ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಳ್ಳೇ ಆರ್ಥಿಕ ವ್ಯವಸ್ಥೆ ಯಾವತ್ತಾದ್ರೂ ಬರುತ್ತಾ?

ಒಳ್ಳೇ ಆರ್ಥಿಕ ವ್ಯವಸ್ಥೆ ಯಾವತ್ತಾದ್ರೂ ಬರುತ್ತಾ?

 ಅನೇಕ ದೇಶಗಳಲ್ಲಿ ಆರ್ಥಿಕ ವ್ಯವಸ್ಥೆ ಸರಿಯಿಲ್ಲದೆ ಇರೋದ್ರಿಂದ ಜನ್ರು ಬೀದಿಗೆ ಇಳಿದು ಪ್ರತಿಭಟನೆ ಮಾಡ್ತಿದ್ದಾರೆ. ಕೋವಿಡ್‌-19 ಮಹಾಪಿಡುಗು ಶುರುವಾದಾಗ ಈ ಸಮಸ್ಯೆ ಇನ್ನೂ ಹೆಚ್ಚಾಯ್ತು. ಆಗ ಲಾಕ್‌ಡೌನ್‌ ಮತ್ತು ಆರೋಗ್ಯ ವ್ಯವಸ್ಥೆಯಲ್ಲಿ ಅಭಾವ ಹೆಚ್ಚಾಗಿದ್ರಿಂದ ಬಡವರು ಮತ್ತು ಶ್ರೀಮಂತರ ಮಧ್ಯೆ ಇರೋ ವ್ಯತ್ಯಾಸವನ್ನ ಕಣ್ಣಾರೆ ನೋಡೋಕಾಯ್ತು.

 ಜನ್ರಿಗೆ ತೊಂದ್ರೆ ಕೊಡೋ ಈ ಆರ್ಥಿಕ ಸಮಸ್ಯೆ ಯಾವತ್ತಾದ್ರೂ ಕೊನೆಯಾಗುತ್ತಾ? ಹೌದು. ದೇವರು ಬೇಗನೆ ಈ ಸಮಸ್ಯೆಗೆ ಪರಿಹಾರ ತರ್ತಾನೆ ಅಂತ ಬೈಬಲ್‌ ಹೇಳುತ್ತೆ.

ದೇವರು ಆರ್ಥಿಕ ಸಮಸ್ಯೆಯನ್ನ ತೆಗೆದುಹಾಕ್ತಾನೆ

 ಸಮಸ್ಯೆ: ಎಲ್ಲ ಜನ್ರ ಅಗತ್ಯಗಳನ್ನ ಪೂರೈಸುವಂತಹ ಆರ್ಥಿಕ ವ್ಯವಸ್ಥೆಯನ್ನ ಮನುಷ್ಯರಿಂದ ತರಕ್ಕಾಗಿಲ್ಲ.

 ಪರಿಹಾರ: ಎಲ್ಲ ಮಾನವ ಸರ್ಕಾರಗಳನ್ನ ದೇವರು ತೆಗೆದು ಹಾಕಿ ತನ್ನ ಆಡಳಿತವನ್ನ ತರ್ತಾನೆ. ಈ ಆಡಳಿತ ಸ್ವರ್ಗದಿಂದ ಭೂಮಿಯನ್ನ ಆಳುತ್ತೆ.—ದಾನಿಯೇಲ 2:44; ಮತ್ತಾಯ 6:10.

 ಫಲಿತಾಂಶ: ದೇವರು ಭೂಮಿಯನ್ನ ಸ್ವರ್ಗದಿಂದ ಆಳುವಾಗ ಎಲ್ಲ ವಿಷಯಗಳನ್ನ ಪರಿಪೂರ್ಣವಾಗಿ ನಿರ್ವಹಿಸೋಕೆ ಆಗುತ್ತೆ. ಆಗ ಯಾರೂ ಬಡವರಾಗಿರಲ್ಲ, ಹಾಗೂ ಬದುಕೋಕೆ ಬೇಕಾದ ಎಲ್ಲ ವಿಷಯಗಳು ಅವ್ರಿಗೆ ಸಿಗುತ್ತೆ. (ಕೀರ್ತನೆ 9:7-9, 18) ಜನ್ರು ತಾವು ಮಾಡಿದ ಕೆಲಸದ ಪ್ರತಿಫಲವನ್ನ ತಾವೇ ಅನುಭವಿಸ್ತಾರೆ. ಅಷ್ಟೇ ಅಲ್ಲ, ಅವ್ರ ಕುಟುಂಬಗಳ ಜೊತೆ ಸಂತೃಪ್ತಿಯಿಂದ ಮತ್ತು ಸಂತೋಷದಿಂದ ಜೀವಿಸ್ತಾರೆ. ಬೈಬಲ್‌ ಹೀಗೆ ಮಾತು ಕೊಡುತ್ತೆ: “ಅವರು ಮನೆ ಕಟ್ಕೊಂಡು ವಾಸ ಮಾಡ್ತಾರೆ, ದ್ರಾಕ್ಷಿತೋಟ ಮಾಡಿ ಅದ್ರ ಫಲ ತಿಂತಾರೆ. ಅವರು ಕಟ್ಟಿದ ಮನೆಯಲ್ಲಿ ಬೇರೆಯವರು ಬಂದು ಇರಲ್ಲ, ಅವರು ಮಾಡಿದ ತೋಟದ ಫಲವನ್ನ ಬೇರೆಯವರು ಬಂದು ಕಿತ್ಕೊಳ್ಳಲ್ಲ.”—ಯೆಶಾಯ 65:21, 22.

 ಸಮಸ್ಯೆ: ಬೇರೆ-ಬೇರೆ ವಿಷಯಗಳು ತರೋ ಅಭಾವವನ್ನ ಮತ್ತು ಅದ್ರಿಂದಾಗೋ ಸಮಸ್ಯೆಯನ್ನ ಜನ್ರು ತಡೆಯೋಕಾಗಲ್ಲ.

 ಪರಿಹಾರ: ಜನ್ರಲ್ಲಿ ಚಿಂತೆ ಮತ್ತು ಆತಂಕ ತರುವಂತಹ ವಿಷಯಗಳನ್ನ ದೇವರು ತನ್ನ ಆಡಳಿತದ ಮೂಲಕ ತೆಗೆದುಹಾಕ್ತಾನೆ.

 ಫಲಿತಾಂಶ: ತಮ್ಮ ಕುಟುಂಬವನ್ನ ನಡೆಸೋಕೆ ಬೇಕಾದ ಅಗತ್ಯ ವಸ್ತುಗಳನ್ನ ಪಡ್ಕೊಳ್ಳೋಕೆ ಜನ ಕಷ್ಟಪಡ್ತಾರೆ. ಆದ್ರೆ ದೇವರ ಆಡಳಿತದಲ್ಲಿ ಇಂತಹ ಯಾವ ವಿಷಯಗಳು ನಡಿಯಲ್ಲ. ಉದಾಹರಣೆಗೆ, ಯುದ್ಧಗಳು, ಆಹಾರದ ಅಭಾವ, ಮಹಾ ಪಿಡುಗು ಈ ಎಲ್ಲ ವಿಷಯಗಳು ಆಗ ಇರಲ್ಲ. (ಕೀರ್ತನೆ 46:9; 72:16; ಯೆಶಾಯ 33:24) ದೇವರು ಹೀಗೆ ಹೇಳಿದ್ದಾನೆ: “ನನ್ನ ಜನ್ರು ಪ್ರಶಾಂತವಾದ ಸ್ಥಳದಲ್ಲಿ ವಾಸಿಸ್ತಾರೆ, ಸುರಕ್ಷಿತವಾದ ತಾಣಗಳಲ್ಲಿ, ನೆಮ್ಮದಿಯಿರೋ ವಿಶ್ರಾಂತಿ ಸ್ಥಳಗಳಲ್ಲಿ ನೆಲೆಸ್ತಾರೆ.”—ಯೆಶಾಯ 32:18.

 ಸಮಸ್ಯೆ: ಸ್ವಾರ್ಥ ಮತ್ತು ಅತಿಯಾಸೆ ಇರೋ ಜನ್ರು ಬೇರೆಯವರ ಜೊತೆ ಅನ್ಯಾಯವಾಗಿ ನಡ್ಕೊಳ್ತಾರೆ.

 ಪರಿಹಾರ: ದೇವರ ಆಡಳಿತದಲ್ಲಿರೋ ಪ್ರಜೆಗಳು ತಮ್ಮನ್ನ ಪ್ರೀತಿಸೋದಕ್ಕಿಂತ ಬೇರೆಯವರನ್ನ ಪ್ರೀತಿಸಬೇಕು ಅನ್ನೋದನ್ನ ಕಲೀತಾರೆ.—ಮತ್ತಾಯ 22:37-39.

 ಫಲಿತಾಂಶ: ದೇವರ ಆಡಳಿತದಲ್ಲಿ ಎಲ್ರೂ ದೇವರ ತರನೇ ಪ್ರೀತಿ ತೋರಿಸ್ತಾರೆ. ಅವ್ರಲ್ಲಿ ‘ಸ್ವಾರ್ಥ ಇರಲ್ಲ.’ (1 ಕೊರಿಂಥ 13:4, 5) ಬೈಬಲ್‌ ಹೀಗೆ ಹೇಳುತ್ತೆ: “ನನ್ನ ಇಡೀ ಪವಿತ್ರ ಬೆಟ್ಟದಲ್ಲಿ ಅವು ಯಾವ ಹಾನಿನೂ ಮಾಡಲ್ಲ, ಯಾವುದನ್ನೂ ಹಾಳುಮಾಡಲ್ಲ, ಯಾಕಂದ್ರೆ ಸಮುದ್ರ ನೀರಿಂದ ತುಂಬಿರೋ ತರ, ಭೂಮಿ ಯೆಹೋವನ a ಜ್ಞಾನದಿಂದ ತುಂಬಿಕೊಳ್ಳುತ್ತೆ.”—ಯೆಶಾಯ 11:9.

 ನಾವು ಕೊನೆ ದಿನಗಳಲ್ಲಿ ಜೀವಿಸ್ತಾ ಇದ್ದೀವಿ ಅಂತ ಬೈಬಲ್‌ ಹೇಳುತ್ತೆ. ದೇವರು ತಾನು ಕೊಟ್ಟ ಮಾತನ್ನ ನೆರವೇರಿಸಿ ಎಲ್ಲ ಆರ್ಥಿಕ ಸಮಸ್ಯೆಗಳನ್ನ ತೆಗೆದುಹಾಕ್ತೀನಿ ಅಂತ ಹೇಳಿದ್ದಾನೆ. b (ಕೀರ್ತನೆ 12:5) ಆದ್ರೆ ಈಗ ಇರೋ ಆರ್ಥಿಕ ಸಮಸ್ಯೆಗಳನ್ನ ಹೇಗೆ ನಿಭಾಯಿಸೋದು ಅಂತ ತಿಳ್ಕೊಳೋಕೆ “ಕಮ್ಮಿ ಕಾಸಲ್ಲಿ ಬಂಪರ್‌ ಬದುಕು” ಮತ್ತು “ಹಣಾನೇ ಸರ್ವಸ್ವನಾ?” ಅನ್ನೋ ಲೇಖನಗಳು ನಿಮಗೆ ಸಹಾಯ ಮಾಡುತ್ತೆ.

a ಬೈಬಲ್‌ನಲ್ಲಿ ಯೆಹೋವ ಅನ್ನೋದು ದೇವರ ಹೆಸರು.—ಕೀರ್ತನೆ 83:18.

b ನೀವ್ಯಾಕೆ ಬೈಬಲನ್ನ ನಂಬಬಹುದು ಅನ್ನೋದಕ್ಕೆ “ಸತ್ಯದ ಬೇರು— ಬೈಬಲ್‌” ಅನ್ನೋ ಲೇಖನ ನೋಡಿ.