ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೆಲಸ ಕಳೆದುಕೊಂಡಿದ್ದೀರಾ?—ಬೈಬಲ್‌ ಸಲಹೆಗಳು ನಿಮಗೆ ಸಹಾಯ ಮಾಡುತ್ತೆ!

ಕೆಲಸ ಕಳೆದುಕೊಂಡಿದ್ದೀರಾ?—ಬೈಬಲ್‌ ಸಲಹೆಗಳು ನಿಮಗೆ ಸಹಾಯ ಮಾಡುತ್ತೆ!

 ಕೆಲಸ ಕಳೆದುಕೊಂಡಾಗ ಕೇವಲ ಅದು ನಮ್ಮ ಆರ್ಥಿಕ ಪರಿಸ್ಥಿತಿಯನ್ನ ಮಾತ್ರವಲ್ಲ ನಮ್ಮ ಕುಟುಂಬವನ್ನ, ನಮ್ಮ ಭಾವನೆಗಳನ್ನ ಮತ್ತು ನಮ್ಮ ಆರೋಗ್ಯವನ್ನ ಕೂಡ ಬಾಧಿಸುತ್ತೆ. ಯಾವತ್ತಿಗೂ ಹಳೇದಾಗದ ಕೆಲವು ಬೈಬಲ್‌ ಸಲಹೆಗಳನ್ನ ನಾವೀಗ ನೋಡೋಣ. ಅವು ಖಂಡಿತ ನಿಮಗೆ ಸಹಾಯ ಮಾಡುತ್ತವೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

 •   ನಿಮ್ಮ ಭಾವನೆಗಳನ್ನ ಬೇರೆಯವರ ಜೊತೆ ಹಂಚಿಕೊಳ್ಳಿ.

   ಬೈಬಲ್‌ ಏನು ಹೇಳುತ್ತೆ: “ನಿಜವಾದ ಸ್ನೇಹಿತ ಎಲ್ಲ ಸಮಯದಲ್ಲೂ ಪ್ರೀತಿಸ್ತಾನೆ.”—ಜ್ಞಾನೋಕ್ತಿ 17:17.

   ಕೆಲಸ ಕಳಕೊಂಡಾಗ ನಿಮಗೆ ದುಃಖ ಆಗಬಹುದು, ಕೋಪ ಬರಬಹುದು, ದಿಕ್ಕೇ ಕಾಣದಂತೆ, ಸೋತು ಹೋದಂತೆ ಅನಿಸಬಹುದು. ನಿಮ್ಮ ಈ ಎಲ್ಲ ಭಾವನೆಗಳನ್ನ ಕುಟುಂಬದವರ ಜೊತೆ, ಸ್ನೇಹಿತರ ಜೊತೆ ಹಂಚಿಕೊಂಡಾಗ ಅವರು ನಿಮ್ಮಲ್ಲಿ ಧೈರ್ಯ ತುಂಬ್ತಾರೆ, ಆಗ ನಿಮಗೆ ಸ್ವಲ್ಪ ಸಮಾಧಾನ ಆಗುತ್ತೆ. ಅಷ್ಟೇ ಅಲ್ಲ, ಅವರು ಕೆಲಸಕ್ಕೆ ಬರೋ ಕೆಲವು ಸಲಹೆಗಳನ್ನೂ ಕೊಡಬಹುದು. ಯಾರಿಗೆ ಗೊತ್ತು, ಅದರಿಂದ ನಿಮಗೆ ಹೊಸ ಕೆಲಸನೂ ಸಿಗಬಹುದು.

 •   ಅತಿಯಾಗಿ ಚಿಂತೆ ಮಾಡೋದನ್ನ ಬಿಟ್ಟುಬಿಡಿ.

   ಬೈಬಲ್‌ ಏನು ಹೇಳುತ್ತೆ: “ನಾಳೆ ಬಗ್ಗೆ ಚಿಂತೆ ಮಾಡಬೇಡಿ. ನಾಳೆಗೆ ನಾಳೆದೇ ಚಿಂತೆ ಇರುತ್ತೆ. ಇವತ್ತಿನ ಸಮಸ್ಯೆಗಳು ಇವತ್ತಿಗೇ ಸಾಕು.”—ಮತ್ತಾಯ 6:34.

   ಸಾಕಷ್ಟು ಮುಂಚಿತವಾಗಿ ಯೋಜನೆಗಳನ್ನ ಮಾಡಿ ಅಂತ ಬೈಬಲ್‌ ಪ್ರೋತ್ಸಾಹಿಸುತ್ತೆ. (ಜ್ಞಾನೋಕ್ತಿ 21:5) ಆದ್ರೆ ಅದೇ ಸಮಯದಲ್ಲಿ, ಮುಂದೆ ಏನಾಗುತ್ತೋ ಅಂತ ಅತಿಯಾಗಿ ಚಿಂತೆ ಮಾಡಬೇಡಿ ಅಂತಾನೂ ಸಲಹೆ ಕೊಡುತ್ತೆ. ಸಾಮಾನ್ಯವಾಗಿ ನಡೆಯದೆ ಇರೋ ವಿಷಯಗಳ ಬಗ್ಗೆ ನಾವು ತುಂಬ ಚಿಂತೆ ಮಾಡ್ತಾ ಇರ್ತೀವಿ. ಅದಕ್ಕೇ ಇವತ್ತು ಏನು ಮಾಡಬೇಕು ಅನ್ನೋದ್ರ ಬಗ್ಗೆ ಯೋಚನೆ ಮಾಡಿ.

   ಈಗ ನಿಮಗೆ ಆಗ್ತಿರೋ ಒತ್ತಡವನ್ನ ನಿಭಾಯಿಸೋಕೆ ಬೈಬಲಿನಲ್ಲಿರುವ ಇನ್ನೂ ಹೆಚ್ಚಿನ ವಿವೇಕದ ಮಾತುಗಳು ಸಹಾಯ ಮಾಡುತ್ತೆ. ಅದರ ಬಗ್ಗೆ ಜಾಸ್ತಿ ತಿಳುಕೊಳ್ಳೋಕೆ “ಒತ್ತಡದಿಂದ ಹೊರ ಬರುವ ದಾರಿ” ಅನ್ನೋ ಲೇಖನ ಓದಿ.

 •   ಹಣ ಖರ್ಚು ಮಾಡೋ ವಿಷ್ಯದಲ್ಲಿ ಸ್ವಲ್ಪ ಬದಲಾವಣೆ ಮಾಡ್ಕೊಳ್ಳಿ.

   ಬೈಬಲ್‌ ಏನು ಹೇಳುತ್ತೆ: “ಸ್ವಲ್ಪಾನೇ ಇರಲಿ ಜಾಸ್ತಿನೇ ಇರಲಿ ಖುಷಿಯಾಗಿ ಇರೋದು ಹೇಗಂತ ನಂಗೊತ್ತು.”—ಫಿಲಿಪ್ಪಿ 4:12.

   ಸದ್ಯದ ಪರಿಸ್ಥಿತಿಗೆ ನಿಮ್ಮನ್ನ ಹೊಂದಿಸಿಕೊಳ್ಳಿ. ಇದರರ್ಥ ನೀವು ಹಣ ಖರ್ಚು ಮಾಡೋ ವಿಧಾನವನ್ನ ಬದಲಾವಣೆ ಮಾಡಬೇಕಾಗಬಹುದು. ಇರೋ ಹಣವನ್ನೇ ಚೆನ್ನಾಗಿ ಯೋಚಿಸಿ ಬಳಸಬೇಕಾಗುತ್ತೆ. ಅನಾವಶ್ಯಕ ಸಾಲಗಳಿಗೆ ಬಲಿಯಾಗೋಕೆ ಹೋಗಬೇಡಿ.—ಜ್ಞಾನೋಕ್ತಿ 22:7.

   ಇರೋ ಹಣವನ್ನೇ ಚೆನ್ನಾಗಿ ಹೇಗೆ ಬಳಸಿಕೊಳ್ಳಬಹುದು ಅಂತ ತಿಳಿದುಕೊಳ್ಳೋಕೆ “ಕಮ್ಮಿ ಕಾಸಲ್ಲಿ ಬಂಪರ್‌ ಬದುಕು” ಅನ್ನೋ ಲೇಖನ ನೋಡಿ.

 •   ನಿಮ್ಮ ಸಮಯವನ್ನ ವಿವೇಚನೆಯಿಂದ ಬಳಸಿ

   ಬೈಬಲ್‌ ಏನು ಹೇಳುತ್ತೆ: “ವಿವೇಕದಿಂದ ನಡ್ಕೊಳ್ಳಿ. ನಿಮಗಿರೋ ಸಮಯವನ್ನ ಮುಖ್ಯ ವಿಷ್ಯಗಳಿಗೆ ಬಳಸಿ.”—ಕೊಲೊಸ್ಸೆ 4:5.

   ನೀವು ಇನ್ಮುಂದೆ ಕೆಲಸಕ್ಕೆ ಹೋಗದೆ ಇದ್ರೂ, ನಿಮ್ಮ ಸಮಯವನ್ನ ಹೇಗೆ ಬಳಸ್ತೀರಿ ಅನ್ನೋದ್ರ ಬಗ್ಗೆ ಒಂದು ವೇಳಾಪಟ್ಟಿ ಇಟ್ಕೊಳ್ಳಿ. ಹಾಗೆ ಮಾಡೋದಾದ್ರೆ ನೀವು ಬೇಕಾಬಿಟ್ಟಿ ಜೀವನ ಮಾಡ್ತಾ ಇಲ್ಲ ಅಂತ ತೋರಿಸಿಕೊಡ್ತೀರ ಮತ್ತು ನಿಮ್ಮ ಬಗ್ಗೆ ನಿಮಗೇ ಖುಷಿಯಾಗುತ್ತೆ.

 •   ಎಲ್ಲದಕ್ಕೂ ಹೊಂದ್ಕೊಂಡು ಹೋಗಿ.

   ಬೈಬಲ್‌ ಏನು ಹೇಳುತ್ತೆ: “ಕಷ್ಟಪಟ್ಟು ಮಾಡೋ ಪ್ರತಿಯೊಂದು ಕೆಲಸದಲ್ಲಿ ಪ್ರಯೋಜನ ಇರುತ್ತೆ.”—ಜ್ಞಾನೋಕ್ತಿ 14:23.

   ನೀವು ಮೊದಲು ಮಾಡಿದ್ದ ಕೆಲಸಕ್ಕಿಂತ ಬೇರೆನೇ ಕೆಲಸ ಸಿಕ್ಕರೂ ಅದನ್ನ ಮಾಡೋಕೆ ರೆಡಿ ಇರಿ. ಈ ಹಿಂದೆ ನೀವು ಕೀಳಾಗಿ ನೆನಸ್ತಿದ್ದ ಕೆಲಸಗಳನ್ನ ಅಥವಾ ಮುಂಚಿನ ಕೆಲಸಕ್ಕಿಂತ ಕಮ್ಮಿ ಸಂಬಳ ಕೊಡೋ ಕೆಲಸಗಳನ್ನ ಕೂಡ ಟ್ರೈ ಮಾಡಿ ನೋಡಿ.

 •   ಪ್ರಯತ್ನ ಬಿಡಬೇಡಿ.

   ಬೈಬಲ್‌ ಏನು ಹೇಳುತ್ತೆ: “ಬೆಳಿಗ್ಗೆ ಬೀಜ ಬಿತ್ತೋಕೆ ಶುರು ಮಾಡು, ಸಂಜೆ ತನಕ ಬಿತ್ತೋದನ್ನ ನಿಲ್ಲಿಸಬೇಡ. ಬಿತ್ತಿದ ಬೀಜದಲ್ಲಿ ಯಾವುದು ಮೊಳಕೆ ಒಡೆದು ಬೆಳೆಯುತ್ತೆ . . .  ನಿಂಗೊತ್ತಿಲ್ಲ.”—ಪ್ರಸಂಗಿ 11:6.

   ಕೆಲಸ ಹುಡುಕ್ತಾ ಇರಿ. ನೀವು ಕೆಲಸ ಹುಡುಕ್ತಾ ಇದ್ದೀರ ಅಂತ ಬೇರೆಯವರಿಗೂ ಹೇಳಿ. ಸಂಬಂಧಿಕರು, ಪರಿಚಯಸ್ಥರು, ಈ ಮುಂಚೆ ನಿಮ್ಮ ಜೊತೆ ಕೆಲಸ ಮಾಡಿದವರು, ಮತ್ತು ನೆರೆಹೊರೆಯವರು ಹೀಗೆ ಎಲ್ಲರ ಜೊತೆ ಮಾತಾಡಿ. ಕೆಲಸ ಕೊಡಿಸೋ ಏಜೆನ್ಸಿಗಳಿಗೆ ಕೇಳಿ, ಕೆಲಸಗಾರರು ಬೇಕಾಗಿದ್ದಾರೆ ಅನ್ನೋ ಜಾಹೀರಾತುಗಳನ್ನ ಗಮನಿಸಿ ಮತ್ತು ಉದ್ಯೋಗ ಅವಕಾಶ ಇರುವಂಥ ಕಂಪನಿ ವೆಬ್‌ಸೈಟ್‌ಗಳನ್ನ ನೋಡಿ. ಯಾವುದಾದ್ರೂ ಕೆಲಸ ಸಿಗಬೇಕಂದ್ರೆ ನಾವು ಸಾಕಷ್ಟು ಇಂಟರ್‌ವ್ಯೂಗಳಿಗೆ ಹೋಗಬೇಕಾಗುತ್ತೆ ಮತ್ತು ಸಾಕಷ್ಟು ಕಡೆ ಬಯೋಡೇಟಾ ಕೊಡಬೇಕಾಗುತ್ತೆ ಅನ್ನೋದನ್ನ ಮನಸ್ಸಲ್ಲಿಡಿ.