ಯೆರೆಮೀಯ 21:1-14

  • ಚಿದ್ಕೀಯ ಕೇಳಿದ್ದನ್ನ ಮಾಡೋಕೆ ಯೆಹೋವ ಒಪ್ಪಲಿಲ್ಲ (1-7)

  • ಜೀವ ಅಥವಾ ಮರಣವನ್ನ ಜನ ಆರಿಸಬೇಕಿತ್ತು (8-14)

21  ರಾಜ ಚಿದ್ಕೀಯ+ ಮಲ್ಕೀಯನ ಮಗನಾದ ಪಷ್ಹೂರನನ್ನ,+ ಮಾಸೇಯನ ಮಗನೂ ಪುರೋಹಿತನೂ ಆದ ಚೆಫನ್ಯನನ್ನ+ ಯೆರೆಮೀಯನ ಹತ್ರ ಕಳಿಸಿದ. ಆಗ ಯೆಹೋವ ಯೆರೆಮೀಯನಿಗೆ ಒಂದು ಸಂದೇಶ ಹೇಳಿದನು. ಚಿದ್ಕೀಯ ಆ ಇಬ್ರ ಮೂಲಕ ಯೆರೆಮೀಯನಿಗೆ  “ಬಾಬೆಲಿನ ರಾಜನಾದ ನೆಬೂಕದ್ನೆಚ್ಚರ* ನಮ್ಮ ವಿರುದ್ಧ ಯುದ್ಧ ಮಾಡೋಕೆ ಬಂದಿದ್ದಾನೆ.+ ಆ ರಾಜ ವಾಪಸ್‌ ಹೋಗೋ ತರ ಯೆಹೋವ ನಮಗೋಸ್ಕರ ಒಂದು ಅದ್ಭುತ ಮಾಡ್ಲೂಬಹುದು.+ ಹಾಗಾಗಿ ದಯವಿಟ್ಟು ನಮಗಾಗಿ ಯೆಹೋವನ ಹತ್ರ ವಿಚಾರಿಸು” ಅಂತ ಹೇಳಿ ಕಳಿಸಿದ.  ಅದಕ್ಕೆ ಯೆರೆಮೀಯ ಅವ್ರಿಗೆ ಹೀಗಂದ “ನೀವು ಚಿದ್ಕೀಯನಿಗೆ ಏನು ಹೇಳಬೇಕಂದ್ರೆ  ‘ಇಸ್ರಾಯೇಲಿನ ದೇವರಾದ ಯೆಹೋವ ಹೀಗೆ ಹೇಳ್ತಾನೆ “ನಿಮ್ಮ ಪಟ್ಟಣದ ಗೋಡೆ ಸುತ್ತ ಮುತ್ತಿಗೆ ಹಾಕಿರೋ ಬಾಬೆಲಿನ ರಾಜನ ವಿರುದ್ಧ, ಕಸ್ದೀಯರ ವಿರುದ್ಧ ಹೋರಾಡೋಕೆ ನಿಮ್ಮ ಕೈಯಲ್ಲಿರೋ ಆಯುಧಗಳನ್ನ ನಿಮ್ಮ ವಿರುದ್ಧನೇ ತಿರುಗಿಸ್ತೀನಿ.+ ನಾನು ಅವುಗಳನ್ನ* ಈ ಪಟ್ಟಣದ ಮಧ್ಯದಲ್ಲಿ ಒಟ್ಟುಗೂಡಿಸ್ತೀನಿ.  ನಾನು ಕೋಪ, ಕ್ರೋಧ, ಮಹಾ ರೋಷದಿಂದ,+ ನನ್ನ ಶಕ್ತಿಶಾಲಿ ಕೈಯಿಂದ ನಿಮ್ಮ ವಿರುದ್ಧ ಹೋರಾಡ್ತೀನಿ.+  ನಾನು ಈ ಪಟ್ಟಣದಲ್ಲಿರೋ ಮನುಷ್ಯರನ್ನ, ಪ್ರಾಣಿಗಳನ್ನ ನಾಶ ಮಾಡ್ತೀನಿ. ಮನುಷ್ಯ, ಪ್ರಾಣಿ ಎಲ್ಲದಕ್ಕೂ ದೊಡ್ಡ ಅಂಟುರೋಗ* ಬರುತ್ತೆ, ಎಲ್ರೂ ಸಾಯ್ತೀರ.”’+  ‘ಯೆಹೋವ ಹೇಳೋದು ಏನಂದ್ರೆ “ಯೆಹೂದದ ರಾಜ ಚಿದ್ಕೀಯನನ್ನ, ಅವನ ಸೇವಕರನ್ನ, ಅಂಟುರೋಗ, ಕತ್ತಿ, ಬರಗಾಲದಿಂದ ತಪ್ಪಿಸ್ಕೊಂಡು ಈ ಪಟ್ಟಣದಲ್ಲಿ ಬದುಕಿ ಉಳಿಯೋ ಜನ್ರನ್ನ ನಾನು ಬಾಬೆಲಿನ ರಾಜನಾದ ನೆಬೂಕದ್ನೆಚ್ಚರನ* ಕೈಗೆ, ಅವ್ರ ಶತ್ರುಗಳ, ಅವ್ರ ಜೀವ ತೆಗಿಯೋಕೆ ಕಾಯ್ತಾ ಇರೋರ ಕೈಗೆ ಕೊಡ್ತೀನಿ.+ ಅವ್ರನ್ನ ಕತ್ತಿಯಿಂದ ಕೊಲ್ತೀನಿ. ಅವ್ರಿಗೆ ಸ್ವಲ್ಪನೂ ದಯೆ, ಅನುಕಂಪ, ಕರುಣೆ ತೋರಿಸಲ್ಲ.”’+  ಈ ಜನ್ರಿಗೆ ನೀನು ಹೀಗೆ ಹೇಳು ‘ಯೆಹೋವ ಹೇಳೋದು ಏನಂದ್ರೆ, “ನಿಮಗೆ ಜೀವದ ದಾರಿ ಬೇಕಾ, ಮರಣದ ದಾರಿ ಬೇಕಾ ಅಂತ ಆಯ್ಕೆ ಮಾಡೋ ಅವಕಾಶ ಕೊಡ್ತಾ ಇದ್ದೀನಿ.  ಪಟ್ಟಣದಲ್ಲಿ ಉಳಿದವರು ಕತ್ತಿ, ಬರಗಾಲ, ಅಂಟುರೋಗದಿಂದ ಸಾಯ್ತಾರೆ. ಆದ್ರೆ ಮುತ್ತಿಗೆ ಹಾಕಿರೋ ಕಸ್ದೀಯರ ಹತ್ರ ಹೋಗಿ ಶರಣಾಗುವವರು ಜೀವ ಉಳಿಸ್ಕೊಳ್ತಾರೆ. ಅವರು ತಮ್ಮ ಪ್ರಾಣ ಮಾತ್ರ ಉಳಿಸ್ಕೊಳ್ತಾರೆ.”’*+ 10  ‘ಯೆಹೋವ ಹೇಳೋದು ಏನಂದ್ರೆ “ನಾನು ಈ ಪಟ್ಟಣಕ್ಕೆ ಕೆಟ್ಟದು ಮಾಡೇ ಮಾಡ್ತೀನಿ, ಅದಕ್ಕೆ ಒಳ್ಳೇದನ್ನ ಮಾಡೋದೇ ಇಲ್ಲ.+ ಈ ಪಟ್ಟಣವನ್ನ ಬಾಬೆಲಿನ ರಾಜನ ಕೈಗೆ ಕೊಡ್ತೀನಿ.+ ಅವನು ಅದನ್ನ ಬೆಂಕಿಯಿಂದ ಸುಟ್ಟುಬಿಡ್ತಾನೆ.”+ 11  ಯೆಹೂದದ ರಾಜನ ಪರಿವಾರದವರೇ, ಯೆಹೋವನ ಮಾತು ಕೇಳಿ. 12  ದಾವೀದನ ಮನೆತನದವರೇ, ಯೆಹೋವನ ಈ ಮಾತು ಕೇಳಿ“ದಿನಾಲೂ ಬೆಳಿಗ್ಗೆ ನ್ಯಾಯವಾದ ಶಿಕ್ಷೆ ಕೊಡಿ,ಮೋಸಗಾರನ ಕೈಗೆ ಸಿಕ್ಕಿ ಎಲ್ಲವನ್ನ ಕಳ್ಕೊಂಡವನನ್ನ ಬಿಡಿಸಿ ಕಾಪಾಡಿ,+ಇಲ್ಲದಿದ್ರೆ ನೀವು ಮಾಡೋ ಕೆಟ್ಟ ಕೆಲಸಕ್ಕೆ+ನನ್ನ ಕೋಪ ಬೆಂಕಿ ತರ ಧಗಧಗ ಅಂತ ಉರಿಯುತ್ತೆ,ಅದನ್ನ ಆರಿಸೋಕೆ ಯಾರಿಂದಾನೂ ಆಗಲ್ಲ.”’+ 13  ಯೆಹೋವ ಹೇಳೋದು ಏನಂದ್ರೆ,‘ಕಣಿವೆಯಲ್ಲಿ ಇರೋ ಜನ್ರೇ, ಸಮತಟ್ಟಾದ ನೆಲದಲ್ಲಿರೋ ಬಂಡೆಯೇ,ನಿನಗೆ ಶಿಕ್ಷೆ ಕೊಡ್ತೀನಿ. “ನಮ್ಮ ವಿರುದ್ಧ ಬರೋಕೆ ಯಾರಿಗಾದ್ರೂ ಆಗುತ್ತಾ? ನಮ್ಮ ಮನೆ ಒಳಗೆ ನುಗ್ಗೋಕೆ ಯಾರಿಗೆ ಆಗುತ್ತೆ?” ಅಂತ ಅಂದ್ಕೊಳ್ತಿದ್ದೀಯ.’ 14  ಆದ್ರೆ ಯೆಹೋವ ಹೇಳೋದು ಏನಂದ್ರೆ ‘ನೀನು ಮಾಡೋ ಕೆಟ್ಟ ಕೆಲಸಗಳಿಗೆ ತಕ್ಕ ಶಿಕ್ಷೆ ಕೊಡ್ತೀನಿ.+ ನಿನ್ನ ಕಾಡಿಗೆ ಬೆಂಕಿ ಹಚ್ತೀನಿ,ಆ ಬೆಂಕಿ ಸುತ್ತಮುತ್ತ ಇರೋದನ್ನೆಲ್ಲ ಸುಟ್ಟು ಬೂದಿ ಮಾಡುತ್ತೆ.’”+

ಪಾದಟಿಪ್ಪಣಿ

ಅಕ್ಷ. “ನೆಬೂಕದ್ರೆಚ್ಚರ.” ಆ ಹೆಸ್ರನ್ನ ಹೀಗೂ ಬರಿತಿದ್ರು.
ಅಥವಾ “ಆ ಜನ್ರನ್ನ.”
ಅಥವಾ “ಮಾರಕ ಕಾಯಿಲೆ.”
ಅಕ್ಷ. “ನೆಬೂಕದ್ರೆಚ್ಚರ.” ಆ ಹೆಸ್ರನ್ನ ಹೀಗೂ ಬರಿತಿದ್ರು.
ಅಕ್ಷ. “ಅವರಿಗೆ ತಮ್ಮ ಜೀವ ಕೊಳ್ಳೆಯಾಗಿ ಸಿಗುತ್ತೆ.”