ಯೋಬ 32:1-22

  • ಯುವ ಎಲೀಹು ಮಾತಾಡೋಕೆ ಮುಂದುವರಿಸಿದ (1-22)

    • ಯೋಬನ ಮೇಲೂ ಅವನ ಸ್ನೇಹಿತರ ಮೇಲೂ ಸಿಟ್ಟು (2, 3)

    • ಗೌರವದಿಂದಾಗಿ ಮಾತಾಡದೆ ಸುಮ್ಮನಿದ್ದ (6, 7)

    • ದೊಡ್ಡವರಿಗೆ ಎಲ್ಲ ಗೊತ್ತಿರಬೇಕು ಅಂತಿಲ್ಲ (9)

    • ಮಾತಾಡೋಕೆ ಎಲೀಹುವಿಗೆ ತವಕ (18-20)

32  ಯೋಬ ತಾನು ನೀತಿವಂತ ಅಂತ ದೃಢವಾಗಿ ನಂಬಿರೋದನ್ನ*+ ಆ ಮೂರು ಗಂಡಸರು ನೋಡಿ ಮುಂದಕ್ಕೆ ಏನೂ ಮಾತಾಡಲಿಲ್ಲ.  ಆದ್ರೆ ಬರಕೇಲನ ಮಗ ಎಲೀಹುಗೆ ಯೋಬನ ಮೇಲೆ ತುಂಬ ಕೋಪ ಬಂತು. ಎಲೀಹು ಬೂಜ್‌+ ಕುಲದ ರಾಮ್‌ ಮನೆತನಕ್ಕೆ ಸೇರಿದವನು. ದೇವರು ಮಾಡೋದೆಲ್ಲ ಸರಿ ಅಂತ ಸಾಬೀತು ಮಾಡೋ ಬದ್ಲು ಯೋಬ ತಾನೇ ಸರಿ ಅಂತ ಸಮರ್ಥಿಸ್ತಾ ಇದ್ದದನ್ನ ನೋಡಿ ಎಲೀಹುಗೆ ಕೋಪ ಬಂತು.+  ಯೋಬನ ಮೂವರು ಸ್ನೇಹಿತರ ಮೇಲೆ ಕೂಡ ಅವನಿಗೆ ತುಂಬ ಕೋಪ ಬಂತು. ಯಾಕಂದ್ರೆ ಅವರು ಯೋಬನಿಗೆ ಸರಿಯಾದ ಉತ್ತರ ಕೊಡೋದನ್ನ ಬಿಟ್ಟು ದೇವರು ಕೆಟ್ಟವನು ಅಂತ ಹೇಳ್ತಾ ಇದ್ರು.+  ಅವ್ರೆಲ್ಲ ಮಾತಾಡಿ ಮುಗಿಸೋ ತನಕ ಎಲೀಹು ಕಾಯ್ತಾ ಇದ್ದ. ಮಧ್ಯ ಬಾಯಿ ಹಾಕಿ ಯೋಬನ ಹತ್ರ ಮಾತಾಡಲಿಲ್ಲ, ಯಾಕಂದ್ರೆ ಅವ್ರೆಲ್ಲ ಅವನಿಗಿಂತ ವಯಸ್ಸಲ್ಲಿ ದೊಡ್ಡವರು.+  ಯೋಬನಿಗೆ ಇನ್ನೂ ಏನು ಉತ್ತರ ಕೊಡಬೇಕಂತ ಆ ಮೂವರಿಗೆ ತಲೆ ಓಡದ ಕಾರಣ ಎಲೀಹುವಿನ ಕೋಪ ನೆತ್ತಿಗೇರಿತು.  ಹಾಗಾಗಿ ಬೂಜ್‌ ಕುಲದ ಬರಕೇಲನ ಮಗ ಎಲೀಹು ಮಾತಾಡೋಕೆ ಶುರುಮಾಡಿದ. ಅವನು ಹೀಗಂದ: “ನೀವೆಲ್ಲ ವಯಸ್ಸಲ್ಲಿ ನನಗಿಂತ ದೊಡ್ಡವರು,+ನಾನು ಚಿಕ್ಕವನು. ನಿಮ್ಮ ಮೇಲಿನ ಗೌರವದಿಂದ ನಾನು ಮಧ್ಯ ಬಾಯಿ ಹಾಕಲಿಲ್ಲ,+ನನಗೆ ಗೊತ್ತಿರೋದನ್ನ ಹೇಳ್ದೆ ಸುಮ್ಮನಿದ್ದೆ.   ‘ದೊಡ್ಡವರು ಮಾತಾಡ್ಲಿ,ವಯಸ್ಸಾದವ್ರಿಗೆ ಬುದ್ಧಿ ಇರುತ್ತೆ, ಅವರು ಹೇಳಲಿ’ ಅಂತ ನೆನಸಿದೆ.   ಆದ್ರೆ ದೇವರ ಪವಿತ್ರಶಕ್ತಿನೇ, ಸರ್ವಶಕ್ತನ ಉಸಿರೇಜನ್ರಿಗೆ ತಿಳುವಳಿಕೆ ಕೊಡೋದು.+   ದೊಡ್ಡವ್ರಿಗೆ ಎಲ್ಲ ಗೊತ್ತಿರಬೇಕು ಅಂತಿಲ್ಲ,ಸರಿ ಯಾವುದು ಅಂತ ಅರ್ಥ ಮಾಡ್ಕೊಳ್ಳೋರು ವಯಸ್ಸಾದವರು ಮಾತ್ರ ಅಲ್ಲ.+ 10  ಹಾಗಾಗಿ ನಾನು ಹೇಳೋದನ್ನ ಕೇಳಿಸ್ಕೊ,ನನಗೆ ಗೊತ್ತಿರೋದನ್ನ ನಾನೂ ಹೇಳ್ತೀನಿ. 11  ನಿಮ್ಮ ಮಾತುಗಳನ್ನ ಕೇಳಿಸ್ಕೊಳ್ಳೋಕೆ ಕಾಯ್ತಾ ಇದ್ದೆ,ನಿಮ್ಮ ವಾದಗಳನ್ನೂ ಕೇಳಿಸ್ಕೊಂಡೆ,+ಮುಂದೇನು ಹೇಳಬೇಕಂತ ನೀವು ಯೋಚ್ನೆ ಮಾಡ್ತಾ ಇದ್ದಾಗ್ಲೂ+ ಕಾಯ್ತಾ ಇದ್ದೆ. 12  ನೀವು ಹೇಳಿದ ಮಾತನ್ನೆಲ್ಲ ಗಮನಕೊಟ್ಟು ಕೇಳ್ತಿದ್ದೆ,ಆದ್ರೆ ನಿಮಗೆ ಯಾರಿಗೂ ಯೋಬನನ್ನ ತಪ್ಪು ಅಂತ ಸಾಬೀತು ಮಾಡಕ್ಕಾಗಲಿಲ್ಲ,ಅವನು ಕೇಳಿದ ಪ್ರಶ್ನೆಗಳಿಗೆ ಉತ್ತರ ಕೊಡಕ್ಕಾಗಲಿಲ್ಲ. 13  ಹಾಗಾಗಿ ನೀವೇ ತುಂಬ ಜಾಣರು ಅಂತ ನೆನಸಬೇಡಿ,‘ಮನುಷ್ಯನಲ್ಲ ದೇವರೇ ಅವನನ್ನ ಬೈತಿದ್ದಾನೆ,’ ಅಂತ ಹೇಳಬೇಡಿ. 14  ಯೋಬ ನನ್ನ ವಿರುದ್ಧ ಏನೂ ಹೇಳಲಿಲ್ಲ,ಹಾಗಾಗಿ ನೀವು ವಾದ ಮಾಡಿದ ತರ ನಾನು ಮಾಡಲ್ಲ. 15  ಅವರು ಗಲಿಬಿಲಿ ಆಗಿಬಿಟ್ಟಿದ್ದಾರೆ, ಏನು ಉತ್ತರ ಕೊಡಬೇಕಂತಾನೇ ಗೊತ್ತಾಗ್ತಿಲ್ಲ,ಹೇಳೋಕೆ ಅವ್ರ ಹತ್ರ ಏನೂ ಉಳಿದಿಲ್ಲ. 16  ನಾನು ಕಾಯ್ತಾ ಇದ್ದೆ, ಆದ್ರೆ ಅವರು ಏನೂ ಹೇಳೋ ಹಾಗೆ ಕಾಣಿಸ್ತಿಲ್ಲ,ಸುಮ್ಮನೆ ನಿಂತ್ಕೊಂಡಿದ್ದಾರೆ, ತುಟಿಕ್‌-ಪಿಟಿಕ್‌ ಅಂತಿಲ್ಲ. 17  ಹಾಗಾಗಿ ಈಗ ನಾನು ಮಾತಾಡ್ತೀನಿ,ಗೊತ್ತಿರೋದನ್ನ ನಾನೂ ಹೇಳ್ತೀನಿ, 18  ಎಷ್ಟೋ ವಿಷ್ಯಗಳನ್ನ ಹೇಳೋಕೆ ನನ್ನ ಮನಸ್ಸು ತುಡಿತಿದೆ,ಮಾತಾಡೋಕೆ ಪವಿತ್ರಶಕ್ತಿ ನನಗೆ ಒತ್ತಾಯ ಮಾಡ್ತಿದೆ. 19  ದ್ರಾಕ್ಷಾಮದ್ಯ ತುಂಬಿ ಇನ್ನೇನು ಒಡೆದು ಹೋಗೋಚರ್ಮದ ಹೊಸ ಬುದ್ದಲಿ+ ತರ ನಾನಿದ್ದೀನಿ,ನನ್ನ ಮನಸ್ಸಲ್ಲಿ ಇರೋದನ್ನ ಹೇಳದೇ ಇರೋಕೆ ಆಗ್ತಿಲ್ಲ. 20  ಈಗ ಮಾತಾಡಿದ್ರೆ ಮಾತ್ರ ನನಗೆ ನೆಮ್ಮದಿ! ಮನಸ್ಸಲ್ಲಿ ಇರೋದನ್ನೆಲ್ಲ* ಹೇಳಿಬಿಡ್ತೀನಿ. 21  ನಾನು ಯಾರ ಪಕ್ಷಾನೂ ವಹಿಸಲ್ಲ,+ನಾನು ಯಾರನ್ನೂ ಸುಮ್‌ಸುಮ್ನೆ ಹೊಗಳಲ್ಲ,* 22  ಯಾಕಂದ್ರೆ ಆ ರೀತಿ ಮಾಡೋಕೆ ನನಗೆ ಗೊತ್ತೇ ಇಲ್ಲ,ಹಾಗೆ ಮಾಡಿದ್ರೆ ನನ್ನನ್ನ ಸೃಷ್ಟಿ ಮಾಡಿದವನು ನನ್ನನ್ನ ಒಂದೇ ಏಟಿಗೆ ನಾಶಮಾಡಲ್ವಾ?

ಪಾದಟಿಪ್ಪಣಿ

ಅಥವಾ “ತನ್ನ ದೃಷ್ಟಿಯಲ್ಲಿ ತಾನು ನೀತಿವಂತ ಆಗಿರೋದನ್ನ.”
ಅಕ್ಷ. “ಬಾಯಿ ತೆರೆದು.”
ಅಥವಾ “ಯಾರಿಗೂ ಗೌರವಸೂಚಕ ಬಿರುದು ಕೊಡಲ್ಲ.”