ವಿಮೋಚನಕಾಂಡ 15:1-27

  • ವಿಜಯಗೀತೆ (1-19)

  • ಮಿರ್ಯಾಮ ಜೊತೆ ಹಾಡಿದ್ದು (20, 21)

  • ಕಹಿ ನೀರು ಸಿಹಿ ಆಯ್ತು (22-27)

15  ಆಗ ಮೋಶೆ ಮತ್ತು ಇಸ್ರಾಯೇಲ್ಯರು ಯೆಹೋವನನ್ನ ಹೊಗಳ್ತಾ ಈ ಹಾಡು ಹಾಡಿದ್ರು:+ “ಯೆಹೋವನನ್ನ ಹೊಗಳ್ತಾ ನಾನು ಹಾಡ್ತೀನಿ. ಯಾಕಂದ್ರೆ ಆತನು ಅಮೋಘ ಜಯ ಪಡೆದಿದ್ದಾನೆ.+ ಕುದುರೆಗಳನ್ನ, ಕುದುರೆ ಸವಾರರನ್ನ ಸಮುದ್ರಕ್ಕೆ ಬಿಸಾಕಿದ್ದಾನೆ.+   ನನ್ನ ಬಲ, ನನ್ನ ಶಕ್ತಿ ಯಾಹುನೇ.* ಯಾಕಂದ್ರೆ ಆತನು ನನ್ನನ್ನ ರಕ್ಷಿಸಿದ್ದಾನೆ.+ ಆತನೇ ನನ್ನ ದೇವರು. ಆತನನ್ನೇ ನಾನು ಹೊಗಳ್ತೀನಿ.+ ಆತನೇ ನನ್ನ ತಂದೆಯ ದೇವರು.+ ಆತನನ್ನೇ ನಾನು ಕೊಂಡಾಡ್ತೀನಿ.+   ಯೆಹೋವ ಶೂರಸೈನಿಕ.+ ಯೆಹೋವ ಅನ್ನೋದೇ ಆತನ ಹೆಸರು.+   ಫರೋಹನ ರಥಗಳನ್ನ, ಸೈನಿಕರನ್ನ ಸಮುದ್ರದಲ್ಲಿ ಬಿಸಾಕಿದ್ದಾನೆ,+ಫರೋಹನ ವೀರಸೈನಿಕರು ಕೆಂಪು ಸಮುದ್ರದಲ್ಲಿ ಮುಳುಗಿ ಹೋಗಿದ್ದಾರೆ.+   ಉಕ್ಕೇರೋ ಸಮುದ್ರ ಅವರನ್ನ ಮುಚ್ಚಿಬಿಟ್ಟಿದೆ, ಕಲ್ಲಿನ ತರ ಮುಳುಗಿ ಸಮುದ್ರತಳ ಸೇರಿದ್ದಾರೆ.+   ಯೆಹೋವನೇ, ನಿನ್ನ ಬಲಗೈಯಲ್ಲಿ ತುಂಬ ಶಕ್ತಿ+ ಇದೆ. ಯೆಹೋವನೇ, ನಿನ್ನ ಬಲಗೈ ಶತ್ರುನ ಪುಡಿಪುಡಿ ಮಾಡುತ್ತೆ.   ನೀನು ಎಷ್ಟು ಮಹೋನ್ನತ ಅಂದ್ರೆ ನಿನ್ನ ವಿರುದ್ಧ ಏಳೋರನ್ನ ಕೆಡವಿಹಾಕ್ತೀಯ.+ ನಿನ್ನ ಕೋಪಾಗ್ನಿ ಕಳಿಸಿ ಅವರನ್ನ ಒಣ ಹುಲ್ಲಿನ ತರ ಭಸ್ಮಮಾಡ್ತೀಯ.   ನಿನ್ನ ಉಸಿರಿಂದ ಸಮುದ್ರದ ನೀರು ಒಂದಾಯ್ತು. ನೀರು ಗೋಡೆ ತರ ನಿಂತು ಹರಿಯೋದೇ ನಿಂತೊಯ್ತು. ಉಕ್ಕೇರೋ ನೀರು ಸಮುದ್ರದ ಮಧ್ಯ ಹೆಪ್ಪುಗಟ್ತು.   ‘ನಾನು ಅಟ್ಟಿಸ್ಕೊಂಡು ಹೋಗಿ ಹಿಡಿತೀನಿ! ತೃಪ್ತಿಯಾಗೋ ತನಕ ಕೊಳ್ಳೆನ ಹಂಚಿಕೊಳ್ತೀನಿ! ಕತ್ತಿನ ಹೊರಗೆ ತೆಗಿತೀನಿ! ನನ್ನ ಕೈಯಿಂದ ಅವರನ್ನ ಸೋಲಿಸ್ತೀನಿ!’+ ಅಂದ ಶತ್ರು. 10  ನಿನ್ನ ಉಸಿರಿಂದ ಸಮುದ್ರ ಅವರನ್ನ ಮುಚ್ಚಿಬಿಡ್ತು,+ಅವರು ಸಮುದ್ರದ ನೀರಲ್ಲಿ ಭಾರವಾದ ಸೀಸದ ತರ ಮುಳುಗಿಹೋದ್ರು. 11  ಯೆಹೋವನೇ, ದೇವರುಗಳಲ್ಲಿ ನಿನಗೆ ಯಾರು ಸಮ?+ ನಿನ್ನ ಹಾಗೆ ಯಾರು ಅತೀ ಪವಿತ್ರ?+ ಭಯಭಕ್ತಿಗೆ, ಹಾಡಿಹೊಗಳೋಕೆ ನೀನೇ ಯೋಗ್ಯ. ಅದ್ಭುತ ಮಾಡೋನು ನೀನೇ.+ 12  ನೀನು ನಿನ್ನ ಬಲಗೈಯನ್ನ ಚಾಚಿದೆ. ಆಗ ಭೂಮಿ ಬಾಯಿ ತೆಗೆದು ಅವರನ್ನ ನುಂಗಿಬಿಡ್ತು.+ 13  ನೀನು ಬಿಡಿಸಿದ ನಿನ್ನ ಜನರಿಗೆ ಶಾಶ್ವತ ಪ್ರೀತಿ ತೋರಿಸಿ ಅವರನ್ನ ಕರ್ಕೊಂಡು ಬಂದೆ.+ ನಿನ್ನ ಬಲದಿಂದ ಅವರನ್ನ ನಿನ್ನ ಪವಿತ್ರ ವಾಸಸ್ಥಳಕ್ಕೆ ನಡಿಸ್ತಿಯ. 14  ದೇಶದ ಜನರು ಇದನ್ನೆಲ್ಲ ಕೇಳಿ+ ನಡುಗ್ತಾರೆ,ಕಡು ಸಂಕಟ ಫಿಲಿಷ್ಟಿಯರನ್ನ ಆಕ್ರಮಿಸುತ್ತೆ. 15  ಆ ಸಮಯದಲ್ಲಿ ಎದೋಮಿನ ಶೇಕ್‌ಗಳು* ದಂಗಾಗ್ತಾರೆ,ಮೋವಾಬಿನ ಬಲಿಷ್ಠ ಅಧಿಪತಿಗಳು ಗಡಗಡ ನಡುಗ್ತಾರೆ.+ ಕಾನಾನಿನ ಎಲ್ಲ ಜನರು ಎದೆಗುಂದಿ ಹೋಗ್ತಾರೆ.+ 16  ಭಯ-ಭೀತಿ ಅವರನ್ನ ತುಂಬಿಕೊಳ್ಳುತ್ತೆ.+ ಯೆಹೋವನೇ, ಅವರ ಪ್ರದೇಶಗಳನ್ನ ನಿನ್ನ ಜನರು ದಾಟಿ ಹೋಗೋ ತನಕ,ನೀನು ಸೃಷ್ಟಿಸಿದ+ ಜನರು ದಾಟಿ ಹೋಗೋ ತನಕ+ಅವರು ನಿನ್ನ ತೋಳುಬಲ ನೋಡಿ ಕಲ್ಲಿನ ತರ ಕದಲದೆ ಇರ್ತಾರೆ. 17  ಯೆಹೋವನೇ, ನಿನ್ನ ಜನರನ್ನ ಕರ್ಕೊಂಡು ಬಂದು ನಿನ್ನ ಸೊತ್ತಾಗಿರೋ ಬೆಟ್ಟದಲ್ಲಿ,+ನೀನು ಇರೋಕೆ ಸಿದ್ಧಮಾಡಿರೋ ಜಾಗದಲ್ಲಿ,ಯೆಹೋವನೇ, ನೀನು ನಿನ್ನ ಕೈಯಿಂದ ಕಟ್ಟಿರೋ ಪವಿತ್ರ ಸ್ಥಳದಲ್ಲಿ ಅವರನ್ನ ಇರಿಸ್ತೀಯ. 18  ಯೆಹೋವ ಸದಾಕಾಲ ರಾಜನಾಗಿ ಆಳ್ತಾನೆ.+ 19  ಫರೋಹನ ಕುದುರೆಗಳು, ಯುದ್ಧರಥಗಳು, ಕುದುರೆ ಸವಾರರು ಸಮುದ್ರದೊಳಗೆ ಹೋದಾಗ,+ಯೆಹೋವ ಸಮುದ್ರದ ನೀರನ್ನ ಅವರ ಮೇಲೆ ಬೀಳಿಸಿ ಅವರನ್ನ ಮುಳುಗಿಸಿಬಿಟ್ಟನು.+ ಆದ್ರೆ ಇಸ್ರಾಯೇಲ್ಯರು ಸಮುದ್ರದ ಮಧ್ಯ ಒಣನೆಲದಲ್ಲಿ ನಡ್ಕೊಂಡು ಬಂದ್ರು.”+ 20  ಆರೋನನ ಅಕ್ಕ ಮಿರ್ಯಾಮ ಪ್ರವಾದಿನಿ ಆಗಿದ್ದಳು. ಅವಳು ದಮ್ಮಡಿ ತಗೊಂಡು ಮುಂದೆ ಬಂದಳು. ಸ್ತ್ರೀಯರೆಲ್ಲ ದಮ್ಮಡಿ ಬಡಿತಾ ಕುಣಿದಾಡ್ತಾ ಅವಳ ಹಿಂದೆ ಹೋದ್ರು. 21  ಗಂಡಸರ ಹಾಡಿಗೆ ಪ್ರತಿಯಾಗಿ ಅವಳು ಹೀಗೆ ಹಾಡಿದಳು: “ಯೆಹೋವನನ್ನ ಹಾಡಿ ಹೊಗಳಿ. ಯಾಕಂದ್ರೆ ಆತನು ಅಮೋಘ ಜಯ ಪಡೆದಿದ್ದಾನೆ.+ ಕುದುರೆಗಳನ್ನ, ಕುದುರೆ ಸವಾರರನ್ನ ಸಮುದ್ರಕ್ಕೆ ಬಿಸಾಕಿದ್ದಾನೆ.”+ 22  ಆಮೇಲೆ ಮೋಶೆ ಇಸ್ರಾಯೇಲ್ಯರನ್ನ ಕೆಂಪು ಸಮುದ್ರದಿಂದ ಕರ್ಕೊಂಡು ಶೂರಿನ ಕಾಡಿಗೆ ಹೋದ. ಅವರು ಆ ಕಾಡಿನಲ್ಲಿ ಮೂರು ದಿನ ಪ್ರಯಾಣ ಮಾಡಿದ್ರು. ಅಲ್ಲಿ ಎಲ್ಲೂ ಅವರಿಗೆ ನೀರು ಸಿಗಲಿಲ್ಲ. 23  ಆಮೇಲೆ ಅವರು ಮಾರಾ*+ ಅನ್ನೋ ಸ್ಥಳಕ್ಕೆ ಬಂದ್ರು. ಅಲ್ಲಿ ನೀರು ಸಿಕ್ತು, ಆದ್ರೆ ಅದು ಕಹಿ ಆಗಿತ್ತು. ಅವರಿಗೆ ಕುಡಿಯೋಕೆ ಆಗಲಿಲ್ಲ. ಹಾಗಾಗಿ ಅವರು ಆ ಸ್ಥಳಕ್ಕೆ ಮಾರಾ ಅನ್ನೋ ಹೆಸರು ಇಟ್ರು. 24  ಜನ ಮೋಶೆಗೆ “ನಾವೀಗ ಏನು ಕುಡಿಯೋದು?” ಅಂತ ಗೊಣಗೋಕೆ ಶುರುಮಾಡಿದ್ರು.+ 25  ಆಗ ಮೋಶೆ ಯೆಹೋವನಿಗೆ ಪ್ರಾರ್ಥಿಸಿದ.+ ಯೆಹೋವ ಅವನಿಗೆ ಒಂದು ಗಿಡ ತೋರಿಸಿದನು. ಅವನು ಆ ಗಿಡನ ನೀರಲ್ಲಿ ಎಸೆದಾಗ ಆ ನೀರು ಸಿಹಿ ಆಯ್ತು. ಹೀಗೆ, ಜನ್ರು ತನ್ನ ಮಾತು ಕೇಳ್ತಾರಾ ಇಲ್ವಾ ಅಂತ ತಿಳ್ಕೊಳ್ಳೋಕೆ ದೇವರು ಅವರನ್ನ ಪರೀಕ್ಷೆ ಮಾಡಿದನು. ಆತನು ಈ ಘಟನೆನ ಬಳಸಿ ತಾನು ಅವರಿಂದ ಏನು ಬಯಸ್ತೀನಿ ಅಂತ ಅವರು ತಿಳ್ಕೊಳ್ಳೋ ತರ ಮಾಡಿದನು.+ 26  ದೇವರು ಹೀಗೆ ಹೇಳಿದನು: “ನಿಮ್ಮ ದೇವರಾಗಿರೋ ಯೆಹೋವನಾದ ನನ್ನ ಮಾತನ್ನ ನೀವು ಕೇಳಿ ಅದನ್ನ ತಪ್ಪದೆ ಪಾಲಿಸಿ. ನನ್ನ ದೃಷ್ಟಿಯಲ್ಲಿ ಸರಿಯಾಗಿ ಇರೋದನ್ನ ಮಾಡಿ. ನನ್ನ ಆಜ್ಞೆಗಳನ್ನ ಕೇಳಿ ನನ್ನ ಎಲ್ಲ ನಿಯಮಗಳ ಪ್ರಕಾರ ನಡಿರಿ.+ ಹಾಗೆ ಮಾಡಿದ್ರೆ ನಾನು ಈಜಿಪ್ಟಿನವರ ಮೇಲೆ ತಂದ ಯಾವ ಕಾಯಿಲೆಯನ್ನೂ ನಿಮ್ಮ ಮೇಲೆ ತರಲ್ಲ.+ ಯೆಹೋವನಾದ ನಾನು ನಿಮ್ಮನ್ನ ಆರೋಗ್ಯವಾಗಿ ಇಡ್ತೀನಿ.”+ 27  ಆಮೇಲೆ ಇಸ್ರಾಯೇಲ್ಯರು ಏಲೀಮಿಗೆ ಬಂದ್ರು. ಅಲ್ಲಿ 12 ನೀರಿನ ತೊರೆ, 70 ಖರ್ಜೂರ ಮರ ಇತ್ತು. ಹಾಗಾಗಿ ಅವರು ಆ ನೀರಿನ ತೊರೆ ಹತ್ರ ಡೇರೆ ಹಾಕೊಂಡ್ರು.

ಪಾದಟಿಪ್ಪಣಿ

“ಯಾಹು” ಅನ್ನೋದು ಯೆಹೋವ ಹೆಸರಿನ ಸಂಕ್ಷಿಪ್ತರೂಪ.
ಕುಲಾಧಿಪತಿಗಳು
ಅರ್ಥ “ಕಹಿ.”