ವಿಮೋಚನಕಾಂಡ 38:1-31

  • ಸರ್ವಾಂಗಹೋಮದ ಯಜ್ಞವೇದಿ (1-7)

  • ತಾಮ್ರದ ಬೋಗುಣಿ (8)

  • ಅಂಗಳ (9-20)

  • ಪವಿತ್ರ ಡೇರೆಗೆ ಬಳಸಿದ ವಸ್ತುಗಳ ಪಟ್ಟಿ (21-31)

38  ಬೆಚಲೇಲ ಅಕೇಶಿಯ ಮರದಿಂದ ಸರ್ವಾಂಗಹೋಮದ ಯಜ್ಞವೇದಿ ಮಾಡಿದ. ಅದು ಚೌಕಾಕಾರ ಆಗಿತ್ತು. ಐದು ಮೊಳ* ಉದ್ದ, ಐದು ಮೊಳ ಅಗಲ, ಮೂರು ಮೊಳ ಎತ್ತರ ಇತ್ತು.+  ಆಮೇಲೆ ಯಜ್ಞವೇದಿಯ ನಾಲ್ಕು ಮೂಲೆಗಳಲ್ಲೂ ಒಂದೊಂದು ಕೊಂಬು ಮಾಡಿದ. ಯಜ್ಞವೇದಿಯನ್ನ ಅದ್ರ ಕೊಂಬುಗಳನ್ನ ಮರದ ಒಂದೇ ತುಂಡಿಂದ ಮಾಡಿದ. ಯಜ್ಞವೇದಿಗೆ ತಾಮ್ರದ ತಗಡು ಹೊದಿಸಿದ.+  ಯಜ್ಞವೇದಿಯ ಎಲ್ಲ ಉಪಕರಣಗಳನ್ನ ಅಂದ್ರೆ ಡಬ್ಬಿಗಳನ್ನ ಸಲಿಕೆಗಳನ್ನ ಬೋಗುಣಿಗಳನ್ನ ಕವಲುಗೋಲುಗಳನ್ನ ಕೆಂಡ ಹಾಕೋ ಪಾತ್ರೆಗಳನ್ನ ಮಾಡಿದ. ಈ ಎಲ್ಲ ಉಪಕರಣಗಳನ್ನ ತಾಮ್ರದಿಂದ ಮಾಡಿದ.  ಯಜ್ಞವೇದಿಗಾಗಿ ತಾಮ್ರದ ಜಾಲರಿ ಮಾಡಿದ. ಅದನ್ನ ಯಜ್ಞವೇದಿಯ ಪಟ್ಟಿ ಕೆಳಗೆ, ಯಜ್ಞವೇದಿಯ ಮಧ್ಯದಲ್ಲಿ ಇಟ್ಟ.  ಅವನು ನಾಲ್ಕು ಬಳೆಗಳನ್ನ ಎರಕಹೊಯ್ದು ತಾಮ್ರದ ಆ ಜಾಲರಿ ಹತ್ರ ಯಜ್ಞವೇದಿಯ ನಾಲ್ಕು ಮೂಲೆಗಳಲ್ಲಿ ಜೋಡಿಸಿದ. ಆ ಬಳೆಗಳೇ ಕೋಲುಗಳಿಗೆ ಹಿಡಿಗಳು.  ಆಮೇಲೆ ಅಕೇಶಿಯ ಮರದಿಂದ ಕೋಲುಗಳನ್ನ ಮಾಡಿ ಅವುಗಳಿಗೆ ತಾಮ್ರದ ತಗಡು ಹೊದಿಸಿದ.  ಯಜ್ಞವೇದಿ ಎತ್ತೋಕೆ ಬಳಸೋ ಆ ಕೋಲುಗಳನ್ನ ಯಜ್ಞವೇದಿಯ ಎರಡು ಕಡೆಗಳಲ್ಲಿದ್ದ ಬಳೆಗಳಿಗೆ ಹಾಕಿದ. ಅವನು ಯಜ್ಞವೇದಿಯನ್ನ ಮರದ ಹಲಗೆಗಳಿಂದ ಪೆಟ್ಟಿಗೆ ಆಕಾರದಲ್ಲಿ ಮಾಡಿದ. ಅದು ಮೇಲೆ ಕೆಳಗೆ ತೆರೆದಿತ್ತು.  ಆಮೇಲೆ ತಾಮ್ರದಿಂದ ಒಂದು ದೊಡ್ಡ ಬೋಗುಣಿ,+ ಅದಕ್ಕೆ ಪೀಠ ಮಾಡಿದ. ಅವುಗಳನ್ನ ದೇವದರ್ಶನ ಡೇರೆಯ ಬಾಗಿಲಲ್ಲಿ ಸುವ್ಯವಸ್ಥಿತವಾಗಿ ಸೇವೆಮಾಡ್ತಿದ್ದ ಸ್ತ್ರೀಯರು ಕೊಟ್ಟ ತಾಮ್ರದ ಕನ್ನಡಿಗಳಿಂದ* ಮಾಡಿದ.  ಹೊಸೆದ ಒಳ್ಳೇ ಗುಣಮಟ್ಟದ ನಾರಿಂದ ಪರದೆಗಳನ್ನ+ ತಯಾರಿಸಿದ. ಅವುಗಳನ್ನ ಹಾಕಿ ಅಂಗಳ ಮಾಡಿದ. ಅಂಗಳದ ದಕ್ಷಿಣ ಭಾಗಕ್ಕೆ 100 ಮೊಳ ಉದ್ದದ ಪರದೆ ತೂಗಿಬಿಟ್ಟ.+ 10  ಅದಕ್ಕೆ ತಾಮ್ರದ 20 ಕಂಬ, 20 ಅಡಿಗಲ್ಲು ಇತ್ತು. ಕಂಬಗಳ ಕೊಕ್ಕೆಗಳು, ಕಟ್ಟುಗಳು* ಬೆಳ್ಳಿದಾಗಿತ್ತು. 11  ಅಂಗಳದ ಉತ್ತರಕ್ಕೆ 100 ಮೊಳ ಉದ್ದದ ಪರದೆ ತೂಗಿಬಿಟ್ರು. ಅದಕ್ಕೆ ತಾಮ್ರದ 20 ಕಂಬ, 20 ಅಡಿಗಲ್ಲು ಇತ್ತು. ಕಂಬಗಳ ಕೊಕ್ಕೆಗಳು, ಕಟ್ಟುಗಳು* ಬೆಳ್ಳಿದಾಗಿತ್ತು. 12  ಆದ್ರೆ ಪಶ್ಚಿಮದಲ್ಲಿ 50 ಮೊಳ ಉದ್ದದ ಪರದೆ ತೂಗಿಬಿಟ್ರು. ಅದಕ್ಕೆ ಹತ್ತು ಕಂಬಗಳು, ಹತ್ತು ಅಡಿಗಲ್ಲು ಇತ್ತು. ಕಂಬಗಳ ಕೊಕ್ಕೆಗಳು, ಕಟ್ಟುಗಳು* ಬೆಳ್ಳಿದಾಗಿತ್ತು. 13  ಪೂರ್ವದ ಅಂಗಳ 50 ಮೊಳ ಅಗಲ ಇತ್ತು. 14  ಅಂಗಳದ ಬಾಗಿಲ ಬಲ ಬದಿಯಲ್ಲಿ 15 ಮೊಳ ಉದ್ದದ ಪರದೆ ತೂಗಿಬಿಟ್ರು. ಅದಕ್ಕೆ ಮೂರು ಕಂಬ ಮೂರು ಅಡಿಗಲ್ಲು ಇತ್ತು. 15  ಅಂಗಳದ ಬಾಗಿಲ ಎಡ ಬದಿಯಲ್ಲಿ 15 ಮೊಳ ಉದ್ದದ ಪರದೆ ತೂಗಿಬಿಟ್ರು. ಅದಕ್ಕೆ ಮೂರು ಕಂಬ, ಮೂರು ಅಡಿಗಲ್ಲು ಇತ್ತು. 16  ಅಂಗಳದಲ್ಲಿ ತೂಗಿಬಿಟ್ಟ ಎಲ್ಲ ಪರದೆಗಳನ್ನ ಹೊಸೆದ ಒಳ್ಳೇ ಗುಣಮಟ್ಟದ ನಾರಿಂದ ಮಾಡಿದ್ರು. 17  ಕಂಬಗಳ ಅಡಿಗಲ್ಲುಗಳು ತಾಮ್ರದಾಗಿತ್ತು. ಕಂಬಗಳ ಕೊಕ್ಕೆಗಳು, ಕಟ್ಟುಗಳು* ಬೆಳ್ಳಿದಾಗಿತ್ತು. ಕಂಬಗಳ ಮೇಲೆ ಬೆಳ್ಳಿ ತಗಡು ಹೊದಿಸಿದ್ರು. ಅಂಗಳದ ಎಲ್ಲ ಕಂಬಗಳ ಕಟ್ಟುಗಳನ್ನ ಬೆಳ್ಳಿಯಿಂದ ಮಾಡಿದ್ರು.+ 18  ಅಂಗಳದ ಬಾಗಿಲಿಗೆ 20 ಮೊಳ ಉದ್ದದ, 5 ಮೊಳ ಎತ್ತರದ ಪರದೆ ಹಾಕಿದ್ರು. ಈ ಪರದೆಯ, ಅಂಗಳದಲ್ಲಿ ತೂಗಿಬಿಟ್ಟ ಪರದೆಗಳ ಎತ್ತರ ಒಂದೇ ಆಗಿತ್ತು. ಈ ಪರದೆಯನ್ನ ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ನೂಲು, ಹೊಸೆದ ಒಳ್ಳೇ ಗುಟ್ಟಮಟ್ಟದ ನಾರು ಇದನ್ನೆಲ್ಲ ಒಟ್ಟಿಗೆ ನೇಯ್ದು ಮಾಡಿದ್ರು.+ 19  ಅಂಗಳದ ಬಾಗಿಲ ಪರದೆಯ ನಾಲ್ಕು ಕಂಬಗಳನ್ನ ನಾಲ್ಕು ಅಡಿಗಲ್ಲುಗಳನ್ನ ತಾಮ್ರದಿಂದ ಮಾಡಿದ್ರು. ಕಂಬಗಳ ಕೊಕ್ಕೆಗಳು ಬೆಳ್ಳಿದಾಗಿತ್ತು. ಕಂಬಗಳ ಮೇಲೆ, ಕಟ್ಟುಗಳಿಗೆ* ಬೆಳ್ಳಿ ತಗಡು ಹೊದಿಸಿದ್ರು. 20  ಡೇರೆಯ ಗೂಟಗಳು, ಅಂಗಳದ ಎಲ್ಲ ಗೂಟಗಳು ತಾಮ್ರದಾಗಿತ್ತು.+ 21  ಸಾಕ್ಷಿ ಮಂಜೂಷ ಇಡೋ+ ಪವಿತ್ರ ಡೇರೆ ಮಾಡೋಕೆ ಉಪಯೋಗಿಸಿದ ವಸ್ತುಗಳ ಪಟ್ಟಿ ಮಾಡಬೇಕಂತ ಮೋಶೆ ಆಜ್ಞೆಕೊಟ್ಟ. ಪುರೋಹಿತನಾದ ಆರೋನನ ಮಗ ಈತಾಮಾರನ+ ನಿರ್ದೇಶನದ ಪ್ರಕಾರ ಲೇವಿಯರು+ ಆ ಪಟ್ಟಿ ಮಾಡಿದ್ರು. 22  ಯೆಹೂದ ಕುಲದ ಊರಿಯ ಮಗನೂ ಹೂರನ ಮೊಮ್ಮಗನೂ ಆದ ಬೆಚಲೇಲ+ ಮೋಶೆಗೆ ಯೆಹೋವ ಆಜ್ಞಾಪಿಸಿದ್ದ ಎಲ್ಲ ಕೆಲಸಗಳನ್ನ ಮಾಡಿಮುಗಿಸಿದ. 23  ಅವನ ಜೊತೆ ದಾನ್‌ ಕುಲದ ಅಹೀಸಾಮಾಕನ ಮಗ ಒಹೊಲೀಯಾಬ+ ಕೆಲಸ ಮಾಡಿದ. ಇವನಿಗೆ ಕರಕುಶಲ ಕೆಲಸ, ಕಸೂತಿ ಕೆಲಸ, ನೀಲಿ ದಾರ, ನೇರಳೆ ಬಣ್ಣದ ಉಣ್ಣೆ, ಕಡುಗೆಂಪು ನೂಲು, ಒಳ್ಳೇ ಗುಣಮಟ್ಟದ ನಾರನ್ನ ನೇಯೋ ಕೆಲಸ ಗೊತ್ತಿತ್ತು. 24  ಪವಿತ್ರ ಡೇರೆಯ ಎಲ್ಲ ಕೆಲಸಗಳನ್ನ ಮುಗಿಸೋಕೆ ಒಟ್ಟು 29 ತಲಾಂತು,* 730 ಶೆಕೆಲ್‌* ಚಿನ್ನ ಬೇಕಾಯ್ತು. ಇದು ಆರಾಧನಾ ಸ್ಥಳದ ತೂಕದ ಪ್ರಕಾರ* ಇತ್ತು. ಅಷ್ಟೇ ಚಿನ್ನವನ್ನ ಜನ ಕಾಣಿಕೆಯಾಗಿ*+ ತಂದು ಕೊಟ್ಟಿದ್ರು. 25  ಇಸ್ರಾಯೇಲ್ಯರಲ್ಲಿ ಪಟ್ಟಿ ಆದವರು ಆರಾಧನಾ ಸ್ಥಳದ ತೂಕದ ಪ್ರಕಾರ* 100 ತಲಾಂತು ಮತ್ತು 1,775 ಶೆಕೆಲ್‌ ಬೆಳ್ಳಿ ತಂದು ಕೊಟ್ಟಿದ್ರು. 26  ಅವರಲ್ಲಿ ಪ್ರತಿಯೊಬ್ಬನೂ ಆರಾಧನಾ ಸ್ಥಳದ ತೂಕದ ಪ್ರಕಾರ* ಅರ್ಧ ಶೆಕೆಲ್‌ ಬೆಳ್ಳಿ ಕೊಟ್ಟಿದ್ದ. ಅವರು 20 ವರ್ಷ ಮತ್ತು ಅದಕ್ಕಿಂತ ಜಾಸ್ತಿ ವಯಸ್ಸಿನವರಾಗಿದ್ರು.+ ಅವ್ರ ಒಟ್ಟು ಸಂಖ್ಯೆ 6,03,550.+ 27  ಪವಿತ್ರ ಡೇರೆಯ ಚೌಕಟ್ಟುಗಳ ಅಡಿಗಲ್ಲುಗಳನ್ನ ಪರದೆಯ ಕಂಬಗಳ ಅಡಿಗಲ್ಲುಗಳನ್ನ ಎರಕಹೊಯ್ಯೋಕೆ ಬಳಸಿದ ಬೆಳ್ಳಿ 100 ತಲಾಂತು. 100 ಅಡಿಗಲ್ಲುಗಳನ್ನ ಎರಕಹೊಯ್ಯೋಕೆ 100 ತಲಾಂತು ಬೆಳ್ಳಿ ಅಂದ್ರೆ ಪ್ರತಿಯೊಂದು ಅಡಿಗಲ್ಲಿಗೆ ಒಂದೊಂದು ತಲಾಂತು ಬೆಳ್ಳಿ ಬಳಸಿದ್ರು.+ 28  ಅವನು ಕಂಬಗಳ ಕೊಕ್ಕೆಗಳನ್ನ ಮಾಡೋಕೆ, ಕಂಬಗಳ ಮೇಲೆ ಬೆಳ್ಳಿ ತಗಡು ಹೊದಿಸೋಕೆ ಕಂಬಗಳನ್ನ ಒಂದಕ್ಕೊಂದು ಜೋಡಿಸೋಕೆ ಉಪಯೋಗಿಸಿದ ಬೆಳ್ಳಿ 1,775 ಶೆಕೆಲ್‌. 29  ಜನ 70 ತಲಾಂತು ಮತ್ತು 2,400 ಶೆಕೆಲ್‌ ತಾಮ್ರ ಅರ್ಪಿಸಿದ್ರು.* 30  ಈ ತಾಮ್ರದಿಂದ ಅವನು ದೇವದರ್ಶನ ಡೇರೆಯ ಬಾಗಿಲ ಕಂಬಗಳ ಅಡಿಗಲ್ಲುಗಳನ್ನ, ಯಜ್ಞವೇದಿ ಮತ್ತು ಅದ್ರ ಜಾಲರಿಯನ್ನ, ಅದ್ರ ಎಲ್ಲ ಉಪಕರಣಗಳನ್ನ, 31  ಅಂಗಳದ ಎಲ್ಲ ಕಂಬಗಳ ಅಡಿಗಲ್ಲುಗಳನ್ನ, ಅಂಗಳದ ಬಾಗಿಲ ಕಂಬಗಳ ಅಡಿಗಲ್ಲುಗಳನ್ನ, ಪವಿತ್ರ ಡೇರೆಯ ಮತ್ತು ಅಂಗಳದ ಎಲ್ಲ ಗೂಟಗಳನ್ನ+ ಮಾಡಿದ.

ಪಾದಟಿಪ್ಪಣಿ

ಒಂದು ಮೊಳ ಅಂದ್ರೆ 44.5 ಸೆಂ.ಮೀ. (17.5 ಇಂಚು). ಪರಿಶಿಷ್ಟ ಬಿ14 ನೋಡಿ.
ಇವು ಚೆನ್ನಾಗಿ ಉಜ್ಜಿ ಹೊಳಿಯೋ ತರ ಮಾಡಿದ ಲೋಹದ ಕನ್ನಡಿಗಳು.
ಅಥವಾ ಜೋಡಿಸೋಕೆ ಬಳಸೋ “ಬಳೆಗಳು; ದುಂಡುಪಟ್ಟಿಗಳು; ಪಟ್ಟಿಗಳು.”
ಅಥವಾ ಜೋಡಿಸೋಕೆ ಬಳಸೋ “ಬಳೆಗಳು; ದುಂಡುಪಟ್ಟಿಗಳು; ಪಟ್ಟಿಗಳು.”
ಅಥವಾ ಜೋಡಿಸೋಕೆ ಬಳಸೋ “ಬಳೆಗಳು; ದುಂಡುಪಟ್ಟಿಗಳು; ಪಟ್ಟಿಗಳು.”
ಅಥವಾ ಜೋಡಿಸೋಕೆ ಬಳಸೋ “ಬಳೆಗಳು; ದುಂಡುಪಟ್ಟಿಗಳು; ಪಟ್ಟಿಗಳು.”
ಅಥವಾ ಜೋಡಿಸೋಕೆ ಬಳಸೋ “ಬಳೆಗಳು; ದುಂಡುಪಟ್ಟಿಗಳು; ಪಟ್ಟಿಗಳು.”
ಒಂದು ತಲಾಂತು ಅಂದ್ರೆ 34.2 ಕೆ.ಜಿ. ಪರಿಶಿಷ್ಟ ಬಿ14 ನೋಡಿ.
ಒಂದು ಶೆಕೆಲ್‌ನ ತೂಕ 11.4 ಗ್ರಾಂ. ಪರಿಶಿಷ್ಟ ಬಿ14 ನೋಡಿ.
ಅಥವಾ “ಪವಿತ್ರ ಶೆಕೆಲಿನ ಪ್ರಕಾರ.”
ಅಥವಾ “ಓಲಾಡಿಸೋ ಅರ್ಪಣೆಯಾಗಿ.”
ಅಥವಾ “ಪವಿತ್ರ ಶೆಕೆಲಿನ ಪ್ರಕಾರ.”
ಅಥವಾ “ಪವಿತ್ರ ಶೆಕೆಲಿನ ಪ್ರಕಾರ.”
ಅಥವಾ “ಓಲಾಡಿಸೋ ಅರ್ಪಣೆಯಾಗಿ ಕೊಟ್ಟಿದ್ರು.”