ಯೆಹೆಜ್ಕೇಲ 20:1-49

  • ಇಸ್ರಾಯೇಲ್ಯರ ದಂಗೆಯ ಇತಿಹಾಸ (1-32)

  • ಇಸ್ರಾಯೇಲ್ಯರು ತಮ್ಮ ದೇಶಕ್ಕೆ ಮತ್ತೆ ಬರ್ತಾರೆ ಅಂತ ಮಾತುಕೊಟ್ಟಿದ್ದು (33-44)

  • ದಕ್ಷಿಣಕ್ಕೆ ವಿರುದ್ಧ ಭವಿಷ್ಯವಾಣಿ (45-49)

20  ಏಳನೇ ವರ್ಷದ* ಐದನೇ ತಿಂಗಳ ಹತ್ತನೇ ದಿನ ಇಸ್ರಾಯೇಲಿನ ಕೆಲವು ಹಿರಿಯರು ಯೆಹೋವನ ಇಷ್ಟ ಏನಂತ ವಿಚಾರಿಸೋಕೆ ನನ್ನ ಮುಂದೆ ಬಂದು ಕೂತ್ಕೊಂಡ್ರು.  ಆಗ ಯೆಹೋವ ನನಗೆ ಹೀಗಂದನು:  “ಮನುಷ್ಯಕುಮಾರನೇ, ನೀನು ಇಸ್ರಾಯೇಲಿನ ಹಿರಿಯರಿಗೆ ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನೀವು ನನ್ನ ಇಷ್ಟ ಏನಂತ ವಿಚಾರಿಸೋಕೆ ಬಂದಿದ್ದೀರಾ? ‘ನನ್ನಾಣೆ ನಾನು ನಿಮಗೆ ಉತ್ತರ ಕೊಡಲ್ಲ’+ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ”’ ಅಂತ ಹೇಳು.  “ಅವ್ರಿಗೆ ತೀರ್ಪು ಕೊಡೋಕೆ* ನೀನು ತಯಾರಾಗಿ ಇದ್ದೀಯಾ? ಮನುಷ್ಯಕುಮಾರನೇ, ನೀನು ಸಿದ್ಧನಾಗಿ ಇದ್ದೀಯಾ? ಅವ್ರ ಪೂರ್ವಜರು ಯಾವೆಲ್ಲ ಅಸಹ್ಯ ಕೆಲಸಗಳನ್ನ ಮಾಡಿದ್ದಾರೆ ಅಂತ ಅವ್ರಿಗೆ ಹೇಳು.+  ಅವ್ರಿಗೆ ಹೀಗೆ ಹೇಳು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನಾನು ಯಾಕೋಬನ ವಂಶದ ಇಸ್ರಾಯೇಲ್ಯರನ್ನ ಆರಿಸ್ಕೊಂಡ ದಿನಾನೇ+ ಅವ್ರಿಗೆ ಮಾತು ಕೊಟ್ಟಿದ್ದೆ. ಅಷ್ಟೇ ಅಲ್ಲ, ಈಜಿಪ್ಟಲ್ಲಿ ನಾನು ನನ್ನ ಬಗ್ಗೆ ಅವ್ರಿಗೆ ಹೇಳಿದ್ದೆ.+ ಹೌದು, ನಾನು ಅವ್ರಿಗೆ ಮಾತು ಕೊಟ್ಟು ‘ನಾನೇ ನಿಮ್ಮ ದೇವರಾದ ಯೆಹೋವ’ ಅಂತ ಹೇಳಿದ್ದೆ.  ಅವ್ರನ್ನ ಈಜಿಪ್ಟಿಂದ ಬಿಡಿಸ್ಕೊಂಡು ಬರ್ತಿನಿ ಮತ್ತು ನಾನು ಅವ್ರಿಗಾಗಿ ಹುಡುಕಿಟ್ಟಿದ್ದ ಹಾಲೂ ಜೇನೂ ಹರಿಯೋ ದೇಶಕ್ಕೆ ಅವ್ರನ್ನ ಕರ್ಕೊಂಡು ಬರ್ತಿನಿ ಅಂತ ಆ ದಿನ ಮಾತು ಕೊಟ್ಟಿದ್ದೆ.+ ಅದು ಎಲ್ಲ ದೇಶಗಳಿಗಿಂತ ತುಂಬ ಸುಂದರವಾಗಿತ್ತು.*  ಆಮೇಲೆ ನಾನು ಅವ್ರಿಗೆ ‘ನೀವು ಆರಾಧಿಸ್ತಿರೋ ಅಸಹ್ಯ ಮೂರ್ತಿಗಳನ್ನ ಬಿಸಾಕಬೇಕು. ಈಜಿಪ್ಟಿನ ಹೊಲಸು ಮೂರ್ತಿಗಳಿಂದ* ನಿಮ್ಮನ್ನ ಅಶುದ್ಧ ಮಾಡ್ಕೊಬೇಡಿ.+ ನಾನೇ ನಿಮ್ಮ ದೇವರಾದ ಯೆಹೋವ’+ ಅಂತ ಹೇಳಿದ್ದೆ.  ಆದ್ರೆ ಅವರು ನನ್ನ ವಿರುದ್ಧ ದಂಗೆ ಎದ್ರು, ನನ್ನ ಮಾತನ್ನ ಕೇಳೋಕೆ ಅವ್ರಿಗೆ ಮನಸ್ಸಿರಲಿಲ್ಲ. ಅವರು ಆರಾಧಿಸ್ತಿದ್ದ ಅಸಹ್ಯ ಮೂರ್ತಿಗಳನ್ನ ಬಿಸಾಕಲಿಲ್ಲ. ಈಜಿಪ್ಟಿನ ಹೊಲಸು ಮೂರ್ತಿಗಳನ್ನ ಬಿಟ್ಟುಬಿಡಲಿಲ್ಲ.+ ಹಾಗಾಗಿ ನಾನು ಈಜಿಪ್ಟಲ್ಲಿ ಅವ್ರ ಮೇಲೆ ನನ್ನ ಕ್ರೋಧವನ್ನ, ಕೋಪಾಗ್ನಿಯನ್ನ ಪೂರ್ತಿ ಸುರಿಬೇಕು ಅಂತ ತೀರ್ಮಾನ ಮಾಡ್ದೆ.  ಆದ್ರೆ ಅವರು ಯಾವ ಜನಾಂಗಗಳ ಮಧ್ಯ ಜೀವಿಸ್ತಿದ್ರೋ ಆ ಜನಾಂಗಗಳ ಮುಂದೆ ನನ್ನ ಹೆಸ್ರು ಅಪವಿತ್ರ ಆಗಬಾರದು ಅಂತ ನನ್ನ ಹೆಸ್ರಿಗೋಸ್ಕರ ಹೆಜ್ಜೆ ತಗೊಂಡೆ.+ ಇಸ್ರಾಯೇಲ್ಯರನ್ನ ಈಜಿಪ್ಟಿಂದ ಹೊರಗೆ ಕರ್ಕೊಂಡು ಬರುವಾಗ ಆ ಜನಾಂಗಗಳ ಮುಂದೆ ಇಸ್ರಾಯೇಲ್ಯರಿಗೆ ನನ್ನ ಬಗ್ಗೆ ಹೇಳಿದೆ.+ 10  ಹೀಗೆ ನಾನು ಅವ್ರನ್ನ ಈಜಿಪ್ಟಿಂದ ಬಿಡಿಸ್ಕೊಂಡು ಬಂದು ಕಾಡು ಪ್ರದೇಶಕ್ಕೆ ಕರ್ಕೊಂಡು ಹೋದೆ.+ 11  ಆಮೇಲೆ ಅವ್ರಿಗೆ ನನ್ನ ನಿಯಮಗಳನ್ನ ಕೊಟ್ಟೆ ಮತ್ತು ನನ್ನ ತೀರ್ಪುಗಳನ್ನ ಹೇಳಿದೆ.+ ಅವನ್ನ ಪಾಲಿಸಿ ಅವರು ಬದುಕಿ ಉಳಿಬೇಕು ಅಂತ ನಾನು ಅವನ್ನ ಅವ್ರಿಗೆ ಕೊಟ್ಟೆ.+ 12  ಯೆಹೋವನಾದ ನಾನೇ ಅವ್ರನ್ನ ಪವಿತ್ರ ಜನ್ರಾಗಿ ಆರಿಸ್ಕೊಂಡಿದ್ದೀನಿ ಅಂತ ಅವ್ರಿಗೆ ಗೊತ್ತಾಗೋಕೆ ನನ್ನ ಮತ್ತು ಅವ್ರ ಮಧ್ಯ ಗುರುತಾಗಿ+ ಸಬ್ಬತ್‌ಗಳ ನಿಯಮವನ್ನೂ ಕೊಟ್ಟೆ.+ 13  ಆದ್ರೆ ಇಸ್ರಾಯೇಲ್‌ ಜನ್ರು ಕಾಡಲ್ಲಿ ನನ್ನ ವಿರುದ್ಧ ದಂಗೆ ಎದ್ರು.+ ಬದುಕಿ ಉಳಿಯೋಕೆ ನಾನು ಕೊಟ್ಟಿದ್ದ ನಿಯಮಗಳನ್ನ ಅವರು ಪಾಲಿಸಲಿಲ್ಲ ಮತ್ತು ನನ್ನ ತೀರ್ಪುಗಳನ್ನ ಬೇಡ ಅಂದ್ರು. ಸಬ್ಬತ್‌ಗಳನ್ನ ಅಪವಿತ್ರ ಮಾಡಿದ್ರು. ಹಾಗಾಗಿ ಕಾಡಲ್ಲಿ ಅವ್ರನ್ನ ನಾಶ ಮಾಡೋಕೆ ನನ್ನ ಕೋಪಾಗ್ನಿಯನ್ನ ಅವ್ರ ಮೇಲೆ ಸುರಿಬೇಕು ಅಂದ್ಕೊಂಡೆ.+ 14  ನಾನು ಯಾವ ಜನಾಂಗಗಳ ಕಣ್ಮುಂದೆ ಅವ್ರನ್ನ ಈಜಿಪ್ಟಿಂದ ಕರ್ಕೊಂಡು ಬಂದ್ನೋ ಆ ಜನಾಂಗಗಳ ಮುಂದೆನೇ ನನ್ನ ಹೆಸ್ರು ಅಪವಿತ್ರ ಆಗಬಾರದು ಅಂತ ನನ್ನ ಹೆಸ್ರಿಗೋಸ್ಕರ ಹೆಜ್ಜೆ ತಗೊಂಡೆ.+ 15  ಅಷ್ಟೇ ಅಲ್ಲ, ನಾನು ಅವ್ರಿಗೆ ಕೊಡಬೇಕು ಅಂತಿದ್ದ ಹಾಲೂ ಜೇನೂ ಹರಿಯೋ ದೇಶಕ್ಕೆ+ ಅಂದ್ರೆ ಎಲ್ಲ ದೇಶಗಳಿಗಿಂತ ತುಂಬ ಸುಂದರವಾದ ದೇಶಕ್ಕೆ ಅವ್ರನ್ನ ಕರ್ಕೊಂಡು ಹೋಗಲ್ಲ+ ಅಂತ ಆ ಕಾಡಲ್ಲಿ ಅವ್ರಿಗೆ ಮಾತು ಕೊಟ್ಟೆ. 16  ಯಾಕಂದ್ರೆ ಅವರು ನನ್ನ ತೀರ್ಪುಗಳನ್ನ ಬೇಡ ಅಂದ್ರು, ನನ್ನ ನಿಯಮಗಳ ಪ್ರಕಾರ ನಡಿಲಿಲ್ಲ, ನನ್ನ ಸಬ್ಬತ್‌ಗಳನ್ನ ಅಪವಿತ್ರ ಮಾಡಿದ್ರು. ಅವ್ರ ಮನಸ್ಸು ಹೊಲಸು ಮೂರ್ತಿಗಳ ಮೇಲೆನೇ ಇತ್ತು.+ 17  “‘“ಆದ್ರೆ ನನಗೆ ಅವ್ರನ್ನ ನೋಡಿ ಅಯ್ಯೋ ಪಾಪ ಅನಿಸ್ತು. ಅದಕ್ಕೆ ನಾನು ಅವ್ರನ್ನ ನಾಶ ಮಾಡಲಿಲ್ಲ, ಕಾಡಲ್ಲಿ ಅವ್ರನ್ನ ನಿರ್ನಾಮ ಮಾಡಲಿಲ್ಲ. 18  ನಾನು ಅವ್ರ ಮಕ್ಕಳಿಗೆ+ ‘ನಿಮ್ಮ ಅಪ್ಪಂದಿರು ಕೊಟ್ಟ ನಿಯಮಗಳನ್ನ, ತೀರ್ಪುಗಳನ್ನ ಪಾಲಿಸಬೇಡಿ,+ ಅವ್ರ ಹೊಲಸು ಮೂರ್ತಿಗಳಿಂದ ನಿಮ್ಮನ್ನ ಅಶುದ್ಧ ಮಾಡ್ಕೊಬೇಡಿ. 19  ನಾನೇ ನಿಮ್ಮ ದೇವರಾದ ಯೆಹೋವ. ನೀವು ನನ್ನ ನಿಯಮಗಳನ್ನ ಪಾಲಿಸಿ, ನನ್ನ ತೀರ್ಪುಗಳ ಪ್ರಕಾರ ನಡಿರಿ.+ 20  ನನ್ನ ಸಬ್ಬತ್‌ಗಳನ್ನ ಪವಿತ್ರವಾಗಿ ನೋಡಿ.+ ನಾನೇ ನಿಮ್ಮ ದೇವರಾದ ಯೆಹೋವ ಅಂತ ಗೊತ್ತಾಗೋಕೆ ಅವು ನನ್ನ ಮತ್ತು ನಿಮ್ಮ ಮಧ್ಯ ಗುರುತಾಗಿ ಇರುತ್ತೆ’ ಅಂತ ಹೇಳಿದೆ.+ 21  “‘“ಆದ್ರೆ ಆ ಮಕ್ಕಳು ನನ್ನ ವಿರುದ್ಧ ದಂಗೆ ಏಳೋಕೆ ಶುರುಮಾಡಿದ್ರು.+ ಬದುಕಿ ಉಳಿಯೋಕೆ ನಾನು ಕೊಟ್ಟಿದ್ದ ನಿಯಮಗಳನ್ನ ಅವರು ಪಾಲಿಸಲಿಲ್ಲ, ನನ್ನ ತೀರ್ಪುಗಳನ್ನ ಬೇಡ ಅಂದ್ರು. ನನ್ನ ಸಬ್ಬತ್‌ಗಳನ್ನ ಅಪವಿತ್ರ ಮಾಡಿದ್ರು. ಹಾಗಾಗಿ ಕಾಡಲ್ಲಿ ನನ್ನ ಕ್ರೋಧವನ್ನ, ಕೋಪಾಗ್ನಿಯನ್ನ ಪೂರ್ತಿ ಸುರಿಬೇಕು ಅಂತ ನಿರ್ಧಾರ ಮಾಡ್ದೆ.+ 22  ಆದ್ರೆ ನಾನು ಹಾಗೆ ಮಾಡಲಿಲ್ಲ.+ ಯಾವ ಜನಾಂಗಗಳ ಕಣ್ಮುಂದೆ ನಾನು ಇಸ್ರಾಯೇಲ್ಯರನ್ನ ಕರ್ಕೊಂಡು ಬಂದ್ನೋ ಆ ಜನಾಂಗಗಳ ಮುಂದೆ ನನ್ನ ಹೆಸ್ರು ಅಪವಿತ್ರ ಆಗಬಾರದು ಅಂತ ನನ್ನ ಹೆಸ್ರಿಗೋಸ್ಕರ ಹೆಜ್ಜೆ ತೆಗೊಂಡೆ.+ 23  ಅಷ್ಟೇ ಅಲ್ಲ, ಅವ್ರನ್ನ ಬೇರೆ ಜನಾಂಗಗಳ ಮಧ್ಯ ಚೆಲ್ಲಾಪಿಲ್ಲಿ ಮಾಡ್ತೀನಿ ಮತ್ತು ಬೇರೆ ಬೇರೆ ದೇಶಗಳಿಗೆ ಓಡಿಸಿಬಿಡ್ತೀನಿ ಅಂತ ಕಾಡಲ್ಲಿ ಅವ್ರಿಗೆ ಮಾತು ಕೊಟ್ಟೆ.+ 24  ಯಾಕಂದ್ರೆ ಅವರು ನನ್ನ ತೀರ್ಪುಗಳನ್ನ ಪಾಲಿಸಲಿಲ್ಲ. ನನ್ನ ನಿಯಮಗಳನ್ನ ಬೇಡ ಅಂದ್ರು.+ ನನ್ನ ಸಬ್ಬತ್‌ಗಳನ್ನ ಅಪವಿತ್ರ ಮಾಡಿದ್ರು. ಅವ್ರ ಪೂರ್ವಜರು ಆರಾಧಿಸ್ತಿದ್ದ ಹೊಲಸು ಮೂರ್ತಿಗಳನ್ನ ಆರಾಧಿಸಿದ್ರು.+ 25  ತಪ್ಪಾದ ಆಚಾರ-ವಿಚಾರಗಳನ್ನ ಪಾಲಿಸೋಕೆ ಮತ್ತು ಜೀವ ಕೊಡದ ತೀರ್ಪುಗಳ ಪ್ರಕಾರ ನಡಿಯೋಕೆ ಅವ್ರನ್ನ ಬಿಟ್ಟುಬಿಟ್ಟೆ.+ 26  ತಮ್ಮ ಮೊದಲ ಗಂಡು ಮಕ್ಕಳನ್ನೆಲ್ಲ ಬೆಂಕಿಯಲ್ಲಿ ಆಹುತಿ ಕೊಟ್ಟಾಗ+ ಅವರು ತಮ್ಮ ಬಲಿಗಳಿಂದಾನೇ ಅಶುದ್ಧರಾಗೋಕೆ ನಾನು ಬಿಟ್ಟೆ. ನಾನು ಅವ್ರನ್ನ ನಾಶಮಾಡೋಕೆ ಮತ್ತು ನಾನೇ ಯೆಹೋವ ಅಂತ ಅವ್ರಿಗೆ ಗೊತ್ತಾಗಲಿ ಅಂತ ಅದನ್ನ ಅನುಮತಿಸಿದೆ.”’ 27  “ಹಾಗಾಗಿ ಮನುಷ್ಯಕುಮಾರನೇ, ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನಿಮ್ಮ ಪೂರ್ವಜರು ಈ ತರ ನನಗೆ ನಂಬಿಕೆ ದ್ರೋಹ ಮಾಡಿ ಅವಮಾನ ಮಾಡಿದ್ರು. 28  ನಾನು ಅವ್ರಿಗೆ ಕೊಡ್ತೀನಿ ಅಂತ ಮಾತು ಕೊಟ್ಟಿದ್ದ ದೇಶಕ್ಕೆ ಅವ್ರನ್ನ ಕರ್ಕೊಂಡು ಬಂದೆ.+ ಅಲ್ಲಿ ಅವರು ಎತ್ತರವಾದ ಬೆಟ್ಟಗಳನ್ನ, ಚೆನ್ನಾಗಿ ಬೆಳಿದಿರೋ ಮರಗಳನ್ನ+ ನೋಡಿದಾಗ ಬಲಿಗಳನ್ನ, ಅರ್ಪಣೆಗಳನ್ನ ಕೊಟ್ಟು ನನಗೆ ಕೋಪ ಬರಿಸಿದ್ರು. ಅವರು ಸಮಾಧಾನ ಬಲಿಗಳನ್ನ ಕೊಟ್ಟು, ಪಾನ ಅರ್ಪಣೆಗಳನ್ನ ಸುರಿದ್ರು. 29  ಆಗ ನಾನು ಅವ್ರಿಗೆ ‘ಈ ಎತ್ತರವಾದ ಸ್ಥಳಕ್ಕೆ ನೀವು ಯಾಕೆ ಹೋಗ್ತಿರಾ? ಅಂತ ಕೇಳ್ದೆ. (ಇವತ್ತಿನ ತನಕ ಅದಕ್ಕೆ ‘ಎತ್ತರವಾದ ಸ್ಥಳ’ ಅನ್ನೋ ಹೆಸ್ರಿದೆ.)’”’+ 30  “ಈಗ ನೀನು ಇಸ್ರಾಯೇಲ್ಯರಿಗೆ ಹೀಗೆ ಹೇಳು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನೀವೂ ನಿಮ್ಮ ಪೂರ್ವಜರ ತರ ಹೊಲಸು ಮೂರ್ತಿಗಳ ಹಿಂದೆ ಹೋಗಿ ನನಗೆ ದ್ರೋಹ ಮಾಡಿ* ನಿಮ್ಮನ್ನ ಯಾಕೆ ಅಶುದ್ಧ ಮಾಡ್ಕೊಳ್ತಿದ್ದೀರ?+ 31  ನೀವು ಎಲ್ಲ ಹೊಲಸು ಮೂರ್ತಿಗಳಿಗೆ ಬಲಿ ಕೊಟ್ಟು, ನಿಮ್ಮ ಮಕ್ಕಳನ್ನ ಬೆಂಕಿಯಲ್ಲಿ ಆಹುತಿ ಕೊಟ್ಟು ಇವತ್ತಿನ ತನಕ ನಿಮ್ಮನ್ನ ಅಶುದ್ಧ ಮಾಡ್ಕೊಳ್ತಾ ಇದ್ದೀರಲ್ಲಾ.+ ಹಾಗಿದ್ದ ಮೇಲೆ, ಇಸ್ರಾಯೇಲ್ಯರೇ, ನೀವು ನನ್ನ ಇಷ್ಟ ಏನಂತ ವಿಚಾರಿಸೋವಾಗ ನಾನ್ಯಾಕೆ ಉತ್ತರ ಕೊಡಬೇಕು?”’+ “ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನನ್ನಾಣೆ ನಾನು ನಿಮಗೆ ಉತ್ತರ ಕೊಡಲ್ಲ.+ 32  ನೀವು ಏನನ್ನ ಮನಸ್ಸಿನಲ್ಲಿ ಇಟ್ಕೊಂಡು “ಬೇರೆ ಜನಾಂಗಗಳ ತರ, ಬೇರೆ ದೇಶಗಳ ಜನ್ರ ತರ ನಾವೂ ಮರ, ಕಲ್ಲುಗಳನ್ನ ಆರಾಧಿಸೋಣ”*+ ಅಂತ ಹೇಳ್ತಿರ, ಅದು ಯಾವತ್ತೂ ನಡಿಯಲ್ಲ.’” 33  “ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನನ್ನಾಣೆ, ನಾನು ನಿಮ್ಮ ಮೇಲೆ ರಾಜನಾಗಿ ಆಳ್ತೀನಿ. ನನ್ನ ಮಹಾ ಶಕ್ತಿ ಮತ್ತು ಬಲದಿಂದ* ನಿಮ್ಮನ್ನ ಶಿಕ್ಷಿಸ್ತೀನಿ. ನನ್ನ ಕೋಪವನ್ನ ನಿಮ್ಮ ಮೇಲೆ ಸುರೀತಿನಿ.+ 34  ನನ್ನ ಮಹಾ ಶಕ್ತಿ, ಬಲ ತೋರಿಸಿ,* ನನ್ನ ಕ್ರೋಧವನ್ನ ಸುರಿಸಿ ಜನಾಂಗಗಳಲ್ಲಿ ಮತ್ತು ದೇಶಗಳಲ್ಲಿ ಚೆಲ್ಲಾಪಿಲ್ಲಿ ಆಗಿರೋ ನಿಮ್ಮನ್ನ ಕರ್ಕೊಂಡು ಬಂದು ಒಟ್ಟುಸೇರಿಸ್ತಿನಿ.+ 35  ನಿಮ್ಮನ್ನ ಜನಾಂಗಗಳ ಕಾಡಿಗೆ ಕರ್ಕೊಂಡು ಬಂದು ಅಲ್ಲಿ ನಿಮ್ಮ ಜೊತೆ ಮುಖಾಮುಖಿ ವಾದ ಮಾಡ್ತೀನಿ.+ 36  “‘ಈಜಿಪ್ಟಿನ ಕಾಡಲ್ಲಿ ನಾನು ನಿಮ್ಮ ಪೂರ್ವಜರ ಜೊತೆ ವಾದ ಮಾಡಿದ ತರಾನೇ ನಿಮ್ಮ ಜೊತೆನೂ ವಾದ ಮಾಡ್ತೀನಿ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ. 37  ‘ನಾನು ನಿಮ್ಮನ್ನ ಕುರುಬನ ಕೋಲಿನ ಕೆಳಗಿಂದ ಹೋಗೋ ಹಾಗೆ+ ಮತ್ತು ಒಪ್ಪಂದದ ಪ್ರಕಾರ ನಡಿಯೋ ಹಾಗೆ ಮಾಡ್ತೀನಿ. 38  ಆದ್ರೆ ನಿಮ್ಮಲ್ಲಿರೋ ದಂಗೆಕೋರರನ್ನ, ನನ್ನ ವಿರುದ್ಧ ಅಪರಾಧ ಮಾಡ್ತಿರೋ ಜನ್ರನ್ನ ನಿಮ್ಮಿಂದ ಬೇರೆ ಮಾಡ್ತೀನಿ.+ ಅವರು ಎಲ್ಲಿ ವಿದೇಶಿಯರಾಗಿ ಜೀವಿಸ್ತಾ ಇದ್ದಾರೋ ಅಲ್ಲಿಂದ ಅವ್ರನ್ನ ಹೊರಗೆ ಕರ್ಕೊಂಡು ಬರ್ತಿನಿ, ಆದ್ರೂ ಅವರು ಇಸ್ರಾಯೇಲಿನ ಒಳಗೆ ಕಾಲಿಡಲ್ಲ.+ ಆಗ, ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.’ 39  “ಇಸ್ರಾಯೇಲ್ಯರೇ, ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಹೋಗಿ, ನೀವೆಲ್ಲ ಹೋಗಿ ಹೊಲಸು ಮೂರ್ತಿಗಳ ಸೇವೆ ಮಾಡಿ.+ ಆಮೇಲೆ ನೀವು ನನ್ನ ಮಾತನ್ನ ಕೇಳದೇ ಹೋದ್ರೂ ನಿಮ್ಮ ಬಲಿಗಳಿಂದ ಮತ್ತು ಹೊಲಸು ಮೂರ್ತಿಗಳಿಂದ ನನ್ನ ಪವಿತ್ರ ಹೆಸ್ರನ್ನ ಅಪವಿತ್ರ ಮಾಡೋಕೆ ಆಗಲ್ಲ.’+ 40  “ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನನ್ನ ಪವಿತ್ರ ಬೆಟ್ಟದ ಮೇಲೆ, ಇಸ್ರಾಯೇಲ್‌ ದೇಶದ ದೊಡ್ಡ ಬೆಟ್ಟದ ಮೇಲೆ+ ಇಸ್ರಾಯೇಲ್ಯರೆಲ್ಲ ನನ್ನ ಸೇವೆ ಮಾಡ್ತಾರೆ.+ ಅಲ್ಲಿ ನಿಮ್ಮಿಂದ ನನಗೆ ಖುಷಿ ಆಗುತ್ತೆ. ನಾನು ಕಾಣಿಕೆಗಳನ್ನ, ಒಳ್ಳೇ ಅರ್ಪಣೆಗಳನ್ನ, ಎಲ್ಲ ಪವಿತ್ರ ಅರ್ಪಣೆಗಳನ್ನ ನಿಮ್ಮಿಂದ ತಗೊತೀನಿ.+ 41  ನಾನು ನಿಮ್ಮನ್ನ ಜನಾಂಗಗಳಿಂದ ಹೊರಗೆ ತರ್ತಿನಿ, ನೀವು ಚೆಲ್ಲಾಪಿಲ್ಲಿ ಆಗಿರೋ ದೇಶಗಳಿಂದ ಒಟ್ಟುಸೇರಿಸ್ತಿನಿ.+ ಆಗ ನೀವು ಕೊಡೋ ಬಲಿಯ ಸುವಾಸನೆಯಿಂದ ನನಗೆ ಖುಷಿ ಆಗುತ್ತೆ.* ನಿಮ್ಮ ಮಧ್ಯ ಇದ್ದು ಬೇರೆ ಎಲ್ಲ ಜನಾಂಗಗಳ ಕಣ್ಮುಂದೆ ನಾನು ಪವಿತ್ರ ದೇವರು ಅಂತ ತೋರಿಸ್ತೀನಿ.’+ 42  “‘ನಿಮ್ಮ ಪೂರ್ವಜರಿಗೆ ಕೊಡ್ತೀನಿ ಅಂತ ಮಾತು ಕೊಟ್ಟಿದ್ದ ಇಸ್ರಾಯೇಲ್‌ ದೇಶಕ್ಕೆ ನಿಮ್ಮನ್ನ ಕರ್ಕೊಂಡು ಬಂದಾಗ+ ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.+ 43  ನೀವು ನಿಮ್ಮ ನಡತೆ ಮತ್ತು ಕೆಲಸಗಳಿಂದ ಹೇಗೆ ನಿಮ್ಮನ್ನೇ ಅಶುದ್ಧ ಮಾಡ್ಕೊಂಡ್ರಿ ಅಂತ ಅಲ್ಲಿ ನೆನಪಿಸ್ಕೊಳ್ತೀರ.+ ನೀವು ಮಾಡಿದ ಎಲ್ಲ ಕೆಟ್ಟ ವಿಷ್ಯಗಳನ್ನ ನೆನಸಿ ನಿಮ್ಮ ಮೇಲೆ ನಿಮಗೇ ಹೇಸಿಗೆ ಆಗುತ್ತೆ.+ 44  ಇಸ್ರಾಯೇಲ್ಯರೇ, ನಿಮ್ಮ ಕೆಟ್ಟ ನಡತೆ ಮತ್ತು ಭ್ರಷ್ಟ ಕೆಲಸಗಳಿಗೆ ತಕ್ಕ ಹಾಗೆ ನಾನು ನಿಮ್ಮ ಜೊತೆ ನಡ್ಕೊಳ್ಳದೆ ನನ್ನ ಹೆಸ್ರಿಗೋಸ್ಕರ ನಾನು ಇದನ್ನೆಲ್ಲ ಮಾಡಿದಾಗ+ ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ’ ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.” 45  ಯೆಹೋವ ಮತ್ತೆ ನನಗೆ ಹೀಗಂದನು: 46  “ಮನುಷ್ಯಕುಮಾರನೇ, ನೀನು ದಕ್ಷಿಣಕ್ಕೆ ಮುಖಮಾಡಿ ಜೋರಾಗಿ ಹೇಳು ಮತ್ತು ದಕ್ಷಿಣದಲ್ಲಿರೋ ಕಾಡಿಗೆ ಭವಿಷ್ಯ ಹೇಳು. 47  ದಕ್ಷಿಣದಲ್ಲಿರೋ ಕಾಡಿಗೆ ಹೀಗೆ ಹೇಳು: ‘ಯೆಹೋವನ ಮಾತನ್ನ ಕೇಳು. ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನಾನು ನಿನಗೆ ಬೆಂಕಿ ಹಚ್ಚಿ ಧಗಧಗ ಅಂತ ಉರಿಯೋ ಹಾಗೆ ಮಾಡ್ತೀನಿ.+ ಅದು ನಿನ್ನಲ್ಲಿರೋ ಎಲ್ಲ ಹಸಿರು ಮರಗಳನ್ನ, ಎಲ್ಲ ಒಣ ಮರಗಳನ್ನ ಸುಟ್ಟುಬಿಡುತ್ತೆ. ಉರಿತಿರೋ ಆ ಜ್ವಾಲೆ ಆರಿಹೋಗಲ್ಲ.+ ಅದ್ರಿಂದಾಗಿ ದಕ್ಷಿಣದಿಂದ ಉತ್ತರದ ತನಕ ಇರೋ ಎಲ್ಲ ಮುಖಗಳು ಸುಟ್ಟುಹೋಗುತ್ತೆ. 48  ಆಗ, ಆರಿ ಹೋಗದ ಆ ಬೆಂಕಿಯನ್ನ ಹಚ್ಚಿದವನು ಯೆಹೋವನಾದ ನಾನೇ ಅಂತ ಎಲ್ರಿಗೆ ಗೊತ್ತಾಗುತ್ತೆ.”’”+ 49  ಆಗ ನಾನು “ಅಯ್ಯೋ, ವಿಶ್ವದ ರಾಜ ಯೆಹೋವನೇ, ನಾನು ಒಗಟು ಹೇಳ್ತಾ ಇದ್ದೀನಿ ಅಂತ ಅವರು ಹೇಳ್ತಿದ್ದಾರೆ” ಅಂದೆ.

ಪಾದಟಿಪ್ಪಣಿ

ಇದು ರಾಜ ಯೆಹೋಯಾಖೀನ, ಯೆಹೆಜ್ಕೇಲ ಮತ್ತು ಬೇರೆ ಯೆಹೂದ್ಯರು ಕೈದಿಗಳಾಗಿ ಬಂದ ಏಳನೇ ವರ್ಷಕ್ಕೆ ಸೂಚಿಸುತ್ತೆ. (ಯೆಹೆ 1:2 ನೋಡಿ.)
ಅಕ್ಷ. “ನ್ಯಾಯ ತೀರಿಸೋಕೆ.”
ಅಥವಾ “ದೇಶಗಳಿಗೆ ಅಲಂಕಾರವಾಗಿತ್ತು.”
ಹೀಬ್ರು ಭಾಷೆಯಲ್ಲಿ ಇಲ್ಲಿ “ಸಗಣಿ” ಅನ್ನೋ ಪದ ಬಳಸಿರಬಹುದು. ತುಂಬ ಅಸಹ್ಯ ಅಂತ ತೋರಿಸೋಕೆ ಆ ಪದ ಬಳಸಲಾಗಿದೆ.
ಅಕ್ಷ. “ವೇಶ್ಯೆ ತರ ನಡ್ಕೊಂಡು.”
ಅಥವಾ “ಸೇವೆ ಮಾಡೋಣ.”
ಅಕ್ಷ. “ಬಲಿಷ್ಠ ಕೈಯಿಂದ, ಚಾಚಿದ ತೋಳಿಂದ.”
ಅಕ್ಷ. “ಬಲಿಷ್ಠ ಕೈಯಿಂದ, ಚಾಚಿದ ತೋಳಿಂದ.”
ಅಥವಾ “ಸಮಾಧಾನ ಆಗುತ್ತೆ.”