ಮಾರ್ಕ 4:1-41

 • ದೇವರ ಆಳ್ವಿಕೆ ಬಗ್ಗೆ ಉದಾಹರಣೆಗಳು (1-34)

  • ಬೀಜ ಬಿತ್ತುವವನು (1-9)

  • ಯೇಸು ಯಾಕೆ ಉದಾಹರಣೆ ಹೇಳ್ತಿದ್ದನು? (10-12)

  • ಬೀಜ ಬಿತ್ತುವವನ ಉದಾಹರಣೆಯನ್ನ ವಿವರಿಸಿದನು (13-20)

  • ದೀಪವನ್ನ ಬುಟ್ಟಿ ಕೆಳಗೆ ಇಡಲ್ಲ (21-23)

  • ನೀವು ಉಪಯೋಗಿಸೋ ಅಳತೆಪಾತ್ರೆ (24, 25)

  • ಬಿತ್ತುವವನು ನಿದ್ದೆ ಮಾಡ್ತಾನೆ (26-29)

  • ಸಾಸಿವೆ ಕಾಳು (30-32)

  • ಯೇಸು ಉದಾಹರಣೆ ಬಳಸ್ತಿದ್ದನು (33, 34)

 • ಯೇಸು ಬಿರುಗಾಳಿ ಶಾಂತ ಮಾಡ್ತಾನೆ (35-41)

4  ಯೇಸು ಇನ್ನೊಂದು ಸಲ ಸಮುದ್ರ ತೀರದಲ್ಲಿ ಕಲಿಸೋಕೆ ಶುರುಮಾಡಿದನು. ತುಂಬ ಜನ ಆತನ ಹತ್ರ ಬಂದಿದ್ರಿಂದ ಯೇಸು ಒಂದು ದೋಣಿ ಹತ್ತಿ ತೀರದಿಂದ ಸ್ವಲ್ಪ ದೂರ ಹೋಗಿ ಕೂತು ಅಲ್ಲಿಂದ ಕಲಿಸ್ತಾ ಇದ್ದನು. ಆದ್ರೆ ಜನ್ರೆಲ್ಲ ಸಮುದ್ರ ತೀರದಲ್ಲೇ ಇದ್ರು.+  ಯೇಸು ತುಂಬ ಉದಾಹರಣೆ+ ಬಳಸಿ ಕಲಿಸ್ತಾ ಹೀಗಂದನು+  “ಕೇಳಿಸ್ಕೊಳ್ಳಿ! ಒಬ್ಬ ರೈತ ಬೀಜ ಬಿತ್ತೋಕೆ ಹೋದ.+  ಬಿತ್ತುವಾಗ ಸ್ವಲ್ಪ ಬೀಜ ದಾರಿಯಲ್ಲಿ ಬಿತ್ತು, ಹಕ್ಕಿಗಳು ಬಂದು ಅವನ್ನ ತಿಂದುಬಿಟ್ವು.  ಇನ್ನು ಸ್ವಲ್ಪ ಬೀಜ ಕಲ್ಲಿನ ನೆಲದ ಮೇಲೆ ಬಿತ್ತು. ಅಲ್ಲಿ ಕಡಿಮೆ ಮಣ್ಣಿತ್ತು. ಹಾಗಾಗಿ ಬೀಜ ಬೇಗ ಮೊಳಕೆ ಒಡಿತು.+  ಆದ್ರೆ ಬಿಸಿಲು ಜಾಸ್ತಿ ಆದಾಗ ಬೇರಿಲ್ಲದ ಕಾರಣ ಬಾಡಿ ಒಣಗಿಹೋಯ್ತು.  ಇನ್ನು ಸ್ವಲ್ಪ ಬೀಜ ಮುಳ್ಳುಗಿಡಗಳ ಮಧ್ಯ ಬಿತ್ತು. ಮುಳ್ಳುಗಿಡಗಳು ಬೆಳೆದು ಒಳ್ಳೇ ಗಿಡಗಳನ್ನ ಬೆಳೆಯೋಕೆ ಬಿಡಲಿಲ್ಲ. ಹಾಗಾಗಿ ಅವು ಫಲ ಕೊಡಲಿಲ್ಲ.+  ಆದ್ರೆ ಸ್ವಲ್ಪ ಬೀಜ ಒಳ್ಳೇ ನೆಲದಲ್ಲಿ ಬಿತ್ತು. ಅವು ಮೊಳಕೆ ಒಡೆದು ಬೆಳೆದು 30ರಷ್ಟು, 60ರಷ್ಟು, 100ರಷ್ಟು ಫಲ ಕೊಟ್ವು.”+  ಆಮೇಲೆ ಯೇಸು “ನಾನು ಹೇಳೋದನ್ನ ಗಮನಕೊಟ್ಟು ಕೇಳಿ”+ ಅಂದನು. 10  ಯೇಸು ಒಬ್ಬನೇ ಇದ್ದಾಗ 12 ಶಿಷ್ಯರು ಮತ್ತು ಅವ್ರ ಜೊತೆ ಇದ್ದವರು ಬಂದು ಉದಾಹರಣೆಗಳ ಬಗ್ಗೆ ಪ್ರಶ್ನೆ ಕೇಳೋಕೆ ಶುರುಮಾಡಿದ್ರು.+ 11  ಆಗ ಆತನು “ದೇವರ ಆಳ್ವಿಕೆ ಬಗ್ಗೆ ಇರೋ ಪವಿತ್ರ ರಹಸ್ಯಗಳನ್ನ+ ಅರ್ಥಮಾಡ್ಕೊಳ್ಳೋಕೆ ದೇವರು ನಿಮಗೆ ಸಹಾಯ ಮಾಡಿದ್ದಾನೆ. ಆದ್ರೆ ಬೇರೆಯವ್ರಿಗೆ ಇವೆಲ್ಲ ಬರೀ ಉದಾಹರಣೆ ಅಷ್ಟೆ.+ 12  ಯಾಕಂದ್ರೆ ಅವ್ರಿಗೆ ನೋಡಿದ್ರೂ ಕಾಣಿಸಲ್ಲ, ಕೇಳಿದ್ರೂ ಅರ್ಥ ಆಗಲ್ಲ. ಅವರು ಯಾವತ್ತೂ ಬದಲಾಗಲ್ಲ, ಅವ್ರಿಗೆ ಯಾವತ್ತೂ ಕ್ಷಮೆ ಸಿಗಲ್ಲ”+ ಅಂದನು. 13  ಆಮೇಲೆ “ಈ ಉದಾಹರಣೆ ನಿಮಗೆ ಅರ್ಥ ಆಗಿಲ್ಲ ಅಂದ್ರೆ ಬೇರೆ ಉದಾಹರಣೆಗಳನ್ನ ನೀವು ಹೇಗೆ ಅರ್ಥಮಾಡ್ಕೊಳ್ತೀರಾ? 14  ಬಿತ್ತುವವನು ಯಾರಂದ್ರೆ ದೇವರ ಸಂದೇಶವನ್ನ ಸಾರುವವನು.+ 15  ದಾರಿ ಬದಿಯಲ್ಲಿ ಬಿತ್ತಿರೋ ಬೀಜದ ತರ ಕೆಲವರು ಇರ್ತಾರೆ. ಅವರು ಸಂದೇಶ ಕೇಳ್ತಾರೆ. ಆದ್ರೆ ಸೈತಾನ ತಕ್ಷಣ ಬಂದು+ ಅವ್ರಲ್ಲಿ ಬಿತ್ತಿದ ಸಂದೇಶವನ್ನ ಕಿತ್ಕೊಂಡು ಹೋಗ್ತಾನೆ.+ 16  ಇನ್ನು ಕೆಲವರು ಕಲ್ಲು ನೆಲದ ತರ ಇರ್ತಾರೆ. ಅವರು ಸಂದೇಶ ಕೇಳಿದ ತಕ್ಷಣ ಖುಷಿಯಿಂದ ನಂಬ್ತಾರೆ.+ 17  ಆದ್ರೆ ಆ ಸಂದೇಶ ಹೃದಯಕ್ಕೆ ಮುಟ್ಟದ ಕಾರಣ ಸ್ವಲ್ಪ ದಿನ ಮಾತ್ರ ಅವ್ರಲ್ಲಿ ನಂಬಿಕೆ ಇರುತ್ತೆ. ದೇವರ ಸಂದೇಶದ ಕಾರಣ ಕಷ್ಟ, ಹಿಂಸೆ ಬಂದಾಗ ನಂಬಿಕೆ ಬಿಟ್ಟುಬಿಡ್ತಾರೆ. 18  ಇನ್ನು ಕೆಲವರು ಮುಳ್ಳುಗಿಡಗಳು ಇರೋ ನೆಲದ ತರ ಇರ್ತಾರೆ. ಅವರು ಸಂದೇಶವನ್ನ ಕೇಳಿಸ್ಕೊಳ್ತಾರೆ.+ 19  ಆದ್ರೆ ಜೀವನದ ಚಿಂತೆ,+ ಹಣದಾಸೆ,+ ಬೇರೆ ಎಲ್ಲ ಆಸೆಗಳು+ ಹೃದಯಕ್ಕೆ ಹೋಗಿ ಆ ಸಂದೇಶವನ್ನ ಅದುಮಿ ಫಲಕೊಡದ ಹಾಗೆ ಮಾಡಿಬಿಡ್ತವೆ. 20  ಕೊನೆಗೆ ಬೀಜ ಬಿದ್ದ ಒಳ್ಳೇ ನೆಲದ ಹಾಗೆ ಇರುವವರು ಸಂದೇಶವನ್ನ ಕೇಳಿ ನಂಬಿ 30ರಷ್ಟು, 60ರಷ್ಟು, 100ರಷ್ಟು ಫಲ ಕೊಡ್ತಾರೆ”+ ಅಂದನು. 21  ಆಮೇಲೆ ಯೇಸು “ಜನ್ರು ದೀಪ ಹಚ್ಚಿ ಬುಟ್ಟಿ* ಕೆಳಗೆ, ಮಂಚದ ಕೆಳಗೆ ಇಡ್ತಾರಾ? ದೀಪಸ್ತಂಭದ ಮೇಲೆ ಇಡ್ತಾರೆ ತಾನೇ?+ 22  ಯಾವುದನ್ನೂ ಮುಚ್ಚಿಡೋಕೆ ಆಗಲ್ಲ, ಜಾಗ್ರತೆಯಿಂದ ರಹಸ್ಯವಾಗಿ ಇಟ್ಟಿರೋ ವಿಷ್ಯ ಬಯಲಿಗೆ ಬಂದೇ ಬರುತ್ತೆ.+ 23  ನಾನು ಹೇಳೋದನ್ನ ಗಮನಕೊಟ್ಟು ಕೇಳಿ”+ ಅಂದನು. 24  ಆಮೇಲೆ “ನೀವು ಕೇಳಿಸ್ಕೊಳ್ಳೋ ವಿಷ್ಯಕ್ಕೆ ಗಮನಕೊಡಿ.+ ನೀವು ಎಷ್ಟು ಗಮನ ಕೊಡ್ತಿರೋ ಅಷ್ಟು ಅರ್ಥಮಾಡ್ಕೊಳ್ತೀರ. ನಿಜ ಹೇಳಬೇಕಂದ್ರೆ ಜಾಸ್ತಿನೇ ಅರ್ಥ ಆಗುತ್ತೆ. 25  ಯಾಕಂದ್ರೆ ಯಾರು ಅರ್ಥಮಾಡ್ಕೊಂಡಿದ್ದಾರೋ ಅವ್ರಿಗೆ ಇನ್ನೂ ಚೆನ್ನಾಗಿ ಅರ್ಥ ಆಗುತ್ತೆ.+ ಆದ್ರೆ ಯಾರು ಅರ್ಥಮಾಡ್ಕೊಂಡಿಲ್ವೋ ಅವ್ರಿಗೆ ಅರ್ಥ ಆಗಿರೋದನ್ನೂ ದೇವರು ಅವ್ರ ತಲೆಯಿಂದ ತೆಗೆದುಹಾಕ್ತಾನೆ”+ ಅಂದನು. 26  ಆಮೇಲೆ ಹೀಗಂದನು “ದೇವರ ಆಳ್ವಿಕೆಯನ್ನ ಒಬ್ಬ ವ್ಯಕ್ತಿ ಹೊಲದಲ್ಲಿ ಬೀಜ ಬಿತ್ತೋದಕ್ಕೆ ಹೋಲಿಸಬಹುದು. 27  ಅವನು ರಾತ್ರಿ ಮಲಗ್ತಾನೆ, ಬೆಳಿಗ್ಗೆ ಏಳ್ತಾನೆ. ಹೀಗೆ ಕೆಲವು ದಿನಗಳಾದ ಮೇಲೆ ನೋಡಿದ್ರೆ ಬೀಜ ಮೊಳಕೆ ಒಡೆದು ಎತ್ರಕ್ಕೆ ಬೆಳೆದಿರುತ್ತೆ. ಆದ್ರೆ ಅದು ಹೇಗೆ ಅಂತ ಅವನಿಗೆ ಗೊತ್ತಾಗಲ್ಲ. 28  ನೆಲ ತನ್ನಷ್ಟಕ್ಕೆ ತಾನೇ ನಿಧಾನವಾಗಿ ಫಲ ಕೊಡುತ್ತೆ. ಮೊದಲು ಹುಲ್ಲು ಬರುತ್ತೆ, ಆಮೇಲೆ ತೆನೆ ಬಿಡುತ್ತೆ, ಕೊನೆಗೆ ಅದ್ರಲ್ಲಿ ಧಾನ್ಯ ತುಂಬಿಕೊಳ್ಳುತ್ತೆ. 29  ಫಸಲು ಬಂದಾಗ ಅವನು ಕಟಾವು ಮಾಡ್ತಾನೆ. ಯಾಕಂದ್ರೆ ಸುಗ್ಗಿಕಾಲ ಬಂದಿರುತ್ತೆ.” 30  ಆಮೇಲೆ ಹೀಗಂದನು “ದೇವರ ಆಳ್ವಿಕೆಯನ್ನ ಯಾವುದಕ್ಕೆ ಹೋಲಿಸಲಿ? ಯಾವ ಉದಾಹರಣೆ ಬಳಸಿ ವಿವರಿಸಲಿ? 31  ಅದು ಒಂದು ಸಾಸಿವೆ ಕಾಳಿನ ತರ ಇದೆ. ಅದನ್ನ ನೆಲದಲ್ಲಿ ಬಿತ್ತುವಾಗ ಭೂಮಿಯಲ್ಲಿರೋ ಎಲ್ಲ ಬೀಜಗಳಿಗಿಂತ ತುಂಬ ಚಿಕ್ಕದಾಗಿರುತ್ತೆ.+ 32  ಆದ್ರೆ ಬಿತ್ತಿದ ಮೇಲೆ ಆ ಗಿಡ ಬೇರೆ ಎಲ್ಲ ತರಕಾರಿ ಗಿಡಕ್ಕಿಂತ ಉದ್ದ ಬೆಳಿಯುತ್ತೆ. ಅದಕ್ಕೆ ದೊಡ್ಡದೊಡ್ಡ ರೆಂಬೆಕೊಂಬೆ ಬರುತ್ತೆ. ಹಾರಾಡೋ ಪಕ್ಷಿಗಳು ಬಂದು ಅದ್ರ ನೆರಳಲ್ಲಿ ವಾಸ ಮಾಡ್ತವೆ.” 33  ಜನ್ರಿಗೆ ಎಷ್ಟು ಅರ್ಥ ಆಗುತ್ತೆ ಅನ್ನೋದನ್ನ ಮನಸ್ಸಲ್ಲಿಟ್ಟು ಯೇಸು ಇಂಥ ತುಂಬ ಉದಾಹರಣೆಗಳಿಂದ+ ಅವ್ರಿಗೆ ದೇವರ ಸಂದೇಶದ ಬಗ್ಗೆ ಕಲಿಸಿದನು. 34  ಉದಾಹರಣೆ ಕೊಡದೆ ಆತನು ಯಾವತ್ತೂ ಮಾತಾಡ್ತಾ ಇರ್ಲಿಲ್ಲ. ಆದ್ರೆ ತನ್ನ ಶಿಷ್ಯರು ಮಾತ್ರ ಇದ್ದಾಗ ಆ ಉದಾಹರಣೆಗಳ ಅರ್ಥವನ್ನ ಯೇಸು ವಿವರಿಸ್ತಿದ್ದ.+ 35  ಆ ದಿನ ಸಂಜೆ ಆದಾಗ ಯೇಸು ಅವ್ರಿಗೆ “ನಾವು ಆಕಡೆ ದಡಕ್ಕೆ ಹೋಗೋಣ”+ ಅಂದನು. 36  ಹಾಗಾಗಿ ಅವರು ಜನ್ರನ್ನ ಕಳಿಸಿ ಯೇಸು ಇದ್ದ ಅದೇ ದೋಣಿ ಹತ್ತಿ ಹೊರಟ್ರು. ಜೊತೆಗೆ ಬೇರೆ ದೋಣಿಗಳೂ ಇದ್ದವು.+ 37  ಅವರು ಹೋಗ್ತಾ ಇರುವಾಗ ದೊಡ್ಡ ಬಿರುಗಾಳಿ ಬೀಸಿತು. ಅಲೆಗಳು ಬಂದು ದೋಣಿಗೆ ಬಡಿತಾ ಇತ್ತು. ನೀರು ದೋಣಿ ಒಳಗೆ ನುಗ್ಗಿ ಮುಳುಗೋ ತರ ಆಯ್ತು.+ 38  ಆದ್ರೆ ಯೇಸು ದೋಣಿಯ ಹಿಂದಿನ ಭಾಗದಲ್ಲಿ ದಿಂಬಿನ ಮೇಲೆ ತಲೆಯಿಟ್ಟು ಮಲಗಿದ್ದನು. ಶಿಷ್ಯರು ಆತನನ್ನ ಎಬ್ಬಿಸಿ “ಗುರು, ನಮ್ಮ ಪ್ರಾಣ ಹೋಗ್ತಿರೋದು ನಿನಗೆ ಕಾಣಿಸ್ತಿಲ್ವಾ?” ಅಂತ ಕೇಳಿದ್ರು. 39  ಆಗ ಆತನು ಎದ್ದು ಗಾಳಿಯನ್ನ ಗದರಿಸಿ ಸಮುದ್ರಕ್ಕೆ “ಷ್‌! ಸುಮ್ಮನಿರು!”+ ಅಂದನು. ಆಗ ಬಿರುಗಾಳಿ ನಿಂತು ಸಮುದ್ರ ಶಾಂತ ಆಯ್ತು. 40  ಆಮೇಲೆ ಯೇಸು “ಯಾಕಿಷ್ಟು ಹೆದರ್ತಾ ಇದ್ದೀರಾ? ನಿಮ್ಮ ನಂಬಿಕೆ ಎಲ್ಲಿ ಹೋಯ್ತು?” ಅಂತ ಕೇಳಿದನು. 41  ಆದ್ರೆ ಅವ್ರಲ್ಲಿ ಏನೋ ಒಂಥರ ಭಯ ಹುಟ್ಟಿಕೊಂಡಿತ್ತು. ಅವರು ಒಬ್ರಿಗೊಬ್ರು “ಗಾಳಿ, ಸಮುದ್ರನೂ ಇವನ ಮಾತು ಕೇಳುತ್ತಲ್ಲಾ! ಇವನು ಯಾರಪ್ಪ?”+ ಅಂತ ಮಾತಾಡ್ಕೊಂಡ್ರು.

ಪಾದಟಿಪ್ಪಣಿ

ಅಥವಾ, “ಅಳತೆಮಾಡೋ ಕೊಳಗದ.”