ಯೆಹೆಜ್ಕೇಲ 30:1-26

  • ಈಜಿಪ್ಟ್‌ ವಿರುದ್ಧ ಭವಿಷ್ಯವಾಣಿ (1-19)

    • ನೆಬೂಕದ್ನೆಚ್ಚರನ ದಾಳಿ ಬಗ್ಗೆ ಮುಂಚೆನೇ ಹೇಳಿದ್ದು (10)

  • ಫರೋಹನ ಅಧಿಕಾರ ಹೋಯ್ತು (20-26)

30  ಯೆಹೋವ ಮತ್ತೆ ನನಗೆ ಹೀಗಂದನು:  “ಮನುಷ್ಯಕುಮಾರನೇ, ನೀನು ಏನಂತ ಭವಿಷ್ಯ ಹೇಳಬೇಕಂದ್ರೆ ‘ವಿಶ್ವದ ರಾಜ ಯೆಹೋವ ಹೀಗಂತಾನೆ: “ಜನ್ರೇ ಗೋಳಾಡಿ ‘ಅಯ್ಯೋ, ಆ ದಿನ ಬರ್ತಿದೆ!’ ಅಂತ ಗೋಳಾಡಿ.   ಯಾಕಂದ್ರೆ ಆ ದಿನ ಹತ್ರ ಇದೆ, ಯೆಹೋವನ ಆ ದಿನ ಹತ್ರಾನೇ ಇದೆ.+ ಅದು ಕಪ್ಪು ಮೋಡಗಳು ಕವಿಯೋ ದಿನ,+ ಜನಾಂಗಗಳಿಗೆ ತೀರ್ಪು ಕೊಡೋ ಸಮಯ.+   ಒಂದು ಕತ್ತಿ ಈಜಿಪ್ಟಿನ ಮೇಲೆ ದಾಳಿ ಮಾಡುತ್ತೆ. ಅಲ್ಲಿನ ಜನ ಸತ್ತು ಬಿದ್ದಾಗ ಇಥಿಯೋಪ್ಯಕ್ಕೆ ದಿಗಿಲು ಹತ್ತುತ್ತೆ. ಈಜಿಪ್ಟಿನ ಸಿರಿಸಂಪತ್ತನ್ನ ಬಾಚ್ಕೊಂಡು ಹೋಗಿದ್ದಾರೆ, ಅದ್ರ ಅಡಿಪಾಯವನ್ನ ಬೀಳಿಸಿದ್ದಾರೆ.+   ಇಥಿಯೋಪ್ಯ,+ ಪೂಟ್‌+ ಮತ್ತು ಲೂದಿನ ಜನ್ರು, ಬೇರೆ ಬೇರೆ ದೇಶದ ಜನ್ರು,*ಕೂಬ್ಯರು ಮತ್ತು ಒಪ್ಪಂದ ಮಾಡ್ಕೊಂಡಿರೋ ದೇಶದ ಜನ್ರು,*ಎಲ್ರೂ ಕತ್ತಿಯಿಂದ ಸಾಯ್ತಾರೆ.”’   ಯೆಹೋವ ಹೇಳೋದು ಏನಂದ್ರೆ‘ಈಜಿಪ್ಟಿಗೆ ಸಹಕಾರ ಕೊಡೋರೂ ಬಿದ್ದುಹೋಗ್ತಾರೆ,ಈಜಿಪ್ಟಿನ ದರ್ಪದ ಅಧಿಕಾರ ಮಣ್ಣು ಮುಕ್ಕುತ್ತೆ.’+ ವಿಶ್ವದ ರಾಜ ಯೆಹೋವ ಹೀಗೆ ಹೇಳ್ತಾನೆ: ‘ಮಿಗ್ದೋಲಿಂದ+ ಸೆವೇನೆಯ+ ತನಕ ಈಜಿಪ್ಟ್‌ ದೇಶದಲ್ಲೆಲ್ಲ ಜನ ಕತ್ತಿಯಿಂದ ಸತ್ತು ಬೀಳ್ತಾರೆ.  ಅವ್ರ ದೇಶ ಎಷ್ಟರ ಮಟ್ಟಿಗೆ ಖಾಲಿಖಾಲಿ ಹೊಡಿಯುತ್ತೆ ಅಂದ್ರೆ ಅಂಥ ದೇಶ ಇನ್ನೊಂದಿರಲ್ಲ. ಅದ್ರ ಪಟ್ಟಣಗಳಷ್ಟು ಹಾಳುಬಿದ್ದಿರೋ ಪಟ್ಟಣ ಬೇರೆ ಯಾವುದೂ ಇರಲ್ಲ.+  ನಾನು ಈಜಿಪ್ಟಿಗೆ ಬೆಂಕಿ ಹಚ್ಚಿದಾಗ, ಅದ್ರ ಮಿತ್ರ ರಾಷ್ಟ್ರಗಳನ್ನೆಲ್ಲ ನಾಶಮಾಡಿದಾಗ ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ.  ಆ ದಿನ ನಾನು ಸಂದೇಶವಾಹಕರನ್ನ ಹಡಗಲ್ಲಿ ಕಳಿಸಿ ಅತಿಯಾದ ಆತ್ಮವಿಶ್ವಾಸ ಇರೋ ಇಥಿಯೋಪ್ಯ ಗಡಗಡ ಅಂತ ನಡುಗೋ ಹಾಗೆ ಮಾಡ್ತೀನಿ. ಈಜಿಪ್ಟ್‌ ನಾಶ ಆಗೋ ದಿನ ಇಥಿಯೋಪ್ಯದವ್ರನ್ನ ಭಯ ಮುಚ್ಚಿಬಿಡುತ್ತೆ. ಆ ದಿನ ಬಂದೇ ಬರುತ್ತೆ.’ 10  ವಿಶ್ವದ ರಾಜ ಯೆಹೋವ ಹೀಗಂತಾನೆ: ‘ನಾನು ಬಾಬೆಲಿನ ರಾಜ ನೆಬೂಕದ್ನೆಚ್ಚರನ* ಕೈಯಿಂದ ಈಜಿಪ್ಟಿನ ಜನ್ರನ್ನ ನಾಶ ಮಾಡ್ತೀನಿ.+ 11  ಈಜಿಪ್ಟನ್ನ ನಾಶಮಾಡೋಕೆ ಆ ರಾಜನನ್ನೂ ಅವನ ಸೈನ್ಯಗಳನ್ನೂ ಕರ್ಕೊಂಡು ಬರ್ತಿನಿ. ಜನಾಂಗಗಳಲ್ಲಿ ಅವ್ರಷ್ಟು ಕ್ರೂರಿಗಳು ಯಾರೂ ಇಲ್ಲ.+ ಅವರು ತಮ್ಮ ಕತ್ತಿಗಳನ್ನ ಈಜಿಪ್ಟಿನ ಮೇಲೆ ಬೀಸ್ತಾರೆ, ಸತ್ತವರು ದೇಶದಲ್ಲೆಲ್ಲ ಬಿದ್ದಿರ್ತಾರೆ.+ 12  ನಾನು ನೈಲ್‌ ನದಿಯ+ ಕಾಲುವೆಗಳನ್ನ ಒಣಗಿಸಿ ಬಿಡ್ತೀನಿ. ದೇಶವನ್ನ ಕೆಟ್ಟ ಜನ್ರಿಗೆ ಮಾರಿಬಿಡ್ತೀನಿ. ಆ ದೇಶವನ್ನೂ ಅದ್ರಲ್ಲಿರೋ ಎಲ್ಲವನ್ನೂ ವಿದೇಶಿಯರ ಕೈಯಿಂದ ಹಾಳು ಮಾಡಿಸ್ತೀನಿ.+ ಯೆಹೋವನಾದ ನಾನೇ ಇದನ್ನ ಹೇಳಿದ್ದೀನಿ.’ 13  ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನಾನು ನೋಫ್‌* ಪಟ್ಟಣದ ಅಸಹ್ಯ* ಮೂರ್ತಿಗಳನ್ನೂ ನಾಶ ಮಾಡ್ತೀನಿ ಮತ್ತು ಪ್ರಯೋಜನಕ್ಕೆ ಬಾರದ ಅಲ್ಲಿನ ದೇವರುಗಳಿಗೆ ಅಂತ್ಯ ಹಾಡ್ತೀನಿ.+ ಅದಾದ್ಮೇಲೆ ಈಜಿಪ್ಟಲ್ಲಿ ಆ ದೇಶದ ಯಾವ ಅಧಿಕಾರಿನೂ* ಆಳ್ವಿಕೆ ಮಾಡಲ್ಲ. ಈಜಿಪ್ಟಲ್ಲಿ ಭಯ ಮನೆ ಮಾಡೋ ಹಾಗೆ ಮಾಡ್ತೀನಿ.+ 14  ನಾನು ಪತ್ರೋಸನ್ನ+ ಜನ್ರಿಲ್ಲದ ಹಾಗೆ ಮಾಡ್ತೀನಿ, ಸೋನ್‌ ಪಟ್ಟಣಕ್ಕೆ ಬೆಂಕಿ ಹಚ್ತೀನಿ, ನೋ*+ ಪಟ್ಟಣಕ್ಕೆ ಶಿಕ್ಷೆ ಕೊಡ್ತೀನಿ. 15  ಈಜಿಪ್ಟಿನ ಭದ್ರ ಕೋಟೆಯಾದ ಸೀನ್‌ ಪಟ್ಟಣದ ಮೇಲೆ ನನ್ನ ಕ್ರೋಧವನ್ನ ಸುರಿಸ್ತೀನಿ ಮತ್ತು ನೋ ಪಟ್ಟಣದ ಜನ್ರನ್ನೆಲ್ಲ ಅಳಿಸಿಬಿಡ್ತೀನಿ. 16  ಈಜಿಪ್ಟಿಗೆ ಬೆಂಕಿ ಹಚ್ತೀನಿ, ಆಗ ಸೀನ್‌ ಪಟ್ಟಣ ಭಯದಿಂದ ಕಂಗೆಡುತ್ತೆ, ನೋ ಪಟ್ಟಣವನ್ನ ದಾಳಿ ಮಾಡ್ತಾರೆ, ನೋಫ್‌* ಪಟ್ಟಣನ ಹಾಡಹಗಲಲ್ಲೇ ದಾಳಿ ಮಾಡ್ತಾರೆ! 17  ಓನ್‌* ಮತ್ತು ಪೀಬೆಸೆತ್‌ ಪಟ್ಟಣಗಳ ಯುವಕರು ಕತ್ತಿಯಿಂದ ಸಾಯ್ತಾರೆ. ಆ ಪಟ್ಟಣಗಳಲ್ಲಿ ಇರೋರು ಕೈದಿಗಳಾಗಿ ಹೋಗ್ತಾರೆ. 18  ನಾನು ಈಜಿಪ್ಟಿನ ನೊಗಗಳನ್ನ ತಹಪನೇಸ್‌ ಪಟ್ಟಣದಲ್ಲಿ ಮುರಿವಾಗ ಅಲ್ಲಿ ಹಗಲಲ್ಲೇ ಕತ್ತಲು ಕವಿಯುತ್ತೆ.+ ಅದ್ರ ದರ್ಪದ ಅಧಿಕಾರ ಕೊನೆಯಾಗುತ್ತೆ.+ ಮೋಡ ಅದನ್ನ ಮುಚ್ಚುತ್ತೆ, ಅದ್ರ ಊರುಗಳಲ್ಲಿ ವಾಸಿಸೋರು ಕೈದಿಗಳಾಗಿ ಹೋಗ್ತಾರೆ.+ 19  ನಾನು ಈಜಿಪ್ಟಿಗೆ ಶಿಕ್ಷೆ ಕೊಡ್ತೀನಿ. ಆಗ, ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ.’” 20  ಹನ್ನೊಂದನೇ ವರ್ಷದ* ಮೊದಲನೇ ತಿಂಗಳ ಏಳನೇ ದಿನದಂದು ಯೆಹೋವ ನನಗೆ ಹೀಗಂದನು: 21  “ಮನುಷ್ಯಕುಮಾರನೇ, ನಾನು ಈಜಿಪ್ಟಿನ ರಾಜ ಫರೋಹನ ಕೈ ಮುರಿದಿದ್ದೀನಿ. ಮುರಿದಿರೋ ಮೂಳೆ ಸರಿ ಆಗೋಕೆ ಯಾರೂ ಕೈಗೆ ಪಟ್ಟಿ ಸುತ್ತಲ್ಲ. ಅವನಿಗೆ ಇನ್ಯಾವತ್ತೂ ಕತ್ತಿ ಹಿಡಿಯೋಕೆ ಆಗಲ್ಲ.” 22  “ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನಾನು ಈಜಿಪ್ಟಿನ ರಾಜ ಫರೋಹನ ಶತ್ರು ಆಗಿದ್ದೀನಿ.+ ನಾನು ಅವನ ಎರಡೂ ಕೈಗಳನ್ನ ಅಂದ್ರೆ ಬಲಿಷ್ಠ ಕೈಯನ್ನೂ ಈಗಾಗಲೇ ಮುರಿದಿರೋ ಕೈಯನ್ನೂ ಮುರಿದು+ ಅವನು ಹಿಡಿದಿರೋ ಕತ್ತಿ ಕೆಳಗೆ ಬೀಳೋ ಹಾಗೆ ಮಾಡ್ತೀನಿ.+ 23  ಆಮೇಲೆ ನಾನು ಈಜಿಪ್ಟಿನ ಜನ್ರನ್ನ ಬೇರೆ ದೇಶಗಳಿಗೆ ಚೆಲ್ಲಾಪಿಲ್ಲಿ ಮಾಡ್ತೀನಿ, ಅವ್ರನ್ನ ಓಡಿಸಿಬಿಡ್ತೀನಿ.+ 24  ನಾನು ಬಾಬೆಲಿನ ರಾಜನ ಕೈಗಳನ್ನ ಬಲಪಡಿಸಿ*+ ನನ್ನ ಕತ್ತಿಯನ್ನ ಅವನ ಕೈಗೆ ಕೊಡ್ತೀನಿ.+ ನಾನು ಫರೋಹನ ಕೈಗಳನ್ನ ಮುರಿತೀನಿ, ಅವನು ಪ್ರಾಣ ಹೋಗ್ತಿರೋ ವ್ಯಕ್ತಿ ತರ ಬಾಬೆಲಿನ ರಾಜನ ಮುಂದೆ ನರಳ್ತಾ ಜೋರಾಗಿ ಕೂಗ್ತಾನೆ. 25  ನಾನು ಬಾಬೆಲಿನ ರಾಜನ ಕೈಗಳಿಗೆ ಶಕ್ತಿ ತುಂಬ್ತೀನಿ, ಆದ್ರೆ ಫರೋಹನ ಕೈಗಳು ಬಿದ್ದುಹೋಗುತ್ತೆ. ನಾನು ನನ್ನ ಕತ್ತಿಯನ್ನ ಬಾಬೆಲಿನ ರಾಜನ ಕೈಗೆ ಕೊಟ್ಟಾಗ ಮತ್ತು ಅವನು ಅದ್ರಿಂದ ಈಜಿಪ್ಟ್‌ ದೇಶದವ್ರನ್ನ ಸಾಯಿಸಿದಾಗ ನಾನು ಯೆಹೋವ ಅಂತ ಜನ್ರಿಗೆ ಗೊತ್ತಾಗುತ್ತೆ.+ 26  ನಾನು ಈಜಿಪ್ಟಿನ ಜನ್ರನ್ನ ಬೇರೆ ಜನಾಂಗಗಳಲ್ಲಿ ಚೆಲ್ಲಾಪಿಲ್ಲಿ ಮಾಡಿ, ಬೇರೆ ದೇಶಗಳಿಗೆ ಓಡಿಸಿಬಿಡ್ತೀನಿ.+ ಆಗ, ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ.’”

ಪಾದಟಿಪ್ಪಣಿ

ಅಂದ್ರೆ, ಇಸ್ರಾಯೇಲ್ಯರಲ್ಲದ ಬೇರೆ ಜನ್ರು ಮತ್ತು ಈಜಿಪ್ಟಿನವರು.
ಈಜಿಪ್ಟ್‌ ಜೊತೆ ಮೈತ್ರಿ ಮಾಡ್ಕೊಂಡಿದ್ದ ಇಸ್ರಾಯೇಲ್ಯರನ್ನ ಸೂಚಿಸುತ್ತಿರಬಹುದು.
ಅಕ್ಷ. “ನೆಬೂಕದ್ರೆಚ್ಚರ.” ಆ ಹೆಸ್ರನ್ನ ಹೀಗೂ ಬರಿತಿದ್ರು.
ಅಥವಾ “ಮೋಫ್‌.”
ಹೀಬ್ರು ಭಾಷೆಯಲ್ಲಿ ಇಲ್ಲಿ “ಸಗಣಿ” ಅನ್ನೋ ಪದ ಬಳಸಿರಬಹುದು. ತುಂಬ ಅಸಹ್ಯ ಅಂತ ತೋರಿಸೋಕೆ ಆ ಪದ ಬಳಸಲಾಗಿದೆ.
ಅಥವಾ “ಪ್ರಧಾನನೂ.”
ಅದು, ಥೀಬ್ಸ್‌.
ಅಥವಾ “ಮೋಫ್‌.”
ಅದು, ಹಿಲಿಯೋಪೊಲಿಸ್‌.
ಇದು ರಾಜ ಯೆಹೋಯಾಖೀನ, ಯೆಹೆಜ್ಕೇಲ ಮತ್ತು ಬೇರೆ ಯೆಹೂದ್ಯರು ಕೈದಿಗಳಾಗಿ ಬಂದ 11ನೇ ವರ್ಷಕ್ಕೆ ಸೂಚಿಸುತ್ತೆ. (ಯೆಹೆ 1:2 ನೋಡಿ.)
ಅಥವಾ “ತುಂಬ ಅಧಿಕಾರ ಕೊಟ್ಟು.”