ಯೋಬ 24:1-25

  • ಯೋಬನ ಉತ್ತರ ಮುಂದುವರಿಯುತ್ತೆ (1-25)

    • ದೇವರು ಯಾಕೆ ಸಮಯ ಇಟ್ಟಿಲ್ಲ? (1)

    • ಕೆಟ್ಟತನಕ್ಕೆ ದೇವರು ಅನುಮತಿ ಕೊಟ್ಟಿದ್ದಾನೆ ಅಂದ (12)

    • ಪಾಪಿಗಳಿಗೆ ಕತ್ತಲೆ ಇಷ್ಟ (13-17)

24  ಕೆಟ್ಟವ್ರಿಗೆ ಶಿಕ್ಷೆ ಕೊಡೋಕೆ ಸರ್ವಶಕ್ತ ಯಾಕೆ ಒಂದು ಸಮಯ ಇಟ್ಟಿಲ್ಲ?+ ಆತನನ್ನ ತಿಳಿದವ್ರಿಗೆ ಆ ದಿನವನ್ನ ನೋಡೋಕೆ ಯಾಕೆ ಆಗ್ತಿಲ್ಲ?   ಕೆಟ್ಟವರು ಗಡಿ ಸರಿಸಿ ಬೇರೆಯವ್ರ ಜಮೀನನ್ನ ಒಳಗೆ ಹಾಕೊಳ್ತಾರೆ,+ಬೇರೆಯವ್ರ ಆಡು-ಕುರಿಗಳನ್ನ ಕದಿತಾರೆ.   ಅನಾಥ ಮಕ್ಕಳ ಕತ್ತೆಯನ್ನ ಹೊಡ್ಕೊಂಡು ಹೋಗ್ತಾರೆ,ವಿಧವೆಗೆ ಸಾಲ ಕೊಡುವಾಗ ಅವಳ ಹೋರಿಯನ್ನ ಅಡ ಇಟ್ಕೊಳ್ತಾರೆ.+   ಬಡವ್ರಿಗೆ ರಸ್ತೆಯಲ್ಲಿ ನಡಿಯೋಕೆ ಬಿಡಲ್ಲ,ಪಾಪದವರು ಕೆಟ್ಟವ್ರಿಗೆ ಹೆದರಿ ಕಣ್ಣಿಗೆ ಬೀಳದ ಹಾಗೆ ಓಡಾಡ್ತಾರೆ.+   ಕಾಡುಕತ್ತೆಗಳು+ ಮೇವಿಗಾಗಿ ಕಾಡಲ್ಲಿ ಅಲೆಯೋ ತರಬಡವರು ಊಟಕ್ಕಾಗಿ ಪರದಾಡ್ತಾರೆ,ತಮ್ಮ ಮಕ್ಕಳಿಗಾಗಿ ಊಟವನ್ನ ಹುಡುಕ್ತಾ ಮರಳುಗಾಡಲ್ಲಿ ತಿರುಗಾಡ್ತಾರೆ.   ಬಡವರು ಬೇರೆಯವ್ರ ಹೊಲದಲ್ಲಿ ಕೊಯ್ಲು ಕೆಲಸ ಮಾಡಬೇಕಾಗಿದೆ,*ಕೆಟ್ಟವ್ರ ದ್ರಾಕ್ಷಿತೋಟದಲ್ಲಿ ಕೊಯ್ಯದೆ ಬಿಟ್ಟಿರೋ ಹಣ್ಣುಗಳನ್ನ ಕೂಡಿಸಬೇಕಾಗಿದೆ.   ಅವರು ಬಟ್ಟೆ ಇಲ್ಲದೆ ಬೆತ್ತಲೆಯಾಗಿ ರಾತ್ರಿ ಕಳಿತಾರೆ,+ಚಳಿಯಲ್ಲೂ ಅವ್ರಿಗೆ ಹೊದ್ಕೊಳ್ಳೋಕೆ ಬಟ್ಟೆ ಇಲ್ಲ.   ಬೆಟ್ಟದ ಮೇಲೆ ಸುರಿಯೋ ಮಳೆಯಿಂದಾಗಿ ನೆನೆದುಹೋಗ್ತಾರೆ,ಅವ್ರಿಗೆ ಆಸರೆ ಇಲ್ಲದ್ರಿಂದ ಬಂಡೆಗಳಿಗೆ ಅಂಟ್ಕೊಂಡು ನಿಲ್ತಾರೆ.   ಅನಾಥರನ್ನ ತಾಯಿಯ ಎದೆಯಿಂದ ಕಿತ್ಕೊಳ್ತಾರೆ,+ಬಡವ್ರಿಗೆ ಸಾಲ ಕೊಡುವಾಗ ಅವರು ಹಾಕಿರೋ ಬಟ್ಟೆಗಳನ್ನ ಅಡ ಇಟ್ಕೊಳ್ತಾರೆ,+ 10  ಹೀಗೆ ಮೈಮೇಲೆ ಬಟ್ಟೆ ಇಲ್ಲದ ಹಾಗೆ ಮಾಡ್ತಾರೆ,ಹಸಿವೆಯಲ್ಲೇ ತೆನೆಯ ಕಟ್ಟುಗಳನ್ನ ಹೊರೋ ತರ ಮಾಡ್ತಾರೆ. 11  ಮೆಟ್ಟಿಲುಪಾತಿಯ* ಕಲ್ಲಿನ ಗೋಡೆಗಳ ಮಧ್ಯ ಉರಿಬಿಸಿಲಲ್ಲಿ ಬಡವರು ದುಡಿತಾರೆ,*ದ್ರಾಕ್ಷಿತೊಟ್ಟಿಗಳಲ್ಲಿ ದ್ರಾಕ್ಷಿ ತುಳಿತಾ ಇದ್ರೂ ದಾಹದಿಂದ ಅವ್ರ ಬಾಯಿ ಒಣಗಿಹೋಗಿದೆ.+ 12  ಸಾಯ್ತಾ ಇರುವವರ ನರಳಾಟ ಇಡೀ ಪಟ್ಟಣದಲ್ಲಿ ಕೇಳ್ತಿದೆ,ತೀವ್ರವಾಗಿ ಗಾಯಗೊಂಡವರು ಸಹಾಯಕ್ಕಾಗಿ ಕೂಗ್ತಿದ್ದಾರೆ,+ಆದ್ರೆ ಅದ್ರ ಬಗ್ಗೆ ದೇವ್ರಿಗೆ ಸ್ವಲ್ಪನೂ ಚಿಂತೆ ಇಲ್ಲ.* 13  ಬೆಳಕನ್ನ ಇಷ್ಟಪಡದ ಜನ್ರಿದ್ದಾರೆ,+ಬೆಳಕಿರೋ ದಾರಿಯನ್ನ ಬೇಡ ಅಂತಾರೆ,ಬೆಳಕಲ್ಲಿ ನಡಿಯೋಕೆ ಕೇಳಲ್ಲ. 14  ಕೊಲೆಗಾರ ಮುಂಜಾನೆ ಎದ್ದು ಅಮಾಯಕರನ್ನ, ಬಡವ್ರನ್ನ ಕೊಲ್ತಾನೆ,+ರಾತ್ರಿಯಲ್ಲಿ ಕಳ್ಳತನ ಮಾಡ್ತಾನೆ. 15  ವ್ಯಭಿಚಾರಿ ಸಂಜೆ ಆಗೋದನ್ನೇ ಕಾಯ್ತಾ ಇರ್ತಾನೆ,+‘ಯಾರೂ ನನ್ನನ್ನ ನೋಡಲ್ಲ’+ ಅಂತ ನೆನಸಿ ಮುಖ ಮುಚ್ಕೊಂಡು ಹೋಗ್ತಾನೆ. 16  ಕಳ್ಳರು ಕತ್ತಲಲ್ಲಿ ಬೇರೆಯವ್ರ ಮನೆಗೆ ಕನ್ನಾ ಹಾಕ್ತಾರೆ,ಬೆಳಗಾಗುವಾಗ ಬಚ್ಚಿಟ್ಕೊಳ್ತಾರೆ. ಹಗಲಲ್ಲಿ ಅವರು ಹೊರಗೆ ಕಾಣಿಸಲ್ಲ.+ 17  ಜನ್ರು ಕತ್ತಲೆಗೆ ಭಯಪಡೋ ಹಾಗೆ ಕಳ್ಳರು ಹಗಲಿಗೆ ಭಯಪಡ್ತಾರೆ,ಕತ್ತಲೆಯ ಭಯಕ್ಕೆ ಅವರು ಒಗ್ಗಿ ಹೋಗಿದ್ದಾರೆ. 18  ಆದ್ರೆ ಅವರು ರಭಸವಾಗಿ ಹರಿಯೋ ನೀರಿಗೆ ಕೊಚ್ಕೊಂಡು ಹೋಗ್ತಾರೆ,ಅವ್ರ ಜಮೀನಿಗೆ ಶಾಪ ಬರುತ್ತೆ,+ಅವರು ತಮ್ಮ ದ್ರಾಕ್ಷಿತೋಟಗಳಿಗೆ ಮತ್ತೆ ಹೋಗಕ್ಕಾಗಲ್ಲ. 19  ಬರಗಾಲ, ಬಿಸಿಲ ಬೇಗೆ ಹಿಮವನ್ನ ಕರಗಿಸಿ ಬತ್ತಿಸಿಬಿಡುತ್ತೆಸಮಾಧಿ* ಪಾಪ ಮಾಡಿದವನನ್ನ ನುಂಗಿಬಿಡುತ್ತೆ.+ 20  ಹೆತ್ತ ತಾಯಿ ಅವನನ್ನ ಮರೆತುಬಿಡ್ತಾಳೆ,ಅವನು ಹುಳಗಳಿಗೆ ಮೃಷ್ಟಾನ್ನ ಭೋಜನ ಆಗ್ತಾನೆ,ಮುಂದೆ ಯಾವತ್ತೂ ಯಾರೂ ಅವನನ್ನ ನೆನಪು ಮಾಡ್ಕೊಳ್ಳಲ್ಲ,+ಅನೀತಿವಂತ ಮರದ ಹಾಗೆ ಮುರಿದು ಹೋಗ್ತಾನೆ. 21  ಕೆಟ್ಟವನು ಮಕ್ಕಳಿಲ್ಲದ ಬಂಜೆಗೆ ತುಂಬ ಕಷ್ಟಕೊಡ್ತಾನೆ,ವಿಧವೆಗೆ ಕಿರುಕುಳ ಕೊಡ್ತಾನೆ. 22  ಬಲಶಾಲಿಗಳನ್ನ ದೇವರು ತನ್ನ ಬಲದಿಂದ ನಾಶ ಮಾಡ್ತಾನೆ,ಅವರು ಎಷ್ಟೇ ಎತ್ರಕ್ಕೆ ಬೆಳೆದ್ರೂ ಬದುಕಿ ಉಳಿತ್ತೀವಿ ಅನ್ನೋ ನಂಬಿಕೆ ಇರಲ್ಲ. 23  ಕೆಟ್ಟವರು ಸುರಕ್ಷಿತವಾಗಿ ಭಯ ಇಲ್ಲದೆ ಜೀವಿಸೋಕೆ ದೇವರು ಬಿಡ್ತಾನೆ,+ಆದ್ರೆ ಅವರು ಮಾಡೋ ಎಲ್ಲ ಕೆಲಸದ ಮೇಲೆ ಕಣ್ಣಿಟ್ಟಿರ್ತಾನೆ.+ 24  ಸ್ವಲ್ಪ ಸಮಯ ಅವರು ಚೆನ್ನಾಗಿ ಇರ್ತಾರೆ, ಆಮೇಲೆ ಇಲ್ಲದೆ ಹೋಗ್ತಾರೆ.+ ಬೇರೆಯವ್ರ ತರ ಅವ್ರ ಕಥೆನೂ ಮುಗಿಯುತ್ತೆ,+ತೆನೆಗಳನ್ನ ಕೊಯ್ದು ಕೂಡಿಸೋ ತರ ಅವ್ರನ್ನ ಕೂಡಿಸ್ತಾರೆ. 25  ಈಗ, ನನ್ನ ಮಾತು ಸುಳ್ಳು ಅಂತ ಯಾರಾದ್ರೂ ಹೇಳಿ ನೋಡೋಣ,ನಾನು ಹೇಳಿದ್ದು ತಪ್ಪು ಅಂತ ಸಾಬೀತು ಮಾಡಿ ನೋಡೋಣ.”

ಪಾದಟಿಪ್ಪಣಿ

ಬಹುಶಃ, “ಪ್ರಾಣಿಗಳಿಗಾಗಿ ಮೇವು ಕೊಯ್ಯಬೇಕಾಗಿದೆ.”
ಅಂದ್ರೆ, ಇಳಿಜಾರು ನೆಲದ ಮೇಲೆ ಮೆಟ್ಟಿಲು ಮೆಟ್ಟಿಲಾಗಿ ಮಾಡೋ ಕೃಷಿಭೂಮಿ.
ಬಹುಶಃ, “ಎಣ್ಣೆ ತೆಗಿತಾರೆ.”
ಬಹುಶಃ, “ದೇವರು ಯಾರನ್ನೂ ಅಪರಾಧಿ ಅಂತ ಹೇಳಲ್ಲ.”