು ಇಡಲಾಯಿತು. ಪ್ರಚಾರಕರು ತಿಂಗಳಿಗೆ 15 ತಾಸು ಮತ್ತು ಪಯನೀಯರರು 110 ತಾಸು ಮಾಡಿದರೆ ಈ ಗುರಿ ಮುಟ್ಟಬಹುದಿತ್ತು. ಕ್ಷೇತ್ರ ಸೇವಾ ಗುಂಪುಗಳು ದಿನಕ್ಕೆ ಐದು ತಾಸು ಸೇವೆ ಮಾಡುವ ಏರ್ಪಾಡು ಮಾಡುವಂತೆ ಮತ್ತು ವಾರಮಧ್ಯದ ಸಾಯಂಕಾಲದಲ್ಲಿ ಪುನರ್ಭೇಟಿಗಳಿಗೆ ಗಮನಕೊಡುವಂತೆ ಹೇಳಲಾಯಿತು.

ಉತ್ಸಾಹಭರಿತ ಪಯನೀಯರರು ಹುರುಪಿನಿಂದ ಸೇವೆ ಮಾಡಿದರು

ಸೇವೆಗೆ ಹೆಚ್ಚು ಗಮನಕೊಡಬೇಕೆಂದು ಗೊತ್ತಾದಾಗ ಸಹೋದರರಲ್ಲಿ ನವಚೈತನ್ಯ ತುಂಬಿತು. “ಹೆಚ್ಚಿನ ಚಟುವಟಿಕೆಗೆ ಸಜ್ಜಾಗೋಣ ಎಂದಿತು ಮುಖ್ಯಕಾರ್ಯಾಲಯ. ನಾವೆಲ್ಲರೂ ಇದಕ್ಕಾಗಿಯೇ ಕಾಯ್ತಾ ಇದ್ವಿ. ಇದರ ಫಲಿತಾಂಶ ತುಂಬ ಚೆನ್ನಾಗಿತ್ತು” ಎನ್ನುತ್ತಾರೆ ಹಿಲ್ಡ ಪ್ಯಾಜೆಟ್‌ * ಎಂಬ ಸಹೋದರಿ. ಈ. ಎಫ್‌. ವಾಲಸ್‌ ಎಂಬ ಸಹೋದರಿ ಹೇಳಿದ್ದು: “ದಿನಕ್ಕೆ ಐದು ತಾಸು ಸೇವೆ ಮಾಡುವ ಏರ್ಪಾಡು ಅದ್ಭುತ! ಇಡೀ ದಿನ ಕರ್ತನ ಸೇವೆ ಮಾಡುವುದಕ್ಕಿಂತ ಹೆಚ್ಚಿನ ಖುಷಿ ಬೇರೆ ಯಾವುದರಲ್ಲಿ ಸಿಗುತ್ತೆ? . . . ಸೇವೆ ಮುಗ್ಸಿ ಸುಸ್ತಾಗಿ ಬಂದ್ವಿ, ಆದರೆ ಸಂತೋಷ ಸಿಗ್ತಾ? ಖಂಡಿತ!!!” ಯುವ ಸ್ಟೀವನ್‌ ಮಿಲ್ಲರ್‌ ಸಹ ಆ ತುರ್ತಿನ ಕರೆಗೆ ಸ್ಪಂದಿಸಿದರು. ಈ ಅವಕಾಶವನ್ನು ಬಿಟ್ಟುಕೊಡಬಾರದೆಂದು ಅವರಿಗನಿಸಿತು. ಪ್ರಚಾರಕರ ಗುಂಪುಗಳು ಸೈಕಲಲ್ಲಿ ಹೋಗಿ ಇಡೀ ದಿನ ಸೇವೆಯಲ್ಲಿ ಕಳೆದದ್ದನ್ನು ಮತ್ತು ಬೇಸಗೆ ಕಾಲದಲ್ಲಿ ಸಾಯಂಕಾಲ ಹೊತ್ತಲ್ಲಿ ರೆಕಾರ್ಡ್‌ ಮಾಡಲಾದ ಭಾಷಣಗಳನ್ನು ಹಾಕುತ್ತಿದ್ದದ್ದನ್ನು ಅವರು ನೆನಪುಮಾಡಿಕೊಂಡರು. ಅವರು ಫಲಕಗಳನ್ನು ಹಿಡಿದುಕೊಂಡು ಸೇವೆ ಮಾಡಿದ್ದಾರೆ ಮತ್ತು ಪತ್ರಿಕೆಗಳನ್ನು ತೋರಿಸುತ್ತಾ ಬೀದಿ ಸಾಕ್ಷಿಕಾರ್ಯಾನೂ ಹುರುಪಿನಿಂದ ಮಾಡಿದ್ದಾರೆ.

ಆ ಲೇಖನದಲ್ಲಿ ಇನ್ನೊಂದು ಮನವಿಯೂ ಇತ್ತು: “1,000 ಪಯನೀಯರರು ಬೇಕಿದ್ದಾರೆ.” ಆಗ ಒಂದು ಹೊಸ ಪಾಲಿಸಿ ಸಹ ಜಾರಿಗೆ ಬಂತು; ಪಯನೀಯರರು ಇನ್ನು ಮುಂದೆ ಸಭೆಗಳ ಜೊತೆ ಸೇವೆ ಮಾಡಿ ಸಹೋದರರನ್ನು ಬೆಂಬಲಿಸಿ ಬಲಪಡಿಸುವಂತೆ ಹೇಳಲಾಯಿತು. ಜಾಯ್ಸ್‌ ಎಲಿಸ್‌ ಎಂಬ ಸಹೋದರಿ ನೆನಪುಮಾಡಿಕೊಂಡು ಹೇಳಿದ್ದು: “ಪರಿಸ್ಥಿತಿ ಅರಿತು ಎಚ್ಚೆತ್ತುಕೊಂಡ ತುಂಬ ಸಹೋದರರು ಪಯನೀಯರ್‌ ಸೇವೆ ಬಗ್ಗೆ ಯೋಚಿಸಲು ಆರಂಭಿಸಿದರು. ಆಗ ನನಗೆ ಬರೀ 13 ವರ್ಷ. ಆದ್ರೂ ಪಯನೀಯರ್‌ ಮಾಡಬೇಕೆಂಬ ಆಸೆ ಇತ್ತು.” ಜುಲೈ 1940⁠ರಲ್ಲಿ ಆ ಆಸೆ ನೆರವೇರಿತು. ಆಗ ಅವರಿಗೆ 15 ವರ್ಷ. ಇವರನ್ನು ಮದುವೆ ಮಾಡಿಕೊಂಡ ಸಹೋದರ ಪೀಟರ್‌ ಸಹ “ಎದ್ದೇಳಿ” ಎಂಬ ಕರೆಗೆ ಸ್ಪಂದಿಸಿದರು. ಜೂನ್‌ 1940⁠ರಲ್ಲಿ ಇವರಿಗೆ 17 ವರ್ಷವಾದಾಗ 105 ಕಿಲೊಮೀಟರ್‌ ದೂರದಲ್ಲಿದ್ದ ಸ್ಕಾರ್‌ಬರೊ ಎಂಬ ಸ್ಥಳಕ್ಕೆ ಸೈಕಲಲ್ಲೇ ಹೋಗಿ ಪಯನೀಯರ್‌ ಸೇವೆ ಆರಂಭಿಸಿದರು.

ಸಿರಿಲ್‌ ಮತ್ತು ಕಿಟೀ ಜಾನ್ಸನ್‌ ಅವರ ಸ್ವತ್ಯಾಗದ ಮನೋಭಾವ ಹೊಸ ಪಯನೀಯರರಿಗೆ ಒಳ್ಳೇ ಮಾದರಿ. ಅವರು ತಮ್ಮ ಮನೆ ಮತ್ತು ಮನೆಯಲ್ಲಿದ್ದ ವಸ್ತುಗಳನ್ನು ಮಾರಿ ಬಂದ ಹಣವನ್ನು ಪಯನೀಯರ್‌ ಸೇವೆಗಾಗಿ ಬಳಸಲು ತೀರ್ಮಾನಿಸಿದರು. ಸಿರಿಲ್‌ ತಮ್ಮ ಕೆಲಸವನ್ನು ಬಿಟ್ಟರು ಮತ್ತು ಒಂದು ತಿಂಗಳಲ್ಲೇ ಪಯನೀಯರ್‌ ಸೇವೆ ಆರಂಭಿಸಲು ಸಿದ್ಧರಾದರು. ಅವರು ಹೇಳಿದ್ದು: “ಪಯನೀಯರ್‌ ಆಗಲೇಬೇಕೆಂದು ದೃಢಮನಸ್ಸು ಮಾಡಿದ್ವಿ. ಯಾವುದೇ ಒತ್ತಾಯದಿಂದಲ್ಲ, ಸಂತೋಷದಿಂದ ಇದನ್ನು ಮಾಡಿದ್ವಿ.”

ಪಯನೀಯರ್‌ ಗೃಹಗಳು

ಸ್ವಲ್ಪ ಸಮಯದಲ್ಲೇ ತುಂಬ ಮಂದಿ ಪಯನೀಯರ್‌ ಸೇವೆ ಆರಂಭಿಸಿದ್ದರಿಂದ ಇವರನ್ನು ಬೆಂಬಲಿಸಲು ಯಾವ ಪ್ರಾಯೋಗಿಕ ಹೆಜ್ಜೆಗಳು ತೆಗೆದುಕೊಳ್ಳಬೇಕೆಂದು ಜವಾಬ್ದಾರಿಯ ಸ್ಥಾನದಲ್ಲಿರುವ ಸಹೋದರರು ಯೋಚಿಸಿದರು. 1938⁠ರಲ್ಲಿ ಸೋನ್‌ ಸೇವಕ ಅಥವಾ ಸರ್ಕಿಟ್‌ ಮೇಲ್ವಿಚಾರಕರಾಗಿ ಸೇವೆ ಮಾಡುತ್ತಿದ್ದ ಸಹೋದರ ಜಿಮ್‌ ಖಾರ್‌ ಅವರಿಗೆ ನಗರಗಳಲ್ಲಿ ಪಯನೀಯರ್‌ ಗೃಹಗಳನ್ನು ಸ್ಥಾಪಿಸಲು ಬೇಕಾದ ಏರ್ಪಾಡುಗಳನ್ನು ಮಾಡುವಂತೆ ಹೇಳಲಾಯಿತು. ಪಯನೀಯರರ ಗುಂಪುಗಳು ಒಂದೇ ಕಡೆ ಇದ್ದು ಸೇವೆ ಮಾಡುವಂತೆ ಪ್ರೋತ್ಸಾಹಿಸಲಾಯಿತು. ಹೀಗೆ ಖರ್ಚು ಕಮ್ಮಿಮಾಡಲು ಆಯ್ತು. ಶೆಫಿಲ್ಡ್‌ ಎಂಬ ಸ್ಥಳದಲ್ಲಿ ಒಂದು ದೊಡ್ಡ ಮನೆಯನ್ನು ಬಾಡಿಗೆಗೆ ತೆಗೆದುಕೊಂಡರು. ಅಲ್ಲಿ ಒಬ್ಬ ಜವಾಬ್ದಾರಿಯುತ ಸಹೋದರನನ್ನು ಮೇಲ್ವಿಚಾರಕನಾಗಿ ನೇಮಿಸಿದರು. ಶೆಫಿಲ್ಡ್‌ನಲ್ಲಿದ್ದ ಸಭೆ ಬೇಕಾದ ಹಣ ಮತ್ತು ಪೀಠೋಪಕರಣಗಳನ್ನು ಕೊಟ್ಟಿತು. ಜಿಮ್‌ ಹೇಳುತ್ತಾರೆ: “ಎಲ್ಲರ ಸಹಕಾರದೊಂದಿಗೆ ಈ ಏರ್ಪಾಡು ಒಳ್ಳೇದಾಗಿ ನಡೆಯಿತು.” ಶ್ರಮಪಟ್ಟು ಕೆಲಸಮಾಡುವ ಹತ್ತು ಮಂದಿ ಪಯನೀಯರರು ಅಲ್ಲಿದ್ದರು ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲೂ ಹುರುಪಿನಿಂದ ಭಾಗವಹಿಸುತ್ತಿದ್ದರು. “ಬೆಳಗ್ಗಿನ ತಿಂಡಿಗೆ ಬಂದಾಗ [ದಿನದ] ವಚನ ಚರ್ಚಿಸುತ್ತಿದ್ದರು.” ಆಮೇಲೆ “ನಗರದ ಬೇರೆ ಬೇರೆ ಕಡೆ ಹೋಗಿ ಸೇವೆ ಮಾಡುತ್ತಿದ್ದರು.”

ಬ್ರಿಟನಿನಲ್ಲಿ ಸೇವೆ ಮಾಡಲು ಹೊಸ ಪಯನೀಯರರ ದಂಡೇ ಹೊರಟಿತು

ಪ್ರಚಾರಕರು ಮತ್ತು ಪಯನೀಯರರು ಕೊಟ್ಟ ಅಮೋಘ ಪ್ರತಿಕ್ರಿಯೆಯಿಂದ 1938⁠ರಲ್ಲಿ 10 ಲಕ್ಷ ತಾಸುಗಳ ಗುರಿ ಮುಟ್ಟಲು ಸಾಧ್ಯವಾಯಿತು. ತಾಸುಗಳು ಮಾತ್ರ ಅಲ್ಲ ಪ್ರಕಾಶನಗಳು ನೀಡಿದ್ದು, ಪುನರ್ಭೇಟಿಗಳು, ಬೈಬಲ್‌ ಅಧ್ಯಯನಗಳು ಎಲ್ಲಾ ಜಾಸ್ತಿ ಆಗಿತ್ತು ಎಂದು ವರದಿಗಳು ತೋರಿಸಿದವು. ಇದಾಗಿ ಐದೇ ವರ್ಷಗಳಲ್ಲಿ ಬ್ರಿಟನಿನ ಪ್ರಚಾರಕರ ಸಂಖ್ಯೆ ಮೂರು ಪಟ್ಟು ಜಾಸ್ತಿಯಾಯಿತು! ಸಹೋದರರು ರಾಜ್ಯ ಸೇವೆಗೆ ಗಮನಕೊಟ್ಟದ್ದರಿಂದ ಮುಂದೆ ಯುದ್ಧದ ಸಮಯದಲ್ಲಿ ನಂಬಿಕೆಯನ್ನು ಕಾಪಾಡಿಕೊಳ್ಳಲು ಬಲ ಸಿಕ್ಕಿತು.

ಇಂದು ಸಹ ದೇವರು ತರುವ ಯುದ್ಧವಾದ ಅರ್ಮಗೆದ್ದೋನ್‌ ಹತ್ತಿರವಾಗುತ್ತಿರುವಾಗ ಬ್ರಿಟನಿನಲ್ಲಿರುವ ಪಯನೀಯರರ ಸಂಖ್ಯೆ ಹೆಚ್ಚೆಚ್ಚಾಗುತ್ತಿದೆ. ಕಳೆದ ಹತ್ತು ವರ್ಷಗಳಲ್ಲಿ ಪಯನೀಯರರ ಸಂಖ್ಯೆಯಲ್ಲಿ ಹೊಸ ಉಚ್ಚಾಂಕಗಳನ್ನು ಪಡೆದಿದೆ. ಅಕ್ಟೋಬರ್‌ 2015⁠ರಲ್ಲಿ 13,224 ಮಂದಿ ಪಯನೀಯರ್‌ ಸೇವೆ ಮಾಡುತ್ತಿದ್ದರು. ತಮ್ಮ ಜೀವನದಲ್ಲಿ ಪೂರ್ಣ ಸಮಯದ ಸೇವೆ ಮಾಡುವುದಕ್ಕಿಂತ ಬೇರೆ ಯಾವುದೂ ಮುಖ್ಯವಲ್ಲ ಅನ್ನುವುದನ್ನು ಈ ಸಹೋದರ ಸಹೋದರಿಯರು ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ.

^ ಪ್ಯಾರ. 3 ನಂತರ ನಮ್ಮ ರಾಜ್ಯ ಸೇವೆ ಎಂಬ ಹೆಸರು ಕೊಡಲಾಯಿತು.

^ ಪ್ಯಾರ. 8 ಸಹೋದರಿ ಪ್ಯಾಜೆಟ್‌ರವರ ಜೀವನ ಕಥೆ ಅಕ್ಟೋಬರ್‌ 1, 1995⁠ರ ಕಾವಲಿನಬುರುಜುವಿನ ಪುಟ 19-24⁠ರಲ್ಲಿ ಇದೆ.