ಯಾಜಕಕಾಂಡ 15:1-33

  • ಜನನಾಂಗ ಸ್ರಾವದಿಂದ ಅಶುದ್ಧತೆ (1-33)

15  ಯೆಹೋವ ಮೋಶೆ ಆರೋನರ ಜೊತೆ ಮಾತು ಮುಂದುವರಿಸಿ  “ಇಸ್ರಾಯೇಲ್ಯರಿಗೆ ಹೀಗೆ ಹೇಳಿ: ‘ಒಬ್ಬ ಗಂಡಸಿಗೆ ಜನನಾಂಗದಲ್ಲಿ ಸ್ರಾವ ಆದ್ರೆ ಅವನು ಅಶುದ್ಧ.+  ಸ್ರಾವ ಆಗ್ತಾ ಇದ್ರೂ ಆಗೋದು ಈಗ ನಿಂತಿದ್ರೂ ಅವನು ಅಶುದ್ಧನೇ.  ಅಂಥ ವ್ಯಕ್ತಿ ಮಲಗೋ ಹಾಸಿಗೆ ಅಶುದ್ಧ. ಅವನು ಯಾವುದ್ರ ಮೇಲೆ ಕೂತ್ಕೊಳ್ತಾನೋ ಅದು ಅಶುದ್ಧ.  ಅವನ ಹಾಸಿಗೆಯನ್ನ ಮುಟ್ಟಿದವನು ತನ್ನ ಬಟ್ಟೆಗಳನ್ನ ಒಗಿಬೇಕು, ಸ್ನಾನ ಮಾಡಬೇಕು. ಅವನು ಸಂಜೆ ತನಕ* ಅಶುದ್ಧ.+  ಸ್ರಾವ ಇರೋ ವ್ಯಕ್ತಿ ಯಾವುದ್ರ ಮೇಲೆ ಕೂತ್ಕೊಳ್ತಾನೋ ಅದ್ರ ಮೇಲೆ ಬೇರೆಯವರು ಕೂತ್ಕೊಂಡ್ರೆ ತಮ್ಮ ಬಟ್ಟೆಗಳನ್ನ ಒಗೆದು, ಸ್ನಾನ ಮಾಡಬೇಕು. ಅವರು ಸಂಜೆ ತನಕ ಅಶುದ್ಧ.  ಸ್ರಾವ ಇರೋ ವ್ಯಕ್ತಿಯನ್ನ ಮುಟ್ಟಿದವನು ತನ್ನ ಬಟ್ಟೆಗಳನ್ನ ಒಗೆದು, ಸ್ನಾನ ಮಾಡಬೇಕು. ಅವನು ಸಂಜೆ ತನಕ ಅಶುದ್ಧ.  ಸ್ರಾವ ಆಗ್ತಾ ಇರೋನು ಶುದ್ಧನಾಗಿರೋ ವ್ಯಕ್ತಿ ಮೇಲೆ ಉಗುಳಿದ್ರೆ ಆ ವ್ಯಕ್ತಿ ತನ್ನ ಬಟ್ಟೆಗಳನ್ನ ಒಗೆದು, ಸ್ನಾನ ಮಾಡಬೇಕು. ಅವನು ಸಂಜೆ ತನಕ ಅಶುದ್ಧ.  ಸ್ರಾವ ಇರೋ ವ್ಯಕ್ತಿ ಯಾವುದಾದ್ರೂ ಪ್ರಾಣಿಯ ತಡಿ ಮೇಲೆ ಕೂತು ಪ್ರಯಾಣ ಮಾಡಿದ್ರೆ ಆ ತಡಿ ಅಶುದ್ಧ. 10  ಸ್ರಾವ ಇರೋ ವ್ಯಕ್ತಿ ಯಾವುದ್ರ ಮೇಲೆ ಕೂತ್ಕೊಳ್ತಾನೋ ಆ ವಸ್ತುವನ್ನ ಮುಟ್ಟಿದವನು ಸಂಜೆ ತನಕ ಅಶುದ್ಧ. ಆ ವಸ್ತುವನ್ನ ಎತ್ತಿದವನು ತನ್ನ ಬಟ್ಟೆಗಳನ್ನ ಒಗೆದು, ಸ್ನಾನ ಮಾಡಬೇಕು. ಅವನು ಸಂಜೆ ತನಕ ಅಶುದ್ಧ. 11  ಸ್ರಾವ ಇರೋನು+ ಕೈಗಳನ್ನ ತೊಳೀದೆ ಯಾರನ್ನಾದ್ರೂ ಮುಟ್ಟಿದ್ರೆ ಆ ವ್ಯಕ್ತಿ ತನ್ನ ಬಟ್ಟೆಗಳನ್ನ ಒಗೆದು, ಸ್ನಾನ ಮಾಡಬೇಕು. ಅವನು ಸಂಜೆ ತನಕ ಅಶುದ್ಧ. 12  ಸ್ರಾವ ಇರೋನು ಮಣ್ಣಿನ ಪಾತ್ರೆ ಮುಟ್ಟಿದ್ರೆ ಅದನ್ನ ಒಡೆದುಹಾಕಬೇಕು. ಅವನು ಮುಟ್ಟಿದ್ದು ಮರದ ಪಾತ್ರೆ ಆಗಿದ್ರೆ ಅದನ್ನ ನೀರಲ್ಲಿ ತೊಳಿಬೇಕು.+ 13  ಸ್ರಾವ ನಿಂತುಹೋದ್ರೆ ನಿಂತುಹೋದ ದಿನದಿಂದ ಏಳು ದಿನ ಆದ್ಮೇಲೆ ಅವನು ತನ್ನ ಬಟ್ಟೆಗಳನ್ನ ಒಗಿಬೇಕು. ಹರಿಯೋ ನೀರಲ್ಲಿ ಸ್ನಾನ ಮಾಡಬೇಕು. ಆಗ ಅವನು ಶುದ್ಧ ಆಗ್ತಾನೆ.+ 14  ಎಂಟನೇ ದಿನ ಅವನು ಎರಡು ಕಾಡುಪಾರಿವಾಳ ಅಥವಾ ಪಾರಿವಾಳದ ಎರಡು ಮರಿಯನ್ನ+ ಯೆಹೋವನ ಮುಂದೆ, ದೇವದರ್ಶನ ಡೇರೆಯ ಬಾಗಿಲ ಹತ್ರ ತರಬೇಕು. ಅದನ್ನ ಪುರೋಹಿತನಿಗೆ ಕೊಡಬೇಕು. 15  ಪುರೋಹಿತ ಆ ಪಕ್ಷಿಗಳಲ್ಲಿ ಒಂದನ್ನ ಪಾಪಪರಿಹಾರಕ ಬಲಿಗಾಗಿ, ಇನ್ನೊಂದನ್ನ ಸರ್ವಾಂಗಹೋಮ ಬಲಿಗಾಗಿ ಅರ್ಪಿಸಬೇಕು. ಅವನ ಅಶುದ್ಧತೆಯ ವಿಷ್ಯದಲ್ಲಿ ಪುರೋಹಿತ ಅವನಿಗಾಗಿ ಯೆಹೋವನ ಮುಂದೆ ಪ್ರಾಯಶ್ಚಿತ್ತ ಮಾಡಬೇಕು. 16  ಒಬ್ಬ ಗಂಡಸಿಂದ ವೀರ್ಯ ಸ್ರಾವ ಆದ್ರೆ ಅವನು ತನ್ನ ಇಡೀ ದೇಹ ತೊಳಿಬೇಕು. ಅವನು ಸಂಜೆ ತನಕ ಅಶುದ್ಧ.+ 17  ವೀರ್ಯ ಯಾವುದೇ ಬಟ್ಟೆಗೆ ಅಥವಾ ಚರ್ಮದ ಯಾವುದೇ ವಸ್ತುಗೆ ತಾಗಿದ್ರೆ ಆ ವಸ್ತುವನ್ನ ನೀರಲ್ಲಿ ತೊಳಿಬೇಕು. ಅದು ಸಂಜೆ ತನಕ ಅಶುದ್ಧ. 18  ಹೆಂಡತಿ ಜೊತೆ ಮಲಗಿದಾಗ ಗಂಡನಿಗೆ ವೀರ್ಯ ಸ್ರಾವ ಆದ್ರೆ ಅವರಿಬ್ರು ಸ್ನಾನ ಮಾಡಬೇಕು. ಅವರು ಸಂಜೆ ತನಕ ಅಶುದ್ಧ.+ 19  ಒಬ್ಬ ಸ್ತ್ರೀಗೆ ತಿಂಗಳ ಮುಟ್ಟಿಂದ ರಕ್ತಸ್ರಾವ ಆದ್ರೆ ಅವಳು ಏಳು ದಿನ ತನಕ ಅಶುದ್ಧ.+ ಅವಳನ್ನ ಮುಟ್ಟಿದವರು ಸಂಜೆ ತನಕ ಅಶುದ್ಧ.+ 20  ತಿಂಗಳ ಮುಟ್ಟಿನ ದಿನಗಳಲ್ಲಿ ಯಾವುದ್ರ ಮೇಲೆ ಮಲಗ್ತಾಳೋ, ಕೂತ್ಕೊಳ್ತಾಳೋ ಅದು ಅಶುದ್ಧ.+ 21  ಅವಳ ಹಾಸಿಗೆ ಮುಟ್ಟಿದವರು ತಮ್ಮ ಬಟ್ಟೆಗಳನ್ನ ಒಗೆದು, ಸ್ನಾನ ಮಾಡಬೇಕು. ಅವರು ಸಂಜೆ ತನಕ ಅಶುದ್ಧ. 22  ಅವಳು ಯಾವುದ್ರ ಮೇಲೆ ಕೂತ್ಕೊಳ್ತಾಳೋ ಅದನ್ನ ಮುಟ್ಟಿದವರು ತಮ್ಮ ಬಟ್ಟೆಗಳನ್ನ ಒಗೆದು, ಸ್ನಾನ ಮಾಡಬೇಕು. ಅವರು ಸಂಜೆ ತನಕ ಅಶುದ್ಧ. 23  ಅವಳು ಕೂತ ಹಾಸಿಗೆಯನ್ನ, ಬೇರೆ ಯಾವುದೇ ವಸ್ತುವನ್ನ ಮುಟ್ಟಿದವರು ಸಂಜೆ ತನಕ ಅಶುದ್ಧ.+ 24  ಹೆಂಡತಿ ಜೊತೆ ಮಲಗಿದಾಗ ಅವಳ ಮುಟ್ಟಿನ ರಕ್ತ ಗಂಡನಿಗೆ ತಾಗಿದ್ರೆ+ ಅವನು ಏಳು ದಿನ ತನಕ ಅಶುದ್ಧ. ಅವನು ಮಲಗೋ ಹಾಸಿಗೆನೂ ಅಶುದ್ಧ. 25  ಒಬ್ಬ ಸ್ತ್ರೀಗೆ ಮುಟ್ಟಿನ ಸಮಯ ಬಿಟ್ಟು+ ಬೇರೆ ಸಮಯದಲ್ಲಿ ತುಂಬ ದಿನ ರಕ್ತಸ್ರಾವ ಆದ್ರೆ+ ಅಥವಾ ಮುಟ್ಟಿನ ಸಮಯದಲ್ಲಿ ಜಾಸ್ತಿ ದಿನ ರಕ್ತಸ್ರಾವ ಆದ್ರೆ ಆ ಎಲ್ಲ ದಿನ ಅವಳು ಅಶುದ್ಧ. ಮುಟ್ಟಿನ ಸಮಯದಲ್ಲಿ ಹೇಗೋ ಹಾಗೇ ಅಶುದ್ಧ. 26  ಈ ರೀತಿ ರಕ್ತಸ್ರಾವ ಆಗೋ ದಿನಗಳಲ್ಲಿ ಅವಳು ಮಲಗೋ ಹಾಸಿಗೆ, ಯಾವುದ್ರ ಮೇಲೆ ಕೂತ್ಕೊಳ್ತಾನೋ ಅದು ಅಶುದ್ಧ.+ ಮುಟ್ಟಿನ ಸಮಯದಲ್ಲಿ ಹೇಗೋ ಹಾಗೇ ಅವು ಅಶುದ್ಧ. 27  ಅದನ್ನ ಮುಟ್ಟಿದವರು ಅಶುದ್ಧ. ಅವರು ತಮ್ಮ ಬಟ್ಟೆಗಳನ್ನ ಒಗೆದು, ಸ್ನಾನ ಮಾಡಬೇಕು. ಅವರು ಸಂಜೆ ತನಕ ಅಶುದ್ಧ.+ 28  ರಕ್ತಸ್ರಾವ ನಿಂತುಹೋದ್ರೆ ಅದು ನಿಂತುಹೋಗಿ ಏಳು ದಿನ ಆದ್ಮೇಲೆ ಅವಳು ಶುದ್ಧ.+ 29  ಎಂಟನೇ ದಿನ ಅವಳು ಎರಡು ಕಾಡುಪಾರಿವಾಳ ಅಥವಾ ಪಾರಿವಾಳದ ಎರಡು ಮರಿಗಳನ್ನ+ ದೇವದರ್ಶನ ಡೇರೆಯ ಬಾಗಿಲ ಹತ್ರ ತಂದು ಪುರೋಹಿತನಿಗೆ ಕೊಡಬೇಕು.+ 30  ಪುರೋಹಿತ ಆ ಪಕ್ಷಿಗಳಲ್ಲಿ ಒಂದನ್ನ ಪಾಪಪರಿಹಾರಕ ಬಲಿಯಾಗಿ, ಇನ್ನೊಂದನ್ನ ಸರ್ವಾಂಗಹೋಮ ಬಲಿಯಾಗಿ ಅರ್ಪಿಸಬೇಕು. ರಕ್ತಸ್ರಾವದಿಂದಾದ ಅಶುದ್ಧತೆ ವಿಷ್ಯದಲ್ಲಿ ಪುರೋಹಿತ ಅವಳಿಗಾಗಿ ಯೆಹೋವನ ಮುಂದೆ ಪ್ರಾಯಶ್ಚಿತ್ತ ಮಾಡಬೇಕು.+ 31  ಈ ರೀತಿ ನೀವು ಇಸ್ರಾಯೇಲ್ಯರಿಗೆ ಶುದ್ಧ ಆಗಿರೋಕೆ ಸಹಾಯ ಮಾಡಬೇಕು. ಇಲ್ಲಾಂದ್ರೆ ಅವ್ರ ಮಧ್ಯ ಇರೋ ನನ್ನ ಪವಿತ್ರ ಡೇರೆಯನ್ನ ಅವರು ತಮ್ಮ ಅಶುದ್ಧತೆಯಿಂದ ಅಪವಿತ್ರ ಮಾಡಿ ಜೀವ ಕಳ್ಕೊಳ್ತಾರೆ.+ 32  ಒಬ್ಬನಿಗೆ ಸ್ರಾವ ಆಗ್ತಾ ಇದ್ರೆ, ವೀರ್ಯಸ್ರಾವದಿಂದ ಅಶುದ್ಧನಾದ್ರೆ,+ 33  ಒಬ್ಬ ಸ್ತ್ರೀ ತಿಂಗಳ ಮುಟ್ಟಿಂದ ಅಶುದ್ಧ ಆದ್ರೆ,+ ಒಬ್ಬ ಪುರುಷ ಅಥವಾ ಸ್ತ್ರೀಗೆ ಸ್ರಾವ ಆದ್ರೆ,+ ಹೆಂಡತಿಯನ್ನ ಅಶುದ್ಧಳಾದಾಗ ಕೂಡಿದ್ರೆ ಈ ನಿಯಮಗಳನ್ನ ಪಾಲಿಸಬೇಕು.’”

ಪಾದಟಿಪ್ಪಣಿ

ಅಥವಾ “ಸೂರ್ಯ ಮುಳುಗೋ ತನಕ.”