ಯೋಬ 13:1-28

  • ಯೋಬನ ಉತ್ತರ ಮುಂದುವರಿಯುತ್ತೆ (1-28)

    • ‘ನಾನು ದೇವರ ಹತ್ರ ಮಾತಾಡೋದೇ ಒಳ್ಳೇದು’ (3)

    • “ನೀವೆಲ್ಲ ಕೆಲಸಕ್ಕೆ ಬಾರದ ವೈದ್ಯರು” (4)

    • “ನಾನು ತಪ್ಪೇ ಮಾಡಿಲ್ಲ ಅಂತ ನಂಗೊತ್ತು” (18)

    • ದೇವರು ನನ್ನನ್ನ ಯಾಕೆ ಶತ್ರು ತರ ನೋಡ್ತಾನೆ (24)

13  ಇದನ್ನೆಲ್ಲ ನಾನು ಕಣ್ಣಾರೆ ನೋಡಿದ್ದೀನಿ,ಕಿವಿಯಾರೆ ಕೇಳಿ ಅರ್ಥ ಮಾಡ್ಕೊಂಡಿದ್ದೀನಿ.   ನಿಮಗೆ ಗೊತ್ತಿರೋದು ನನಗೂ ಗೊತ್ತು,ನಾನು ನಿಮಗಿಂತ ಕಮ್ಮಿ ಅಲ್ಲ.   ನಿಮ್ಮ ಹತ್ರ ಮಾತಾಡೋದಕ್ಕಿಂತ ದೇವರ* ಹತ್ರ ಮಾತಾಡೋದೇ ಒಳ್ಳೇದು,ನನ್ನ ಮೊಕದ್ದಮೆಯನ್ನ ದೇವರ ಮುಂದೆ ಇಟ್ಟು ವಾದಿಸ್ತೀನಿ.+   ನೀವು ಸುಳ್ಳುಗಳನ್ನ ಹೇಳಿ ನನ್ನ ಹೆಸ್ರಿಗೆ ಮಸಿ ಬಳಿದಿದ್ದೀರ,ನೀವೆಲ್ಲ ಕೆಲಸಕ್ಕೆ ಬಾರದ ವೈದ್ಯರು.+   ನಿಮಗೆ ನಿಜವಾಗ್ಲೂ ಬುದ್ಧಿ ಇದ್ರೆಬಾಯಿ ತೆರೀದೆ ಸುಮ್ನಿರಿ.+   ದಯವಿಟ್ಟು ನನ್ನ ವಾದಗಳನ್ನ ಕಿವಿಗೊಟ್ಟು ಕೇಳಿ,ನನ್ನ ಮಾತುಗಳನ್ನ ಕೇಳಿ.   ನೀವು ದೇವರ ಹೆಸ್ರಲ್ಲಿ ಅನ್ಯಾಯವಾದ,ಮೋಸದ ಮಾತುಗಳನ್ನ ಆಡ್ತೀರಾ?   ದೇವರ ಪರವಹಿಸ್ತೀರಾ? ಸತ್ಯದೇವರ ಪರವಾಗಿ ವಾದ ಮಾಡ್ತೀರಾ?   ಆತನು ನಿಮ್ಮನ್ನ ಪರೀಕ್ಷಿಸಿದ್ರೆ ನಿಮಗೆ ಒಳ್ಳೇದಾಗುತ್ತಾ?+ ಮನುಷ್ಯನಿಗೆ* ಮೋಸ ಮಾಡೋ ತರ ದೇವರಿಗೆ ಮೋಸ ಮಾಡೋಕೆ ನಿಮ್ಮಿಂದಾಗುತ್ತಾ? 10  ಯಾರಿಗೂ ಗೊತ್ತಾಗದ ಹಾಗೆ ಭೇದಭಾವ ಮಾಡೋಕೆ ಹೋದ್ರೆಆತನು ನಿಮ್ಮನ್ನ ಬೈತಾನೆ.+ 11  ಆತನ ಮಹಿಮೆ ನೋಡಿ ನಿಮಗೆ ಹೆದರಿಕೆ ಆಗಲ್ವಾ? ಭಯದಿಂದ ಗಡಗಡ ನಡುಗಲ್ವಾ? 12  ನಿಮ್ಮ ಬುದ್ಧಿಮಾತೆಲ್ಲ* ಕೆಲಸಕ್ಕೆ ಬಾರದ ಬೂದಿ ತರ,ನಿಮ್ಮ ಕೋಟೆಗಳು* ಬಿದ್ದುಹೋಗೋ ಮಣ್ಣಿನ ಕೋಟೆ ತರ. 13  ನೀವು ಸುಮ್ಮನಿರಿ, ನಾನು ಮಾತಾಡಬೇಕು. ಆಮೇಲೆ ನನಗೆ ಏನಾಗುತ್ತೋ ಆಗ್ಲಿ! 14  ನನ್ನ ಪ್ರಾಣಕ್ಕೆ ನಾನೇ ಯಾಕೆ ಅಪಾಯ ತಂದ್ಕೊಬೇಕು? ನನ್ನ ಕೈಯಾರೆ ನನ್ನ ಜೀವನ ಯಾಕೆ ಹಾಳು ಮಾಡ್ಕೋಬೇಕು? 15  ಆತನು ನನ್ನನ್ನ ಕೊಂದ್ರೂ ಪರ್ವಾಗಿಲ್ಲ, ಕೊನೇ ತನಕ ಕಾಯ್ಕೊಂಡು ಇರ್ತಿನಿ,+ಆತನ ಮುಂದೆ ವಾದ ಮಾಡ್ತೀನಿ.* 16  ಆಗ ಆತನು ನನ್ನನ್ನ ಕಾಪಾಡ್ತಾನೆ,+ಯಾಕಂದ್ರೆ ಆತನ ಮೇಲೆ ನಂಬಿಕೆ ಇಲ್ಲದ ಜನ್ರನ್ನ* ಆತನು ತನ್ನ ಮುಂದೆ ಬರೋಕೆ ಬಿಡಲ್ವಲ್ಲಾ.+ 17  ನಾನು ಹೇಳೋ ಮಾತನ್ನ ಕೇಳಿ,ನನ್ನ ಮಾತುಗಳಿಗೆ ಗಮನಕೊಡಿ. 18  ನೋಡಿ, ನಾನು ನನ್ನ ಪರ ವಾದ ಮಾಡೋಕೆ ಸಿದ್ಧ,ನಾನು ತಪ್ಪೇ ಮಾಡಿಲ್ಲ ಅಂತ ನಂಗೊತ್ತು. 19  ಪ್ರತಿವಾದ ಮಾಡೋಕೆ ಯಾರಿದ್ದಾರೆ? ನಾನೇನೂ ಹೇಳದೆ ಸುಮ್ಮನಿದ್ರೆ ಸತ್ತೇ ಹೋಗ್ತೀನಿ!* 20  ದೇವರೇ, ನಾನು ಎರಡೇ ಎರಡು ವಿಷ್ಯಗಳನ್ನ ಕೇಳ್ಕೊಳ್ತೀನಿ,ಆಗ ನಾನು ನಿನ್ನಿಂದ ಬಚ್ಚಿಟ್ಕೊಳ್ಳಬೇಕಾಗಿಲ್ಲ. 21  ನಿನ್ನ ಕೈಯಿಂದ ನನ್ನನ್ನ ಹೊಡೆಯೋದನ್ನ ನಿಲ್ಲಿಸು,ನಿನ್ನ ಭಯದಿಂದ ನಡುಗೋ ತರ ಮಾಡಬೇಡ.+ 22  ಒಂದಿಲ್ಲ ನೀನು ಮಾತಾಡು, ನಾನಾಗ ಉತ್ತರ ಕೊಡ್ತೀನಿ,ಅಥವಾ ನನಗೆ ಮಾತಾಡೋಕೆ ಬಿಡು, ನೀನು ಉತ್ತರ ಕೊಡು. 23  ನಾನೇನು ತಪ್ಪು ಮಾಡಿದೆ? ನಾನೇನು ಪಾಪ ಮಾಡಿದೆ? ನನ್ನ ಅಪರಾಧ ಏನು, ಯಾವ ಪಾಪ ಮಾಡಿದೆ ಅಂತ ಹೇಳು. 24  ನಿನ್ನ ಮುಖವನ್ನ ಯಾಕೆ ಮರೆಮಾಡ್ತೀಯ?+ ನನ್ನನ್ನ ಯಾಕೆ ಶತ್ರು ತರ ನೋಡ್ತೀಯ?+ 25  ಗಾಳಿಯಲ್ಲಿ ಹಾರಿಹೋಗ್ತಿರೋ ಎಲೆಯನ್ನ ಯಾಕೆ ಹೆದರಿಸ್ತೀಯ? ಒಣಹುಲ್ಲನ್ನ ಯಾಕೆ ಓಡಿಸ್ಕೊಂಡು ಹೋಗ್ತೀಯ? 26  ನನ್ನ ವಿರುದ್ಧ ದೊಡ್ಡ ದೊಡ್ಡ ಆರೋಪಗಳನ್ನ ಬರೆದು ಇಟ್ಕೊಂಡಿದ್ದೀಯ,ಯೌವನದಲ್ಲಿ ನಾನು ಮಾಡಿದ ಪಾಪಗಳಿಗೆ ಈಗ ಲೆಕ್ಕ ಕೇಳ್ತಾ ಇದ್ದೀಯ. 27  ನೀನು ನನ್ನ ಕಾಲುಗಳಿಗೆ ಕೋಳ* ಹಾಕಿದ್ದೀಯ,ನನ್ನ ಪ್ರತಿಯೊಂದು ಕೆಲಸದ ಮೇಲೂ ಕಣ್ಣಿಟ್ಟಿದ್ದೀಯ,ನನ್ನ ಹೆಜ್ಜೆ ಗುರುತು ನೋಡಿ ಹಿಂದೆನೇ ಬರ್ತಾ ಇದ್ದೀಯ. 28  ಹಾಗಾಗಿ ನಾನು* ನುಸಿ ತಿಂದ ಬಟ್ಟೆ ತರ,ಕೊಳೆತುಹೋದ ವಸ್ತು ತರ ಹಾಳಾಗಿ ಹೋಗ್ತಾ ಇದ್ದೀನಿ.

ಪಾದಟಿಪ್ಪಣಿ

ಅಥವಾ “ಸರ್ವಶಕ್ತನ.”
ಅಥವಾ “ನಶ್ವರ ಮನುಷ್ಯನಿಗೆ.”
ಅಥವಾ “ನಾಣ್ಣುಡಿಗಳೆಲ್ಲ.”
ಅಕ್ಷ. “ಗುರಾಣಿಗಳು.”
ಅಥವಾ “ನನ್ನ ನಡತೆ ಸರಿ ಅಂತ ಸಮರ್ಥಿಸ್ತೀನಿ.”
ಅಥವಾ “ಧರ್ಮಭ್ರಷ್ಟರನ್ನ.”
ಬಹುಶಃ, “ಯಾರಾದ್ರೂ ಇದ್ರೆ ಸುಮ್ಮನಿದ್ದು ಪ್ರಾಣಬಿಡ್ತೀನಿ.”
ಅಥವಾ “ಮನುಷ್ಯ.”