ಎರಡನೇ ಪೂರ್ವಕಾಲವೃತ್ತಾಂತ 4:1-22
4 ಸೊಲೊಮೋನ 20 ಮೊಳ ಉದ್ದ, 20 ಮೊಳ ಅಗಲ ಮತ್ತು 10 ಮೊಳ ಎತ್ತರದ ತಾಮ್ರದ ಯಜ್ಞವೇದಿನ ಮಾಡಿಸಿದ.+
2 ಅವನು ಅಚ್ಚಲ್ಲಿ ತಾಮ್ರ ಹೊಯ್ದು ಪಾತ್ರೆ ಮಾಡಿದ. ಅದನ್ನ “ಸಮುದ್ರ”*+ ಅಂತ ಕರೀತಿದ್ರು. ಅದು ವೃತ್ತಾಕಾರದಲ್ಲಿತ್ತು. ಅದ್ರ ಅಂಚಿಂದ ಅಂಚಿಗೆ 10 ಮೊಳ ಅಗಲ, 5 ಮೊಳ ಎತ್ರ ಇತ್ತು. ಅದ್ರ ಸುತ್ತಳತೆ 30 ಮೊಳ ಇತ್ತು.+
3 ಪಾತ್ರೆಯ ಕೆಳಗೆ ಸುತ್ತಲೂ ಎರಡು ಸಾಲು ದುಂಡಗಿನ ಆಕಾರದ ಅಲಂಕಾರ ಮಾಡಿದ್ರು.+ ಒಂದೊಂದು ಮೊಳಕ್ಕೆ ಹತ್ತತ್ತು ದುಂಡಗಿನ ಆಕಾರದ ಅಲಂಕಾರಗಳನ್ನ ಮಾಡಿದ್ರು. ಆ ಪಾತ್ರೆನ ಅಚ್ಚಲ್ಲಿ ಹೊಯ್ದಾಗಲೇ ಈ ದುಂಡಗಿನ ಆಕಾರಗಳನ್ನೂ ಅಚ್ಚಲ್ಲಿ ಹೊಯ್ದಿದ್ರು.
4 ಆ ಪಾತ್ರೆನ ತಾಮ್ರದ 12 ಹೋರಿಗಳ+ ಮೇಲೆ ಇಟ್ರು. 3 ಹೋರಿ ಉತ್ತರಕ್ಕೆ, 3 ಹೋರಿ ಪಶ್ಚಿಮಕ್ಕೆ, 3 ಹೋರಿ ದಕ್ಷಿಣಕ್ಕೆ ಮತ್ತು 3 ಹೋರಿ ಪೂರ್ವಕ್ಕೆ ಮುಖ ಮಾಡಿದ್ವು. ಆ ಎಲ್ಲ ಹೋರಿಗಳ ಹಿಂಭಾಗ ಒಳಗಡೆಗೆ ಇತ್ತು. ಅವುಗಳ ಬೆನ್ನಿನ ಮೇಲೆ ಆ ತಾಮ್ರದ ಪಾತ್ರೆ ಇತ್ತು.
5 ಆ ಪಾತ್ರೆ ನಾಲ್ಕು ಬೆರಳಿನಷ್ಟು* ದಪ್ಪ ಇತ್ತು. ಅದ್ರ ಅಂಚು ಲೋಟದ ಅಂಚಿನ ತರ ಇತ್ತು. ನೋಡೋಕೆ ಅದು ಅರಳಿದ ಲಿಲಿ ಹೂವಿನ ತರ ಇತ್ತು. ಅದ್ರಲ್ಲಿ 3,000 ಬತ್* ಅಳತೆ ನೀರು ಹಿಡೀತಿತ್ತು.
6 ಆಮೇಲೆ ಅವನು ತೊಳೆಯೋಕೆ ಹತ್ತು ಬೋಗುಣಿ ಮಾಡಿಸಿ ಐದು ಬೋಗುಣಿನ ಬಲಗಡೆಗೆ ಐದು ಬೋಗುಣಿನ ಎಡಗಡೆಗೆ ಇಟ್ಟ.+ ಪುರೋಹಿತರು ಅವುಗಳಲ್ಲಿ ಸರ್ವಾಂಗಹೋಮ ಬಲಿಗಾಗಿ+ ಬಳಸ್ತಿದ್ದ ವಸ್ತುಗಳನ್ನ ತೊಳೀತಿದ್ರು. ಆದ್ರೆ “ಸಮುದ್ರ” ಪಾತ್ರೆಯಲ್ಲಿರೋ ನೀರಿಂದ ಪುರೋಹಿತರು ತಮ್ಮ ಕೈಕಾಲನ್ನ ತೊಳಕೊಳ್ತಿದ್ರು.+
7 ಅವನು ನಿರ್ದೇಶನದ ಪ್ರಕಾರ+ ಚಿನ್ನದ ಹತ್ತು ದೀಪಸ್ತಂಭಗಳನ್ನ+ ಮಾಡಿಸಿದ. ಅದ್ರಲ್ಲಿ ಐದನ್ನ ಬಲಗಡೆಗೆ, ಐದನ್ನ ಎಡಗಡೆಗೆ ಆಲಯದ ಒಳಗೆ ಇಟ್ಟ.+
8 ಜೊತೆಗೆ ಅವನು ಹತ್ತು ಮೇಜನ್ನೂ ಮಾಡಿಸಿದ. ಅದ್ರಲ್ಲಿ ಐದನ್ನ ಬಲಗಡೆಗೆ, ಐದನ್ನ ಎಡಗಡೆಗೆ ಆಲಯದ ಒಳಗೆ ಇಟ್ಟ.+ 100 ಚಿನ್ನದ ಬಟ್ಟಲು ಮಾಡಿಸಿದ.
9 ಆಮೇಲೆ ಅವನು ಪುರೋಹಿತರ+ ಅಂಗಳವನ್ನ,+ ಮಹಾ ಅಂಗಳವನ್ನ+ ಮತ್ತು ಅದಕ್ಕೆ ಬಾಗಿಲುಗಳನ್ನ ಮಾಡಿಸಿದ. ಆ ಬಾಗಿಲುಗಳಿಗೆ ತಾಮ್ರದ ತಗಡನ್ನ ಹೊದಿಸಿದ.
10 “ಸಮುದ್ರ” ಪಾತ್ರೆನ ಆಲಯದ ಬಲಕ್ಕೆ ಅಂದ್ರೆ ದಕ್ಷಿಣ-ಪೂರ್ವಕ್ಕೆ ಇಟ್ಟ.+
11 ಹೀರಾಮ ಹಂಡೆ, ಸಲಿಕೆ, ಬಟ್ಟಲುಗಳನ್ನೂ ಮಾಡಿದ.+
ಹೀಗೆ ಹೀರಾಮ ಸತ್ಯ ದೇವರ ಆಲಯ ಕಟ್ಟೋದರ ಬಗ್ಗೆ ರಾಜ ಸೊಲೊಮೋನ ಹೇಳಿದ ಎಲ್ಲ ಕೆಲಸಗಳನ್ನ ಮಾಡಿಮುಗಿಸಿದ.+
12 ಎರಡು ಕಂಬ,+ ಎರಡು ಕಂಬದ ಮೇಲಿನ ಬಟ್ಟಲಿನ ಆಕಾರದ ಎರಡು ಕಿರೀಟ ಮತ್ತು ಆ ಎರಡು ಕಿರೀಟ ಅಲಂಕರಿಸೋಕೆ ಎರಡೆರಡು ಜಾಲರಿ+ ಆಕಾರದ ಕೆತ್ತನೆಗಳನ್ನ ಮಾಡಿದ.
13 ಕಂಬಗಳ ಮೇಲಿನ ಬಟ್ಟಲಿನ ಆಕಾರದ ಎರಡು ಕಿರೀಟಗಳನ್ನ ಮುಚ್ಚೋಕೆ ಜಾಲರಿ ಆಕಾರದ ಕೆತ್ತನೆ ಮೇಲೆ ತಾಮ್ರದ 400 ದಾಳಿಂಬೆಗಳನ್ನ+ ಮಾಡಿದ. ಪ್ರತಿಯೊಂದು ಜಾಲರಿ ಆಕಾರದ ಮೇಲೆ ಎರಡು ಸಾಲು ದಾಳಿಂಬೆಗಳನ್ನ ಮಾಡಿದ.+
14 ಹತ್ತು ಬೋಗುಣಿ ಮತ್ತು ಅವನ್ನ ತಗೊಂಡು ಹೋಗೋಕೆ ಹತ್ತು ಬಂಡಿಗಳನ್ನ* ಮಾಡಿದ.+
15 ‘ಸಮುದ್ರ’ ಮತ್ತು ಅದ್ರ ಕೆಳಗಿನ 12 ಹೋರಿಗಳನ್ನ ಮಾಡಿದ.+
16 ಹಂಡೆ, ಸಲಿಕೆ, ಕವಲುಗೋಲು+ ಮತ್ತು ಎಲ್ಲ ಪಾತ್ರೆಗಳನ್ನ ಮಾಡಿದ. ರಾಜ ಸೊಲೊಮೋನ ಹೇಳಿದ ಹಾಗೇ ಹೂರಾಮಾಬೀ+ ಯೆಹೋವನ ಆಲಯಕ್ಕಾಗಿ ಇವೆಲ್ಲವನ್ನ ಹೊಳೀತಿದ್ದ ತಾಮ್ರದಿಂದ ತಯಾರು ಮಾಡಿದ.
17 ರಾಜ ಇವೆಲ್ಲವನ್ನ ಯೋರ್ದನ್ ಜಿಲ್ಲೆಗಳಾದ ಸುಕ್ಕೋತ್+ ಮತ್ತು ಚೆರೇದದ ಮಧ್ಯದಲ್ಲಿರೋ ಜೇಡಿಮಣ್ಣಿಂದ ಮಾಡಿರೋ ಅಚ್ಚಿನಲ್ಲಿ ಹೊಯ್ಯಿಸಿ ಮಾಡಿಸಿದ.
18 ಸೊಲೊಮೋನ ತುಂಬ ಪಾತ್ರೆಗಳನ್ನ ಮಾಡಿಸಿದ. ಅವೆಲ್ಲ ಮಾಡೋಕೆ ಎಷ್ಟು ತಾಮ್ರ ಹಿಡಿತು ಅಂತ ಗೊತ್ತಾಗಲಿಲ್ಲ.+
19 ಸೊಲೊಮೋನ ಸತ್ಯ ದೇವರ ಆಲಯಕ್ಕಾಗಿ ಮಾಡಿಸಿದ ಪಾತ್ರೆಗಳು+ ಯಾವೆಂದ್ರೆ: ಚಿನ್ನದ ಯಜ್ಞವೇದಿ,+ ಅರ್ಪಣೆಯ ರೊಟ್ಟಿ+ ಇಡೋಕೆ ಮೇಜುಗಳು,+
20 ನಿಯಮದ ಪ್ರಕಾರ ಅತಿ ಪವಿತ್ರ ಸ್ಥಳದ ಮುಂದೆ ದೀಪಗಳನ್ನು ಹಚ್ಚಿ ಇಡೋಕೆ ಶುದ್ಧ ಚಿನ್ನದಿಂದ ಮಾಡಿಸಿದ ದೀಪಸ್ತಂಭಗಳು ಮತ್ತು ಅವುಗಳ ದೀಪಗಳು,+
21 ಶುದ್ಧ ಚಿನ್ನದಿಂದ ಮಾಡಿಸಿದ ಅರಳಿದ ಹೂವುಗಳು, ದೀಪಗಳು ಮತ್ತು ಚಿಮುಟಗಳು,*
22 ಶುದ್ಧ ಚಿನ್ನದಿಂದ ಮಾಡಿಸಿದ ದೀಪಶಾಮಕಗಳು, ಬಟ್ಟಲುಗಳು, ಲೋಟಗಳು ಮತ್ತು ಕೆಂಡ ಹಾಕೋ ಪಾತ್ರೆಗಳು. ಅವನು ಅತಿ ಪವಿತ್ರ ಸ್ಥಳಕ್ಕಿದ್ದ ಬಾಗಿಲುಗಳನ್ನ+ ಮತ್ತು ಆಲಯದ ಬಾಗಿಲುಗಳನ್ನ ಚಿನ್ನದಿಂದ ಮಾಡಿಸಿದ.+
ಪಾದಟಿಪ್ಪಣಿ
^ ಅಥವಾ “ಜಲಾಶಯ.”
^ ಅಥವಾ “ಕೈ ಅಗಲದಷ್ಟು.” ಸುಮಾರು 7.4 ಸೆಂ.ಮೀ. ಪರಿಶಿಷ್ಟ ಬಿ14 ನೋಡಿ.
^ ಒಂದು ಬತ್=22 ಲೀ. ಪರಿಶಿಷ್ಟ ಬಿ14 ನೋಡಿ.
^ ಅಥವಾ “ನೀರಿನ ಗಾಡಿಗಳನ್ನ.”
^ ಅಥವಾ “ದೀಪಶಾಮಕಗಳು.”