ಒಂದನೇ ಸಮುವೇಲ 3:1-21

  • ಸಮುವೇಲನ ನೇಮಕ (1-21)

3  ಬಾಲಕ ಸಮುವೇಲ ಏಲಿಯ ಮೇಲ್ವಿಚಾರಣೆ ಕೆಳಗೆ ಯೆಹೋವನ ಸೇವೆ ಮಾಡ್ತಿದ್ದ.+ ಆ ದಿನಗಳಲ್ಲಿ ಯೆಹೋವನಿಂದ ಬರ್ತಿದ್ದ ಮಾತುಗಳು ಕಡಿಮೆ ಆಗಿತ್ತು, ದರ್ಶನಗಳು*+ ಅಪರೂಪವಾಗಿದ್ವು.  ಒಂದಿನ ಏಲಿ ತನ್ನ ಕೋಣೆಯಲ್ಲಿ ಮಲಗಿದ್ದ. ಅವನ ಕಣ್ಣು ಮಂಜಾಗಿತ್ತು, ಏನೂ ಕಾಣಿಸ್ತಿರಲಿಲ್ಲ.+  ದೇವರ ದೀಪ+ ಇನ್ನೂ ಉರೀತಾ ಇತ್ತು. ಯೆಹೋವನ ಆಲಯದಲ್ಲಿ*+ ಸಮುವೇಲ ಮಲ್ಕೊಂಡಿದ್ದ. ಅಲ್ಲಿ ದೇವರ ಮಂಜೂಷ ಇತ್ತು.  ಆಗ ಯೆಹೋವ ಸಮುವೇಲನನ್ನ ಕರೆದನು. ಅದಕ್ಕೆ ಅವನು “ಬಂದೆ” ಅಂದ.  ಏಲಿ ಹತ್ರ ಓಡಿ ಹೋಗಿ “ಸ್ವಾಮಿ, ನನ್ನನ್ನ ಕರೆದ್ರಾ?” ಅಂತ ಕೇಳಿದ. ಅದಕ್ಕೆ ಏಲಿ “ನಾನು ಕರೀಲಿಲ್ಲ. ಹೋಗಿ ಮಲ್ಕೊ” ಅಂದ. ಅವನು ಹೋಗಿ ಮಲಗಿದ.  ಯೆಹೋವ ಮತ್ತೆ “ಸಮುವೇಲ!” ಅಂತ ಕರೆದಾಗ ಸಮುವೇಲ ಎದ್ದು ಏಲಿ ಹತ್ರ ಹೋಗಿ “ಸ್ವಾಮಿ, ನನ್ನನ್ನ ಕರೆದ್ರಾ?” ಅಂತ ಕೇಳಿದ. ಆದ್ರೆ ಏಲಿ “ನಾನು ಕರೀಲಿಲ್ಲ ಮಗನೇ, ಹೋಗಿ ಮಲ್ಕೊ” ಅಂದ.  (ಅಲ್ಲಿ ತನಕ ಸಮುವೇಲ ಯೆಹೋವನನ್ನ ಪೂರ್ತಿ ತಿಳ್ಕೊಂಡಿರಲಿಲ್ಲ. ಅವನು ಯೆಹೋವನ ಸಂದೇಶ ಪಡ್ಕೊಂಡಿರಲಿಲ್ಲ.)+  ಯೆಹೋವ ಮೂರನೇ ಸಲ “ಸಮುವೇಲ!” ಅಂತ ಕರೆದಾಗ ಸಮುವೇಲ ಎದ್ದು ಏಲಿ ಹತ್ರ ಹೋಗಿ “ಸ್ವಾಮಿ, ನನ್ನನ್ನ ಕರೆದ್ರಾ?” ಅಂತ ಕೇಳಿದ. ಹುಡುಗನನ್ನ ಕರೀತಾ ಇರೋದು ಯೆಹೋವನೇ ಅಂತ ಏಲಿಗೆ ಗೊತ್ತಾಯ್ತು.  ಅದಕ್ಕೇ ಸಮುವೇಲನಿಗೆ ಹೀಗಂದ: “ಹೋಗಿ ಮಲ್ಕೊ. ಮತ್ತೆ ನಿನ್ನನ್ನ ಕರೆದ್ರೆ ‘ಹೇಳು ಯೆಹೋವನೇ, ನಿನ್ನ ಸೇವಕ ಕೇಳ್ತಿದ್ದಾನೆ’ ಅಂತ ಹೇಳು.” ಸಮುವೇಲ ಹೋಗಿ ಮಲ್ಕೊಂಡ. 10  ಯೆಹೋವ ಇನ್ನೊಂದು ಸಲ ಅಲ್ಲಿ ಬಂದು ಈ ಮುಂಚಿನ ತರಾನೇ “ಸಮುವೇಲ, ಸಮುವೇಲ!” ಅಂತ ಕರೆದನು. ಸಮುವೇಲ “ದಯವಿಟ್ಟು ಹೇಳು, ನಿನ್ನ ಸೇವಕ ಕೇಳ್ತಿದ್ದಾನೆ” ಅಂದ. 11  ಆಗ ಯೆಹೋವ “ನೋಡು! ನಾನು ಇಸ್ರಾಯೇಲಲ್ಲಿ ಒಂದು ಕೆಲಸ ಮಾಡ್ತೀನಿ. ಅದನ್ನ ಕೇಳಿಸ್ಕೊಳ್ಳುವವನ ಎರಡೂ ಕಿವಿಗಳು ಗುಂಯ್‌ ಗುಟ್ಟುತ್ತೆ.+ 12  ನಾನು ಮೊದಲಿಂದ ಕೊನೇ ತನಕ ಏಲಿ ಬಗ್ಗೆ, ಅವನ ಮನೆ ಬಗ್ಗೆ ಏನೆಲ್ಲಾ ಹೇಳಿದ್ದೀನೋ ಅದನ್ನೆಲ್ಲ ಆ ದಿನ ನಡಿಸ್ತೀನಿ.+ 13  ಏಲಿಗೆ ಅವನ ಮಕ್ಕಳು ದೇವ್ರನ್ನ ಅವಮಾನ ಮಾಡಿದ+ ವಿಷ್ಯ ಗೊತ್ತಿದ್ರೂ+ ಅವ್ರಿಗೆ ಶಿಕ್ಷೆ ಕೊಡಲಿಲ್ಲ.+ ಆ ತಪ್ಪಿನ ಪರಿಣಾಮವನ್ನ ಅವನ ಮನೆಯವರು ಶಾಶ್ವತವಾಗಿ ಅನುಭವಿಸಬೇಕಾಗುತ್ತೆ. ನೀನು ಅವನಿಗೆ ಈ ವಿಷ್ಯ ಹೇಳಬೇಕು. 14  ಏನೇ ಬಲಿ ಅಥವಾ ಅರ್ಪಣೆ ಕೊಟ್ರೂ ಏಲಿ ಮನೆಯವರು ಮಾಡಿದ ತಪ್ಪನ್ನ ಯಾವತ್ತೂ ಸರಿ ಮಾಡೋಕೆ ಆಗಲ್ಲ ಅಂತ ಅವನ ಮನೆಯವ್ರಿಗೆ ಆಣೆ ಮಾಡಿದ್ದೀನಿ.”+ 15  ಆಮೇಲೆ ಸಮುವೇಲ ಮಲ್ಕೊಂಡ. ಬೆಳಿಗ್ಗೆ ಎದ್ದು ಯೆಹೋವನ ಆಲಯದ ಬಾಗಿಲು ತೆಗೆದ. ಅವನು ನೋಡಿದ ದರ್ಶನದ ಬಗ್ಗೆ ಏಲಿ ಹತ್ರ ಹೇಳೋಕೆ ಸಮುವೇಲನಿಗೆ ಭಯ ಆಯ್ತು. 16  ಆದ್ರೆ ಏಲಿ “ಕಂದಾ, ಸಮುವೇಲ!” ಅಂತ ಅವನನ್ನ ಕರೆದ. ಅದಕ್ಕೆ ಅವನು “ಬಂದೆ” ಅಂದ. 17  ಆಗ ಏಲಿ “ದೇವರು ನಿನಗೆ ಯಾವ ಸಂದೇಶ ಕೊಟ್ಟನು? ದಯವಿಟ್ಟು ಅದನ್ನ ಹೇಳು, ನನ್ನಿಂದ ಮುಚ್ಚಿಡಬೇಡ. ಆತನು ಹೇಳಿದ್ರಲ್ಲಿ ನೀನು ಒಂದು ಮಾತು ಮುಚ್ಚಿಟ್ರೂ ದೇವರು ನಿನಗೆ ಶಿಕ್ಷೆ ಕೊಡ್ತಾನೆ” ಅಂದ. 18  ಅದಕ್ಕೆ ಸಮುವೇಲ ಏನೂ ಮುಚ್ಚಿಡದೆ ಎಲ್ಲಾನೂ ಏಲಿಗೆ ಹೇಳಿದ. ಆಗ ಏಲಿ “ಆ ಸಂದೇಶ ಬಂದಿರೋದು ಯೆಹೋವನಿಂದ. ಆತನ ದೃಷ್ಟಿಯಲ್ಲಿ ಯಾವುದು ಸರಿನೋ ಅದನ್ನೇ ಆತನು ಮಾಡ್ಲಿ” ಅಂದ. 19  ಸಮುವೇಲ ದೊಡ್ಡವನಾಗ್ತಾ ಹೋದ. ಯೆಹೋವನೇ ಅವನ ಜೊತೆ ಇದ್ದು,+ ಸಮುವೇಲನ ಎಲ್ಲಾ ಮಾತು ತಪ್ಪದೇ ನೆರವೇರೋ ತರ ನೋಡ್ಕೊಂಡನು. 20  ದಾನಿನಿಂದ ಬೇರ್ಷೆಬದ ತನಕ ಇದ್ದ ಎಲ್ಲ ಇಸ್ರಾಯೇಲ್ಯರಿಗೆ ಸಮುವೇಲ ಯೆಹೋವನ ಪ್ರವಾದಿ ಅಂತ ಗೊತ್ತಾಯ್ತು. 21  ಯೆಹೋವ ಶೀಲೋನಲ್ಲಿ ಕಾಣಿಸ್ಕೊಳ್ತಾ ಇದ್ದನು. ಹೀಗೆ ಶೀಲೋನಲ್ಲಿ ತನ್ನ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋಕೆ ಯೆಹೋವನೇ ಸಮುವೇಲನಿಗೆ ಸಹಾಯ ಮಾಡಿದನು. ತನ್ನ ಸಂದೇಶದ ಮೂಲಕ ಯೆಹೋವ ಹೀಗೆ ಮಾಡಿದನು.+

ಪಾದಟಿಪ್ಪಣಿ

ಅದು, ಪವಿತ್ರ ಡೇರೆ.