ವಿಮೋಚನಕಾಂಡ 19:1-25

  • ಸಿನಾಯಿ ಬೆಟ್ಟದಲ್ಲಿ (1-25)

    • ಇಸ್ರಾಯೇಲ್ಯರು ಪುರೋಹಿತರಾಗಿ ರಾಜರಾಗಿ ಆಳ್ತಾರೆ (5, 6)

    • ದೇವರ ಮುಂದೆ ನಿಲ್ಲೋಕೆ ಜನ್ರನ್ನ ಪವಿತ್ರ ಮಾಡಿದ್ದು (14, 15)

19  ಇಸ್ರಾಯೇಲ್ಯರು ಈಜಿಪ್ಟ್‌ ದೇಶ ಬಿಟ್ಟು ಬಂದ ಮೇಲೆ ಮೂರನೇ ತಿಂಗಳಲ್ಲಿ ಸಿನಾಯಿ ಕಾಡನ್ನ ತಲುಪಿದ್ರು.  ಇಸ್ರಾಯೇಲ್ಯರು ರೆಫೀದೀಮಿಂದ+ ಹೊರಟು, ಅದೇ ದಿನ ಸಿನಾಯಿ ಕಾಡಿಗೆ ಬಂದು ಅಲ್ಲಿ ಬೆಟ್ಟದ+ ಮುಂದೆ ಡೇರೆ ಹಾಕೊಂಡ್ರು.  ಆಮೇಲೆ ಮೋಶೆ ಸತ್ಯದೇವರ ಮುಂದೆ ಕಾಣಿಸ್ಕೊಳ್ಳೋಕೆ ಬೆಟ್ಟ ಹತ್ತಿ ಹೋದ. ಬೆಟ್ಟದಿಂದ ಯೆಹೋವ ಅವನಿಗೆ+ “ನೀನು ಯಾಕೋಬನ ವಂಶದವರಿಗೆ, ಇಸ್ರಾಯೇಲ್ಯರಿಗೆ ಹೀಗೆ ಹೇಳಬೇಕು:  ‘ಹದ್ದು ತನ್ನ ಮರಿಗಳನ್ನ ರೆಕ್ಕೆಗಳ ಮೇಲೆ ಹೊತ್ಕೊಂಡು ಬರೋ ತರ ನಾನು ನಿಮ್ಮನ್ನ ನನ್ನ ಹತ್ರ ಕರ್ಕೊಂಡು ಬಂದೆ.+ ಅದಕ್ಕಾಗಿ ಈಜಿಪ್ಟಿನವರಿಗೆ ಏನೆಲ್ಲ ಮಾಡ್ದೆ ಅಂತ ನೀವೇ ಕಣ್ಣಾರೆ ನೋಡಿದ್ರಿ.+  ನೀವು ನನ್ನ ಮಾತನ್ನ ತಪ್ಪದೆ ಕೇಳಿದ್ರೆ, ನನ್ನ ಒಪ್ಪಂದಕ್ಕೆ ಒಪ್ಕೊಂಡ್ರೆ ಎಲ್ಲ ಜನ್ರಲ್ಲಿ ನೀವು ನನ್ನ ವಿಶೇಷ ಸೊತ್ತಾಗ್ತೀರ.*+ ಯಾಕಂದ್ರೆ ಇಡೀ ಭೂಮಿ ನಂದು.+  ನೀವು ನಂಗೆ ಸೇರಿರೋ ಪವಿತ್ರ ಜನರಾಗ್ತೀರ ಮತ್ತು ರಾಜರ ತರ ಆಳೋ ಪುರೋಹಿತರಾಗ್ತೀರ.’*+ ಈ ಮಾತುಗಳನ್ನೇ ನೀನು ಇಸ್ರಾಯೇಲ್ಯರಿಗೆ ಹೇಳಬೇಕು” ಅಂದನು.  ಹಾಗಾಗಿ ಮೋಶೆ ಕೆಳಗೆ ಬಂದು ಇಸ್ರಾಯೇಲ್ಯರ ಹಿರಿಯರನ್ನ ಕರೆಸಿ ಯೆಹೋವ ಕೊಟ್ಟ ಆಜ್ಞೆಗಳನ್ನೆಲ್ಲ ಅವರಿಗೆ ಹೇಳಿದ.+  ಆಮೇಲೆ ಜನ್ರೆಲ್ಲ ಒಂದೇ ಮನಸ್ಸಿಂದ “ಯೆಹೋವ ಹೇಳಿದ್ದೆಲ್ಲ ನಾವು ಮಾಡ್ತೀವಿ” ಅಂತ ಉತ್ತರ ಕೊಟ್ರು.+ ತಕ್ಷಣ ಮೋಶೆ ಜನ್ರ ಈ ಮಾತನ್ನ ಯೆಹೋವನಿಗೆ ಹೇಳಿದ.  ಯೆಹೋವ ಮೋಶೆಗೆ “ನಾನು ಕಪ್ಪು ಮೋಡದಲ್ಲಿ ನಿನ್ನ ಹತ್ರ ಬರ್ತಿನಿ. ಆಗ ನಾನು ನಿನ್ನ ಜೊತೆ ಮಾತಾಡೋದನ್ನ ಜನ್ರು ಕೇಳಿಸ್ಕೊಳ್ತಾರೆ. ಇದ್ರಿಂದ ಅವರು ನಿನ್ನ ಮೇಲೂ ಯಾವಾಗ್ಲೂ ನಂಬಿಕೆ ಇಡ್ತಾರೆ” ಅಂದನು. ಆಗ ಮೋಶೆ ಜನ್ರ ಮಾತುಗಳನ್ನ ಯೆಹೋವನಿಗೆ ಹೇಳಿದ. 10  ಆಮೇಲೆ ಯೆಹೋವ ಮೋಶೆಗೆ “ನೀನು ಇವತ್ತು ಮತ್ತೆ ನಾಳೆ ಜನ್ರನ್ನ ಪವಿತ್ರ ಮಾಡು. ಅವರು ತಮ್ಮ ಬಟ್ಟೆಗಳನ್ನ ಒಗೆದುಕೊಳ್ಳಬೇಕು. 11  ಅವರು ಮೂರನೇ ದಿನ ಸಿದ್ಧರಾಗಿ ಇರಬೇಕು. ಯಾಕಂದ್ರೆ ಮೂರನೇ ದಿನ ಎಲ್ಲ ಜನ್ರ ಕಣ್ಮುಂದೆ ಯೆಹೋವನಾದ ನಾನು ಸಿನಾಯಿ ಬೆಟ್ಟದ ಮೇಲೆ ಇಳಿದು ಬರ್ತಿನಿ. 12  ಜನ್ರು ಬೆಟ್ಟದ ಹತ್ರ ಬರದೆ ಇರೋ ತರ ಬೆಟ್ಟದ ಸುತ್ತ ನೀನು ಗುರುತು ಹಾಕಬೇಕು. ಅಷ್ಟೇ ಅಲ್ಲ ಅವರಿಗೆ ‘ನೀವು ಯಾರೂ ಬೆಟ್ಟ ಹತ್ತಬಾರದು. ಹತ್ತೋ ಪ್ರಯತ್ನನೂ ಮಾಡಬಾರದು. ಯಾರಾದ್ರೂ ಬೆಟ್ಟಕ್ಕೆ ಕಾಲಿಟ್ರೆ ಖಂಡಿತ ಸಾಯ್ತಾರೆ. 13  ಆ ವ್ಯಕ್ತಿನ ಯಾರೂ ಮುಟ್ಟಬಾರದು. ಅವನನ್ನ ಕಲ್ಲು ಹೊಡೆದು ಅಥವಾ ಆಯುಧದಿಂದ* ಕೊಲ್ಲಬೇಕು. ಬೆಟ್ಟವನ್ನ ಮುಟ್ಟೋ ಮನುಷ್ಯನಾಗ್ಲಿ ಪ್ರಾಣಿಯಾಗ್ಲಿ ಜೀವಂತ ಉಳಿಬಾರದು’+ ಅಂತ ಹೇಳು. ಆದ್ರೆ ಕೊಂಬು*+ ಊದಿದ ಶಬ್ದ ಕೇಳಿದಾಗ ಜನ ಬೆಟ್ಟದ ಹತ್ರ ಬರಬಹುದು” ಅಂದನು. 14  ಆಮೇಲೆ ಮೋಶೆ ಬೆಟ್ಟದಿಂದ ಇಳಿದು ಜನ್ರ ಹತ್ರ ಹೋಗಿ ಅವರನ್ನ ಪವಿತ್ರ ಮಾಡೋಕೆ ಶುರುಮಾಡಿದ. ಜನ್ರು ತಮ್ಮ ಬಟ್ಟೆ ಒಗೆದುಕೊಂಡ್ರು.+ 15  ಅವನು ಜನ್ರಿಗೆ “ನೀವು ಮೂರನೇ ದಿನ ಸಿದ್ಧರಾಗಿ. ನೀವು ನಿಮ್ಮ ಹೆಂಡತಿ ಜೊತೆ ಸಂಬಂಧ ಇಡಬಾರದು” ಅಂದ. 16  ಮೂರನೇ ದಿನ ಬೆಳಿಗ್ಗೆ ಬೆಟ್ಟದ ಮೇಲೆ ದಟ್ಟ ಮೋಡ+ ಕವಿದು ಗುಡುಗು, ಮಿಂಚು ಶುರು ಆಯ್ತು. ಕೊಂಬೂದೋ ಶಬ್ದ ತುಂಬ ಜೋರಾಗಿ ಕೇಳಿಸ್ತು. ಆಗ ಪಾಳೆಯದಲ್ಲಿದ್ದ ಜನ್ರೆಲ್ಲ ನಡುಗಿದ್ರು.+ 17  ಸತ್ಯದೇವರನ್ನ ಭೇಟಿಮಾಡೋಕೆ ಮೋಶೆ ಜನ್ರನ್ನ ಪಾಳೆಯದಿಂದ ಹೊರಗೆ ಕರ್ಕೊಂಡು ಬಂದ. ಆಗ ಜನ ಬೆಟ್ಟದ ಕೆಳಗೆ ನಿಂತ್ಕೊಂಡ್ರು. 18  ಯೆಹೋವ ಬೆಂಕಿಯಲ್ಲಿ ಸಿನಾಯಿ ಬೆಟ್ಟದ ಮೇಲೆ ಇಳಿದು ಬಂದಿದ್ರಿಂದ ಇಡೀ ಬೆಟ್ಟ ಹೊಗೆಯಿಂದ ತುಂಬ್ತು.+ ಆ ಹೊಗೆ ಆವಿಗೆ ತರ ಮೇಲೆ ಹೋಗ್ತಿತ್ತು. ಇಡೀ ಬೆಟ್ಟ ಕಂಪಿಸ್ತಿತ್ತು.+ 19  ಕೊಂಬಿನ ಶಬ್ದ ಜೋರಾಗ್ತಾ ಹೋದಾಗ ಮೋಶೆ ಮಾತಾಡಿದ, ಆಗ ಸತ್ಯದೇವರು ಅವನಿಗೆ ಉತ್ತರ ಕೊಟ್ಟನು. 20  ಯೆಹೋವ ಸಿನಾಯಿ ಬೆಟ್ಟದ ತುದಿಗೆ ಇಳಿದು ಬಂದನು. ಅಲ್ಲಿಗೆ ಹತ್ತಿ ಬರೋಕೆ ಯೆಹೋವ ಮೋಶೆಗೆ ಹೇಳಿದಾಗ ಅವನು ಹೋದ.+ 21  ಆಗ ಯೆಹೋವ ಮೋಶೆಗೆ “ನೀನು ಇಳಿದು ಹೋಗಿ ಜನ್ರು ಯೆಹೋವನಾದ ನನ್ನನ್ನ ನೋಡೋಕೆ ಹಾಕಿರೋ ಗುರುತನ್ನ ದಾಟಿಬರೋಕೆ ಪ್ರಯತ್ನ ಮಾಡಬಾರದು ಅಂತ ಅವರನ್ನ ಎಚ್ಚರಿಸು. ಒಂದುವೇಳೆ ದಾಟಿಬಂದ್ರೆ ತುಂಬ ಜನ ನಾಶ ಆಗ್ತಾರೆ. 22  ಯೆಹೋವನಾದ ನನಗೆ ಸೇವೆಮಾಡ್ತಿರೋ ಪುರೋಹಿತರು* ತಮ್ಮನ್ನ ಪವಿತ್ರ ಮಾಡ್ಕೊಳ್ಳೋಕೆ ಹೇಳು. ಹಾಗೆ ಮಾಡಿದ್ರೆ ಯೆಹೋವನಾದ ನಾನು ಅವರನ್ನ ಸಾಯಿಸಲ್ಲ” ಅಂದನು.+ 23  ಅದಕ್ಕೆ ಮೋಶೆ ಯೆಹೋವನಿಗೆ “ಜನ್ರು ಸಿನಾಯಿ ಬೆಟ್ಟದ ಹತ್ರ ಬರಲ್ಲ. ನೀನು ಮುಂಚೆನೇ ನಂಗೆ ‘ಬೆಟ್ಟದ ಸುತ್ತ ಗುರುತು ಹಾಕಿ ಅದು ಪವಿತ್ರ ಆಗಿದೆ ಅಂತೇಳು’ ಅಂತ ಎಚ್ಚರಿಕೆ ಕೊಟ್ಟಿದ್ದೆ” ಅಂದ.+ 24  ಆದ್ರೂ ಯೆಹೋವ “ನೀನು ಇಳಿದು ಹೋಗು. ಆರೋನನನ್ನ ಕರ್ಕೊಂಡು ಮತ್ತೆ ಬೆಟ್ಟ ಹತ್ತಿ ಬಾ. ಆದ್ರೆ ಪುರೋಹಿತರಿಗೂ ಜನರಿಗೂ ಗುರುತನ್ನ ದಾಟಿ ಯೆಹೋವನಾದ ನನ್ನ ಹತ್ರ ಬರೋಕೆ ಪ್ರಯತ್ನ ಮಾಡಬಾರದು ಅಂತ ಹೇಳು. ದಾಟಿಬಂದ್ರೆ ನಾನು ಅವರನ್ನ ಸಾಯಿಸ್ತೀನಿ” ಅಂದನು.+ 25  ಹಾಗಾಗಿ ಮೋಶೆ ಇಳಿದು ಹೋಗಿ ಆ ಮಾತುಗಳನ್ನ ಜನ್ರಿಗೆ ಹೇಳಿದ.

ಪಾದಟಿಪ್ಪಣಿ

ಅಥವಾ “ಅಮೂಲ್ಯ ಆಸ್ತಿಯಾಗ್ತೀರ.”
ಅಕ್ಷ. “ಪುರೋಹಿತ ರಾಜ್ಯ.”
ಬಾಣ ಬಿಡೋದು ಆಗಿರಬಹುದು.
ಅಕ್ಷ. “ಟಗರಿನ ಕೊಂಬು.”
ಬಹುಶಃ ಕುಟುಂಬದ ಯಜಮಾನ.