ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರಕ್ತಹೀನತೆಯ ಕಾರಣ, ಲಕ್ಷಣ ಮತ್ತು ಚಿಕಿತ್ಸೆ

ರಕ್ತಹೀನತೆಯ ಕಾರಣ, ಲಕ್ಷಣ ಮತ್ತು ಚಿಕಿತ್ಸೆ

 “ನಾನು ಹದಿವಯಸ್ಸಿನಲ್ಲಿದ್ದಾಗ ನನಗೆ ರಕ್ತಹೀನತೆ (ಅನಿಮಿಯಾ) ಇತ್ತು. ಹೆಚ್ಚು ಕೆಲಸ ಮಾಡೋಕೆ ಆಗ್ತಾ ಇರಲಿಲ್ಲ, ಬೇಗ ಸುಸ್ತಾಗ್ತಿತ್ತು. ನನ್ನ ಮೂಳೆಗಳಲ್ಲಿ ತುಂಬ ನೋವಾಗ್ತಿತ್ತು. ಯಾವುದರ ಕಡೆಗೂ ಹೆಚ್ಚು ಗಮನ ಕೊಡೋಕೆ ಆಗ್ತಿರಲಿಲ್ಲ. ಹಾಗಿರುವಾಗ ನನ್ನ ಡಾಕ್ಟರ್‌ ನನಗೆ ಕಬ್ಬಿಣಾಂಶ ಇರೋ ಮಾತ್ರೆ ಕೊಟ್ರು. ನಾನದನ್ನ ತಗೊಂಡೆ. ಜೊತೆಗೆ, ಪೋಷಕಾಂಶ ಇರೋ ಆಹಾರನೂ ತಿಂದೆ. ಸ್ವಲ್ಪದರಲ್ಲೇ ನನ್ನ ಆರೋಗ್ಯ ಸುಧಾರಿಸಿತು” ಅನ್ನುತ್ತಾಳೆ ಬೆತ್‌.

 ಇವತ್ತಿರೋ ತುಂಬ ಜನರಿಗೆ ಬೆತ್‌ಗಿರೋ ಆರೋಗ್ಯ ಸಮಸ್ಯೆನೇ ಇದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ 200 ಕೋಟಿ ಜನರಿಗೆ ಅಂದ್ರೆ ಲೋಕದ ಸುಮಾರು 30% ಜನರಿಗೆ ರಕ್ತಹೀನತೆ ಇದೆ. ಪ್ರಗತಿಪರ ದೇಶಗಳಲ್ಲಿ ಸುಮಾರು 50% ಗರ್ಭಿಣಿ ಸ್ತ್ರೀಯರಿಗೆ ಮತ್ತು 40% ಚಿಕ್ಕ ಮಕ್ಕಳಿಗೆ ರಕ್ತಹೀನತೆ ಇದೆ.

 ರಕ್ತಹೀನತೆಯಿಂದಾಗಿ ಗಂಭೀರ ಆರೋಗ್ಯ ಸಮಸ್ಯೆಗಳು ಬರಬಹುದು. ಹೆಚ್ಚಾಗಿ ಹೃದಯದ ಸಮಸ್ಯೆಗಳು ಬರಬಹುದು, ಹಾರ್ಟ್‌ ಫೇಲ್‌ ಕೂಡ ಆಗಬಹುದು. ಕೆಲವು ದೇಶಗಳಲ್ಲಿ ರಕ್ತಹೀನತೆಯಿಂದಾಗಿ “20% ಗರ್ಭಿಣಿ ಸ್ತ್ರೀಯರು ಸಾಯುತ್ತಿದ್ದಾರೆ” ಅಂತ WHO ಹೇಳುತ್ತೆ. ಕಬ್ಬಿಣಾಂಶ ಕೊರತೆಯಿಂದ ಆಗೋ ರಕ್ತಹೀನತೆಯು ಜನರಲ್ಲಿ ಸಾಮಾನ್ಯವಾಗಿ ಕಂಡು ಬರುತ್ತೆ. ಕಬ್ಬಿಣಾಂಶದ ಕೊರತೆಯಿರೋ ಗರ್ಭಿಣಿ ಸ್ತ್ರೀಯರಿಗೆ ತಿಂಗಳು ತುಂಬೋದಕ್ಕಿಂತ ಮುಂಚೆನೇ ಮಕ್ಕಳು ಹುಟ್ಟಬಹುದು. ಇಂಥ ಸ್ತ್ರೀಯರ ಹೊಟ್ಟೆಯಲ್ಲಿರೋ ಮಗು ಹುಟ್ಟೋದಕ್ಕಿಂತ ಮುಂಚೆನೇ ಸತ್ತು ಹೋಗಬಹುದು. ಒಂದು ವೇಳೆ ಹುಟ್ಟಿದ್ರೂ ಮಗುವಿನ ತೂಕ ಕಡಿಮೆ ಇರಬಹುದು. ರಕ್ತಹೀನತೆ ಇರೋ ಮಕ್ಕಳ ಬೆಳವಣಿಗೆ ಸಾಮಾನ್ಯವಾಗಿ ನಿಧಾನವಾಗಿರುತ್ತೆ ಮತ್ತು ಅವ್ರಿಗೆ ಸುಲಭವಾಗಿ ಕಾಯಿಲೆಗಳು ಬರುತ್ತವೆ. ಆದ್ರೆ ಕಬ್ಬಿಣಾಂಶದ ಕೊರತೆಯಿಂದ ಬರೋ ರಕ್ತಹೀನತೆಯನ್ನ ತಡೆಗಟ್ಟಬಹುದು ಅಥವಾ ವಾಸಿ ಮಾಡಬಹುದು. a

ರಕ್ತಹೀನತೆ ಅಂದ್ರೇನು?

 ರಕ್ತಹೀನತೆ ಒಂದು ಆರೋಗ್ಯ ಸಮಸ್ಯೆಯಾಗಿದೆ. ನಮ್ಮ ರಕ್ತದಲ್ಲಿ ಆರೋಗ್ಯವಂತ ಕೆಂಪು ರಕ್ತಕಣಗಳ ಸಂಖ್ಯೆ ಕಡಿಮೆ ಇರೋದಾದ್ರೆ ಅದನ್ನೇ ರಕ್ತಹೀನತೆ ಅಂತ ಹೇಳ್ತಾರೆ. ಇದಕ್ಕೆ ಬೇರೆ ಬೇರೆ ಕಾರಣಗಳಿರಬಹುದು. ವಿಜ್ಞಾನಿಗಳು 400ಕ್ಕಿಂತ ಹೆಚ್ಚು ತರದ ರಕ್ತಹೀನತೆಯನ್ನ ಕಂಡುಹಿಡಿದಿದ್ದಾರೆ. ಕೆಲವು ತರದ ರಕ್ತಹೀನತೆ ಬೇಗ ವಾಸಿಯಾಗಬಹುದು. ಆದ್ರೆ ಇನ್ನು ಕೆಲವು, ಸುಮಾರು ಸಮಯದವರೆಗೂ ಇರಬಹುದು. ಕೆಲವು ಅಷ್ಟೇನು ಹಾನಿಕಾರಕವಾಗಿರಲ್ಲ ಆದ್ರೆ ಇನ್ನು ಕೆಲವು ತುಂಬ ಅಪಾಯಕಾರಿಯಾಗಿರುತ್ತೆ.

ರಕ್ತಹೀನತೆಗೆ ಕಾರಣಗಳೇನು?

 ರಕ್ತಹೀನತೆಗೆ ಮುಖ್ಯವಾಗಿ ಮೂರು ಕಾರಣಗಳಿವೆ:

 •   ರಕ್ತಸ್ರಾವವಾಗಿ ದೇಹದಲ್ಲಿ ಕೆಂಪು ರಕ್ತಕಣಗಳ ಸಂಖ್ಯೆ ಕಡಿಮೆಯಾದಾಗ.

 •   ದೇಹ ಸಾಕಷ್ಟು ಆರೋಗ್ಯವಂತ ಕೆಂಪು ರಕ್ತಕಣವನ್ನ ಉತ್ಪತ್ತಿ ಮಾಡದಿದ್ದಾಗ.

 •   ದೇಹ ತನ್ನಲ್ಲಿರೋ ಕೆಂಪು ರಕ್ತಕಣವನ್ನ ನಾಶಮಾಡಿದಾಗ.

 ಕಬ್ಬಿಣದ ಅಂಶದ ಕೊರತೆಯಿಂದಾಗುವ ರಕ್ತಹೀನತೆನೇ ಪ್ರಪಂಚದಾದ್ಯಂದ ಹೆಚ್ಚಾಗಿ ಕಂಡು ಬರೋ ರಕ್ತಹೀನತೆ. ನಮ್ಮ ಶರೀರದಲ್ಲಿ ಕಬ್ಬಿಣದ ಅಂಶ ಕಡಿಮೆಯಾದಾಗ ಅದಕ್ಕೆ ಆರೋಗ್ಯವಂತ ಹಿಮೋಗ್ಲೋಬಿನ್‌ ಅಥವಾ ಕೆಂಪು ರಕ್ತಕಣವನ್ನ ತಯಾರಿಸೋಕೆ ಅಥವಾ ಉತ್ಪಾದಿಸೋಕೆ ಆಗಲ್ಲ. ರಕ್ತದಲ್ಲಿರೋ ಈ ಹಿಮೋಗ್ಲೋಬಿನೇ ಆಮ್ಲಜನಕವನ್ನ ದೇಹದ ಎಲ್ಲಾ ಕಡೆ ಸರಬರಾಜು ಮಾಡುತ್ತೆ.

ಕಬ್ಬಿಣಾಂಶದ ಕೊರತೆಯಿಂದಾಗುವ ರಕ್ತಹೀನತೆಯ ಲಕ್ಷಣಗಳೇನು?

 ರಕ್ತಹೀನತೆ ಶುರುವಾದಾಗ ಅದು ಇದೆ ಅಂತನೇ ಗೊತ್ತಾಗದೆ ಇರಬಹುದು. ರಕ್ತಹೀನತೆಗೆ ಬೇರೆ ಬೇರೆ ಲಕ್ಷಣಗಳಿವೆ. ಕಬ್ಬಿಣಾಂಶದ ಕೊರತೆಯಿಂದ ರಕ್ತಹೀನತೆ ಬಂದ್ರೆ ಈ ಕೆಳಗಿನ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ:

 •   ಅತಿಯಾದ ಸುಸ್ತು

 •   ಕೈ ಮತ್ತು ಪಾದಗಳು ತಣ್ಣಗಿರೋದು

 •   ನಿಶ್ಯಕ್ತಿ

 •   ಬಿಳಿಚಿದ ಚರ್ಮ

 •   ತಲೆನೋವು ಮತ್ತು ತಲೆ ಸುತ್ತು

 •   ಎದೆ ನೋವು, ಹೃದಯ ಬಡಿತ ಹೆಚ್ಚಾಗೋದು, ಉಸಿರಾಟದ ತೊಂದರೆ

 •   ಒರಟಾದ, ಒಡೆದ ಉಗುರುಗಳು

 •   ವಿಶೇಷವಾಗಿ ಶಿಶು ಮತ್ತು ಮಕ್ಕಳಲ್ಲಿ ಹಸಿವೆ ಇಲ್ಲದಿರೋದು

 •   ಐಸ್‌, ಸ್ಟಾರ್ಚ್‌ ಅಥವಾ ಮಣ್ಣು ತಿನ್ನಬೇಕು ಅನ್ನೋ ಆಸೆ

ಯಾರೆಲ್ಲಾ ಇದಕ್ಕೆ ಬೇಗ ತುತ್ತಾಗ್ತಾರೆ?

 ಕಬ್ಬಿಣಾಂಶದ ಕೊರತೆಯಿಂದ ಬರೋ ರಕ್ತಹೀನತೆ ಸ್ತ್ರೀಯರಲ್ಲಿ ಕಂಡು ಬರೋದು ಜಾಸ್ತಿ. ಯಾಕಂದ್ರೆ ಮುಟ್ಟಿನ ಸಮಯದಲ್ಲಿ ಅವ್ರಿಗೆ ರಕ್ತಸ್ರಾವ ಆಗುತ್ತೆ. ಗರ್ಭಿಣಿ ಸ್ತ್ರೀಯರು ತಿನ್ನೋ ಆಹಾರದಲ್ಲಿ ಫೋಲೇಟ್‌ ಅಥವಾ ಫೋಲಿಕ್‌ ಆ್ಯಸಿಡ್‌ನ (ಒಂದು ವಿಧದ ವಿಟಮಿನ್‌-ಬಿ) ಅಂಶ ಕಡಿಮೆ ಇರೋದಾದ್ರೆ ರಕ್ತಹೀನತೆ ಹೆಚ್ಚಾಗಿ ಕಂಡುಬರುತ್ತೆ.

 ತಿಂಗಳು ತುಂಬದೇ ಹುಟ್ಟಿದ ಅಥವಾ ಕಡಿಮೆ ತೂಕ ಇರೋ ಮಗುಗೆ ತಾಯಿಯ ಹಾಲಿನಲ್ಲಿ ಅಥವಾ ಆಹಾರದಲ್ಲಿ ಕಬ್ಬಿಣದ ಅಂಶ ಕಡಿಮೆ ಇದ್ರೆ ಈ ಸಮಸ್ಯೆ ಬರಬಹುದು.

 ಪೌಷ್ಟಿಕಾಂಶ ಇರೋ ಬೇರೆ ಬೇರೆ ಆಹಾರವನ್ನ ತಿನ್ನದ ಮಕ್ಕಳಲ್ಲಿ ಈ ಸಮಸ್ಯೆ ಕಂಡುಬರಬಹುದು.

 ಸಸ್ಯಾಹಾರಿಗಳು ಕಬ್ಬಿಣಾಂಶ ಕಡಿಮೆ ಇರೋ ಆಹಾರವನ್ನ ಸೇವಿಸ್ತಾ ಇರೋದಾದ್ರೆ ಅಂಥವರಿಗೂ ರಕ್ತಹೀನತೆ ಬರಬಹುದು.

 ದೀರ್ಘಕಾಲದ ಕಾಯಿಲೆ ಇದ್ರೆ ಅಂದ್ರೆ ರಕ್ತಕ್ಕೆ ಸಂಬಂಧಪಟ್ಟ ಕಾಯಿಲೆ, ಕ್ಯಾನ್ಸರ್‌ ಇದ್ರೆ, ಕಿಡ್ನಿ ಫೇಲ್‌ ಆಗಿದ್ರೆ, ಅಲ್ಸರ್‌ ಇದ್ದು ಅದ್ರಿಂದ ರಕ್ತಸ್ರಾವ ಆಗ್ತಾ ಇದ್ರೆ ಅಥವಾ ಇದಕ್ಕೆ ಸಂಬಂಧಿಸಿದ ಬೇರೆ ಯಾವುದಾದ್ರೂ ಕಾಯಿಲೆ ಇದ್ರೆ ಅಂಥವ್ರಲ್ಲಿ ರಕ್ತಹೀನತೆ ಕಂಡುಬರುತ್ತೆ.

ರಕ್ತಹೀನತೆಗೆ ಚಿಕಿತ್ಸೆ

 ಎಲ್ಲಾ ರೀತಿಯ ರಕ್ತಹೀನತೆಯನ್ನ ಬರದಂತೆ ತಡೆಯಲು ಅಥವಾ ವಾಸಿಮಾಡಲು ಆಗಲ್ಲ. ಆದ್ರೆ ಕಬ್ಬಿಣಾಂಶ ಅಥವಾ ವಿಟಮಿನ್‌ಗಳ ಕೊರತೆಯಿಂದ ಬರೋ ರಕ್ತಹೀನತೆಯನ್ನ ವಾಸಿಮಾಡಬಹುದು ಅಥವಾ ಬರದಂತೆ ತಡೆಯಬಹುದು. ಇದಕ್ಕಾಗಿ ಅವರು ಕೆಳಗೆ ಹೇಳಲಾಗಿರೋ ಪೌಷ್ಟಿಕಾಂಶಗಳನ್ನ ಸೇವಿಸಬೇಕು. ಅವು ಯಾವುವು?

 ಕಬ್ಬಿಣಾಂಶ. ಮಾಂಸ, ದವಸಧಾನ್ಯಗಳು, ಕಾಳುಗಳು ಮತ್ತು ಹಸಿರು ಸೊಪ್ಪುಗಳಲ್ಲಿ ಕಬ್ಬಿಣದ ಅಂಶ ಕಂಡುಬರುತ್ತೆ. b ಅಷ್ಟೇ ಅಲ್ಲ, ಕಬ್ಬಿಣದ ಪಾತ್ರೆಗಳಲ್ಲಿ ತಯಾರಿಸಿದ ಆಹಾರಗಳಲ್ಲೂ ಕಬ್ಬಿಣದ ಅಂಶ ಇರುತ್ತೆ ಅಂತ ಅಧ್ಯಯನಗಳು ತಿಳಿಸಿವೆ.

 ಫೋಲೇಟ್‌. ಹಣ್ಣು, ಹಸಿರು ಸೊಪ್ಪು, ಹಸಿರು ಬಟಾಣಿ, ಕಿಡ್ನಿ ಬೀನ್ಸ್‌, ಚೀಸ್‌, ಮೊಟ್ಟೆ, ಮೀನು, ಬಾದಾಮಿ ಮತ್ತು ನೆಲಗಡಲೆಗಳಲ್ಲಿ ಕಂಡುಬರುತ್ತೆ. ವಿಟಮಿನ್‌ನ ಅಂಶ ಹೆಚ್ಚಿರುವಂಥ ದವಸಧಾನ್ಯಗಳಿಂದ ಉತ್ಪಾದಿಸಲಾದ ಪದಾರ್ಥಗಳಾದ ಬ್ರೆಡ್‌, ಸೀರಿಯಲ್‌, ಪಾಸ್ತಾ ಮತ್ತು ಅನ್ನದಲ್ಲೂ ಈ ಅಂಶ ಹೆಚ್ಚಾಗಿ ಇರುತ್ತೆ. ಮಾನವ ನಿರ್ಮಿತ ಫೋಲೇಟನ್ನ ಫೋಲಿಕ್‌ ಆ್ಯಸಿಡ್‌ ಅಂತ ಕರೆಯಲಾಗುತ್ತೆ.

 ವಿಟಮಿನ್‌ ಬಿ-12. ಇದು ಮಾಂಸ, ಹಾಲಿನ ಉತ್ಪನ್ನಗಳಲ್ಲಿ, ವಿಟಮಿನ್‌ ಹಾಗೂ ಪ್ರೋಟೀನ್‌ಗಳನ್ನ ಸೇರಿಸಲಾದ ಸೀರಿಯಲ್‌ಗಳಲ್ಲಿ, ಸೋಯಾ ಉತ್ಪನ್ನಗಳಲ್ಲಿ ಕಂಡುಬರುತ್ತೆ.

 ವಿಟಮಿನ್‌ ಸಿ. ಇದು ಸಿಟ್ರಸ್‌ ಇರೋ ಹಣ್ಣು ಮತ್ತು ಜ್ಯೂಸ್‌ಗಳಲ್ಲಿ, ಮೆಣಸಿನಕಾಯಿ, ಬ್ರೊಕೋಲಿ, ಟೊಮೆಟೋ, ಕಲ್ಲಂಗಡಿ, ಕರ್ಬೂಜ ಹಾಗೂ ಸ್ಟ್ರಾಬೆರಿಗಳಲ್ಲಿ ಹೆಚ್ಚಾಗಿ ಇರುತ್ತೆ. ವಿಟಮಿನ್‌ ಸಿ ಇರುವ ಆಹಾರ ಕಬ್ಬಿಣಾಂಶವನ್ನ ಹೀರಿಕೊಳ್ಳಲು ದೇಹಕ್ಕೆ ಸಹಾಯ ಮಾಡುತ್ತೆ.

 ಒಂದೊಂದು ಪ್ರದೇಶದಲ್ಲಿ ಬೇರೆ ಬೇರೆ ತರದ ಆಹಾರ ಸಿಗುತ್ತೆ. ಹಾಗಾಗಿ, ನಮ್ಮ ಸುತ್ತ ಮುತ್ತ ಯಾವ ಪೌಷ್ಟಿಕ ಆಹಾರ ಸಿಗುತ್ತೆ ಅಂತ ನೋಡಿ ಅದನ್ನ ತಿನ್ನಬೇಕು. ಸ್ತ್ರೀಯರು ಈ ವಿಷ್ಯದಲ್ಲಿ ಹೆಚ್ಚು ಗಮನ ಕೊಡಬೇಕು. ಅದ್ರಲ್ಲೂ ವಿಶೇಷವಾಗಿ ಗರ್ಭಿಣಿ ಆಗಿರೋ ಸ್ತ್ರೀಯರು ಅಥವಾ ಮಕ್ಕಳು ಆಗಬೇಕಂತ ಬಯಸೋ ಸ್ತ್ರೀಯರು ಇದಕ್ಕೆ ವಿಶೇಷ ಗಮನ ಕೊಡಬೇಕು. ನೀವು ಈ ವಿಷಯದಲ್ಲಿ ಜಾಗ್ರತೆವಹಿಸಿದ್ರೆ ನಿಮಗೆ ಹುಟ್ಟುವ ಮಕ್ಕಳಿಗೆ ರಕ್ತಹೀನತೆ ಬರಲ್ಲ. c

a ಯಾವ ರೀತಿಯ ಆಹಾರ ಸೇವಿಸಬೇಕು ಅನ್ನೋದ್ರ ಬಗ್ಗೆ ಮತ್ತು ಇದಕ್ಕೆ ಸಂಬಂಧಪಟ್ಟ ಇತರ ವಿಷಯಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾದ ಮಾಹಿತಿಯನ್ನ ಮುಖ್ಯವಾಗಿ ಮಾಯೋ ಕ್ಲಿನಿಕ್‌ ಮತ್ತು ದ ಗೇಲ್‌ ಎನ್‌ಸೈಕ್ಲೊಪೀಡಿಯ ಆಫ್‌ ನರ್ಸಿಂಗ್‌ ಆ್ಯಂಡ್‌ ಅಲೈಡ್‌ ಹೆಲ್ತ್‌ನಿಂದ ತೆಗೆದುಕೊಳ್ಳಲಾಗಿದೆ. ನಿಮಗೆ ರಕ್ತಹೀನತೆ ಇದೆ ಅಂತ ಅನಿಸೋದಾದ್ರೆ ಡಾಕ್ಟರ್‌ ಸಲಹೆ ಪಡೆಯಿರಿ.

b ಕಬ್ಬಿಣಾಂಶದ ಟ್ಯಾಬ್ಲೆಟ್‌ಗಳನ್ನ ಟಾಕ್ಟರನ್ನ ಕೇಳದೆ ತಗೊಳ್ಳಬೇಡಿ ಮತ್ತು ನಿಮ್ಮ ಮಕ್ಕಳಿಗೂ ಕೊಡಬೇಡಿ. ಯಾಕಂದ್ರೆ ಕಬ್ಬಿಣಾಂಶ ಹೆಚ್ಚಾದ್ರೆ ಪಿತ್ತಜನಕಾಂಗ (ಲಿವರ್‌) ಹಾಳಾಗಬಹುದು ಅಥವಾ ಬೇರೆ ಸಮಸ್ಯೆಗಳೂ ಬರಬಹುದು.

c ರಕ್ತಹೀನತೆ ವಾಸಿ ಆಗಬೇಕಂದ್ರೆ ರಕ್ತ ತಗೊಬೇಕು ಅಂತ ಕೆಲವೊಮ್ಮೆ ಡಾಕ್ಟರ್‌ ಹೇಳ್ತಾರೆ. ಆದ್ರೆ ಈ ರೀತಿಯ ಚಿಕಿತ್ಸೆಯನ್ನ ಯೆಹೋವನ ಸಾಕ್ಷಿಗಳು ಸ್ವೀಕರಿಸುವುದಿಲ್ಲ.—ಅಪೊಸ್ತಲರ ಕಾರ್ಯ 15:28, 29.