ಯೋಬ 41:1-34

  • ಬೆರಗುಗೊಳಿಸೋ ಲಿವ್ಯಾತಾನಿನ ಬಗ್ಗೆ ವಿವರಿಸಿದನು (1-34)

41  ಲಿವ್ಯಾತಾನನ್ನ*+ ಗಾಳ ಹಾಕಿ ಹಿಡಿಯೋಕೆ ನಿನ್ನಿಂದ ಸಾಧ್ಯನಾ? ಅದ್ರ ನಾಲಿಗೆಯನ್ನ ಹಗ್ಗದಿಂದ ಬಿಗಿಯಾಗಿ ಕಟ್ಟೋಕೆ ನಿನ್ನಿಂದಾಗುತ್ತಾ?   ಅದಕ್ಕೆ ಮೂಗುದಾರ* ಹಾಕೋಕೆ ನಿನ್ನಿಂದ ಆಗುತ್ತಾ? ಅದ್ರ ದವಡೆಗಳನ್ನ ಕೊಕ್ಕೆಯಿಂದ ಚುಚ್ಚೋಕೆ ಆಗುತ್ತಾ?   ‘ದಯೆ ತೋರಿಸು’ ಅಂತ ಅದು ನಿನ್ನನ್ನ ಬೇಡುತ್ತಾ? ನಿನ್ನ ಜೊತೆ ನಯವಿನಯದಿಂದ ಮಾತಾಡುತ್ತಾ?   ಅದು ನಿನ್ನ ಜೊತೆ ಒಪ್ಪಂದ ಮಾಡ್ಕೊಂಡುಜೀವನಪೂರ್ತಿ ನಿನ್ನ ಆಳಾಗಿ ಇರುತ್ತಾ?   ಹಕ್ಕಿ ಜೊತೆ ಆಟ ಆಡೋ ತರ ನೀನು ಅದ್ರ ಜೊತೆ ಆಡ್ತೀಯಾ? ನಿನ್ನ ಮುದ್ದಿನ ಹೆಣ್ಣು ಮಕ್ಕಳನ್ನ ನಗಿಸೋಕೆ ಅದನ್ನ ಕಟ್ಟಿಹಾಕ್ತೀಯಾ?   ಮೀನುಗಾರರು ಅದಕ್ಕೆ ಬೆಲೆ ಕಟ್ಟಕ್ಕಾಗುತ್ತಾ? ಅವರು ಅದನ್ನ ತುಂಡುತುಂಡು ಮಾಡಿ ವ್ಯಾಪಾರಿಗಳಿಗೆ ಹಂಚೋಕೆ ಆಗುತ್ತಾ?   ನೀನು ಅದ್ರ ಚರ್ಮದ ಮೇಲೆಲ್ಲ ಈಟಿಗಾಳಗಳನ್ನ ಚುಚ್ಚುತ್ತೀಯಾ?+ ಮೀನು ಭರ್ಜಿಗಳಿಂದ ಅದ್ರ ತಲೆಗೆ ಚುಚ್ಚುತ್ತೀಯಾ?   ಒಂದು ಸಲ ಅದನ್ನ ಮುಟ್ಟಿ ನೋಡು! ಮತ್ತೆ ನೀನು ಯಾವತ್ತೂ ಅದ್ರ ಕಡೆ ತಲೆ ಹಾಕಲ್ಲ,ನೀನು ಮಾಡಿದ ಹೋರಾಟವನ್ನ ಸಾಯೋ ತನಕ ಮರಿಯಲ್ಲ!   ಅದನ್ನ ಹಿಡಿತೀನಿ ಅಂತ ನೆನಸೋದು ಒಂದು ಕನಸು. ಅದನ್ನ ನೋಡಿದ ತಕ್ಷಣ ನೀನೇ ಹೆದರಿ ಎದ್ದುಬಿದ್ದು ಓಡ್ತೀಯ. 10  ಅದನ್ನ ಕೆಣಕೋ ಧೈರ್ಯ ಯಾರಿಗೂ ಇಲ್ಲ. ಹೀಗಿರುವಾಗ ನನ್ನನ್ನ ವಿರೋಧಿಸಿ ನಿಲ್ಲೋಕೆ ಯಾರಿಂದ ಆಗುತ್ತೆ?+ 11  ನಾನು ವಾಪಸ್‌ ಕೋಡೋಕೆ ನನಗೆ ಯಾರಾದ್ರೂ ಏನಾದ್ರೂ ಮೊದ್ಲು ಕೊಟ್ಟಿದ್ದಾರಾ?+ ಆಕಾಶದ ಕೆಳಗೆ ಇರೋದೆಲ್ಲ ನಂದೇ.+ 12  ಅದ್ರ ಕಾಲುಗಳ ಬಗ್ಗೆ, ಅದಕ್ಕಿರೋ ಶಕ್ತಿ ಬಗ್ಗೆಚೆನ್ನಾಗಿ ಮಾಡಿರೋ ಅದ್ರ ದೇಹದ ಬಗ್ಗೆ ನಾನು ವಿವರಿಸ್ಲೇಬೇಕು. 13  ಅದ್ರ ದಪ್ಪ ಚರ್ಮವನ್ನ ಯಾರಾದ್ರೂ ಸುಲಿದಿದ್ದಾರಾ? ಅದ್ರ ಬಾಯಿ ಒಳಗೆ ಹೋಗೋಕೆ ಯಾರಿಗಾದ್ರೂ ಆಗುತ್ತಾ? 14  ಅದ್ರ ಬಾಯಿಯನ್ನ ತೆರಿಯೋಷ್ಟು ಗುಂಡಿಗೆ ಯಾರಿಗಿದೆ? ಅದ್ರ ಹಲ್ಲುಗಳನ್ನ ನೋಡಿ ಹೆದರಿ ನಡುಗದವರು ಯಾರಿದ್ದಾರೆ? 15  ಅದ್ರ ಬೆನ್ನ ಮೇಲಿನ ಚರ್ಮ ಚಿಪ್ಪುಗಳನ್ನ ಸಾಲಾಗಿ ಒಂದ್ರ ಮೇಲೊಂದು ಜೋಡಿಸಿಟ್ಟ ಹಾಗಿದೆ,*ಅವು ಒತ್ತೊತ್ತಾಗಿ ಇದ್ದು, ಬಿಗಿಯಾಗಿ ಅಂಟ್ಕೊಂಡಿವೆ. 16  ಸ್ವಲ್ಪ ಗಾಳಿನೂ ಹೋಗದ ಹಾಗೆಒಂದಕ್ಕೊಂದು ಹೆಣೆದ್ಕೊಂಡಿವೆ. 17  ಅವು ಒಂದು ಇನ್ನೊಂದಕ್ಕೆ ಅಂಟ್ಕೊಂಡಿವೆ,ಬಿಡಿಸೋಕೆ ಆಗಲ್ಲ. 18  ಅದು ನಿಟ್ಟುಸಿರು ಬಿಡುವಾಗ ಚಿಮ್ಮುವ ತುಂತುರುಗಳು ಬೆಳಕಿಗೆ ಪಳಪಳ ಅನ್ನುತ್ತೆ,ಅದ್ರ ಕಣ್ಣುಗಳು ಸೂರ್ಯೋದಯದ ಕಿರಣಗಳ ಹಾಗೆ ಮಿರಿಮಿರಿ ಮಿಂಚುತ್ತೆ. 19  ಅದ್ರ ಬಾಯೊಳಗಿಂದ ಮಿಂಚು ಬರುತ್ತೆ,ಬೆಂಕಿ ಕಿಡಿಗಳು ಹಾರುತ್ತೆ. 20  ಹುಲ್ಲು ಹಾಕಿ ಉರಿಸಿದ ಒಲೆಯಲ್ಲಿ ಹೊಗೆ ಬರೋ ಹಾಗೆಅದು ಮೂಗಿಂದ ಹೊಗೆ ಬಿಡುತ್ತೆ. 21  ಅದ್ರ ಉಸಿರಿಂದ ಕೆಂಡಗಳು ಜಗಜಗಿಸುತ್ತೆ,ಅದ್ರ ಬಾಯಿಂದ ಜ್ವಾಲೆ ಚಿಮ್ಮುತ್ತೆ. 22  ಅದ್ರ ಕತ್ತಲ್ಲಿ ತುಂಬ ಬಲ ಇದೆ,ಭಯ ಅದ್ರ ಮುಂದೆ ನಿಲ್ಲದೆ ಓಡಿಹೋಗುತ್ತೆ. 23  ಅದ್ರ ಚರ್ಮದ ಪದರಗಳು ಒಟ್ಟಿಗೆ ಬಿಗಿಯಾಗಿ ಅಂಟ್ಕೊಂಡಿವೆ,ಅಚ್ಚಲ್ಲಿ ಹೊಯ್ದ ಲೋಹದ ಹಾಗೆ ಗಟ್ಟಿಯಾಗಿವೆ, ಸ್ವಲ್ಪನೂ ಕದಲಲ್ಲ. 24  ಅದ್ರ ಹೃದಯ ಕಲ್ಲಿನಷ್ಟು ಗಟ್ಟಿ,ಬೀಸೋ ಕಲ್ಲಿನ ಕೆಳಕಲ್ಲಿನ ತರ ಗಟ್ಟಿ. 25  ಅದು ಎದ್ರೆ ಬಲಶಾಲಿಗಳು ಸಹ ಭಯದಿಂದ ಗಡಗಡ ನಡುಗ್ತಾರೆ,ಅದು ತನ್ನ ಬಾಲವನ್ನ ಜೋರಾಗಿ ಬಡಿದಾಗ ತಬ್ಬಿಬ್ಬು ಆಗ್ತಾರೆ. 26  ಕತ್ತಿಗೆ ಅದು ಜಗ್ಗಲ್ಲ,ಈಟಿ, ಭರ್ಜಿ, ಬಾಣದ ಚೂಪಿಗೆ ಸಹ ಬಗ್ಗಲ್ಲ.+ 27  ಕಬ್ಬಿಣ ಅದಕ್ಕೆ ಒಣಹುಲ್ಲು ತರ,ತಾಮ್ರ ಟೊಳ್ಳು ಮರದ ಹಾಗೆ. 28  ಬಾಣ ನೋಡಿ ಅದು ಓಡಲ್ಲ,ಕವಣೆ ಕಲ್ಲಿಂದ ಹೊಡೆದ್ರೆ ಅದಕ್ಕೆ ಮೈಮೇಲೆ ಹೊಟ್ಟು ಬಿದ್ದ ಹಾಗಿರುತ್ತೆ. 29  ಅದಕ್ಕೆ ದೊಣ್ಣೆ ಹುಲ್ಲು ಕಡ್ಡಿ ತರ,ಬಿರ್ರನೆ ಬರೋ ಭರ್ಜಿಯನ್ನ ನೋಡಿ ನಗುತ್ತೆ. 30  ಅದ್ರ ಕೆಳಭಾಗ ಮಡಿಕೆಯ ಚೂಪಾದ ಚೂರುಗಳ ಹಾಗಿದೆ,ಕಣ ಒಕ್ಕುವ ಹಲಗೆ ತರ ಅದು ಕೆಸರಲ್ಲಿ ಬಿದ್ಕೊಂಡಿರುತ್ತೆ.+ 31  ಹಂಡೆಯಲ್ಲಿರೋ ನೀರು ತರ ಅದು ಆಳವಾದ ಸಮುದ್ರ ನೀರನ್ನ ಕುದಿಸುತ್ತೆ,ಹಂಡೆಯಲ್ಲಿ ಎಣ್ಣೆ ಕಾಯಿಸಿದ ಹಾಗೆ ಸಮುದ್ರದಲ್ಲಿ ನೊರೆ ಎಬ್ಬಿಸುತ್ತೆ. 32  ಅದು ನೀರಲ್ಲಿ ಹೋಗುವಾಗ ಹೋದ ದಾರಿ ಮಿನಮಿನ ಮಿನುಗುತ್ತೆ,ಆಗ ಸಾಗರಕ್ಕೆ ಬಿಳಿ ಕೂದಲು ಬಂದ ತರ ಕಾಣುತ್ತೆ. 33  ಭೂಮಿ ಮೇಲೆ ಅದ್ರ ಹಾಗೆ ಬೇರೆ ಜೀವಿ ಇಲ್ಲ,ಭಯಕ್ಕೆ ತಲೆಬಾಗದೆ ಬದುಕಬೇಕಂತಾನೇ ಸೃಷ್ಟಿ ಆಗಿರೋ ಜೀವಿ ಅದು. 34  ಜಂಬದ ಪ್ರಾಣಿಗಳನ್ನೆಲ್ಲ ಅದು ಗುರಾಯಿಸಿ ನೋಡುತ್ತೆ,ಎಲ್ಲ ಶಕ್ತಿಶಾಲಿ ಕಾಡು ಪ್ರಾಣಿಗಳಿಗೆ ಇದೇ ರಾಜ!”

ಪಾದಟಿಪ್ಪಣಿ

ಬಹುಶಃ ಮೊಸಳೆ.
ಅಥವಾ “ಆಪುಹುಲ್ಲಿನ ಹಗ್ಗ.”
ಬಹುಶಃ, “ತನಗಿರೋ ಚಿಪ್ಪುಗಳ ಸಾಲುಗಳ ಬಗ್ಗೆ ಅದು ಹೆಮ್ಮೆಪಡುತ್ತೆ.”