ವಿಮೋಚನಕಾಂಡ 39:1-43

  • ಪುರೋಹಿತನ ಬಟ್ಟೆಯ ತಯಾರಿ (1)

  • ಏಫೋದ್‌ (2-7)

  • ಎದೆಪದಕ (8-21)

  • ತೋಳಿಲ್ಲದ ಅಂಗಿ (22-26)

  • ಬೇರೆ ಪುರೋಹಿತರ ಬಟ್ಟೆ (27-29)

  • ಚಿನ್ನದ ಫಲಕ (30, 31)

  • ಪವಿತ್ರ ಡೇರೆನ ಮೋಶೆ ಪರೀಕ್ಷಿಸಿದ್ದು (32-43)

39  ಆಮೇಲೆ ನಿಪುಣ ಕೆಲಸಗಾರರು ಆರಾಧನಾ ಸ್ಥಳದಲ್ಲಿ ಪುರೋಹಿತರು ಸೇವೆ ಮಾಡುವಾಗ ಹಾಕೊಳ್ಳೋಕೆ ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ನೂಲನ್ನ+ ಹೆಣೆದು ಒಳ್ಳೇ ಬಟ್ಟೆಗಳನ್ನ ಮಾಡಿದ್ರು. ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ಹಾಗೇ ಅವರು ಆರೋನನಿಗೆ ಪವಿತ್ರ ಬಟ್ಟೆಗಳನ್ನ ತಯಾರಿಸಿದ್ರು.+  ಬೆಚಲೇಲ ಚಿನ್ನ, ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ನೂಲು, ಹೊಸೆದ ಒಳ್ಳೇ ಗುಣಮಟ್ಟದ ನಾರಿನ ದಾರದಿಂದ ಏಫೋದನ್ನ+ ತಯಾರಿಸಿದ.  ಅವರು ಚಿನ್ನದ ತಗಡನ್ನ ಸುತ್ತಿಗೆಯಿಂದ ಬಡಿದು ತೆಳ್ಳಗಿನ ಹಾಳೆಗಳ ತರ ಮಾಡಿದ್ರು. ಬೆಚಲೇಲ ಆ ಹಾಳೆಗಳನ್ನ ಸಣ್ಣಸಣ್ಣ ಎಳೆಗಳಾಗಿ ಕತ್ತರಿಸಿ ಚಿನ್ನದ ನೂಲು ಮಾಡಿದ. ಅವನು ಆ ನೂಲನ್ನ ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ನೂಲು, ಒಳ್ಳೇ ಗುಣಮಟ್ಟದ ನಾರಿನ ದಾರದ ಜೊತೆ ಸೇರಿಸಿದ. ಇದನ್ನ ಬಳಸಿ ಏಫೋದಿನ ಮೇಲೆ ಕಸೂತಿ ಹಾಕಿದ್ರು.  ಅವರು ಏಫೋದಿಗೆ ಹೆಗಲಪಟ್ಟಿಗಳನ್ನ ಮಾಡಿ ಅದ್ರ ಅಂಚುಗಳನ್ನ ಒಂದಕ್ಕೊಂದು ಜೋಡಿಸಿದ್ರು.  ಏಫೋದನ್ನ ಗಟ್ಟಿಯಾಗಿ ಕಟ್ಟೋಕೆ ಅದಕ್ಕೆ ಸೊಂಟಪಟ್ಟಿ* ಹೊಲಿದ್ರು.+ ಅದನ್ನ ಸಹ ಚಿನ್ನ, ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ನೂಲು, ಹೊಸೆದ ಒಳ್ಳೇ ಗುಣಮಟ್ಟದ ನಾರಿನ ದಾರದಿಂದ ಮಾಡಿದ್ರು. ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ಹಾಗೇ ಅವರು ಮಾಡಿದ್ರು.  ಆಮೇಲೆ ಅವರು ಚಿನ್ನದ ಕುಂದಣಗಳಲ್ಲಿ ಗೋಮೇದಕ ರತ್ನಗಳನ್ನ ಕೂರಿಸಿದ್ರು. ಆ ರತ್ನಗಳಲ್ಲಿ ಇಸ್ರಾಯೇಲನ ಗಂಡುಮಕ್ಕಳ ಹೆಸರನ್ನ ಮುದ್ರೆ ಕೆತ್ತೋ ತರ ಕೆತ್ತಿದ್ರು.+  ಅವು ಇಸ್ರಾಯೇಲನ ಮಕ್ಕಳ ಸ್ಮಾರಕ ರತ್ನಗಳಾಗಿ ಇರೋ ಹಾಗೆ ಬೆಚಲೇಲ ಆ ರತ್ನಗಳನ್ನ ಏಫೋದಿನ ಹೆಗಲಪಟ್ಟಿಗಳ ಮೇಲೆ ಇಟ್ಟ.+ ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ಹಾಗೇ ಅವನು ಮಾಡಿದ.  ಆಮೇಲೆ ಏಫೋದನ್ನ ಮಾಡಿದ ತರಾನೇ ಚಿನ್ನ, ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ನೂಲು, ಹೊಸೆದ ಒಳ್ಳೇ ಗುಣಮಟ್ಟದ ನಾರಿನ ದಾರ ಬಳಸಿ ಕಸೂತಿ ಹಾಕಿ ಎದೆಪದಕ+ ಮಾಡಿದ.+  ಅದನ್ನ ಮಧ್ಯದಲ್ಲಿ ಮಡಚಿದಾಗ ಅದು ಚೌಕಾಕಾರ ಆಗಿತ್ತು. ಒಂದು ಗೇಣು* ಉದ್ದ, ಒಂದು ಗೇಣು ಅಗಲ ಇತ್ತು. 10  ಅವರು ಏಫೋದಲ್ಲಿ ರತ್ನಗಳನ್ನ ನಾಲ್ಕು ಸಾಲಾಗಿ ಕೂರಿಸಿದ್ರು. ಮೊದಲನೇ ಸಾಲಲ್ಲಿ ಮಾಣಿಕ್ಯ, ಪುಷ್ಯರಾಗ, ಪಚ್ಚೆ, 11  ಎರಡನೇ ಸಾಲಲ್ಲಿ ವೈಢೂರ್ಯ, ನೀಲಮಣಿ, ಸೂರ್ಯಕಾಂತ ಶಿಲೆ, 12  ಮೂರನೇ ಸಾಲಲ್ಲಿ ಲೆಷೆಮ್‌ ರತ್ನ,* ಅಗೇಟು, ಪದ್ಮರಾಗ, 13  ನಾಲ್ಕನೇ ಸಾಲಲ್ಲಿ ಕ್ರಿಸಲೈಟ್‌ ರತ್ನ, ಗೋಮೇದಕ ರತ್ನ, ಜೇಡ್‌ ರತ್ನ ಕೂರಿಸಿದ್ರು. ಈ ಎಲ್ಲ ರತ್ನಗಳನ್ನ ಚಿನ್ನದ ಕುಂದಣದಲ್ಲಿ ಕೂರಿಸಿದ್ರು. 14  ಇಸ್ರಾಯೇಲನ 12 ಮಕ್ಕಳಿಗೆ ಸರಿಯಾಗಿ ಆ 12 ರತ್ನ ಇಟ್ರು. ಪ್ರತಿಯೊಂದು ರತ್ನದ ಮೇಲೆ ಒಬ್ಬೊಬ್ಬನ ಹೆಸರನ್ನ ಮುದ್ರೆ ಕೆತ್ತೋ ತರ ಕೆತ್ತಿದ್ರು. ಒಂದೊಂದು ಹೆಸರು 12 ಕುಲಗಳಲ್ಲಿದ್ದ ಒಂದೊಂದು ಕುಲವನ್ನ ಸೂಚಿಸ್ತು. 15  ಆಮೇಲೆ ಅವರು ಹಗ್ಗದ ತರ ನೇಯ್ದಿರೋ ಸರಪಣಿಗಳನ್ನ ಶುದ್ಧ ಚಿನ್ನದಿಂದ ಮಾಡಿ ಎದೆಪದಕಕ್ಕೆ ಜೋಡಿಸಿದ್ರು.+ 16  ಆಮೇಲೆ ಚಿನ್ನದ ಎರಡು ಕುಂದಣಗಳನ್ನ ಮಾಡಿದ್ರು. ಚಿನ್ನದ ಎರಡು ಉಂಗುರಗಳನ್ನ ಮಾಡಿ ಎದೆಪದಕದ ಮೇಲೆ ಎರಡು ಮೂಲೆಗಳಿಗೆ ಜೋಡಿಸಿದ್ರು. 17  ಆಮೇಲೆ ಆ ಉಂಗುರಗಳಿಗೆ ಚಿನ್ನದ ಎರಡು ಹಗ್ಗಗಳನ್ನ ಸಿಕ್ಕಿಸಿದ್ರು. 18  ಆ ಎರಡು ಹಗ್ಗಗಳ ಎರಡು ತುದಿಗಳನ್ನ ಎರಡು ಕುಂದಣಗಳಿಗೆ ಸಿಕ್ಕಿಸಿದ್ರು. ಅವುಗಳನ್ನ ಏಫೋದಿನ ಮುಂದೆ ಹೆಗಲಪಟ್ಟಿಗಳಿಗೆ ಜೋಡಿಸಿದ್ರು. 19  ಆಮೇಲೆ ಅವರು ಚಿನ್ನದ ಎರಡು ಉಂಗುರಗಳನ್ನ ಮಾಡಿ ಏಫೋದಿನ ಮುಂದೆ ಇರೋ ಎದೆಪದಕದ ಒಳಗೆ ಕೆಳಗಿನ ಎರಡು ಮೂಲೆಗಳಲ್ಲಿ ಹಾಕಿದ್ರು.+ 20  ಅವರು ಇನ್ನೂ ಎರಡು ಚಿನ್ನದ ಉಂಗುರಗಳನ್ನ ಮಾಡಿದ್ರು. ಅವುಗಳನ್ನ ಏಫೋದಿನ ಮುಂದೆ ಅಂದ್ರೆ ಎರಡು ಹೆಗಲಪಟ್ಟಿಗಳ ಕೆಳಗೆ, ಸೊಂಟಪಟ್ಟಿ* ಏಫೋದಿಗೆ ಸೇರೋ ಸ್ಥಳದ ಮೇಲೆ ಹಾಕಿದ್ರು. 21  ಕೊನೆಗೆ ಅವರು ಎದೆಪದಕದ ಉಂಗುರಗಳಿಂದ ಏಫೋದಿನ ಉಂಗುರಗಳಿಗೆ ನೀಲಿ ಹಗ್ಗ ಹಾಕಿ ಕಟ್ಟಿದ್ರು. ಇದ್ರಿಂದ ಏಫೋದಿನ ಮೇಲೆ, ಸೊಂಟಪಟ್ಟಿ* ಮೇಲೆ ಎದೆಪದಕ ಬಿಗಿಯಾಗಿ ಇರ್ತಿತ್ತು. ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ಹಾಗೇ ಅವರು ಮಾಡಿದ್ರು. 22  ಆಮೇಲೆ ಏಫೋದಿನ ಒಳಗೆ ಹಾಕೋಕೆ ತೋಳಿಲ್ಲದ ಅಂಗಿಯನ್ನ ಬೆಚಲೇಲ ನೇಯ್ದ. ಅದನ್ನ ಪೂರ್ತಿ ನೀಲಿ ದಾರದಿಂದ ಮಾಡಿದ್ರು.+ 23  ಅಂಗಿಯಲ್ಲಿ ತಲೆ ತೂರಿಸೋಕೆ ಜಾಗ ಮಾಡಿದ. ಆ ಜಾಗ ಅಂದ್ರೆ ಕತ್ತಿನ ಸುತ್ತ ಅಂಚು ಮಾಡಿದ. ಆ ಅಂಚು ಹರಿದು ಹೋಗದೆ ಇರೋ ತರ ಅದನ್ನ ನೇಯ್ದ. ಅದು ಯುದ್ಧಕವಚದ ಕತ್ತಿನ ತರ ಇತ್ತು. 24  ಆಮೇಲೆ ಅವರು ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ನೂಲನ್ನ ಒಟ್ಟಿಗೆ ಹೊಸೆದು ಅದ್ರಿಂದ ದಾಳಿಂಬೆಗಳನ್ನ ಮಾಡಿ ಆ ಅಂಗಿ ಕೆಳಗೆ ಮಡಚಿದ ಅಂಚಿನ ಸುತ್ತ ಇಟ್ರು. 25  ಶುದ್ಧ ಚಿನ್ನದಿಂದ ಗಂಟೆಗಳನ್ನ ಮಾಡಿ ಅಂಗಿ ಕೆಳಗೆ ಮಡಚಿದ ಅಂಚಿನ ಸುತ್ತ ದಾಳಿಂಬೆಗಳ ಮಧ್ಯ ಇಟ್ರು.⁠ 26  ತೋಳಿಲ್ಲದ ಅಂಗಿ ಕೆಳಗಿನ ಮಡಚಿದ ಅಂಚಿನ ಸುತ್ತ ಒಂದೊಂದು ದಾಳಿಂಬೆ ಆದ್ಮೇಲೆ ಒಂದೊಂದು ಗಂಟೆ ಇಟ್ರು. ಪುರೋಹಿತನಾಗಿ ಸೇವೆ ಮಾಡೋನಿಗೆ ಆ ಅಂಗಿಯನ್ನ ಸಿದ್ಧಮಾಡಿದ್ರು. ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ಹಾಗೇ ಅವರು ಮಾಡಿದ್ರು. 27  ನೇಕಾರರು ನೇಯ್ದ ಒಳ್ಳೇ ಗುಣಮಟ್ಟದ ನಾರುಬಟ್ಟೆಯಿಂದ ಅವರು ಆರೋನನಿಗೆ, ಅವನ ಮಕ್ಕಳಿಗೆ ಉದ್ದ ಅಂಗಿಗಳನ್ನ ಮಾಡಿದ್ರು.+ 28  ಒಳ್ಳೇ ಗುಣಮಟ್ಟದ ನಾರುಬಟ್ಟೆಯಿಂದ ವಿಶೇಷ ಪೇಟ,+ ಅಲಂಕಾರಿಕ ಪೇಟಗಳನ್ನ,+ ಹೊಸೆದ ಒಳ್ಳೇ ಗುಣಮಟ್ಟದ ನಾರುಬಟ್ಟೆಯಿಂದ ಚಡ್ಡಿಗಳನ್ನ*+ ಮಾಡಿದ್ರು. 29  ಹೊಸೆದ ಒಳ್ಳೇ ಗುಣಮಟ್ಟದ ನಾರು, ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ನೂಲಿಂದ ನಡುಪಟ್ಟಿಗಳನ್ನೂ ಮಾಡಿದ್ರು. ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ಹಾಗೇ ಅವರು ಮಾಡಿದ್ರು. 30  ಕೊನೆಗೆ ಶುದ್ಧ ಚಿನ್ನದಿಂದ ಪಳಪಳ ಅಂತ ಹೊಳೆಯೋ ಫಲಕ ಮಾಡಿದ್ರು. ಇದು ಪವಿತ್ರ ಚಿಹ್ನೆ ಆಗಿತ್ತು.* ಆ ಫಲಕದ ಮೇಲೆ ಮುದ್ರೆ ಕೆತ್ತೋ ತರ “ಯೆಹೋವ ಪವಿತ್ರನು”* ಅಂತ ಕೆತ್ತಿದ್ರು.+ 31  ನೀಲಿ ದಾರದಿಂದ ಮಾಡಿದ ಹಗ್ಗವನ್ನ ಆ ಫಲಕಕ್ಕೆ ಹಾಕಿ ವಿಶೇಷ ಪೇಟಕ್ಕೆ ಕಟ್ಟಿದ್ರು. ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ಹಾಗೇ ಅವರು ಮಾಡಿದ್ರು. 32  ಹೀಗೆ ಪವಿತ್ರ ಡೇರೆ ಅಂದ್ರೆ ದೇವದರ್ಶನ ಡೇರೆಯ ಎಲ್ಲ ಕೆಲಸ ಮುಗಿತು. ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ಹಾಗೇ ಇಸ್ರಾಯೇಲ್ಯರು ಎಲ್ಲ ಮಾಡಿ ಮುಗಿಸಿದ್ರು.+ ದೇವರು ಹೇಳಿದ ತರಾನೇ ಮಾಡಿದ್ರು. 33  ಆಮೇಲೆ ಪವಿತ್ರ ಡೇರೆಯ+ ಎಲ್ಲ ಭಾಗಗಳನ್ನ, ಡೇರೆ ಬಟ್ಟೆಗಳನ್ನ+ ಎಲ್ಲ ಉಪಕರಣಗಳನ್ನ ಮೋಶೆ ಹತ್ರ ತಂದ್ರು. ಅವರು ಏನೇನು ತಂದ್ರು ಅಂದ್ರೆ ಪವಿತ್ರ ಡೇರೆ ಕೊಂಡಿಗಳು,+ ಚೌಕಟ್ಟುಗಳು,+ ಕೋಲುಗಳು,+ ಕಂಬಗಳು, ಅಡಿಗಲ್ಲುಗಳು.+ 34  ಕೆಂಪು ಬಣ್ಣದ ಟಗರುಚರ್ಮದ ಹೊದಿಕೆ,+ ಸೀಲ್‌ ಪ್ರಾಣಿಯ* ಚರ್ಮದ ಹೊದಿಕೆ, ಮಂಜೂಷದ ಮುಂದೆ ತೂಗಿಬಿಡೋ ಪರದೆ.+ 35  ಸಾಕ್ಷಿ ಮಂಜೂಷ, ಅದಕ್ಕೆ ಹಾಕೋ ಕೋಲುಗಳು,+ ಅದ್ರ ಮುಚ್ಚಳ.+ 36  ಮೇಜು, ಅದ್ರ ಎಲ್ಲ ಉಪಕರಣಗಳು,+ ಅರ್ಪಣೆಯ ರೊಟ್ಟಿಗಳು. 37  ಶುದ್ಧ ಚಿನ್ನದ ದೀಪಸ್ತಂಭ,+ ಅದ್ರ ಎಲ್ಲ ಉಪಕರಣಗಳು,+ ಸಾಲಾಗಿ ಇಡೋ ದೀಪಗಳು, ಅದಕ್ಕೆ ಎಣ್ಣೆ.+ 38  ಚಿನ್ನದ ಧೂಪವೇದಿ,+ ಅಭಿಷೇಕ ತೈಲ,+ ಸುವಾಸನೆ ಇರೋ ಧೂಪ,+ ಡೇರೆಯ ಬಾಗಿಲಿಗೆ ಹಾಕೋ ಪರದೆ.+ 39  ತಾಮ್ರದ ಯಜ್ಞವೇದಿ,+ ತಾಮ್ರದ ಜಾಲರಿ, ಕೋಲುಗಳು,+ ಎಲ್ಲ ಉಪಕರಣಗಳು,+ ತಾಮ್ರದ ದೊಡ್ಡ ಬೋಗುಣಿ, ಅದ್ರ ಪೀಠ.+ 40  ಅಂಗಳಕ್ಕಾಗಿ ಬಳಸೋ ಪರದೆಗಳು, ಕಂಬಗಳು, ಅಡಿಗಲ್ಲುಗಳು,+ ಹಗ್ಗಗಳು, ಗೂಟಗಳು,+ ಅಂಗಳದ ಬಾಗಿಲಲ್ಲಿ ಹಾಕೋ ಪರದೆ,+ ಪವಿತ್ರ ಡೇರೇಲಿ ಸೇವೆ ಮಾಡುವಾಗ ಬಳಸೋ ಎಲ್ಲ ಉಪಕರಣಗಳು. 41  ಆರಾಧನಾ ಸ್ಥಳದಲ್ಲಿ ಸೇವೆ ಮಾಡುವಾಗ ಹಾಕೊಳ್ಳೋಕೆ ಚೆನ್ನಾಗಿ ಹೆಣೆದ ಬಟ್ಟೆಗಳು, ಪುರೋಹಿತ ಆರೋನನಿಗಾಗಿ ಪವಿತ್ರ ಬಟ್ಟೆಗಳು,+ ಅವನ ಮಕ್ಕಳು ಪುರೋಹಿತರಾಗಿ ಸೇವೆ ಮಾಡುವಾಗ ಹಾಕೊಳ್ಳೋಕೆ ಬಟ್ಟೆಗಳು. 42  ಯೆಹೋವ ಮೋಶೆಗೆ ಆಜ್ಞೆ ಕೊಟ್ಟ ತರಾನೇ ಇಸ್ರಾಯೇಲ್ಯರು ಎಲ್ಲವನ್ನೂ ಮಾಡಿದ್ರು.+ 43  ಅವರು ಮಾಡಿದ್ದನ್ನೆಲ್ಲ ಮೋಶೆ ಪರೀಕ್ಷಿಸಿದ. ಅವರು ಎಲ್ಲ ಕೆಲಸವನ್ನ ಯೆಹೋವ ಆಜ್ಞೆ ಕೊಟ್ಟ ತರಾನೇ ಮಾಡಿದ್ರು ಅಂತ ಅವನಿಗೆ ಗೊತ್ತಾಯ್ತು. ಹಾಗಾಗಿ ಮೋಶೆ ಅವರನ್ನ ಆಶೀರ್ವದಿಸಿದ.

ಪಾದಟಿಪ್ಪಣಿ

ಅಥವಾ “ನೇಯ್ದ ಪಟ್ಟಿ.”
ಸುಮಾರು 22.2 ಸೆಂ.ಮೀ. (8.75 ಇಂಚು). ಪರಿಶಿಷ್ಟ ಬಿ14 ನೋಡಿ.
ಇದು ಯಾವ ಅಮೂಲ್ಯ ರತ್ನವೆಂದು ಖಚಿತವಾಗಿ ಗೊತ್ತಿಲ್ಲ. ಬಹುಶಃ ಆ್ಯಂಬರ್‌, ಹಯಸಿಂತ್‌, ಓಪಲ್‌ ಅಥವಾ ಟುಅರ್‌ಮಲೀನ್‌ ಆಗಿರಬಹುದು.
ಅಥವಾ “ನೇಯ್ದ ಪಟ್ಟಿ.”
ಅಥವಾ “ನೇಯ್ದ ಪಟ್ಟಿ.”
ಅಥವಾ “ಒಳಉಡುಪುಗಳನ್ನ.”
ಅಥವಾ “ಆರೋನ ದೇವರಿಗೆ ಸಮರ್ಪಣೆ ಮಾಡ್ಕೊಂಡಿದ್ದಾನೆ ಅಂತ ಸೂಚಿಸೋ ಚಿಹ್ನೆ; ಪವಿತ್ರ ಕಿರೀಟ ಆಗಿತ್ತು.”
ಅಕ್ಷ. “ಪವಿತ್ರತೆ ಯೆಹೋವನಿಗೆ ಸೇರಿದ್ದು.”
ಇದೊಂದು ಸಮುದ್ರ ಪ್ರಾಣಿ.