ಯೋಬ 40:1-24

  • ಯೆಹೋವ ಪ್ರಶ್ನೆ ಕೇಳೋದನ್ನ ಮುಂದುವರಿಸ್ತಾನೆ (1-24)

    • ಹೇಳೋಕೆ ಏನೂ ಇಲ್ಲ ಅಂತ ಯೋಬ ಒಪ್ಕೊಳ್ತಾನೆ (3-5)

    • “ನನ್ನ ನ್ಯಾಯವನ್ನೇ ನೀನು ಪ್ರಶ್ನಿಸ್ತೀಯಾ?” (8)

    • ಬೆಹೇಮೋತಿನ ಬಲವನ್ನ ದೇವರು ವಿವರಿಸಿದ (15-24)

40  ಯೆಹೋವ ಯೋಬನಿಗೆ ಹೀಗಂದನು:   “ಸರ್ವಶಕ್ತನಲ್ಲೇ ತಪ್ಪು ಕಂಡುಹಿಡಿದು ಆತನ ಜೊತೆ ವಾದಿಸೋಕೆ ಯಾರಿಂದಾದ್ರೂ ಆಗುತ್ತಾ?+ ದೇವರು ತಪ್ಪು ಅಂತ ಆರೋಪ ಹಾಕೋನು ಯಾರಾದ್ರೂ ಇದ್ರೆ ಉತ್ತರ ಕೊಡ್ಲಿ” ಅಂದನು.+   ಅದಕ್ಕೆ ಯೋಬ ಯೆಹೋವನಿಗೆ,   “ನನಗೆ ಮಾತಾಡೋಕೆ ಯೋಗ್ಯತೆ ಇಲ್ಲ,+ಅಂದ್ಮೇಲೆ ಏನಂತ ಉತ್ತರ ಕೊಡ್ಲಿ? ನನ್ನ ಬಾಯಿ ಮೇಲೆ ಕೈ ಇಟ್ಕೊಳ್ತೀನಿ.+   ನಾನು ತುಂಬ* ಮಾತಾಡಿಬಿಟ್ಟಿದ್ದೀನಿ,ಆದ್ರೆ ಇನ್ನು ಮಾತಾಡಲ್ಲ, ಬಾಯಿ ಮುಚ್ಕೊಂಡು ಇರ್ತಿನಿ” ಅಂದ.  ಆಮೇಲೆ ಯೆಹೋವ ಬಿರುಗಾಳಿ ಒಳಗಿಂದ ಯೋಬನಿಗೆ ಹೀಗೆ ಹೇಳಿದನು:+   “ನಾನು ನಿನಗೆ ಪ್ರಶ್ನೆ ಕೇಳ್ತೀನಿ,ಧೈರ್ಯವಾಗಿ ಉತ್ತರ ಕೊಡೋಕೆ ತಯಾರಾಗಿರು.+   ನನ್ನ ನ್ಯಾಯವನ್ನೇ ನೀನು ಪ್ರಶ್ನಿಸ್ತೀಯಾ? ನೀನೇ ಸರಿ ಅಂತ ತೋರಿಸೋಕೆ ನನ್ನನ್ನೇ ತಪ್ಪು ಅಂತೀಯಾ?+   ಸತ್ಯ ದೇವರ ಕೈಗಿರೋಷ್ಟು ಶಕ್ತಿ ನಿನ್ನ ಕೈಗೆ ಇದ್ಯಾ?+ ನಿನ್ನ ಧ್ವನಿ ಆತನ ಧ್ವನಿ ತರ ಗಟ್ಟಿಯಾಗಿ ಗುಡುಗುತ್ತಾ?+ 10  ದಯವಿಟ್ಟು, ನಿನ್ನನ್ನ ಮಹಿಮೆ, ಘನತೆಗಳಿಂದ ಅಲಂಕರಿಸ್ಕೊ,ನೀನು ಗೌರವ, ವೈಭವಗಳನ್ನ ತೊಟ್ಕೊ. 11  ನಿನ್ನ ಕೋಪನಾ ತೋರಿಸು,ಹೆಮ್ಮೆಯಿಂದ ಉಬ್ಬಿಕೊಂಡಿರೋ ಪ್ರತಿಯೊಬ್ಬನ ಮೇಲೆ ಕಣ್ಣಿಟ್ಟು ಸೊಕ್ಕಡಗಿಸು. 12  ಹೆಮ್ಮೆಯಿಂದ ಉಬ್ಬಿಕೊಂಡಿರೋ ಜನ್ರ ಮೇಲೆ ಕಣ್ಣಿಟ್ಟು ಅವ್ರಿಗೆ ದೀನತೆ ಕಲಿಸು,ಕೆಟ್ಟವ್ರನ್ನ ಅವರು ನಿಂತಿರೋ ಜಾಗದಲ್ಲೇ ತುಳಿದುಬಿಡು. 13  ಅವ್ರನ್ನೆಲ್ಲ ಮಣ್ಣಲ್ಲಿ ಹೂತುಹಾಕು,ಕಾಣದಿರೋ ಜಾಗದಲ್ಲಿ ಅವ್ರನ್ನ ಬಂಧಿಸಿಡು. 14  ಇದನ್ನೆಲ್ಲ ನಿನ್ನಿಂದ ಮಾಡಕ್ಕಾದ್ರೆ ನಿನ್ನನ್ನ ಕಾಪಾಡ್ಕೊಳ್ಳೋ ಶಕ್ತಿ* ನಿನಗಿದೆ ಅಂತ ನಾನೇ ಒಪ್ಕೊಳ್ತೀನಿ.* 15  ಬೆಹೇಮೋತನ್ನ* ಸ್ವಲ್ಪ ನೋಡು,ನಿನ್ನನ್ನ ಸೃಷ್ಟಿ ಮಾಡಿರೋ ನಾನೇ ಅದನ್ನೂ ಮಾಡಿದೆ,ಅದು ಹೋರಿ ತರ ಹುಲ್ಲು ತಿನ್ನುತ್ತೆ. 16  ಅದ್ರ ಸೊಂಟಕ್ಕೆಷ್ಟು ಬಲ ಇದೆ ಅಂತ ನೋಡು! ಹೊಟ್ಟೆಯ ಸ್ನಾಯುಗಳಲ್ಲಿ ಎಷ್ಟು ಶಕ್ತಿ ಇದೆ ಅಂತ ನೋಡು! 17  ಅದು ತನ್ನ ಬಾಲವನ್ನ ದೇವದಾರು ಮರ ತರ ಬಿಗಿಯಾಗಿಸುತ್ತೆ,ಅದ್ರ ತೊಡೆಗಳ ಸ್ನಾಯುಗಳು ಒಂದ್ರ ಜೊತೆಗೊಂದು ಹೆಣೆದಿರುತ್ತೆ. 18  ಅದ್ರ ಮೂಳೆಗಳು ತಾಮ್ರದ ಕೊಳವೆ ತರ ಇರುತ್ತೆ,ಅದ್ರ ಕಾಲುಗಳು ಕಬ್ಬಿಣದ ಕಂಬಿ ತರ ಇರುತ್ತೆ. 19  ದೊಡ್ಡ ದೊಡ್ಡ ಪ್ರಾಣಿಗಳಲ್ಲಿ ಮೊದ್ಲು ದೇವರು ಈ ಪ್ರಾಣಿಯನ್ನ ಸೃಷ್ಟಿ ಮಾಡಿದನು,ಇದಕ್ಕೆ ಸರಿಸಾಟಿ ಯಾವುದೂ ಇಲ್ಲ,ಅದನ್ನ ಸೃಷ್ಟಿ ಮಾಡಿದ ದೇವ್ರಿಗೆ ಮಾತ್ರ ಅದನ್ನ ಕತ್ತಿಯಿಂದ ಕೊಲ್ಲೋಕೆ ಆಗುತ್ತೆ. 20  ಬೆಟ್ಟಗಳು ಅದಕ್ಕೆ ಆಹಾರ ಕೊಡುತ್ತೆ,ಅಲ್ಲಿ ಕಾಡುಪ್ರಾಣಿಗಳೆಲ್ಲ ಆಟ ಆಡುತ್ತೆ. 21  ಅದು ಮುಳ್ಳು ಪೊದೆಗಳ ಕೆಳಗೆ,ಜವುಗುನೆಲದ ಆಪುಹುಲ್ಲಿನ ಆಸರೆಯಲ್ಲಿ ಮಲಗುತ್ತೆ. 22  ಮುಳ್ಳು ಪೊದೆಗಳು ಅದಕ್ಕೆ ನೆರಳು ಕೊಡುತ್ತೆ,ಕಣಿವೆಯಲ್ಲಿನ ನೀರವಂಜಿ* ಮರಗಳು ಅದ್ರ ಸುತ್ತ ಇರುತ್ತೆ. 23  ನದಿ ಉಕ್ಕಿ ಹರಿದ್ರೂ ಅದಕ್ಕೆ ಗಾಬರಿ ಆಗಲ್ಲ,ಯೋರ್ದನಲ್ಲಿ+ ಪ್ರವಾಹ ಬಂದು ಅದ್ರ ಬಾಯೊಳಗೆ ನುಗ್ಗಿದ್ರೂ ಧೈರ್ಯವಾಗಿ ಇರುತ್ತೆ. 24  ಅದ್ರ ಕಣ್ಮುಂದೆನೇ ಹೋಗಿ ಅದನ್ನ ಹಿಡಿಯೋಕೆ ಯಾರಿಂದಾದ್ರೂ ಆಗುತ್ತಾ? ಅದ್ರ ಮೂಗಿಗೆ ಕೊಕ್ಕೆ ಚುಚ್ಚುವಷ್ಟು ಧೈರ್ಯ ಯಾರಿಗಿದೆ?

ಪಾದಟಿಪ್ಪಣಿ

ಅಕ್ಷ. “ಒಂದು ಸಲ, ಎರಡು ಸಲ,” ಅಥವಾ “ಮತ್ತೆ ಮತ್ತೆ ಮಾತಾಡಿದ್ದೀನಿ.”
ಅಕ್ಷ. “ಬಲಗೈ.”
ಅಥವಾ “ನಿನ್ನನ್ನ ಹೊಗಳ್ತೀನಿ.”
ಬಹುಶಃ ಇದು ನೀರಾನೆ.
ಅಥವಾ “ಪಾಪ್ಲರ್‌.”