ಯೆಶಾಯ 57:1-21

  • ನೀತಿವಂತರು, ನಿಷ್ಠಾವಂತರು ಅಳಿದು ಹೋಗಿದ್ದಾರೆ (1, 2)

  • ಇಸ್ರಾಯೇಲ್ಯರ ನಂಬಿಕೆ ದ್ರೋಹ ಬಯಲಾಯ್ತು (3-13)

  • ದೀನರಿಗೆ ಸಿಗೋ ಸಾಂತ್ವನ (14-21)

    • ಕೆಟ್ಟವರು ಅಲ್ಲೋಲಕಲ್ಲೋಲ ಸಮುದ್ರ (20)

    • ಕೆಟ್ಟವ್ರಿಗೆ ಮನಶ್ಶಾಂತಿ ಇರಲ್ಲ (21)

57  ನೀತಿವಂತ ನಾಶವಾಗಿ ಹೋಗಿದ್ದಾನೆ,ಆದ್ರೆ ಯಾರೂ ಅದ್ರ ಬಗ್ಗೆ ಯೋಚಿಸ್ತಿಲ್ಲ. ನಿಷ್ಠಾವಂತ ಜನ್ರನ್ನ ಕಸಿದುಕೊಳ್ಳಲಾಗಿದೆ,*+ಆದ್ರೆ ನೀತಿವಂತ ಸತ್ತು ವಿಪತ್ತಿಂದ ತಪ್ಪಿಸ್ಕೊಂಡಿದ್ದಾನೆ ಅಂತಯಾರೂ ಅರ್ಥ ಮಾಡ್ಕೊಳ್ತಿಲ್ಲ.  2  ಅವನಿಗೆ ಈಗ ನೆಮ್ಮದಿ ಸಿಕ್ಕಿದೆ. ಅಡ್ಡದಾರಿ ಹಿಡಿಯದ ಜನ್ರೆಲ್ಲ ತಮ್ಮ ಮಂಚದ* ಮೇಲೆ ವಿಶ್ರಾಂತಿ ಪಡ್ಕೊಳ್ತಿದ್ದಾರೆ.  3  “ಮಾಟ ಮಾಡುವವಳ ಮಕ್ಕಳೇ,ವ್ಯಭಿಚಾರಿಗೆ, ವೇಶ್ಯೆಗೆ ಹುಟ್ಟಿದ ಮಕ್ಕಳೇ,ಇಲ್ಲಿ ಬನ್ನಿ.  4  ನೀವು ಯಾರನ್ನ ಗೇಲಿ ಮಾಡ್ತಿದ್ದೀರ? ಯಾರ ವಿರುದ್ಧ ನೀವು ನಿಮ್ಮ ಬಾಯನ್ನ ದೊಡ್ಡದಾಗಿ ತೆರೆದು ನಾಲಿಗೆ ಹೊರಗೆ ಹಾಕಿ ಹಂಗಿಸ್ತಿದ್ದೀರ? ನೀವು ಪಾಪಿಗಳಿಗೆ, ವಂಚಕರಿಗೆಹುಟ್ಟಿದ ಮಕ್ಕಳಲ್ವಾ?+  5  ದೊಡ್ಡದೊಡ್ಡ ಮರಗಳ+ ಮಧ್ಯ,ಸೊಂಪಾಗಿ ಬೆಳೆದಿರೋ ಎಲ್ಲ ಮರಗಳ+ ಕೆಳಗೆ ಕಾಮದ ಆಸೆಯಿಂದ ರೊಚ್ಚಿಗೆ ಏಳ್ತಿರುವವರು ನೀವಲ್ವಾ? ಕಣಿವೆಗಳಲ್ಲಿ, ಕಡಿದಾದ ಬಂಡೆಗಳ ಸಂದುಗಳಲ್ಲಿಮಕ್ಕಳನ್ನ ಬಲಿ ಕೊಡ್ತಿರುವವರು ನೀವಲ್ವಾ?+  6  ನುಣುಪಾದ ಕಲ್ಲುಗಳಿಂದ ಮಾಡಿದ ಮೂರ್ತಿಗಳನ್ನ ನೀನು* ಆರಿಸ್ಕೊಂಡೆ ಅಲ್ವಾ?+ ಹೌದು, ಅದೇ ನಿನ್ನ ಪಾಲು. ನೀನು ನಿನ್ನ ಪಾನ ಅರ್ಪಣೆಯನ್ನ, ಕಾಣಿಕೆಗಳನ್ನ ಅವುಗಳಿಗೂ ಅರ್ಪಿಸ್ತೀಯ.+ ಅವುಗಳಿಂದಾಗಿ ನಾನು ಸಂತೃಪ್ತನಾಗಬೇಕಾ?*  7  ಎತ್ರವಾದ, ಶ್ರೇಷ್ಠವಾದ ಬೆಟ್ಟದ ಮೇಲೆ ನೀನು ನಿನ್ನ ಮಂಚವನ್ನ ಹಾಕೊಂಡೆ,+ಬಲಿಗಳನ್ನ ಅರ್ಪಿಸೋಕೆ ಅಲ್ಲಿಗೆ ಹತ್ತಿಹೋದೆ.+  8  ಬಾಗಿಲಿನ ಹಿಂದೆ, ಮನೆ ಬಾಗಿಲಿನ ಚೌಕಟ್ಟಿನ ಹಿಂದೆ ನೀನು ನಿನ್ನ ಸ್ಮರಣೆಯ ಗುರುತನ್ನ ನಿಲ್ಲಿಸಿದೆ. ನೀನು ನನ್ನನ್ನ ಬಿಟ್ಟುಹೋದೆ, ನಿನ್ನ ಬಟ್ಟೆಗಳನ್ನ ಕಳಚಿಹಾಕಿದೆ,ನೀನು ಮೇಲೆ ಹೋಗಿ ನಿನ್ನ ಮಂಚವನ್ನ ಅಗಲ ಮಾಡ್ಕೊಂಡೆ. ಅವ್ರ ಜೊತೆ ಒಪ್ಪಂದ ಮಾಡ್ಕೊಂಡೆ. ಅವ್ರ ಜೊತೆ ಮಲಗೋದಂದ್ರೆ ನಿನಗೆ ತುಂಬ ಇಷ್ಟ,+ಅವ್ರ ಪುರುಷಾಂಗವನ್ನ ನೀನು ದಿಟ್ಟಿಸಿ ನೋಡಿದೆ.*  9  ನೀನು ಎಣ್ಣೆಯನ್ನ, ಅಪಾರ ಸುಗಂಧತೈಲವನ್ನತಗೊಂಡು ಮೆಲೆಕನ* ಹತ್ರ ಇಳಿದುಹೋದೆ. ಸಮಾಧಿಗೆ* ಇಳಿದುಹೋಗೋಕೆನೀನು ನಿನ್ನ ಪ್ರತಿನಿಧಿಗಳನ್ನ ದೂರ ಕಳಿಸಿದೆ. 10  ನಿನ್ನ ಅನೇಕ ವಿಧಾನಗಳನ್ನ ಅನುಸರಿಸೋದ್ರಲ್ಲೇ ನೀನು ಕಷ್ಟಪಟ್ಟೆ,ಆದ್ರೆ ‘ಇದ್ರಿಂದ ಏನೂ ಉಪಯೋಗವಿಲ್ಲ!’ ಅಂತ ನೀನು ಅಂದ್ಕೊಳ್ಳಲಿಲ್ಲ. ನೀನು ಹೊಸ ಬಲ ಪಡ್ಕೊಂಡೆ. ಹಾಗಾಗಿ ನೀನು ಸೋತು ಹೋಗಲಿಲ್ಲ.* 11  ಯಾರಿಗೆ ಭಯಪಟ್ಟು, ಯಾರಿಗೆ ಹೆದರಿನೀನು ಸುಳ್ಳುಗಳನ್ನ ಹೇಳೋಕೆ ಶುರುಮಾಡಿದೆ?+ ನೀನು ನನ್ನನ್ನ ನೆನಪಿಸ್ಕೊಳ್ಳಲಿಲ್ಲ.+ ಯಾವುದನ್ನೂ ಮನಸ್ಸಿಗೆ ತಗೊಳ್ಳಲಿಲ್ಲ.+ ನಾನು ಮೌನವಾಗಿದ್ದು ನೀನು ಮಾಡಿದ್ದನ್ನೆಲ್ಲ ಮುಚ್ಚಿಟ್ಟೆ.+ ಹಾಗಾಗಿ ನೀನು ನನಗೆ ಭಯಪಡಲಿಲ್ಲ. 12  ನಾನು ನಿನ್ನ ಕಪಟ ನೀತಿಯನ್ನ,+ ನಿನ್ನ ಕೆಲಸಗಳನ್ನ+ ಬಯಲುಪಡಿಸ್ತೀನಿ,ಅವುಗಳಿಂದ ನಿನಗೆ ಯಾವ ಪ್ರಯೋಜನನೂ ಆಗಲ್ಲ.+ 13  ನೀನು ಸಹಾಯಕ್ಕಾಗಿ ಮೊರೆಯಿಡುವಾಗ,ನೀನು ಕೂಡಿಸಿಟ್ಟ ಮೂರ್ತಿಗಳು ನಿನ್ನನ್ನ ರಕ್ಷಿಸಲ್ಲ.+ ಗಾಳಿ ಅವುಗಳನ್ನ ಹೊಡ್ಕೊಂಡು ಹೋಗುತ್ತೆ,ಉಫ್‌ ಅಂತ ಊದಿದ್ರೆ ಸಾಕು ಅವೆಲ್ಲ ಹಾರಿಹೋಗುತ್ತೆ,ಆದ್ರೆ ನನ್ನನ್ನ ಆಶ್ರಯಿಸುವವನು ದೇಶವನ್ನ ಸೊತ್ತಾಗಿ ಹೊಂದ್ತಾನೆ,ನನ್ನ ಪವಿತ್ರ ಬೆಟ್ಟವನ್ನ ಸ್ವಾಧೀನ ಮಾಡ್ಕೊಳ್ತಾನೆ.+ 14  ಆಗ ಹೀಗೆ ಹೇಳಲಾಗುತ್ತೆ ‘ದಾರಿ ಮಾಡಿ, ದಾರಿ ಸಿದ್ಧಪಡಿಸಿ!+ ನನ್ನ ಜನ್ರ ದಾರಿಯಲ್ಲಿ ಯಾವುದೇ ಅಡ್ಡಿತಡೆ ಇದ್ರೂ ಅದನ್ನ ತೆಗೆದುಹಾಕಿ.’” 15  ಯಾಕಂದ್ರೆ ಮಹೋನ್ನತನೂ ಶ್ರೇಷ್ಠನೂನಿತ್ಯನಿರಂತರಕ್ಕೂ ಜೀವಿಸುವವನೂ*+ ಪವಿತ್ರನು ಅನ್ನೋ ಹೆಸ್ರಿರೋ ದೇವರೂ+ ಹೀಗಂತಿದ್ದಾನೆ“ನಾನು ಉನ್ನತವಾದ, ಪವಿತ್ರವಾದ ಸ್ಥಳದಲ್ಲಿ ವಾಸಿಸ್ತೀನಿ,+ಆದ್ರೆ ಜಜ್ಜಿ ಹೋಗಿರುವವರ ಜೊತೆ, ದೀನಮನಸ್ಸು ಇರುವವ್ರ ಜೊತೆ ವಾಸಿಸ್ತಾದೀನರ ಪ್ರಾಣಗಳು ಮತ್ತೆ ಚೈತನ್ಯ ಪಡ್ಕೊಳ್ಳೋ ತರ ಮಾಡ್ತೀನಿ,ಜಜ್ಜಿ ಹೋಗಿರುವವ್ರ ಮನಸ್ಸಿಗೆ ನವಚೈತನ್ಯವನ್ನ ತುಂಬ್ತೀನಿ.+ 16  ನಾನು ಅವ್ರನ್ನ ಸದಾಕಾಲಕ್ಕೂ ವಿರೋಧಿಸಲ್ಲ,ಅಥವಾ ಯಾವಾಗ್ಲೂ ಅವ್ರ ಮೇಲೆ ಕೋಪ ಇಟ್ಕೊಳ್ಳಲ್ಲ.+ ಯಾಕಂದ್ರೆ ನನ್ನಿಂದಾಗಿ ಜನ ಬಳಲಿಹೋಗ್ತಾರೆ.+ ನಾನು ಸೃಷ್ಟಿಮಾಡಿದ ಉಸಿರಾಡೋ ಪ್ರಾಣಿಗಳು ಬಲಹೀನಗೊಳ್ತವೆ. 17  ಅವನು ಅನ್ಯಾಯದ ಲಾಭಕ್ಕಾಗಿ ದುರಾಸೆಯಿಂದ ಪಾಪ ಮಾಡೋದನ್ನ+ ನೋಡಿ ನನಗೆ ತುಂಬ ಕೋಪ ಬಂತು,ಹಾಗಾಗಿ ನಾನು ಅವನಿಗೆ ಹೊಡೆದೆ, ನನ್ನ ಮುಖವನ್ನ ಮರೆಮಾಡ್ಕೊಂಡೆ, ನನಗೆ ತುಂಬ ಸಿಟ್ಟು ಬಂದಿತ್ತು. ಹಾಗಿದ್ರೂ ಅವನು ತನ್ನಿಷ್ಟದ ಹಾಗೆ ನಡಿತಾ ಧರ್ಮಭ್ರಷ್ಟನ ತರ+ ವರ್ತಿಸ್ತಾ ಬಂದ. 18  ನಾನು ಅವನ ಮಾರ್ಗಗಳನ್ನ ನೋಡಿದ್ದೀನಿ,ಆದ್ರೆ ನಾನು ಅವನನ್ನ ವಾಸಿಮಾಡ್ತೀನಿ,+ ನಾನೇ ಅವನನ್ನ ಮುನ್ನಡೆಸ್ತೀನಿ,+ಅವನನ್ನ, ಅವನ ಜೊತೆ ದುಃಖಿಸ್ತಿರೋ+ ಜನ್ರನ್ನ ಮತ್ತೆ ಸಂತೈಸ್ತೀನಿ.”+ 19  ಯೆಹೋವ ಹೀಗೆ ಹೇಳ್ತಿದ್ದಾನೆ “ನಾನೇ ತುಟಿಗಳ ಮೇಲೆ ಸ್ತುತಿಸೋ ಮಾತುಗಳನ್ನ ಇಡ್ತಿದ್ದೀನಿ. ದೂರದಲ್ಲಿ ಇರುವವ್ರಿಗೂ ಹತ್ರದಲ್ಲಿ ಇರುವವ್ರಿಗೂ ಶಾಂತಿಯನ್ನ ನಾನು ಕೊಡ್ತಾ ಇರ್ತಿನಿ.+ ನಾನೇ ಅವನನ್ನ ವಾಸಿಮಾಡ್ತೀನಿ. 20  ಆದ್ರೆ ಕೆಟ್ಟವರು, ಅಲ್ಲೋಲಕಲ್ಲೋಲ ಆಗಿರೋ ಶಾಂತಗೊಳ್ಳದ ಸಮುದ್ರದ ತರ ಇದ್ದಾರೆ,ಅದ್ರಲ್ಲಿರೋ ನೀರು ಕಡಲಪಾಚಿಯನ್ನೂ ಕೆಸ್ರನ್ನೂ ಹೊರಹಾಕ್ತಾ ಇರುತ್ತೆ. 21  ಕೆಟ್ಟವರಿಗೆ ಮನಶ್ಶಾಂತಿ ಇರಲ್ಲ”+ ಅಂತ ನನ್ನ ದೇವರು ಹೇಳ್ತಿದ್ದಾನೆ.

ಪಾದಟಿಪ್ಪಣಿ

^ ಅದು, ಮರಣದಲ್ಲಿ.
^ ಅದು, ಸಮಾಧಿ.
^ ಇಲ್ಲಿ ಚೀಯೋನ್‌ ಅಥವಾ ಯೆರೂಸಲೇಮ್‌ ಪಟ್ಟಣದ ಬಗ್ಗೆ ಹೇಳಲಾಗ್ತಿದೆ.
^ ಅಥವಾ “ನಾನು ನನ್ನನ್ನೇ ಸಂತೈಸಿಕೊಳ್ಳಬೇಕಾ?”
^ ಸುಳ್ಳು ಆರಾಧನೆಯಲ್ಲಿ ಪುರುಷಾಂಗವನ್ನ ಮೂರ್ತಿಗಳಾಗಿ ಬಳಸೋದನ್ನ ಸೂಚಿಸ್ತಿರಬಹುದು.
^ ಬಹುಶಃ, “ರಾಜನ.”
^ ಅಕ್ಷ. “ದಣಿಲಿಲ್ಲ.”
^ ಅಥವಾ “ವಾಸಿಸುವವನೂ.”