ಒಂದನೇ ಅರಸು 21:1-29
21 ಇದಾದ್ಮೇಲೆ ಇಜ್ರೇಲಿನ ನಾಬೋತನಿಗೆ ಸೇರಿದ ದ್ರಾಕ್ಷಿ ತೋಟಕ್ಕೆ ಸಂಬಂಧಿಸಿದ ಒಂದು ಘಟನೆ ನಡೀತು. ಆ ತೋಟ ಇಜ್ರೇಲಿನಲ್ಲಿ+ ಸಮಾರ್ಯದ ರಾಜ ಅಹಾಬನ ಅರಮನೆಯ ಪಕ್ಕದಲ್ಲಿತ್ತು.
2 ಅಹಾಬ ನಾಬೋತನಿಗೆ “ನಿನ್ನ ದ್ರಾಕ್ಷಿ ತೋಟ ನನಗೆ ಕೊಡು. ಅದು ನನ್ನ ಅರಮನೆ ಹತ್ರ ಇರೋದ್ರಿಂದ ನಾನು ಅದ್ರಲ್ಲಿ ತರಕಾರಿ ಬೆಳಿತೀನಿ. ಅದಕ್ಕೆ ಬದಲಾಗಿ ನಾನು ನಿನಗೆ ಇನ್ನೂ ಒಳ್ಳೇ ದ್ರಾಕ್ಷಿ ತೋಟ ಕೊಡ್ತೀನಿ. ಇಲ್ಲಾಂದ್ರೆ ಆ ತೋಟಕ್ಕೆ ಎಷ್ಟು ಹಣ ಕೊಡಬೇಕು ಅಂತ ಹೇಳು ನಾನು ಕೊಡ್ತೀನಿ” ಅಂದ.
3 ಆದ್ರೆ ನಾಬೋತ ಅಹಾಬನಿಗೆ “ನನ್ನ ಪೂರ್ವಜರಿಂದ ಸಿಕ್ಕಿರೋ ಈ ಆಸ್ತಿನ ನಾನು ನಿನಗೆ ಕೊಡೋದ್ರ ಬಗ್ಗೆ ಯೋಚ್ನೆ ಮಾಡಕ್ಕೂ ನನ್ನಿಂದ ಆಗಲ್ಲ. ಯಾಕಂದ್ರೆ ಯೆಹೋವನ ದೃಷ್ಟಿಯಲ್ಲಿ ಅದು ತಪ್ಪು”+ ಅಂದ.
4 ನಾಬೋತ “ನನ್ನ ಪೂರ್ವಜರಿಂದ ಸಿಕ್ಕಿರೋ ಈ ಆಸ್ತಿನ ನಾನು ಕೊಡಲ್ಲ” ಅಂತ ಹೇಳಿದ್ದನ್ನ ಕೇಳಿ ಅಹಾಬನಿಗೆ ತುಂಬ ಬೇಜಾರಾಯ್ತು. ಅವನು ಮುಖ ಸಪ್ಪಗೆ ಮಾಡ್ಕೊಂಡು ಅರಮನೆಗೆ ವಾಪಸ್ ಹೋದ. ಊಟ ಬಿಟ್ಟು ಮುಖ ತಿರುಗಿಸ್ಕೊಂಡು ಮಂಚದ ಮೇಲೆ ಮಲ್ಕೊಂಡ.
5 ಆಗ ಅವನ ಹೆಂಡತಿ ಈಜೆಬೇಲ್+ ಬಂದು “ಯಾಕೆ ಊಟ ಮಾಡದೆ ಬೇಜಾರಾಗಿ ಇದ್ದೀಯ?” ಅಂತ ಕೇಳಿದಳು.
6 ಆಗ ಅವನು “ನಾನು ಇಜ್ರೇಲಿನ ನಾಬೋತನಿಗೆ ‘ನಿನ್ನ ದ್ರಾಕ್ಷಿ ತೋಟ ಕೊಡು. ನಾನು ನಿನಗೆ ಹಣ ಕೊಡ್ತೀನಿ. ಇಲ್ಲಾಂದ್ರೆ ಅದಕ್ಕೆ ಬದ್ಲು ನಾನು ನಿನಗೆ ಇನ್ನೊಂದು ದ್ರಾಕ್ಷಿ ತೋಟ ಕೊಡ್ತೀನಿ’ ಅಂತ ಹೇಳಿದೆ. ಆದ್ರೆ ಅವನು ‘ನಾನು ನನ್ನ ದ್ರಾಕ್ಷಿ ತೋಟ ಕೊಡಲ್ಲ’ ಅಂತ ಹೇಳಿದ” ಅಂದ.
7 ಆಗ ಅಹಾಬನ ಹೆಂಡತಿ ಈಜೆಬೇಲ್ ಅವನಿಗೆ “ನೀನು ಇಡೀ ಇಸ್ರಾಯೇಲನ್ನ ಆಳೋ ರಾಜ ತಾನೇ? ಎದ್ದೇಳು, ಊಟಮಾಡು. ಖುಷಿಯಾಗಿರು. ಇಜ್ರೇಲಿನ ನಾಬೋತನ ದ್ರಾಕ್ಷಿ ತೋಟನ ನಾನು ನಿನಗೆ ಕೊಡಿಸ್ತೀನಿ”+ ಅಂದಳು.
8 ಅವಳು ಅಹಾಬನ ಹೆಸ್ರಲ್ಲಿ ಪತ್ರಗಳನ್ನ ಬರೆದು, ಅದಕ್ಕೆ ಅವನ ಮುದ್ರೆ ಹಾಕಿ+ ನಾಬೋತನ ಪಟ್ಟಣದಲ್ಲಿರೋ ಹಿರಿಯರಿಗೆ+ ಮತ್ತು ಪ್ರಧಾನರಿಗೆ ಅವುಗಳನ್ನ ಕಳಿಸಿದಳು.
9 ಅವಳು ಆ ಪತ್ರಗಳಲ್ಲಿ “ಎಲ್ರಿಗೂ ಉಪವಾಸ ಮಾಡೋಕೆ ಹೇಳಿ. ನಾಬೋತನನ್ನ ಎಲ್ಲ ಜನ್ರ ಮುಂದೆ ಕೂರಿಸಿ.
10 ಆಮೇಲೆ ಇಬ್ರು ಕೆಲಸಕ್ಕೆ ಬಾರದ ಗಂಡಸ್ರನ್ನ ಅವನ ಮುಂದೆ ಕೂರಿಸಿ ‘ನೀನು ದೇವರ ಮೇಲೆ ಮತ್ತು ರಾಜನ ಮೇಲೆ ಶಾಪ ಹಾಕಿದ್ದೀಯ!’+ ಅಂತ ಅವನ ವಿರುದ್ಧ ಸುಳ್ಳು ಸಾಕ್ಷಿ ಹೇಳಿಸಿ.+ ಆಮೇಲೆ ಅವನನ್ನ ಹೊರಗೆ ಕರ್ಕೊಂಡು ಹೋಗಿ ಕಲ್ಲು ಹೊಡಿದು ಸಾಯಿಸಿ”+ ಅಂತ ಬರೆದಿದ್ದಳು.
11 ಹಾಗಾಗಿ ನಾಬೋತನ ಪಟ್ಟಣದ ಗಂಡಸ್ರು, ಹಿರಿಯರು ಮತ್ತು ಪ್ರಧಾನರು ಈಜೆಬೇಲ್ ಕಳಿಸಿದ್ದ ಆ ಪತ್ರಗಳಲ್ಲಿ ಇದ್ದ ಹಾಗೇ ಮಾಡಿದ್ರು.
12 ಅವರು ಉಪವಾಸ ಪ್ರಕಟಿಸಿದ್ರು. ನಾಬೋತನನ್ನ ಎಲ್ಲ ಜನ್ರ ಮುಂದೆ ಕೂರಿಸಿದ್ರು.
13 ಅವನ ಮುಂದೆ ಇಬ್ರು ಅಯೋಗ್ಯ ಗಂಡಸ್ರು ಕೂತು, “ನೀನು ದೇವರ ಮೇಲೆ ಮತ್ತು ರಾಜನ ಮೇಲೆ ಶಾಪ ಹಾಕಿದ್ದೀಯ!” ಅಂತ ಅವನ ವಿರುದ್ಧ ಸಾಕ್ಷಿ ಹೇಳಿದ್ರು.+ ಆಮೇಲೆ ಅವನನ್ನ ಪಟ್ಟಣದ ಹೊರಗೆ ಕರ್ಕೊಂಡು ಬಂದು ಕಲ್ಲು ಹೊಡೆದು ಸಾಯಿಸಿದ್ರು.+
14 ಆಮೇಲೆ ಅವರು ಈಜೆಬೇಲಳಿಗೆ “ನಾಬೋತನನ್ನ ಕಲ್ಲು ಹೊಡೆದು ಸಾಯಿಸಿದ್ರು”+ ಅನ್ನೋ ಸಂದೇಶ ಕಳಿಸಿದ್ರು.
15 ನಾಬೋತನನ್ನ ಕಲ್ಲು ಹೊಡೆದು ಸಾಯಿಸಿದ ಸುದ್ದಿ ಈಜೆಬೇಲ್ ಕೇಳಿಸ್ಕೊಂಡ ತಕ್ಷಣ ಅವಳು ಅಹಾಬಗೆ “ನೀನು ಹಣ ಕೊಟ್ರೂ ತೋಟ ಕೊಡಲ್ಲ ಅಂತ ಇಜ್ರೇಲಿನ ನಾಬೋತ ಹೇಳಿದ್ನಲ್ಲಾ, ಆ ದ್ರಾಕ್ಷಿ ತೋಟವನ್ನ ಈಗ ಹೋಗಿ ತಗೊ.+ ಯಾಕಂದ್ರೆ ಅವನೀಗ ಸತ್ತು ಹೋಗಿದ್ದಾನೆ” ಅಂದಳು.
16 ನಾಬೋತ ಸತ್ತು ಹೋಗಿದ್ದಾನೆ ಅಂತ ಅಹಾಬ ಕೇಳಿಸ್ಕೊಂಡ ತಕ್ಷಣ ಎದ್ದು ಇಜ್ರೇಲಿನ ನಾಬೋತನ ದ್ರಾಕ್ಷಿ ತೋಟವನ್ನ ವಶ ಮಾಡ್ಕೊಳ್ಳೋಕೆ ಹೋದ.
17 ಆದ್ರೆ ತಿಷ್ಬೀಯನಾದ ಎಲೀಯನಿಗೆ+ ಯೆಹೋವನ ಈ ಸಂದೇಶ ಬಂತು:
18 “ನೀನು ಹೋಗಿ ಸಮಾರ್ಯದಲ್ಲಿರುವ+ ಇಸ್ರಾಯೇಲ್ ರಾಜ ಅಹಾಬನನ್ನ ಭೇಟಿ ಮಾಡು. ಅವನು ನಾಬೋತನ ದ್ರಾಕ್ಷಿ ತೋಟದಲ್ಲಿದ್ದಾನೆ. ಅವನು ಅದನ್ನ ವಶ ಮಾಡ್ಕೊಳ್ಳೋಕೆ ಹೋಗಿದ್ದಾನೆ.
19 ನೀನು ಅವನಿಗೆ ‘ಯೆಹೋವ ಹೀಗೆ ಹೇಳಿದ್ದಾನೆ: “ನೀನು ಒಬ್ಬನನ್ನ ಸಾಯಿಸಿ+ ಅವನ ಆಸ್ತಿಯನ್ನೂ ತಗೊಂಡ್ಯಾ?”+ ಅಂತ ಕೇಳು.’ ಆಮೇಲೆ ಅವನಿಗೆ ‘ನಾಯಿಗಳು ನಾಬೋತನ ರಕ್ತವನ್ನ ನೆಕ್ಕಿದ ಸ್ಥಳದಲ್ಲೇ ನಿನ್ನ ರಕ್ತವನ್ನೂ ನೆಕ್ಕುತ್ತೆ’ ಅಂತ ಯೆಹೋವ ಅಂದಿದ್ದಾನೆ”+ ಅಂತ ಹೇಳು.
20 ಆಗ ಅಹಾಬ ಎಲೀಯನಿಗೆ “ನನ್ನ ಶತ್ರು!+ ನೀನು ನನ್ನ ತಪ್ಪನ್ನ ಕಂಡುಹಿಡಿದುಬಿಟ್ಟಿಯಾ?” ಅಂತ ಕೇಳಿದ. ಅದಕ್ಕೆ ಎಲೀಯ “ಹೌದು, ನಾನು ಕಂಡುಹಿಡಿದೆ. ದೇವರು ನಿನಗೆ ಹೀಗೆ ಹೇಳಿದ್ದಾನೆ: ‘ನೀನು ಯೆಹೋವನಾದ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನ ಮಾಡಬೇಕು ಅಂತ ತೀರ್ಮಾನ ಮಾಡಿರೋದ್ರಿಂದ,*+
21 ನಾನು ನಿನ್ನ ಮೇಲೆ ಕಷ್ಟ ತರ್ತೀನಿ. ಇಸ್ರಾಯೇಲಿನ ನಿಸ್ಸಹಾಯಕರನ್ನ, ಬಲಹೀನರನ್ನ ಸೇರಿಸಿ ನಿನ್ನ ಮನೆಯಲ್ಲಿರೋ ಎಲ್ಲ ಗಂಡಸ್ರನ್ನ ನಾನು ನಾಶ ಮಾಡಿಬಿಡ್ತೀನಿ.+
22 ನೆಬಾಟನ ಮಗ ಯಾರೊಬ್ಬಾಮನ ಮನೆತನಕ್ಕೆ+ ಮತ್ತು ಅಹೀಯನ ಮಗ ಬಾಷನ ಮನೆತನಕ್ಕೆ ಬಂದ ಗತಿನೇ+ ನಿನ್ನ ಮನೆತನಕ್ಕೂ ಬರುತ್ತೆ. ಯಾಕಂದ್ರೆ ನೀನು ನನ್ನನ್ನ ರೇಗಿಸಿ, ಇಸ್ರಾಯೇಲ್ಯರು ಪಾಪ ಮಾಡೋ ತರ ಮಾಡ್ದೆ.’
23 ಈಜೆಬೇಲಳ ಬಗ್ಗೆ ಯೆಹೋವ ಹೀಗಂದನು: ‘ಇಜ್ರೇಲಿನ ಹೊಲದಲ್ಲಿ ಈಜೆಬೇಲಳ ಶವನ ನಾಯಿಗಳು ತಿಂದುಹಾಕುತ್ತೆ.+
24 ಅಹಾಬನಿಗೆ ಸೇರಿದವರು ಯಾರಾದ್ರೂ ಪಟ್ಟಣದಲ್ಲಿ ಸತ್ತರೆ ಅವ್ರನ್ನ ನಾಯಿಗಳು ತಿಂದು ಹಾಕುತ್ತೆ. ಯಾರಾದ್ರೂ ಹೊಲದಲ್ಲಿ ಸತ್ತರೆ ಅವ್ರನ್ನ ಆಕಾಶದ ಪಕ್ಷಿಗಳು ತಿನ್ನುತ್ತೆ.+
25 ಅವನ ಹೆಂಡತಿ ಈಜೆಬೇಲಳ ಮಾತನ್ನ ಕೇಳಿ+ ಯೆಹೋವನ ದೃಷ್ಟಿಯಲ್ಲಿ ಕೆಟ್ಟದನ್ನೇ ಮಾಡೋಕೆ ತೀರ್ಮಾನ ಮಾಡಿರೋ* ಅಹಾಬನ ತರ ಯಾರೂ ಇಲ್ಲ.+
26 ಯೆಹೋವ ಇಸ್ರಾಯೇಲ್ಯರಿಂದ ಓಡಿಸಿದ+ ಅಮೋರಿಯರು ಮಾಡಿದ ತರಾನೇ ಅಹಾಬ ಅಸಹ್ಯ ಮೂರ್ತಿಗಳ* ಹಿಂದೆ ಹೋಗಿ ಹೇಸಿಗೆ ಹುಟ್ಟಿಸೋ ಕೆಲಸ ಮಾಡಿದ’” ಅಂತ ಹೇಳಿದ.
27 ಅಹಾಬ ಈ ಮಾತನ್ನ ಕೇಳಿದ ತಕ್ಷಣ ಬಟ್ಟೆ ಹರ್ಕೊಂಡು ಗೋಣಿ ಸುತ್ಕೊಂಡ. ಉಪವಾಸ ಮಾಡ್ತಾ ಗೋಣಿ ಬಟ್ಟೆಯಲ್ಲೇ ನೆಲದ ಮೇಲೆ ಬಿದ್ಕೊಂಡಿದ್ದ ಮತ್ತು ಬೇಜಾರಿಂದ ಆಕಡೆ ಈಕಡೆ ತಿರುಗಾಡ್ತಿದ್ದ.
28 ಆಗ ತಿಷ್ಬೀಯನಾದ ಎಲೀಯನಿಗೆ ಯೆಹೋವನಿಂದ ಈ ಸಂದೇಶ ಬಂತು:
29 “ಅಹಾಬ ನನ್ನ ಮುಂದೆ ಹೇಗೆ ತಗ್ಗಿಸಿಕೊಂಡ ಅಂತ ನೀನು ನೋಡಿದ್ಯಾ?+ ಅವನು ನನ್ನ ಮುಂದೆ ತಗ್ಗಿಸ್ಕೊಂಡಿದ್ರಿಂದ ಅವನು ಬದುಕಿರೋ ತನಕ ನಾನು ಕಷ್ಟವನ್ನ ತರಲ್ಲ. ಅವನ ಮಗನ ಕಾಲದಲ್ಲಿ ಅವನ ಮನೆತನದ ಮೇಲೆ ಕಷ್ಟವನ್ನ ತರ್ತೀನಿ.”+
ಪಾದಟಿಪ್ಪಣಿ
^ ಅಕ್ಷ. “ನೀನು ನಿನ್ನನ್ನೇ ಮಾರಿದ್ರಿಂದ.”
^ ಅಕ್ಷ. “ತನ್ನನ್ನೇ ಮಾರಿಕೊಂಡಿರೋ.”
^ ಇದಕ್ಕೆ ಹೀಬ್ರು ಭಾಷೆಯಲ್ಲಿ ಬಳಸಿರೋ ಪದ “ಸಗಣಿ” ಅನ್ನೋದಕ್ಕೆ ಬಳಸಿರೋ ಪದಕ್ಕೆ ಸಂಬಂಧಿಸಿದೆ. ತುಂಬ ಅಸಹ್ಯ ಅಂತ ತೋರಿಸೋಕೆ ಈ ಪದ ಬಳಸಲಾಗಿದೆ.