ಯೆಹೆಜ್ಕೇಲ 11:1-25

  • ಕೆಟ್ಟ ಅಧಿಕಾರಿಗಳಿಗೆ ಖಂಡನೆ (1-13)

    • ಪಟ್ಟಣ ಅಡುಗೆ ಪಾತ್ರೆ ತರ ಇದೆ (3-12)

  • ತಮ್ಮ ದೇಶಕ್ಕೆ ವಾಪಸ್‌ ಹೋಗ್ತಾರೆ ಅಂತ ಮಾತುಕೊಟ್ಟಿದ್ದು (14-21)

    • “ಹೊಸ ಸ್ವಭಾವ” ಕೊಡಲಾಯ್ತು (19)

  • ದೇವರ ಮಹಿಮೆ ಯೆರೂಸಲೇಮನ್ನ ಬಿಟ್ಟು ಹೋಯ್ತು (22, 23)

  • ಯೆಹೆಜ್ಕೇಲ ದರ್ಶನದಲ್ಲಿ ಮತ್ತೆ ಕಸ್ದೀಯ ದೇಶಕ್ಕೆ ಬಂದ (24, 25)

11  ಆಮೇಲೆ ಪವಿತ್ರಶಕ್ತಿ* ನನ್ನನ್ನ ಎತ್ಕೊಂಡು ಯೆಹೋವನ ಆಲಯದ ಪೂರ್ವದ ಬಾಗಿಲಿಗೆ ಅಂದ್ರೆ ಪೂರ್ವಕ್ಕೆ ಮುಖಮಾಡಿರೋ ಬಾಗಿಲಿಗೆ+ ಕರ್ಕೊಂಡು ಬಂತು. ಆ ಬಾಗಿಲ ಹತ್ರ 25 ಅಧಿಕಾರಿಗಳು+ ಇರೋದನ್ನ ನಾನು ನೋಡಿದೆ. ಅವ್ರಲ್ಲಿ ಅಜ್ಜೂರನ ಮಗ ಯಾಜನ್ಯ ಮತ್ತು ಬೆನಾಯನ ಮಗ ಪೆಲಟ್ಯ ಇದ್ರು.  ಆತನು ನನಗೆ “ಮನುಷ್ಯಕುಮಾರನೇ, ಇವರು ಕೆಟ್ಟದ್ದನ್ನ ಮಾಡೋಕೆ ಸಂಚು ಮಾಡ್ತಿದ್ದಾರೆ, ಪಟ್ಟಣದಲ್ಲಿ* ಜನ್ರಿಗೆ ತುಂಬ ಕೆಟ್ಟ ಸಲಹೆಗಳನ್ನ ಕೊಡ್ತಿದ್ದಾರೆ.  ‘ನಾವೀಗ ಇನ್ನಷ್ಟು ಮನೆಗಳನ್ನ ಕಟ್ಟೋಕೆ ಇದು ಒಳ್ಳೇ ಸಮಯ.+ ಈ ಪಟ್ಟಣ* ಅಡುಗೆ ಪಾತ್ರೆ* ತರ ಇದೆ,+ ನಾವು ಅದ್ರೊಳಗಿರೋ ಮಾಂಸದ ತರ ಇದ್ದೀವಿ’ ಅಂತಿದ್ದಾರೆ.  ಹಾಗಾಗಿ ಮನುಷ್ಯಕುಮಾರನೇ ಭವಿಷ್ಯ ಹೇಳು, ಅವ್ರ ವಿರುದ್ಧ ಭವಿಷ್ಯ ಹೇಳು”+ ಅಂದನು.  ಆಮೇಲೆ ಯೆಹೋವನ ಪವಿತ್ರಶಕ್ತಿ ನನ್ನ ಮೇಲೆ ಬಂತು.+ ಆತನು ನನಗೆ ಹೀಗಂದನು: “ನೀನು ಹೀಗೆ ಹೇಳು: ‘ಯೆಹೋವ ಹೇಳೋದು ಏನಂದ್ರೆ “ಇಸ್ರಾಯೇಲ್ಯರೇ, ನೀವು ಹೇಳಿದ್ದು ಸರಿ. ನಿಮ್ಮ ತಲೆಯಲ್ಲಿ ಏನು ಓಡ್ತಿದೆ ಅಂತ ನಂಗೊತ್ತು.  ಈ ಪಟ್ಟಣದಲ್ಲಿ ತುಂಬ ಜನ್ರ ಸಾವಿಗೆ ನೀವು ಕಾರಣ ಆಗಿದ್ದೀರ, ಬೀದಿಗಳಲ್ಲಿ ಶವಗಳನ್ನ ತುಂಬಿಸಿದ್ದೀರ.”’”+  “ಹಾಗಾಗಿ ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ಹೌದು, ಈ ಪಟ್ಟಣ ಅಡುಗೆ ಪಾತ್ರೆನೇ.+ ಪಟ್ಟಣದಲ್ಲಿ ಚೆಲ್ಲಾಪಿಲ್ಲಿಯಾಗಿ ನೀವು ಎಸೆದಿರೋ ಶವಗಳು ಅದ್ರಲ್ಲಿರೋ ಮಾಂಸ. ಆದ್ರೆ ನೀವು ಈ ಪಟ್ಟಣದಲ್ಲಿ ಇರಲ್ಲ, ನಿಮ್ಮನ್ನ ಇಲ್ಲಿಂದ ಎಳ್ಕೊಂಡು ಹೋಗ್ತಾರೆ.”  “ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ ‘ನೀವು ಕತ್ತಿಗೆ ಹೆದರಿದ್ರಲ್ಲಾ,+ ಅದೇ ಕತ್ತಿಯನ್ನ ನಾನು ನಿಮ್ಮ ವಿರುದ್ಧ ತರ್ತಿನಿ.  ನಿಮ್ಮನ್ನ ಪಟ್ಟಣದಿಂದ ಹೊರಗೆ ಕರ್ಕೊಂಡು ಬಂದು ವಿದೇಶಿಯರ ಕೈಗೆ ಕೊಟ್ಟು ಶಿಕ್ಷಿಸ್ತೀನಿ.+ 10  ನೀವು ಕತ್ತಿಯಿಂದ ಸಾಯ್ತೀರ.+ ಇಸ್ರಾಯೇಲಿನ ಗಡಿಯಲ್ಲಿ ನಾನು ನಿಮಗೆ ತೀರ್ಪು ಕೊಟ್ಟು ಶಿಕ್ಷಿಸ್ತೀನಿ.+ ಆಗ, ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ.+ 11  ಈ ಪಟ್ಟಣ ನಿಮಗೆ ಅಡುಗೆ ಪಾತ್ರೆ ತರ ಇರಲ್ಲ, ನೀವು ಅದ್ರೊಳಗಿರೋ ಮಾಂಸದ ತರಾನೂ ಇರಲ್ಲ. ಇಸ್ರಾಯೇಲಿನ ಗಡಿಯಲ್ಲಿ ನಾನು ನಿಮಗೆ ತೀರ್ಪು ಕೊಟ್ಟು ಶಿಕ್ಷೆ ಕೊಡ್ತೀನಿ. 12  ಆಗ, ನಾನೇ ಯೆಹೋವ ಅಂತ ನಿಮಗೆ ಗೊತ್ತಾಗುತ್ತೆ. ಯಾಕಂದ್ರೆ ನೀವು ನನ್ನ ನಿಯಮಗಳ ಪ್ರಕಾರ ನಡಿಲಿಲ್ಲ, ನಾನು ಕೊಟ್ಟ ತೀರ್ಪುಗಳನ್ನ ಪಾಲಿಸಲಿಲ್ಲ.+ ಅದಕ್ಕೆ ಬದ್ಲಾಗಿ ನಿಮ್ಮ ಸುತ್ತ ಇರೋ ಜನಾಂಗಗಳ ಆಚಾರ-ವಿಚಾರಗಳನ್ನ ಮಾಡಿದ್ರಿ.’”+ 13  ನಾನು ಭವಿಷ್ಯ ಹೇಳಿದ ತಕ್ಷಣ ಬೆನಾಯನ ಮಗ ಪೆಲಟ್ಯ ಸತ್ತುಹೋದ. ಆಗ ನಾನು ಅಡ್ಡಬಿದ್ದು ಜೋರಾಗಿ ಕೂಗ್ತಾ “ಅಯ್ಯೋ! ವಿಶ್ವದ ರಾಜ ಯೆಹೋವನೇ, ಇಸ್ರಾಯೇಲಿನಲ್ಲಿ ಉಳಿದಿರೋ ಜನ್ರನ್ನ ನಾಶ ಮಾಡಿಬಿಡ್ತೀಯಾ?”+ ಅಂದೆ. 14  ಯೆಹೋವ ನನಗೆ ಮತ್ತೆ ಹೀಗಂದನು: 15  “ಮನುಷ್ಯಕುಮಾರನೇ, ಯೆರೂಸಲೇಮಲ್ಲಿ ಇರುವವರು ಇಸ್ರಾಯೇಲ್‌ ಜನ್ರಿಗೆ ಮತ್ತು ನಿನ್ನ ಹತ್ರದ ಸಂಬಂಧಿಗಳಾಗಿರೋ* ನಿನ್ನ ಅಣ್ಣತಮ್ಮಂದಿರಿಗೆ ‘ಯೆಹೋವನಿಂದ ತುಂಬ ದೂರ ಇರಿ. ಈ ದೇಶ ನಮ್ಮದು, ಇದನ್ನ ನಮ್ಮ ಆಸ್ತಿಯಾಗಿ ಈಗಾಗಲೇ ಕೊಟ್ಟಾಗಿದೆ’ ಅಂತ ಹೇಳಿದ್ದಾರೆ. 16  ಹಾಗಾಗಿ ನೀನು ಹೀಗೆ ಹೇಳು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನಾನು ಅವ್ರನ್ನ ತುಂಬ ದೂರದ ಜನಾಂಗಗಳಿಗೆ ಕೈದಿಗಳಾಗಿ ಹೋಗೋ ಹಾಗೆ ಮಾಡಿದ್ರೂ ಬೇರೆ ಬೇರೆ ದೇಶಗಳಲ್ಲಿ ಅವ್ರನ್ನ ಚೆಲ್ಲಾಪಿಲ್ಲಿ ಮಾಡಿದ್ರೂ+ ಅವರು ಎಲ್ಲಿದ್ದಾರೋ ಆ ದೇಶಗಳಲ್ಲಿ ಸ್ವಲ್ಪ ಸಮಯಕ್ಕೆ ನಾನು ಅವ್ರಿಗೆ ಪವಿತ್ರ ಸ್ಥಳ ಆಗ್ತೀನಿ.”’+ 17  ಹಾಗಾಗಿ ನೀನು ಹೀಗೆ ಹೇಳು: ‘ವಿಶ್ವದ ರಾಜ ಯೆಹೋವ ಹೇಳೋದು ಏನಂದ್ರೆ “ನಿಮ್ಮನ್ನ ಚೆಲ್ಲಾಪಿಲ್ಲಿ ಮಾಡಿರೋ ಜನಾಂಗಗಳಿಂದ ಮತ್ತು ದೇಶಗಳಿಂದ ನಾನು ನಿಮ್ಮನ್ನ ಒಟ್ಟು ಸೇರಿಸ್ತೀನಿ, ನಿಮಗೆ ಇಸ್ರಾಯೇಲ್‌ ದೇಶವನ್ನ ಕೊಡ್ತೀನಿ.+ 18  ಅವರು ಅಲ್ಲಿಗೆ ವಾಪಸ್‌ ಬಂದು ಅಲ್ಲಿರೋ ಅಸಹ್ಯ ವಸ್ತುಗಳನ್ನ ತೆಗೆದುಹಾಕಿ ಅಸಹ್ಯ ಕೆಲಸಗಳನ್ನ ನಿಲ್ಲಿಸಿಬಿಡ್ತಾರೆ.+ 19  ನಾನು ಅವ್ರಿಗೆ ಒಂದೇ ಮನಸ್ಸನ್ನ* ಕೊಡ್ತೀನಿ,+ ಅವ್ರಿಗೆ ಹೊಸ ಸ್ವಭಾವ ಕೊಡ್ತೀನಿ.+ ಅವ್ರ ಕಲ್ಲು ಹೃದಯವನ್ನ ತೆಗೆದುಹಾಕಿ+ ಮೃದು ಹೃದಯವನ್ನ* ಇಡ್ತೀನಿ.+ 20  ಆಗ ಅವರು ನನ್ನ ನಿಯಮಗಳ ಪ್ರಕಾರ ನಡಿತಾರೆ, ನಾನು ಕೊಟ್ಟ ತೀರ್ಪುಗಳನ್ನ ಪಾಲಿಸ್ತಾರೆ. ಆಗ ಅವರು ನನ್ನ ಜನ್ರಾಗಿ ಇರ್ತಾರೆ ಮತ್ತು ನಾನು ಅವ್ರ ದೇವರಾಗಿ ಇರ್ತಿನಿ.”’ 21  ‘“ಆದ್ರೆ ಹೇಸಿಗೆ ಹುಟ್ಟಿಸೋ ಅಸಹ್ಯ ಕೆಲಸಗಳನ್ನ ಮುಂದುವರಿಸೋಕೆ ದೃಢಮನಸ್ಸು ಇರುವವರು ತಮ್ಮ ಕೆಲಸಗಳ ಪರಿಣಾಮಗಳನ್ನ ಅನುಭವಿಸೋ ಹಾಗೆ ನಾನು ಮಾಡ್ತೀನಿ” ಅಂತ ವಿಶ್ವದ ರಾಜ ಯೆಹೋವ ಹೇಳ್ತಾನೆ.’” 22  ಇದಾದ್ಮೇಲೆ ಕೆರೂಬಿಯರು ರೆಕ್ಕೆಗಳನ್ನ ಮೇಲೆ ಚಾಚಿದ್ರು. ಚಕ್ರಗಳು ಅವ್ರ ಹತ್ರಾನೇ ಇದ್ವು.+ ಇಸ್ರಾಯೇಲಿನ ದೇವರ ಮಹಿಮೆ ಅವ್ರ ಮೇಲಿತ್ತು.+ 23  ಆಮೇಲೆ ಯೆಹೋವನ ಮಹಿಮೆ+ ಪಟ್ಟಣದಿಂದ ಮೇಲೆ ಹೋಗಿ ಪಟ್ಟಣದ ಪೂರ್ವಕ್ಕಿದ್ದ ಬೆಟ್ಟದ ಮೇಲೆ ನಿಲ್ತು.+ 24  ದೇವರ ಪವಿತ್ರಶಕ್ತಿಯಿಂದ ನನಗೆ ಸಿಕ್ಕ ದರ್ಶನದಲ್ಲಿ ಪವಿತ್ರಶಕ್ತಿ* ನನ್ನನ್ನ ಎತ್ಕೊಂಡು ಕಸ್ದೀಯ ದೇಶದಲ್ಲಿ ಕೈದಿಗಳಾಗಿದ್ದ ಜನ್ರ ಹತ್ರ ಕರ್ಕೊಂಡು ಬಂತು. ಅಲ್ಲಿಗೆ ನಾನು ನೋಡ್ತಿದ್ದ ದರ್ಶನ ಮುಗಿತು. 25  ಯೆಹೋವ ನನಗೆ ತೋರಿಸಿದ ಎಲ್ಲ ವಿಷ್ಯಗಳನ್ನ ಅಲ್ಲಿದ್ದ ಕೈದಿಗಳಿಗೆ ನಾನು ಹೇಳಿದೆ.

ಪಾದಟಿಪ್ಪಣಿ

ಹೀಬ್ರು ಭಾಷೆಯಲ್ಲಿ ರೂಆಖ್‌. ಇಲ್ಲಿ ಈ ಪದ ದೇವದೂತನಿಗೂ ಸೂಚಿಸಬಹುದು.
ಅಥವಾ “ಪಟ್ಟಣದ ವಿರುದ್ಧ.”
ಇದು ಯೆರೂಸಲೇಮ್‌ ಪಟ್ಟಣ. ಯೆಹೂದ್ಯರು ತಾವು ಅಲ್ಲಿ ಸುರಕ್ಷಿತರಾಗಿದ್ದೀವಿ ಅಂತ ನೆನಸಿದ್ರು.
ಅಥವಾ “ಅಗಲ ಬಾಯಿರೋ ಪಾತ್ರೆ.”
ಅಥವಾ “ಪಿತ್ರಾರ್ಜಿತ ಆಸ್ತಿಯನ್ನ ಬಿಡಿಸೋ ಹಕ್ಕಿರೋ.”
ಅಕ್ಷ. “ಹೃದಯ.”
ಅದು, ದೇವರ ಮಾತಿಗೆ ಬೇಗ ಪ್ರತಿಕ್ರಿಯಿಸೋ ಹೃದಯ.
ಹೀಬ್ರು ಭಾಷೆಯಲ್ಲಿ ರೂಆಖ್‌. ಇಲ್ಲಿ ಈ ಪದ ದೇವದೂತನಿಗೂ ಸೂಚಿಸಬಹುದು.