ಮಾಹಿತಿ ಇರುವಲ್ಲಿ ಹೋಗಲು

ಮೆಕ್ಸಿಕೊ ಮತ್ತು ಮಧ್ಯ ಅಮೆರಿಕದಲ್ಲಿ ಭಾಷಾಂತರ ಕೆಲಸ

ಮೆಕ್ಸಿಕೊ ಮತ್ತು ಮಧ್ಯ ಅಮೆರಿಕದಲ್ಲಿ ಭಾಷಾಂತರ ಕೆಲಸ

ಮೆಕ್ಸಿಕೊ ಮತ್ತು ಮಧ್ಯ ಅಮೆರಿಕದ ಆರು ದೇಶಗಳಲ್ಲಿ ಒಟ್ಟು 290 ಭಾಷಾಂತರಕಾರರು ಬೈಬಲ್‌ ಸಾಹಿತ್ಯಗಳನ್ನು 60ಕ್ಕೂ ಹೆಚ್ಚಿನ ಭಾಷೆಗಳಲ್ಲಿ ಭಾಷಾಂತರಿಸುತ್ತಿದ್ದಾರೆ. ಇಷ್ಟೆಲ್ಲಾ ಭಾಷೆಗಳಲ್ಲಿ ಯಾಕೆ ಭಾಷಾಂತರಿಸುತ್ತಿದ್ದಾರೆ? ಯಾಕೆಂದರೆ ಜನರಿಗೆ ಯಾವ ಭಾಷೆ ಸುಲಭವಾಗಿ ಅರ್ಥವಾಗುತ್ತದೋ ಆ ಭಾಷೆಯಲ್ಲಿ ಬೈಬಲ್‌ ಸಾಹಿತ್ಯವಿದ್ದರೆ, ಅದು ಅವರ ಹೃದಯವನ್ನು ಸ್ಪರ್ಶಿಸುತ್ತದೆ.—1 ಕೊರಿಂಥ 14:9.

ಮೆಕ್ಸಿಕೊ ಪಟ್ಟಣದಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಭಾಷಾಂತರಕಾರರನ್ನು ಆಯಾ ಭಾಷೆಯನ್ನಾಡುವ ಸ್ಥಳಗಳಿಗೆ ಕಳುಹಿಸಲಾಯಿತು. ಈ ಹೆಜ್ಜೆಯನ್ನು ತೆಗೆದುಕೊಳ್ಳಲು ಕಾರಣ ಭಾಷಾಂತರದ ಗುಣಮಟ್ಟವನ್ನು ಹೆಚ್ಚಿಸುವುದೇ ಆಗಿತ್ತು. ಆದರೆ ಅದು ಹೇಗೆ ಭಾಷಾಂತರದ ಗುಣಮಟ್ಟವನ್ನು ಹೆಚ್ಚಿಸುತ್ತದೆ ಎಂದು ಯೋಚಿಸುತ್ತಿದ್ದೀರಾ? ಭಾಷಾಂತರಕಾರರು ತಮ್ಮ ತಮ್ಮ ಭಾಷೆಯ ಜನರರಿರುವ ಸ್ಥಳದಲ್ಲೇ ಇರುವುದರಿಂದ ಯಾವಾಗಲೂ ಅದೇ ಭಾಷೆಯನ್ನು ಕೇಳಿಸಿಕೊಳ್ಳುತ್ತಿರುತ್ತಾರೆ. ಇದರಿಂದ ಜನರಿಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ವಿಷಯಗಳನ್ನು ಭಾಷಾಂತರಿಸಲು ಸಾಧ್ಯವಾಗುತ್ತದೆ.

ಈ ಬದಲಾವಣೆಯ ಬಗ್ಗೆ ಸ್ವತಃ ಭಾಷಾಂತರಕಾರರು ಏನು ಹೇಳುತ್ತಾರೆಂದು ನೋಡೋಣ. ಗ್ವೆರೆರೊ ನಾಹುಅಟ್ಲ್‌ ಭಾಷೆಯ ಭಾಷಾಂತರಕಾರನಾದ ಫೆಡೆರೀಕೋ ಹೀಗೆ ಹೇಳುತ್ತಾನೆ: “ನಾನು ಹತ್ತಿರತ್ತಿರ ಹತ್ತು ವರ್ಷ ಮೆಕ್ಸಿಕೊದಲ್ಲಿದ್ದೆ. ಆದರೆ ಅಲ್ಲಿ ನಮ್ಮ ಭಾಷೆ ಮಾತಾಡುತ್ತಿದ್ದದ್ದು ಕೇವಲ ಒಂದೇ ಕುಟುಂಬ. ಆದರೆ ಈಗ ನಮ್ಮ ಭಾಷಾಂತರ ಆಫೀಸ್‌ ಇರುವ ಪಟ್ಟಣದಲ್ಲಿ ಹೆಚ್ಚು ಕಡಿಮೆ ಎಲ್ಲರೂ ನಮ್ಮ ಭಾಷೆ ಮಾತಾಡುತ್ತಾರೆ.”

ಲೋ ಜರ್ಮನ್‌ ಭಾಷೆಯ ಭಾಷಾಂತಕಾರಳಾದ ಕ್ಯಾರನ್‌ ಎಂಬಾಕೆ ಮೆಕ್ಸಿಕೊವಿನ ಚವಾವ್‌ನಲ್ಲಿರುವ ಆಫೀಸಿನಲ್ಲಿ ಕೆಲಸ ಮಾಡುತ್ತಾಳೆ. ಆಕೆ ಹೇಳುವುದು: “ಈಗ ನಾನು ಮೆನನೈಟರು ವಾಸವಾಗಿರುವ ಊರಲ್ಲೇ ಇರುವುದರಿಂದ ಅವರು ಮಾತಾಡುವ ಭಾಷೆಯನ್ನೇ ಭಾಷಾಂತರದಲ್ಲಿ ಉಪಯೋಗಿಸಲು ಸಾಧ್ಯವಾಗುತ್ತದೆ. ನಮ್ಮ ಆಫೀಸಿನ ಕಿಟಕಿಯಿಂದ ಹೊರಗೆ ದೃಷ್ಟಿ ಹಾಯಿಸಿದರೆ, ನಮ್ಮ ಭಾಷಾಂತರದಿಂದ ಪ್ರಯೋಜನ ಪಡೆಯುವ ಜನರು ಕಾಣಿಸುತ್ತಾರೆ.”

ಮೆಕ್ಸಿಕೊವಿನ ಮೆರಿಡಾದಲ್ಲಿರುವ ಭಾಷಾಂತರ ಆಫೀಸಿನಲ್ಲಿ ಕೆಲಸ ಮಾಡುವ ನೀಫೀ ಎಂಬಾಕೆ ಹೀಗೆ ಹೇಳುತ್ತಾಳೆ: “ಮಾಯಾ ಭಾಷೆಯಲ್ಲಿ ಬೈಬಲ್‌ ಅಧ್ಯಯನಗಳನ್ನು ನಡೆಸುವಾಗ ಯಾವ ಪದಗಳು ಮಾಯಾ ಜನರಿಗೆ ಸುಲಭವಾಗಿ ಅರ್ಥವಾಗುವುದಿಲ್ಲ ಎಂದು ಗೊತ್ತಾಗುತ್ತದೆ. ಇದರಿಂದ, ನಾವು ಭಾಷಾಂತರ ಮಾಡುವಾಗ ಈ ಪದಗಳಿಗೆ ಬದಲಾಗಿ ಇನ್ನೂ ಸುಲಭವಾಗಿ ಅರ್ಥವಾಗುವ ಬೇರೆ ಪದಗಳನ್ನು ಉಪಯೋಗಿಸಲು ಸಾಧ್ಯವಾಗುತ್ತದೆ.”

ಭಾಷಾಂತರವಾದ ಸಾಹಿತ್ಯಗಳನ್ನು ಓದುವವರಿಗೆ ಈ ಬದಲಾವಣೆಯಿಂದ ಯಾವ ಪ್ರಯೋಜನವಾಗಿದೆ? ಎಲೆನಾ ಎಂಬ ಮಹಿಳೆಯ ಉದಾಹರಣೆಯನ್ನು ಗಮನಿಸಿ: ಆಕೆಯ ಮಾತೃಭಾಷೆ ಟ್ಲಪನೆಕ್‌. ಆಕೆ ಯೆಹೋವನ ಸಾಕ್ಷಿಗಳ ಕೂಟಗಳಿಗೆ ಕ್ರಮವಾಗಿ 40 ವರ್ಷದಿಂದ ಹಾಜರಾಗುತ್ತಿದ್ದಳು. ಆದರೆ ಆ ಕೂಟಗಳು ಸ್ಪ್ಯಾನಿಶ್‌ ಭಾಷೆಯಲ್ಲಿ ನಡೆಯುತ್ತಿದ್ದರಿಂದ ಅವಳಿಗೆ ಏನೂ ಅರ್ಥ ಆಗುತ್ತಿರಲಿಲ್ಲ. “ನಾನು ಕೂಟಗಳಿಗೆ ಹೋಗಬೇಕು ಎಂದು ಮಾತ್ರ ನನಗೆ ಗೊತ್ತಿತ್ತು” ಎಂದು ಆಕೆ ಹೇಳುತ್ತಾಳೆ. ಸಮಯಾನಂತರ ಆಕೆ ಟ್ಲಪನೆಕ್‌ ಭಾಷೆಯಲ್ಲಿರುವ ಕಿರುಹೊತ್ತಗೆಯ ಸಹಾಯದಿಂದ ಬೈಬಲ್‌ ಅಧ್ಯಯನ ಪಡೆದುಕೊಂಡಳು. ಇದರಿಂದಾಗಿ, ಆಕೆಗೆ ದೇವರ ಮೇಲಿದ್ದ ಪ್ರೀತಿ ಇನ್ನೂ ಹೆಚ್ಚಾಯಿತು ಮತ್ತು ದೇವರಿಗೆ ತನ್ನನ್ನು ಸಮರ್ಪಿಸಿಕೊಂಡು 2013ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡಳು. ಕೃತಜ್ಞತೆಯಿಂದ ಆಕೆ ಹೀಗೆ ಹೇಳುತ್ತಾಳೆ: “ಬೈಬಲನ್ನು ಅರ್ಥಮಾಡಿಕೊಳ್ಳುವ ಅವಕಾಶ ಕೊಟ್ಟಿದ್ದಕ್ಕಾಗಿ ಯೆಹೋವನೇ, ನಿನಗೆ ತುಂಬ ಧನ್ಯವಾದಗಳು!”