ಒಂದನೇ ಸಮುವೇಲ 20:1-42

  • ಯೋನಾತಾನನಿಗೆ ದಾವೀದನ ಮೇಲಿದ ಪ್ರೀತಿ (1-42)

20  ಆಮೇಲೆ ದಾವೀದ ರಾಮದಲ್ಲಿದ್ದ ನಯೋತಿಂದ ಓಡಿಹೋದ. ಆದ್ರೆ ಅವನು ಯೋನಾತಾನನ ಹತ್ರ ಬಂದು “ನಾನೇನು ಮಾಡ್ದೆ?+ ನನ್ನ ತಪ್ಪೇನು? ನಿನ್ನ ತಂದೆಗೆ ನಾನೇನು ಮಾಡ್ದೆ ಅಂತ ನನ್ನ ಪ್ರಾಣ ತೆಗಿಬೇಕಂತಿದ್ದಾನೆ?” ಅಂತ ಕೇಳಿದ.  ಅದಕ್ಕೆ ಯೋನಾತಾನ “ಹಾಗೇನೂ ಆಗಲ್ಲ!+ ಯಾರೂ ನಿನ್ನನ್ನ ಸಾಯಿಸಲ್ಲ. ನೋಡು! ವಿಷ್ಯ ಚಿಕ್ಕದಾಗಿರಲಿ ದೊಡ್ಡದಾಗಿರಲಿ ನನ್ನಿಂದ ತಂದೆ ಏನನ್ನೂ ಮುಚ್ಚಿಡಲ್ಲ. ಹಾಗಂದ್ಮೇಲೆ ಈ ವಿಷ್ಯ ನನ್ನಿಂದ ಯಾಕೆ ಮುಚ್ಚಿಡ್ತಾನೆ? ಅವನು ನಿನ್ನನ್ನ ಕೊಲ್ಲಲ್ಲ” ಅಂದ.  ಅದಕ್ಕೆ ದಾವೀದ “ನಾನು ನಿನ್ನ ಸ್ನೇಹಿತ ಅಂತ ನಿನ್ನ ತಂದೆಗೆ ಚೆನ್ನಾಗಿ ಗೊತ್ತು.+ ಹಾಗಾಗಿ ಅವನು ‘ಯೋನಾತಾನನಿಗೆ ಗೊತ್ತಾಗೋದು ಬೇಡ, ಗೊತ್ತಾದ್ರೆ ಬೇಜಾರು ಮಾಡ್ಕೊತಾನೆ’ ಅಂತ ನೆನಸಿರಬಹುದು. ಆದ್ರೆ ಜೀವ ಇರೋ ದೇವರಾಗಿರೋ ಯೆಹೋವನ ಆಣೆ ಮತ್ತು ನಿನ್ನ ಆಣೆ ನನ್ನ ಸಾವು ಹತ್ರ ಇದೆ”+ ಅಂದ.  ಆಗ ಯೋನಾತಾನ ದಾವೀದನಿಗೆ “ಹೇಳು ನಾನೇನು ಮಾಡಬೇಕು. ನೀನು ಏನೇ ಹೇಳಿದ್ರೂ ನಿನಗೋಸ್ಕರ ಅದನ್ನ ಮಾಡ್ತೀನಿ” ಅಂದ.  ಅದಕ್ಕೆ ದಾವೀದ ಯೋನಾತಾನನಿಗೆ “ನಾಳೆ ಅಮಾವಾಸ್ಯೆ+ ಆಗಿರೋದ್ರಿಂದ ನಾನು ರಾಜನ ಜೊತೆ ಕೂತು ಊಟ ಮಾಡಬೇಕು. ಆದ್ರೆ ನೀನು ನನಗೆ ಅನುಮತಿ ಕೊಟ್ರೆ ಇಲ್ಲಿಂದ ಹೋಗಿ ನಾಡಿದ್ದು ಸಾಯಂಕಾಲದ ತನಕ ಹೊಲದಲ್ಲೇ ಅಡಗಿಕೊಳ್ತೀನಿ.  ನಿನ್ನ ತಂದೆ ನನ್ನ ಬಗ್ಗೆ ವಿಚಾರಿಸಿದ್ರೆ ‘ದಾವೀದ ತನ್ನ ಊರಾದ ಬೆತ್ಲೆಹೇಮಿಗೆ+ ಹೋದ. ಬೇಗ ಹೋಗಿ ಬರ್ತಿನಿ ಅಂತ ನನ್ನ ಹತ್ರ ಅನುಮತಿ ಕೇಳಿದ. ಅಲ್ಲಿ ಅವನ ಕುಟುಂಬಕ್ಕೋಸ್ಕರ ವಾರ್ಷಿಕ ಬಲಿ ಕೊಡಬೇಕಂತೆ’+ ಅಂತ ಹೇಳು.  ಆಗ ಅವನು ‘ಹೌದಾ, ಪರ್ವಾಗಿಲ್ಲ’ ಅಂತ ಹೇಳಿದ್ರೆ ನಿನ್ನ ಸೇವಕನಾದ ನನಗೆ ಏನೂ ಅಪಾಯ ಇಲ್ಲ ಅಂತರ್ಥ. ಆದ್ರೆ ಅವನು ಸಿಟ್ಟು ಮಾಡ್ಕೊಂಡ್ರೆ ನನಗೆ ಹಾನಿ ಮಾಡೋಕೆ ಅವನು ತೀರ್ಮಾನ ಮಾಡಿದ್ದಾನೆ ಅಂತರ್ಥ.  ನೀನು ಈ ನಿನ್ನ ಸೇವಕನಾದ ನನ್ನ ಜೊತೆ ಯೆಹೋವನ ಮುಂದೆ ಒಪ್ಪಂದ ಮಾಡ್ಕೊಂಡಿದ್ದೀಯ.+ ಹಾಗಾಗಿ ನನಗೆ ಶಾಶ್ವತ ಪ್ರೀತಿ ತೋರಿಸು.+ ನಾನೇನಾದ್ರೂ ತಪ್ಪು ಮಾಡಿದ್ರೆ+ ನಿನ್ನ ತಂದೆಗೆ ನನ್ನ ಒಪ್ಪಿಸದೆ ನೀನೇ ನನ್ನನ್ನ ಸಾಯಿಸಿಬಿಡು” ಅಂದ.  ಅದಕ್ಕೆ ಯೋನಾತಾನ “ಆ ರೀತಿ ಯೋಚಿಸಬೇಡ! ನನ್ನ ತಂದೆ ನಿನಗೆ ಹಾನಿ ಮಾಡೋ ಉಪಾಯ ಮಾಡ್ತಿದ್ದಾನೆ ಅಂತ ಗೊತ್ತಾದ್ರೆ ನಿನಗೆ ಹೇಳದೆ ಇರ್ತಿನಾ?”+ ಅಂದ. 10  ದಾವೀದ ಯೋನಾತಾನನಿಗೆ “ನಿನ್ನ ತಂದೆ ಕಟುವಾಗಿ ಉತ್ತರ ಕೊಟ್ನಾ ಇಲ್ವಾ ಅಂತ ಯಾರು ನನಗೆ ಹೇಳ್ತಾರೆ?” ಅಂತ ಕೇಳಿದ. 11  ಆಗ ಯೋನಾತಾನ ದಾವೀದನಿಗೆ “ಹೊಲದ ಕಡೆ ಹೋಗೋಣ ಬಾ” ಅಂದ. ಅವರಿಬ್ರೂ ಹೊಲದ ಕಡೆ ಹೋದ್ರು. 12  ಆಮೇಲೆ ಯೋನಾತಾನ ದಾವೀದನಿಗೆ “ನಾನು ಇದ್ರ ಬಗ್ಗೆ ನನ್ನ ತಂದೆ ಮನಸ್ಸಲ್ಲಿ ಏನಿದೆ ಅಂತ ನಾಳೆ ಅಥವಾ ನಾಡಿದ್ದು ಇಷ್ಟು ಹೊತ್ತಿಗೆ ತಿಳ್ಕೊಳ್ತೀನಿ. ಇದಕ್ಕೆ ಇಸ್ರಾಯೇಲ್‌ ದೇವರಾದ ಯೆಹೋವನೇ ಸಾಕ್ಷಿ ಆಗಿರಲಿ. ಅವನಿಗೆ ನಿನ್ನ ಮೇಲೆ ಕೋಪ ಇಲ್ಲ ಅಂತ ಗೊತ್ತಾದ್ರೆ ಖಂಡಿತ ನಿನಗೆ ಹೇಳ್ತೀನಿ. 13  ನನ್ನ ತಂದೆ ನಿನಗೆ ಹಾನಿ ಮಾಡಬೇಕಂತ ಇದ್ದಾನೆ ಅಂತ ನನಗೆ ಗೊತ್ತಿದ್ರೂ ನಾನು ನಿನಗೆ ಹೇಳದಿದ್ರೆ, ನಿನ್ನನ್ನ ಸಮಾಧಾನದಿಂದ ಕಳಿಸದಿದ್ರೆ ಆ ಹಾನಿಯನ್ನ ಅಥವಾ ಅದಕ್ಕಿಂತ ಹೆಚ್ಚಿನದ್ದನ್ನ ಯೆಹೋವ ನನಗೆ ಮಾಡ್ಲಿ. ನನ್ನ ತಂದೆ ಜೊತೆ ಇದ್ದ ಹಾಗೇ+ ಯೆಹೋವ ನಿನ್ನ ಜೊತೆನೂ ಇರಲಿ.+ 14  ನಾನು ಬದುಕಿರುವಾಗ್ಲೂ, ಸತ್ತ ಮೇಲೂ ಯೆಹೋವನ ಶಾಶ್ವತ ಪ್ರೀತಿಯನ್ನ ನೀನು ನನಗೆ ತೋರಿಸು.+ 15  ನಿನ್ನ* ಶತ್ರುಗಳನ್ನೆಲ್ಲ ಭೂಮಿ ಮೇಲಿಂದ ಯೆಹೋವ ಶಾಶ್ವತವಾಗಿ ಅಳಿಸಿಹಾಕಿದ್ರೂ ನಿನ್ನ ಶಾಶ್ವತ ಪ್ರೀತಿಯನ್ನ ನನ್ನ ಕುಟುಂಬದವ್ರಿಗೆ ತೋರಿಸ್ತಾ ಇರು”+ ಅಂದ. 16  ಯೋನಾತಾನ ದಾವೀದನ ಮನೆತನದ ಜೊತೆ ಒಪ್ಪಂದ ಮಾಡ್ಕೊಂಡು “ಯೆಹೋವ ದಾವೀದನ ಶತ್ರುಗಳ ಹತ್ರ ಲೆಕ್ಕ ಕೇಳಲಿ” ಅಂದ. 17  ಯೋನಾತಾನ ದಾವೀದನನ್ನ ತನ್ನ ಪ್ರಾಣದಷ್ಟೇ ಪ್ರೀತಿಸ್ತಾ ಇದ್ದಿದ್ರಿಂದ+ ಆ ಪ್ರೀತಿಯ ಸಾಕ್ಷಿಯಾಗಿ ದಾವೀದನಿಂದ ಮತ್ತೆ ಆಣೆ ಮಾಡಿಸಿದ. 18  ಆಮೇಲೆ ಯೋನಾತಾನ “ನಾಳೆ ಅಮಾವಾಸ್ಯೆ.+ ಹಾಗಾಗಿ ನನ್ನ ತಂದೆ ನಿನಗಾಗಿ ಹುಡುಕ್ತಾನೆ. ಯಾಕಂದ್ರೆ ನೀನು ಕೂತ್ಕೊಳ್ಳೋ ಜಾಗ ಖಾಲಿ ಇರುತ್ತೆ. 19  ನಾಡಿದ್ದಂತೂ ಖಂಡಿತ ನಿನ್ನ ಬಗ್ಗೆ ವಿಚಾರಿಸ್ತಾನೆ. ನೀನು ಆ ದಿನ* ಅಡಗಿಕೊಂಡಿದ್ದ ಇದೇ ಸ್ಥಳಕ್ಕೆ ಬಂದು ಈ ಕಲ್ಲಿನ ಹತ್ರ ಇರಬೇಕು. 20  ನಾನು ಗುರಿ ಇಟ್ಟು ಹೊಡಿತಿದ್ದೀನಿ ಅನ್ನೋ ತರ ಕಲ್ಲಿನ ಒಂದು ಕಡೆ ಮೂರು ಬಾಣಗಳನ್ನ ಹೊಡಿತೀನಿ. 21  ನಾನು ನನ್ನ ಸೇವಕನನ್ನ ಕಳಿಸಿ ಅವನಿಗೆ ‘ಹೋಗು, ಬಾಣಗಳನ್ನ ಹುಡುಕು’ ಅಂತ ಹೇಳ್ತೀನಿ. ನಾನು ಸೇವಕನಿಗೆ ‘ನೋಡು, ಬಾಣಗಳು ನಿನ್ನ ಪಕ್ಕದಲ್ಲಿ ಬಿದ್ದಿವೆ, ಅವುಗಳನ್ನ ತಗೊಂಡು ಬಾ’ ಅಂದ್ರೆ ನೀನು ವಾಪಸ್‌ ಬರಬಹುದು. ಯಾಕಂದ್ರೆ ಜೀವ ಇರೋ ದೇವರಾದ ಯೆಹೋವನಾಣೆ, ನನ್ನ ಮಾತಿನ ಅರ್ಥ ನಿನಗೆ ಎಲ್ಲದ್ರಲ್ಲೂ ಸಮಾಧಾನ ಇರುತ್ತೆ. ಯಾವುದೇ ಅಪಾಯ ಇಲ್ಲ. 22  ನಾನು ಅವನಿಗೆ ‘ನೋಡು! ಬಾಣಗಳು ನಿನ್ನ ಮುಂದೆ ಬಿದ್ದಿವೆ’ ಅಂದ್ರೆ ನೀನು ಹೋಗು. ಯಾಕಂದ್ರೆ ಅದು ಯೆಹೋವನ ಇಷ್ಟ ಆಗಿರಬಹುದು. 23  ನಾನು ಮತ್ತು ನೀನು ಮಾಡ್ಕೊಂಡಿರೋ ಒಪ್ಪಂದಕ್ಕೆ+ ಯೆಹೋವನೇ ಸದಾಕಾಲ ಸಾಕ್ಷಿ ಆಗಿರಲಿ”+ ಅಂದ. 24  ಹಾಗಾಗಿ ದಾವೀದ ಹೊಲದಲ್ಲಿ ಅಡಗಿಕೊಂಡ. ಅಮಾವಾಸ್ಯೆ ಬಂದಾಗ ರಾಜ ಊಟ ಮಾಡೋಕೆ ಕೂತ.+ 25  ರಾಜ ಯಾವಾಗ್ಲೂ ಗೋಡೆ ಪಕ್ಕದಲ್ಲೇ ಕೂತ್ಕೊಳ್ತಿದ್ದ. ಯೋನಾತಾನ ಅವನ ಮುಂದೆ ಕೂತ್ಕೊಂಡ ಮತ್ತು ಅಬ್ನೇರ+ ಸೌಲನ ಪಕ್ಕಕ್ಕೆ ಕೂತ್ಕೊಂಡ. ಆದ್ರೆ ದಾವೀದನ ಕೂತ್ಕೊಳ್ಳೋ ಜಾಗ ಖಾಲಿ ಇತ್ತು. 26  ಆ ದಿನ ಸೌಲ ಏನೂ ಹೇಳಲಿಲ್ಲ. ಅವನು ತನ್ನ ಮನಸ್ಸಲ್ಲಿ ‘ಏನೋ ಆಗಿ ಅವನು ತನ್ನನ್ನ ಶುದ್ಧ ಮಾಡ್ಕೊಂಡಿರದೆ ಇರ್ಬಹುದು.+ ಅದಕ್ಕೆ ಬಂದಿಲ್ಲ’ ಅಂತ ನೆನಸಿದ. 27  ಅಮಾವಾಸ್ಯೆಯ ಮಾರನೇ ದಿನ ಕೂಡ ದಾವೀದ ಕೂತ್ಕೊಳ್ಳೋ ಜಾಗ ಖಾಲಿ ಇತ್ತು. ಆಗ ಸೌಲ ತನ್ನ ಮಗ ಯೋನಾತಾನನಿಗೆ “ಇಷಯನ ಮಗ+ ನಿನ್ನೆನೂ ಊಟಕ್ಕೆ ಬರಲಿಲ್ಲ, ಇವತ್ತೂ ಬರಲಿಲ್ಲ. ಏನಾಯ್ತು?” ಅಂತ ಕೇಳಿದ. 28  ಯೋನಾತಾನ ಸೌಲನಿಗೆ “ಅವನು ಬೆತ್ಲೆಹೇಮಿಗೆ+ ಹೋಗಿದ್ದಾನೆ. ಅವನು ನನ್ನ ಹತ್ರ ಅನುಮತಿ ಕೇಳಿದ್ದ. 29  ಅವನು ನನಗೆ ‘ದಯವಿಟ್ಟು ಹೋಗೋಕೆ ಅನುಮತಿ ಕೊಡು. ಪಟ್ಟಣದಲ್ಲಿ ನನ್ನ ಕುಟುಂಬ ಬಲಿ ಅರ್ಪಿಸಬೇಕಾಗಿದೆ. ನನ್ನ ಅಣ್ಣ ಕರೆದಿದ್ದಾನೆ. ನೀನು ಅನುಮತಿ ಕೊಟ್ರೆ ನಾನು ಬೇಗ ಹೋಗಿ ಅಣ್ಣಂದಿರನ್ನ ನೋಡ್ಕೊಂಡು ಬರ್ತೀನಿ’ ಅಂದ. ಹಾಗಾಗಿ ಅವನು ರಾಜನ ಮೇಜಿಗೆ ಬರಲಿಲ್ಲ” ಅಂದ. 30  ಆಗ ಸೌಲನಿಗೆ ಯೋನಾತಾನನ ಮೇಲೆ ತುಂಬ ಕೋಪ ಬಂತು. ಅವನು ಯೋನಾತಾನನಿಗೆ “ಮೊಂಡು ಸ್ತ್ರೀಯ ಮಗನೇ! ನಿನಗೂ ಮರ್ಯಾದೆ ಇಲ್ಲ, ನಿನ್ನ ತಾಯಿಗೂ* ಮರ್ಯಾದೆ ಇಲ್ಲ. ನೀನು ಇಷಯನ ಮಗನ ಪಕ್ಷ ವಹಿಸ್ತಿರೋದು ನನಗೆ ಗೊತ್ತಿಲ್ಲ ಅಂದ್ಕೊಂಡಿದ್ದೀಯಾ? 31  ಇಷಯನ ಮಗ ಈ ಭೂಮಿ ಮೇಲೆ ಜೀವಂತವಾಗಿರೋ ತನಕ ನೀನು ರಾಜನಾಗಲ್ಲ, ನಿನ್ನ ರಾಜ್ಯಾಭಾರ ಉಳಿಯಲ್ಲ.+ ಹಾಗಾಗಿ ಯಾರನ್ನಾದ್ರೂ ಕಳಿಸಿ ಅವನನ್ನ ನನ್ನ ಹತ್ರ ಕರ್ಕೊಂಡು ಬಾ. ಅವನು ಸಾಯ್ಲೇಬೇಕು”*+ ಅಂದ. 32  ಹಾಗಿದ್ರೂ ಯೋನಾತಾನ ತನ್ನ ತಂದೆ ಸೌಲನಿಗೆ “ಅವನನ್ನ ಯಾಕೆ ಸಾಯಿಸಬೇಕು?+ ಅವನೇನು ಮಾಡಿದ್ದಾನೆ?” ಅಂತ ಕೇಳಿದ. 33  ಆಗ ಸೌಲ ಯೋನಾತಾನನ ಕಡೆ ಈಟಿ ಜೋರಾಗಿ ಎಸೆದ.+ ಆಗ ಯೋನಾತಾನನಿಗೆ ದಾವೀದನನ್ನ ತನ್ನ ತಂದೆ ಸಾಯಿಸ್ಲೇಬೇಕು ಅಂತ ತೀರ್ಮಾನ ಮಾಡಿದ್ದಾನೆ ಅಂತ ಗೊತ್ತಾಯ್ತು.+ 34  ತಕ್ಷಣ ಕೋಪದಿಂದ ಯೋನಾತಾನ ಮೇಜಿಂದ ಎದ್ದ. ಆ ದಿನ ಅವನು ಏನೂ ತಿನ್ನಲಿಲ್ಲ. ಯಾಕಂದ್ರೆ ಅವನಿಗೆ ತುಂಬ ಬೇಜಾರು ಆಗಿತ್ತು.+ ದಾವೀದನಿಗೆ ತಂದೆ ಅವಮಾನ ಮಾಡಿದ್ರಿಂದ ಅವನಿಗೆ ನೋವಾಯ್ತು. 35  ಕೊಟ್ಟ ಮಾತಿನ ಪ್ರಕಾರ ಯೋನಾತಾನ ಬೆಳಿಗ್ಗೆ ತನ್ನ ಸೇವಕನ ಜೊತೆ ದಾವೀದನನ್ನ ಭೇಟಿ ಮಾಡೋಕೆ ಹೊಲಕ್ಕೆ ಹೋದ.+ 36  ಅವನು ತನ್ನ ಸೇವಕನಿಗೆ “ದಯವಿಟ್ಟು ಓಡಿಹೋಗಿ ನಾನು ಬಿಟ್ಟ ಬಾಣಗಳನ್ನ ಹುಡುಕು” ಅಂದ. ಆಗ ಸೇವಕ ಓಡಿದ. ಯೋನಾತಾನ ಅವನ ಮುಂದಕ್ಕೆ ಬಾಣ ಬಿಟ್ಟ. 37  ಯೋನಾತಾನ ಬಾಣ ಬಿಟ್ಟ ಸ್ಥಳಕ್ಕೆ, ಸೇವಕ ತಲುಪಿದಾಗ ಯೋನಾತಾನ ಅವನನ್ನ ಕೂಗಿ “ಬಾಣ ನಿನ್ನ ಮುಂದೆನೇ ಬಿದ್ದಿದೆಯಲ್ವಾ?” ಅಂದ. 38  ಯೋನಾತಾನ ಸೇವಕನನ್ನ ಕೂಗಿ “ಬೇಗ! ಬೇಗ ಹೋಗು! ತಡಮಾಡಬೇಡ!” ಅಂದ. ಆಗ ಯೋನಾತಾನನ ಸೇವಕ ಬಾಣಗಳನ್ನ ಎತ್ಕೊಂಡು ವಾಪಸ್‌ ತನ್ನ ಯಜಮಾನನ ಹತ್ರ ಬಂದ. 39  ಏನು ನಡಿತಿದೆ ಅಂತ ಸೇವಕನಿಗೆ ಅರ್ಥ ಆಗಲಿಲ್ಲ. ಯೋನಾತಾನನಿಗೆ, ದಾವೀದನಿಗೆ ಮಾತ್ರ ಅದ್ರ ಅರ್ಥ ಏನಂತ ಗೊತ್ತಿತ್ತು. 40  ಆಮೇಲೆ ಯೋನಾತಾನ ಆಯುಧಗಳನ್ನ ತನ್ನ ಸೇವಕನಿಗೆ ಕೊಟ್ಟು “ಇದನ್ನ ಪಟ್ಟಣಕ್ಕೆ ತಗೊಂಡು ಹೋಗು” ಅಂದ. 41  ಸೇವಕ ಹೋದ್ಮೇಲೆ ದಾವೀದ ದಕ್ಷಿಣಕ್ಕೆ ಹತ್ರ ಇದ್ದ ಸ್ಥಳದಿಂದ ಎದ್ದುಬಂದು ಮಂಡಿಯೂರಿ ನೆಲದ ತನಕ ಬಗ್ಗಿ ಮೂರು ಸಾರಿ ನಮಸ್ಕಾರ ಮಾಡಿದ. ಆಮೇಲೆ ಅವರು ಒಬ್ರಿಗೊಬ್ರು ಮುತ್ತು ಕೊಟ್ಟು ಒಬ್ರಿಗೋಸ್ಕರ ಒಬ್ರು ತುಂಬ ಅತ್ರು. ಅದ್ರಲ್ಲೂ ದಾವೀದ ತುಂಬ ಅತ್ತ. 42  ಯೋನಾತಾನ ದಾವೀದನಿಗೆ “ನಾವಿಬ್ರೂ ಯೆಹೋವನ ಹೆಸ್ರಲ್ಲಿ ‘ನನ್ನ ನಿನ್ನ ಮಧ್ಯ ಮತ್ತು ನನ್ನ ಸಂತತಿಯ ನಿನ್ನ ಸಂತತಿಯ ಮಧ್ಯ ಯೆಹೋವ ಸದಾಕಾಲ ಇರಲಿ’+ ಅಂತ ಆಣೆ ಮಾಡಿರೋದ್ರಿಂದ+ ನೀನು ಸಮಾಧಾನದಿಂದ ಹೋಗು” ಅಂದ. ಆಮೇಲೆ ದಾವೀದ ಹೊರಟು ಹೋದ, ಯೋನಾತಾನ ಪಟ್ಟಣಕ್ಕೆ ವಾಪಸ್‌ ಬಂದ.

ಪಾದಟಿಪ್ಪಣಿ

ಅಕ್ಷ. “ದಾವೀದನ.”
ಅಕ್ಷ. “ಕೆಲಸದ ದಿನ.”
ಅಕ್ಷ. “ನಿನ್ನ ತಾಯಿಯ ಬೆತ್ತೆಲೆತನಕ್ಕೂ ಮರ್ಯಾದೆ ಇಲ್ಲ.”
ಅಕ್ಷ. “ಅವನು ಸಾವಿನ ಮಗ.”