ಯೆಹೆಜ್ಕೇಲ 33:1-33

  • ಕಾವಲುಗಾರನ ಜವಾಬ್ದಾರಿಗಳು (1-20)

  • ಯೆರೂಸಲೇಮ್‌ ನಾಶದ ಬಗ್ಗೆ ಸುದ್ದಿ (21, 22)

  • ನಾಶವಾದ ಜನ್ರಿಗೆ ಸುದ್ದಿ (23-29)

  • ಜನ ಸುದ್ದಿ ಕೇಳಿ ಅದ್ರ ತರ ನಡಿಲಿಲ್ಲ (30-33)

    • ಯೆಹೆಜ್ಕೇಲ ಜನ್ರಿಗೆ ”ಪ್ರೇಮಗೀತೆ ಹಾಡೋನ ತರ” ಇದ್ದ (32)

    • “ಅವ್ರ ಮಧ್ಯ ಒಬ್ಬ ಪ್ರವಾದಿ ಇದ್ದಾನೆ” (33)

33  ಯೆಹೋವ ನನಗೆ ಹೀಗಂದನು:  “ಮನುಷ್ಯಕುಮಾರನೇ, ನೀನು ನಿನ್ನ ಜನ್ರಿಗೆ ಏನು ಹೇಳಬೇಕಂದ್ರೆ,+‘ಜನ್ರೇ ಹೀಗೆ ನೆನಸಿ, ಒಂದು ದೇಶದ ಮೇಲೆ ದಾಳಿ ಮಾಡೋಕೆ ನಾನು ಶತ್ರುಗಳನ್ನ ಕಳಿಸ್ತೀನಿ.+ ಆ ದೇಶದ ಜನ್ರೆಲ್ಲ ಅವ್ರಿಗಾಗಿ ಒಬ್ಬ ಕಾವಲುಗಾರನನ್ನ ಇಟ್ಕೊಳ್ತಾರೆ.  ಶತ್ರುಗಳು ಆ ದೇಶದ ಮೇಲೆ ದಾಳಿ ಮಾಡೋಕೆ ಬರೋದನ್ನ ಆ ಕಾವಲುಗಾರ ನೋಡ್ತಾನೆ. ತಕ್ಷಣ ಕೊಂಬೂದಿ ಜನ್ರನ್ನ ಎಚ್ಚರಿಸ್ತಾನೆ.+  ಕೊಂಬೂದಿದ ಶಬ್ದವನ್ನ ಒಬ್ಬ ಕೇಳಿಸ್ಕೊಂಡ ಮೇಲೂ ಎಚ್ಚರವಾಗದಿದ್ರೆ+ ಶತ್ರುಗಳು ಬಂದು ಅವನನ್ನ ಕೊಂದುಹಾಕ್ತಾರೆ. ಆಗ ಅವನ ಸಾವಿಗೆ ಅವನೇ ಕಾರಣ.+  ಕೊಂಬೂದಿದ ಶಬ್ದ ಕಿವಿಗೆ ಬಿದ್ರೂ ಅವನು ಎಚ್ಚರ ಆಗಲಿಲ್ಲ. ಹಾಗಾಗಿ ಅವನ ಸಾವಿಗೆ ಅವನೇ ಕಾರಣ. ಒಂದುವೇಳೆ ಅವನು ಎಚ್ಚರ ಆಗಿದ್ರೆ ಅವನ ಜೀವ ಉಳೀತಿತ್ತು.  ಆದ್ರೆ ನೆನಸಿ, ಶತ್ರುಗಳು ಬರೋದನ್ನ ಕಾವಲುಗಾರ ನೋಡಿದ್ರೂ ಕೊಂಬೂದಿ ಜನ್ರನ್ನ ಎಚ್ಚರಿಸಲ್ಲ.+ ಆಗ ಶತ್ರುಗಳು ಬಂದು ಜನ್ರನ್ನ ಕೊಂದುಹಾಕ್ತಾರೆ. ಅವರೇನೋ ತಾವು ಮಾಡಿದ ತಪ್ಪಿಗಾಗಿ ಸಾಯ್ತಾರೆ ನಿಜ. ಆದ್ರೆ ಅವ್ರ ಸಾವಿಗೆ ನಾನು ಕಾವಲುಗಾರನನ್ನ ಹೊಣೆಗಾರನಾಗಿ ಮಾಡ್ತೀನಿ.’+  ಮನುಷ್ಯಕುಮಾರನೇ, ನಾನು ನಿನ್ನನ್ನ ಇಸ್ರಾಯೇಲ್‌ ಜನ್ರಿಗೆ ಕಾವಲುಗಾರನಾಗಿ ಇಟ್ಟಿದ್ದೀನಿ. ನಾನು ನಿನಗೆ ಹೇಳೋದನ್ನ ನೀನು ನನ್ನ ಪರವಾಗಿ ಅವ್ರಿಗೆ ತಿಳಿಸಿ ಅವ್ರನ್ನ ಎಚ್ಚರಿಸಬೇಕು.+  ನಾನು ಕೆಟ್ಟವನಿಗೆ ‘ನೀನು ಸತ್ತೇ ಸಾಯ್ತೀಯ’+ ಅಂತ ಹೇಳಿದಾಗ, ನೀನು ಹೋಗಿ ಆ ಕೆಟ್ಟವನಿಗೆ ಕೆಟ್ಟತನವನ್ನ ಬಿಟ್ಟುಬಿಡಬೇಕು ಅಂತ ಎಚ್ಚರಿಕೆ ಕೊಡದಿದ್ರೆ ಆ ಕೆಟ್ಟವನಂತೂ ಅವನು ಮಾಡಿದ ತಪ್ಪಿಗಾಗಿ ಸಾಯ್ತಾನೆ.+ ಆದ್ರೆ ಅವನ ಸಾವಿಗೆ ನಾನು ನಿನ್ನನ್ನ ಹೊಣೆಗಾರನಾಗಿ ಮಾಡ್ತೀನಿ.  ಒಂದುವೇಳೆ ನೀನು ಕೆಟ್ಟವನಿಗೆ ಕೆಟ್ಟ ದಾರಿ ಬಿಡು ಅಂತ ಹೇಳಿದ್ರೂ ಅವನು ತಿದ್ಕೊಂಡು ನಡಿದಿದ್ರೆ ಅವನು ಅವನ ತಪ್ಪಿಗಾಗಿ ಸಾಯ್ತಾನೆ,+ ಆದ್ರೆ ನೀನು ನಿನ್ನ ಜೀವವನ್ನ ಉಳಿಸ್ಕೊಳ್ತೀಯ.+ 10  ಮನುಷ್ಯಕುಮಾರನೇ, ನೀನು ಇಸ್ರಾಯೇಲ್‌ ಜನ್ರಿಗೆ ಹೀಗೆ ಹೇಳು: ‘“ನಮ್ಮ ದಂಗೆ, ಪಾಪಗಳ ಭಾರದಿಂದ ನಾವು ಕುಗ್ಗಿ ಹೋಗಿದ್ದೀವಿ, ಬಾಡಿ ಸೊರಗಿ ಹೋಗಿದ್ದೀವಿ.+ ಇಷ್ಟಾದ ಮೇಲೂ ನಾವು ಬದುಕಿರೋಕೆ ಆಗುತ್ತಾ?”+ ಅಂತ ನೀವು ಹೇಳಿದ್ರಿ.’ 11  ಆದ್ರೆ ನೀನು ಅವ್ರಿಗೆ ಹೀಗೆ ಹೇಳು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನನ್ನಾಣೆ, ಕೆಟ್ಟವನೊಬ್ಬ ಸತ್ರೆ ನನಗೆ ಸ್ವಲ್ಪನೂ ಖುಷಿ ಆಗಲ್ಲ.+ ಅವನು ಕೆಟ್ಟ ದಾರಿ ಬಿಟ್ಟುಬಿಡಬೇಕು,+ ಜಾಸ್ತಿ ದಿನ ಬದುಕಬೇಕು+ ಅನ್ನೋದೇ ನನ್ನಾಸೆ. ಇಸ್ರಾಯೇಲ್ಯರೇ, ನನ್ನ ಹತ್ರ ಬನ್ನಿ, ಕೆಟ್ಟ ದಾರಿ ಬಿಟ್ಟು ಬನ್ನಿ.+ ನೀವು ಯಾಕೆ ಸುಮ್ನೆ ಜೀವ ಕಳ್ಕೊಬೇಕು?”’+ 12  ಮನುಷ್ಯಕುಮಾರನೇ, ನಿನ್ನ ಜನ್ರಿಗೆ ಹೀಗೆ ಹೇಳು: ‘ಒಬ್ಬ ನೀತಿವಂತ ದಂಗೆ ಎದ್ರೆ ಅವನು ಈ ಹಿಂದೆ ಮಾಡಿದ ಒಳ್ಳೇ ಕೆಲಸಗಳು ಅವನನ್ನ ಕಾಪಾಡಲ್ಲ.+ ಕೆಟ್ಟವನು ತನ್ನ ಕೆಟ್ಟತನವನ್ನ ಬಿಟ್ಟುಬಿಟ್ರೆ ಈ ಹಿಂದೆ ಮಾಡಿದ ಕೆಟ್ಟ ಕೆಲಸದಿಂದ ಅವನು ಸಾಯಲ್ಲ.+ ನೀತಿವಂತ ಪಾಪ ಮಾಡೋಕೆ ಶುರುಮಾಡಿದ್ರೆ ಹಿಂದೆ ಮಾಡಿರೋ ಒಳ್ಳೇ ಕೆಲಸಗಳಿಂದಾಗಿ ಅವನು ಬಾಳಲ್ಲ.+ 13  ನಾನು ನೀತಿವಂತನಿಗೆ “ನೀನು ನಿಜವಾಗ್ಲೂ ಬಾಳ್ತೀಯ” ಅಂದಾಗ, ಅವನು ಮಾಡಿದ ಒಳ್ಳೇ ಕೆಲಸಗಳ ಮೇಲೆ ಭರವಸೆ ಇಟ್ಟು ಕೆಟ್ಟದ್ದನ್ನ* ಮಾಡಿದ್ರೆ+ ಅವನು ಮಾಡಿದ ಒಳ್ಳೇ ಕೆಲಸಗಳಲ್ಲಿ ಯಾವದನ್ನೂ ನಾನು ನೆನಪಿಸ್ಕೊಳ್ಳಲ್ಲ. ತಪ್ಪು ಮಾಡಿದ್ದಕ್ಕಾಗಿ ಅವನು ಸಾಯ್ತಾನೆ.+ 14  ನಾನು ಕೆಟ್ಟವನಿಗೆ “ನೀನು ಸತ್ತೇ ಸಾಯ್ತೀಯ” ಅಂತ ಹೇಳಿದಾಗ ಅವನು ಪಾಪ ಮಾಡೋದನ್ನ ಬಿಟ್ಟು ನ್ಯಾಯನೀತಿ ಪ್ರಕಾರ ನಡಿದ್ರೆ,+ 15  ಒತ್ತೆ ಇಟ್ಕೊಂಡಿದ್ದನ್ನ ವಾಪಸ್‌ ಕೊಟ್ರೆ,+ ದರೋಡೆ ಮಾಡಿದ್ದನ್ನ ಹಿಂದೆ ಕೊಟ್ರೆ,+ ಕೆಟ್ಟ ಕೆಲಸಗಳನ್ನ ಬಿಟ್ಟು ಜೀವ ಕೊಡೋ ನಿಯಮಗಳ ಪ್ರಕಾರ ನಡಿದ್ರೆ ಅವನು ನಿಜವಾಗ್ಲೂ ಬಾಳ್ತಾನೆ,+ ಸಾಯಲ್ಲ. 16  ಅವನು ಮಾಡಿದ ಯಾವ ಪಾಪಕ್ಕೂ ನಾನು ಅವನಿಗೆ ಶಿಕ್ಷೆ ಕೊಡಲ್ಲ.+ ಅವನು ನ್ಯಾಯನೀತಿಯ ಪ್ರಕಾರ ನಡ್ಕೊಂಡಿದ್ರಿಂದ ನಿಜವಾಗ್ಲೂ ಬಾಳ್ತಾನೆ.’+ 17  ಆದ್ರೆ ನಿನ್ನ ಜನ ‘ಯೆಹೋವ ಮಾಡೋದು ಅನ್ಯಾಯ’ ಅಂತಾರೆ. ನಿಜ ಏನಂದ್ರೆ ಅವರು ಮಾಡ್ತಿರೋದೇ ಅನ್ಯಾಯ. 18  ಒಬ್ಬ ನೀತಿವಂತ ನೀತಿಯ ಪ್ರಕಾರ ನಡಿಯೋದನ್ನ ಬಿಟ್ಟು ಕೆಟ್ಟ ಕೆಲಸಗಳನ್ನ ಮಾಡಿದ್ರೆ ಅದಕ್ಕಾಗಿ ಅವನು ಸಾಯ್ಲೇಬೇಕು.+ 19  ಆದ್ರೆ ಕೆಟ್ಟವನೊಬ್ಬ ಕೆಟ್ಟತನ ಬಿಟ್ಟು ನ್ಯಾಯನೀತಿ ಪ್ರಕಾರ ನಡಿದ್ರೆ ಅವನು ಬಾಳ್ತಾನೆ.+ 20  ಆದ್ರೆ ನೀವು ‘ಯೆಹೋವ ಮಾಡೋದು ಅನ್ಯಾಯ’ ಅಂತ ಹೇಳಿದ್ರಿ.+ ಇಸ್ರಾಯೇಲ್ಯರೇ, ನಾನು ನಿಮ್ಮಲ್ಲಿ ಪ್ರತಿಯೊಬ್ಬನಿಗೆ ಅವನವನ ಕೆಲಸಕ್ಕೆ ತಕ್ಕ ಹಾಗೆ ತೀರ್ಪು ಕೊಡ್ತೀನಿ.” 21  ನಾವು ಕೈದಿಗಳಾಗಿ ಬಂದು 12ನೇ ವರ್ಷದ ಹತ್ತನೇ ತಿಂಗಳಿನ 5ನೇ ದಿನ ಯೆರೂಸಲೇಮಿಂದ ತಪ್ಪಿಸ್ಕೊಂಡು ಬಂದಿದ್ದ ಒಬ್ಬ ವ್ಯಕ್ತಿ ನನ್ನ ಹತ್ರ ಬಂದು+ “ಪಟ್ಟಣ ಶತ್ರುಗಳ ವಶವಾಗಿದೆ!”+ ಅಂದ. 22  ಆ ವ್ಯಕ್ತಿ ನನ್ನ ಹತ್ರ ಬಂದಿದ್ದು ಬೆಳಿಗ್ಗೆ. ಅವನು ಬರೋಕೆ ಮುಂಚೆ ಹಿಂದಿನ ಸಂಜೆ ಯೆಹೋವನ ಪವಿತ್ರಶಕ್ತಿ* ನನ್ನ ಮೇಲೆ ಬಂದಿತ್ತು. ನನಗೆ ಮತ್ತೆ ಮಾತಾಡೋಕೆ ಆಗೋ ಹಾಗೆ ದೇವರು ಮಾಡಿದ್ದನು. ಹಾಗಾಗಿ ನನ್ನಿಂದ ಮಾತಾಡೋಕೆ ಆಯ್ತು. ಅದಾದ್ಮೇಲೆ ನಾನು ಮೂಕನ ತರ ಇರಲಿಲ್ಲ.+ 23  ಆಮೇಲೆ ಯೆಹೋವ ನನಗೆ ಹೀಗಂದನು: 24  “ಮನುಷ್ಯಕುಮಾರನೇ, ನಾಶವಾಗಿ ಹೋದ ಪಟ್ಟಣಗಳ ಜನ್ರು+ ಇಸ್ರಾಯೇಲ್‌ ದೇಶದ ಬಗ್ಗೆ ‘ಅಬ್ರಹಾಮ ಒಬ್ಬನೇ ಇದ್ದ, ಆದ್ರೂ ಅವನು ಈ ದೇಶವನ್ನ ಆಸ್ತಿಯಾಗಿ ಮಾಡ್ಕೊಂಡ.+ ಈಗ ನಾವು ಎಷ್ಟೋ ಜನ್ರಿದ್ದೀವಿ ಅಲ್ವಾ, ನಿಜವಾಗ್ಲೂ ಇದು ಆಸ್ತಿಯಾಗಿ ನಮಗೇ ಸಿಗುತ್ತೆ’ ಅಂತ ಹೇಳ್ತಿದ್ದಾರೆ. 25  ಹಾಗಾಗಿ ನೀನು ಅವ್ರಿಗೆ ಹೀಗೆ ಹೇಳು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನೀವು ರಕ್ತ ಇರೋ ಆಹಾರ ತಿಂತಿದ್ದೀರ,+ ಅಸಹ್ಯ* ಮೂರ್ತಿಗಳಲ್ಲಿ ಭರವಸೆ ಇಡ್ತಿದ್ದೀರ, ರಕ್ತ ಸುರಿಸ್ತಾ ಇದ್ದೀರ.+ ಇದನ್ನೆಲ್ಲ ಮಾಡ್ತಿರೋ ನಿಮಗೆ ಈ ದೇಶ ಯಾಕೆ ಸಿಗಬೇಕು? 26  ನೀವು ನಿಮ್ಮ ಕತ್ತಿ ಮೇಲೆನೇ ಭರವಸೆ ಇಟ್ಟಿದ್ದೀರ,+ ಅಸಹ್ಯ ಕೆಲಸಗಳನ್ನ ಮಾಡ್ತಿದ್ದೀರ, ನೀವೆಲ್ಲ ಇನ್ನೊಬ್ಬನ ಹೆಂಡತಿ ಜೊತೆ ವ್ಯಭಿಚಾರ ಮಾಡಿದ್ದೀರ.*+ ಹಾಗಿರುವಾಗ ಈ ದೇಶ ನಿಮಗೆ ಯಾಕೆ ಸಿಗಬೇಕು?”’+ 27  ನೀನು ಅವ್ರಿಗೆ ಹೀಗೆ ಹೇಳಬೇಕು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನನ್ನಾಣೆ, ನಾಶವಾಗಿ ಹೋದ ಪಟ್ಟಣಗಳಲ್ಲಿ ವಾಸ ಮಾಡ್ತಿರೋರು ಕತ್ತಿಯಿಂದ ಸಾಯ್ತಾರೆ. ಬಯಲಲ್ಲಿ ಇರುವವ್ರನ್ನ ನಾನು ಕಾಡುಪ್ರಾಣಿಗಳಿಗೆ ಊಟವಾಗಿ ಕೊಡ್ತೀನಿ. ಭದ್ರ ಕೋಟೆಗಳಲ್ಲಿ ಮತ್ತು ಗುಹೆಗಳಲ್ಲಿ ಇರುವವರು ಕಾಯಿಲೆ ಬಿದ್ದು ಸಾಯ್ತಾರೆ.+ 28  ನಾನು ದೇಶವನ್ನ ಜನ್ರಿಲ್ಲದ ಬಂಜರು ಭೂಮಿಯಾಗಿ ಮಾಡ್ತೀನಿ.+ ಅದ್ರ ಅಹಂಕಾರ, ಜಂಬವನ್ನ ಅಡಗಿಸ್ತೀನಿ. ಇಸ್ರಾಯೇಲಿನ ಬೆಟ್ಟಗಳು ಖಾಲಿಖಾಲಿ ಹೊಡಿಯೋ ಹಾಗೆ ಮಾಡ್ತೀನಿ,+ ಅಲ್ಲಿ ಒಬ್ರೂ ಓಡಾಡಲ್ಲ. 29  ಅವರು ಎಲ್ಲ ಅಸಹ್ಯ ಕೆಲಸಗಳನ್ನ ಮಾಡಿದ್ರಿಂದ+ ನಾನು ದೇಶವನ್ನ ಜನ್ರಿಲ್ಲದ ಬಂಜರು ಭೂಮಿಯಾಗಿ ಮಾಡ್ತೀನಿ.+ ಆಗ ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ.”’ 30  ಮನುಷ್ಯಕುಮಾರನೇ, ನಿನ್ನ ಜನ್ರು ಗೋಡೆಗಳ ಪಕ್ಕದಲ್ಲಿ, ತಮ್ಮ ಮನೇ ಬಾಗಿಲುಗಳ ಹತ್ರ ನಿಂತು ನಿನ್ನ ಬಗ್ಗೆ ಮಾತಾಡ್ಕೊಳ್ತಿದ್ದಾರೆ.+ ಪ್ರತಿಯೊಬ್ಬನೂ ಅವನ ಸಹೋದರನಿಗೆ ‘ಬಾ, ನಾವು ಹೋಗಿ ಯೆಹೋವ ಏನು ಹೇಳ್ತಾನೆ ಅಂತ ಕೇಳಿಸ್ಕೊಳ್ಳೋಣ’ ಅಂತ ಹೇಳ್ತಿದ್ರು. 31  ಅವರು ಗುಂಪು ಕಟ್ಕೊಂಡು ಬಂದು ನನ್ನ ಜನ್ರ ಹಾಗೆ ನಿನ್ನ ಮುಂದೆ ಕೂತ್ಕೊಳ್ತಾರೆ. ನೀನು ಹೇಳೋದನ್ನೆಲ್ಲ ಕೇಳಿಸ್ಕೊಳ್ತಾರೆ, ಆದ್ರೆ ಅದ್ರ ಪ್ರಕಾರ ನಡಿಯಲ್ಲ.+ ಅವರು ಬಾಯಿತುಂಬ ನಿನ್ನನ್ನ ಹೊಗಳ್ತಾರೆ, ಆದ್ರೆ ಅವ್ರ ಮನಸ್ಸೆಲ್ಲ ಮೋಸ ಮಾಡಿ ಲಾಭ ಗಳಿಸೋದ್ರ ಮೇಲೆನೇ ಇರುತ್ತೆ. 32  ನೋಡು! ನೀನು ಅವ್ರಿಗೆ ತಂತಿವಾದ್ಯವನ್ನ ಮಧುರವಾಗಿ ನುಡಿಸ್ತಾ ಇಂಪಾಗಿ ಪ್ರೇಮಗೀತೆ ಹಾಡೋನ ತರ ಇದ್ದೀಯ. ಅವರು ನಿನ್ನ ಮಾತನ್ನ ಕೇಳಿಸ್ಕೊಳ್ತಾರೆ, ಆದ್ರೆ ಒಬ್ರೂ ಅದ್ರ ಪ್ರಕಾರ ನಡಿಯಲ್ಲ. 33  ನೀನು ಹೇಳೋ ಮಾತು ನಿಜ ಆಗೇ ಆಗುತ್ತೆ. ಅದು ನಿಜ ಆಗುವಾಗ ಅವ್ರ ಮಧ್ಯ ಒಬ್ಬ ಪ್ರವಾದಿ ಇದ್ದಾನೆ ಅಂತ ಅವ್ರಿಗೆ ಗೊತ್ತಾಗುತ್ತೆ.”+

ಪಾದಟಿಪ್ಪಣಿ

ಅಥವಾ “ಅನ್ಯಾಯ.”
ಅಕ್ಷ. “ಕೈ.”
ಹೀಬ್ರು ಭಾಷೆಯಲ್ಲಿ ಇಲ್ಲಿ “ಸಗಣಿ” ಅನ್ನೋ ಪದ ಬಳಸಿರಬಹುದು. ತುಂಬ ಅಸಹ್ಯ ಅಂತ ತೋರಿಸೋಕೆ ಆ ಪದ ಬಳಸಲಾಗಿದೆ.
ಅಕ್ಷ. “ಕೆಡಿಸಿದ್ದೀರ.”