ಯೆಹೆಜ್ಕೇಲ 47:1-23

  • ದೇವಾಲಯದಿಂದ ಹರಿಯೋ ತೊರೆ (1-12)

    • ನೀರಿನ ಆಳ ಹೆಚ್ಚುತ್ತಾ ಹೋಗುತ್ತೆ (2-5)

    • ಮೃತ ಸಮುದ್ರದ ನೀರು ಸಿಹಿ ನೀರಾಯ್ತು (8-10)

    • ಜವುಗು ಸ್ಥಳಗಳು ಇದ್ದ ಹಾಗೇ ಇದ್ವು (11)

    • ಆಹಾರಕ್ಕಾಗಿ, ಔಷಧಿಗಾಗಿ ಮರಗಳು (12)

  • ದೇಶದ ಗಡಿಗಳು (13-23)

47  ಆಮೇಲೆ ಅವನು ನನ್ನನ್ನ ಮತ್ತೆ ದೇವಾಲಯದ ಬಾಗಿಲಿಗೆ+ ಕರ್ಕೊಂಡು ಬಂದ. ಆಲಯದ ಮುಖ ಪೂರ್ವದ ಕಡೆಗಿತ್ತು. ಅಲ್ಲಿ ಆಲಯದ ಹೊಸ್ತಿಲಿನ ಕೆಳಗಿಂದ ನೀರು ಹರೀತಾ ಪೂರ್ವದ ಕಡೆಗೆ ಹೋಗ್ತಿರೋದನ್ನ+ ನಾನು ನೋಡ್ದೆ. ನೀರು ಆಲಯದ ಬಾಗಿಲ ಬಲಗಡೆಯಿಂದ ಯಜ್ಞವೇದಿಯ ದಕ್ಷಿಣಕ್ಕೆ ಹರೀತಿತ್ತು.  ಅವನು ನನ್ನನ್ನ ಉತ್ತರದ ಬಾಗಿಲಿಂದ+ ಹೊರಗೆ ಕರ್ಕೊಂಡು ಹೋದ. ಅಲ್ಲಿಂದ ಸುತ್ತುಹಾಕಿ ಪೂರ್ವಕ್ಕೆ ಮುಖಮಾಡಿದ್ದ ಬಾಗಿಲಿಗೆ+ ಕರ್ಕೊಂಡು ಬಂದ. ಅದ್ರ ಬಲಗಡೆ ನೀರು ಸಣ್ಣಗೆ ಹರಿದು ಹೋಗ್ತಿರೋದನ್ನ ನಾನು ನೋಡ್ದೆ.  ಅವನು ಅಳತೆ ದಾರವನ್ನ ಕೈಯಲ್ಲಿ ಹಿಡ್ಕೊಂಡು ಪೂರ್ವದ ಕಡೆಗೆ ಹೋದ.+ ಅವನು ಬಾಗಿಲ ಹತ್ರ ತೊರೆಯನ್ನ 1,000 ಮೊಳ* ದೂರದ ತನಕ ಅಳತೆ ಮಾಡಿದ. ಆಮೇಲೆ ನನಗೆ ತೊರೆ ದಾಟೋಕೆ ಹೇಳಿದ. ಆಗ ನೀರು ಪಾದಗಳು ಮುಳುಗುವಷ್ಟು ಇತ್ತು.  ಅಲ್ಲಿಂದ ಅವನು ಇನ್ನೂ 1,000 ಮೊಳ ದೂರದ ತನಕ ಅಳತೆ ಮಾಡಿದ. ಆಮೇಲೆ ನನಗೆ ನೀರನ್ನ ದಾಟೋಕೆ ಹೇಳಿದ. ಆಗ ನೀರು ಮಂಡಿ ತನಕ ಇತ್ತು. ಅಲ್ಲಿಂದ ಅವನು ಇನ್ನೂ 1,000 ಮೊಳ ದೂರದ ತನಕ ಅಳತೆ ಮಾಡಿದ. ಆಮೇಲೆ ನೀರನ್ನ ದಾಟೋಕೆ ಹೇಳಿದ. ಆಗ ನೀರು ಸೊಂಟದ ತನಕ ಇತ್ತು.  ಅಲ್ಲಿಂದ ಅವನು ಇನ್ನೂ 1,000 ಮೊಳ ದೂರ ಅಳತೆ ಮಾಡಿದ. ಅಲ್ಲಿ ತೊರೆ ಪ್ರವಾಹದ ತರ ಹರೀತಿತ್ತು. ಅದನ್ನ ದಾಟೋಕೆ ನನ್ನಿಂದ ಆಗಲಿಲ್ಲ. ತೊರೆ ಎಷ್ಟು ಆಳ ಇತ್ತಂದ್ರೆ ಅದನ್ನ ಈಜಿ ದಾಟಬೇಕಾಗಿತ್ತು. ಆ ಪ್ರವಾಹವನ್ನ ನಡೆದು ದಾಟೋಕೆ ಆಗ್ತಿರಲಿಲ್ಲ.  ಅವನು ನನಗೆ “ಮನುಷ್ಯಕುಮಾರನೇ, ಇದನ್ನ ನೋಡಿದ್ಯಾ?” ಅಂತ ಕೇಳಿದ. ಆಮೇಲೆ ಅವನು ನನ್ನನ್ನ ನಡಿಸ್ಕೊಂಡು ತೊರೆಯ ದಡಕ್ಕೆ ಕರ್ಕೊಂಡು ಬಂದ.  ದಡಕ್ಕೆ ಬಂದಾಗ ದಡದ ಎರಡೂ ಕಡೆ ತುಂಬ ಮರಗಳು ಇರೋದನ್ನ+ ನೋಡ್ದೆ.  ಅವನು ನನಗೆ ಹೀಗಂದ: “ಈ ನೀರು ಪೂರ್ವ ಪ್ರದೇಶದ ಕಡೆಗೆ ಹರೀತಾ ಅರಾಬಾದಿಂದ*+ ಹೋಗಿ ಸಮುದ್ರ* ಸೇರುತ್ತೆ. ಅದು ಸಮುದ್ರ ಸೇರಿದಾಗ+ ಸಮುದ್ರದ ನೀರು ಸಿಹಿ ಆಗುತ್ತೆ.*  ಆ ನೀರು ಹರಿದಲ್ಲೆಲ್ಲ ತುಂಬ ಜೀವಿಗಳು ಬದುಕೋಕೆ ಆಗುತ್ತೆ. ಆ ನೀರು ಅಲ್ಲಿ ಹರಿಯೋದ್ರಿಂದ ಅಲ್ಲಿ ತುಂಬ ಮೀನುಗಳು ಇರುತ್ತೆ. ಸಮುದ್ರದ ನೀರು ಸಿಹಿ ಆಗುತ್ತೆ. ಆ ತೊರೆ ಎಲ್ಲೆಲ್ಲ ಹರಿಯುತ್ತೋ ಅಲ್ಲೆಲ್ಲ ಜೀವಿಗಳು ವಾಸಿಸುತ್ತೆ. 10  ಏಂಗೆದಿಯಿಂದ+ ಏನ್‌-ಎಗ್ಲಯಿಮ್‌ ತನಕ ಮೀನುಗಾರರು ಸಮುದ್ರದ ತೀರದಲ್ಲಿ ನಿಲ್ತಾರೆ. ಅಲ್ಲಿ ದೊಡ್ಡ ಮೀನು ಬಲೆಗಳನ್ನ ಒಣಗಿಸೋ ಜಾಗ ಇರುತ್ತೆ. ಮಹಾ ಸಮುದ್ರದಲ್ಲಿ*+ ಇರೋ ತರ ಇಲ್ಲಿ ವಿಧವಿಧವಾದ ಮೀನುಗಳು ತುಂಬ ಇರುತ್ತೆ. 11  ಅಲ್ಲಿ ಕೆಸರು ಕೆಸರಾಗಿರೋ ಜಾಗಗಳು, ಜವುಗು ಸ್ಥಳಗಳು ಇರುತ್ತೆ. ಅವು ಇದ್ದ ಹಾಗೇ ಇರುತ್ತೆ. ಉಪ್ಪು ಪ್ರದೇಶವಾಗಿಯೇ ಉಳಿಯುತ್ತೆ.+ 12  ಆ ತೊರೆಯ ಎರಡು ದಡಗಳಲ್ಲೂ ಎಲ್ಲ ತರದ ಹಣ್ಣು* ಕೊಡೋ ಮರಗಳು ಬೆಳೆಯುತ್ತೆ. ಅವುಗಳ ಎಲೆ ಬಾಡಲ್ಲ. ಅವು ಹಣ್ಣು ಕೊಡೋದನ್ನ ನಿಲ್ಲಿಸಲ್ಲ, ಪ್ರತಿ ತಿಂಗಳು ಹಣ್ಣುಗಳನ್ನ ಕೊಡ್ತಾನೇ ಇರುತ್ತೆ. ಯಾಕಂದ್ರೆ ಅವಕ್ಕೆ ಸಿಗೋ ನೀರು ಆರಾಧನಾ ಸ್ಥಳದಿಂದ ಹರಿದು ಬರೋ ನೀರು.+ ಅವುಗಳ ಹಣ್ಣುಗಳನ್ನ ಊಟವಾಗಿ, ಎಲೆಗಳನ್ನ ಔಷಧಿಯಾಗಿ ಬಳಸಲಾಗುತ್ತೆ.”+ 13  ವಿಶ್ವದ ರಾಜ ಯೆಹೋವ ಹೀಗಂತಾನೆ: “ನೀವು ಈ ಪ್ರದೇಶವನ್ನ ಇಸ್ರಾಯೇಲಿನ 12 ಕುಲಗಳಿಗೆ ಆಸ್ತಿಯಾಗಿ ಹಂಚ್ಕೊಡ್ತೀರ ಮತ್ತು ಯೋಸೇಫನಿಗೆ ಎರಡು ಪಾಲು ಸಿಗುತ್ತೆ.+ 14  ನೀವು ಈ ಪ್ರದೇಶವನ್ನ ನಿಮ್ಮ ಆಸ್ತಿಯಾಗಿ ಪಡ್ಕೊಳ್ತೀರ. ನಿಮಗೆಲ್ಲ ಸಮ ಪಾಲು ಸಿಗುತ್ತೆ. ನಾನು ಈ ದೇಶವನ್ನ ನಿಮ್ಮ ಪೂರ್ವಜರಿಗೆ ಕೊಡ್ತೀನಿ+ ಅಂತ ಮಾತು ಕೊಟ್ಟಿದ್ದೆ. ಈಗ ಇದನ್ನ ನಿಮಗೆ ಆಸ್ತಿಯಾಗಿ ಕೊಟ್ಟಿದ್ದೀನಿ. 15  ದೇಶದ ಉತ್ತರ ಗಡಿ: ಇದು ಮಹಾ ಸಮುದ್ರದಿಂದ ಹೆತ್ಲೋನಿಗೆ+ ಹೋಗೋ ದಾರಿಯನ್ನ ದಾಟಿ ಚೆದಾದ್‌,+ 16  ಹಾಮಾತ್‌,+ ಬೇರೋತ,+ ದಮಸ್ಕದ ಮತ್ತು ಹಾಮಾತಿನ ಪ್ರದೇಶದ ಮಧ್ಯ ಇರೋ ಸಿಬ್ರಯಿಮ್‌ ಕಡೆ ಹೋಗಿ, ಹವ್ರಾನಿನ+ ಗಡಿಯ ಪಕ್ಕದಲ್ಲಿರೋ ಹಾಚೇರ್‌-ಹತ್ತೀಕೋನಿಗೆ ಹೋಗುತ್ತೆ. 17  ಹೀಗೆ ಈ ಗಡಿ ಸಮುದ್ರದಿಂದ ಶುರುವಾಗಿ ಹಚರ್‌-ಐನೋನಿನ+ ತನಕ ಹೋಗುತ್ತೆ. ಇದು ದಮಸ್ಕದ ಉತ್ತರ ಗಡಿ ತನಕ, ಹಾಮಾತಿನ ಗಡಿಯ ತನಕ ಹೋಗುತ್ತೆ.+ ಇದು ದೇಶದ ಉತ್ತರ ಗಡಿ. 18  ಪೂರ್ವ ಗಡಿಯು ಹವ್ರಾನ್‌ ಮತ್ತು ದಮಸ್ಕದ ಮಧ್ಯದಿಂದ ಗಿಲ್ಯಾದ್‌+ ಮತ್ತು ಇಸ್ರಾಯೇಲ್‌ ದೇಶದ ಮಧ್ಯದಲ್ಲಿರೋ ಯೋರ್ದನ್‌ ನದಿ ತನಕ ಹೋಗುತ್ತೆ. ನೀವು ಉತ್ತರ ಗಡಿಯಿಂದ ಪೂರ್ವದ ಸಮುದ್ರ* ತನಕ ಅಳೆಯಬೇಕು. ಇದು ದೇಶದ ಪೂರ್ವ ಗಡಿ. 19  ದಕ್ಷಿಣ ಗಡಿ ತಾಮಾರದಿಂದ ಮೆರೀಬೋತ್‌-ಕಾದೇಶಿನ+ ನೀರಿನ ತನಕ, ಅಲ್ಲಿಂದ ನಾಲೆ* ತನಕ ಆಮೇಲೆ ಮಹಾ ಸಮುದ್ರದ ತನಕ ಹೋಗುತ್ತೆ.+ ಇದು ದೇಶದ ದಕ್ಷಿಣ ಗಡಿ. 20  ಪಶ್ಚಿಮ ಬದಿಯಲ್ಲಿ ಮಹಾ ಸಮುದ್ರ ಇದೆ. ಪಶ್ಚಿಮ ಗಡಿಯು ದಕ್ಷಿಣ ಗಡಿಯಿಂದ ಲೆಬೋ-ಹಾಮಾತಿನ*+ ಮುಂದೆ ಇರೋ ಜಾಗದ ತನಕ ಇದೆ. ಇದು ದೇಶದ ಪಶ್ಚಿಮ ಗಡಿ.” 21  “ಈ ದೇಶವನ್ನ ನೀವು ಅಂದ್ರೆ ಇಸ್ರಾಯೇಲಿನ 12 ಕುಲಗಳು ಹಂಚ್ಕೊಬೇಕು. 22  ಈ ದೇಶವನ್ನ ನಿಮ್ಮ ಜನ್ರಿಗೂ ನಿಮ್ಮ ದೇಶದಲ್ಲಿ ವಾಸಿಸ್ತಾ ಮಕ್ಕಳನ್ನ ಪಡೆದ ವಿದೇಶಿಯರಿಗೂ ಆಸ್ತಿಯಾಗಿ ಹಂಚಿ ಕೊಡಬೇಕು. ಇಸ್ರಾಯೇಲಲ್ಲಿ ಹುಟ್ಟಿದವ್ರ ತರಾನೇ ನೀವು ಆ ವಿದೇಶಿಯರನ್ನೂ ನೋಡಬೇಕು. ಇಸ್ರಾಯೇಲ್‌ ಕುಲಗಳ ಮಧ್ಯ ಅವ್ರಿಗೂ ಆಸ್ತಿ ಸಿಗಬೇಕು. 23  ಆ ವಿದೇಶಿಯರು ಯಾವ ಕುಲದ ಪ್ರದೇಶದಲ್ಲಿ ಇರ್ತಾರೋ ಆ ಪ್ರದೇಶದಲ್ಲೇ ಅವ್ರಿಗೆ ಆಸ್ತಿಯನ್ನ ಕೊಡಬೇಕು” ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.

ಪಾದಟಿಪ್ಪಣಿ

ಇದು ಉದ್ದ ಮೊಳ. ಪರಿಶಿಷ್ಟ ಬಿ14 ನೋಡಿ.
ಅಥವಾ “ಬಯಲು ಪ್ರದೇಶದಿಂದ.”
ಅದು, ಮೃತ ಸಮುದ್ರ.
ಅಕ್ಷ. “ನೀರು ವಾಸಿ ಆಗುತ್ತೆ.”
ಅದು, ಮೆಡಿಟರೇನಿಯನ್‌ ಸಮುದ್ರ.
ಅಕ್ಷ. “ಆಹಾರ.”
ಅದು, ಮೃತ ಸಮುದ್ರ.
ಅದು, ಈಜಿಪ್ಟಿನ ನಾಲೆ. ಪದವಿವರಣೆ ನೋಡಿ.
ಅಥವಾ “ಹಾಮಾತಿನ ಬಾಗಿಲ.”