ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಯೋತ್ಪಾದನೆಗೆ ಕೊನೆ ಯಾವಾಗ?

ಭಯೋತ್ಪಾದನೆಗೆ ಕೊನೆ ಯಾವಾಗ?

 ಒಂದು ಭಯೋತ್ಪಾದನೆ ದಾಳಿ ನಡೆದಾಗ ನಮ್ಮ ಮನಸ್ಸಲ್ಲಿ ಈ ಪ್ರಶ್ನೆಗಳು ಬರಬಹುದು: ‘ದೇವರು ನಿಜವಾಗ್ಲೂ ನಮ್ಮ ಬಗ್ಗೆ ಯೋಚಿಸ್ತಾನಾ? ಯಾಕೆ ಇಂಥ ವಿಷಯಗಳು ನಡೆಯುತ್ತೆ? ಭಯೋತ್ಪಾದನೆಗೆ a ಕೊನೆ ಇದ್ಯಾ? ಭಯ ಇಲ್ಲದೆ ಯಾವತ್ತಾದ್ರೂ ನಾನು ಬದುಕೋಕೆ ಆಗುತ್ತಾ?’ ಈ ಎಲ್ಲಾ ಪ್ರಶ್ನೆಗಳಿಗೆ ಬೈಬಲ್‌ ಉತ್ತರ ಕೊಡುತ್ತೆ.

ದೇವರಿಗೆ ಭಯೋತ್ಪಾದನೆ ಬಗ್ಗೆ ಹೇಗನ್ನಿಸುತ್ತೆ?

 ದೇವರು ಹಿಂಸೆ ಮತ್ತು ಭಯೋತ್ಪಾದನೆಯನ್ನ ದ್ವೇಷಿಸ್ತಾನೆ. (ಕೀರ್ತನೆ 11:5; ಜ್ಞಾನೋಕ್ತಿ 6:16, 17) ಯೇಸುವಿನ ಶಿಷ್ಯರು ಒಂದು ಸಮಯದಲ್ಲಿ ಹಿಂಸಾಕೃತ್ಯ ಮಾಡಿದಾಗ ಯೇಸು ಅವ್ರನ್ನ ಗದರಿಸಿದನು. (ಮತ್ತಾಯ 26:50-52) ಕೆಲವರು ನಾವು ದೇವರ ಹೆಸರಲ್ಲಿ ಹಿಂಸಾಕೃತ್ಯಗಳನ್ನ ಮಾಡ್ತಿದ್ದೀವಿ ಅಂತ ಹೇಳ್ತಾರೆ. ಆದ್ರೆ ಈ ತರ ಮಾಡೋ ಅಧಿಕಾರವನ್ನ ದೇವರು ಜನ್ರಿಗೆ ಕೊಟ್ಟಿಲ್ಲ. ಅಂಥವರ ಪ್ರಾರ್ಥನೆಯನ್ನೂ ದೇವರು ಕೇಳಲ್ಲ.—ಯೆಶಾಯ 1:15.

 ಭಯೋತ್ಪಾದನೆಯ ದಾಳಿಗೆ ತುತ್ತಾದವ್ರ ಬಗ್ಗೆ ದೇವರು ನಿಜವಾಗ್ಲೂ ಕಾಳಜಿ ವಹಿಸ್ತಾನೆ. (ಕೀರ್ತನೆ 31:7; 1 ಪೇತ್ರ 5:7) ಹಿಂಸೆಯನ್ನ ತೆಗೆದು ಹಾಕ್ತೀನಿ ಅಂತ ದೇವರು ಮಾತು ಕೊಟ್ಟಿರೋದ್ರ ಬಗ್ಗೆ ಬೈಬಲ್‌ ಹೇಳುತ್ತೆ.—ಯೆಶಾಯ 60:18.

ಭಯೋತ್ಪಾದನೆಯ ಮೂಲ

 ಭಯೋತ್ಪಾದನೆಯ ಮೂಲ ಏನು ಅಂತ ಬೈಬಲ್‌ ಹೇಳುತ್ತೆ. ಅಲ್ಲಿ ಹೀಗಿದೆ: “ಮನುಷ್ಯ ಮನುಷ್ಯನ ಮೇಲೆ ಅಧಿಕಾರ ನಡೆಸಿ ಹಾನಿ ಮಾಡಿದ್ದಾನೆ.” (ಪ್ರಸಂಗಿ 8:9) ಇತಿಹಾಸ ನೋಡೋದಾದ್ರೆ, ಅಧಿಕಾರ ಇರೋ ಜನ್ರು ಇನ್ನೊಬ್ರ ಮೇಲೆ ಅಧಿಕಾರ ಚಲಾಯಿಸೋದಕ್ಕೆ ಭಯೋತ್ಪಾದನೆಯನ್ನ ಬಳಸಿದ್ದಾರೆ. ಯಾರೆಲ್ಲ ಈ ದಾಳಿಗೆ ತುತ್ತಾಗಿದ್ದಾರೋ ಅವರು ಅದನ್ನೇ ಮಾಡ್ತಾರೆ.—ಪ್ರಸಂಗಿ 7:7.

ಭಯೋತ್ಪಾದನೆಯ ಕೊನೆ

 ಭೂಮಿ ಮೇಲೆ ಶಾಂತಿಯನ್ನ ಸ್ಥಾಪಿಸೋದಕ್ಕೆ ಭಯ ಮತ್ತು ಹಿಂಸಾಕೃತ್ಯಗಳನ್ನ ತೆಗೆದುಹಾಕ್ತೀನಿ ಅಂತ ದೇವರು ಮಾತು ಕೊಟ್ಟಿದ್ದಾನೆ. (ಯೆಶಾಯ 32:18; ಮೀಕ 4:3, 4) ಅದನ್ನು ಹೇಗೆ ಮಾಡ್ತಾನೆ ಅಂದ್ರೆ:

  •   ಭಯೋತ್ಪಾದನೆಯ ಮೂಲವನ್ನೇ ಅಳಿಸಿ ಹಾಕ್ತಾನೆ. ದೇವರು ಮಾನವ ಸರ್ಕಾರಗಳನ್ನ ತೆಗೆದುಹಾಕಿ ತನ್ನ ಆಡಳಿತವನ್ನ ಇಡೀ ಭೂಮಿ ಮೇಲೆ ತರುತ್ತಾನೆ. ಅದ್ರ ರಾಜನಾದ ಯೇಸು ಯಾರನ್ನೂ ಕೀಳಾಗಿ ನೋಡದೆ ದಬ್ಬಾಳಿಕೆ ಮತ್ತು ಹಿಂಸಾ ಕೃತ್ಯಗಳನ್ನ ತೆಗೆದುಹಾಕ್ತಾನೆ. (ಕೀರ್ತನೆ 72:2, 14) ಆ ಸಮಯದಲ್ಲಿ ಯಾರೂ ಭಯೋತ್ಪಾದನೆಯನ್ನ ಬಳಸಲ್ಲ. ಜನ್ರು ‘ನೆಮ್ಮದಿಯಾಗಿ ಖುಷಿಖುಷಿಯಾಗಿ ಇರ್ತಾರೆ.’—ಕೀರ್ತನೆ 37:10, 11.

  •   ಭಯೋತ್ಪಾದನೆ ತಂದಿರೋ ನಷ್ಟವನ್ನ ಭರ್ತಿ ಮಾಡ್ತಾನೆ. ಭಯೋತ್ಪಾದನೆ ದಾಳಿಗೆ ತುತ್ತಾಗಿರೋ ಜನ್ರು ಶಾರೀರಿಕವಾಗಿ ಮತ್ತು ಭಾವನಾತ್ಮಕವಾಗಿ ನಷ್ಟ ಅನುಭವಿಸಿರುತ್ತಾರೆ. ದೇವರು ಇಂಥವರನ್ನೆಲ್ಲ ವಾಸಿ ಮಾಡ್ತಾನೆ. (ಯೆಶಾಯ 65:17; ಪ್ರಕಟನೆ 21:3, 4) ಅಷ್ಟೇ ಅಲ್ಲ, ಇದ್ರಿಂದಾಗಿ ಜೀವ ಕಳ್ಕೊಂಡಿರೋ ಜನ್ರನ್ನ ಮತ್ತೆ ಎಬ್ಬಿಸಿ ಶಾಂತಿ ತುಂಬಿರೋ ಭೂಮಿಯಲ್ಲಿ ಬದುಕೋ ಅವಕಾಶವನ್ನ ಮಾಡ್ಕೊಡ್ತೀನಿ ಅಂತನೂ ದೇವರು ಮಾತು ಕೊಟ್ಟಿದ್ದಾನೆ.—ಯೋಹಾನ 5:28, 29.

 ದೇವರು ಬಲುಬೇಗನೆ ಈ ವಿಷಯಗಳನ್ನ ಮಾಡ್ತಾನೆ ಅಂತ ಬೈಬಲ್‌ ನಮಗೆ ಹೇಳುತ್ತೆ. ಹಾಗಿದ್ರು, ‘ದೇವರು ಯಾಕೆ ಇನ್ನೂ ಭಯೋತ್ಪಾದನೆಯನ್ನ ತೆಗೆದಿಲಿಲ್ಲ?’ ಅನ್ನೋ ಪ್ರಶ್ನೆ ನಮ್ಮ ಮನಸ್ಸಿಗೆ ಬರಬಹುದು. ಇದಕ್ಕೆ ಉತ್ತರ ತಿಳ್ಕೊಳ್ಳಲು ದೇವರು ಕಷ್ಟಗಳನ್ನು ಯಾಕೆ ಅನುಮತಿಸುತ್ತಾನೆ? ಅನ್ನೋ ವಿಡಿಯೋ ನೋಡಿ.

a ಜನರಲ್ಲಿ ಹಿಂಸಾಕೃತ್ಯದ ಭಯ ಹುಟ್ಟಿಸೋದೇ “ಭಯೋತ್ಪಾದನೆ.” ಇದನ್ನ ಸಾಮಾನ್ಯ ಜನರ ವಿರುದ್ಧ ಬಳಸಲಾಗುತ್ತೆ. ಸಾಮಾಜಿಕವಾಗಿ, ಧಾರ್ಮಿಕವಾಗಿ ಮತ್ತು ರಾಜಕೀಯವಾಗಿ ಬದಲಾವಣೆ ತರಲು ಈ ಭಯವನ್ನ ಉಪಯೋಗಿಸಲಾಗುತ್ತೆ. ಆದ್ರೆ ನಿರ್ದಿಷ್ಟವಾಗಿ ಯಾವ ರೀತಿಯ ಕೃತ್ಯಕ್ಕೆ ಭಯೋತ್ಪಾದನೆ ಅಂತ ಕರಿಬೇಕು ಅನ್ನೋ ವಿಷ್ಯದಲ್ಲಿ ಜನರಿಗೆ ಬೇರೆಬೇರೆ ಅಭಿಪ್ರಾಯ ಇದೆ.